Saturday, March 24, 2007

ಹೇಳು ಬೆಳಕೆ, ಹಳಿಯಲ್ಲಿದೆಯೆ ನನ್ನೊಳಗಿನ ಮಿದುಳು?

ತೀವ್ರವಾದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಸುರಕ್ಷ ಚಿಕಿತ್ಸೆ ನೀಡುವುದು ಅಷ್ಟು ಸುಲಭವಲ್ಲ. ಮಿದುಳು ಮತ್ತು ನರಮಂಡಲ ವೈದ್ಯ ವಿಜ್ಞಾನಿಗಳಿಗೆ ಇಂದಿಗೂ ಅದೊಂದು ಅತಿ ದೊಡ್ಡ ಸವಾಲು. ಹೆಚ್ಚಿನ ಖಿನ್ನತೆ ಓಡಾಡಲಾಗದ, ಮಾತನಾಡಲಾಗದ, ಏನನ್ನೂ ತಿನ್ನಲಾಗದ ಪರಿಸ್ಥಿತಿಗೆ ಮನುಷ್ಯನನ್ನು ದೂಡುತ್ತದೆ. ಖಿನ್ನತೆ ಯಾವುದೇ ಔಷಧಗಳಿಗೂ ಬಗ್ಗದಷ್ಟು ಹೆಚ್ಚಾಗಿದ್ದರೆ,ಮನೋವೈದ್ಯರು ‘ಎಲೆಕ್ಟ್ರೋ‍ಕನ್ವಲ್ಸಿವ್ ಚಿಕಿತ್ಸೆ’ (electroconvulsive therapy)ಗೆ ಮೊರೆಹೋಗುತ್ತಾರೆ. ಅರಿವಳಿಕೆ ಮದ್ದನ್ನು ಸೇವಿಸಿದ ವ್ಯಕ್ತಿಯ ಮಿದುಳಿಗೆ ಲಘುವಾದ ವಿದ್ಯುತ್ ಆಘಾತ ನೀಡುವುದೇ ಈ ಚಿಕಿತ್ಸೆ. ಹೀಗೆ ಮಾಡಿದಾಗ ಪ್ರಜ್ಞೆ ಕಳೆದುಕೊಂಡಿರುವ ರೋಗಿಗೆ ವಿಪರೀತ ನಡುಕ ಉಂಟಾಗಿ ಬಡಬಡಿಸುವ ಮಾತುಗಳನ್ನಾಡುತ್ತಾನೆ. ಇಂಥ ಸಂದರ್ಭಗಳಲ್ಲಿ ದೇಹಕ್ಕೆ ಯಾವುದೇ ಆಘಾತಗಳಾಗದಿರಲು ‘ಸ್ನಾಯುಗಳಿಗೆ ವಿಶ್ರಾಂತಿ’ ನೀಡುವ ಮದ್ದನ್ನು ಸಹಾ ರೋಗಿಗೆ ನೀಡಲಾಗಿರುತ್ತದೆ. ತೀವ್ರ ಖಿನ್ನತೆಯಿಂದ ಬಳಲುವ ರೋಗಿಗಳಿಗೆ ಜೀವ ಉಳಿಸುವ ಚಿಕಿತ್ಸೆಯಿದಾದರೂ, ಇದು ತರಬಲ್ಲ ಅಡ್ಡ ಪರಿಣಾಮಗಳನ್ನು ಕಡೆಗಣಿಸುವ ಹಾಗಿಲ್ಲ. ‘ನನಪು ನಾಶವಾಗುವಿಕೆ’, ‘ತೀವ್ರ ತಲೆಶೂಲೆ’ ಮುಂತಾದ ಅತ್ಯಂತ ಗಂಭೀರ ಮಿದುಳು ಸಮಸ್ಯೆಗಳನ್ನು ಇದು ತಂದೊಡ್ಡಬಲ್ಲದು. ವಿದ್ಯುತ್ ಆಘಾತಗಳ ತರಂಗಗಳ ಬದಲು ಇನ್ಯಾವುದಾದರೂ ಪ್ರಚೋದಕ ಸಂಕೇತಗಳನ್ನು ಮಿದುಳಿಗೆ ಕಳುಹಿಸಲು ಸಾಧ್ಯವೆ? ಆ ಮೂಲಕ ಅಡ್ಡ ಪರಿಣಾಮಗಳ ತೀವ್ರತೆಯನ್ನು ತಗ್ಗಿಸಬಹುದೆ? ಎಂದು ಮಿದುಳು ಹಾಗೂ ನರಮಂಡಲ ವೈದ್ಯ ವಿಜ್ಞಾನಿಗಳು ಬಹುದಿನಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕದ ‘ಸ್ಟಾನ್‍ಫರ್ಡ್ ವೈದ್ಯಕೀಯ ಕೇಂದ್ರ’ದ ವೈದ್ಯ ವಿಜ್ಞಾನಿಗಳು ಕೈಗೆತ್ತಿಕೊಂಡಿರುವ ಯೋಜನೆ ಅತ್ಯಂತ ಮಹತ್ವದ್ದು.

ನರವಿಜ್ಞಾನಿಗಳು ಗುರುತಿಸಿರುವಂತೆ ಖಿನ್ನತೆ ಆರಂಭವಾಗಲು ಮುಖ್ಯ ಕಾರಣ, ಮಿದುಳಿನೊಳಗಿನ ರಾಸಾಯನಿಕಗಳ ಪ್ರಮಾಣದಲ್ಲಿ ಆಗುವ ಏರುಪೇರು. ಮಿದುಳಿನ ಯಾವ ನರತಂತುಗಳು ಅಥವಾ ಜೀವಕೋಶಗಳು ಈ ಬಗೆಯ ಅಸಮತೋಲನ ಉಂಟುಮಾಡುತ್ತವೆ ಎಂದು ನಿಖರವಾಗಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇಂಥ ವಿಯಮಾನಗಳನ್ನು ತಿಳಿದುಕೊಳ್ಳಲು, ಬೇಕೆಂದಾಗ ಮಿದುಳಿನ ಅನುಮಾನಾಸ್ಪದ ಪ್ರದೇಶಗಳಲ್ಲಿನ ಕೆಲವು ನರತಂತು ಅಥವಾ ಜೀವಕೋಶಗಳನ್ನು ಸಕ್ರಿಯ/ನಿಷ್ಕ್ರಿಯ ಮಾಡಿಸಬೇಕು. ಅಂದರೆ ನಾವು ಸ್ವಿಚ್ ಒಂದರ ಮೂಲಕ ವಿದ್ಯುತ್ ದೀಪವನ್ನು ಹತ್ತಿಸುವ ಅಥವಾ ಆರಿಸುವಂತೆ, ನರತಂತು ಅಥವಾ ಜೀವಕೋಶಗಳು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ನಡೆದ ಪ್ರಯೋಗಗಳಲ್ಲಿ ಸ್ಟಾನ್‍ಫರ್ಡ್ ವೈದ್ಯಕೀಯ ಕೇಂದ್ರದ ವಿಜ್ಞಾನಿಗಳು ನಡೆಸಿದ ಮಿದುಳಿನೊಳಗೆ ಹುದುಗಿಸಿದ ಪುಟ್ಟ ಲೋಹದ ತುಂಡುಗಳ (ಎಲೆಕ್ಟ್ರೋಡ್) ಮೂಲಕ ವಿದ್ಯುತ್ ಹರಿಸುವುದು ಪ್ರಮುಖವಾಗಿತ್ತು. ಆದರೆ ಈ ಪ್ರಯತ್ನಗಳಲ್ಲಿ ನಿರ್ದಿಷ್ಟವಾದ ನರತಂತು ಅಥವಾ ಜೀವಕೋಶಗಳಿಗೆ ಮಾತ್ರ ವಿದ್ಯುತ್ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಇಂಥ ತೊಂದರೆ ನಿವಾರಣೆಯಾಗಬೇಕಿದ್ದರೆ ವಿದ್ಯುತ್ ಹರಿಸುವ ಎಲೆಕ್ಟ್ರೋಡ್ ಹಾಗೂ ಮಿದುಳಿನ ನಡುವೆ ನಿಯಂತ್ರಕವೊಂದು ಸ್ಥಾಪನೆಯಾಗಬೇಕು. ಬಯಸಿದಾಗ ಅದು ಬೇಕೆಂದ ನರತಂತುವನ್ನು ಚೇತನಗೊಳಿಸುವಂತಿರಬೇಕು.

ಸ್ಟಾನ್‍ಫರ್ಡ್ ವೈದ್ಯಕೀಯ ಕೇಂದ್ರದಲ್ಲಿ ಖಿನ್ನತೆಯಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ನೀಡುವವರಲ್ಲಿ ಕಾರ್ಲ್ ಡೈಸೆರಾಥ್ ಪ್ರಮುಖರು. ಅವರು ಕೇವಲ ಮನೋವೈದ್ಯಕೀಯ ವಿಜ್ಞಾನಿಗಳಷ್ಟೇ ಅಲ್ಲ, ಜೈವಿಕ ಎಂಜಿನೀರಿಂಗ್‍ನಲ್ಲೂ ಪರಿಣತಿ ಹೊಂದಿದ್ದಾರೆ. ಅವರ ಸಂಗಡ ಡಾಕ್ಟರೇಟ್ ನಂತರದ ಅಧ್ಯಯನ ನಡೆಸುತ್ತಿದ್ದ ಎಡ್ ಬಾಯ್ಡನ್ (ಪ್ರಸ್ತುತ ಮೆಸಾಶ್ಯುಸೆಟ್ಸ್‍ನ ಎಂ.ಐ.ಟಿ.ಯಲ್ಲಿ ಸಹಾಯಕ ಪ್ರಾಧ್ಯಾಪಕರು) ಹಾಗೂ ಪದವಿ ವಿದ್ಯಾರ್ಥಿಯಾಗಿದ್ದ ಫೆಂಗ್ ಝ್ಯಾಂಗ್ ಒಗ್ಗೂಡಿ ನಿಯಂತ್ರಕವೊಂದನ್ನು ರೂಪಿಸುವಲ್ಲಿ ಯಶಸ್ವಿಯಾದರು. ಈ ಸಂಬಂಧ ಅವರು ಆಯ್ದುಕೊಂಡಿದ್ದು ಹಸಿರು ಪಾಚಿಯಲ್ಲಿ ಹೇರಳವಾಗಿ ಲಭ್ಯವಿರುವ ಪ್ರೋಟೀನ್ ಒಂದನ್ನು. ಆ ಪ್ರೋಟೀನ್‍ನ ವಿಷಿಷ್ಟ ಗುಣವೆಂದರೆ ಬೆಳಕಿನ ಸಂಕೇತಗಳಿಗೆ ತೀವ್ರವಾಗಿ ಸ್ಪಂದಿಸುವುದು. ಇದನ್ನು ಜೈವಿಕ ತಂತ್ರಜ್ಞಾನದ ಮೂಲಕ ನರತಂತುಗಳ ಜೀವಕೋಶಗಳಿಗೆ ಹೊಂದಾಣಿಕೆ ಅಥವಾ ಕೂಡಿಕೆ ಮಾಡಿದರೆ, ಬೆಳಕಿನ ಸಂಕೇತಗಳಿಗೆ ಅವು ಸ್ಪಂದಿಸುವಂತೆ ಮಾಡಬಹುದು. ಆ ಮೂಲಕ ನರತಂತುಗಳಲ್ಲಿ ವಿದ್ಯುತ್ ಹರಿಯುವಂತೆ ಮಾಡಬಹುದು. ಅಂದರೆ ಬೆಳಕಿನ ಶಕ್ತಿ ನರತಂತುಗಳಲ್ಲಿ ವಿದ್ಯುತ್ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಪುಸ್ತಕಗಳಲ್ಲಿ ಓದಲು ರೋಚಕವಾಗಿ ತೋರುವ ಇಂಥ ಐಡಿಯಾಗಳನ್ನು ಕಾರ್ಯಗತಗೊಳಿಸುವುದು ಸುಲಭವಲ್ಲ.

ಮಾನವ ಮಿದುಳಿನ ಕಿರು ಮಾದರಿಯೆಂದೇ ಹೇಳಬಹುದಾದ ಇಲಿಗಳ ಮಿದುಳು ಡೈಸೆರಾಥ್ ಅವರ ಪ್ರಯೋಗಕ್ಕೆ ಸನ್ನದ್ಧವಾಯಿತು. ಮೊದಲಿಗೆ ಇಲಿಗಳಿಗೆ ತೀವ್ರ ಖಿನ್ನತೆಯನ್ನು ತರಿಸುವ ಕಾರ್ಯ ಆರಂಭವಾಯಿತು. ಸೂಕ್ತ ರಾಸಾಯನಿಕ ಚುಚ್ಚುಮದ್ದುಗಳ ಮೂಲಕ ಇದು ಕಾರ್ಯಗತವಾಯಿತು. ಟೆಲಿಫೋನ್ ಸೇರಿದಂತೆ ನಮ್ಮೆಲ್ಲ ದೂರಸಂಪರ್ಕ ಸಾಧನಗಳಲ್ಲಿ ಬಳಸುವ ‘ಆಪ್ಟಿಕಲ್ ಫೈಬರ್ - ದ್ಯುತಿ ಎಳೆ’ಗಳು ನಿಮಗೆ ಗೊತ್ತು. ಧ್ವನಿ, ಮಾಹಿತಿ ಮತ್ತಿತರ ಸಂಕೇತಗಳನ್ನು ಬೆಳಕಿನ ಸಂಕೇತಗಳನ್ನಾಗಿ ಬದಲಿಸಿ ಸಂವಹನೆ ಮಾಡಲು ಆಪ್ಟಿಕಲ್ ಫೈಬರ್‌ಗಳನ್ನು ಬಳಸಲಾಗುತ್ತದೆ. ಇಂಥ ಆಪ್ಟಿಕಲ್ ಫೈಬರ್ ಮೂಲಕ ಇಲಿಗಳ ಮಿದುಳಿಗೆ ಬೆಳಕಿನ ಸಂಕೇತಗಳನ್ನು ಕಳುಹಿಸುವ ವ್ಯವಸ್ಥೆಯೊಂದನ್ನು ವಿಜ್ಞಾನಿಗಳು ವಿನ್ಯಾಸಗೊಳಿಸಿದರು. ಹೀಗೆ ಕಳುಹಿಸಿದ ಬೆಳಕಿನ ಸಂಕೇತಗಳನ್ನು ನರತಂತುಗಳು ಗ್ರಹಿಸಲಾರಂಭಿಸಿದವು. ಇಡೀ ಚಟುವಟಿಕೆಯನ್ನು ಸೂಕ್ಷ್ಮ ಕ್ಯಾಮೆರಾಗಳ ಮೂಲಕ ಚಿತ್ರೀಕರಣ ನಡೆಸಿಕೊಳ್ಳಲಾಯಿತು. ಮಿದುಳಿನ ಅನುಮಾನಾಸ್ಪದ ಪ್ರದೇಶಗಳಲ್ಲಿನ ನರತಂತುಗಳ ಬಳಿ ಬೆಳಕನ್ನು ಹಾಯಿಸಿ ಪರೀಕ್ಷೆಗಳನ್ನು ನಡೆಸಲಾಯಿತು. ಡೈಸೆರಾಥ್ ತಮ್ಮ ನಿಯಂತ್ರಕವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲು ಮಿದುಳಿನ ಬಗ್ಗೆ ಸಂಶೋಧನೆ ನಡೆಸುತ್ತಿರುವ ನೂರಕ್ಕೂ ಹೆಚ್ಚು ಪ್ರಯೋಗಾಲಯಗಳಿಗೆ ಅವುಗಳನ್ನು ಕಳುಹಿಸಿದ್ದಾರೆ. ಈ ನಿಯಂತ್ರಕವು ಎಷ್ಟರ ಮಟ್ಟಿಗೆ ಹುಚ್ಚೆಬ್ಬಿಸಿದೆಯೆಂದರೆ ವಿವಿಧ ಜಾತಿಯ ಇಲಿಗಳೊಂದಿಗೆ ಹಲವಾರು ಹುಳಗಳು, ನೊಣಗಳು ಮತ್ತಿತರ ಕೀಟಗಳ ಮಿದುಳಿನ ಚಟುವಟಿಕೆಗಳನ್ನು ಗುರುತಿಸಲು ವಿಜ್ಞಾನಿಗಳು ಬಳಸುತ್ತಿದ್ದಾರೆ. ಔಷಧ ಕಂಪನಿಗಳ ಕುತೂಹಲವನ್ನು ಕೆರಳಿಸಿರುವ ಈ ಪ್ರಯೋಗಗಳಿಗೆ ಇದೀಗ ಹೆಚ್ಚಿನ ಹಣ ಹರಿದು ಬರುತ್ತಿದೆ. ಖಿನ್ನತೆ ನಿವಾರಿಸುವ ಮದ್ದಿನ ಆವಿಷ್ಕಾರದಲ್ಲಿರುವ ಕಂಪನಿಗಳು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿವೆ. ಮಿದುಳಿನ ಚಟುವಟಿಕೆಗಳು ಹಾಗೂ ಸ್ವಭಾವಗಳ ನಡುವಿನ ನಿಕಟ ಸಂಬಂಧಗಳನ್ನು ಗುರುತಿಸಲು ಸಂಶೋಧನೆಗಳನ್ನು ನಡೆಸುತ್ತಿರುವ ನರವಿಜ್ಞಾನಿಗಳೂ ಸಹಾ ಈ ಬಗ್ಗೆ ತಮ್ಮ ಗಮನ ಹರಿಸಿದ್ದಾರೆ.

ಸತತವಾಗಿ ತೀವ್ರ ನಡುಕ ಹುಟ್ಟಿಸುವ ‘ಪಾರ್ಕಿನ್‍ಸನ್ ಕಾಯಿಲೆ’ ಸೇರಿದಂತೆ ವಿವಿಧ ಸ್ತರಗಳ ಖಿನ್ನತೆಗಳಿಗೆ ನೀಡುತ್ತಿರುವ ವಿದ್ಯುತ್ ಆಘಾತ ಚಿಕಿತ್ಸೆಯ ಜತೆಗೆ ಬೆಳಕಿನ ಸಂಕೇತಗಳ ಚಿಕಿತ್ಸೆ ಪೂರಕವಾಗಬಹುದೆಂಬ ನಿರೀಕ್ಷೆ ಮನೋವಿಜ್ಞಾನ ವೈದ್ಯರದು. ವಿದ್ಯುತ್ ಅಥವಾ ಬೆಳಕಿನ ಸಂಕೇತಗಳನ್ನು ಮಿದುಳಿನ ಸೂಕ್ಷ್ಮ ಪ್ರದೇಶಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಕಳುಹಿಸುವ, ವಿದ್ಯುತ್ ಅಥವಾ ಮತ್ಯಾವುದೇ ಪ್ರತಿಸ್ಪಂದನೆಯ ಸಂಕೇತಗಳನ್ನು ಗ್ರಹಿಸುವ ತಂತ್ರಜ್ಞಾನ ಈಗಾಗಲೇ ಕರಗತವಾಗಿದೆ. ಈ ಬಗ್ಗೆ ಜಗತ್ತಿನ ದೊಡ್ಡ ಸಂಶೋಧನಾಲಯಗಳು ತಮ್ಮ ಸಹಾಯಹಸ್ತ ಚಾಚಿವೆ. ಸದ್ಯಕ್ಕೆ ಸಮಸ್ಯೆಯಿರುವುದು ಹಸಿರು ಪಾಚಿಯ ಪ್ರೋಟೀನ್ ಅನ್ನು ನರತಂತುಗಳ ಜೀವಕೋಶಗಳಿಗೆ ‘ಜೈವಿಕ ಕೂಡಿಕೆ’ ಮಾಡುವಲ್ಲಿ. ಮಿದುಳಿಗೆ ಸಂಬಂಧಿಸಿದ ಜೀವಕೋಶಗಳಾದ ಕಾರಣ ಜೀನ್ ಹಂತದ ಇಂಥ ಸೂಕ್ಷ್ಮಾತಿ ಸೂಕ್ಷ್ಮ ಕಾರ್ಯಾಚರಣೆಗಳು ಅತ್ಯಂತ ನಿಖರವಾಗಿರಬೇಕು. ನಿಯಂತ್ರಕ ಸ್ವಿಚ್‍ಗಳಾಗಿ ಕೆಲಸ ಮಾಡಬಲ್ಲ ಜೀವಕೋಶಗಳು ಯಾವ ನಿರ್ದಿಷ್ಟ ಸ್ಥಳಗಳಲ್ಲಿ ಅಳವಡಿಕೆಯಾಗಬೇಕೆಂದು ನಿರ್ಧರಿಸುವ ಕೆಲಸವೂ ಸುಲಭದ್ದಲ್ಲ. ಮಿದುಳಿನಂಥ ಕ್ಲಿಷ್ಟ ವ್ಯವಸ್ಥೆಯ ಬದಲು ದೇಹದ ಮತ್ತಿತರ ಜೀವಕೋಶಗಳ ಮೇಲೆ ಪ್ರಯೋಗ ನಡೆಸಿ ಫಲಿತಾಂಶಗಳ ವಿಶ್ಲೇಷಣೆ ಪಡೆಯುವುದು ಉತ್ತಮ ಎಂಬ ಅಭಿಪ್ರಾಯವೂ ಇದೆ. ಅಮೆರಿಕದ ಕೆಲವೊಂದು ಪ್ರಯೋಗಶಾಲೆಗಳಲ್ಲಿ ದೈಹಿಕ ಚಲನೆ, ಪಚನಕ್ರಿಯೆ ಮತ್ತಿತರ ಕಾರ್ಯಚಟುವಟಿಕೆಗಳ ಪರಿಶೀಲನೆ ಅಥವಾ ನಿಯಂತ್ರಣವನ್ನು ಇದೇ ತಂತ್ರಜ್ಞಾನದ ಮೂಲಕ ಅಧ್ಯಯನ ನಡೆಸುವ ಪ್ರಯತ್ನಗಳು ಸಾಗಿವೆ. ಕೆಲವು ವಿಜ್ಞಾನ ಮಂದಿರಗಳಲ್ಲಿ ಮದ್ಯ, ಸಿಗರೇಟು, ಮಾದಕ ದ್ರವ್ಯ ಸೇರಿದಂತೆ ವ್ಯಸನಕಾರಕ ವಸ್ತುಗಳು ಮಿದುಳಿನಲ್ಲಿ ಎಂಥ ಕಾರ್ಯವೆಸಗುತ್ತವೆ ಎಂಬುದನ್ನು ಅರಿಯುವ ಇಚ್ಛೆ. ನಿಯಂತ್ರಕಗಳಿಗೆ ಸೂಕ್ತ ಮಾರ್ಪಾಡುಗಳನ್ನು ಮಾಡಿ ಈಗಾಗಲೇ ಇಲಿಗಳ ಮಿದುಳಿನ ಮೇಲೆ ಅಧ್ಯಯನಗಳನ್ನು ಅವರು ನಡೆಸುತ್ತಿದ್ದಾರೆ.

ವಿಜ್ಞಾನ ಅಥವಾ ತಂತ್ರಜ್ಞಾನ ಗಾಡಾಂಧಕಾರವನ್ನು ತೊಡೆದು ಬೆಳಕು ಹರಿಸಬೇಕು. ಮಿದುಳಿನಂಥ ಸೂಕ್ಷ್ಮ ಪ್ರದೇಶದ ಮೇಲೆ ಅಕ್ಷರಶಃ ಬೆಳಕು ಚೆಲ್ಲುವ ಇಂಥ ಪ್ರಯತ್ನಗಳು ಈ ನಿಟ್ಟಿನಲ್ಲಿ ನಮ್ಮ ದೇಹದ ಪ್ರಮುಖ ಭಾಗದ ಬಗ್ಗೆ ಕವಿದಿರುವ ಅಂಧಕಾರವನ್ನು ದೂರ ಸರಿಸಬಹುದು. ಮಿದುಳಿನ ಬಗ್ಗೆ ಮಾತನಾಡುವಾಗ ನಮ್ಮ ಅನೇಕ ವ್ಯಕ್ತಿ-ವಿಕಸನ ತಜ್ಞರು ಹೇಳುವ ಮಾತೊಂದಿದೆ. ನಮ್ಮ ಮಿದುಳನ್ನು ಇಡಿಯಾಗಿ ನಾವು ಉಪಯೋಗಿಸುತ್ತಿಲ್ಲ ಎಂಬುದು ಅವರ ಸಾಮಾನ್ಯ ಆಪಾದನೆ. ನಮ್ಮ ಈ ಕೊರತೆಯನ್ನು ತೋರಿಸಿಕೊಡಲೆಂದೇ ಅವರ ಮಿದುಳಿನ ಎಲ್ಲ ಭಾಗಗಳೂ ಖಂಡಿತವಾಗಿ ಚೇತನಗೊಂಡಿರುತ್ತವೆ. ಬರಲಿರುವ ದಿನಗಳಲ್ಲಿ ಈ ವಿಶೇಷಜ್ಞರು ನೇರವಾಗಿ ನಮ್ಮ ಮಿದುಳಿನೊಳಗೆ ತಮ್ಮ ನಿಯಂತ್ರಕಗಳನ್ನು ಕೂಡಿಸಿ ಬೃಹತ್ ಪರದೆಯ ಮೇಲೆ ನಮ್ಮ ಮಿದುಳಿನ ಯಾವ ಭಾಗಗಳು ಇದುವರೆಗೂ ಚೇತನಗೊಂಡಿಲ್ಲ ಎಂದು ತೋರಿಸಿಕೊಡುವ ಸಾಧ್ಯತೆಯನ್ನು ಅಲ್ಲಗೆಳೆಯುವ ಹಾಗಿಲ್ಲ. ಬೇಕೆಂದಾಗ ನಿರ್ದಿಷ್ಟ ನರತಂತುಗಳನ್ನು ಚೇತನಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಸಾಧನ ನಮ್ಮ ಕೈಗೆಟಕುವಂತಾದರೆ? ಥೇಟ್ ಮಂಗನ ಕೈಗೆ ಮಾಣಿಕ್ಯ ಸಿಕ್ಕಿದಂತೆ! ಬೇಕೆಂದೆಡೆ ಜಾಣ ಮರೆವು ಅಥವಾ ಪೆದ್ದುತನ ಪ್ರದರ್ಶಿಸಿ ಲಾಭ ಗಳಿಸಿಕೊಳ್ಳುತ್ತಿದ್ದ ನಿಜವಾದ ಬುದ್ಧಿವಂತರಿಗೆ ಈ ತಂತ್ರಜ್ಞಾನಗಳು ಸಂಚಕಾರ ತರಬಹುದು. ಗ್ರಹಣ ಬಿಟ್ಟ ಸೂರ್ಯನಂತೆ ನಮ್ಮೆಲ್ಲರ ಮಿದುಳು ಪ್ರಕಾಶಿಸುವಂತೆ ಮಾಡಲು ಯಾವುದೇ ತಂತ್ರಜ್ಞಾನ ಬಂದರೂ ಸ್ವಾಗತಿಸೋಣ. ಇದಕ್ಕಿಂತಲೂ ಉತ್ತಮವಾದ ಯುಗಾದಿ ಸಂದೇಶ ಮತ್ಯಾವುದಾದರೂ ಇದೆಯೆ? ನಿಮ್ಮ ಮಿದುಳಿಗೆ ಹೊಳೆದಿದ್ದರೆ ದಯವಿಟ್ಟು ತಿಳಿಸಿ. ಜತೆಗೆ ಅಂಥ ಪ್ರಕಾಶಮಾನವಾದ ಐಡಿಯಾ ಹೊಳೆದಿದ್ದು ನಿಮ್ಮ ಮಿದುಳಿನ ಯಾವ ನಿರ್ದಿಷ್ಟ ಭಾಗದ ನರತಂತುವಿನಲ್ಲಿ ಎಂದು ತಿಳಿಸುವುದನ್ನು ದಯವಿಟ್ಟು ಮರೆಯಬೇಡಿ. (19-03-2007)

No comments: