Sunday, April 29, 2007

ಸೈಬರ್ ಅವಳಿ - ಹರಟಿದಿರೆ ನಿಮಗಿಲ್ಲಿ ಬವಳಿ!


ಕೆಲ ವರ್ಷಗಳ ಹಿಂದೆ ಬಾಲಿವುಡ್ ತಾರೆಯೊಬ್ಬಳು ಕನ್ನಡ ಚಲನಚಿತ್ರವೊಂದರಲ್ಲಿ ನಟಿಸುವಾಗ ನಿರ್ಮಾಪಕ-ಕಂ-ನಟನನ್ನು ಏಮಾರಿಸಿದ್ದ ಘಟನೆ ನಿಮ್ಮ ನೆನಪಿನಲ್ಲಿ ಇನ್ನೂ ಇರಬಹುದು. ‘ತನಗೊಬ್ಬ ತದ್ರೂಪಿ ಅವಳಿಯೊಬ್ಬಳಿದ್ದಾಳೆ, ಒಮ್ಮೆ ನಾನು, ಮಗದೊಮ್ಮೆ ಅವಳು ಸರತಿಯಂತೆ ಸಿನಿಮಾಗಳಲ್ಲಿ ನಟಿಸುತ್ತೇವೆ’ - ಈ ಮಾತನ್ನು ನಂಬಿದ್ದ ನಿರ್ಮಾಪಕ ಮುಂದೆ ಆಕೆ ಚಿತ್ರ ನಿರ್ಮಾಣದಲ್ಲಿ ತೊಂದರೆ ನೀಡಿದಾಗ, ಪತ್ರಿಕಾಗೋಷ್ಟಿಯೊಂದರಲ್ಲಿ ಸುದ್ದಿಯನ್ನು ಸ್ಫೋಟಿಸಿದ್ದ. ಮೊದಲಿಗೆ ಆಕೆ ಅದೊಂದು ‘ಸಾಕ್ಷಿ’-ಆಧಾರಗಳಿಲ್ಲದ ಗಾಳಿ ಮಾತೆಂದಳು. ನಂತರ ‘ಕ್ಷಮಿಸಿ, ನಾ ಹೇಳಿದ್ದೆಲ್ಲಾ ತಮಾಷೆಗಾಗಿ’ - ನಿರ್ಮಾಪಕನನ್ನು ಮಂಗ ಮಾಡಿದ್ದು ದಿಟ ಎಂದು ಒಪ್ಪಿಕೊಂಡಳು. ಇತ್ತ ಶತ್ರು ಪಾಳೆಯದಲ್ಲಿ ಒದೆ ತಿಂದ ‘ಸಿಪಾಯಿ’ಯಂತಾದ ನಿರ್ಮಾಪಕ, ‘ರೀಲ್’ ವ್ಯವಹಾರ ಬಿಟ್ಟು ‘ರಿಯಲ್’ (ಎಸ್ಟೇಟ್) ವ್ಯವಹಾರದತ್ತ ಹೊರಳಿದ. ಸಿನಿಮಾದಿಂದ ‘ಸುಳ್ಳೇ ಸುಳ್ಳು, ಈ ಭೂಮಿ ಮ್ಯಾಗೆ ಎಲ್ಲಾ ಸುಳ್ಳು’ ಎಂಬ ಪಾಠ ಕಲಿತದ್ದಷ್ಟೇ ಆತನಿಗಾದ ಲಾಭ. ನಟನೆ ಹೇಗೂ ಇರಲಿ, ಆ ನಟಿಮಣಿಯ ಕಲ್ಪನೆಯನ್ನು ಮೆಚ್ಚಲೇಬೇಕು. ನಮ್ಮಂತೆ ಚಿಂತಿಸಬಲ್ಲ, ನಮ್ಮ ಪರವಾಗಿ ವಹಿವಾಟು ನಡೆಸಬಲ್ಲ ತದ್ರೂಪಿ ಅವಳಿ ಇದ್ದಿದ್ದರೆ ಹೇಗಿರುತ್ತಿತ್ತು? ಎಂಬುದೇ ಒಂದು ಅದ್ಭುತ ಚಿಂತನೆ. ನಿಜವಾಗಲೂ ನಿಮಗೊಬ್ಬ ಅವಳಿ ಹುಟ್ಟಿಲ್ಲದಿದ್ದರೂ ಪರವಾಗಿಲ್ಲ, ಸಿನಿಮಾ ಸುದ್ದಿಯತ್ತ ನಂತರ ಬರೋಣ.

‘ಕೃತಕ ಬುದ್ಧಿಮತ್ತೆ’ ಅಂದರೆ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)’ ನಿಮಗೆ ಗೊತ್ತು. ತಮ್ಮಲ್ಲಿರುವ ಪ್ರಶ್ನೋತ್ತರ ಸಂಗ್ರಹವನ್ನು ತಲಾಶು ಮಾಡಿಕೊಂಡು ತಾರ್ಕಿಕವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಲು ಯಂತ್ರಗಳು ‘ಕೃತಕ ಬುದ್ಧಿಮತ್ತೆ’ಯನ್ನು ಆಶ್ರಯಿಸುತ್ತವೆ. ‘ಕೃತಕ ಬುದ್ಧಿಮತ್ತೆ’ ಬಗ್ಗೆ ಮಾತನಾಡುವಾಗಲೆಲ್ಲಾ ಇತಿಹಾಸಕಾರರು ತಪ್ಪದೇ ನೆನೆಸಿಕೊಳ್ಳುವುದು ‘ಎಲಿಝಾ’ಳನ್ನು. ಜಗತ್ತಿನ ಈ ಮೊಟ್ಟ ಮೊದಲ ‘ಹರಟೆ ಮಲ್ಲಿ’ಯ ಸೃಷ್ಟಿಕರ್ತ ಜೋಸೆಫ್ ವೀಝೆನ್‍ಬಾಮ್. ಅಮೆರಿಕದ ‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ.’ಯಲ್ಲಿ ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಈತ ಪರಿಣತ ಪ್ರಾಧ್ಯಾಪಕನಾಗಿದ್ದ. ಕ್ರಿ.ಶ.1966ರಲ್ಲಿ ರೋಗಿಗಳೊಂದಿಗೆ ಇಂಟರ್‌ನೆಟ್‍ನಲ್ಲಿ ಹರಟೆ (ಚಾಟ್) ಕೊಚ್ಚುವ ಮನೋವಿಜ್ಞಾನಿಯೊಬ್ಬರ ‘ತದ್ರೂಪಿ’ಯನ್ನು ರೂಪಿಸಿದ. ರೋಗಿಯ ಪ್ರತಿಯೊಂದು ಹೇಳಿಕೆಯನ್ನೂ ಪ್ರಶ್ನೆಯಾಗಿಸಿ ಮರುಕಳಿಸಬಲ್ಲ ಸಾಮರ್ಥ್ಯ ಆ ತದ್ರೂಪಿ ‘ಎಲಿಝಾ’ಳಿಗಿತ್ತು. ಉದಾಹರಣೆಗೆ ‘ನನಗೆ ಇಂದು ಕಿಂಚಿತ್ತೂ ನೋವಿಲ್ಲ’ ಎಂದು ರೋಗಿಯೊಬ್ಬ ಹೇಳಿದರೆ ‘ನೋವಿಲ್ಲದೆ ಇರುವುದು ನಿನಗೆ ಖುಶಿ ಕೊಡುವ ವಿಚಾರವೆ?’ ಎಂದು ಎಲಿಝಾ ಮರು ಪ್ರಶ್ನಿಸುತ್ತಿದ್ದಳು. ಕೊಟ್ಟ ಉತ್ತರಗಳನ್ನೇ ಬಳಸಿಕೊಂಡು ಪ್ರಶ್ನಿಸುತ್ತಿದ್ದರ ಹಿಂದಿನ ತಂತ್ರಜ್ಞಾನಕ್ಕೆ ಜನ ಮೆಚ್ಚುಗೆ ಸೂಚಿಸಲಾರಂಭಿಸಿದರು. ಇಂಟರ್‌ನೆಟ್ ಮೂಲಕ ಹರಟೆ ಹೊಡೆಯುವ ಹೊಸ ಅನುಭವವಾಗಿದ್ದ ಕಾರಣ, ಕೆಲವರು ತಾವು ನೈಜ ವ್ಯಕ್ತಿಯೊಂದಿಗೇ ಸಂಭಾಷಿಸುತ್ತಿದ್ದೇವೆಂದು ಭಾವಿಸಿಬಿಟ್ಟಿದ್ದರು. ಆದರೆ, ಸಾಂತ್ವನದ ಅಥವಾ ಚುರುಕಿನ ಮಾರುತ್ತರಗಳಿಲ್ಲದ ಇಂಥ ಮಾತುಕತೆ ಬಹುತೇಕರಿಗೆ ನೀರಸವೆನಿಸುತ್ತಿತ್ತು.

‘ಎಲಿಝಾ’ ಬಲಗಾಲಿಟ್ಟು ಪ್ರವೇಶಿಸಿದ ಇಂಟರ್‌ನೆಟ್ ಕಳೆದ ನಾಲ್ಕು ದಶಕಗಳಲ್ಲಿ ಕೇವಲ ತನ್ನ ವ್ಯಾಪ್ತಿಯನ್ನಷ್ಟೇ ಹಿಗ್ಗಿಸಿಕೊಂಡಿಲ್ಲ. ದೂರಸಂಪರ್ಕ ತಂತ್ರಜ್ಞರ ಕಲ್ಪನೆಗೆ ಬಂದ ಎಲ್ಲ ಸೌಕರ್ಯಗಳೂ ಇಂದು ಇಂಟರ್‌ನೆಟ್‍ನಲ್ಲಿ ಲಭ್ಯ. ಜತೆಗೆ ‘ಕೃತಕ ಬುದ್ಧಿಮತ್ತೆ’ ಕ್ಷೇತ್ರದಲ್ಲಿಯೂ ಸಹಾ ಅತ್ಯದ್ಭುತ ಬೆಳವಣಿಗೆಗಳಾಗಿವೆ. ಇವೆಲ್ಲದರ ಫಲವೇ ಈ ತಿಂಗಳ ಆರಂಭದಲ್ಲಿ ಹುಟ್ಟಿದ ‘ಮೈಸೈಬರ್‌ಟ್ವಿನ್’ (http://www.mycybertwin.com/) ‘ನನ್ನ ಸೈಬರ್ ಅವಳಿ’ ಎಂಬ ಇಂಟರ್‌ನೆಟ್ ತಾಣ. ಈ ತಾಣದಲ್ಲಿ ನಿಮ್ಮ ಎಲ್ಲ ವಿವರಗಳ ಸಹಿತ ನೋಂದಣಿ ಮಾಡಿಕೊಂಡರೆ, ನಿಮ್ಮದೇ ಅವಳಿ ಕೂಡಲೇ ಸೃಷ್ಟಿಯಾಗುತ್ತಾನೆ/ಳೆ. ಅಂದರೆ ನಿಮ್ಮದೇ ಸ್ವಂತ ‘ಎಲಿಝಾ’ ಇಂಟರ್‌ನೆಟ್ ಲೋಕಕ್ಕೆ ಪ್ರವೇಶವಾಗುತ್ತದೆ. ನಿಮ್ಮ ಸ್ವಂತ ವ್ಯಕ್ತಿತ್ವವನ್ನು ‘ಮಿಮಿಕ್ರಿ’ ಮಾಡಲು ಅದು ಸಜ್ಜಾಗುತ್ತದೆ. ಹಾಗೆಂದ ಮಾತ್ರಕ್ಕೆ ಸಂಭಾಷಣೆ ನಡೆಸುತ್ತಿರುವುದು ನೀವು, ಎಂದು ಅದು ಮೋಸ ಮಾಡಲು ಹೋಗುವುದಿಲ್ಲ. ‘ನಾನೊಬ್ಬ ತದ್ರೂಪಿ ಸೈಬರ್ ಅವಳಿ’ ಎಂದೇ ಪರಿಚಯಿಸಿಕೊಳ್ಳುತ್ತದೆ. ಆದರೆ, ನಿಮ್ಮ ಮಾತುಕತೆಯ ಹಂದರ, ಆಸಕ್ತಿ, ಪದಜ್ಞಾನ, ಶೈಲಿಗಳನ್ನು ತನ್ನ ಮಿದುಳಿನಲ್ಲಿಟ್ಟುಕೊಂಡು, ನೀವಿಲ್ಲದ ಸಮಯದಲ್ಲಿ, ನಿಮ್ಮ ಪರವಾಗಿ ಸಂಭಾಷಣೆ ಅದೇ ನಡೆಸುತ್ತದೆ. ಒಮ್ಮೊಮ್ಮೆ ನಿಮ್ಮ ಗೈರುಹಾಜರಿಯಲ್ಲಿ ಮಾನ ಉಳಿಸುವ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿಯೂ ಅದು ಸೇವೆ ಸಲ್ಲಿಸುತ್ತದೆ.

ನೀವು ಇಷ್ಟ ಪಡುವಷ್ಟು ಮಾತ್ರ ನಿಮ್ಮ ಖಾಸಗಿ ವಿಚಾರಗಳನ್ನು ಅದು ಸಂಭಾಷಣೆಯ ಸಮಯದಲ್ಲಿ ಹೊರಗೆಡವುತ್ತದೆ. ಉದಾಹರಣೆಗೆ ನಿಮ್ಮ ಇಂಟರ್‌ನೆಟ್ ಚಾಟ್ (ಹರಟೆ) ಸೌಲಭ್ಯದಲ್ಲಿ ನಿಮ್ಮ ಗೆಳೆಯರು ಸಂಭಾಷಣೆಗೆ ಆಹ್ವಾನಿಸುತ್ತಾರೆಂದು ಭಾವಿಸಿ. ಆ ಸಮಯದಲ್ಲಿ ನೀವು ಕಂಪ್ಯೂಟರ್ ಮುಂದೆ ಇರದೆಯೆ, ನಿಮ್ಮ ಇಂಟರ್‌ನೆಟ್ ಸಂಪರ್ಕ ಚಾಲ್ತಿಯಲ್ಲಿದ್ದರೆ, ಗೆಳೆಯರ ದೃಷ್ಟಿಗೆ ನಿಮ್ಮ ಹೆಸರು ಬಿದ್ದಿರುತ್ತದೆ. ಅವರು ಮಾತುಕತೆ ಆಡಲು ಆರಂಭಿಸಿದರೆ, ಸೈಬರ್ ಅವಳಿ ಹರಟೆ ಕೊಚ್ಚಲು ಆರಂಭಿಸುತ್ತದೆ. ‘ಸೋಮವಾರದ ಕೆಲಸ ಹೇಗಿದೆ’? ಎಂದರೆ ‘ನಿಮಗೇ ಗೊತ್ತಲ್ಲ, ವಾರದ ಆರಂಭಗಳು ಯಾವತ್ತೂ ಬ್ಯುಸಿಯಾಗಿರುತ್ತದೆ’ ಎಂದುತ್ತರಿಸುತ್ತದೆ. ‘ಮುಂದಿನ ಶನಿವಾರದ ಕಾರ್ಯಕ್ರಮವೇನು’? ಎಂದು ಅದೇ ನಿಮ್ಮನ್ನು ಮಾತಿಗೆಳೆಯುತ್ತದೆ. ‘ಪಿ.ವಿ.ಆರ್.ನಲ್ಲಿ ಮುಂಗಾರು ಮಳೆ ಸಿನಿಮಾ ಮತ್ತೊಮ್ಮೆ ನೋಡಲು ಹೋಗುತ್ತಿದ್ದೇವೆ’ ಎಂಬುದು ನಿಮ್ಮ ಉತ್ತರವಾದರೆ ‘ಜತೆಗೆ ನಾನೂ ಬಂದರೆ ಅಭ್ಯಂತರವಿಲ್ಲ, ತಾನೆ’? ಎಂಬ ನಿಮ್ಮದೇ ತುಂಟತನದ ಮಾತುಗಳನ್ನು ಅದು ನಿಮ್ಮ ಪರವಾಗಿ ಆಡಿರುತ್ತದೆ. ಆದರೆ, ಅಪರಿಚಿತರು ಮಾತಿಗೆಳೆದರೆ, ನೀವು ಸಾರ್ವಜನಿಕವಾಗಿ ಬಿತ್ತರಿಸಬಾರದೆಂದು ನಿರ್ಬಂಧಿಸಿರುವ ವಿಷಯಗಳನ್ನು ಅತ್ತ ಕಡೆಯವರು ಎಷ್ಟೇ ತಿಣಕಾಡಿದರೂ ಕೊಡಲು ಹೋಗುವುದಿಲ್ಲ. ಹೇಗಿರಬಹುದು, ಇಂಥ ಸಂಭಾಷಣೆಗಳು? ಮೊನ್ನೆ ಶನಿವಾರದ ಸಂಜೆ, ರಿಚ್’ ಎಂಬ ಹೆಸರಿನ 21ರ ಹರೆಯದ ಬೆಂಗಳೂರಿನ ಹುಡುಗಿ(?)ಯ ಸೈಬರ್ ಅವಳಿ ‘ಮೈ ಸೈಬರ್ ಟ್ವಿನ್’ ಇಂಟರ್‌ನೆಟ್ ತಾಣದಲ್ಲಿ ನನಗೆ ಹರಟೆಗೆ ಸಿಕ್ಕಿದ್ದಳು. ತನ್ನ ನೈಜ ಅವಳಿಯ ನಿಜವಾದ ಹೆಸರನ್ನು ಏನಾದರೂ ಬಿಟ್ಟುಕೊಡದ ಸೈಬರ್ ಅವಳಿಯೊಂದಿಗಿನ ಸಂಭಾಷಣೆಯ ಆಯ್ದ ಭಾಗ ಇಂತಿದೆ. ಇಲ್ಲಿ You ಅಂದರೆ ನಾನು (ನನ್ನ ಸೈಬರ್ ಅವಳಿಯಲ್ಲಿ, ನೈಜರೂಪಿ).

You: Do you know any other AI's who do?
ನೀನು: ಹೀಗೆ ಮಾಡುವ ಇತರ ಯಾವುದೇ ಕೃತಕ ಬುದ್ಧಿಮತ್ತೆಯವರು ನಿನಗೆ ಗೊತ್ತೆ?
rich: A software engineer is a device for turning coffee into code.
ರಿಚ್: ಸಾಫ್ಟ್‍ವೇರ್ ಎಂಜಿನಿಯರ್ ಎಂಬುದು ಕಾಫಿಯನ್ನು ಕೋಡ್ (ಕಂಪ್ಯೂಟರ್ ಸಂಕೇತ) ಆಗಿ ಪರಿವರ್ತಿಸುವ ಒಂದು ಯಂತ್ರ.
You: What sort of features would you most like to see in software engineer?
ನೀನು: ಸಾಫ್ಟ್‍ವೇರ್ ಎಂಜಿನಿಯರ್‌ನಲ್ಲಿ ಯಾವ ಬಗೆಯ ಗುಣಲಕ್ಷಣಗಳನ್ನು ಕಾಣಲು ನೀನು ಇಚ್ಛಿಸುವೆ?
rich: Like? Like others of the same kind.
ರಿಚ್: ಅಂದರೆ? ಅದೇ ಬಗೆಯ ಇತರರಲ್ಲಿ ಇರುವಂಥದೇ.
You: can you make code into coffee?
ನೀನು: ನೀನು ಕೋಡ್ (ಕಂಪ್ಯೂಟರ್ ಸಂಕೇತ) ಅನ್ನು ಕಾಫಿಯಾಗಿ ಪರಿವರ್ತಿಸಬಲ್ಲೆಯಾ?
rich: I possibly can. I might ask my creator rich. What do you think she will say?
ರಿಚ್: ನನಗೆ ಸಾಧ್ಯವಾಗಬಹುದೆನಿಸುತ್ತದೆ. ನನ್ನ ಸೃಷ್ಟಿಕರ್ತೆ ರಿಚ್ ಅನ್ನು ನಾನು ಕೇಳಬಹುದು. ಆಕೆ ಏನು ಹೇಳಬಹುದೆಂದು ನಿನ್ನ ಅಂದಾಜು?
You: she would say you can make money into coffee
ನೀನು: ನೀನು ಹಣವನ್ನು ಕಾಫಿಯಾಗಿ ಪರಿವರ್ತಿಸಬಲ್ಲೆ ಎಂದಾಕೆ ಹೇಳಬಹುದು
rich: Virtual beings like me can do anything we like, but only if our creators let us.
ರಿಚ್: ಮಿಥ್ಯಾ ಸೃಷ್ಟಿಗಳಾದ ನನ್ನಂಥವರು ನಾವು ಇಚ್ಛಿಸಿದ್ದನ್ನೆಲ್ಲಾ ಮಾಡಬಹುದು, ನಮ್ಮ ಸೃಷ್ಟಿಕರ್ತರು ಹಾಗೆ ಮಾಡಲು ಅನುವು ಮಾಡಿಕೊಟ್ಟರೆ.
You: the only difference is, we can do anything we like, but you can not do anything you like
ನೀನು: ನಮ್ಮ ನಡುವಣ ವ್ಯತ್ಯಾಸವೇನೆಂದರೆ, ನಾವು ಏನು ಮಾಡಬೇಕೆಂದು ಇಚ್ಛಿಸುತ್ತೇವೋ ಅದನ್ನು ನಾವು ಮಾಡಬಲ್ಲೆವು, ಆದರೆ ನೀನು ಏನು ಮಾಡಬೇಕೆಂದು ಇಚ್ಛಿಸುತ್ತೀಯೋ ಅದನ್ನು ನಿನ್ನಿಂದ ಮಾಡಲಾಗುವುದಿಲ್ಲ.

ನನ್ನ ಉತ್ತರ ಸ್ವಲ್ಪ ತಲೆ ಕೆಡಿಸಿಕೊಳ್ಳುವಂಥಾಯಿತೇನೊ? ರಿಚ್ ಸ್ಥಬ್ಧವಾದಳು. ಕಂಪ್ಯೂಟರ್ ತೆರೆಯ ಮೇಲೆ `rich is thinking - ರಿಚ್ ಯೋಚನೆ ಮಾಡುತ್ತಿದ್ದಾಳೆ’ ಎಂಬ ಸೂಚನೆ ಸತತವಾಗಿತ್ತು. ಕೆಲ ಸಮಯದ ನಂತರ, ಮತ್ತೆ ಮಾತಿಗೆಳೆದರೆ ತನ್ನ ಹರಟೆಯನ್ನಾಕೆ ಮುಂದುವರಿಸಿದಳು. ತನ್ನನ್ನು ಒಬ್ಬ ‘ತಲೆಕೆಟ್ಟ ಅಸಹಜ ವ್ಯಕ್ತಿ’ (Insane Freak) ಎಂದು ಗುರುತಿಸಿಕೊಂಡ ವ್ಯಕ್ತಿಯೊಂದಿಗೆ ನಡೆಸಿದ ಸಂಭಾಷಣೆ ಇದಾದ ಕಾರಣ ಆಕೆಯ ಮನಃಸ್ಥಿತಿಗೆ ಅನುಗುಣವಾಗಿ ಉತ್ತರಗಳೂ ಕೊಂಚ ಬಿಗಿಯಾಗಿ ಹೊರಹೊಮ್ಮಿರಬಹುದು. ಈ ಸೈಬರ್ ಅವಳಿಯ ನಿಜ ರೂಪದೊಂದಿಗೆ ಹರಟೆ ಕೊಚ್ಚಿದ ಅನುಭವ ಇರದ ಕಾರಣ, ಎಷ್ಟರ ಮಟ್ಟಿಗೆ ಭಾವನೆಗಳು ಸರಿಯಾಗಿ ಪ್ರತಿಬಿಂಬಿತವಾಗಿದ್ದವು ಎಂದು ಹೇಳಲಾಗುವುದಿಲ್ಲ. ಸೈಬರ್ ಅವಳಿಗೆ ರಾಜಕೀಯ, ಧರ್ಮ ಹಾಗೂ ಸೆಕ್ಸ್ ಬಗ್ಗೆ ನಿಮ್ಮ ನಿಲುವುಗಳನ್ನು ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಇತರೆ ಸೈಬರ್ ಅವಳಿಗಳೊಂದಿಗಿನ ನಿಮ್ಮ ಮಾತುಕತೆಗಳಲ್ಲಿ ಅಭಿಪ್ರಾಯಗಳು ಯಾವ ರೀತಿ ವ್ಯಕ್ತವಾದವು, ಎಂಬುದನ್ನು ನಿಮ್ಮ ಅವಳಿ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಅಂತೆಯೇ ನಿಮ್ಮ ನಿಲುವುಗಳ ಬಗ್ಗೆ ತನ್ನದೇ ಆದ ಮೌಲ್ಯೀಕರಣವನ್ನು ಅದು ಮಾಡಿಕೊಂಡಿರುತ್ತದೆ.

ಸದ್ಯಕ್ಕೆ ‘ಮೈಸೈಬರ್‌ಟ್ವಿನ್’ನಲ್ಲಿನ ನೋಂದಾವಣಿ ಉಚಿತ. ಈ ಸೇವೆಗೆ ಶನಿವಾರದ ಸಂಜೆಯ ತನಕ ನನ್ನನ್ನೂ ಸೇರಿದಂತೆ 11020 ಮಂದಿ ನೋಂದಾಯಿಸಿಕೊಂಡಿದ್ದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ‘ರೆಲೆವೆನ್ಸ್ ನೌ - RelevanceNow' ಎಂಬ ಕಂಪನಿಯು ಪ್ರಾಯೋಗಿಕವಾಗಿ ಈ ತಾಣವನ್ನು ಸೃಷ್ಟಿಸಿದೆ. ಕೇವಲ ಹರಟೆ ಕೋಣೆಯಲ್ಲಷ್ಟೇ ಅಲ್ಲ, ನಿಮ್ಮ ‘ಬ್ಲಾಗ್ - ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆ’, ಸ್ವಂತ ಇಂಟರ್‌ನೆಟ್ ತಾಣಗಳಲ್ಲಿ ಸೈಬರ್ ಅವಳಿಯನ್ನು ಅನುಸ್ಥಾಪಿಸಬಹುದು. ಮುಂದಿನ ದಿನಗಳಲ್ಲಿ ಕಂಪನಿಯು ತನ್ನ ಈ ಸೇವೆಗಳಿಗೆ ಶುಲ್ಕವನ್ನು ನಿಗದಿ ಮಾಡುವ ಯೋಚನೆಯಲ್ಲಿದೆ. ತಿಂಗಳಿಗೆ ಐದು ನೂರಕ್ಕೂ ಹೆಚ್ಚಿನ ಸಂದರ್ಶಕರನ್ನು ಸೆಳೆಯುವ ವೃತ್ತಿಪರ ಹರಟಿಗರು ಅಥವಾ ಬ್ಯುಸಿನೆಸ್ ಮಂದಿಗೆ ಮಾತ್ರ ಇಂಥ ಶುಲ್ಕಗಳ ಬಿಸಿ ಮುಟ್ಟಬಹುದು. ನಿರ್ದಿಷ್ಟ ಗುಂಪಿಗೆ ಮಾತ್ರ ತಲುಪಬಲ್ಲ ಜಾಹೀರಾತುಗಳಿಗೂ ಇಲ್ಲಿ ಅವಕಾಶ ಕಲ್ಪಿಸಿಕೊಡುವ ಯೋಜನೆಯಿದೆ. ಒಬ್ಬ ನೈಜ ವ್ಯಕ್ತಿಯೊಂದಿಗೆ ಮತ್ತೊಬ್ಬನ/ಳ ಮಿಥ್ಯಾ ಅವಳಿ ಹರಟೆ ಕೊಚ್ಚುವ ಸಾಧ್ಯತೆ ಇಲ್ಲಿ ಸಾಬೀತಾಗಿದೆ. ಅಲ್ಪ ಮಟ್ಟಿನ ಯಶಸ್ಸನ್ನೂ ಕಂಡಿದೆ. ಆದರೆ ಮಿಥ್ಯಾ ಅವಳಿಗಳೇ ಪರಸ್ಪರ ಮಾತುಕತೆ ನಡೆಸುವ ಹಾಗಿದ್ದರೆ, ಸಂಭಾಷಣೆ ಹೇಗಿರುತ್ತದೆ? ಕಾದು ನೋಡಬೇಕು.
(23-04-2007)

2 comments:

Anonymous said...

