Saturday, March 24, 2007

ಸ್ಟೀರಿಂಗ್ ಹಾಗೂ ಎಂಜಿನ್ ನಡುವೆ ಇರಲಿ ಈ ‘ಮದ್ಯ’ವರ್ತಿ!

ಮಾರ್ಚ್ ತಿಂಗಳು ಹತ್ತಿರ ಬಂದಂತೆ ಊರಿನ ರಸ್ತೆಗಳೆಲ್ಲವೂ ನಳನಳಿಸುತ್ತವೆ. ಊರು ಎಂದೊಡನೆ ಬೆಂಗಳೂರು ಎಂದು ಓದಿಕೊಳ್ಳಿ. ರಸ್ತೆಗಳೆಲ್ಲವೂ ಎಂಬುದನ್ನು ದೊಡ್ಡ ಮನುಷ್ಯರ ಕಾರುಗಳು ಓಡಾಡುವ ರಸ್ತೆಗಳು ಎಂದು ಅರ್ಥೈಸಿಕೊಳ್ಳಿ. ಜಗತ್ತಿನ ಪ್ರಮುಖ ದೇಶಗಳಿಗೆ ಸಂಪರ್ಕ ಕಲ್ಪಿಸುವ ಮಾಹಿತಿ ಹೆದ್ದಾರಿ ಹರಿಯುವುದೇ ನಮ್ಮ ಬೆಂಗಳೂರಿನಲ್ಲಿ. ಇದೀಗ ತಂತ್ರಜ್ಞಾನ ಅದೆಷ್ಟು ಅಭಿವೃದ್ಧಿಯಾಗಿದೆಯೆಂದರೆ ರಾತ್ರೋ ರಾತ್ರಿ ಕಿಲೋಮೀಟರ್‌ಗಟ್ಟಲೆ ರಸ್ತೆಗಳಿಗೆ ಟಾರ್ ಹಚ್ಚಬಹುದು, ಸಪಾಟು ಮಾಡಿಬಿಡಬಹುದು. ಹಿಂದಿನ ದಿನ ಸಂಜೆ ಸೊಂಟ ಉಳುಕಿಸಿದ ಹಳ್ಳ-ಕೊಳ್ಳಗಳು ಮುಂಜಾನೆ ಮಂಜು ಸುರಿಯುವ ಹೊತ್ತಿಗೆ ಕಡುಗಪ್ಪಿನ ಡಾಂಬರು ಜಲ್ಲಿ ಕಲ್ಲು - ಮರಳುಗಳನ್ನು ತುಂಬಿಸಿಕೊಂಡು ವಾಹನಗಳ ನಾಗಾಲೋಟಕ್ಕೆ ಅನುವು ಮಾಡಿಕೊಡುತ್ತವೆ. ರಸ್ತೆ ಚೆನ್ನಾಗಿದ್ದರೇ ಹೆಚ್ಚು ಅಪಾಯ ಎಂಬುದು ಜಾಗತಿಕ ಸತ್ಯ. ಮುಂದಿನ ಮಾರ್ಗ ಸುರಕ್ಷವಾಗಿದೆ ಎಂಬ ಕಲ್ಪನೆ ಬಂದ ಕೂಡಲೇ ಮನಸ್ಸಿನೊಳಗಿನ ಮಂಗ ಆಟ ಶುರು ಹಚ್ಚಿಕೊಳ್ಳುತ್ತದೆ. ಅಮೆರಿಕದಂಥ ಅಮೆರಿಕದಲ್ಲಿಯೇ ಬ್ರೇಕ್ ಒತ್ತಿದೊಡನೆಯೇ ಕಿಂಚಿತ್ತೂ ಜಾರದೆ ಹಿಡಿಕೊಳ್ಳುವ ವ್ಯವಸ್ಥೆ ಅಳವಡಿಕೆಯಾದ ನಂತರ ಅಪಘಾತಗಳ ಸಂಖ್ಯೆ ಹೆಚ್ಚಾದವು. ಇನ್ನು ವೇಗದ ಚಾಲನೆಯಲ್ಲಿ ಅಪಘಾತವಾದೊಡನೆಯೆ ನಿಮ್ಮ ಎದೆಯನ್ನು ಸ್ಟೀರಿಂಗ್ ಚಕ್ರದ ಹೊಡೆತದಿಂದ ತಪ್ಪಿಸಲೆಂದು ಸ್ವಯಂಚಾಲಿತವಾಗಿ ಗಾಳಿ ಚೀಲ ಉಬ್ಬಿ ಬರುವ ವ್ಯವಸ್ಥೆ ಇರುವ ಕಾರುಗಳೂ ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತವೆ ಎಂದು ಅಮೆರಿಕದ ರಸ್ತೆ ಸುರಕ್ಷಾ ಸಂಘಟನೆ ವರದಿ ಮಾಡಿದೆ. ರಸ್ತೆ ಸಂಚಾರದ ಬಗ್ಗೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದರೂ ಮದ್ಯ ಸೇವಿಸಿ ಯದ್ವಾತದ್ವಾ ವಾಹನ ಓಡಿಸುವವರ ಸಂಖ್ಯೆ ಅಲ್ಲಿ ಹೆಚ್ಚಿದೆ.

ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಬೆಂಗಳೂರಿನಲ್ಲಿ ಮೂವರು ಅಮಾಯಕರ ಪ್ರಾಣ ತೆಗೆದ ವೈದ್ಯ ದಂಪತಿಗಳ ಪುತ್ರನ ಬಗ್ಗೆ ನಿನ್ನೆಯ ಪತ್ರಿಕೆಗಳಲ್ಲಿ ಓದಿರುತ್ತೀರಿ. ನಿಮ್ಮೆಲ್ಲರ ಊಹೆಯಂತೆಯೇ ವಾಹನ ಚಲಿಸುವಾಗ ಆತ ಮದ್ಯ ಸೇವನೆ ಮಾಡಿದ್ದ ಎಂಬುದು ವಿಚಾರಣೆಯ ಸಮಯದಲ್ಲಿ ವರದಿಯಾಗಿದೆ. ‘ಮದ್ಯ ಸೇವಿಸಿ ವಾಹನ ಚಲಿಸಬೇಡಿ’ ಎಂಬ ಎಚ್ಚರಿಕೆಯ ಫಲಕಗಳನ್ನು ಪ್ರಮುಖ ರಸ್ತೆಗಳಲ್ಲಿ ಬಿತ್ತರಿಸಲಾಗಿದೆ. ಆಗಿಂದಾಗ್ಗೆ ರಸ್ತೆ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಪೊಲೀಸರು ಚಾಲಕರು ಮದ್ಯ ಸೇವಿಸಿದ್ದಾರೆಯೆ? ಎಂದು ತಪಾಸಣೆ ಮಾಡುತ್ತಿದ್ದಾರೆ. ತಪ್ಪಿತಸ್ಥರಿಗೆ ದೊಡ್ಡ ಮೊತ್ತದ ಜುಲ್ಮಾನೆಯನ್ನು ಹಾಕುತ್ತಿದ್ದಾರೆ. ಆದರೂ ಮದ್ಯ ಸೇವಿಸಿದ ಚಾಲಕರ ಹಾವಳಿ ತಪ್ಪಿಲ್ಲ. ದಿನದಿಂದ ದಿನಕ್ಕೆ ಇವರ ಹಾವಳಿ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಾಹನಗಳನ್ನು ಮದ್ಯ ಸೇವಿಸಿದ ನಂತರ ಚಲಿಸುವವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಕ್ಕಳು ಇಂಥ ಅಪರಾಧಗಳನ್ನು ಮಾಡಿ ಮತ್ತೊಬ್ಬರ ಪ್ರಾಣ ತೆಗೆಯುವುದು ಅಥವಾ ತಮ್ಮದೇ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಅಮೆರಿಕದಲ್ಲಿನ ಸಂಘಟನೆಯೊಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. `Mothers Against Drunk Driving - MADD (www.madd.org)' ಎಂಬ ಈ ಸ್ವಯಂಸೇವಾ ಸಂಸ್ಥೆ ಕಳೆದ ಇಪ್ಪತ್ತೇಳು ವರ್ಷಗಳಿಂದಲೂ ಮದ್ಯ ಸೇವಿತ ವಾಹನ ಚಾಲನೆಯ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಸಂಸ್ಥೆಯ ಪದಾಧಿಕಾರಿಗಳಲ್ಲಿ ಬಹುತೇಕ ಹೆಂಗಳೆಯರು ಮದ್ಯ ಸೇವನೆಯಿಂದಾದ ರಸ್ತೆ ಅಪಘಾತಗಳಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ.


‘ಮ್ಯಾಡ್ಡ್’ ಬಿಡುಗಡೆ ಮಾಡಿರುವ ಅಂಕೆ-ಅಂಶದ ಪ್ರಕಾರ ಅಮೆರಿಕದಲ್ಲಿ ಕನಿಷ್ಠವೆಂದರೂ ಹದಿಮೂರು ಸಹಸ್ರ ಮಂದಿ ಮದ್ಯ ಸೇವಿತ ಚಾಲಕರಿಂದಾದ ರಸ್ತೆ ಅಪಘಾತಗಳಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳೂ ಒಂದು ಸಹಸ್ರಕ್ಕೂ ಹೆಚ್ಚು ಕುಟುಂಬಗಳು ಇದರಿಂದ ‘ಪುತ್ರ(ತ್ರಿ) ಶೋಕ’ ಅನುಭವಿಸುವಂತಾಗುತ್ತಿದೆ. ಕಾಯಿದೆ ಕಟ್ಟಳೆಗಳು ಅದೆಷ್ಟು ಕಟುವಾಗಿದ್ದರೂ, ತಪಾಸಣೆಗಳು ಅದೆಷ್ಟು ನಿಯಮಿತವಾಗಿದ್ದರೂ ಮದ್ಯ ಸೇವಿತ ವ್ಯಕ್ತಿಗಳು ವಾಹನ ಚಲಿಸದಂತೆ ನಿರ್ಬಂಧಿಸಲಾಗುತ್ತಿಲ್ಲ. ‘ಮ್ಯಾಡ್’ ಸಂಸ್ಥೆಯು ಈ ಸಮಸ್ಯೆಗೆ ತಂತ್ರಜ್ಞಾನ ಪರಿಹಾರಗಳನ್ನು ಸೂಚಿಸಲು ಕೆಲ ವರ್ಷಗಳ ಹಿಂದೆ ಅಮೆರಿಕದಲ್ಲಿನ ಕಾರು ಕಾರ್ಖಾನೆಗಳನ್ನು ಕೇಳಿಕೊಂಡಿತ್ತು. ಇತ್ತೀಚಿನ ವರದಿಯಂತೆ, ವಾಹನ ಚಾಲಕ ಅಳತೆ ಮೀರಿ ಮದ್ಯ ಸೇವಿಸಿದ್ದರೆ ಆತ ಕುಳಿತ ಕಾರು ಕೀಲಿ ತಿರುಗಿಸಿದರೂ ‘ಸ್ಟಾರ್ಟ್’ ಆಗದಿರುವಂಥ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಅತ್ಯಂತ ನಿಖರವಾಗಿ ಚಾಲಕನ ದೇಹದಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು ಗುರುತಿಸುವ, ವಾಹನದೊಳಗೇ ಅಳವಡಿಸಬಹುದಾದ ಸಂವೇದಿ ವ್ಯವಸ್ಥೆಗಳು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ಪೊಲೀಸರು ರಸ್ತೆಯಲ್ಲಿ ತಡೆಹಿಡಿದ ಚಾಲಕನ ಉಸಿರಿನ ವಾಸನೆಯನ್ನು ಗ್ರಹಿಸುವ ಮೂಲಕ ಆಲ್ಕೋಹಾಲ್ ಸೇವನೆಯನ್ನು ಖಚಿತ ಪಡಿಸಿಕೊಳ್ಳುವುದು ನಿಮಗೆ ಗೊತ್ತು. ಇದೇ ರೀತಿ ಹೊಸತಾಗಿ ನಿರ್ಮಿತವಾದ ಕಾರುಗಳಲ್ಲಿ ‘ಸ್ಟಾರ್ಟ್’ ಮಾಡುವ ಮೊದಲು ಕೊಳವೆಯೊಂದರಲ್ಲಿ ಬಾಯಿಂದ ಉಸಿರು ಬಿಡಬೇಕು. ಅದರೊಳಗಿನ ಸಂವೇದಿಯು ರಕ್ತದಲ್ಲಿನ ಆಲ್ಕೋಹಾಲ್ ಅಂಶದ ಪ್ರಮಾಣವನ್ನು ಅಳತೆ ಮಾಡುತ್ತದೆ. ಈ ಪ್ರಮಾಣ ಮೀರಿಲ್ಲದಿದ್ದರೆ ಮಾತ್ರ ‘ಸ್ಟಾರ್ಟ್’ ಮಾಡಲು ಅನುಮತಿ ನೀಡುತ್ತದೆ. ಈ ಬಗೆಯ ‘ಕೀಲಿ ವ್ಯವಸ್ಥೆ’ಯನ್ನು ತಮ್ಮ ಕಾರಿಗೆ ಅಳವಡಿಸಿಕೊಳ್ಳುವುದು, ಆಲ್ಕೋಹಾಲ್ ಸೇವಿಸಿ ಕಾರು ಚಾಲನೆ ಮಾಡಿ ಒಮ್ಮೆ ಪೊಲೀಸರ ಹತ್ತಿರ ಸಿಕ್ಕಿ ಹಾಕಿಕೊಂಡವರಿಗೆ ಅಮೆರಿಕದಲ್ಲಿನ ಕೆಲ ರಾಜ್ಯಗಳಲ್ಲಿ ಕಡ್ಡಾಯವಾಗಿದೆ. ಆದರೆ ಒಮ್ಮೆಯೂ ಆಲ್ಕೋಹಾಲ್ ಸೇವಿತ ಕಾರ್ ಚಾಲನೆಯ ಕೇಸುಗಳಲ್ಲಿ ಸಿಲುಕಿಕೊಂಡಿರದ ವ್ಯಕ್ತಿಗಳು ಇಂಥ ಅಪರಾಧಗಳನ್ನು ಮಾಡದಿರುವಂತೆ ನಿರ್ಬಂಧಿಸುವುದು ಹೇಗೆ? ಎಂಬುದು ಪ್ರಶ್ನೆ.


ಮದ್ಯ ಸೇವಿತ ಚಾಲಕರಲ್ಲಿನ ವಿಶಿಷ್ಟ ದೈಹಿಕ ಚಲನೆಗಳನ್ನು ಸೂಕ್ಷ್ಮವಾಗಿ ಗಮನಿಸಬಲ್ಲ ಸಂವೇದಿಗಳನ್ನು ಅಳವಡಿಸಿದರೆ, ಡ್ರೈವ್ ಮಾಡಲು ಹೊರಟ ವ್ಯಕ್ತಿ ಸ್ಥಿಮಿತದಲ್ಲಿರುವನೆ? ಎಂದು ಕಂಡು ಹಿಡಿಯಬಹುದು. ಉದಾಹರಣೆಗೆ, ಸ್ಟೀರಿಂಗ್ ಚಕ್ರದ ನಿರ್ದಿಷ್ಟ ಸ್ಥಳಗಳಲ್ಲಿ ಅಳವಡಿಸಬಹುದಾದ ಸಂವೇದಿಗಳು ಅಂಗೈನ ಬೆವರು, ಬೆರಳುಗಳ ನಡುಕಗಳನ್ನು ನಿಖರವಾಗಿ ಅಳೆದು, ವ್ಯಕ್ತಿಯೊಬ್ಬ ಎಂದಿನಂತಿಲ್ಲ ಎಂಬ ನಿರ್ಧಾರಕ್ಕೆ ಬರಬಹುದು. ಕಣ್ಣು-ರೆಪ್ಪೆಗಳ ವಿಪರೀತ ಮಿಡಿತ ಹಾಗೂ ಕೈ-ಕಾಲುಗಳ ತಾಳ-ಮೇಳವಿಲ್ಲದ ಚಲನೆಯನ್ನು ಸಹಾ ಕೆಲ ಸಂವೇದಿಗಳು ಗುರುತಿಸಬಹುದು. ಕಾರ್ ಏರಿದೊಡನೆಯೆ ಚರ್ಮಕ್ಕೆ ಬೆಳಕಿನ ಕಿರಣವನ್ನು ಥಟ್ಟನೆ ಹಾಯಿಸಿ, ರಕ್ತದೊಳಗೆ ಬೆರೆತ ಆಲ್ಕೋಹಾಲ್ ಪ್ರಮಾಣ ಎಷ್ಟಿದೆಯೆಂದು ತಿಳಿದುಕೊಳ್ಳಬಹುದು. ಇಂಥ ಅನೇಕ ಸಂವೇದಿಗಳು ಕಳುಹಿಸಿದ ಮಾಹಿತಿಗಳನ್ನು ಒಟ್ಟುಗೂಡಿಸಿ, ಕಾರಿನ ನಿಯಂತ್ರಣ ಕಂಪ್ಯೂಟರ್ ಚಾಲಕನು ಅಳತೆ ಮೀರಿ ಮದ್ಯ ಸೇವಿಸಿದ್ದಾನೆಯೆ? ಎಂದು ಲೆಕ್ಕ ಹಾಕಬಹುದು. ಆತ ಹರಸಾಹಸ ಪಟ್ಟರೂ ವಾಹನ ‘ಸ್ಟಾರ್ಟ್’ ಆಗದಂತೆ ನೋಡಿಕೊಳ್ಳಬಹುದು.

ಜಗತ್ತಿನ ಎರಡನೆಯ ಅತಿ ದೊಡ್ಡ ಕಾರ್ ನಿರ್ಮಾಣ ಸಂಸ್ಥೆ ‘ಟಯೋಟಾ’ ಈ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದೆ. ಅತ್ಯಂತ ಸೂಕ್ಷ್ಮ ಪ್ರಮಾಣದ ಬೆವರನ್ನು ರಾಸಾಯನಿಕವಾಗಿ ವಿಶ್ಲೇಷಿಸಿ ವ್ಯಕ್ತಿಯ ದೇಹದಲ್ಲಿ ಸೇರಿರಬಹುದಾದ ಆಲ್ಕೋಹಾಲ್ ಪ್ರಮಾಣವನ್ನು ನಿಖರವಾಗಿ ಗುರುತಿಸಬಲ್ಲ ಸಂವೇದಿಯನ್ನು ಅದು ಬಳಸಿಕೊಳ್ಳಲು ನಿರ್ಧರಿಸಿದೆ. ಅಕಸ್ಮಾತ್, ಈ ಮಾಪನದಲ್ಲಿ ಚಾಲಕನು ‘ಪಾಸ್’ ಆಗಿ ವಾಹನ ಚಲಿಸಲು ಪ್ರಾರಂಭಿಸಿದನೆನ್ನಿ. ಆತನ ಕಣ್ನೋಟ ತೂಗಾಡುತ್ತಿದ್ದರೆ, ಸ್ಟೀರಿಂಗ್ ತಿರುಗಾಟ ಯದ್ವಾ-ತದ್ವಾ ಆಗಿದ್ದರೆ ಇತರ ಸಂವೇದಿಗಳು ಅದನ್ನು ಗುರುತಿಸಿ, ವೇಗವನ್ನು ಕ್ರಮೇಣ ತಗ್ಗಿಸಿ ವಾಹನವನ್ನು ನಿಧಾನವಾಗಿ ನಿಲ್ಲಿಸುವಂತೆ ಎಂಜಿನ್‍ಗೆ ಆದೇಶ ಹೊರಡಿಸುತ್ತವೆ. ಇದೇ ಸಮಯದಲ್ಲಿ ಬ್ರೇಕ್ ವ್ಯವಸ್ಥೆಗೂ ನಿರ್ದಿಷ್ಟ ಸೂಚನೆಗಳು ಹೊರಡುತ್ತವೆ. ಇತ್ತ ಜಪಾನ್ ದೇಶದಲ್ಲೂ ಮದ್ಯ ಸೇವಿತ ಚಾಲಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲಿನ ಜನಪ್ರಿಯ ಕಾರ್ ನಿರ್ಮಾಣ ಕಂಪನಿ ‘ನಿಸ್ಸಾನ್’ ಈಗಾಗಲೇ ಉಸಿರಿನ ವಿಶ್ಲೇಷಣೆಯ ಮೂಲಕ ದೇಹದಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು ನಿರ್ಧರಿಸುವ ಸಂವೇದಿಗಳನ್ನು ತನ್ನ ಕಾರುಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸುತ್ತಿದೆ. ಎಂಜಿನ್ ನಿಯಂತ್ರಣ ವ್ಯವಸ್ಥೆಯಲ್ಲಿನ ಕಂಪ್ಯೂಟರ್‌ಗೆ ಆಲ್ಕೋಹಾಲ್ ಸೇವನೆ ಅಳತೆ ಮೀರಿದೆ ಎಂದು ಮನವರಿಕೆಯಾದರೆ, ಕಾರ್ ಚಾಲನೆಯಾಗದಂತೆ ಅದು ಆದೇಶ ಕೊಡುತ್ತದೆ.

‘ಮ್ಯಾಡ್’ ಮತ್ತು ಅದರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ನೂರಕ್ಕೂ ಹೆಚ್ಚಿನ ಸೇವಾ ಸಂಸ್ಥೆಗಳು ಇಡೀ ಅಮೆರಿಕವನ್ನು ಆಲ್ಕೋಹಾಲ್ ಸೇವಿತ ವಾಹನ ಚಾಲಕರಿಲ್ಲದ ದೇಶವನ್ನಾಗಿಸುವ ಪ್ರಯತ್ನದಲ್ಲಿವೆ. ತಮ್ಮಂತೆಯೇ, ಮದ್ಯ ಸೇವಿತ ಚಾಲಕರು ಮಾಡಿದ ಅಪಘಾತಗಳಿಂದ ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ‘ಮ್ಯಾಡ್’ ಪದಾಧಿಕಾರಿಗಳು ಒಗ್ಗೂಡಿಸುತ್ತಿದ್ದಾರೆ. ಇದರಲ್ಲಿ ಪ್ರಾಣ ಕಳೆದುಕೊಂಡ ಚಾಲಕರ ಬಂಧುಗಳೂ ಭಾಗಿಯಾಗಿದ್ದಾರೆ. ತಮ್ಮೆಲ್ಲ ಅನುಭವಗಳನ್ನು ದಾಖಲಿಸಿ, ಪೊಲೀಸರ ಮೂಲಕ ಸಾರ್ವಜನಿಕ ಪ್ರಕಟನೆಗಳನ್ನು ಹೊರಡಿಸುತ್ತಿದ್ದಾರೆ. ಅಮೆರಿಕ ದೇಶದ ಎಲ್ಲ ಐವತ್ತು ರಾಜ್ಯಗಳಲ್ಲೂ ವರ್ಷಕ್ಕೆರಡು ಬಾರಿ ಕಟ್ಟುನಿಟ್ಟಿನ ತಪಾಸಣೆ ನಡೆಸುವುದರ ಬಗ್ಗೆ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂಥ ಅಪರಾಧಗಳಲ್ಲಿ ಒಮ್ಮೆ ತಪ್ಪಿತಸ್ಥನಾದವನು ಮತ್ತೆ ಸಿಕ್ಕಿಕೊಂಡರೆ, ಒಂದಷ್ಟು ದಿನ ಆತ ವಾಹನ ಚಾಲನೆ ಮಾಡದಂತೆ ಪರವಾನಗಿಯನ್ನು ಕಸಿದುಕೊಳ್ಳುವ ಕಟ್ಟಳೆಯೂ ಜಾರಿಯಾಗುತ್ತಿದೆ. ಮದ್ಯ ಸೇವಿತ ವ್ಯಕ್ತಿ ಚಾಲನೆ ನಡೆಸಲಾಗದಂತೆ ನಿರ್ಬಂಧಿಸುವ ವ್ಯವಸ್ಥೆಯನ್ನು ಹೊಸ ಕಾರುಗಳ ನಿರ್ಮಾಣ ಹಂತದಲ್ಲಿಯೇ ಅಳವಡಿಸುವ ಬಗ್ಗೆ ಕಾಯಿದೆ ರೂಪಿಸುವ ಬಗ್ಗೆ ಅಮೆರಿಕ ಸರ್ಕಾರ ಚಿಂತಿಸುತ್ತಿದೆ. ಅಳತೆ ಮೀರದಂತೆ ಮದ್ಯ ಸೇವಿಸಿದ ವ್ಯಕ್ತಿಗಳಿಗೆ ಇರಿಸು-ಮುರಿಸಾಗದಂತೆ ಆಲ್ಕೋಹಾಲ್ ಪ್ರಮಾಣವನ್ನು ನಿಖರವಾಗಿ ಗುರುತಿಸಬಲ್ಲ ಸಂವೇದಿಗಳ ನಿರ್ಮಾಣ ತುಟ್ಟಿಯ ಬಾಬ್ತು. ಈ ಬಗೆಯ ನಿಯಂತ್ರಣ ವ್ಯವಸ್ಥೆಯನ್ನು ಅಗ್ಗದ ದರದಲ್ಲಿ ರೂಪಿಸುವ ಸಲುವಾಗಿ ಸರ್ಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡುವಂತೆ ‘ಮ್ಯಾಡ್’ ಒತ್ತಾಯಿಸಿದೆ. ‘ಟಯೋಟಾ’ ಕಂಪನಿಯ ಪ್ರಕಟನೆಯಂತೆ ಮುಂದಿನ ಎರಡು ವರ್ಷಗಳಲ್ಲಿ ಅದು ಹೊರತರುವ ಎಲ್ಲ ಕಾರುಗಳಲ್ಲೂ ಈ ವ್ಯವಸ್ಥೆ ಅಳವಡಿಸಲಾಗಿರುತ್ತದೆ. ಪೊಲೀಸರು, ಸಾರಿಗೆ ಇಲಾಖೆ, ವಿಮಾ ಕಂಪನಿಗಳು ಜತೆಗೆ ‘ಮ್ಯಾಡ್’ನಂಥ ಸ್ವಯಂಸೇವಾ ಸಂಸ್ಥೆಗಳ ಹಕ್ಕೊತ್ತಾಯಕ್ಕೆ ಮಣಿದಿರುವ ಅಮೆರಿಕದ ಬಹುತೇಕ ಕಾರ್ ಕಂಪನಿಗಳು ಇಂಥ ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಲು ಒಪ್ಪಿಕೊಂಡಿವೆ.

ವಾಹನಗಳ ಸಂಖ್ಯೆಯ ಜತೆಗೆ, ಮದ್ಯ ಸೇವಿಸಿ ವಾಹನ ಚಲಿಸುವ ಚಾಲಕರ ಸಂಖ್ಯೆ ಹೆಚ್ಚುತ್ತಿರುವ ನಮ್ಮ ದೇಶದ ಆಡಳಿತ ವ್ಯವಸ್ಥೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮೂರ ‘ಪ್ರಾಣಿ ದಯಾ ಸಂಸ್ಥೆಗಳು’ ತಮ್ಮ ವ್ಯಾಪ್ತಿಯಲ್ಲಿ ‘ಮಾನವ ಪ್ರಾಣಿಗಳನ್ನೂ’ ಸೇರಿಸಿಕೊಂಡರೆ ಕೇವಲ ನಾಯಿ ಕಡಿತದಿಂದ ಮಾತ್ರವಲ್ಲ, ಕಾರ್ ಹೊಡೆತದಿಂದಲೂ ತಪ್ಪಿಸಿಕೊಳ್ಳಬಹುದು. ಈ ಕರುಣಾಳುಗಳು ಬೀಡಾಡಿ ನಾಯಿಗಳ ಯೋಗಕ್ಷೇಮ ಕಾರ್ಯವನ್ನು ಸರ್ಕಾರಕ್ಕೆ ವರ್ಗಾಯಿಸಿ, ಪಾದಚಾರಿಗಳ ವಿರುದ್ಧ ನಡೆಯುವ ಕ್ರೌರ್ಯವನ್ನು ತಪ್ಪಿಸುವ ಸಂಘಟನೆಗಳ ನೇತೃತ್ವ ವಹಿಸಿಕೊಳ್ಳಲಿ. (o5-03-2007)

No comments: