Monday, September 17, 2007

‘ಜೋಕೆ ... ಜಾಲದ ಬಲೆಗೆ ಬಿದ್ದಾಗಲೇ ಅರಿವೆ ನೀ ಸಂಚು’

ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿ ಭಯೋತ್ಪಾತ ಕೃತ್ಯ ನಡೆದರೂ ನಾವೀಗ ನಡುಗಬೇಕಾದ ಪರಿಸ್ಥಿತಿಯಿದೆ. ಸಮೂಹ ಮಾಧ್ಯಮದ ಅತ್ಯದ್ಭುತ ಪ್ರಗತಿಯಿಂದ ಆಯಾ ಕ್ಷಣದಿಂದಲೇ ರೆಕ್ಕೆಪುಕ್ಕಗಳನ್ನು ಹಚ್ಚಿಕೊಂಡ ಸುದ್ದಿ ಜಗತ್ತಿನಾದ್ಯಂತ ಹರಡಿ ಆತಂಕಕ್ಕೆಡೆ ಮಾಡಿಕೊಡುತ್ತದೆ. ಹತ್ತಾರು ಜನರನ್ನು ಕೊಲ್ಲುವುದಕ್ಕಿಂತಲೂ ಅಂಥ ಸುದ್ದಿಯೊಂದನ್ನು ಲಕ್ಷಾಂತರ ಜನರಿಗೆ ಮುಟ್ಟಿಸುವುದು ಭಯೋತ್ಪಾದಕರ ಮುಖ್ಯ ಉದ್ದೇಶವಾಗುತ್ತಿದೆ. ಉಪಗ್ರಹ ಸಂಪರ್ಕ ಜಾಲದ ನೆರವಿನ ಟೀವಿಯಂಥ ಪ್ರಬಲ ಸಮೂಹ ಮಾಧ್ಯಮ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಂತೆ ಸಾಮಾನ್ಯ ಜನರನ್ನು ಕಂಗಾಲು ಮಾಡುವುದು ಭಯೋತ್ಪಾದಕರಿಗೆ ಸುಲಭವಾಗುತ್ತಿದೆ. ಈ ನಿಟ್ಟಿನಲ್ಲಿ ಅವರು ಜಯ ಸಾಧಿಸಿದರೂ, ಸಾಂಪ್ರದಾಯಿಕ ಸಂಪರ್ಕ ಸಾಧನಗಳ ಮೂಲಕ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುವ ಅಥವಾ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕೆಲಸ ಕಷ್ಟವಾಗುತ್ತಿದೆ. ಎಲ್ಲ ದೇಶಗಳ ಬೇಹುಗಾರಿಕಾ ಸಂಸ್ಥೆಗಳು, ಆಂತರಿಕ ಸುರಕ್ಷಾ ಏಜೆನ್ಸಿಗಳು, ಮಿಲಿಟರಿ ಭಯೋತ್ಪಾದಕರ ಸಂಪರ್ಕ ಜಾಲವನ್ನು ಬೇಧಿಸುವುದರ ಜತೆಗೆ ತಮ್ಮ ಸಂಪರ್ಕ ಜಾಲದಲ್ಲಿ ವಿನಿಮಯವಾಗುವ ಮಾಹಿತಿ ಅವರಿಗೆ ಲಭ್ಯವಾಗದಂತೆ ನೋಡಿಕೊಳ್ಳುತ್ತಿವೆ. ಆದರೆ ಇವೆರಡು ಬಣಗಳ ನಡುವಣ ಮೇಲಾಟ 20-20 ಕ್ರಿಕೆಟ್ ಪಂದ್ಯಗಳಿಗಿಂತಲೂ ರೋಮಾಂಚಕ. ನಿತ್ಯ ಸಮರವೆಂದೇ ಪರಿಗಣಿಸಬಹುದಾದ ಹೋರಾಟವಿದು.

ಇಂಟರ್‌ನೆಟ್ ನಿಮಗೆ ಗೊತ್ತು. ಅಮೆರಿಕ ಹಾಗೂ ರಶಿಯ ದೇಶಗಳ ನಡುವಣ ಬಾಹ್ಯಾಂತರಿಕ್ಷ ಪೈಪೋಟಿಯಲ್ಲಿ (ಸ್ಪುಟ್ನಿಕ್ Vs. ಅಪೋಲೊ) ಕೆಲ ಕಾಲ ರಶಿಯ ದೇಶ ಮೇಲುಗೈ ಸಾಧಿಸಿತ್ತು. ಈ ಸಂದರ್ಭದಲ್ಲಿ ಬಾಹ್ಯಾಂತರಿಕ್ಷದಿಂದ ರಶಿಯ ನಡೆಸಬಹುದಾದ ಸಂಭವನೀಯ ಧಾಳಿಯಿಂದ ತನ್ನ ದೇಶದ ಮಿಲಿಟರಿ ಮಾಹಿತಿಗಳ ರಕ್ಷೆ ಹಾಗೂ ಸುರಕ್ಷ ವಿನಿಮಯಕ್ಕೆಂದು ಅಮೆರಿಕ ಸ್ಥಾಪಿಸಿಕೊಂಡ ಸಂಪರ್ಕ ಜಾಲ ‘ಅರ್ಪಾ - ಅಡ್ವಾನ್ಸ್‍ಡ್ ರಿಸರ್ಚ್ ಪ್ರಾಜೆಚ್ಟ್ ಏಜೆನ್ಸಿ’ನೆಟ್ (ಕ್ರಿ.ಶ.1969). ಮಿಲಿಟರಿ ದರ್ಪದೊಂದಿಗೆ ಈ ‘ಅರ್ಪಾನೆಟ್’ ಮಿಳಿತಗೊಂಡು ‘ಡರ್ಪಾ - ಡಿಫೆನ್ಸ್ ಅರ್ಪಾ’ನೆಟ್ ಎಂದು ಬದಲಾಯಿತು. ಮಿಲಿಟರಿ ಸಂಶೋಧನೆಗಳಿಗೆ ನೆರವು ನೀಡುತ್ತಿದ್ದ ಅಮೆರಿಕದ ವಿಶ್ವವಿದ್ಯಾಲಯಗಳು ಒಂದಕ್ಕೊಂದು ಜೋಡಣೆಯಾದವು. ಮಿಲಿಟರಿ ಪ್ರಯೋಗಶಾಲೆಗಳೊಂದಿಗೆ ನಾಗರಿಕರಿಗೆ ಅಗತ್ಯವಾದ ವಿಜ್ಞಾನ ಸಂಶೋಧನೆಗಳನ್ನು ನಡೆಸುತ್ತಿದ್ದ ಸರ್ಕಾರಿ ಸಂಸ್ಥೆಗಳು ಈ ಸಂಪರ್ಕ ಜಾಲಕ್ಕೆ ಸೇರ್ಪಡೆಯಾದವು. ರಶಿಯ ಹಾಗೂ ಅಮೆರಿಕಗಳ ನಡುವಣ ‘ಶೀತಲ ಸಮರ’ ಕೊನೆಗೊಳ್ಳುತ್ತಾ ಬಂದಂತೆ ಈ ಸುರಕ್ಷ ಸಂಪರ್ಕ ಜಾಲ ‘ಮುಕ್ತ’ಗೊಂಡಿತು. ಕೇವಲ ಅಮೆರಿಕ ಬೆಂಬಲಿತ ದೇಶಗಳಲ್ಲಿ ಚಾಲನೆಯಲ್ಲಿದ್ದ ಈ ಸರ್ವ ಸ್ವತಂತ್ರ ಹಾಗೂ ಮುಕ್ತ ವಿನಿಮಯದ ಸಂಪರ್ಕ ಜಾಲ ಉಳಿದೆಲ್ಲ ದೇಶಗಳಿಗೆ ವಿಸ್ತರಿಸಲಾರಂಭಿಸಿತು. ಕಾಲ ಕಳೆದಂತೆ ಈ ವಿಸ್ಮಯ ಸಂಪರ್ಕ ಜಾಲದ ವ್ಯಾಪ್ತಿ ನಿರೀಕ್ಷೆಗೂ ಮೀರಿ ವಿಸ್ತೃತಗೊಂಡಿತು. ಇಂಟರ್‌ನೆಟ್ ಎಂಬ ಮಾಯಾಜಾಲ ಸಂಪರ್ಕ ಕ್ಷೇತ್ರದ ಮಹೇಂದ್ರ ಜಾಲದ ಸ್ಥಾನ ಪಡೆಯಿತು. ಅತ್ಯಂತ ಅಗ್ಗದ ಕ್ಷಿಪ್ರ ಸಂಪರ್ಕ ಜಾಲವೆಂದು ಹೆಸರಾಯಿತು.

ವಿಧ್ಯ್ವಂಸಕ ಕೃತ್ಯಗಳಿಗೆ ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರಲ್ಲಿ ಭಯೋತ್ಪಾದಕರು ಸದಾ ಮುಂದು. ಇಂಟರ್‌ನೆಟ್‍ನಂಥ ಶಕ್ತಿಶಾಲಿ ಸಂಪರ್ಕ ಮಾಧ್ಯಮ ಎಲ್ಲರಿಗೂ ಸುಲಭವಾಗಿ ಲಭ್ಯವಾದಂತೆ ಭಯೋತ್ಪಾದಕರಿಗೆ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಸುಲಭವಾಯಿತು. ಇಂಟರ್‌ನೆಟ್ ಮೂಲಕ ದೂರ ಸಂಪರ್ಕ ಅಗ್ಗವಷ್ಟೇ ಅಲ್ಲ ಸುರಕ್ಷ ಎಂದು ಮನವರಿಕೆಯಾದ ಮೇಲೆ ಅವರದನ್ನು ಹೆಚ್ಚು ಹೆಚ್ಚಾಗಿ ಬಳಸಲಾರಂಭಿಸಿದರು. ತಮ್ಮದೇ ಆದ ಇಂಟರ್‌ನೆಟ್ ತಾಣದ ಮೂಲಕ ಮಾಹಿತಿಯ ಮಹಾಪೂರ ಹರಿಸುವುದರ ಜತೆಗೆ, ಪ್ರತ್ಯೇಕ ಇ-ಮೇಲ್ ಜಾಲದಲ್ಲಿ ಮಾಹಿತಿ ವಿನಿಯಮ ಮಾಡಿಕೊಳ್ಳಲಾರಂಭಿಸಿದರು. ಸಾರ್ವಜನಿಕ ಚರ್ಚೆಗಳಿಗೋಸ್ಕರ ‘ಬ್ಲಾಗ್ - (ವೆ)ಬ್+ಲಾಗ್’ ಎಂಬ ಮುಕ್ತ ವೇದಿಕೆಗಳನ್ನು ಸೃಷ್ಟಿಸತೊಡಗಿದರು. ತಮ್ಮ ಸಿದ್ಧಾಂತಗಳ ಪ್ರಸರಣೆಗೆ ಇಂಟರ್‌ನೆಟ್ ಹರಟೆಕಟ್ಟೆಗಳನ್ನು ಬಳಸತೊಡಗಿದರು. ಯಾವುದೇ ನಿರ್ಬಂಧಗಳಿಲ್ಲದ ಇಂಟರ್‌ನೆಟ್ ಭಯೋತ್ಪಾದಕರುಗಳಿಗೆ ಅತ್ಯಗತ್ಯ ಸಂಪರ್ಕ ಜಾಲವಾಯಿತು. ಸಮಸ್ಯೆ ಹುಟ್ಟಿಕೊಂಡಿರುವುದೇ ಇಲ್ಲಿ. ಯಾವ ಸಮಯದಲ್ಲಿ, ಯಾವ ಭಾಷೆಯಲ್ಲಿ, ಯಾವ ನೆಲೆಯಿಂದ, ಎಂಥ ಪ್ರಚೋದಕ ಸಾಮಗ್ರಿಯನ್ನು ತುಂಬುತ್ತಿದ್ದಾರೆ? ಅಂಥ ಸಾಮಗ್ರಿಗಳು ಜಗತ್ತಿನ ಯಾವ ಯಾವ ಬಳಕೆದಾರರ ಕಣ್ನೋಟವನ್ನು ತುಂಬುತ್ತಿವೆ? ಅವುಗಳ ಒಟ್ಟಾರೆ ಪರಿಣಾಮವೆಂಥದು? ಅವುಗಳ ಪ್ರಸರಣೆಯನ್ನು ನಿಗ್ರಹಿಸುವುದು ಹೇಗೆ? ಎಲ್ಲ ಜವಾಬ್ದಾರಿಯುತ ದೇಶಗಳ ಮುಂದಿರುವ ಪ್ರಶ್ನೆಗಳು. ಆತಂಕ ಹುಟ್ಟಿಸಿರುವ ವಿಷಯವೆಂದರೆ ಇಂಟರ್‌ನೆಟ್ ಅನ್ನೇ ಒಂದು ಬೃಹತ್ ಮಳಿಗೆಯಾಗಿಸಿಕೊಂಡು ತಮ್ಮ ಸಿದ್ಧಾಂತಗಳ ಪ್ರಚಾರ, ಅಮಾಯಕರುಗಳ ನೇಮಕ, ಹಾಗೂ ಧಾಳಿಗಳ ಆಯೋಜನೆಗಳನ್ನು ಈ ಭಯೋತ್ಪಾದಕರು ಮಾಡುತ್ತಿರುವುದು.

ಇಂಟರ್‌ನೆಟ್‍ನ ತವರೂರಾದ ಅಮೆರಿಕದಲ್ಲಿ ಈ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಉಂಟಾಗಿದೆ. ಪ್ರಚಾರಕ್ಕೆ ಸಿಲುಕದ ಅದೆಷ್ಟೋ ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಯೋತ್ಪಾತ ನಿಗ್ರಹಕ್ಕೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಮೆರಿಕದ ಮರುಭೂಮಿ ಪ್ರದೇಶ ಅರಿಝೋನ ರಾಜ್ಯ. ಅಲ್ಲಿನ ಒಂದು ಜಿಲ್ಲೆ ಟ್ಯುಸನ್. ಇಲ್ಲಿ ಅರಿಝೋನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ‘ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ’ದ ಧನ ಸಹಾಯ ಹಾಗೂ ಸರ್ಕಾರದ ಬೇಹುಗಾರಿಕಾ ಏಜೆನ್ಸಿಗಳಲ್ಲಿ ಲಭ್ಯವಿರುವ ತಂತ್ರಜ್ಞಾನದ ನೆರವಿನಿಂದ ಇಂಟರ್‌ನೆಟ್ ಮೂಲಕ ನಡೆಯುತ್ತಿರುವ ಭಯೋತ್ಪಾತ ಪ್ರಸರಣೆಯನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ‘ಡಾರ್ಕ್ ವೆಬ್ - ಕರಾಳ ಜಾಲ’ ಎಂಬ ಹೆಸರಿನ ಈ ಯೋಜನೆಯಲ್ಲಿ ಇಂಟರ್‌ನೆಟ್ ಮೂಲಕ ಹರಿದಾಡುವ ಭಯೋತ್ಪಾತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಹಾಗೂ ವಿಶ್ಲೇಷಿಸುವ ಕಾರ್ಯ ಭರದಿಂದ ಸಾಗಿದೆ. ‘ಆಲ್ ಖೈದಾ’ ಸೇರಿದಂತೆ ಗುರುತರ ಭಯೋತ್ಪಾದನಾ ಸಂಘಟನೆಗಳಿಗೆ ಸಂಬಂಧಿಸಿದ ಸುಮಾರು ಐದು ಸಹಸ್ರ ಇಂಟರ್‌ನೆಟ್ ತಾಣಗಳು ‘ಕರಾಳ ಜಾಲ’ದ ಹದ್ದಿನ ಕಣ್ಣಿನ ತಪಾಸಣೆಗೆ ಒಳಗಾಗಿವೆ. ಇರಾಕ್, ಪಾಕಿಸ್ತಾನಗಳಷ್ಟೇ ಅಲ್ಲ, ಯುರೋಪ್ ದೇಶಗಳಲ್ಲಿಯೂ ಗೌಪ್ಯವಾಗಿ ಹರಡಿಕೊಂಡಿರುವ ನೂರಾರು ಸಂಘಟನೆಗಳು ಇಂಟರ್‌ನೆಟ್‍ನಲ್ಲಿ ಪ್ರಸರಿಸುತ್ತಿರುವ ಹಲವು ಭಾಷೆಗಳ, ಸಂಕೇತೀಕರಿಸಿದ ಸಾಮಗ್ರಿಗಳು ‘ಕರಾಳ’ ಹಸ್ತದ ವ್ಯಾಪ್ತಿಗೆ ಸಿಲುಕಿವೆ.

‘ಕರಾಳ ಜಾಲ’ ಯೋಜನೆಯಲ್ಲಿ ಸಂಪರ್ಕ ಜಾಲಕ್ಕೆ ಸಂಬಂಧಿಸಿದ ಹಲವಾರು ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ‘ವೆಬ್ ಸ್ಪೈಡರಿಂಗ್’ ಅಂದರೆ ಮಿಕವೊಂದನ್ನು ಸಿಲುಕಿಸಲು ಆಯಕಟ್ಟಿನ ಸ್ಥಾನದಲ್ಲಿ ಬಲೆ ಹೆಣೆಯುವ ಹಂಚಿಕೆ. ಹಾಗೆಯೇ ‘ಕೊಂಡಿ’, ‘ಸಾಮಗ್ರಿ’ ಹಾಗೂ ‘ಒಡೆತನ’ದ ವಿಶ್ಲೇಷಣಾ ತಂತ್ರಜ್ಞಾನ. ಭಯೋತ್ಪಾತಕ್ಕೆ ಸಂಬಂಧಿಸಿದ ತಾಣ ಪತ್ತೆಯಾದೊಡನೆ ಅವು ಯಾವ ಯಾವ ತಾಣಗಳಿಗೆ ಕೊಂಡಿಯನ್ನು ಕೊಟ್ಟಿವೆ? ಆ ಸಾಮಗ್ರಿಗಳಲ್ಲಿ ಗೌಪ್ಯವಾಗಿ ಅಡಗಿರುವ ಸಂದೇಶಗಳು ಎಂಥವು? ಯಾರ ಪ್ರಚೋದನೆಯ ಮೇಲೆ ಇಂಥ ಮಾಹಿತಿ ಹರಿದಾಡುತ್ತಿವೆ? ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಹಲವು ಗಾತ್ರದ, ಹಲವು ಭಾಷೆಗಳ, ಹಲವು ಸ್ವರೂಪದ ಅಗಾಧ ಮಾಹಿತಿ ಭಂಡಾರವನ್ನು ವಿಶ್ಲೇಷಿಸಲು ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್ ಸ್ಮರಣಕೋಶಗಳು ಬೇಕು. ಜತೆಗೆ ಮಾಹಿತಿ ವಿಶ್ಲೇಷಣೆಯ ವೇಗವನ್ನು ಹೆಚ್ಚಿಸಲು ಶಕ್ತಿಶಾಲಿ ಸಂಸ್ಕಾರಕಗಳು ಅವಶ್ಯ. ವಿವಿಧ ಭಾಷೆ, ಸಂಕೇತಗಳ ಗೂಡಾರ್ಥವನ್ನು ಒಡೆಯಲು ತನ್ನದೇ ಆದ ಬುದ್ಧಿಮತ್ತೆಯುಳ್ಳ ಅಂದರೆ ತನ್ನ ಸ್ಮರಣಕೋಶದೊಳಗಿನ ಮಾಹಿತಿಯೊಂದಿಗೆ ತಾಳೆ ನೋಡಿ ಇಂಥದೇ ಇರಬಹುದು ಎಂದು ಚಹರೆಯನ್ನು ಗ್ರಹಿಸಬಲ್ಲ ಯಂತ್ರಾಂಶ/ತಂತ್ರಾಂಶವೂ ಅಗತ್ಯ. ‘ಕರಾಳ ಜಾಲ’ ಹೊರತಂದಿರುವ ಮತ್ತೊಂದು ಸೌಲಭ್ಯವೆಂದರೆ ‘ರೈಟ್‍ಪ್ರಿಂಟ್ - ಬರಹ ಮುದ್ರಣ’. ಒಂದು ಆಕ್ಷೇಪಾರ್ಹ ವಿಷಯ ಇಂಟರ್‌ನೆಟ್‍ನಲ್ಲಿ ಪ್ರಕಟವಾಗಿದೆಯೆಂದು ಭಾವಿಸಿ. ಅದರ ಕರ್ತೃ ಯಾರೆಂದು ಪತ್ತೆಯಾಗಿಲ್ಲ. ಆ ಬರಹವನ್ನು ಗುರುತು ಮತ್ತು ಮನನ ಮಾಡಿಕೊಳ್ಳುವ ಸಲಕರಣೆಯು, ಇಂಟರ್‌ನೆಟ್ ಜಾಲಾಡಲು ಹೊರಡುತ್ತದೆ. ಅದೇ ಶೈಲಿಯ ಬರಹಗಳು ಎಲ್ಲೆಲ್ಲಿ ಪ್ರಕಟವಾಗಿವೆ ಎಂಬುದನ್ನು ಪತ್ತೆ ಮಾಡುತ್ತದೆ. ಅವುಗಳ ಕರ್ತೃ ಯಾರಿರಬಹುದೆಂದು ಹುಡುಕುತ್ತದೆ. ಇಂಥ ಕೆಲಸ ಮಾಡುವವರು ಎಲ್ಲೋ ಒಂದೆಡೆ ತಮ್ಮ ಜಾಡನ್ನು ಬಿಟ್ಟಿರುತ್ತಾರೆ ಎಂಬ ಅಂದಾಜಿನ ಮೇಲೆ ಈ ಪತ್ತೇದಾರಿ ನಿಂತಿದೆ. ಅಕಸ್ಮಾತ್ ಆತ/ಆಕೆ ಯಾರೆಂದು ಗೊತ್ತಾಗದಿದ್ದರೂ ಸರಿ. ಅದೇ ಶೈಲಿಯ ಬರಹಗಳು ಹೊಸತಾಗಿ ಇಂಟರ್‌ನೆಟ್‍ನಲ್ಲಿ ಎಲ್ಲೇ ಪ್ರಕಟವಾಗಲಿ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯೊಂದನ್ನು ಅಳವಡಿಸಿಕೊಳ್ಳಬಹುದು.

ಇಂಟರ್‌ನೆಟ್‍ನಲ್ಲಿ ಜೇಡರ ಬಲೆಯನ್ನು ಹರಡುವುದು ಮಳೆ ಸುರಿವ ಕಾಡಿನಲ್ಲಿ ಹಕ್ಕಿಗೆ ಬಲೆ ಬೀಸುವಷ್ಟೇ ವ್ಯರ್ಥದ ಕೆಲಸ. ಒಮ್ಮೊಮ್ಮೆ ಬಲೆ ಬೀಸಿರುವುದು ಪತ್ತೆಯಾಗಿ ತಮ್ಮ ಜಾಡು ಮತ್ತು ಚಹರೆಯನ್ನು ಬದಲಿಸಿಕೊಳ್ಳುತ್ತಲೇ ಇರುತ್ತಾರೆ ಭಯೋತ್ಪಾದಕರು. ಅಷ್ಟಲ್ಲದೆಯೆ ತಮ್ಮ ಪಹರೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಾರೆ. ಅವರ ಚಾಣಕ್ಷತನ ಒಮ್ಮೊಮ್ಮೆ ಹೇಗಿರುತ್ತೆದೆಂದರೆ, ತಾವು ಬಲೆಗೆ ಬಿದ್ದಿದ್ದೇವೆಂದು ತೋರಿಸಿಕೊಳ್ಳುತ್ತಲೇ ಧಾಳಿ ಆರಂಭಿಸತೊಡಗುತ್ತಾರೆ. ಅವರ ಸಾಮಗ್ರಿಗಳನ್ನೆಲ್ಲವನ್ನೂ ಬೇಹುಗಾರರು ತಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದೊಡನೆಯೆ ಅಂಥ ಸಾಮಗ್ರಿಗಳಿಗೆ ವೈರಸ್‌ಗಳನ್ನು ಸೇರಿಸಹೊರಡುತ್ತಾರೆ. ಯಾವ ಯಾವ ವೆಬ್‍ತಾಣದಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಅರಿವಾದೊಡನೆಯೆ ಆ ತಾಣಕ್ಕೆ ಧಾಂಗುಡಿಯಿಡಲು ಶುರು ಹಚ್ಚಿಕೊಳ್ಳುತ್ತಾರೆ. ಇದು ಹೆಚ್ಚೂ-ಕಮ್ಮಿ ಬೆಕ್ಕು-ಇಲಿಗಳ ಚೆಲ್ಲಾಟದಂತೆ ಮುಂದುವರಿಯುತ್ತದೆ. ಪಾತ್ರ ಒಮ್ಮೊಮ್ಮೆ ಬದಲಾಗುತ್ತದೆ. ಒಬ್ಬರಿಗೆ ಚೆಲ್ಲಾಟವಾದರೆ ಮತ್ತೊಬ್ಬರಿಗೆ ಪ್ರಾಣಸಂಕಟ.

ಭಯೋತ್ಪಾತ ವಿರುದ್ಧದ ಜಾಗತಿಕ ಧಾಳಿ ನಿರಂತರ. ಇಂಥದೊಂದು ವ್ಯವಸ್ಥೆಯನ್ನು ಆರಂಭಿಸಿದ ನಂತರ ಯೋಜನೆ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಉದಾಹರಣೆಗೆ ವೆಬ್‍ತಾಣವೊಂದರಲ್ಲಿ ‘ಉತ್ತಮಪಡಿಸಿದ ಸ್ಫೋಟಕ ಸಾಧನಗಳು - ಐ.ಇ.ಡಿ.’ಗಳನ್ನು ತಯಾರಿಸುವುದು ಹೇಗೆ? ಎಂಬುದನ್ನು ಸವಿವರವಾಗಿ ತಿಳಿಸಲಾಗಿದೆಯೆಂದು ಭಾವಿಸಿ. ಇದರಲ್ಲಿ ಸ್ಫೋಟಕ ಸಾಧನವನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಯಾವುವು? ಅವು ಸಿಗುವ ಮಳಿಗೆಗಳು ಯಾವುವು? ಅದನ್ನು ತಯಾರಿಸುವುದು ಹೇಗೆ? ಮತ್ತೊಬ್ಬರಿಗೆ ತಿಳಿಯದಂತೆ ಅದನ್ನು ಸಾಗಿಸುವುದು ಯಾವ ರೀತಿ? ಸ್ಫೋಟಗೊಳಿಸುವ ಬಗೆ ಎಂಥದು? ಆನಂತರ ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳು ಯಾವುವು? ಎಂಬ ವಿಷಯಗಳನ್ನು ಸಚಿತ್ರವಾಗಿ ತಿಳಿಸುವುದರ ಜತೆಗೆ ಪೂರಕವಾದ ವೀಡಿಯೋ ತುಣಕುಗಳನ್ನು ಸೇರಿಸಿದ್ದಾರೆಂದುಕೊಳ್ಳಿ. ಮೊದಲಿಗೆ ಈ ತಾಣಕ್ಕೆ ಭೇಟಿ ಕೊಡುವವರ ಜಾಡು ಹಿಡಿಯುವವರ ಗುರುತು ಪತ್ತೆ ಮಾಡಬೇಕು. ಅವರು ಭೇಟಿ ನೀಡುವ ಇನ್ನಿತರ ತಾಣಗಳು, ಸಂಪರ್ಕ ಹೊಂದುವ ಇತರ ವ್ಯಕ್ತಿಗಳು, ಅವರ ಸಂಪರ್ಕ ಜಾಲ ಹೀಗೆ ಪತ್ತೆ ಮಾಡುತ್ತಾ ಹೋಗಿ, ಒಂದು ದತ್ತಾಂಶ ಸಂಚಯವನ್ನು ರೂಪಿಸಿಕೊಳ್ಳಬಹುದು. ಇನ್ನು ತಾಣದಲ್ಲಿ ವಿವರಿಸಿರುವಂತೆ ಸಾಮಗ್ರಿ ಬಿಕರಿ ಮಾಡುವ ಮಳಿಗೆಗಳ ಸುತ್ತ ಪಹರೆ ಹಾಕಬಹುದು. ಅದರಲ್ಲಿ ತೋರಿಸಿರುವಂತೆ ಸಾಧನಗಳು ಪತ್ತೆಯಾದಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು. ಇಂಥ ಯೋಜನೆಗಳನ್ನು ಈ ವಿಧಾನದ ಮೂಲಕ ಕರಾಳ ಜಾಲದ ಅಡಿಯಲ್ಲಿ ಹೊಸಕಿ ಹಾಕಲಾಗಿದೆ.

ಭಯೋತ್ಪಾತ ಜಾಗತಿಕ ಸಮಸ್ಯೆ. ಸಾರ್ವಜನಿಕರ ನೆರವಿಲ್ಲದೆಯೆ ಯಾವುದೇ ಆಡಳಿತ ಈ ಸಮಸ್ಯೆಯನ್ನು ಏಕಪಕ್ಷೀಯವಾಗಿ ನಿವಾರಿಸಲಾಗುವುದಿಲ್ಲ. ಯಾವುದೇ ಅನಪೇಕ್ಷಣೀಯ ಸಾಮಗ್ರಿ ಅಥವಾ ಆಕ್ಷೇಪಾರ್ಹ ಬರಹ ಇಂಟರ್‌ನೆಟ್‍ನಲ್ಲಿ ಕಣ್ಣಿಗೆ ಬಿದ್ದರೆ ಸಮೀಪದ ‘ಸೈಬರ್ ಪೊಲೀಸ್ ಠಾಣೆ’ಗಳಿಗೆ ಮಾಹಿತಿ ನೀಡಬೇಕಾದ ಕರ್ತವ್ಯ ಎಲ್ಲ ಪ್ರಜ್ಞಾವಂತ ನಾಗರಿಕರದು. ‘ಕರಾಳ ಜಾಲ’ ಯೋಜನೆಗೆ ಯಶ ಸಿಗಲಿ, ನೈಜ ಲೋಕದಲ್ಲಿ ಭಯೋತ್ಪಾತ ಹೆಚ್ಚಿಸುವ ಸೈಬರ್ ಲೋಕದ ಎಲ್ಲ ಪ್ರಯತ್ನಗಳೂ ನಿಷ್ಫಲವಾಗಲಿ. ಮಾಹಿತಿಯ ಮುಕ್ತ ಪ್ರಸರಣೆಗೆಂದೇ ಹುಟ್ಟಿ ಬಂದ ಇಂಟರ್‌ನೆಟ್‍ಗೆ ಮುಕ್ತತೆಯೇ ಕುತ್ತಾಗದಿರಲಿ.

(ಕೃಪೆ : ವಿಜಯ ಕರ್ನಾಟಕ, 17-09-2007)

No comments: