Monday, July 2, 2007

ಬುರುಡೆಗೇರಿದ ಸರಳು; ಚುರುಕುಗೊಳಿಸೀತೆ ಮಿದುಳು?

ದು ಸಿ.ಇ.ಟಿ. ಸಮಯ. ರ್‍ಯಾಂಕ್ ಪಟ್ಟಿಯಲ್ಲಿ ಮೊದಲ ಒಂದೆರಡು ಸಹಸ್ರ ಅಂಕೆಗಳನ್ನು ದಾಟಿದವರಿಗೆ ಇಚ್ಛೆಯ ಕೋರ್ಸ್‍ಗಳು ಸಿಕ್ಕಿರಲಾರದು. ಸೀಟು ಗಿಟ್ಟಿಸದ ಆ ಮಕ್ಕಳಿಗಿಂತಲೂ ಅವರಪ್ಪ ಅಮ್ಮಂದಿರಿಗೆ ಬಹಳಷ್ಟು ನಿರಾಸೆಯಾಗಿರುತ್ತದೆ, ಅದು ಸಹಜ. ಇದಕ್ಕೆ ಸಮಯ ವ್ಯರ್ಥ ಮಾಡುವ ಬದಲು ಅದನ್ನು ಮಾಡಿದ್ದಿದ್ದರೆ? ಎಸ್ಸೆಸ್ಸೆಲ್ಸಿಯಲ್ಲಿ ಇನ್ನೊಂದು ಹತ್ತು ಮಾರ್ಕ್ ತೆಗೆದು ಈ ಕಾಲೇಜಿನ ಬದಲು ಆ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡು ಕಲಿತಿದ್ದರೆ? ಮನೆಪಾಠವನ್ನು ಇವರ ಬದಲು ಮತ್ತೊಬ್ಬರಿಂದ ಹೇಳಿಸಿದ್ದರೆ? ಪಕ್ಕದ್ಮನೆ ಕಮಲಮ್ಮನ ಗಂಡನ ಥರಾ ಇವರೂ ಮಗಳ ಪರೀಕ್ಷೆಯ ಸಮಯದಲ್ಲಿ ಒಂದು ತಿಂಗಳು ರಜೆ ಹಾಕಿ ಸರಿಯಾಗಿ ಓದಿಸಿದ್ದಿದ್ರೆ? ಮುದ್ದು ಕಮ್ಮಿ ಮಾಡಿ ಓದಿನ ಬಗ್ಗೆ ಮೊದಲಿನಿಂದ್ಲೂ ಒಂದಷ್ಟು ಶಿಸ್ತು ಬೆಳೆಸಿಕೊಳ್ಳುವಂತೆ ತಾಕೀತು ಮಾಡಿದ್ದಿದ್ರೆ? ಅಂಚೆ ಮೂಲಕ ತರಬೇತಿ ನೀಡುವ ಕೋರ್ಸಿಗೂ ನೋಂದಾಯಿಸಿಬಿಟ್ಟಿದ್ರೆ? ಮೊಬೈಲ್ ಫೋನ್ ಕೊಡಿಸದೇ ಇದ್ದಿದ್ರೆ? ಕೇಬಲ್ ಟೀವಿ ಕತ್ತರಿಸಿ ಹಾಕಿದ್ದಿದ್ರೆ? ಇಂಟರ್‌ನೆಟ್ ಸಂಪರ್ಕ ತಪ್ಪಿಸಿ ಹಾಕಿದ್ದಿದ್ರೆ? ಡೀವೀಡಿ ಪ್ಲೇಯರ್ ಮನೆಗೆ ತರದೆ ಇದ್ದಿದ್ರೆ? ಸ್ಕೂಟಿ ಕೊಡಿಸದೆಯೆ ಇದ್ದಿದ್ರೆ? ಪತ್ರಿಕೆ/ಮ್ಯಾಗಝಿನ್‍ಗಳನ್ನು ಒಂದಷ್ಟು ಕಾಲ ನಿಲ್ಲಿಸಿದ್ದಿದ್ರೆ? ............. ಮಗನಿಗೊ, ಮಗಳಿಗೊ ಇನ್ನೊಂದಷ್ಟು ಮಾರ್ಕ್ಸ್ ಬಂದಿರ್ತಿತ್ತು. ಕರ್ನಾಟಕದ ನಂಬರ್ ಒನ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಎಂಜಿನೀರಿಂಗ್ ಸೀಟು ಅವನದೊ/ಅವಳದೊ ಆಗಿರ್ತಿತ್ತು. ಬಹುಶಃ ಇನ್ನೊಂದು ತಿಂಗಳ ಕಾಲ ಹೀಗೆ ಕನವರಿಸುವವರನ್ನು ಕಚೇರಿ/ಬಸ್ ನಿಲ್ದಾಣ/ದೇವಸ್ಥಾನ/ಕಾಲೇಜು/ಉದ್ಯಾನವನಗಳಲ್ಲಿ ಕಾಣುತ್ತಿರುತ್ತೀರಿ. ಮತ್ತೆ ಮುಂದಿನ ವರ್ಷ ಇಂಥದೇ ಮಂದಿಯನ್ನು ಅದೇ ಸ್ಥಳಗಳಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವಿರಿ.

ಇದೆಲ್ಲದರ ಬದಲು ಮಕ್ಕಳ ಚುರುಕುತನವನ್ನು ಹೆಚ್ಚಿಸುವ ಮಾತ್ರೆಯೊ, ಟಾನಿಕ್ಕೊ, ಆಹಾರವೊ ಇದ್ದಿದ್ದರೆ ಚೆನ್ನಾಗಿರುತ್ತಿತ್ತಲ್ಲವೆ? ಮರೆವನ್ನು ಮರೆಸಿ, ಒಳಗಿನ ಬುದ್ಧಿಶಕ್ತಿಯನ್ನು ಪ್ರಚೋದಿಸಿ, ಪ್ರತಿಭೆಯನ್ನು ಮೆರೆಸಬಲ್ಲ ದಿವ್ಯೌಷಧವೊಂದಕ್ಕಾಗಿ ಕಾತರಿಸುವ ಕೋಟ್ಯಂತರ ಮಂದಿ ಈ ಜಗತ್ತಿನಲ್ಲಿದ್ದಾರೆ. ವಿಜ್ಞಾನ-ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರಿದಿದೆ. ಈ ಬಗ್ಗೆ ಸಂಶೋಧನೆಗಳು ನಡೆದಿಲ್ಲವೆ? ಹೀಗೊಂದು ಪ್ರಶ್ನೆಯನ್ನು ಹಾಕಿಕೊಂಡು ತಡಕಾಡುತ್ತಿದ್ದಾಗ ಸಿಕ್ಕವರು ಪತ್ರಕರ್ತ ಡೇವಿಡ್ ಎವಿಂಗ್ ಡಂಕನ್. ಮನೆಯಲ್ಲಿ ನೀವು ‘ವರ್ಲ್ಡ್ ಸ್ಪೇಸ್’ ಎಂಬ ಇಪ್ಪತ್ನಾಲ್ಕು ಗಂಟೆ ಉಪಗ್ರಹ ರೇಡಿಯೊ ಸ್ಟೇಶನ್‍ಗಳ ಸಂಪರ್ಕ ತೆಗೆದುಕೊಂಡಿದ್ದರೆ ಈ ಡೇವಿಡ್ ಖಂಡಿತವಾಗಿಯೂ ಪರಿಚಿತರಾಗಿರುತ್ತಾರೆ. ವರ್ಲ್ಡ್ ಸ್ಪೇಸ್’ನಲ್ಲಿ ‘ಎನ್.ಪಿ.ಆರ್. - ನ್ಯಾಷನಲ್ ಪಬ್ಲಿಕ್ ರೇಡಿಯೊ’ ಎಂಬ ಚಾನೆಲ್ ಬಿತ್ತರವಾಗುತ್ತದೆ. ಅಮೆರಿಕದಲ್ಲಿ ಇದೊಂದು ಮುಕ್ತ ಹಾಗೂ ಸ್ವತಂತ್ರವಾದ ಸುದ್ದಿ ವಾಹಿನಿ. ಎರಡೂವರೆ ಕೋಟಿಗೂ ಹೆಚ್ಚಿನ ಸಂಖ್ಯೆಯ ಕೇಳುಗರನ್ನು ಹೊಂದಿರುವ ಈ ರೇಡಿಯೊವನ್ನು ಯಾವುದೇ ಲಾಭವನ್ನು ಅಪೇಕ್ಷಿಸದ ಒಕ್ಕೂಟವೊಂದು ಮುನ್ನಡೆಸುತ್ತಿದೆ. ಎಂಟು ನೂರಕ್ಕೂ ಹೆಚ್ಚಿನ ಸ್ವತಂತ್ರ, ವ್ಯಾಪಾರಾಪೇಕ್ಷೆಯಿಲ್ಲದ ಮರಿ ರೇಡಿಯೊ ಸ್ಟೇಷನ್‍ಗಳು ಎನ್.ಪಿ.ಆರ್. ಅನ್ನು ಜೀವಂತವಾಗಷ್ಟೇ ಅಲ್ಲ, ಜ್ವಲಂತವಾಗಿಟ್ಟಿವೆ. ಈ ರೇಡಿಯೊದಲ್ಲಿ ನಮ್ಮ ಡೇವಿಡ್ ‘ಬಯೋಟೆಕ್ ನೇಷನ್’ ಎಂಬ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾಪ್ತಾಹಿಕ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸಿಕೊಡುತ್ತಾರೆ.

ಅಮೆರಿಕದ ಜನಪ್ರಿಯ ‘ಎ.ಬಿ.ಸಿ.’ ಹಾಗೂ ‘ಡಿಸ್ಕವರಿ’ ಟೀವಿ ಚಾನೆಲ್‍ಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಡುವುದರ ಜತೆಗೆ ‘ನೋವಾ’ ಹಾಗೂ ‘ಸ್ಮಿತ್ಸೋನಿಯನ್ ನೆಟ್‍ವರ್ಕ್’ ಚಾನೆಲ್‍ಗಳಲ್ಲಿಯೂ ವಿಜ್ಞಾನದ ಬಗ್ಗೆ ವಿಶೇಷ ಸಂಚಿಕೆಗಳನ್ನು ರೂಪಿಸಿಕೊಡುತ್ತಾರೆ. ಇದಲ್ಲದೆಯೆ ‘ವೈರ್‍ಡ್’, ‘ಡಿಸ್ಕವರ್’, ‘ಟೆಕ್ನಾಲಜಿ ರೆವ್ಯೂ’ ಮತ್ತಿತರ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಪತ್ರಿಕೆಗಳ ಸಂಪಾದಕೀಯ ಸಲಹಾ ಮಂಡಲಿಯಲ್ಲಿ ಸೇವೆ ಸಲ್ಲಿಸುತ್ತಲೇ ವಿಶೇಷ ಲೇಖನಗಳನ್ನು ರೂಪಿಸಿಕೊಡುತ್ತಾರೆ. ಪಟ್ಟಿ ಮಾಡುತ್ತಾ ಹೋದರೆ ಇವರು ಲೇಖನ ಬರೆಯದ ಜಗನ್ಮಾನ್ಯ ಪತ್ರಿಕೆಗಳೇ ಇಲ್ಲವೆನ್ನಬಹುದು. ‘ನ್ಯಾಷನಲ್ ಜಿಯಾಗ್ರಫಿಕ್’, ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್‍ಟನ್ ಪೋಸ್ಟ್’, ‘ಟೆಲಿಗ್ರಾಫ್’, ‘ಗಾರ್ಡಿಯನ್’, ‘ಹಾರ್ಪರ್ಸ್’, ‘ಫಾರ್‌ಚ್ಯೂನ್’ ...... ಇವೆಲ್ಲವುಗಳಿಗೂ ಅವರು ವೈವಿಧ್ಯಮಯ ವಿಜ್ಞಾನ ಲೇಖನಗಳನ್ನು ಬರೆದುಕೊಟ್ಟಿದ್ದಾರೆ. ಜೀವ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಈ ಡೇವಿಡ್ ಅವರಿಗೆ ಅದೆಷ್ಟು ಆಸಕ್ತಿಯೆಂದರೆ ಆ ಬಗ್ಗೆ ನಡೆಯುವ ಪ್ರಯೋಗಗಳಲ್ಲಿ ಒಮ್ಮೊಮ್ಮೆ ಸ್ವತಃ ಭಾಗಿಯಾಗಿಬಿಡುತ್ತಾರೆ. ತಮ್ಮ ಅನುಭವಗಳನ್ನು ನೇರವಾಗಿ ಪತ್ರಿಕೆ, ರೇಡಿಯೊ, ಟೆಲಿವಿಷನ್ ಅಂಕಣಗಳಲ್ಲಿ ಸ್ವಾರಸ್ಯಕರವಾಗಿ ಬಿತ್ತರಿಸುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಹುದೇಶ ಸಂಚಾರಿಯಾಗಿರುವ ಡೇವಿಡ್, ಸಮಯ ಸಿಕ್ಕಾಗಲೆಲ್ಲಾ ಉತ್ತಮ ಪುಸ್ತಕಗಳನ್ನು ರಚಿಸುತ್ತಾರೆ. ಅವರ ಪುಸ್ತಕಗಳು ಮಾರುಕಟ್ಟೆಗೆ ಬಂತೆಂದರೆ, ಲೋಕಾರ್ಪಣೆಗೆ ಮುಂಚಿತವಾಗಿ ಓದುಗರಿಂದ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗುತ್ತದೆ.

ಇತ್ತೀಚೆಗೆ ಎರಡು ಮೂರು ದಿನಗಳ ಕಾರ್ಯಕ್ರಮಕ್ಕೆಂದು ಡೇವಿಡ್ ಲಂಡನ್‍ಗೆ ಹೋಗಿದ್ದರು. ವಾರದೊಳಗೇ ಅಮೆರಿಕದ ಕ್ಯಾಲಿಫೋರ್ನಿಯಕ್ಕೆ ಹಿಂದಿರುಗಿದ ಮೇಲೆ ಅವರಿಗೂ ಒಂದು ರೀತಿಯ ಪ್ರಯಾಣದಾಲಸ್ಯ ಕಾಡಿತ್ತು. ಹಗಲು-ರಾತ್ರಿಯ ಗಡಿಯಾರಕ್ಕೂ ಜೈವಿಕ ಗಡಿಯಾರಕ್ಕೂ ಹೊಂದಾಣಿಕೆಯಾಗದೆಯೇ ಊಟ ಹಾಗೂ ನಿದ್ರೆಯ ಚಕ್ರ ಏರುಪೇರಾಗಿತ್ತು. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದ ಡೇವಿಡ್, ನೇರವಾಗಿ ಮುಟ್ಟಿದ್ದು ಅಮೆರಿಕದ ಮೇರಿಲ್ಯಾಂಡ್‍ನ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ನ್ಯೂರಾಲಜಿಕಲ್ ಡಿಸ್‍ಆರ್ಡರ್ಸ್ ಆಂಡ್ ಸ್ಟ್ರೋಕ್ಸ್’ ಎಂಬ ಮಿದುಳು ಹಾಗೂ ನರ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯುವಿನ ಬಗ್ಗೆ ಸಂಶೋಧನೆಗಳನ್ನು ನಡೆಸುವ ರಾಷ್ಟ್ರೀಯ ವಿಜ್ಞಾನ ಸಂಸ್ಥೆಗೆ. ಇಲ್ಲಿ ಮಿದುಳನ್ನು ಉತ್ತೇಜಿಸುವ ಸಾಧನವೊಂದನ್ನು ರೂಪಿಸಲಾಗುತ್ತಿದೆಯೆಂಬ ವಿಷಯ ಡೇವಿಡ್ ಅವರಿಗೆ ಗೊತ್ತಿತ್ತು. ಆ ಸಾಧನ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆಂಬುದನ್ನು ಅರಿಯಲು ಸ್ವತಃ ಪರೀಕ್ಷೆಗೀಡಾಗಲು ಅವರು ಸಜ್ಜಾಗಿದ್ದರು. ನರವಿಜ್ಞಾನಿ ಎರಿಕ್ ವಾಸರ್‌ಮಾನ್ ಅವರ ಕೈಗೆ ತಮ್ಮ ತಲೆಬುರುಡೆಯನ್ನೊಪ್ಪಿಸಿದರು. ವಿದ್ಯುತ್ ಹರಿಯುವ ತಂತಿಗಳನ್ನು ಹಣೆ ಹಾಗೂ ತಲೆಬುರುಡೆಯ ವಿವಿಧ ಭಾಗಗಳ ಮೇಲೆ ಜೋಡಿಸಲು ತಮ್ಮ ಒಪ್ಪಿಗೆಯನ್ನಿತ್ತರು.

ಮಿದುಳಿಗೆ ಸಂಬಂಧಿಸಿದ ತೊಂದರೆಗಳ ನಿವಾರಣೆಗೆ ಲಘು ಪ್ರಮಾಣದ ವಿದ್ಯುತ್ ಅನ್ನು ತಲೆಬುರುಡೆಗೆ ಹಾಯಿಸುವ ವಿಧಾನ ಹೊಸತಲ್ಲ. ಸುಮಾರು ನಲವತ್ತು-ಐವತ್ತು ವರ್ಷಗಳಿಂದ ಈ ಬಗ್ಗೆ ಪ್ರಯೋಗಗಳು ಆರಂಭವಾಗಿದ್ದವು. ಬಾಯಿಯ ಮೂಲಕ ಅಥವಾ ರಕ್ತನಾಳಗಳ ಮೂಲಕ ತೆಗೆದುಕೊಳ್ಳಬಹುದಾದ ರಾಸಾಯನಿಕ ಸಂಯುಕ್ತಗಳನ್ನೊಳಗೊಂಡ ಮದ್ದುಗಳು ಆವಿಷ್ಕಾರವಾದ ಮೇಲೆ ವಿದ್ಯುತ್ ಆಘಾತದ ಚಿಕಿತ್ಸೆ ಹೆಚ್ಚೂ-ಕಮ್ಮಿ ನಿಂತೇ ಹೋಗಿತ್ತು. ಇದೀಗ ವಾಸರ್‌ಮಾನ್ ನೇತೃತ್ವದಲ್ಲಿ ಅಂಗೈಯಲ್ಲಿಟ್ಟುಕೊಳ್ಳಬಹುದಾದ ರೇಡಿಯೊ ಗಾತ್ರದ ‘ಗ್ಯಾಜೆಟ್’, ನಿದ್ರಾಹೀನತೆ ಅಥವಾ ಸತತ ಕೆಲಸದಿಂದ ಮಿದುಳಿನ ಬಳಲಿಕೆಯಿಂದ ನರಳುವವರನ್ನು ಚೇತನಗೊಳಿಸುತ್ತದೆ. ಅಂದರೆ ಜಡತ್ವದಿಂದ ಮಿದುಳನ್ನು ಮುಕ್ತಗೊಳಿಸುತ್ತದೆ. ಹಣೆಯ ಹಿಂದೆ ಇರುವ ಮಿದುಳಿನ ಭಾಗ ತರ್ಕದಿಂದ ಕೂಡಿದ ವಿವೇಚನೆ ಹಾಗೂ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ಈ ಕಾರಣದಿಂದ ವಾಸರ್‌ಮಾನ್ ಅವರು ಡೇವಿಡ್ ಅವರ ಹಣೆಗೆ ಹಚ್ಚಿದ ಎಲೆಕ್ಟ್ರೋಡ್ ತಂತಿಗಳಿಂದ ಸುಮಾರು ನಲವತ್ತು ನಿಮಿಷಗಳ ಕಾಲ ಲಘು ಪ್ರಮಾಣದ ವಿದ್ಯುತ್ ಹಾಯಿಸಿದರು. ಈ ಸಮಯದಲ್ಲಿ ಪ್ರವಹಿಸಿದ ಎಲೆಕ್ಟ್ರಾನ್‍ಗಳು ಮಿದುಳಿನ ಮುಂಭಾಗದಲ್ಲಿ ವಿದ್ಯುತ್ ಕ್ಷೇತ್ರವನ್ನು ನಿರ್ಮಿಸಿತು. ಇದರಿಂದಾಗಿ ಗ್ರಹಿಕೆ ಹಾಗೂ ಭಾವನೆಗಳನ್ನು ಗುರುತಿಸುವ ಕೆಲಸ ಮಾಡುವ ನರತಂತುಗಳು ಚುರುಕುಗೊಂಡವು.

ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡು ನಗುತ್ತಾ ಕುಳಿತ ಡೇವಿಡ್ ಅವರಿಗೆ ವಾಸರ್‌ಮಾನ್ ಅವರು ಹೇಳಿದ್ದಿಷ್ಟು. ‘ನಿಮ್ಮನ್ನು ಮತ್ತೊಬ್ಬ ಐನ್‍ಸ್ಟೀನ್ ಮಾಡುವಂಥ ಸಾಮರ್ಥ್ಯ ನನ್ನ ತಂಡಕ್ಕಾಗಲಿ ಅಥವಾ ನನ್ನ ಗ್ಯಾಜೆಟ್‍ಗಳಿಗಾಗಲಿ ಇಲ್ಲ. ಆದರೆ ಕೆಲವೊಂದು ಆಘಾತ ಅಥವಾ ಅಪಘಾತಗಳಿಂದ ಮಿದುಳಿಗೆ ಪೆಟ್ಟು ಮಾಡಿಕೊಂಡವರು ಮೊದಲಿನಂತೆ ಕಾರ್ಯ ನಿರ್ವಹಿಸಲು ಈ ಗ್ಯಾಜೆಟ್ ಕೊಂಚ ನೆರವು ನೀಡುತ್ತದೆ’. ಈ ಮಾತುಗಳನ್ನು ಆಲಿಸುತ್ತಿರುವಂತೆ ಡೇವಿಡ್ ಅವರಿಗೆ ತಲೆಬುರುಡೆಯಲ್ಲಿ ಒಂದಷ್ಟು ತುರಿಕೆಯಾಗುತ್ತದೆ. ವಿದ್ಯುತ್ ಪ್ರಮಾಣ 2.5 ಮಿಲಿ ಆಂಪೀರ್‌ಗಳಷ್ಟು (ಅಂದರೆ ನಮ್ಮ ಸಾಮಾನ್ಯ ವಿದ್ಯುತ್ ದೀಪ ಬೆಳಗಲು ಬಳಸುವ ಐದು ಆಂಪೀರ್ ಶಕ್ತಿಗಿಂತಲೂ ಎರಡು ಸಹಸ್ರ ಪಟ್ಟು ಕಡಿಮೆ) ಏರಿದೊಡನೆಯೆ ತಲೆಯೊಳಗೆ ಪುಟ್ಟ ಅಲುಗಾಟವಾಗುತ್ತದೆ. ಒಂದೆರಡು ನಿಮಿಷಗಳ ನಂತರ ನಾಲಿಗೆಗೆ ಲೋಹ ನೆಕ್ಕಿದ ಅನುಭವವಾಗುತ್ತದೆ. ಇದೀಗ ಥೇಟ್ ಬಿಸಿ ಹಾಗೂ ಸ್ಟ್ರಾಂಗ್ ಕಾಫಿ ಕುಡಿದವರಂತೆ ಡೇವಿಡ್ ಚೇತನಗೊಳ್ಳುತ್ತಾರೆ. ಕಂಪ್ಯೂಟರ್ ತೆರೆಯ ಮೇಲಿನ ಬುದ್ಧಿವಂತಿಕೆಯ ಆಟಗಳನ್ನು ಸರಸರನೆ ಆಡುತ್ತಾರೆ. ಹಣ ಗೆಲ್ಲುವ ಅಥವಾ ಸೋಲುವ ಆ ಸರಣಿ ಆಟಗಳನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ರೂಪಿಸಲಾಗಿರುತ್ತದೆ. ಅದರ ಕಲಸು-ಮೇಲೋಗರದಲ್ಲಿ ಎದ್ದು ಬರುವ ಹೊಸ ಆಟ, ಹಿಂದೆ ಆಡಿದ್ದೆ? ಆ ಸಂದರ್ಭದಲ್ಲಿ ಯಾವ ನಿರ್ಧಾರ ಸೋಲು ಅಥವಾ ಗೆಲುವನ್ನು ತಂದುಕೊಟ್ಟಿತ್ತು? ಹೀಗೆ ಕ್ಷಿಪ್ರ ವೇಗದಲ್ಲಿ ಇಂಥವುಗಳನ್ನು ನೆನಪಿಟ್ಟುಕೊಂಡು ಸಮಸ್ಯೆಗಳನ್ನು ಬಿಡಿಸುವ ಸವಾಲು ಅವರ ಮುಂದಿತ್ತು. ಮಿದುಳಿಗೆ ವಿದ್ಯುತ್ ಪೂರೈಕೆಯಾಗುತ್ತಿದ್ದ ಸಮಯದಲ್ಲಿ ಗೆಲ್ಲುತ್ತಾ ಬಂದ ಡೇವಿಡ್, ಸಂಪರ್ಕ ಕಡಿದೊಡನೆಯೆ ಸೋಲುತ್ತಾ ಬಂದರು. ವಿದ್ಯುತ್ ಸಂಪರ್ಕವಿದ್ದಾಗ ಕಷ್ಟದ ಆಟಗಳನ್ನು ಗೆಲ್ಲುತ್ತಿದ್ದವರು, ಸಂಪರ್ಕ ಇಲ್ಲದಿರುವಾಗ ಸುಲಭದ ಆಟಗಳಲ್ಲಿಯೂ ಸೋತರು. ಮರುದಿನ ಸುಖವಾದ ನಿದ್ರೆಯ ನಂತರ ಡೇವಿಡ್ ಮತ್ತೆ ಪ್ರಯೋಗಶಾಲೆಗೆ ಹಿಂದಿರುಗುತ್ತಾರೆ. ಆತ್ಮವಿಶ್ವಾಸದಿಂದ ಅದೇ ಆಟಗಳನ್ನು ಆಡಿ ಮತ್ತಷ್ಟು ಗೆಲುವು ಸಾಧಿಸುತ್ತಾರೆ. ಹೀಗೆ ವಿವಿಧ ಪ್ರಮಾಣದ ವಿದ್ಯುತ್ ಅನ್ನು ವಿವಿಧ ಭಾಗಗಳಿಗೆ ಹಾಯಿಸಿಕೊಂಡು ಒಂದು ದಿವ್ಯ ಅನುಭವವೊಂದನ್ನು ಪಡೆದ ಡೇವಿಡ್ ವಿಜ್ಞಾನ ಪತ್ರಿಕೆಗಳಿಗೆ ಸುಂದರ ಭಾಷ್ಯವೊಂದನ್ನು ಬರೆದಿದ್ದಾರೆ. ಡೇವಿಡ್ ಇಷ್ಟಕ್ಕೇ ಸುಮ್ಮನಾಗುವವರಲ್ಲ. ನಿದ್ರಾಹೀನತೆ ಹಾಗೂ ಮಿದುಳಿಗೆ ಸಂಬಂಧಿಸಿದ ನರದೌರ್ಬಲ್ಯಗಳಿಗೆಂದು ಸೃಷ್ಟಿಯಾದ ವಿವಿಧ ಮದ್ದುಗಳನ್ನು ಸಹಾ ಸೇವಿಸಿ ನೋಡಿದ್ದಾರೆ. ಇಂಥ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡ ಸಮಯದಲ್ಲಿ ತಮಗಾದ ಅನುಭವಗಳು, ಈ ಪರೀಕ್ಷೆಗಳ ಸಾಧಕ-ಬಾಧಕಗಳ ಬಗ್ಗೆ ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ.

ಪತ್ರಕರ್ತರಿಗಿರಬೇಕಾದ ಅಧ್ಯಯನ, ಕುತೂಹಲ, ಅನುಭವಗಳಿಗೆ ತಾವೇ ಭಾಗಿಯಾಗುವ ಧೈರ್ಯ ಜತೆಗೆ ಅತ್ಯುತ್ತಮ ಭಾಷೆ ಡೇವಿಡ್ ಅವರಲ್ಲಿ ಧಾರಾಳವಾಗಿದೆ. ‘ಅಮೆರಿಕನ್ ಅಸೋಸಿಯೇಷನ್ ಫಾರ್ ದ ಅಡ್ವಾನ್ಸ್‍ಮೆಂಟ್ ಆಫ್ ಸೈನ್ಸಸ್’ ಎಂಬ ವಿಜ್ಞಾನದ ಔನ್ನತ್ಯಕ್ಕಾಗಿ ಇರುವ ಜಗನ್ಮಾನ್ಯ ಅಮೆರಿಕ ಸಂಘಟನೆ ಇವರಿಗೆ ಕ್ರಿ.ಶ.2003ರ ವಾರ್ಷಿಕ ಪುರಸ್ಕಾರ ನೀಡಿದೆ. ಅತ್ಯುನ್ನತ ಮಟ್ಟದ ವಿಜ್ಞಾನ ಸಂಶೋಧಕರೊಂದಿಗೆ ಡೇವಿಡ್ ಅವರಿಗೆ ಅತ್ಯುತ್ತಮ ವಿಜ್ಞಾನ ಲೇಖಕ ಪ್ರಶಸ್ತಿಯನ್ನು ನೀಡಲಾಗಿತ್ತು. ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ. ಕ್ರಿ.ಶ.2006 ರ ಸರ್ವಶ್ರೇಷ್ಠ ವಿಜ್ಞಾನ ಲೇಖನ ಪುರಸ್ಕಾರವನ್ನು ಡೇವಿಡ್ ಅವರಿಗೆ ನೀಡಿತ್ತು. ಅವರ ತೀರಾ ಇತ್ತೀಚಿನ ಪುಸ್ತಕ ‘ಮಾಸ್ಟರ್‌ಮೈಂಡ್ಸ್: ಜೀನಿಯಸ್, ಡಿಎನ್‍ಎ ಆಂಡ್ ದ ಕ್ವೆಸ್ಟ್ ಟು ರೀರೈಟ್ ಲೈಫ್’ಗೆ ಅತಿ ಹೆಚ್ಚಿನ ಪುರಸ್ಕಾರಗಳು ಸಂದಿವೆ. ಇಂದಿಗೂ ಅದೊಂದು ಬೆಸ್ಟ್‍ಸೆಲ್ಲರ್ ಆಗಿದೆ. ಅದಕ್ಕೂ ಮುನ್ನ ಅವರು ‘ಕ್ಯಾಲೆಂಡರ್’ ಬಗ್ಗೆ ಬರೆದ ವಿಶ್ಲೇಷಣಾತ್ಮಕ ಪುಸ್ತಕ ಹತ್ತೊಂಬತ್ತು ಭಾಷೆಗಳಲ್ಲಿ ಪ್ರಕಟವಾಗಿದ್ದು, ಹದಿಮೂರು ದೇಶಗಳಲ್ಲಿ ಅತಿ ಹೆಚ್ಚು ಮಾರಾಟಗೊಂಡ ವಿಜ್ಞಾನ ಪುಸ್ತಕವೆಂಬ ಹೆಗ್ಗಳಿಕೆ ಪಡೆದಿದೆ.

ಮೊಝಾರ್ಟ್ ಸಂಗೀತ ಮೇಳ ರಚಿಸುವಷ್ಟೇ ಕಷ್ಟದ ಅಥವಾ ಸುಲಭದ ಕೆಲಸ ಭರಪೂರ ಗಣಿತ ಸಮಸ್ಯೆಗಳ ಕ್ವಾಂಟಮ್ ಮೆಕ್ಯಾನಿಕ್ಸ್ ಅರ್ಥ ಮಾಡಿಕೊಳ್ಳುವುದು. ಹೀಗೆನ್ನುವ ಡೇವಿಡ್ ಯಾವ ಮಿದುಳು ಉತ್ತೇಜಕಗಳ ಅವಶ್ಯವಿಲ್ಲದೆಯೆ ಕ್ಲಿಷ್ಟ ಕೆಲಸಗಳನ್ನು ನಿಭಾಯಿಸುವ ಸಮರ್ಥರು. ನಮ್ಮಂಥ ಪಾಮರರ ಮಿದುಳನ್ನು ಡೇವಿಡ್ ಅವರ ಮಟ್ಟಿಗೇರಿಸುವಂಥ ಗ್ಯಾಜೆಟ್‍ಗಳನ್ನು ವಾಸರ್‌ಮಾನ್ ಸೃಷ್ಟಿಸಲಿ ಎಂದು ಹಾರೈಸೋಣವೆ?

(ಕೃಪೆ: ವಿಜಯ ಕರ್ನಾಟಕ, 02-07-2007)

5 comments:

Anonymous said...

I am a regular reader of your column in 'VIJAYA KARNATAKA' on every monday. I wait for only to see your column in that kannada daily. The way you write, approach,explain complex matters in Science in a friendly, understandable way is a great thing.

- Sudarshan.G.Haradur

Anonymous said...

I am a regular reader of your science article in Vijaya Karnataka.

The way you expla in the technical content is fantastic, a man without science background can also understand. ~ That is really great.

- Santhosh N L
Co-ordinator
Engineering Design in 2007
www.engineeringdesign.in

Anonymous said...

dear sir,

i am an organic farmer.recently i am doing eco buying\selling in agri feild. i read your netnota 2.july.2007 in vijayakarnataka, it is an excellent article.can i know more about mr.devid aving dankan & world space? kindly send me links & more details,if possible.

- satish patil

Haldodderi said...

Dear Satish Patil

Thank you for your patronage.

You may pls browse http://www.davidevingduncan.net and http://www.worldspace.in for more information.

Regards
- Haldodderi Sudhindra

Anonymous said...

I'm your regular article reader. In your next article give us the information about the non-physical atom's, planets in the universe

- Tilak