Thursday, April 5, 2007


‘ನ್ಯಾನೊ’ ಎಂಬುದಿಲ್ಲಿ ತಂತ್ರವಾಗಿರುವಾಗ, ಮಾಲಿನ್ಯವಿನ್ನು ದಾಸನಯ್ಯ!


"ರಾಷ್ಟ್ರಪತಿಗಳನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ನಮಗೆಲ್ಲರಿಗೂ ಇದ್ದಿದ್ದರೆ ನಮ್ಮ ‘ನೀಲಿ’ ಗೆದ್ದು ಬಿಡುತ್ತಿದ್ದರು, ಬೆಂಗಳೂರಿಗರ ಅಷ್ಟೂ ವೋಟುಗಳ ಸಹಿತ". ಹೀಗೆಂದವರು ‘ಮತದಾನ’ ಚಿತ್ರದ ನಿರ್ದೇಶಕರು - ಟಿ.ವಿ. ಧಾರವಾಹಿಗಳ ಜನಪ್ರಿಯ ಸೂತ್ರಧಾರರೂ ಆದ ಟಿ.ಎನ್.ಸೀತಾರಾಂ. ಅಂದು ಡಿಸೆಂಬರ್ 24, ಭಾನುವಾರದ ಮುಂಜಾನೆ. ಬೆಂಗಳೂರಿನಲ್ಲಿ ವಿಶ್ವೇಶ್ವರ ಭಟ್ಟರ ನಾಲ್ಕು ಪುಸ್ತಕಗಳ ಲೋಕಾರ್ಪಣೆಗಾಗಿ ಕಿಕ್ಕಿರಿದ ಸಮಾರಂಭದಲ್ಲಿ ಸೀತಾರಾಂ ಈ ಮಾತುಗಳನ್ನು ಹೇಳಿದಾಗ ಇಡೀ ಸಭಾಂಗಣ ನೀಲಿಯನ್ನು ಅರಸುತ್ತಿತ್ತು. ಎಂದಿನ ನಸುನಗೆಯೊಂದಿಗೆ ನೀಲಿ ಪಕ್ಕದವರೊಂದಿಗೆ ಮಾತಿನಲ್ಲಿ ತಲ್ಲೀನರಾಗಿದ್ದರು. ಹೊಸ ವಿನ್ಯಾಸದ ಮನೆಯಾಗಲಿ ಅಥವಾ ರಂಗ ಸಜ್ಜಿಕೆಯಾಗಲಿ ಕೊನೆಗೆ ಮದುವೆ ಮಂಟಪದ ಸಿಂಗಾರವಾಗಲಿ ‘ನೀಲಿ’ ಕಾಲರ್‌ನ ಕಾರ್ಮಿಕನಂತೆ ಅವರ ಚಟುವಟಿಕೆ. ಅಂತೆಯೇ ಕಟ್ಟಡ ವಿನ್ಯಾಸದ ಬಗ್ಗೆ ಅತ್ಯುತ್ಸಕರಾದವರಿಗೆ ಇವರೊಬ್ಬ ‘ನೀಲಿ’ ಕಣ್ಣಿನ ಹುಡುಗ. ಹದಿಹರೆಯದ ‘ದುನಿಯಾ’ದಲ್ಲಿ ಅದೆಷ್ಟೋ ಹುಡುಗಿಯರು ಈ ಪ್ರತಿಭಾವಂತನ ಮೇಲೆ ‘ನೀಲಿ ಐ ಲವ್ ಯೂ, ನೀಲಾಕಾಶದ ಮೇಲಾಣೆ’ ಎಂದು ಹಾಡು ಕಟ್ಟಿರಬಹುದು. ನಿನ್ನೆ ಮುಂಜಾನೆ ಲಾಲ್‍ಬಾಗಿನಲ್ಲಿ ಇದೇ ‘ನೀಲಿ’ ಮಾತಿಗೆ ಸಿಕ್ಕಾಗ ಹೊಳೆದ ಮೊದಲ ಆಲೋಚನೆ - ಸದಾ ಜೀವನೋತ್ಸಾಹ ಪುಟಿಸುವ ‘ಇವರಂತೆ ನಾನಾಗಬಹುದೆ’? ಇಡೀ ನನ್ನ ದೇಹವನ್ನು ಪರಮಾಣುಗಳ ಹಂತಕ್ಕೆ ವಿಭಜಿಸಿ ಒಂದೊಂದೇ ಪರಮಾಣುವನ್ನು ಮತ್ತೆ ಮರುಜೋಡಣೆ ಮಾಡ ಹೊರಟರೆ ನಾನೊಬ್ಬನೇಕೆ, ನೀವು ಯಾರಾದರೂ ’ನೀಲಿ’ಯಾಗಬಹುದು, ಬೇಕಿದ್ದರೆ ಪ್ರತಾಪ್ ಸಿಂಹ, ಟಿ.ಎನ್.ಸೀತಾರಾಂ, ಜಯಂತ್ ಕಾಯ್ಕಿಣಿ, ವಿಶ್ವೇಶ್ವರ ಭಟ್, ರವಿ ಬೆಳಗೆರೆ, ಯು.ಆರ್.ಅನಂತಮೂರ್ತಿ, ಎನ್.ಆರ್.ನಾರಾಯಣಮೂರ್ತಿ, ಅಬ್ದುಲ್ ಕಲಾಮ್ .... ಯಾರು ಬೇಕಾದರೂ ಆಗಬಹುದು - ಅವರೆಲ್ಲರ ರಚನೆ ಪರಮಾಣುಗಳ ಹಂತದಲ್ಲಿ ನಿಖರವಾಗಿ ಗೊತ್ತಿದ್ದರೆ. ಜತೆಗೆ ನಮ್ಮೆಲ್ಲರ ಕಲ್ಪನೆಗೂ ಮೀರಿದ ‘ನ್ಯಾನೊ ತಂತ್ರಜ್ಞ’ ಈ ಕಾರ್ಯದ ನೇತೃತ್ವ ವಹಿಸಿಕೊಂಡಿರಬೇಕು. ನಿನ್ನೆಯಷ್ಟೇ ಮುಗಿದ ಮೂರ್ಖರ ದಿನಕ್ಕೆಂದು ಸಿಡಿಸಿದ ಜೋಕ್ ಇದಲ್ಲ. ಚೆನ್ನೈನಲ್ಲಿರುವ ‘ಭಾರತೀಯ ತಂತ್ರಜ್ಞಾನ ಮಂದಿರ (ಐ.ಐ.ಟಿ.) - ಮದ್ರಾಸ್‍ನ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾಟಿ.ಪ್ರದೀಪ್ ಅವರ ಪ್ರಕಾರ ಅಮೀಬಾದಿಂದ ಆನೆಯವರೆಗೆ ಪ್ರಕೃತಿಯಲ್ಲಿ ಎಲ್ಲವೂ ನಿರ್ಮಾಣವಾಗಿರುವುದು ಒಂದೊಂದೇ ಪರಮಾಣುಗಳು ನಿರ್ದಿಷ್ಟ ಸೂತ್ರದಂತೆ ಒಗ್ಗೂಡಿರುವುದರಿಂದ. ಪ್ರತಿಯೊಂದು ಪರಮಾಣು ಜೋಡಣೆಯೂ ನ್ಯಾನೊ ತಂತ್ರಜ್ಞಾನದ ಪ್ರಾತ್ಯಕ್ಷಿಕೆ.
ಸುತ್ತಿ ಬಳಸಿ ಅಂಕಣದ ಬರಹವನ್ನು ‘ನ್ಯಾನೊ ತಂತ್ರಜ್ಞಾನ’ದ ಸುಳಿಗೆ ಸಿಲುಕಿಸುವ ಪ್ರಯತ್ನ ಎಂಬ ಆಪಾದನೆ ನಿಮ್ಮದಾದರೂ ಪರವಾಗಿಲ್ಲ. ಒಂದು ‘ಸಿಲ್ಕ್’ (ರೇಶಿಮೆ) ಎಳೆ ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಂಡಿತೆಂದರೆ ಅದರ ಅಗಲ ಮಿಲಿಮೀಟರ್‌ನ ಹತ್ತನೆಯ ಒಂದು ಭಾಗ. ಅದೇ ಎಳೆಯನ್ನು ಮೊದಲು ಒಂದು ನೂರು ಸಮ ಭಾಗಗಳನ್ನಾಗಿಸಿ. ಮೈಕ್ರೊಮೀಟರ್ ಅಳತೆ ನಿಮ್ಮ ಕಲ್ಪನೆಗೆ ಸಿಕ್ಕಿತು. ಅಂಥ ಪುಟ್ಟ ಅಳತೆಯನ್ನು ಮತ್ತೆ ಒಂದು ಸಹಸ್ರ ಹೋಳುಗಳನ್ನಾಗಿಸಿದರೆ ‘ಇಲ್ಲಿ ನಾನೆ ನ್ಯಾನೊ’ ಎಂದು ನಿಮ್ಮ ಅಂಗೈ ಮೇಲೆ ಕುಳಿತಿರುತ್ತದೆ. ಆದರೆ ಈ ‘ನ್ಯಾನೊ’ ಅಳತೆಯ ಒಂದು ಲಕ್ಷ ಎಳೆಗಳನ್ನು ಹೂಬತ್ತಿಯಂತೆ ಹೊಸೆದಿಟ್ಟರೆ ಮಾತ್ರ ನಮ್ಮ ಬರಿಗಣ್ಣಿಗದು ಗೋಚರವಾಗಬಲ್ಲದು. ಇಂಥ ಸೂಕ್ಷ್ಮ ಅಳತೆ ಸ್ಪಷ್ಟವಾಗಿ ಕಾಣದಿರಲು ಕಾರಣವೂ ಸ್ಪಷ್ಟ. ಸೀರೆಯಿಂದೆದ್ದು ಬಂದ ರೇಶಿಮೆ ಎಳೆಯನ್ನು ನೂರು ಕಿಲೋಮೀಟರ್ ಉದ್ದದ ಹೈವೇಯಲ್ಲಿ ಎಸೆದರೆ, ಅದರ ಇರುವಿಕೆ ಯಾವ ದಾರಿಹೋಕನ ಕಣ್ಣಿಗೆ ಬಿದ್ದೀತು? ಹಾಗೆಂದ ಮಾತ್ರಕ್ಕೆ ನ್ಯಾನೊ ತಂತ್ರಜ್ಞರೆಲ್ಲ ಅಷ್ಟು ಸೂಕ್ಷ್ಮಾತಿ ಸೂಕ್ಷ್ಮ ಅಳತೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಬಾರದು. ಹತ್ತರಿಂದ ನೂರು ನ್ಯಾನೊ ಮೀಟರ್ ಅಳತೆಯಲ್ಲಿ ನಿರ್ಮಿಸುವ ಯಾವುದೇ ಸಾಮಗ್ರಿ ನ್ಯಾನೊ ತಂತ್ರಜ್ಞಾನದ ವ್ಯಾಪ್ತಿಗೆ ಬರುತ್ತದೆ. ಈ ವಾರ ಮತ್ತೆ ನ್ಯಾನೊ ಬಗ್ಗೆ ಬರೆಯಲು ಪ್ರೇರಣೆ ನಿನ್ನೆಯಷ್ಟೇ ಜಪಾನ್ ದೇಶದ ದೊಡ್ಡ ಕಾರು ನಿರ್ಮಾಣ ಸಂಸ್ಥೆ ಟೊಯೊಟಾದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ವಿಜ್ಞಾನಿಗಳು ಹೊರಗೆಡವಿರುವ ಸುದ್ದಿ. ಆ ಕೇಂದ್ರದ ಪ್ರಧಾನ ವಿಜ್ಞಾನಿ ಅನಿಲ್ ಕೆ. ಸಿನ್ಹಾ ಮತ್ತು ಸಹಚರರು ನ್ಯಾನೊ ತಂತ್ರಜ್ಞಾನದ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಮಂಡಿಸಿರುವ ಪ್ರೌಢ ಪ್ರಬಂಧವೊಂದು ನ್ಯಾನೊ ತಂತ್ರಜ್ಞರಿಗಷ್ಟೇ ಅಲ್ಲ, ಪರಿಸರ ಮಾಲಿನ್ಯ ನಿವಾರಣೆಯಲ್ಲಿ ತೊಡಗಿಸಿಕೊಂಡವರಲ್ಲೂ ಕುತೂಹಲ ಮೂಡಿಸಿದೆ.
ಚಳಿಗಾಲದಲ್ಲಿ ಮಂಜು ಧರೆಗಿಳಿಯುವುದು ನಿಮಗೆ ಗೊತ್ತು. ಹೆಚ್ಚು ಶೀತಲ ಪ್ರದೇಶಗಳಲ್ಲಿ ಮುಂದಿನ ದಾರಿ ಕಾಣದಷ್ಟು ಮಂಜು ದಟ್ಟವಾಗಿ ಚಾಲಕರನ್ನು ಕಂಗೆಡಿಸುವುದುಂಟು. ವಾತಾವರಣದಲ್ಲಿನ ಮಾಲಿನ್ಯಕರ ಅಂಶಗಳಾದ ಧೂಳು ಹಾಗೂ ಹೊಗೆ ಈ ಮಂಜಿನೊಂದಿಗೆ ಬೆರೆತರೆ ‘ಸ್ಮಾಗ್’ (ಸ್ಮೋಕ್+ಫಾಗ್ = ಸ್ಮಾಗ್) ಎಂಬ ದಟ್ಟ ಅಪಾರದರ್ಶಕ ತೆರೆ ಇಡೀ ರಸ್ತೆಯನ್ನು ಆವರಿಸಿಕೊಳ್ಳುತ್ತದೆ. ವಾಹನಗಳು, ಕಾರ್ಖಾನೆಗಳು ಹೊರಗುಗುಳುವ ಧೂಮದಲ್ಲಿ ವಿಷಕಾರಿ ಅನಿಲಗಳಾದ ಸಾರಜನಕದ ಆಕ್ಸೈಡ್‍ಗಳು, ಗಂಧಕದ ಆಕ್ಸೈಡ್‍ಗಳು ಹಾಗೂ ಆವಿಯಾಗಬಲ್ಲ ರಾಸಾಯನಿಕ ಸಂಯುಕ್ತಗಳು ಸೇರಿಹೋಗಿರುತ್ತವೆ. ಜತೆಗೆ ಇವು ಕೆಳಮಟ್ಟದಲ್ಲಿ ಆಮ್ಲಜನಕವನ್ನು ಓಝೋನ್ ಅನಿಲವನ್ನಾಗಿ ಪರಿವರ್ತಿಸಿಬಿಡುತ್ತವೆ. ಉಸಿರಾಟದ ಸಮಯದಲ್ಲಿ ದೇಹಕ್ಕೆ ಸೇರಬಲ್ಲ ಈ ಅನಿಲಗಳು ಅತ್ಯಂತ ಅಪಾಯಕಾರಿ. ಸದ್ಯಕ್ಕೆ ಬಳಕೆಯಲ್ಲಿರುವ ಆಧುನಿಕ ವಾಯು ಶುದ್ಧೀಕರಣ ವ್ಯವಸ್ಥೆಗಳು ‘ಬೆಳಕಿಗೆ ಪ್ರತಿಸ್ಪಂದಿಸಬಲ್ಲ ರಾಸಾಯನಿಕ ವೇಗವರ್ಧಕಗಳು (Photocatalysts), ಕ್ರಿಯಾಶೀಲ ಇದ್ದಿಲು ಮುಂತಾದವುಗಳನ್ನು ಬಳಸಿಕೊಳ್ಳುತ್ತವೆ. ಇವುಗಳ ನ್ಯೂನತೆಯೇನೆಂದರೆ ಸಾಮಾನ್ಯ ತಾಪಮಾನದಲ್ಲಿ ಮಾಲಿನ್ಯಕಾರಕ ರಾಸಾಯನಿಕಗಳನ್ನು ವಿಭಜಿಸಲಾರವು. ಸಾರಜನಕದ ಆಕ್ಸೈಡ್‍ಗಳು, ಗಂಧಕದ ಆಕ್ಸೈಡ್‍ಗಳು ಹಾಗೂ ಆವಿಯಾಗಬಲ್ಲ ರಾಸಾಯನಿಕ ಸಂಯುಕ್ತಗಳಂಥ ವಿಶ ಪೂರಿತ ಅನಿಲಗಳನ್ನು ಸಾಮಾನ್ಯ ತಾಪಮಾನದಲ್ಲಿಯೇ ಮೂಲ ವಸ್ತುಗಳನ್ನಾಗಿ ವಿಭಜಿಸಿ ವಾಯು ಶುದ್ಧೀಕರಣ ಮಾಡಬಲ್ಲ ಹೊಸ ಸಾಮಗ್ರಿಯೊಂದನ್ನು ಜಪಾನ್ ದೇಶದ ಸಂಶೋಧಕರು ಆವಿಷ್ಕರಿಸಿದ್ದಾರೆ. ವಾಯು ಶುದ್ಧೀಕರಣಕ್ಕೆ ಸಾಮಾನ್ಯವಾಗಿ ಬಳಸುವ ಮ್ಯಾಂಗನೀಸ್ ಆಕ್ಸೈಡ್‍ನ ವಿರಳ ಮಿಶ್ರಣದಲ್ಲಿ ಬಂಗಾರದ ನ್ಯಾನೊ ಗಾತ್ರದ ತುಣಕುಗಳನ್ನು ಬೆಳೆಯುವಂತೆ ಮಾಡಿ ಹೊಸ ಬಗೆಯ ಶುದ್ಧೀಕರಣ ವ್ಯವಸ್ಥೆಯನ್ನು ಅನಿಲ್ ಸಿನ್ಹಾ ನೇತೃತ್ವದ ವಿಜ್ಞಾನಿಗಳ ತಂಡವು ನಿರ್ಮಿಸಿದೆ. ಈ ರಾಸಾಯನಿಕ ವೇಗವರ್ಧಕವನ್ನು ಅಸಿಟಾಲ್ಡಿಹೈಡ್, ಟೌಲೀನ್ ಹಾಗೂ ಹೆಕ್ಸೇನ್‍ಗಳಂಥ ಸಾಮಾನ್ಯ ಮಾಲಿನ್ಯಕಾರಕ ವಿಷ ವಸ್ತುಗಳ ನಿವಾರಣೆಗೆ ಬಳಸಿಕೊಳ್ಳಲಾಗಿದೆ. ಪ್ರಯೋಗಶಾಲೆಯಲ್ಲಿನ ಪ್ರಯತ್ನಗಳು ಬಹುತೇಕ ಯಶಸ್ವಿಯಾಗಿವೆ.
ಇಲ್ಲಿ ಮ್ಯಾಂಗನೀಸ್ ಆಕ್ಸೈಡ್ ಪುಡಿಯ ವಿರಳ ಮಿಶ್ರಣವೆಂದರೆ ಹೆಚ್ಚು ಸರಂಧ್ರಗಳಿರುವಂಥದು. ಅಂದರೆ ಈ ಮಿಶ್ರಣದಲ್ಲಿ ಪೊಳ್ಳು ಭಾಗ ಹೆಚ್ಚಿದ್ದು ಗಾಳಿಯಾಡಲು ಅವಕಾಶ ಕೊಡುವ, ಸಾಮಾನ್ಯವಾಗಿ ಬರಿಗಣ್ಣಿಗೆ ಕಾಣಿಸದ ಸಣ್ಣ ರಂಧ್ರಗಳಿರುತ್ತವೆ. ಈ ರಂಧ್ರಗಳಲ್ಲಿ ಆವಿಯಾಗಬಲ್ಲ ರಾಸಾಯನಿಕಗಳು ತುಂಬಿಕೊಳ್ಳಲು ಹೆಚ್ಚಿನ ಸ್ಥಳಾವಕಾಶವಿರುತ್ತದೆ. ಆಮ್ಲಜನಕದೊಡನೆ ಸಂಯೋಗ ಹೊಂದಿದ ರಾಸಾಯನಿಕಗಳು ಚಿನ್ನದ ಹುಡಿಯ ಮೇಲೆ ಮರು-ವಿಭಜನೆಗೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಈ ಎಲ್ಲ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನಡೆಸಲು ಮ್ಯಾಂಗನೀಸ್ ಆಕ್ಸೈಡ್‍ನ ಪ್ರಮಾಣ ನಿಖರವಾಗಿರಬೇಕು ಹಾಗೂ ಚಿನ್ನದ ಹುಡಿ ಅದರೊಂದಿಗೆ ಬೆರೆಯುವ ವಿಧಾನ ನಿರ್ದಿಷ್ಟ ರೀತಿಯಲ್ಲಿರಬೇಕು. ಅನಿಲ್ ಸಿನ್ಹಾ ಅವರ ತಂಡವು ವಿನ್ಯಾಸಗೊಳಿಸಿರುವ ಈ ವ್ಯವಸ್ಥೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯಿಂದ ವಿಷ ರಾಸಾಯನಿಕಗಳು ನಿರ್ಮೂಲವಾಗುತ್ತವೆ.
ನ್ಯಾನೊ ಅಳತೆಯ ಸಾಮಗ್ರಿಗಳ ನಿರ್ಮಾಣ ಹೆಚ್ಚು ತುಟ್ಟಿಯ ಬಾಬ್ತು. ನಮ್ಮಂಥ ದೇಶಗಳ ಸಾಮಾನ್ಯ ಬಳಕೆಗೆ ನ್ಯಾನೊ ಸಾಮಗ್ರಿಗಳನ್ನು ನಿರ್ಮಿಸುವುದು ಸಾಧುವೆ, ಸಾಧ್ಯವೆ? ಎಂಬುದು ಪ್ರಶ್ನೆ. ಸಾಮಗ್ರಿಯೊಂದನ್ನು ಕುಲುಮೆಯಲ್ಲಿ ದಹನ ಮಾಡಿದರೆ ಬೂದಿಯ ಕಣಗಳನ್ನು ನ್ಯಾನೊ ಅಳತೆಯಲ್ಲಿರುವಂತೆ ನೋಡಿಕೊಳ್ಳಬಹುದು. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾಕೆ.ಸಿ.ಪಾಟಿಲ್ ಈ ಬಗ್ಗೆ ಅತ್ಯುನ್ನತ ಸಂಶೋಧನೆಗಳನ್ನು ನಡೆಸಿದ್ದಾರೆ. ನ್ಯಾನೊ ಬೂದಿಯನ್ನು ಪಡೆಯುವ ಈ ವಿನೂತನ ತಂತ್ರಜ್ಞಾನವನ್ನು ಪಾಟೀಲರು ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಹಾಗೂ ರಕ್ಷಣಾ ಸಂಶೋಧನಾ ಸಂಸ್ಥೆಗಳಿಗೆ ವರ್ಗಾಯಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯಗಳನ್ನು ಕೈಗೊಂಡ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಟಿ.ಚಂದ್ರಪ್ಪನವರು ನೀರಿನ ಶುದ್ಧೀಕರಣಕ್ಕೆ ನ್ಯಾನೊ ಗಾತ್ರದ ರಾಸಾಯನಿಕ ಹರಳುಗಳನ್ನು ಬಳಸುವೆಡೆ ತಮ್ಮ ಅಧ್ಯಯನ ಮುಂದುವರಿಸಿದ್ದಾರೆ. ಪ್ರಸ್ತುತ ನ್ಯಾನೊ ಸಂಶೋಧನೆಗಳಿಗೆಂದೇ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗಗಳು ಪ್ರಾಯೋಜಿಸಿರುವ ಅನೇಕ ಯೋಜನೆಗಳನ್ನು ಚಂದ್ರಪ್ಪನವರು ವಹಿಸಿಕೊಂಡಿದ್ದಾರೆ. ಅವರೊಂದಿಗೇ ಜಲ ಮಾಲಿನ್ಯ ನಿವಾರಣೆಯಲ್ಲಿ ನ್ಯಾನೊ ಹರಳುಗಳ ಬಳಕೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿ ಬಿ.ನಾಗಪ್ಪ ಅವರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗಪ್ಪ, ಚಿತ್ರದುರ್ಗ ಜಿಲ್ಲೆಯವರು. ತಮ್ಮದೇ ಊರಿನಲ್ಲಿ ಕೊಳವೆ ಬಾವಿಗಳ ಮೂಲಕ ಹೊರತೆಗೆಯುವ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾದ ಶುದ್ಧೀಕರಣ ವ್ಯವಸ್ಥೆಯ ವಿನ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುಲುಮೆಯಲ್ಲಿ ದಹಿಸಿದ್ದ ಮೆಗ್ನೀಶಿಯಂ ಆಕ್ಸೈಡ್ ರಾಸಾಯನಿಕ ಸಾಮಗ್ರಿಯ ನ್ಯಾನೊ ಹರಳುಗಳನ್ನು ತಮ್ಮ ಪ್ರಯೋಗಗಳಿಗೆ ಅವರು ಬಳಸಿಕೊಂಡಿದ್ದಾರೆ.
ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ನ್ಯಾನೊ ಬಳಕೆಯಾಗುತ್ತಿರುವುದಕ್ಕಿಂತಲೂ ಮಿಗಿಲಾಗಿ ನಮಗೆ ಅಗತ್ಯವಾದದ್ದು ಗಾಳಿ ಹಾಗೂ ನೀರಿನ ಶುದ್ಧೀಕರಣ. ಈ ನಿಟ್ಟಿನಲ್ಲಿ ಅನಿಲ್ ಸಿನ್ಹಾ ಹಾಗೂ ಕೆ.ಸಿ.ಪಾಟಿಲ್ ನೇತೃತ್ವದ ಸಂಶೋಧಕರ ತಂಡಗಳು ಅಭಿನಂದನಾರ್ಹ. ಅನಿಲ್ ಸಿನ್ಹಾ ಅವರ ಸಂಶೋಧನೆಯ ಫಲ ನಮ್ಮ ದೇಶಕ್ಕೆ ತಕ್ಷಣವೇ ಸಿಗದಿದ್ದರೂ, ನಾಗಪ್ಪ ಹಾಗೂ ಚಂದ್ರಪ್ಪ ಜೋಡಿ ಪಾಟಿಲ್ ಅವರ ತಂತ್ರಜ್ಞಾನವನ್ನು ಜನ ಸಾಮಾನ್ಯರ ಅನುಕೂಲಕ್ಕೆ ಅಳವಡಿಸಿಕೊಡಬಹುದು. ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಅಂತರ್ಜಲದಲ್ಲಿಯೂ ಫ್ಲೋರೈಡ್‍ನ ಅಂಶ ಚಿತ್ರದುರ್ಗದಲ್ಲಿರುವಷ್ಟೇ ಹಾನಿಕರ ಮಟ್ಟದಲ್ಲಿದೆ.
ನಾಗರೀಕತೆಯ ಬೆಳವಣಿಗೆಯನ್ನು ಆ ಕಾಲದಲ್ಲಿ ಬಳಸುತ್ತಿದ್ದ ಸಾಮಗ್ರಿಯೊಂದಿಗೇ ಗುರುತಿಸುವುದು ನಿಮಗೆ ಗೊತ್ತು. ಕಲ್ಲನ್ನೇ ಆಯುಧ ಸಾಮಗ್ರಿಯಾಗಿ ಬಳಸುತ್ತಿದ್ದ ಕಾಲ ಶಿಲಾಯುಗ. ನಂತರ ಬಂದದ್ದು ತಾಮ್ರ ಯುಗ. ಮುಂದೆ ಬಂದದ್ದು ಕಂಚಿನ ಯುಗ. ಅದಾದ ನಂತರ ಮೆರೆದದ್ದು ಕಬ್ಬಿಣದ ಯುಗ. ಇಪ್ಪತ್ತನೆಯ ಶತಮಾನವಂತೂ ಮಿಶ್ರಲೋಹ, ಪ್ಲಾಸ್ಟಿಕ್, ಸಿಲಿಕಾನ್ ಮತ್ತಿತರ ಸಾಮಗ್ರಿಗಳ ಯುಗ. ಸದ್ಯಕ್ಕೆ ಇಂದಿನ ಯುಗವನ್ನು ನ್ಯಾನೊ ಸಾಮಗ್ರಿಯ ಯುಗವೆಂದೇ ಪರಿಗಣಿಸಲಾಗಿದೆ. ಬೇಕೆಂದ ರೀತಿಯಲ್ಲಿ ಬಳಸಿಕೊಳ್ಳುವ ಅನುಕೂಲ, ಹೆಚ್ಚು ನಿಖರವಾದ ವಿನ್ಯಾಸಕ್ಕೆ ನ್ಯಾನೊಗಿಂತ ಕಿರಿದಾದ ಹಾಗೂ ಮಿಗಿಲಾದ ಸಾಮಗ್ರಿ ಮತ್ತೊಂದಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಅಗ್ಗದ ದರದಲ್ಲಿ ವಸ್ತುವೊಂದನ್ನು ನಿರ್ಮಿಸಲು ನ್ಯಾನೊ ತಂತ್ರಜ್ಞಾನ ನೆರವಾಗಬಹುದೆಂಬ ನಿರೀಕ್ಷೆಯೂ ಇದೆ. ಪಾಟಿಲ್-ಚಂದ್ರಪ್ಪ-ನಾಗಪ್ಪ ಅವರು ಅಂತರ್ಜಲ ಶುದ್ಧೀಕರಣಕ್ಕೆ ಬಳಸುತ್ತಿರುವ ನ್ಯಾನೊ ಸಾಮಗ್ರಿ ಇಂಥ ನಿರೀಕ್ಷೆಗಳನ್ನು ಸಾಕಾರಗೊಳಿಸಬಲ್ಲದು. ಜತೆಗೆ ಅನಿಲ್ ಸಿನ್ಹಾ ಅವರ ನ್ಯಾನೊ ಪರಿಶುದ್ಧಕ ಕವಿದ ಮಂಜನ್ನು ಸರಿಸಿ ರಸ್ತೆಯಲ್ಲಿ ಸಲೀಸಾಗಿ ಉಸಿರಾಡುವಂತೆ ಮಾಡಬಹುದು, ಶುಭ್ರ ನೀಲಿ ಆಕಾಶವನ್ನು ನಿಚ್ಚಳವಾಗಿ ನೋಡುವಂತೆ ಮಾಡಬಹುದು. ಈ ಎಲ್ಲ ನ್ಯಾನೊ ತಂತ್ರಜ್ಞರನ್ನು ಅಭಿನಂದಿಸೋಣ. (02-04-2007)

No comments: