Saturday, March 24, 2007

ಬ್ಯಾಟರಿ ಚಾಲಿತ ಗ್ಯಾಜೆಟ್ಟು, ಇನ್ನು ವಿಮಾನದಿಂದ ಟಿಕೆಟ್ಟು!

ಕೆಲಸದ ನಡುವೆ ವಿಶ್ರಾಂತಿ ಪಡೆಯುವ, ವಿಶ್ರಾಂತಿ ಪಡೆಯುತ್ತಿರುವಾಗಲೇ ಒಂದಷ್ಟು ಕೆಲಸ ಮಾಡುವ ತುರ್ತು; ಒಂದಷ್ಟು ಕಾಲ ಒಂದೆಡೆ ಕುಳಿತುಕೊಳ್ಳಲಾಗದಷ್ಟು ಧಾವಂತ ನಮ್ಮದು. ಅಂದರೆ ನೆಮ್ಮದಿ ಕಳೆದುಕೊಳ್ಳುವುದು ನಮ್ಮೆಲ್ಲರಿಗೂ ಅನಿವಾರ್ಯವಾಗಿಬಿಟ್ಟಿದೆ. ಇಂಥ ಚಿಂತನೆಗಳನ್ನು ಶಬ್ದ ಸಹಿತವಾಗಿ ಮಿತ್ರರೊಡನೆ ಹಂಚಿಕೊಳ್ಳುತ್ತಿರುವಾಗ ಥಟ್ಟನೆ ಆಪಾದನೆಯೊಂದು ತೂರಿ ಬಂತು. ‘ಈ ಬ್ಯಾಟರಿ ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರಿಯದಿದ್ದರೆ, ನೀವು ಹೇಳುವಂಥ ನೆಮ್ಮದಿ ಪಾಕೀಟಿನಲ್ಲಿರುವ ಮೊಬೈಲ್ ಫೋನ್‍ನಷ್ಟೇ ಭದ್ರವಾಗಿರುತ್ತಿತ್ತು’ ಎಂದರೊಬ್ಬರು. ‘ಅಲ್ರೀ ಸರ. ಬ್ಯಾಟರಿ ಅಷ್ಟು ಪುಟ್ಟದಾಗಿರದಿದ್ದರೆ ಮೊಬೈಲ್ ಫೋನ್ ನಿಮ ತೊಡಿ ಮ್ಯಾಗಿನ ಕೂಸಿನಷ್ಟು ದೊಡ್ಡದಾಗಿರ್‍ತಿತ್ತು’ ಎಂದು ಮತ್ತೊಬ್ಬರು ಚಟಾಕಿ ಹಾರಿಸಿದರು. ಹೌದಲ್ಲ, ಬ್ಯಾಟರಿಗಳು ಮೇಜಿನ ಮೇಲೆ, ಟೀಪಾಯಿ ಮೇಲೆ, ಕಪಾಟಿನಲ್ಲಿಡುತ್ತಿದ್ದ ನಮ್ಮ ನಿತ್ಯ ಬಳಕೆಯ ಅದೆಷ್ಟು ಸಾಧನಗಳನ್ನು ಪುಟ್ಟದಾಗಿಸಿಬಿಟ್ಟಿವೆ. ಜತೆಗೆ ಅವುಗಳನ್ನು ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಸೌಕರ್ಯವನ್ನೂ ಕಲ್ಪಿಸಿಕೊಟ್ಟಿವೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಇಂದಿನ ಕ್ರಾಂತಿಯಲ್ಲಿ ಲೀಥಿಯಂ ಸಾಮಗ್ರಿ ಬಳಸಿಕೊಳ್ಳುವ ಬ್ಯಾಟರಿಗಳದು ಮಹತ್ತರ ಪಾತ್ರ. ತೆಳು ಹಾಳೆಯಷ್ಟೇ ಗಾತ್ರದ ಲೀಥಿಯಂ-ಅಯಾನ್ ಬ್ಯಾಟರಿಗಳು ಕ್ಯಾಮೆರಾದೊಂದಿಗಿರುವ ಮೊಬೈಲ್ ಫೋನ್, ಹಾಡುಗಳನ್ನು ಬಿತ್ತರಿಸುವ ಐ-ಪಾಡ್ ಹಾಗೂ ಎಂಪಿ-3 ಪ್ಲೇಯರ್, ಪುಟ್ಟ ತೆರೆಯಲ್ಲಿ ಚಲನಚಿತ್ರಗಳನ್ನು ತೋರಿಸಬಲ್ಲ ತೆರೆಸಹಿತವಾದ ವೀಡಿಯೋ ಪ್ಲೇಯರ್‌ಗಳನ್ನು ಮತ್ತಷ್ಟು ಚುರುಕು ಹಾಗೂ ಚೂಟಿಯಾಗಿಸಿವೆ. ಪದೇ, ಪದೇ ಚಾರ್ಜ್ ಮಾಡಬಹುದಾದ ಇಂಥ ಬ್ಯಾಟರಿಗಳು ನಮ್ಮ ಅನೇಕ ವೈದ್ಯಕೀಯ ಸಲಕರಣೆಗಳಿಗೆ ಜೀವ ತುಂಬಿಸಿವೆ, ದೇಹದಲ್ಲಿ ಅಳವಡಿಸುವ ಅನೇಕ ಜೀವರಕ್ಷಕಗಳಿಗೆ ಶಕ್ತಿ ಪೂರೈಸುತ್ತಿವೆ. ಅಮೆರಿಕದ ‘ಪೋರ್ಟಬಲ್ ರಿಚಾರ್ಜಬಲ್ ಬ್ಯಾಟರಿ ಅಸೋಸಿಯೇಶನ್’ ಎಂಬ ಬ್ಯಾಟರಿ ತಯಾರಕರ ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕ ಜಾರ್ಜ್ ಕೆರ್ಶ್‍ನರ್ ಪ್ರಕಾರ ‘ಕಳೆದ ಐದು ವರ್ಷಗಳಲ್ಲಿ ನೀವು ಕೊಂಡಿರುವ, ರಸ್ತೆಯಲ್ಲಿ ಬಳಸಬಹುದಾದ ಎಲ್ಲ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಶಕ್ತಿ ಪೂರೈಸುತ್ತಿರುವುದು ಲೀಥಿಯಂ-ಅಯಾನ್ ಬ್ಯಾಟರಿಗಳೇ’.

ತಂತ್ರಜ್ಞಾನ ಬೆಳೆದಂತೆ ಚಿಕ್ಕ ಗಾತ್ರದ ಬ್ಯಾಟರಿಗಳಲ್ಲಿ ಹೆಚ್ಚು ಶಕ್ತಿಯನ್ನು ಕೂಡಿಡಲು ಸಾಧ್ಯವಾಯಿತು. ಹೆಚ್ಚು ಶಕ್ತಿಶಾಲಿ ಬ್ಯಾಟರಿಗಳ ನೆರವಿನಿಂದ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲು ಅವಕಾಶ ದೊರೆಯಿತು. ಅವು ದೀರ್ಘಕಾಲ ಕಾರ್ಯ ನಿರ್ವಹಿಸಲೂ ಬ್ಯಾಟರಿಗಳು ನೆರವಾದವು. ಆದರೆ ಇಂಥ ಬ್ಯಾಟರಿಗಳೊಳಗೆ ಹೆಚ್ಚು ತಾಪಮಾನದಲ್ಲಿ ಸ್ಫೋಟಕವಾಗಬಲ್ಲ ರಾಸಾಯನಿಕಗಳು ಅಡಕವಾಗಿರುವ ಕಾರಣ, ಚಾರ್ಜ್ ಮಾಡುವಾಗ ಜಾಗರೂಕತೆಯಿಂದ ಇರಬೇಕಾಗುತ್ತದೆ. ಶಾರ್ಟ್ ಸರ್ಕ್ಯೂಟ್ ಆಗಿ ತಾಪಮಾನ ಹೆಚ್ಚು ಏರದಂತೆ, ಬ್ಯಾಟರಿ ಹಾಗೂ ಚಾರ್ಜಿಂಗ್ ವ್ಯವಸ್ಥೆಗಳಲ್ಲಿ ಬಹುತೇಕ ಬ್ಯಾಟರಿ ತಯಾರಕರು ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಆದರೆ ಅರಿವಿಲ್ಲದೆಯೆ ಕಳಪೆ ಗುಣ ಮಟ್ಟದ ಬ್ಯಾಟರಿ ಅಥವಾ ಚಾರ್ಜರ್ ಬಳಕೆಯಾದಲ್ಲಿ ಅಪಾಯ ತಪ್ಪಿದ್ದಲ್ಲ. ಅಕಸ್ಮಾತ್ ಇಂಥ ಅಪಘಾತಗಳು ವಿಮಾನದೊಳಗೆ ಸಂಭವಿಸಿದರೆ? ವಿಮಾನದೊಳಗೆ ಸಂಗೀತ ಸಾಧನಗಳು ಹಾಗೂ ಕಂಪ್ಯೂಟರ್ ಬಳಸುವವರು ಹೆಚ್ಚಾಗುತ್ತಿರುವ ದಿನಗಳಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಈಗಾಗಲೇ ಇಂಥ ಕೆಲ ಘಟನೆಗಳು ವಿಮಾನ ಸುರಕ್ಷೆಯ ಹೊಣೆ ಹೊತ್ತವರಿಗೆ ದಿಗಿಲು ಮೂಡಿಸಿವೆ.

ವಿಮಾನಗಳಲ್ಲಿ ಬ್ಯಾಟರಿಗಳು ತಂದೊಡ್ಡಬಹುದಾದ ಅಪಾಯದ ಬಗ್ಗೆ ಮೊದಲು ಮನವರಿಕೆಯಾಗಿದ್ದು ಕ್ರಿ.ಶ.1999ರಲ್ಲಿ. ಜಪಾನ್ ದೇಶದಿಂದ ಅಮೆರಿಕದ ಲಾಸ್‍ಏಂಜಲ್ಸ್ ನಿಲ್ದಾಣಕ್ಕೆ ಬಂದ ‘ನಾರ್ಥ್ ವೆಸ್ಟ್ ಏರ್‌ಲೈನ್ಸ್’ನ ಪಯಣಿಗರಿದ್ದ ವಿಮಾನಕ್ಕೆ ಇಳಿಯುವ ಸಮಯದಲ್ಲಿ ಬೆಂಕಿ ತಗುಲಿತು. ಒಂದು ಲಕ್ಷ ಇಪ್ಪತ್ತು ಸಾವಿರ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ಹೊತ್ತು ತಂದಿದ್ದ ಈ ವಿಮಾನವನ್ನು ರಕ್ಷಿಸಲು ಅಗ್ನಿಶಾಮಕ ದಳ ಹರಸಾಹಸ ಪಡಬೇಕಾಯಿತು. ಬ್ಯಾಟರಿಗಳಿದ್ದ ಡಬ್ಬಿಗಳನ್ನು ಅಗ್ನಿನಿರೋಧಕ ದ್ರಾವಣದಲ್ಲಿ ಅಕ್ಷರಶಃ ತೋಯಿಸಿದ್ದರೂ, ಬೆಂಕಿ ನಂದಿಸುವುದು ಸುಲಭವಾಗಿರಲಿಲ್ಲ. ದ್ರಾವಣ ಆರಿದಂತೆ ಬ್ಯಾಟರಿಗಳಲ್ಲಿ ಮತ್ತೆ ಮತ್ತೆ ಬೆಂಕಿ ಮೂಡುತ್ತಿದ್ದವು. ಈ ಘಟನೆಯ ನಂತರ ನಾಗರಿಕ ವಿಮಾನಗಳಲ್ಲಿ ಸಾಗಣೆಗೆ ನಿಷಿದ್ಧವಾದ ಪದಾರ್ಥಗಳೊಂದಿಗೆ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ಸೇರಿಸಬೇಕೆಂದು ಅಮೆರಿಕದ ಸುರಕ್ಷಾ ಸಂಘಟನೆಗಳು ವಿಶ್ವಸಂಸ್ಥೆಯನ್ನು ಒತ್ತಾಯಿಸಲಾರಂಭಿಸಿದವು. ಅಪಾಯಕಾರಿ ರಾಸಾಯನಿಕಗಳನ್ನು ಸಾಗಣೆ ಮಾಡುವಾಗ ಅವುಗಳಿಗೆ ವಿಶೇಷ ಕವಚಗಳ ರಕ್ಷಣೆಯಿರುತ್ತದೆ. ಜತೆಗೆ ಅವುಗಳನ್ನು ಎತ್ತೊಯ್ಯುವಾಗ ಎಷ್ಟು ಜಾಗರೂಕರಾಗಿರಬೇಕೆಂದು ತಿಳಿಸುವ ಲೇಬಲ್‍ಗಳನ್ನು ಹಚ್ಚಲಾಗಿರುತ್ತದೆ. ಬ್ಯಾಟರಿಗಳನ್ನು ಅಪಾಯಕಾರಿ ರಾಸಾಯನಿಕಗಳನ್ನು ಹೊತ್ತ ಸಾಧನಗಳೆಂದು ಪರಿಗಣಿಸದ ಕಾರಣ, ಸಾಗಣೆಯ ಬಗ್ಗೆ ಯಾವುದೇ ನಿರ್ಬಂಧಗಳಿಲ್ಲ. ಪಯಣಿಗರಿರುವ ವಿಮಾನಗಳ ಸರಕು ಕೊಠಡಿಗಳಲ್ಲಿ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ಸಾಗಿಸದಿರುವಂತೆ ವಿಶ್ವಸಂಸ್ಥೆಯ ಫರ್ಮಾನು ಹೊರಡಿಸಲು ಕಳೆದ ಮೂರು ವರ್ಷಗಳಿಂದ ಸತತ ಪ್ರಯತ್ನಗಳು ನಡೆದಿವೆ.

ಕಳೆದ ವರ್ಷ ಅಮೆರಿಕದ ಫಿಲಿಡಲ್ಫಿಯಾದಲ್ಲಿ ಜೆಟ್ ವಿಮಾನವೊಂದು ಸುಟ್ಟು ಭಸ್ಮವಾಗಿತ್ತು. ಬೆಂಕಿಗೆ ನೇರ ಕಾರಣಗಳು ಪತ್ತೆಯಾಗದಿದ್ದರೂ, ಬೆಂಕಿ ತಗುಲಿದ ಸ್ಥಳದಲ್ಲಿ ಸುಟ್ಟು ಕರಕಲಾಗಿದ್ದ ‘ಲ್ಯಾಪ್‍ಟಾಪ್’ ಕಂಪ್ಯೂಟರ್‌ಗಳು ದೊರೆತಿದ್ದವು. ಕಳೆದ ಸೆಪ್ಟೆಂಬರ್‌ನಲ್ಲಿ ಲಾಸ್‍ಏಂಜೆಲ್ಸ್ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಏರ್‌ಲೈನ್ಸ್‍ನ ವಿಮಾನದ ಪಯಣಿಗನೊಬ್ಬನ ಲ್ಯಾಪ್‍ಟಾಪ್ ಕಂಪ್ಯೂಟರ್‌ನಲ್ಲಿ ಹೊರಡುವ ಹದಿನೈದು ನಿಮಿಷಗಳ ಮುಂಚೆ ಬೆಂಕಿ ಕಾಣಿಸಿಕೊಂಡಿತ್ತು. ಇದೇ ರೀತಿ ಶಿಕಾಗೋದಿಂದ ಹೊರಡಬೇಕಿದ್ದ ಲುಫ್ತಾನ್ಸಾ ವಿಮಾನದಲ್ಲಿ ಪಯಣಿಗರ ತಲೆಯ ಮೇಲಿನ ಅಟ್ಟಣಿಗೆಯಲ್ಲಿದ್ದ ಬ್ಯಾಗಿನಿಂದ ಹೊಗೆ ಬರಲಾರ್‍ಅಂಭಿಸಿ, ವಿಮಾನ ಹಾರಾಟ ರದ್ದಾಗಿತ್ತು. ಕಳೆದ ನವೆಂಬರ್‌ನಲ್ಲಿ ಚೀನಾ ದೇಶದಿಂದ ಬಂದಿದ್ದ ಲೀಥಿಯಂ-ಅಯಾನ್ ಬ್ಯಾಟರಿಗಳ ಭಾರಿ ಪೆಟ್ಟಿಗೆಯಲ್ಲಿ, ಒಂದೆರಡನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಅವರ ಮೇಜಿನ ಮೇಲೆ ಅದು ಸ್ಫೋಟಗೊಂಡಿದ್ದವು. ಇವೆಲ್ಲವೂ ಸಣ್ಣ ಪ್ರಕರಣಗಳು. ಯಾವುದೇ ಪಯಣಿಗರಿಗೆ ಗಾಯಗಳಾಗಲಿಲ್ಲ, ವಿಮಾನಗಳು ದಹಿಸಿಹೋಗಲಿಲ್ಲ. ಆದರೂ ಬೆಂಕಿಯೇಳಲು ಲೀಥಿಯಂ-ಬ್ಯಾಟರಿಗಳು ಅವಕಾಶ ನೀಡುವ ಸಾಧ್ಯತೆ ಹೆಚ್ಚು.
ಇಂಥ ಒಂದೆರಡು ಅಪಘಾತಗಳನ್ನು ಆಧಾರವಾಗಿಟ್ಟುಕೊಂಡು ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ಸಾಗಿಸದಿರುವಂತೆ ನಿರ್ಬಂಧಿಸಲು ಸಾಧ್ಯವಿಲ್ಲ. ಕ್ರಿ.ಶ.2000ದಿಂದ ಜಗತ್ತಿನ ಎಲ್ಲ ರಾಷ್ಟ್ರಗಳ ಒಟ್ಟು ಏಳೂವರೆ ಕೋಟಿ ಹಾರಾಟಗಳಲ್ಲಿ (ನಾಗರಿಕ ವಿಮಾನ, ಸರಕು ಸಾಗಣೆ ವಿಮಾನ) ಲೀಥಿಯಂ ಬ್ಯಾಟರಿಗಳಿಗೆ ನೇರವಾಗಿ ಸಂಬಂಧಿಸಿದ ಬೆಂಕಿ ಅಪಘಾತಗಳು ಕೇವಲ ಹದಿನೈದು. ಇತ್ತೀಚಿನ ದಿನಗಳಲ್ಲಿ ಯಾವುದೇ ವಿಮಾನಗಳು ಭಾರಿ ಬೆಂಕಿ ಅನಾಹುತಗಳಿಗೆ ತುತ್ತಾಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಎರಡು ವಿಮಾನಗಳು ಬೆಂಕಿಗೆ ಆಹುತಿಯಾಗಿವೆ. ಕ್ರಿ.ಶ.1996ರಲ್ಲಿ ವ್ಯಾಲ್ಯೂಜೆಟ್ ವಿಮಾನ ಹಾಗೂ ಕ್ರಿ.ಶ.1998ರಲ್ಲಿ ಸ್ವಿಸ್‍ಏರ್ ವಿಮಾನ್ಗಳು ಬೆಂಕಿಯಲ್ಲಿ ಸಂಪೂರ್ಣ ದಹಿಸಿಹೋಗಿದ್ದವು. ಆದರೆ ಇವೆರಡೂ ಲೀಥಿಯಂ-ಅಯಾನ್ ಬ್ಯಾಟರಿಗಳಿಂದಾಗಿ ಅಲ್ಲ ಎಂದು ಸಾಬೀತಾಗಿವೆ. ಹೀಗಾಗಿ ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ವಿವಾದಾತ್ಮಕ ಚರ್ಚೆಗಳು ನಡೆಯುತ್ತಿವೆ. ಬಹುಶಃ ಕ್ರಿ.ಶ. 2009ರ ಹೊತ್ತಿಗೆ ಒಂದು ಖಚಿತವಾದ ಕಟ್ಟಳೆ ರೂಪುಗೊಳ್ಳಬಹುದು. ಅಮೆರಿಕದಲ್ಲಂತೂ ಸದ್ಯಕ್ಕೆ ಲಗೇಜು ಕೋಣೆಯೊಳಗೆ ಇಡಬಹುದಾದ ಪಯಣಿಗರ ಸಾಮಾನುಗಳಲ್ಲಿ ಲೀಥಿಯಂ-ಅಯಾನ್ ಬ್ಯಾಟರಿಗಳಿಗೆ ನಿರ್ಬಂಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ. ಕಾರಣ, ಕ್ರಿ.ಶ.2005ರಿಂದ ಅಮೆರಿಕ ಒಂದರಲ್ಲಿಯೇ ವಿಮಾನದೊಳಗೆ ಅಥವಾ ಸರಕು ಸಾಗಣೆ ವಿಮಾನಕ್ಕೆ ಏರಲಿದ್ದ ಲಗೇಜುಗಳಲ್ಲಿ ಕಂಡ ಲೀಥಿಯಂ-ಅಯಾನ್ ಬ್ಯಾಟರಿಗಳಿಗೆ ಸಂಬಂಧಿಸಿದ ಬೆಂಕಿ ಪ್ರಕರಣಗಳ ಸಂಖ್ಯೆ ಒಂಬತ್ತು. ಈ ಬಗ್ಗೆ ಕಳವಳಗೊಂಡಿರುವ ಅಲ್ಲಿನ ವಿಮಾನ ಹಾರಾಟ-ಯೋಗ್ಯತೆ ಮತ್ತು ದೃಢೀಕರಣ ನಿಯಂತ್ರಕರು ಪಯಣಿಗರು ತಮ್ಮ ಜತೆಗೇ ಕೊಂಡೊಯ್ದು ಅಟ್ಟಣಿಗೆಯಲ್ಲಿಡಬಹುದಾದ ಬ್ಯಾಗುಗಳಲ್ಲಿ ಇರಬಹುದಾದ ಹೆಚ್ಚುವರಿ ಬ್ಯಾಟರಿಗಳನ್ನು ನಿರ್ಬಂಧಿಸಲು ಯೋಚಿಸುತ್ತಿದ್ದಾರೆ.

ಬ್ಯಾಟರಿಗಳ ಬಗ್ಗೆ ಏಕಿಷ್ಟು ’ವರಿ’ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಕಳೆದ ವರ್ಷವೊಂದರಲ್ಲಿಯೇ ಅಮೆರಿಕದಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಬ್ಯಾಟರಿ ಬಿಸಿಯಾಗುವ ತಾಂತ್ರಿಕ ದೋಷಗಳ ಕಾರಣಕ್ಕಾಗಿ ಉತ್ಪಾದಕರು ಗ್ರಾಹಕರಿಂದ ಹಿಂತೆಗೆದುಕೊಂಡ ಲೀಥಿಯಂ-ಅಯಾನ್ ಬ್ಯಾಟರಿಗಳ ಸಂಖ್ಯೆ ನಲವತ್ತು ಲಕ್ಷ! ಇದೀಗ ಖಾಸಗಿ ಹಾಗೂ ಸರ್ವಸ್ವತಂತ್ರ ಪ್ರಯೋಗಶಾಲೆಗಳು ಮಾರುಕಟ್ಟೆಗೆ ಬರುವ ಪ್ರತಿಯೊಂದು ಬಗೆಯ ಬ್ಯಾಟರಿಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡುತ್ತಿವೆ. ಇಂಥ ಪ್ರಯೋಗಶಾಲೆಗಳಿಂದ ದೃಢೀಕರಣ ಪಡೆದ ಬ್ಯಾಟರಿಗಳನ್ನು ಮಾತ್ರ ಬಳಸಬೇಕೆಂಬ ಕಟ್ಟಳೆ ಜಾರಿಗೆ ಬಂದರೆ ಅಪಘಾತಗಳನ್ನು ಸಾಧ್ಯವಾದ ಮಟ್ಟಿಗೆ ತಡೆಯಬಹುದು. ನಮ್ಮ ಹೈಟೆಕ್ ಜನ ಜೀವನದ ಒಂದು ಭಾಗವೇ ಆಗಿಬಿಟ್ಟಿರುವ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅವುಗಳಿಗೇ ತಳಕು ಹಾಕಿಕೊಂಡಿರುವ ಲೀಥಿಯಂ-ಅಯಾನ್ ಬ್ಯಾಟರಿಗಳಿಲ್ಲದೆಯೆ ದಿನ ದೂಡುವ ಹಾಗಿಲ್ಲ. ಇಂಥ ‘ಅನಿವಾರ್ಯ ಪೀಡೆ’ಯ ಬಗ್ಗೆ ತಿಳುವಳಿಕೆ ನೀಡುವ ಕಾರ್ಯ ಆರಂಭವಾಗಬೇಕಿದೆ. ಅವುಗಳ ಸುರಕ್ಷ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಯ ಪಡಿಸುವ ಜವಾಬ್ದಾರಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಕರದ್ದು.

ಈ ಲೇಖನ ಬರೆಯಲು ಪ್ರೇರಣೆ, ಮಿತ್ರರೊಬ್ಬರು ತಮ್ಮ ಮೊಬೈಲ್ ಫೋನಿನ ಲೀಥಿಯಂ-ಅಯಾನ್ ಬ್ಯಾಟರಿಯಿಂದ ಪಡುತ್ತಿರುವ ಬವಣೆ. ಮೊಬೈಲ್ ಟೆಲಿಫೋನ್ ಸಂಪರ್ಕ ನೀಡುವ ಕಂಪನಿ ಬಹುಶಃ ಭಾರತದಲ್ಲಿಯೇ ಎರಡನೆಯ ಅತಿ ದೊಡ್ಡಾದು. ಮೊಬೈಲ್ ಸಾಧನ ಹಗೂ ಸೇವೆ ಎರಡಕ್ಕೂ ತಳಕು ಹಾಕಿಕೊಂಡ ಯೋಜನೆಯೊಂದನ್ನು ಮಿತ್ರ ಆಯ್ದುಕೊಂಡಿದ್ದ. ಫೋನ್ ತಯಾರಕ ಕಂಪನಿ ಹಾಗೂ ಅದರೊಳಗಣ ಬ್ಯಾಟರಿ ಕಂಪನಿ ಜಗತ್ಪ್ರಸಿದ್ಧವಾದವು. ಫೋನ್ ಕೊಂಡ ಎರಡೇ ತಿಂಗಳಲ್ಲಿ ಚಾರ್ಜ್ ಮಾಡುತ್ತಿದ್ದಾಗ ಬ್ಯಾತರಿ (ಜತೆಗೆ ಫೋನ್) ವಿಪರೀತ ಬಿಸಿಯಾಗಿ, ಫೋನ್ ಕೆಲಸ ಮಾಡುವುದು ನಿಂತಿತು. ಮೊಬೈಲ್ ಫೋನ್ ಕಂಪನಿ ತನ್ನ ಬೆರಳನ್ನು ಫೋನ್ ತಯಾರಿಕಾ ಕಂಪನಿಯ ಬಾಗಿಲಿನತ್ತ ತೋರಿಸಿತು. ಫೋನ್ ಕಂಪನಿ ಮೊದಲಿಗೆ ಅದು ಫೋನಿನೊಳಗಿನ ಸಾಫ್ಟ್‍ವೇರ್ ತೊಂದರೆ ಎಂದು ನಿರ್ಧರಿಸಿ, ಒಳಗಿರುವ ಮಾಹಿತಿಯನ್ನೆಲ್ಲಾ ಅಳಿಸಿ, ಪುನಃ ಲೋಡ್ ಮಾಡಿತು. ಮತ್ತೆ ಒಂದು ತಿಂಗಳು ಕಳೆದ ನಂತರ ತೊಂದರೆ ಮರುಕಳಿಸಿದರೆ, ನಿಮ್ಮ ಮನೆಯ ವಿದ್ಯುತ್ ಸಂಪರ್ಕ ಸರಿ ಇಲ್ಲದಿರಬಹುದು, ನೀವು ತಪ್ಪು ಚಾರ್ಜರ್ ಅನ್ನು ಬಳಸುತ್ತಿರಬಹುದು, ನಿಮ್ಮ ಮಕ್ಕಳು ಫೋನ್ ಎತ್ತಿ ಹಾಕಿ ಸರ್ಕ್ಯೂಟ್‍ಗೆ ಧಕ್ಕೆ ತಂದಿರಬಹುದು ......... ಎಂಬ ನೂರೆಂಟು ನೆಪದೊಡನೆ, ಮತ್ತೆ ಎರಡು ದಿನಗಳ ತಮ್ಮಲ್ಲಿಟ್ಟುಕೊಂಡು ಇಡೀ ಸರ್ಕ್ಯೂಟ್ ಬೋರ್ಡ್ (ವಿದ್ಯುನ್ಮಾನ ಮಂಡಲ) ಅನ್ನು ಬದಲಿಸಿಕೊಟ್ಟಿತು. ತಿಂಗಳು ಕಳೆಯುವುದರೊಳಗೆ ಮತ್ತದೇ ಬಿಸಿ, ಮತ್ತದೇ ಫೋನ್ ಬಂದ್,.. ಈ ಬಾರಿ ’ಸರ್, ಇದು ವೈರಸ್ ತೊಂದರೆ ಇರಬಹುದು’ ಎಂದಿದ್ದಾರೆ ಗ್ರಾಹಕ ಸೇವಾ ಮುಖ್ಯಸ್ಥರು. ಆತ ಅದೆಷ್ಟು ಬಾರಿ ಗೋಗರೆದರೂ, ಬ್ಯಾಟರಿಯನ್ನು ಕೈಯ್ಯಿಂದಲೂ ಮುಟ್ಟದೆಯೆ, ಅದನ್ನು ಪರಿಶೀಲನೆಗೆ ತೆಗೆದುಕೊಳ್ಳದೆಯೆ, ಸಮಜಾಯಿಶಿ ನೀಡುತ್ತಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಅಗ್ಗಕ್ಕೆ ಸಿಗುವ ನಕಲಿ ಬ್ಯಾಟರಿಗಳಿಂದ ದೂರವಿರುವುದು ಕ್ಷೇಮ. ಸುಮ್ಮನೆ ಅವು ಬಿಸಿಯಾಗುತ್ತಿದ್ದರೆ, ಥಟ್ಟನೆ ಅವುಗಳ ಯೋಗಕ್ಷೇಮ ತಪಾಸಣೆ ಮಾಡಿಸುವುದು ಉತ್ತಮ. (12-03-2007)

No comments: