Saturday, March 24, 2007

ಗಣನೆಗೆ ಎಲ್ಲೆ, ಎಲ್ಲಿದೆ ಬಲ್ಲೆ, ‘ಇಂಟೆಲ್’ನಲ್ಲೆ?

ತಾವು ಇಂಟರ್‌ನೆಟ್‍ನಲ್ಲಿ ಕಂಡ ಜೋಕ್ ಒಂದನ್ನು ಮೊನ್ನೆ ಗೆಳೆಯರೊಬ್ಬರು ನನ್ನ ಮೊಬೈಲ್ ಫೋನಿಗೆ ರವಾನಿಸಿದ್ದರು. ‘ಕಂಪ್ಯೂಟರ್ ಕೊಳ್ಳಲು ಅತ್ಯಂತ ಪ್ರಶಸ್ತ ದಿನ ಯಾವುದು? ...... ನೀವು ಸಾಯುವ ಮುನ್ನಾ ದಿನ. ..... ಏಕೆಂದರೆ ಇನ್ನೊಂದು ದಿನ ಕಾದಿದ್ದರೆ ಇನ್ನೂ ಅಗ್ಗದ ಬೆಲೆಗೆ ಶಕ್ತಿಶಾಲಿ ಕಂಪ್ಯೂಟರ್ ಸಿಗುತ್ತಿತ್ತು ಎಂದು ಪೇಚಾಡಿಕೊಳ್ಳುವ ಅವಕಾಶ ನಿಮಗಿರುವುದಿಲ್ಲ’. ‘ಹೊಸ ಸೀಸೆಯಲ್ಲಿನ ಹಳೆಯ ಮದ್ಯದಷ್ಟೇ ರುಚಿಯಾಗಿದೆ ನಿಮ್ಮ ಜೋಕ್’ ಎಂಬ ಪ್ರಶಂಸೆಯೊಡನೆ ‘ಸಾಯುವ ಮುನ್ನಾ ದಿನದ ಬದಲು ಸಾಯುವ ಕೆಲವೇ ಗಂಟೆಗಳ ಮೊದಲು’ ಎಂಬ ಪುಟ್ಟದೊಂದು ತಿದ್ದುಪಡಿಯನ್ನು ಜೋಕಿಗೆ ಸೇರಿಸಿಕೊಳ್ಳಿ ಎಂಬ ಸಂದೇಶವನ್ನು ಮರು ರವಾನಿಸಿದೆ. ತೊಡೆಯ ಮೇಲಿಟ್ಟುಕೊಳ್ಳಬಲ್ಲ, ಎಲ್ಲೆಂದರಲ್ಲಿಗೆ ಕೊಂಡೊಯ್ಯಬಲ್ಲ ‘ಲ್ಯಾಪ್‍ಟಾಪ್ ಕಂಪ್ಯೂಟರ್’ ಖರೀದಿಯನ್ನು ಕಳೆದೊಂದು ವರ್ಷದಿಂದ ಮುಂದೂಡುತ್ತಲೇ ನಾನು ಹಣ ಉಳಿಸುತ್ತಾ ಬಂದಿದ್ದೇನೆ! ಮುಂದೊಂದು ದಿನ ನಮ್ಮ ಜೇಬಿನಲ್ಲಿಟ್ಟುಕೊಳ್ಳುವ ಮೊಬೈಲ್ ಫೋನ್ ಅಥವಾ ಅಂಗೈನಲ್ಲಿಟ್ಟುಕೊಂಡು ಸಣ್ಣ-ಪುಟ್ಟ ಲೆಕ್ಕಾಚಾರಗಳನ್ನು ಮಾಡಿಕೊಳ್ಳಬಹುದಾದ ಕಂಪ್ಯೂಟರ್ ಸಹಾ ದೊಡ್ಡ ದೊಡ್ಡ ಸಂಶೋಧನಾಲಯಗಳ ಕಂಪ್ಯೂಟರ್‌ಗಳಷ್ಟೇ ಶಕ್ತಿಶಾಲಿಯಾಗಬಹುದು ಎಂಬ ನಿರೀಕ್ಷೆ ನಮ್ಮೆಲ್ಲರದು. ನಿಜವಾದ ಅರ್ಥದಲ್ಲಿ ಅವು ನಮ್ಮ ಕೈಗೆ (ಅಥವಾ ಕಿಸೆಗೆ) ಎಟುಕಬಹುದೇನೊ?

ಸದ್ಯದ ತಂತ್ರಜ್ಞಾನ ಪ್ರಗತಿಯನ್ನು ಗಮನಿಸಿದರೆ, ಇಂಥ ಯಾವುದೇ ಅದ್ಭುತ ಕನಸುಗಳೂ ನನಸಾಗುವ ದಿನ ದೂರವಿಲ್ಲ. ಕಂಪ್ಯೂಟರ್ ಚಿಪ್‍ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ‘ಇಂಟೆಲ್’ ಕಂಪನಿಯು ಕಳೆದ ವಾರ ಹೊರಡಿಸಿರುವ ಪ್ರಕಟನೆ ಜಗತ್ತಿನ ಎಲ್ಲ ಗಣಕಾಸಕ್ತರ ಗಮನ ಸೆಳೆದಿದೆ. ಮೊಬೈಲ್ ಫೋನ್‍ಗಳಂಥ ಸಣ್ಣ ಪುಟ್ಟ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ‘ಟೆರಾ’ (Tera) ಗಣನೆಯಲ್ಲಿ ಕಾರ್ಯನಿರ್ವಹಿಸಬಲ್ಲ ಚಿಪ್ ಒಂದನ್ನು ಅದು ಅಭಿವೃದ್ಧಿಪಡಿಸಿದೆ. ನಿಮಗೆ ‘ದಶ ಲಕ್ಷ’ದ ‘ಮೆಗಾ’ ಗೊತ್ತು. ಅದರ ಸಹಸ್ರ ಪಟ್ಟಿನ ಅಂದರೆ ‘ಶತ ಕೋಟಿ’ಯ ‘ಗೀಗಾ’ ಸಹಾ ಗೊತ್ತು. ಅದರ ಸಹಸ್ರಪಟ್ಟಿನ ‘ಲಕ್ಷ ಕೋಟಿ’ ಅಂದರೆ ‘ಟ್ರಿಲಿಯನ್’ ಅಥವಾ ‘ಟೆರಾ’ ಅಳತೆಯನ್ನು ಊಹಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಒಂದರ ಮುಂದೆ ಹನ್ನೆರಡು ಸೊನ್ನೆಗಳನ್ನಿರಿಸಿದರೆ ಸಿಗುವ ಮೊತ್ತವಿದು. ಕಂಪ್ಯೂಟರ್‌ನಲ್ಲಿನ ದತ್ತಾಂಶ ಸಾಗಣೆ ವೇಗವನ್ನು ಹಿಂದೆ ‘ಎಂಬಿಪಿಎಸ್ - Mbps - Million bits per second' ಅಳತೆಯಲ್ಲಿ ಗುರುತಿಸಲಾಗುತ್ತಿತ್ತು. ಅಂತೆಯೇ ಸಂಸ್ಕರಣಾ ವೇಗವನ್ನು ‘ಎಂಫ್ಲಾಪ್ಸ್ - Mflops - Million floating operations per second'ನಲ್ಲಿ ಅಳೆಯಲಾಗುತ್ತಿತ್ತು. ಅತ್ಯಂತ ಹೆಚ್ಚು ಶಕ್ತಿಶಾಲಿ ಗಣಕಗಳಾದ ‘ಸೂಪರ್ ಕಂಪ್ಯೂಟರ್’ಗಳು ಸೆಕೆಂಡಿಗೆ ಹಲವಾರು ‘ಟೆರಾ’ ಬಿಟ್‍ಗಳನ್ನು ಸಾಗಿಸಬಲ್ಲವು. ಅಷ್ಟೇ ಮಟ್ಟದ ಬಿಟ್‍ಗಳನ್ನು ಸೆಕೆಂಡೊಂದಕ್ಕೆ ಸಂಸ್ಕರಣೆ ಮಾಡಬಲ್ಲವು. ಇಂಥ ‘ಸೂಪರ್’ ಶಕ್ತಿಶಾಲಿ ಚಿಪ್‍ನ ಅಗಲ ಕೇವಲ ಅಂಚೆ ಸ್ಟ್ಯಾಂಪಿನಷ್ಟು. ಹತ್ತು ವರ್ಷದ ಇಷ್ಟು ಕೆಲಸ ಮಾಡಿಸಿಕೊಳ್ಳಲು ಕನಿಷ್ಟವೆಂದರೂ ಎರಡು ಸಹಸ್ರ ಚದುರಡಿಯಷ್ಟು ಒಟ್ಟು ವಿಸ್ತೀರ್ಣದ ಹಲವಾರು ಚಿಪ್‍ಗಳು ಬೇಕಿದ್ದವು. ಕಾರ್ಯನಿರ್ವಹಣೆಗೆ ಒಂದು ಸಹಸ್ರ ಪಟ್ಟು ಹೆಚ್ಚು ವಿದ್ಯುತ್ ಬೇಕಾಗಿತ್ತು.

ನಿಮಗೆ ಗೊತ್ತಿರುವಂತೆ ಕಂಪ್ಯೂಟರ್ ಅರ್ಥ ಮಾಡಿಕೊಳ್ಳಬಲ್ಲ ಸಂಖ್ಯೆಗಳೆಂದರೆ ‘ಸೊನ್ನೆ’ ಮತ್ತು ‘ಒಂದು’ ಮಾತ್ರ. ಎಲೆಕ್ಟ್ರಾನಿಕ್ ಸರ್ಕ್ಯೂಟ್ ಅಥವಾ ವಿದ್ಯುನ್ಮಾನ ಮಂಡಲವೊಂದರಲ್ಲಿ ವಿದ್ಯುತ್ ಹರಿಯುತ್ತಿದ್ದರೆ ಅದು ‘ಒಂದು’ ಎಂದು ಸೂಚಿಸಿದರೆ, ವಿದ್ಯುತ್ ಹರಿಯುವುದು ನಿಂತಾಗ ಅದು ‘ಸೊನ್ನೆ’ಯನ್ನು ಸೂಚಿಸುತ್ತದೆ. ಕಂಪ್ಯೂಟರ್ ಭಾಷೆಯಲ್ಲಿ ದ್ವಿಮಾನ ಸಂಖ್ಯೆಗಳಾದ ‘ಸೊನ್ನೆ’ ಅಥವಾ ‘ಒಂದು’ ಅನ್ನು ‘ಬಿಟ್’ (BIT - Binary Digit) ಎಂದು ಗುರುತಿಸಲಾಗುತ್ತದೆ ಈ ಎರಡು ಸಂಖ್ಯಾ ಸಂಕೇತಗಳನ್ನು ಮಾತ್ರ ಅರ್ಥ ಮಾಡಿಕೊಳ್ಳಬಲ್ಲ ಕಂಪ್ಯೂಟರ್‌ಗಳಿಗೆ ನೀವು ಟೈಪ್ ಮಾಡಿದ ಪದ, ವಾಕ್ಯ ಮತ್ತು ಪರಿಚ್ಛೇದಗಳು ತಿಳಿಯುವ ಬಗೆ ಹೇಗೆ? ಕಂಪ್ಯೂಟರ್ ಬಳಕೆಯ ಆರಂಭದ ದಿನಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿನ ಪ್ರತಿಯೊಂದು ಅಕ್ಷರ, ಸಂಖ್ಯೆ ಮತ್ತು ಚಿಹ್ನೆಗಳಿಗೆ ಸೊನ್ನೆ ಮತ್ತು ಒಂದು ಎಂಬ ಸಂಖ್ಯೆಗಳನ್ನು ಮಾತ್ರ ಬಳಸಿಕೊಂಡು ‘ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್‍ಫರ್ಮೇಶನ್ ಇಂಟರ್‌ಚೇಂಜ್ (ಆಸ್ಕಿ)’ ಎಂಬ ಸಂಕೇತ ಮಾಲಿಕೆಯನ್ನು ಸೃಷ್ಟಿಯಾಯಿತು. ಎಂಟು ‘ಬಿಟ್’‍ಗಳ ಇಂಥ ಸಂಕೇತದಿಂದ ಇಂಗ್ಲಿಷ್ ಭಾಷೆಯ ಅಕ್ಷರ/ಚಿಹ್ನೆಗಳನ್ನು ಗುರುತಿಸುವ ಪರಿಪಾಠ ಆರಂಭವಾಯಿತು. ಗರಿಷ್ಠ ಇನ್ನೂರ ಐವತ್ತಾರು ಅಕ್ಷರ/ಚಿಹ್ನೆಗಳನ್ನು ಈ ಮೂಲಕ ಗುರುತಿಸಬಹುದು. ಈ ಎಂಟು ‘ಬಿಟ್’ಗಳ ಪ್ರತಿ ಸಂಕೇತವೂ ಕಂಪ್ಯೂಟರ್‌ನಲ್ಲಿ ತಲಾ ಒಂದೊಂದು ‘ಬೈಟ್’ಗಳಷ್ಟು ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಉದಾಹರಣೆಗೆ 'A' ಎಂಬ ಇಂಗ್ಲಿಷ್ ಅಕ್ಷರವನ್ನು ‘ಆಸ್ಕಿ’ ದ್ವಿಮಾನ ಸಂಕೇತವಾದ '01000001' ಮೂಲಕ ಗುರುತಿಸಬಹುದು. ಈ ದ್ವಿಮಾನ ಸಂಕೇತವು (ಸೊನ್ನೆ ಮತ್ತು ಒಂದು) ನಮ್ಮ ಸಾಮಾನ್ಯ ಬಳಕೆಯ ದಶಮಾನ (ಸೊನ್ನೆಯಿಂದ ಒಂಬತ್ತರವರೆಗೆ) ಪದ್ಧತಿಯಲ್ಲಿ '65' ಅನ್ನು ಸೂಚಿಸುತ್ತದೆ. ಜಗತ್ತಿನಲ್ಲಿ ಬಳಕೆಯಲ್ಲಿರುವ ಎಲ್ಲ ಇಂಗ್ಲಿಷ್ ತಂತ್ರಾಂಶಗಳೂ ಈ ಸಂಕೇತಗಳ ಶಿಷ್ಟತೆಯನ್ನು ಪಾಲಿಸುತ್ತವೆ. ಅಂತೆಯೇ ಅಂತರ ತಂತ್ರಾಂಶ ಸಾಗಣೆ ಸುಗಮ.

ಚಿಪ್ ತಯಾರಿಕೆಯಲ್ಲಿ ಸದಾ ಹೊಸತನವನ್ನು ಕಂಡುಕೊಳ್ಳುವ ‘ಇಂಟೆಲ್’ ಸದ್ಯಕ್ಕೆ ಕೆಲಸ ಮಾಡುತ್ತಿರುವುದು ‘ಮಲ್ಟಿಕೋರ್’ ತಂತ್ರಜ್ಞಾನ. ಅಂದರೆ ಒಂದೇ ಚಿಪ್‍ನ ಹಲವಾರು ಕೇಂದ್ರಗಳಲ್ಲಿ ಏಕಕಾಲಕ್ಕೆ ಸಂಸ್ಕರಣೆ ನಡೆಸುವ ಸಾಮರ್ಥ್ಯ ತುಂಬುವ ಕಾರ್ಯ. ಈಗಾಗಲೇ ಮನೆ/ಕಚೇರಿ ಬಳಕೆಯ ‘ಪರ್ಸನಲ್ ಕಂಪ್ಯೂಟರ್ - ಪಿ.ಸಿ.’ಗಳ ಚಿಪ್‍ಗಳಲ್ಲಿ ‘ಡ್ಯೂಯಲ್ ಕೋರ್’ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇಲ್ಲಿ ಏಕಕಾಲಕ್ಕೆ ಎರಡು ಕೇಂದ್ರಗಳಲ್ಲಿ ಗಣನೆ ಕಾರ್ಯ ಜರಗುತ್ತದೆ. ಹೀಗಾಗಿ ಇಂಥ ಕಂಪ್ಯೂಟರ್‌ನ ಕಾರ್ಯಕ್ಷಮತೆ ಹೆಚ್ಚು. ‘ಇಂಟೆಲ್’ ಕಂಪನಿಯಲ್ಲಿನ ಈ ಹೊಸ ಸರಣಿಯ ‘ಮಲ್ಟಿಕೋರ್’ ಚಿಪ್‍ಗಳ ತಯಾರಿಕೆಗೆ ನಿಯೋಜಿತರಾಗಿರುವ ವ್ಯವಸ್ಥಾಪಕರು ನಿತಿನ್ ಬೋರ್ಕರ್. ಕ್ರಿ.ಶ.1982ರಲ್ಲಿ ಮುಂಬೈ ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಎಂಜಿನೀರಿಂಗ್ ವ್ಯಾಸಂಗಕ್ಕೆಂದು ಅಮೆರಿಕಕ್ಕೆ ತೆರಳಿದವರು. ಅಲ್ಲಿನ ಲ್ಯೂಸಿಯಾನಾ ಸ್ಟೇಟ್ ವಿವಿಯಲ್ಲಿ ವಿದ್ಯುತ್ ಎಂಜಿನೀರಿಂಗ್ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದು 1986ರಲ್ಲಿ ಪಾದಾರ್ಪಣೆ ಮಾಡಿದ್ದು ‘ಇಂಟೆಲ್’ ಕಂಪನಿಯ ಹೊಸ್ತಿಲನ್ನು. ‘ಅದು ನನ್ನ ಮೊದಲನೆಯ ಕಂಪನಿ, ಖಂಡಿತವಾಗಿಯೂ ನಾನು ಕೆಲಸ ಮಾಡುವ ಕೊನೆಯ ಕಂಪನಿಯೂ ಹೌದು’ ಎನ್ನುವ ಬೋರ್ಕರ್, ‘ಇಂಟೆಲ್’ ಪೋಷಿಸಿ ಬೆಳೆಸಿದ ಜಗನ್ಮಾನ್ಯ ‘ಚಿಪ್ ತಂತ್ರಜ್ಞ’.

ನಾವೆಲ್ಲರೂ ಇಂದು ಹೆಮ್ಮೆ ಪಡಲು ಮತ್ತೊಂದು ಕಾರಣವಿದೆ. ಒಂದೂವರೆ ವರ್ಷದ ಹಿಂದೆ ಇಂಥದೊಂದು ‘ಟೆರಾ’ ಚಿಪ್ ಅನ್ನು ವಿನ್ಯಾಸಗೊಳಿಸಲು ಬೋರ್ಕರ್ ನಿರ್ಧರಿಸಿದಾಗ ಆತ ಆಯ್ದುಕೊಂಡದ್ದು ಎರಡು ವಿನ್ಯಾಸ ಕೇಂದ್ರಗಳನ್ನು. ಅಮೆರಿಕದ ಓರೆಗಾನ್‍ನಲ್ಲಿನ ತಂಡ ಹಾಗೂ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಬೆಂಗಳೂರಿನ ‘ಇಂಟೆಲ್’ ತಂತ್ರಜ್ಞಾನ ತಂಡಗಳನ್ನು. ಆತನ ಮುಂದಿದ್ದ ಸವಾಲೆಂದರೆ ‘ಕೇವಲ ನೂರು ವ್ಯಾಟ್ ವಿದ್ಯುತ್ ಬಳಸಿಕೊಂಡು ಈ ಚಿಪ್ ಕಾರ್ಯನಿರ್ವಹಿಸಬೇಕು’. ಎರಡೂ ತಂಡಗಳು ಜತೆಗೂಡಿ ನಿರ್ಮಿಸಿದ ಚಿಪ್ ಸದ್ಯಕ್ಕೆ ಬಳಸಿಕೊಳ್ಳುತ್ತಿರುವುದು ಕೇವಲ ಅರವತ್ತೆರಡು ವ್ಯಾಟ್‍ಗಳಷ್ಟು ವಿದ್ಯುತ್ ಮಾತ್ರ. ಅಂದರೆ ನಮ್ಮ ಸಾಮಾನ್ಯ ಕಚೇರಿ ಬಳಕೆಯ ಕಂಪ್ಯೂಟರ್ ಚಿಪ್‍ಗಳು ಬಳಸಿಕೊಳ್ಳುವಷ್ಟೇ ವಿದ್ಯುತ್ ಪ್ರಮಾಣವಿದು. ಇಂಥ ಇಂಟೆಲ್ ಚಿಪ್‍ಗಳಲ್ಲಿ ಎರಡು ಸಂಸ್ಕರಣಾ ಕೇಂದ್ರವಿದ್ದರೆ (ಡ್ಯೂಯಲ್ ಕೋರ್), ಪ್ರತಿಸ್ಫರ್ಧಿ ‘ಎ‍ಎಂಡಿ’ಯ (ಅಡ್ವಾನ್ಸ್‍ಡ್ ಮೈಕ್ರೋ ಡಿವೈಸಸ್) ಚಿಪ್‍ನಲ್ಲಿ ನಾಲ್ಕು ಸಂಸ್ಕರಣಾ ಕೇಂದ್ರವಿರುತ್ತದೆ (ಕ್ವಾಡ್ ಕೋರ್). ಆದರೆ ಲಕ್ಷ ಕೋಟಿ ಗಣನೆಗಳನ್ನು ಕೇವಲ ಸೆಕೆಂಡೊಂದರಲ್ಲಿ ಸಂಸ್ಕರಿಸುವ ಎಂಬತ್ತು ಸಂಸ್ಕರಣಾ ಕೇಂದ್ರಗಳಿರುವ ಈ ‘ಟೆರಾ ಫ್ಲಾಪ್ ಚಿಪ್’ ಸಹಾ ಅಷ್ಟೇ ವಿದ್ಯುತ್ ಬಳಸಿಕೊಳ್ಳುತ್ತದೆಂದರೆ ನಿಜಕ್ಕೂ ಅಚ್ಚರಿ ಪಡಬೇಕು. ಒಂದೇ ಸಿಲಿಕಾನ್ ಹಾಳೆಯ ಮೇಲೆ ಮುದ್ರಿಸಲಾದ ಈ ಚಿಪ್‍ನಲ್ಲಿ ಕನಿಷ್ಟವೆಂದರೂ ಹತ್ತು ಕೋಟಿ ಟ್ರಾನ್ಸಿಸ್ಟರ್‌ಗಳಿವೆ. (ಟ್ರಾನ್ಸಿಸ್ಟರ್‌ ಎಂದರೆ ವಿದ್ಯುತ್ ಹರಿದಾಟ ಅಥವಾ ನಿಲುಗಡೆಗೆ ಅನುಗುಣವಾಗಿ ಸೂಕ್ತ ವಿದ್ಯುತ್ ಸಂಕೇತಗಳನ್ನು ವಿದ್ಯುನ್ಮಾನ ಮಂಡಲಕ್ಕೆ ರವಾನಿಸಬಲ್ಲ ಪುಟಾಣಿ ಸಾಧನ). ಮಿಲಿಟರಿ ಸಂಶೋಧನಾ ಕೇಂದ್ರಗಳು, ಮುಂಚೂಣಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಾಲಯಗಳು, ಹವಾಮಾನ ಮುನ್ಸೂಚನಾ ಘಟಕಗಳಲ್ಲಿ ಈ ಟೆರಾ ಫ್ಲಾಪ್ ಚಿಪ್‍ಗಳು ಮೊದಲು ಬಳಕೆಗೆ ಬರುವ ನಿರೀಕ್ಷೆಯಿದೆ. ಮನೆ ಬಳಕೆಯ ಸಾಧನಗಳಲ್ಲಿ ಇಂಥ ಚಿಪ್‍ಗಳನ್ನು ಅಳವಡಿಸುವುದರಿಂದ ಏನೆಲ್ಲಾ ಕನಸುಗಳು ಸಾಕರಗೊಳ್ಳಬಹುದು ಗೊತ್ತೆ? ನಿಮ್ಮ ಅಂಗೈ ಗಣಕ ಅಥವಾ ಮೊಬೈಲ್ ಫೋನ್ ನಿಮ್ಮ ನೆಚ್ಚಿನ ಆಟವೊಂದನ್ನು ಟೀವಿಯಿಂದ ನೇರವಾಗಿ ಸೆಳೆದುಕೊಂಡು ದಾಖಲಿಸಿಟ್ಟುಕೊಳ್ಳಬಹುದು. ಅಷ್ಟೇ ಅಲ್ಲ, ಪಂದ್ಯದ ಮುಖ್ಯಾಂಶಗಳು ಯಾವುವು ಎಂದು ತಾನೇ ಗ್ರಹಿಸಿ, ಕಾರ್ಯಕ್ರಮವನ್ನು ಸಂಕಲಿಸಬಹುದು. ಧ್ವನಿಯನ್ನು ಗ್ರಹಿಸಿ, ಅದ್ಯಾವ ಭಾಷೆಯದೆಂದು ಗುರುತಿಸಿ, ಅದಕ್ಕೆ ಅಕ್ಷರ ರೂಪ ಕೊಟ್ಟು, ಕಡತವನ್ನಾಗಿಸಿ ನಿಮ್ಮ ಜೇಬಿನೊಳಗಿನ ಸಾಧನದೊಳಗೆ ಭದ್ರವಾಗಿ ಅಡಕ ಮಾಡಿಕೊಡಬಹುದು. ಉತ್ಪಾದನಾ ಎಂಜಿನೀರಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಥ ಚಿಪ್‍ಗಳು ನಿಖರವಾದ ಸಾಧನ ಸಲಕರಣೆಗಳ ವಿನ್ಯಾಸಕ್ಕೆ, ನಿರ್ಮಾಣಕ್ಕೆ ಅನುವು ಮಾಡಿಕೊಡಬಹುದು.

‘ಮಲ್ಟಿ ಕೋರ್’ ತಂತ್ರಜ್ಞಾನದ ಸಾಧಕ-ಬಾಧಕಗಳದೇನೇ ಇರಲಿ. ಮಾಹಿತಿಯ ‘ಭೋರ್ಕರೆತ’ಕ್ಕೆ ಇನ್ನು ಮುಂದೆ ಕಂಪ್ಯೂಟರ್ ಚಿಪ್‍ಗಳು ನಡಗುವಂತಿಲ್ಲ. ಇಂಟೆಲ್, ಎ‍ಎಂಡಿ‍ಗಳ ತುರುಸಿನ ಸ್ಫರ್ಧೆಗೆ ‘ಎನ್‍ವಿಡಿಯ’ ಎಂಬ ಗ್ರಾಫಿಕ್ಸ್ ಕಂಪನಿ ಸಹಾ ಜತೆಗೂಡಿದೆ. ‘ಎನ್‍ವಿಡಿಯ’ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ‘ಚಿಪ್’ನಲ್ಲಿ ಕನಿಷ್ಟವೆಂದರೂ ನೂರಿಪ್ಪತ್ತೆಂಟು ಸಂಸ್ಕರಣಾ ಕೇಂದ್ರಗಳಿವೆ. ‘ಇಂಟೆಲ್’ ಕಂಪನಿಯ ಸಹಸ್ಥಾಪಕ ಗಾರ್ಡನ್ ಮೂರು ನಾಲ್ಕು ದಶಕಗಳ ಹಿಂದೆ ನುಡಿದಿದ್ದ ಭವಿಷ್ಯವಾಣಿ ‘ಪ್ರತಿ ಹದಿನೆಂಟು ತಿಂಗಳುಗಳಲ್ಲಿ ಕಂಪ್ಯೂಟರ್ ಚಿಪ್ ಒಂದರಲ್ಲಿ ಅಡಕ ಮಾಡಬಹುದಾದ ಟ್ರಾನ್ಸಿಸ್ಟರ್‌ಗಳ ಸಂಖ್ಯೆ ದುಪ್ಪಟ್ಟಾಗುತ್ತಾ ಹೋಗುತ್ತದೆ’. ಆ ಕಾಲದಿಂದಲೂ ಇದನ್ನು ‘ಮೂರ್ ನಿಯಮ’ವೆಂದು ಗುರುತಿಸಲಾಗುತ್ತಿದೆ. ಪ್ರತಿಯೊಬ್ಬ ಚಿಪ್ ವಿನ್ಯಾಸಕಾರನಿಗೂ ಈ ನಿಯಮವನ್ನು ಮುರಿಯುವುದು ಒಂದು ಅತಿ ದೊಡ್ಡ ಸವಾಲು. ಇಂದು ‘ಇಂಟೆಲ್’ನ ಎಂಜಿನೀರ್‌ಗಳು ‘ಮೂರ್ ನಿಯಮ’ವನ್ನು ನುಚ್ಚುನೂರು ಮಾಡಲು ಸನ್ನದ್ಧರಾಗಿದ್ದಾರೆ. ಬೋರ್ಕರ್‌ನಂಥವರು ಇರುವಲ್ಲಿ ಮೂರ್ ನಿಯಮ ಖಂಡಿತವಾಗಿಯೂ ನೂರ್ ಕಾಲ ಬಾಳಲಾಗದು. (26-02-2007)

7 comments:

sritri said...

ಸುಧೀಂದ್ರರೇ, ನಿಮಗೊಂದು ಸಿಲ್ಲಿ ಕ್ವೆಶ್ಚನ್. ಹಾಲ್ದೋಡ್ಡೇರಿ ಪ್ರಶಾಂತರು TV ನಿರ್ದೇಶಕ)ನಿಮಗೇನಾಗಬೇಕು? ಎದುರಿಗೆ ಬಂದರೆ ಓರೆಯಾಗುವುದನ್ನು ಬಿಟ್ಟು? :-)

Haldodderi said...

ದೇವರಾಣೆಗೂ ಪ್ರಶಾಂತ್ ಹಾಲ್ದೊಡ್ಡೇರಿ ನನಗೆ ಏನೂ ಆಗಬೇಕಿಲ್ಲ. ನಾನು ಅವರಿಂದ ಸಾಲ ಪಡೆಯದಿರುವುದರಿಂದ ಎದುರಿಗೆ ಸಿಕ್ಕಾಗ ಓರೆಯಾಗುವ ಅಥವಾ ಮರೆಯಾಗುವ ಪ್ರಮೇಯ ಖಂಡಿತಾ ಇಲ್ಲ. ಅವರ ‘ಮಿಂಚಿನ’ ಪ್ರವೇಶದಿಂದ ನನ್ನ ಜನಪ್ರಿಯತೆ ದಿಢೀರೆಂದು ಹೆಚ್ಚಿದೆ. ಅವರು ’ನಿಮಗೇನಾಗಬೇಕು?’ ಎಂದು ಕೇಳುವುದಕ್ಕೋಸ್ಕರವಾದರೂ (ನೀವೂ ಸೇರಿದಂತೆ) ಜನ ನನ್ನನ್ನು ಮಾತನಾಡಿಸುತ್ತಿದ್ದಾರೆ.

Anonymous said...

Hi Sudhi,

I have been a reader of your article since the starting of Vijaya Karnataka and I love the way you present the Technical stuffs to the common man. Hats Off.

Now coming to the point, I've found a mistake in recent article dated, 26-Feb-2007, Where you talked about the Tera Scale computing with latest Intel chips.

In that article, you are saying that intel wants to break "the Moores Law" but the intel on its own web site claims that Moores law will holds good, at least till 2015.

Here are the Links...

http://www.intel.com/technology/mooreslaw/index.htm
http://www.intel.com/technology/silicon/45nm_technology.htm
http://www.intel.com/technology/magazine/silicon/moores-law-0405.pdf
http://www.philoneist.com/50226711/intel_chip_advance_to_further_moores_law_past_2015.php

--
Regards,

G. Raghavendra Nayak

Haldodderi said...

Dear Mr.Nayak

I am really elated that an informed reader like you, who has been practicing computing techniques, is reading my articles.

Nonetheless, I accept my 'misrepresentation' about Intel's plan of breaking Moore's Law. The remarks made by me in the article is off-the-cuff which reads 'Intel engineers are prepared to break the Moore's Law'. You may appreciate that every 'intel'ligent chip design engineer would dream to break the threshhold of Moore's Law.

Keep reading and post valuable suggestions in future too.

Anonymous said...

Hi Sudhi,

Thanks for the Quick Reply...

I m waiting for your next article.

Best of Luck

- G. Raghavendra Naik

Anonymous said...

sir
I read your article today about Borkar it will help the youngsters to achive in various fields.

I am very proud of Nithin borkar's achivement.Can u please forward the e-mail adrress of him
thanking u

premachandra

Anonymous said...

your article in "vijaya karnataka"-"gananege elle ellide balle,'intel'nalle." is very nice . i am technical student. i wish that you write the more more articles about technical subjects.

- veekshitha