Monday, May 21, 2007

ಹೊಸ ಚಿಗುರು, ಹಳೆ ಬೇರು, ಕೂಡಿರಲು ಮರ ಸೊಗಸು?

‘ವಿಜಯ ಕರ್ನಾಟಕದಲ್ಲಿನ ನಿಮ್ಮ ವಿಜ್ಞಾನ ಲೇಖನಗಳನ್ನು ನಾನು ತಪ್ಪದೇ ಓದುತ್ತೇನೆ. ಅವು ಚೆನ್ನಾಗಿರುತ್ತವೆ, ಜತೆಗೆ ಹತ್ತನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿಕೆ ಮಾಡಿದ ನನ್ನಂಥವನಿಗೆ ಈ ಬಗೆಯ ತಂತ್ರಜ್ಞಾನ ಲೇಖನಗಳು ಹೆಚ್ಚಿನ ಖುಷಿ ಕೊಡುತ್ತವೆ. ಇದ್ದಕ್ಕಿದ್ದಂತೆ ನಾನೀ ಪತ್ರವನ್ನು ಏಕೆ ಬರೆಯುತ್ತಿದ್ದೇನೆಂದು ನಿಮಗೆ ಆಶ್ಚರ್ಯವಾಗಿರಬಹುದು, ಅದಕ್ಕೊಂದು ಬಲವಾದ ತಾಂತ್ರಿಕ ಕಾರ್‍ಅಣವಿದೆ. ಪ್ರಸ್ತುತ ನಾನು ಬೆಂಗಳೂರಿನ ಕೆ.ಆರ್.ವೃತ್ತದಲ್ಲಿ ಯೂ.ವಿ.ಸಿ.ಇ. ಎಂಜಿನೀರಿಂಗ್ ಕಾಲೇಜ್ ಎದುರಿಗಿರುವ ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೆಕಟ್ರಾನಿಕ್ಸ್ (ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಪರಸ್ಪರ ಪೂರಕವಾಗಿ ಮೇಳೈಸಿದ ಹೊಸ ಎಂಜಿನೀರಿಂಗ್ ವಿಷಯ - ಲೇ.) ಎಂಜಿನೀರಿಂಗ್ ವಿಭಾಗದ ಮುಖ್ಯಸ್ಥನಾಗಿದ್ದೇನೆ. ಕಳೆದ ಒಂಬತ್ತು ವರ್ಷಗಳಿಂದ ಡಿಪ್ಲೊಮೊ ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಬೋಧಿಸುತ್ತಿದ್ದೇನೆ.


ಇಂಥದೊಂದು ಅದ್ಭುತ ವಿಷಯದ ಮಹತ್ವ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆದರೆ ಅಮೆರಿಕ, ಆಸ್ಟ್ರೇಲಿಯ, ಬ್ರಿಟನ್, ಜರ್ಮನಿ, ಫ್ರಾನ್ಸ್, ಜಪಾನ್, ಕೊರಿಯಾ, ಸಿಂಗಾಪುರ .... ಇತ್ಯಾದಿ ದೇಶಗಳ ಬಹಳಷ್ಟು ವಿಶ್ವವಿದ್ಯಾಲಯಗಳು ಈ ವಿಷಯದಲ್ಲಿಯೇ ಪದವಿ ಹಾಗೂ ಉನ್ನತ ಪದವಿಗಳನ್ನು ನೀಡುತ್ತಿವೆ. ಆದರೆ ನಮ್ಮ ರಾಜ್ಯದ ತಾಂತ್ರಿಕ ವಿಶ್ವವಿದ್ಯಾಲಯ ವಿ.ಟಿ.ಯು. ಮೆಕಟ್ರಾನಿಕ್ಸ್ ಅನ್ನು ಪದವಿಯ ವಿಭಾಗವೆಂದು ಪರಿಗಣಿಸದೆಯೆ ಕೇವಲ ಬೋಧನೆಯ ಒಂದು ವಿಷಯವೆಂದಷ್ಟೇ ಮಾನ್ಯ ಮಾಡಿದೆ. ತಮಿಳುನಾಡು, ಕೇರಳ, ಗುಜರಾತ್ ರಾಜ್ಯಗಳು ಮೆಕಟ್ರಾನಿಕ್ಸ್ ವಿಷಯದ ಮಹತ್ವವನ್ನು ಮನಗಂಡು, ಪದವಿ ನೀಡುವ ಪ್ರತ್ಯೇಕ ಎಂಜಿನೀರಿಂಗ್ ವಿಭಾಗಗಳನ್ನು ತಮ್ಮ ವಿವಿಗಳಲ್ಲಿ ಸ್ಥಾಪಿಸಿವೆ.


ವಿಶ್ವವಿದ್ಯಾಲಯಗಳಿಗೆ ಮನವರಿಕೆಯಾಗದಿದ್ದರೂ ನಮ್ಮ ರಾಜ್ಯ ಸರ್ಕಾರದ ತಂತ್ರಜ್ಞಾನ ಶಿಕ್ಷಣ ಇಲಾಖೆಗೆ ಮೆಕಟ್ರಾನಿಕ್ಸ್ ವಿಷಯದ ಪ್ರಮುಖತೆ ಅರಿವಾಗಿತ್ತು. ಬಹಳ ವರ್ಷಗಳ ಹಿಂದೆಯೇ ರಾಜ್ಯದ ಇಪ್ಪತ್ತಕ್ಕೂ ಹೆಚ್ಚಿನ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಮೆಕಟ್ರಾನಿಕ್ಸ್ ಕೋರ್ಸ್ ಅನ್ನು ಅದು ಆರಂಭಿಸಿತ್ತು. ಇದೇ ರೀತಿ ಎಂಜಿನೀರಿಂಗ್ ಕಾಲೇಜುಗಳಲ್ಲಿಯೂ ಮೆಕಟ್ರಾನಿಕ್ಸ್ ವಿಷಯವನ್ನು ಪದವಿಯ ಒಂದು ವಿಭಾಗವಾಗಿ ಪರಿಗಣಿಸುವ ತುರ್ತು ಇಂದು ಎಂದಿಗಿಂತಲೂ ಹೆಚ್ಚಾಗಿದೆ. ಕರ್ನಾಟಕ ಸರ್ಕಾರ ಆರು ಸರ್ಕಾರಿ ಎಂಜಿನೀರಿಂಗ್ ಕಾಲೇಜುಗಳನ್ನು ಹೊಸತಾಗಿ ಆರಂಭಿಸುವ ಉದ್ದಿಶ್ಯ ಹೊಂದಿರುವ ಸಂದರ್ಭದಲ್ಲಿ ಈ ಬಗ್ಗೆ ತೀವ್ರ ಚರ್ಚೆಯಾದರೆ ಒಳಿತು.


ಈ ವಿಷಯದ ಬಗ್ಗೆ ಯಾವುದೇ ಹೊಸ ಮಾಹಿತಿ ಬೇಕಿದ್ದಲ್ಲಿ ನಿಮಗೆ ಕೊಡಲು ಸಿದ್ಧನಾಗಿದ್ದೇನೆ’.


ಪತ್ರ ಬರೆದ ಮಹದೇವಯ್ಯ ಎಂಜಿನೀರಿಂಗ್ ಕಲಿಕೆಯಲ್ಲಿ ನನ್ನ ಸಹಪಾಠಿಯಾಗಿದ್ದವನು. ಕಲಿಕೆ ಮುಗಿದ ನಂತರ ಅವನೊಂದಿಗೆ ಸಂಪರ್ಕ ತಪ್ಪಿಹೋಗಿತ್ತು. ಕಲಿತ ಯೂ.ವಿ.ಸಿ.ಇ. ಕಾಲೇಜಿನಲ್ಲಿಯೇ ಎಂ.ಟೆಕ್. ಮಾಡಿ, ನಂತರ ಅದೇ ಕಾಲೇಜಿನಲ್ಲಿಯೇ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದನೆಂಬ ಸುದ್ದಿಯಷ್ಟೇ ತಿಳಿದಿತ್ತು. ಮೂರು ವರ್ಷದ ಹಿಂದೆ ಅಚಾನಕ್ಕಾಗಿ ಐ.ಟಿ. ಡಾಟ್ ಕಾಮ್ ಮಾಹಿತಿ ತಂತ್ರಜ್ಞಾನ ಮೇಳದಲ್ಲಿ ಭೆಟ್ಟಿಯಾಗಿದ್ದ. ಆ ವೇಳೆಗೆ ತನ್ನ ಬೋಧನಾ ಕ್ಷೇತ್ರವನ್ನು ಎಸ್.ಜೆ.ಪಿ. ಪಾಲಿಟೆಕ್ನಿಕ್ ಕಾಲೇಜಿಗೆ ಬದಲಿಸಿಕೊಂಡಿದ್ದ. ಗ್ರಾಮೀಣ ಪ್ರದೇಶದಿಂದ ಬಂದವನಾದ ಕಾರಣ ಕಲಿಕೆಯಲ್ಲಿ ಹೆಚ್ಚಿನ ಶ್ರದ್ಧೆಯಿತ್ತು, ಮುಗ್ಧತೆ ನಮ್ಮೆಲ್ಲರಿಗಿಂತಲೂ ತುಸು ಹೆಚ್ಚಾಗಿತ್ತು. ಇಪ್ಪತ್ತೆಂಟು ವರ್ಷಗಳ ಹಿಂದೆ ಮಹದೇವಯ್ಯನಂಥವರೊಂದಿಗೆ ಎಂಜಿನೀರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಮಗೆ ಯಾವ ಸಿ.ಇ.ಟಿ. ಪರೀಕ್ಷೆಗಳ ಗೋಜಲುಗಳಿರಲಿಲ್ಲ. ದ್ವಿತೀಯ ಪಿ.ಯೂ.ಸಿ. ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಜ್ಯೇಷ್ಠತಾ ಪಟ್ಟಿ ಸಿದ್ಧವಾಗುತ್ತಿತ್ತು. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ವಿದ್ಯಾರ್ಥಿಗಳನ್ನು ಸ್ವತಃ ಸಂದರ್ಶನ ಮಾಡುತ್ತಿದ್ದರು. ಆ ಸಂದರ್ಶನ ಸ್ನೇಹಮಯಿಯಾಗಿರುತ್ತಿತ್ತು. ಅಂದಿನ ದಿನಗಳಲ್ಲಿ ಸೂರತ್ಕಲ್‍ನಲ್ಲಿದ್ದ ರೀಜನಲ್ ಎಂಜಿನೀರಿಂಗ್ ಕಾಲೇಜಿನ ಕೆಮಿಕಲ್ ಎಂಜಿನೀರಿಂಗ್ ವಿದ್ಯಾರ್ಥಿಗಳ ಮೊದಲ ಆಯ್ಕೆಯಾಗಿರುತ್ತಿತ್ತು. ನಂತರ ಅಲ್ಲಿನ ಎಲೆಕ್ಟ್ರಾನಿಕ್ಸ್, ಯೂ.ವಿ.ಸಿ.ಇ. ಕಾಲೇಜಿನ ಎಲೆಕ್ಟ್ರಾನಿಕ್ಸ್, ಬಿ.ಎಂ.ಎಸ್. ಎಂಜಿನೀರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್. ಮುಂದಿನ ಆಯ್ಕೆ ಅದೇ ಕಾಲೇಜುಗಳ ಮೆಕ್ಯಾನಿಕಲ್ ಎಂಜಿನೀರಿಂಗ್ ವಿಷಯಗಳಿಗಿರುತ್ತಿದ್ದವು. ಎಲೆಕ್ಟ್ರಾನಿಕ್ಸ್ ಆಗ ಇನ್ನೂ ಹೊಸ ವಿಷಯ, ಕಂಪ್ಯೂಟರ್ ಎಂಬುದು ಎಂಜಿನೀರಿಂಗ್ ವಿಷಯವೇ ಆಗಿರಲಿಲ್ಲ. ಮಹದೇವಯ್ಯ ಸೇರಿದಂತೆ ನನ್ನಂಥ ಅನೇಕರಿಗೆ ಎಲೆಕ್ಟ್ರಾನಿಕ್ಸ್‍ಗಿಂತಲೂ ಮೆಕ್ಯಾನಿಕಲ್ ಎಂಜಿನೀರಿಂಗ್ ನಿಜವಾದ ಎಂಜಿನೀರಿಂಗ್ ಎಂಬ ನಂಬಿಕೆ ಇತ್ತು. ಇಲಾಖೆಯ ನಿರ್ದೇಶಕ ಧರ್ಮಯ್ಯ ಗೌಡರು ‘ಎಲೆಕ್ಟ್ರಾನಿಕ್ಸ್ ಬೇಡವೆ’? ಎಂದು ಕೇಳಿದಾಗ ‘ಬೇಡ’ ಎಂದು ತಲೆಯಾಡಿಸಿ, ‘ಮೆಕ್ಯಾನಿಕಲ್ ತೊಗೊಳ್ತೀರಾ’? ಎಂಬ ಪ್ರಶ್ನೆಗೆ ‘ಆಯ್ತು ಸರ್’ ಎಂದು ಕಾಲೇಜು ಸೇರಿದ್ದೆವು.


ಇಡೀ ಜೀವನ ಯಾಂತ್ರಿಕ ಎಂದು ಎಷ್ಟೇ ಗೊಣಗಿದರೂ ನಮಗಿಂದು ಯಂತ್ರಗಳಿಲ್ಲದೆಯೇ ಕೆಲಸ ಮುಂದೆ ಸಾಗುವುದಿಲ್ಲ. ಈ ಯಂತ್ರ ಜಗತ್ತಿನಲ್ಲಿ ಚಲನೆಗೇ ಹೆಚ್ಚು ಪ್ರಾಶಸ್ತ್ಯ. ನಮ್ಮ ಅನುಕೂಲಕ್ಕೆ ತಕ್ಕಂತೆ ಚಲನೆಯ ದಿಕ್ಕು, ವೇಗ, ಬಲ ಹಾಗೂ ವ್ಯಾಪ್ತಿಯನ್ನು ಮಾರ್ಪಡಿಸಿಕೊಳ್ಳುವ ಕಲೆಯೇ ಯಾಂತ್ರಿಕ ಅಥವಾ ಮೆಕ್ಯಾನಿಕಲ್ ಎಂಜಿನೀರಿಂಗ್. ನಮ್ಮ ನಿತ್ಯ ಬಳಕೆಯ ಹಲವಾರು ಸಾಧನಗಳು ಕೇವಲ ಮೆಕ್ಯಾನಿಕಲ್ ಎಂಜಿನೀರಿಂಗ್ ಬಲವೊಂದರಿಂದಲೇ ಕಾರ್ಯನಿರ್ವಹಿಸುವುದಿಲ್ಲ. ವಿದ್ಯುತ್ ಅನ್ನು ನಿರ್ದಿಷ್ಟ ಮಟ್ಟದಲ್ಲಿ ಅಗತ್ಯ ಬಿದ್ದಾಗಲೆಲ್ಲಾ ಹರಿಸುವ ಎಲೆಕ್ಟ್ರಿಕಲ್ ಎಂಜಿನೀರಿಂಗ್, ಯಾಂತ್ರಿಕ ಚಲನೆಗಳೂ ಸೇರಿದಂತೆ ಎಲ್ಲ ಹರಿದಾಟವನ್ನು ನಿಯಂತ್ರಿಸುವ ಎಲೆಕ್ಟ್ರಾನಿಕ್ ಎಂಜಿನೀರಿಂಗ್, ಪೂರ್ವನಿರ್ಧಾರಿತ ಆಣತಿಗಳನ್ನು ಎಲೆಕ್ಟ್ರಾನಿಕ್ ಬಿಡಿಭಾಗಗಳಿಗೆ ತಿಳಿಯಪಡಿಸುವ ಸಾಫ್ಟ್‍ವೇರ್ ಎಂಜಿನೀರಿಂಗ್ ..... ಹದವಾಗಿ ಬೆರೆಸಿದ ಮೇಲೋಗರದಂತೆ ಎಲ್ಲ ಎಂಜಿನೀರಿಂಗ್ ವಿಭಾಗಗಳೂ ಮೇಳೈಸಿದರೆ ‘ಜಸವು ಜನಜೀವನಕೆ’. ಮೆಕ್ಯಾನಿಕಲ್ ಎಂಜಿನೀರಿಂಗ್‍ನಂಥ ಹಳೆಯ ಬೇರಿಗೆ ಎಲೆಕ್ಟ್ರಾನಿಕ್ಸ್‍ನಂಥ (ಸಾಫ್ಟ್‍ವೇರ್ ಸೇರಿದಂತೆ) ಹೊಸ ಚಿಗುರು ಕೂಡಿ, ತಂತ್ರಜ್ಞಾನವೆಂಬ ಮರದ ಸೊಗಸಿಗೆ ಕಾರಣವಾಗುತ್ತಿದೆ. ಜತೆಗೆ ಸಾಮಾನ್ಯ ಜನ ಜೀವನಕ್ಕೆ ಜಸ ಅಥವಾ ಯಶಸ್ಸನ್ನೂ ತಂದುಕೊಡುತ್ತಿದೆ.


ದೂರ ನಿಯಂತ್ರಣದಿಂದ ಮನುಷ್ಯ ದೇಹದ ಆಯಕಟ್ಟಿನ ಭಾಗಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸುವುದು ನಿಮಗೆ ಗೊತ್ತು. ಉದಾಹರಣೆಗೆ ಯಂತ್ರಮಾನವ ಅಥವಾ ರೋಬಾಟ್‍ಗಳನ್ನು ಬಳಸಿಕೊಂಡು ಮಿದುಳಿನೊಳಗೆ ಶಸ್ತ್ರಕ್ರಿಯೆ ಮಾಡಬಹುದು. ಮನುಷ್ಯ ದೇಹದೊಳಗಿನ ಅಂಗಾಂಶವೊಂದನ್ನು ಮೊಟ್ಟ ಮೊದಲ ಬಾರಿಗೆ ರೋಬಾಟ್ ಮೂಲಕ ಕತ್ತರಿಸಿ ತೆಗೆದದ್ದು ಕ್ರಿ.ಶ.1991ರಲ್ಲಿ. ನೂರು ವರ್ಷಗಳಷ್ಟು ಹಳೆಯದಾದ ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಪ್ರಾಸ್ಟೇಟ್ ಗ್ರಂಥಿ ಶಸ್ತ್ರಚಿಕಿತ್ಸೆಯನ್ನು ಹದಿನಾರು ವರ್ಷಗಳ ಹಿಂದೆ ರೊಬಾಟ್ ನೆರವಿನಿಂದ ನಡೆಸಿದಾಗ ಅದೊಂದು ಅಚ್ಚರಿಯ ಘಟನೆಯಾಗಿತ್ತು. ಮೆಕಟ್ರಾನಿಕ್ಸ್ ವಿಭಾಗದ ಸಾಮರ್ಥ್ಯ ಜಗತ್ತಿಗೆ ಮನವರಿಕೆಯಾಗಿದ್ದೇ ಅಂದು. ಅಲ್ಲಿಯವರೆಗೂ ಕೇವಲ ಸೂಕ್ಷ್ಮ ಯಂತ್ರಗಳ ನಿಯಂತ್ರಣ ವ್ಯವಸ್ಥೆಯ ವಿನ್ಯಾಸಕ್ಕಷ್ಟೇ ಮೆಕಟ್ರಾನಿಕ್ಸ್ ಎಂಜಿನೀರ್‌ಗಳು ಅಗತ್ಯ ಎಂಬ ಕಲ್ಪನೆಯಿತ್ತು.


ನಮ್ಮ ಮಹದೇವಯ್ಯನಿಗೆ ಮೆಡಿಕಲ್ ಸರ್ಜರಿಗೆ ಅಗತ್ಯವಿರುವ ಯಂತ್ರಗಳನ್ನು ಸೃಷ್ಠಿಸುವ ತುರ್ತು ಇಲ್ಲದಿದ್ದರೂ, ಮೆಕಟ್ರಾನಿಕ್ಸ್‍ನಂಥ ಮಹತ್ವದ ವಿಷಯವನ್ನು ಗೌಣವಾಗಿಸಬಾರದೆಂಬ ಹಠ. ಆತನ ಪ್ರತಿಪಾದನೆಯಲ್ಲಿ ಹುರುಳಿದೆ. ಬದಲಾಗುತ್ತಿರುವ ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಮೆಕ್ಯಾನಿಕಲ್ ಎಂಜಿನೀರಿಂಗ್ ಇಲ್ಲದ ಎಲೆಕ್ಟ್ರಾನಿಕ್ ಎಂಜಿನೀರಿಂಗ್ ಹೆಳವನಂತೆ. ಅಂತೆಯೇ ಎಲೆಕ್ಟ್ರಾನಿಕ್ ಎಂಜಿನೀರಿಂಗ್ ಇಲ್ಲದ ಮೆಕ್ಯಾನಿಕಲ್ ಎಂಜಿನೀರಿಂಗ್ ಕುರುಡನಂತೆ. ಪರಸ್ಪರ ಪೂರಕವಾದ ಇವೆರಡೂ ಆಪ್ತ ವಿಷಯಗಳಲ್ಲಿ ಒಮ್ಮೆಲೆ ಪರಿಣತಿ ಸಾಧಿಸಲು ಸಾಧ್ಯವಿರುವುದು ಮೆಕಟ್ರಾನಿಕ್ಸ್ ವಿಷಯದಲ್ಲಿಯೇ ಎಂಜಿನೀರಿಂಗ್ ಪದವಿ ಪಡೆದಾಗ ಮಾತ್ರ. ಉದಾಹರಣೆಗೆ ಉನ್ನತ ಕೌಶಲದ ವಾಷಿಂಗ್ ಮೆಶಿನ್ ಅನ್ನು ಸೃಷ್ಟಿಸುವಾಗ, ನಿಯಂತ್ರಕಗಳನ್ನು ಸಿದ್ಧ ಪಡಿಸುವ ಎಲೆಕ್ಟ್ರಾನಿಕ್ ಎಂಜಿನೀರ್‌ಗೆ ಬಟ್ಟೆಗಳನ್ನು ಒಗೆಯುವ, ಹಿಂಡುವ ತಿರುಗು ಯಂತ್ರಗಳ ಕಾರ್ಯಾಚರಣೆ ಅರ್ಥವಾಗಬೇಕು, ಮೋಟಾರಿನ ವೇಗ ನಿಯಂತ್ರಣ, ತಡೆಯೊಡ್ಡುವ ಬ್ರೇಕ್ ಮತ್ತಿತರ ಯಾಂತ್ರಿಕ ಸಲಕರಣೆಗಳ ಪರಿಚಯವಿರಬೇಕು. ಗೇರ್ ವ್ಯವಸ್ಥೆ ಕೆಲಸ ಮಾಡುವುದರ ಬಗ್ಗೆ ಕಲ್ಪನೆಯಿರಬೇಕು. ಇದೇ ರೀತಿ, ನಿರ್ದಿಷ್ಟ ಒಗೆತಕ್ಕೆ ಎಷ್ಟು ರಭಸದ ತಿರುಗಾಟ ಬೇಕು ಎಂದು ಲೆಕ್ಕಾಚಾರ ಹಾಕುವ ಮೆಕ್ಯಾನಿಕಲ್ ಎಂಜಿನೀರ್‌ಗೆ ಆ ರಭಸದ ತಿರುಗಾಟಕ್ಕೆ ಬೇಕಾದ ವಿದ್ಯುತ್ ಬಲ, ಬೇಕೆಂದಾಗಲೆಲ್ಲಾ ಪೂರೈಕೆಯಾಗುವ ವಿದ್ಯುತ್ ಹರಿದಾಟ, ನೀರಿನ ತಾಪಮಾನ ಏರಿಳಿಸುವಾಗ ನೆರವಾಗುವ ನಿಯಂತ್ರಕದ ಕಾರ್ಯಾಚರಣೆ ಮತ್ತಿತರ ಶುದ್ಧ ಎಲೆಕ್ಟ್ರಾನಿಕ್ ಎಂಜಿನೀರಿಂಗ್ ವಿಷಯ ಮನದಟ್ಟಾಗಿರಬೇಕು. ಇತ್ತ ಎರಡೂ ಕ್ಷೇತ್ರದ ಎಂಜಿನೀರ್‌ಗಳಿಗೆ ಯಂತ್ರಗಳಲ್ಲಿ ಹುದುಗಿರುವ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸುವ ತಂತ್ರಾಂಶದ (ಸಾಫ್ಟ್‍ವೇರ್) ಬಗ್ಗೆ ಕಿಂಚಿತ್ತಾದರೂ ಪರಿಚಯವಿರಬೇಕು. ಪದವಿಯ ನಾಲ್ಕೂ ವರ್ಷಗಳಲ್ಲಿ ಮೆಕಟ್ರಾನಿಕ್ಸ್‍ನ ವಿವಿಧ ಮುಖಗಳನ್ನು ಪರಿಚಯ ಮಾಡಿಕೊಳ್ಳುವ ವಿದ್ಯಾರ್ಥಿ ಉದ್ದಿಮೆಗೆ ಹಾಗೂ ಸಮಾಜಕ್ಕೆ ಹೆಚ್ಚು ಉಪಯುಕ್ತನಾಗುತ್ತಾನೆ ಎಂಬ ಅಭಿಪ್ರಾಯ ಮಹದೇವಯ್ಯನಂಥ ಪ್ರಾಧ್ಯಾಪಕರದು.


ಈ ಬಗ್ಗೆ ಬರೆಯುವಾಗ ನಮ್ಮ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ತೀರಾ ಹಿಂದೆ ಬಿದ್ದಿಲ್ಲ ಎಂಬ ವಿಷಯ ಹೇಳಲೇಬೇಕು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜರ್ಮನಿಯ ‘ಫೆಸ್ಟೋ’ ಕಂಪನಿಯೊಂದಿಗೆ ಒಡಂಬಡಿಕೆಯೊಂದಕ್ಕೆ ಸಹಿ ಮಾಡಿದೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿನ ‘ಫೆಸ್ಟೋ’ ಕಂಪನಿಯ ಆವರಣದಲ್ಲಿ ಮೆಕಟ್ರಾನಿಕ್ಸ್ ತರಬೇತಿ ಕೇಂದ್ರವೊಂದು ಉದ್ಘಾಟನೆಗೊಂಡಿದೆ. ಎಂಜಿನೀರಿಂಗ್ ಉದ್ದಿಮೆಗಳಿಗೆ ಅಗತ್ಯವಾದ ಸ್ವಯಂಚಾಲಿತ ಯಂತ್ರಗಳನ್ನು, ವ್ಯವಸ್ಥೆಗಳನ್ನೂ ವಿನ್ಯಾಸಗೊಳಿಸುವಲ್ಲಿ ‘ಫೆಸ್ಟೋ’ಗೆ ಜಗನ್ಮಾನ್ಯತೆಯಿದೆ. ಪ್ರತಿ ವರ್ಷ ನೂರಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಈ ಕಂಪನಿಯ ಹೆಸರಿಗೆ ಕನಿಷ್ಠವೆಂದರೂ 2800 ಪೇಟೆಂಟ್‍ಗಳಿವೆ. ಜಗತ್ತಿನ 176 ದೇಶಗಳಲ್ಲಿ ಇದರ ಕಾರ್ಯಾಚರಣೆಯಿದೆ. ಬರಲಿರುವ ದಿನಗಳಲ್ಲಿ ಆಟೋಮೊಬೈಲ್ ಹಾಗೂ ಏರೋನಾಟಿಕ್ಸ್ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವುದು ಮೆಕಟ್ರಾನಿಕ್ಸ್ ಎಂಜಿನೀರಿಂಗ್ ಪರಿಣತರು. ಇನ್ನು ಮೂರು ವರ್ಷಗಳಲ್ಲಿ ನಮ್ಮ ಬಹುತೇಕ ವಾಹನಗಳ ಕಾರ್ಯಾಚರಣೆಗೆ ಮನುಷ್ಯನ ಕೈಚಳಕ ಕಡಿಮೆ ಮಟ್ಟದಲ್ಲಿರುತ್ತವೆ. ಅಂದರೆ ಮೆಕಟ್ರಾನಿಕ್ಸ್ ಉತ್ಪನ್ನಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿರುತ್ತವೆ. ಅತ್ಯಧಿಕ ವೇಗದಲ್ಲಿ ವಿಸ್ತಾರಗೊಳ್ಳುತ್ತಿರುವ ನಮ್ಮ ದೇಶದ ಆಟೋಮೊಬೈಲ್ ಉದ್ದಿಮೆಗೆ ಬರಲಿರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಮೆಕಟ್ರಾನಿಕ್ಸ್ ಎಂಜಿನೀರ್‌ಗಳು ಬೇಕಾಗುತ್ತಾರೆ. ಅಂತೆಯೇ ವಹಿವಾಟು ಹೆಚ್ಚಿಸಿಕೊಳ್ಳುತ್ತಿರುವ ಏರೋನಾಟಿಕ್ಸ್ ಉದ್ದಿಮೆಗೂ ಈ ಕ್ಷೇತ್ರದ ತಂತ್ರಜ್ಞರು ಅಗತ್ಯ.


ಹೊಸ ಯುಕ್ತಿ ಹಾಗೂ ಹಳೆ ತತ್ವಗಳನ್ನು ಬೆಸೆಯುವ ಕಾರ್ಯ ಕೇವಲ ಶಿಕ್ಷಣ ಸಂಸ್ಥೆಗಳ ಧರ್ಮವಷ್ಟೇ ಅಲ್ಲ, ಉದ್ದಿಮೆಗಳ ಜವಾಬ್ದಾರಿಯೂ ಹೌದು. ಬದಲಾದ ಅಗತ್ಯಗಳಿಗೆ ಸ್ಪಂದಿಸುವ ಶಿಕ್ಷಣ ಸಂಸ್ಥೆಗಳು, ಸಹಯೋಗ ನೀಡುವ ಉದ್ದಿಮೆಗಳು ಹಾಗೂ ಇವೆರಡೂ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಲು ವಿಶ್ವವಿದ್ಯಾಲಯಗಳು/ಸರ್ಕಾರಿ ಇಲಾಖೆಗಳು ಮೆಕಟ್ರಾನಿಕ್ಸ್ ಕಲಿಕೆಗೆ ಸೂಕ್ತ ಮಾನ್ಯತೆ ಒದಗಿಸುತ್ತವೆಂದು ನಿರೀಕ್ಷಿಸೋಣವೆ?
[21-05-2007; ಕೃಪೆ : ವಿಜಯ ಕರ್ನಾಟಕ]

3 comments:

Shrinidhi Hande said...

ಬೆ೦ಗಳೂರಿನ M S ರಾಮಯ್ಯ ಸ್ಕೂಲ್ ಅಫ್ ಅಡ್ವಾನ್ಸ್ಡ ಸ್ಟಡೀಸ ಮೆಕಟ್ರಾನಿಕ್ಸ ಮೇಲೆ ಒ೦ದು ಸರ್ಟಿಫಿಕೇಟ ಕೋರ್ಸು ನಡೆಸುತ್ತಿದೆ. ಮೆಕಾನಿಕಲ್ ಮತ್ತು ಏಲೆಕ್ಟ್ರಾನಿಕ್ಸ ವಿಧ್ಯಾರ್ಥಿಗಳು ಇ೦ತಹ ಕೋರ್ಸು ಮಾಡುವುದು ಉಪಯುಕ್ತವಾದೀತು

Shrinidhi Hande said...

Pls give email subscription option to your blog. Thanks

Anonymous said...

sir,
Im Santosh Sridhar, pursuing my M.tech (Communication Systems) from R.V college of Engg. Bangalore. I have been folliwing your weekly article in vijay karnataka and would like to congratulate you on your acheivement to tell all the technical advancements today be it the latest ternds in VLSI or the most recent Mechartonics article, all have been very easy to follow even for a layman and also has given a tech student like me a food for thought.I just hope this good work continues.