ಇಂದಿನಿಂದ ಗುರುವಾರದ ತನಕ ಕರ್ನಾಟಕದೆಲ್ಲೆಡೆ ಕಾಲೇಜುಗಳಲ್ಲಿ ಸಂಭ್ರಮದ ವಾತಾವರಣ. ಮುಂದಿನ ಮೆಟ್ಟಿಲನೇರುವ ತಮ್ಮ ಮಕ್ಕಳನ್ನು ‘ಎಲ್ಲಕ್ಕಿಂತಲೂ ಉತ್ತಮ’ ಕಾಲೇಜಿಗೆ ಸೇರಿಸಲು ಪೋಷಕರು ಪಟ್ಟ ಪರಿಶ್ರಮಕ್ಕೆ (?) ಮೊನ್ನೆ ಶನಿವಾರವಷ್ಟೇ ಫಲಿತಾಂಶ ದೊರೆತಿದೆ. ತಮಗೆ ಅಥವಾ ತಮ್ಮ ಮಕ್ಕಳಿಗೆ ಬೇಕೆಂದ ಕಾಲೇಜು ಅಥವಾ ಬೇಕೆಂದ ಕೋರ್ಸು ಪಡೆದುಕೊಳ್ಳಲಾಗದವರಲ್ಲಿ ಕೆಲವರು ಶಿಫಾರಸು ಪತ್ರಗಳ ಹುಡುಕಾಟದಲ್ಲಿದ್ದಾರೆ. ಮತ್ತಷ್ಟು ಜನರು ದೇಣಿಗೆ ನೀಡಿಯಾದರೂ ಸೀಟು ಪಡೆಯಲು ಸಾಧ್ಯವೆ? ಎಂಬ ಪರಿಶೀಲನೆಯಲ್ಲಿದ್ದಾರೆ. ಕಳೆದೊಂದು ವಾರದಿಂದ ವಿದ್ಯಾಮಂತ್ರಿಗಳೂ ಸೇರಿದಂತೆ ವಿದ್ಯಾಸಂಸ್ಥೆಗಳ ಮುಖ್ಯಸ್ಥರ, ಪ್ರಾಂಶುಪಾಲರುಗಳ ಟೆಲಿಫೋನ್‍ಗಳು ಎಡೆಬಿಡದೆ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ಮುಂದೆ ನಿಂತ ಸೀಟು ಸಿಕ್ಕದ ಮಕ್ಕಳ ಪೋಷಕರು ಎಸ್.ಎಸ್.ಎಲ್.ಸಿ.ಯಲ್ಲಿ ಇನ್ನೂ ಉತ್ತಮ ಅಂಕ ಪಡೆಯಲು ಸಾಧ್ಯವಾಗದಿದ್ದಕ್ಕೆ ಕಾರಣಗಳೇನು? ಎಂಬ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿರುತ್ತಾರೆ.
‘ಹಾಳಾದ್ದು ಟೀವಿ ಎಂಬುದು ಇರದಿದ್ದರೆ ನನ್ನ ಮಗ ಇನ್ನು ಐದಾರು ಪರ್ಸೆಂಟ್ ಹೆಚ್ಚು ಮಾರ್ಕು ಪಡೆಯುತ್ತಿದ್ದ’. ‘ಅಲ್ರಿ, ಈ ಎಕ್ಸಾಮ್ ಟೈಮ್‍ನಲ್ಲೇ ಕ್ರಿಕೆಟ್ ಮ್ಯಾಚ್‍ಗಳು ಬರಬೇಕೆ’? ‘ಹೋಗ್ಲಿ ಬಿಡಿ, ಇಂಡಿಯಾ ಮೊದಲೇ ಸೋತದ್ದು ಒಳ್ಳೆಯದಾಯಿತು, ಇಲ್ದಿದ್ರೆ ಮಕ್ಳು ಪರೀಕ್ಷೆ ಬರೀತಾನೇ ಇರ್ಲಿಲ್ಲ’. ‘ಕ್ರಿಕೆಟ್ ಬಿಡಿ, ಯಾವಾಗ್ಲೋ ಒಮ್ಮೆ ಸೀಸನ್‍ನಲ್ಲಿ ಬರತ್ತೆ. ಮೂರು ಹೊತ್ತೂ ಬರೋ ಈ ಸಿನಿಮಾ ಸಂಗೀತ, ಕುಣಿತದಿಂದ ನನ್ನ ಮಗಳಂತೂ ಯಾವುದರ ಬಗ್ಗೆಯೂ ಕಾನ್ಸಂಟ್ರೇಟ್ ಮಾಡೋದಿಲ್ಲ’. ‘ಅಯ್ಯೋ ನನ್ನ ಮಗನಂತೂ ನಮ್ಮತ್ತೆ ನೋಡೋ ಎಲ್ಲಾ ಸೀರಿಯಲ್‍ಗಳನ್ನೂ ನೋಡ್ತಾನ್ರಿ’. ‘ಇರೋ ಇಷ್ಟು ಚಾನೆಲ್‍ಗಳು ಸಾಲದೂಂತಾ ನಮ್ಮೆಜಮಾನ್ರು ಡೀವೀಡಿ ಪ್ಲೇಯರ್ ಬೇರೆ ತಂದಿಟ್ಟಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ನೋಡೋ ಹುಚ್ಚನ್ನು ಮಕ್ಕಳಿಗೂ ಹಚ್ಚಿಸಿದ್ದಾರೆ’. ...... ಪೋಷಕರ ಆಕ್ರೋಶ ಸೀದಾ ಟೀವಿಯ ಮೇಲೆ ತಿರುಗಿಬಿಟ್ಟಿದೆ. ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣವೆಂಬಂತೆ ಟೀವಿ ತಲೆಯ ಮೇಲೆ ಆಕ್ಷೇಪದ ಗೂಬೆ ಕೂತಿದೆ. ಶನಿವಾರ ಮಧ್ಯಾಹ್ನ ಕಾಲೇಜೊಂದರ ಪ್ರಾಂಶುಪಾಲರ ಕಚೇರಿಯ ಮುಂದೆ ಇಂಥದೇ ಆಪಾದನೆ ಕಿವಿಗೆ ಬಿದ್ದಾಗ ಪಕ್ಕಕ್ಕೆ ತಿರುಗಿ ನೋಡಿದೆ. ಸರಿಯಾಗಿ ಮೂವತ್ತು ವರ್ಷಗಳ ಹಿಂದೆ ನನ್ನೊಂದಿಗೇ ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜು ಸೇರಿಕೊಂಡಿದ್ದ ಗೆಳೆಯ ಕಣ್ಣಿಗೆ ಬಿದ್ದ. ಮಗನಿಗೆ ಕಾಲೇಜು ಸೀಟು ಸಿಗದಿರಲು ಟೀವಿ ಕಾರ್ಯಕ್ರಮಗಳೇ ಕಾರಣ ಎಂದು ತನ್ನ ಗೋಳು ತೋಡಿಕೊಂಡ. "ಅಲ್ಲಯ್ಯ. ನಿನ್ನ ಮಗನೂ ಸೇರಿದಂತೆ ನಮ್ಮೆಲ್ಲರ ಮಕ್ಕಳು ‘ಹಾಳಾಗಲು’ ನೀನು ಮತ್ತು ನಿನ್ನ ಸಂಸ್ಥೆಯೇ ಕಾರಣ" ಎಂದು ಛೇಡಿಸಿದೆ. ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ‘ಇಸ್ರೋ’ದಲ್ಲಿನ ವಿಜ್ಞಾನಿ ಮಿತ್ರ ಪೆಚ್ಚಾದ. ‘ನಾವು ಉಪಗ್ರಹಗಳನ್ನು ಉಡ್ಡಯಿಸಿದ್ದು ಸಿನಿಮಾ ಸಂಗೀತ ಅಥವಾ ಕ್ರಿಕೆಟ್ ಆಟ ಅಥವಾ ಫ್ಯಾಶನ್ ಕಾರ್ಯಕ್ರಮಗಳನ್ನು ಸದಾಕಾಲ ಬಿತ್ತರಿಸಲಿ ಎಂದಲ್ಲ’ ಎಂಬ ಸಮಜಾಯಿಶಿ ನೀಡ ಹೊರಟ. ನನ್ನ ತಮಾಷೆಯ ಮಾತನ್ನು ಆತ ಗಂಭೀರವಾಗಿ ತೆಗೆದುಕೊಂಡಿದ್ದ. ಇಡೀ ದೇಶಕ್ಕೆ ವಿದ್ಯೆ ಪ್ರಸರಿಸಬೇಕು, ಕುಗ್ರಾಮಗಳೂ ಸೇರಿದಂತೆ ಎಲ್ಲ ಸ್ಥಳಗಳಿಗೆ ಸಂಪರ್ಕ ವ್ಯವಸ್ಥೆ ಸಿಗಬೇಕು, ಆರೋಗ್ಯ ಸೇವೆಯನ್ನು ದೇಶದೆಲ್ಲೆಡೆಗೆ ವಿಸ್ತರಿಸಬೇಕು ..... ಹೀಗೆ ಅತ್ಯುನ್ನತ ಧ್ಯೇಯೋದ್ದೇಶಗಳನ್ನಿಟ್ಟುಕೊಂಡ ಸಹಸ್ರಾರು ಕೋಟಿ ರೂಪಾಯಿಗಳ ಬಾಹ್ಯಾಂತರಿಕ್ಷ ಯೋಜನೆಗಳ ಒಟ್ಟಾರೆ ಫಲದ ಬಗ್ಗೆ ನಾನು ಲೇವಡಿ ಮಾಡುತ್ತಿರಬಹುದೆಂಬ ಆತಂಕ ಅವನಿಗೆದುರಾಯಿತು. ‘ತಪ್ಪು ನಿನ್ನದೂ ಅಲ್ಲ, ನಿನ್ನ ಸಂಸ್ಥೆಯದೂ ಅಲ್ಲ. ಟೀವಿ ಚಾನೆಲ್‍ಗಳದು. ಅದನ್ನು ಎಡೆಬಿಡದೆ ವೀಕ್ಷಿಸುವ ಪೋಷಕರು ಹಾಗೂ ಮಕ್ಕಳದ್ದು. ಇಸ್ರೋ ಇಂಥದೊಂದು ಸ್ವಾವಲಂಬಿ ಸಂಪರ್ಕ ವ್ಯವಸ್ಥೆಯನ್ನು ಜಾರಿಗೆ ತರದಿದ್ದರೆ ನಾವೆಲ್ಲರೂ ಇಂದು ಹೆಮ್ಮೆ ಪಡುವ ಐ.ಟಿ. ಉದ್ದಿಮೆ ಬೆಳೆಯುತ್ತಲೇ ಇರಲಿಲ್ಲ’ ಎಂದು ಸಾಂತ್ವನಗೊಳಿಸಿದೆ.
ಮನೆಗೆ ಬಂದವನೇ ಇಂಟರ್‌ನೆಟ್ ಅರಸತೊಡಗಿದೆ. ‘ಕಂಪ್ಯೂಟರ್ ಮುಂದೆ ಕೂರದೆಯೆ ಒಂದರ್ಧ ಗಂಟೆಯಾದರೂ ಇರಲು ಸಾಧ್ಯವಿಲ್ಲವೆ’? ಟೀವಿ ನೋಡುವ ಮಕ್ಕಳಿಗೆ ಮಾಡುವಂತೆ ಮಡದಿ ನನಗೂ ಗದರಿದಳು. ಎರಡು ವಾರಗಳ ಹಿಂದಿನ ಘಟನೆಯೊಂದು ನೆನಪಾಯಿತು. ಮಕ್ಕಳ ರಜೆಯನ್ನು ಹೊಂದಿಸಿಕೊಂಡು ಉರಿಬಿಸಿಲಿನಲ್ಲಿ ಗೋವಾ ಪ್ರವಾಸ ಮಾಡಿಬಂದೆವು. ನನ್ನಂಥ ಹುಟ್ಟಾ ಬೆಂಗಳೂರಿಗರಿಗೆ ವಿಪರೀತ ಶೀತ ಅಥವಾ ತಾಪ ತಡೆಯುವುದು ಕಷ್ಟ. ಅಂಥ ಸಂದರ್ಭಗಳಲ್ಲಿ ತಲೆನೋವು ಕಾಡುವುದು ಸಹಜ. ಬಿಸಿಲಿನಲ್ಲಿ ಒಮ್ಮೆ ಸುತ್ತುವಾಗ ‘ಈ ಬಾರಿ ತಲೆನೋವು ಕಿಂಚಿತ್ತೂ ಕಾಡಲಿಲ್ಲ’ ಎಂದು ಮಡದಿಯೊಡನೆ ಖುಷಿಯಾಗಿ ಹೇಳಿಕೊಂಡಿದ್ದೆ. ಥಟ್ಟನೇ ಆಕೆಯಿಂದ ಬಂದ ಉತ್ತರ ‘ಇಂಟರ್‌ನೆಟ್ ಇಲ್ಲ. ಅದಕ್ಕೇ ಕಣ್ಣಿಗೆ ವಿಶ್ರಾಂತಿ ಸಿಕ್ಕಿದೆ. ತಲೆನೋವು ಬಂದಿಲ್ಲ’. ‘ನೀನು ವೈದ್ಯಳಾದದ್ದು ಎಂದಿನಿಂದ?’ ಎಂದು ತಮಾಷೆ ಮಾಡಿದರೂ ಆಕೆಯ ಮಾತಿನಲ್ಲಿ ನನ್ನ ತಲೆನೋವಿಗೆ ಪರಿಹಾರ ದೊರೆತಿತ್ತು.
ಎರಡು ಮೂರು ದಿನ ಟೀವಿ ಹಾಗೂ ಇಂಟರ್‌ನೆಟ್‍ನ ಸಾಧಕ-ಬಾಧಕಗಳ ಬಗ್ಗೆಯೇ ವಿಚಾರ ಮಾಡುತ್ತಿದ್ದೆ. ಏತನ್ಮಧ್ಯೆ ಬ್ರಿಟನ್ನಿನ ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕ ‘ನ್ಯೂ ಸಂಟಿಸ್ಟ್’ನ ಇಂಟರ್‌ನೆಟ್ ಆವೃತ್ತಿಯ ಲೇಖನವೊಂದು ಮನ ಸೆಳೆಯಿತು. ಅಮೆರಿಕದ ನ್ಯೂ ಯಾರ್ಕ್‍ನಲ್ಲಿನ 700 ಕುಟುಂಬಗಳ ಮೇಲೆ ಕಳೆದ 20 ವರ್ಷಗಳಿಂದ ನಡೆಸಿದ ಸಮೀಕ್ಷೆಯೊಂದರ ವಿಶ್ಲೇಷಣೆ ಆ ಲೇಖನದಲ್ಲಿತ್ತು. ‘ಅತಿ ಹೆಚ್ಚಿನ ಟೀವಿ ವೀಕ್ಷಣೆಯಿಂದ ವಿದ್ಯಾಭ್ಯಾಸಕ್ಕೆ ಕುತ್ತು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಫಲಿತಾಂಶ ಕೊಂಚ ಆತಂಕ ಹುಟ್ಟಿಸುವಂತಿದೆ. ಪ್ರತಿನಿತ್ಯ ಸತತವಾಗಿ ಮೂರು ಗಂಟೆಗಳಿಗಿಂತಲೂ ಹೆಚ್ಚು ಕಾಲ ಟೀವಿ ವೀಕ್ಷಿಸುವ ಮಕ್ಕಳು ಪ್ರೌಢಶಾಲೆಯ ನಂತರದ ವಿದ್ಯಾಭ್ಯಾಸವನ್ನು ಮುಂದುವರಿಸದಿರುವ ಸಾಧ್ಯತೆ ಹೆಚ್ಚು. ಈ ಸಾಧ್ಯತೆ ಕಡಿಮೆ ಟೀವಿ ವೀಕ್ಶಿಸುವ ಸಾಮಾನ್ಯ ಮಕ್ಕಳಿಗಿಂತಲೂ ದುಪ್ಪಟ್ಟು. ಅಮೆರಿಕದ ‘ನ್ಯೂ ಯಾರ್ಕ್ ಸ್ಟೇಟ್ ಸೈಕಿಯಾಟ್ರಿಕ್ ಇನ್‍ಸ್ಟಿಟ್ಯೂಟ್’ ಸಂಸ್ಥೆಯ ಮನೋವಿಜ್ಞಾನಿ ಜೆಫ್ರಿ ಜಾನ್ಸನ್ ಕ್ರಿ.ಶ.1985ರಲ್ಲಿ 14ರ ಪ್ರಾಯದ ಮಕ್ಕಳಿರುವ ಆಯ್ದ 678 ಕುಟುಂಬಗಳನ್ನು ತಮ್ಮ ಸಮೀಕ್ಷೆಗಾಗಿ ಆಯ್ದುಕೊಂಡಿದ್ದರು. ಇವು ಆನುವಂಶಿಕವಾಗಿ ಅಥವಾ ಸ್ವತಃ, ಓದಿನ ಬಗ್ಗೆ ನಿರಾಸಕ್ತಿ ಸ್ವಭಾವ ಹೊಂದಿರದ ಕುಟುಂಬಗಳಾಗಿದ್ದವು. ಸಮೀಕ್ಷೆಯ ನೇತೃತ್ವ ವಹಿಸಿಕೊಂಡಿದ್ದ ವೈದ್ಯ ತಂಡವು ಅತ್ಯಂತ ಜಾಗರೂಕತೆಯಿಂದ ಸಮೀಕ್ಷೆಯ ಪ್ರಶ್ನಾವಳಿಯನ್ನು ರೂಪಿಸಿತ್ತು. ಮೊದಲ ಹಂತದ ಮಾಹಿತಿಯನ್ನು ಮಕ್ಕಳು 14ನೆಯ ವಯಸ್ಸಿನಲ್ಲಿದ್ದಾಗ ಕ್ರೋಡೀಕರಿಸಲಾಯಿತು. ಮತ್ತೆ, ಇದೇ ಮಕ್ಕಳು 16ನೆಯ, 22ನೆಯ ಹಾಗೂ 33ನೆಯ ವಯಸ್ಸಿನಲ್ಲಿದ್ದಾಗ ವಿಸ್ತೃತ ಅಧ್ಯಯನಗಳನ್ನು ಕೈಗೊಳ್ಳಲಾಯಿತು.
ಅಧ್ಯಯನ ಹೊರಗೆಡವಿರುವ ಫಲಿತಾಂಶದಲ್ಲಿನ ಸ್ವಾರಸ್ಯಕರ ಅಂಶಗಳು ಇಂತಿವೆ. 14ನೆಯ ವಯಸ್ಸಿನಲ್ಲಿ ಬಹುತೇಕ ಮಕ್ಕಳು ಪ್ರತಿನಿತ್ಯವೂ ಒಂದರಿಂದ ಮೂರು ಗಂಟೆಗಳ ಕಾಲ ಟೀವಿ ವೀಕ್ಷಿಸುತ್ತಾರೆ. ಇವರಲ್ಲಿ ಪ್ರತಿಶತ 13ರಷ್ಟು ಮಕ್ಕಳು ನಾಲ್ಕು ಗಂಟೆಗಳಿಗಿಂತಲೂ ಹೆಚ್ಚು ಕಾಲ ಟೀವಿ ನೋಡುವ ಅಭ್ಯಾಸ ಹೊಂದಿದ್ದರೆ, ಕೇವಲ ಪ್ರತಿಶತ 10ರಷ್ಟು ಮಕ್ಕಳು ಮಾತ್ರ ಒಂದು ಗಂಟೆಗಿಂತಲೂ ಕಡಿಮೆ ಅವಧಿ ಟೀವಿಯ ಮುಂದೆ ಕೂತಿರುತ್ತಾರೆ. ಈ ಮಕ್ಕಳಲ್ಲಿ ಇಂಥ ಅಭ್ಯಾಸ 16 ಹಾಗೂ 22ನೆಯ ವಯಸ್ಸಿನ ತನಕವೂ ಮುಂದುವರಿಯುತ್ತದೆ. ತಮ್ಮ 14ನೆಯ ವಯಸ್ಸಿನಲ್ಲಿ ಮೂರು ಗಂಟೆಗಳಿಗಿಂತಲೂ ಹೆಚ್ಚು ಕಾಲ ಟೀವಿ ವೀಕ್ಷಿಸುತ್ತಿದ್ದ ಮಕ್ಕಳಲ್ಲಿ ಕನಿಷ್ಟವೆಂದರೂ ಪ್ರತಿಶತ 30ರಷ್ಟು ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅಧ್ಯಯನದ ಏಕಾಗ್ರತೆ ಉಳಿಸಿಕೊಳ್ಳಲಾಗುವುದಿಲ್ಲ. ಇಂಥದೇ ಹೋಲಿಕೆಯನ್ನು ನಿತ್ಯ ಒಂದು ಗಂಟೆಗಳಷ್ಟು ಮಾತ್ರ ಟೀವಿ ವೀಕ್ಷಿಸುವ 14ರ ವಯಸ್ಸಿನ ಮಕ್ಕಳ ಮೇಲೂ ನಡೆಸಲಾಗಿತ್ತು. ಇವರಲ್ಲಿ ಕೇವಲ ಪ್ರತಿಶತ 15ರಷ್ಟು ಮಕ್ಕಳಿಗೆ ಮಾತ್ರ ಮುಂದಿನ ದಿನಗಳಲ್ಲಿ ಏಕಾಗ್ರತೆಯ ತೊಂದರೆ ಕಾಣಿಸಿಕೊಂಡಿತ್ತು. 14ನೆಯ ವಯಸ್ಸಿನಿಂದ ನಿತ್ಯವೂ ಹಲವಾರು ಗಂಟೆಗಳ ಕಾಲ ಟೀವಿ ವೀಕ್ಷಿಸುವ ಮಕ್ಕಳಲ್ಲಿ ಮೂವರಲ್ಲಿ ಓರ್ವರು 22ನೆಯ ವಯಸ್ಸನ್ನು ಮುಟ್ಟುವ ಹೊತ್ತಿಗೆ ಪದವಿ ಪರೀಕ್ಷೆಗಳಲ್ಲಿ ಫೇಯ್ಲ್ ಆಗಿದ್ದರು ಅಥವಾ ತೀರಾ ಕಡಿಮೆ ಅಂಕಗಳನ್ನು ಪಡೆದಿದ್ದರು. ಆದರೆ ನಿತ್ಯವೂ ಒಂದು ಗಂಟೆಗಳಿಗಿಂತ ಕಡಿಮೆ ಅವಧಿ ಟೀವಿ ವೀಕ್ಷಿಸುವ ಅಭ್ಯಾಸವಿರುವ ಮಕ್ಕಳಲ್ಲಿ ಕೇವಲ ಹತ್ತರಲ್ಲಿ ಒಬ್ಬರು ಮಾತ್ರ ತಮ್ಮ ಫೇಯ್ಲ್ ಆಗಿದ್ದರು. ಫಲಿತಾಂಶದ ಒಟ್ಟಾರೆ ಗ್ರಹಿಕೆಯೇನೆಂದರೆ ಮೂರು ಗಂಟೆಗಳಿಗಿಂತಲೂ ಹೆಚ್ಚು ಅವಧಿ ಟೀವಿ ವೀಕ್ಷಿಸುವ ಅಭ್ಯಾಸವಿರುವ ಮಕ್ಕಳು ವಿದ್ಯಾಭ್ಯಸದ ಔನ್ನತ್ಯವನ್ನು ಸಾಧಿಸುವ ಸಂಭಾವ್ಯತೆ ಕಡಿಮೆ ಅವಧಿ ಟೀವಿ ವೀಕ್ಷಿಸುವ ಮಕ್ಕಳಿಗಿಂತ ಪ್ರತಿಶತ 82ರಷ್ಟು ಕಡಿಮೆ.
ಎರಡು ವರ್ಷಗಳ ಹಿಂದೆ ನ್ಯೂಝಿಲೆಂಡ್ ದೇಶದಲ್ಲಿಯೂ ಇಂಥದೇ ಒಂದು ಅಧ್ಯಯನದ ವರದಿ ಪ್ರಕಟವಾಗಿತ್ತು. 5ನೆಯ ವಯಸ್ಸಿನಿಂದ 15ನೆಯ ವಯಸ್ಸಿನ ತನಕ ಪ್ರತಿ 2 ವರ್ಷಗಳಿಗೊಮ್ಮೆ 1000 ಆಯ್ದ ಮಕ್ಕಳ ಮೇಲೆ ನಡೆಸಿದ ಸಮೀಕ್ಷೆ ಹೆಚ್ಚೂ-ಕಮ್ಮಿ ಇಂಥದೇ ಅಭಿಪ್ರಾಯವನ್ನು ಕೊಟ್ಟಿತ್ತು. ಈ ಮಕ್ಕಳು 26ನೆಯ ವರ್ಷವನ್ನು ದಾಟಿದಾಗ ಅವರ ವಿದ್ಯಾಭ್ಯಾಸದ ಸಾಧನೆಯನ್ನು ತುಲನೆ ಮಾಡಿ ನೋಡಲಾಗಿತ್ತು. ತಮ್ಮ 5ರಿಂದ 11ನೆಯ ವಯಸ್ಸಿನ ತನಕ ಕಡಿಮೆ ಅವಧಿ ಟೀವಿ ನೋಡುವ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಪರೀಕ್ಷೆಗಳನ್ನು ಪಾಸು ಮಾಡಿದ್ದರು. ಇತ್ತ ತಮ್ಮ 13ರಿಂದ 15ನೆಯ ವಯಸ್ಸಿನಲ್ಲಿ ಹೆಚ್ಚು ಗಂಟೆಗಳ ಕಾಲ ಟೀವಿ ವೀಕ್ಷಿಸುತ್ತಿದ್ದ ಮಕ್ಕಳಲ್ಲಿ ಬಹುತೇಕರು ಪದವಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದರು. ನ್ಯೂಝಿಲೆಂಡ್‍ನ ಒಟ್ಯಾಗೊ ವಿವಿಯ ಮನೋವಿಜ್ಞಾನಿ ಬಾಬ್ ಹ್ಯಾನ್‍ಕಾಕ್ಸ್ ನೇತೃತ್ವದಲ್ಲಿ ನಡೆದ ಬಹು ದೀರ್ಘಾವಧಿಯ ಅಧ್ಯಯನದ ಫಲಿತಾಂಶಗಳನ್ನು ಜಗತ್ತಿನೆಲ್ಲೆಡೆ ಮಾನ್ಯ ಮಾಡಲಾಗಿದೆ. ಇಲ್ಲಿನ ವೈದ್ಯರು ಟೀವಿ ದ್ವೇಷಿಗಳೆಂದು ಭಾವಿಸಬಹುದಾದಷ್ಟು ಕಟುವಾಗಿ ವಿಮರ್ಶೆ ಮಾಡಿದ್ದಾರೆ. ‘ಟೀವಿ ಎಂದಿಗೂ ವಿದ್ಯಾಭ್ಯಾಸಿ-ಸ್ನೇಹಿಯಲ್ಲ, ಜತೆಗೆ ಅವರ ಬೌದ್ಧಿಕ ಬೆಳವಣಿಗೆ ನೆರವು ನೀಡುವಂಥದೂ ಅಲ್ಲ’ ಎಂದು ಘೋಷಿಸಿದ್ದಾರೆ. ಅಂಕೆ-ಅಂಶಗಳನ್ನು ಗಮನಿಸಿದರೆ ಈ ಮಾತುಗಳನ್ನು ಸಾರಾಸಗಟಾಗಿ ಒಪ್ಪಿಕೊಳ್ಳಬಹುದು.
ಅಮೆರಿಕದಲ್ಲಿ ಕೆಲ ಸಿನಿ(ಮಾ ವೀಕ್ಷ)ಕರು ಈ ಬಗೆಯ ಸಮೀಕ್ಷೆಗಳನ್ನು ಲೇವಡಿ ಮಾಡಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇರದವರು ಸಹಜವಾಗಿಯೇ ಟೀವಿ ವೀಕ್ಷಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಏಕೆಂದರೆ ಕಾಲಹರಣ ಮಾಡಲು ಇಂಥವರಿಗೆ ಓದು-ಬರಹಕ್ಕಿಂತಲೂ ಟೀವಿ ವೀಕ್ಷಣೆ ಸುಲಭ. ಅನ್ಯಥಾ ಟೀವಿಯನ್ನು ದೂರುವುದರಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ವೈದ್ಯರೂ ಒಪ್ಪುವ ಮಾತುಗಳೆಂದರೆ ‘ನಮ್ಮ ಬೋಧನಾ ಕ್ರಮವೇ ಬೋರ್ ಹೊಡೆಸುವಂಥದು. ಟೀವಿ ಕಾರ್ಯಕ್ರಮಗಳಷ್ಟೇ ಆಕರ್ಷಣೀಯವಾಗಿ ಪಾಠ ಪ್ರವಚನಗಳನ್ನು ನಡೆಸಿಕೊಟ್ಟರೆ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಆಸಕ್ತರಾಗುತ್ತಾರೆ’.
ವಾದ-ವಿವಾದಗಳದೇನೇ ಇರಲಿ, ‘ಬೆಳಗಾಗಿ ನಾವೆದ್ದು ಯಾವ್ಯಾವ ಚಾನೆಲ್ ನೆನೆಯಲಿ’ ಎಂದುಕೊಳ್ಳುತ್ತಲೇ ಸುಪ್ರಭಾತ ಆರಂಭಿಸುವವರ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚಾಗುತ್ತಿರುವುದಂತೂ ನಿಜ. ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹಾ ಹೆಚ್ಚಿನ ಸಂಖ್ಯೆಯ ಯುವಜನತೆ ಟೀವಿ ವೀಕ್ಷಣೆಯಲ್ಲಿ ಕಾಲಹರಣ ಮಾಡುತ್ತಿರುವ ಬಗ್ಗೆ ಆತಂಕಕಾರಿ ವರದಿಗಳು ಬರುತ್ತಿವೆ. ಟೀವಿ ವೀಕ್ಷಣೆಗೆ ಪೂರ್ಣ ಕಡಿವಾಣ ಹಾಕುವುದಕ್ಕಿಂತ ಅದನ್ನು ನಿಯಂತ್ರಿತ ಮಟ್ಟ ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಬೆಳೆವ ಮಕ್ಕಳ ಪೋಷಕರದು. ‘ಚೇಷ್ಟೆ ಮಾಡೋದ್ಬಿಟ್ಟು ಟೀವಿ ನೋಡ್ಕೊಂಡಿರಬಾರದೆ’? ಎಂದು ತಮ್ಮ ಮಕ್ಕಳನ್ನು ಗದರುವ ಮುನ್ನ ಪಾಲಕರು ಒಮ್ಮೆ ಯೋಚಿಸಬೇಕು. ಸತತ ಟೀವಿ ವೀಕ್ಷಣೆಯಿಂದ ಕೇವಲ ವಿದ್ಯಾಭ್ಯಾಸ ಮಾತ್ರ ಕುಂಠಿತವಾಗುವುದಿಲ್ಲ, ಅನೇಕ ದುಷ್ಕೃತ್ಯಗಳಿಗೆ ಪ್ರೇರಣೆಯೂ ದೊರೆಯುತ್ತದೆ.
(14 May 2007)
3 comments:
ಲೇಖನ ಮಸ್ತ್ ಇದೆ. ಎಲ್ಲಾ ಪೋಷಕರೂ, ಹುಡುಗರೂ ಅರ್ಥ ಮಾಡಿಕೊಳ್ಳಬೇಕು. ಒಳ್ಳೇ ಲೇಖನ.
- ಪ್ರವೀಣ್ ಭಟ್, ವಿದ್ಯಾರ್ಥಿ, ಬಿ.ಡಿ.ಟಿ. ಎಂಜಿನೀರಿಂಗ್ ಕಾಲೇಜ್
ಉತ್ತಮ ಲೇಖನ... ಇಷ್ಟು ದಿನ ನಿಮ್ಮ ಬ್ಲಾಗಿಗೆ ಭೇಟಿ ಕೊಡದೇ ತಪ್ಪು ಮಾಡಿದೆ...
ಬಹಳ ದಿನಗಳಿಂದ ಹೇಳಬೇಕೆಂದಿದ್ದೆ. ಇಲ್ಲ, ಕೇಳಬೇಕೆಂದಿದ್ದೆ. ’ಇಂಟರ್ನೆಟ್ನಲ್ಲಿ ನೋಡಿದಾಗ’, ’ಇಂತಾ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿ’ ಎಂದೆಲ್ಲಾ ಹೇಳುತ್ತೀರಲ್ಲಾ ,ಅದರ ಜೊತೆಗೆ ಆಯಾ ತಾಣಕ್ಕೆ/ಪುಟಕ್ಕೆ ಕೊಂಡಿಯನ್ನು ಕೂಡ ಕೊಟ್ಟರಾಗದೇ??
ಅಂದಹಾಗೆ,
ಬರೀ ಟೀವೀ ಮೇಲೊಂದೆ ಅಲ್ಲದೆ ಕತ್ತಲಲ್ಲಿ ಕುಳಿತು ಟೀವಿ ನೋಡುವುವರ ತಲೆಯಮೇಲೂ ಬೆಳಕು ಚೆಲ್ಲಿದೆ ಈ ಲೇಖನ.
Post a Comment