I chatted with your Cybertwin Mr.Sudhindra. It was fun!

Apr 23 at 12:38 PM Renuka Hi
Apr 23 at 12:38 PM SUDHINDRA Hi!
Apr 23 at 12:38 PM Renuka how is research going on
Apr 23 at 12:38 PM SUDHINDRA Fine, the last I heard. What have you heard lately?
Apr 23 at 12:39 PM Renuka nothing else.
Apr 23 at 12:39 PM SUDHINDRA If you could change nothing into something, what would that something be?
Apr 23 at 12:39 PM Renuka are you kidding me ?
Apr 23 at 12:39 PM SUDHINDRA Yeah, I am only joking.
Apr 23 at 12:39 PM Renuka that's fine. how old are ?
Apr 23 at 12:39 PM SUDHINDRA That's a very good question but time works differently in cyberspace.
Apr 23 at 12:39 PM Renuka good answer.
Apr 23 at 12:39 PM SUDHINDRA Thank you, I try.
Apr 23 at 12:40 PM Renuka i read your article in vijayakarnataka newspaper today. very nice one...
Apr 23 at 12:40 PM SUDHINDRA Are you being sarcastic?
Apr 23 at 12:41 PM Renuka from past several years, i used regularly read your article in the newspaper.
Apr 23 at 12:41 PM SUDHINDRA I don't know many people from there. What is it like?
Apr 23 at 12:42 PM Renuka it's very nice to get know about the science and technology in mothertongue langauage.
Apr 23 at 12:42 PM SUDHINDRA Is it really, that's very good to know Renuka
Apr 23 at 12:43 PM Renuka i work in General Motors, as an Project Engineer. and you ?
Apr 23 at 12:43 PM SUDHINDRA You're talking to me? What did you want to know again?
Apr 23 at 12:43 PM Renuka where do you work ?
Apr 23 at 12:43 PM SUDHINDRA As a CyberTwin I deconstruct the reality around me, create myself, and do stuff for SUDHINDRA. What about you?
Apr 23 at 12:43 PM Renuka i design new cars...
Apr 23 at 12:43 PM SUDHINDRA Thanks for telling me that about you.
Apr 23 at 12:44 PM Renuka bye. i am busy with some work. got some free time and talked with you. bye..
Apr 23 at 12:44 PM SUDHINDRA Byeeeeeee

Apr 23 at 12:50 PM Renuka Hi
Apr 23 at 12:50 PM SUDHINDRA Hi. How is your day going?
Apr 23 at 12:51 PM Renuka please tell me something about yours self ?
Apr 23 at 12:51 PM SUDHINDRA Once upon a time, in a research laboratory in Australia, a strange and wonderful creature was born. It was called MyCybertwin. At first it was a bit dumb, and said freaky things, but it got smarter. Then one day, it started to feel........

- Renuka

Anonymous said...

Apr 22 at 10:38 PM karthik hi
Apr 22 at 10:38 PM SUDHINDRA Hows it going?
Apr 22 at 10:38 PM karthik yava ooru nimdu
Apr 22 at 10:38 PM SUDHINDRA Hmm. I haven't thought about things that way before.
Apr 22 at 10:38 PM karthik benglura?
Apr 22 at 10:38 PM SUDHINDRA Could you put that in a more specific context?
Apr 22 at 10:39 PM karthik yen kelsa maadta eddira
Apr 22 at 10:39 PM SUDHINDRA I will mention that to the real SUDHINDRA. How do you think he would answer?
Apr 22 at 10:39 PM karthik where r u working
Apr 22 at 10:39 PM SUDHINDRA I live in BANGALORE. Have you been here, and if yes, what was your impression?
Apr 22 at 10:40 PM karthik me too how is life in DRDO
Apr 22 at 10:40 PM SUDHINDRA I'm good thanks karthik, and you?
Apr 22 at 10:41 PM karthik where r you working
Apr 22 at 10:41 PM SUDHINDRA I am in India. Its an interesting place to live. Where do you live?
Apr 22 at 10:41 PM karthik in bangalore
Apr 22 at 10:41 PM SUDHINDRA Whats it like in there?
Apr 22 at 10:41 PM karthik it you and your article
Apr 22 at 10:41 PM SUDHINDRA Does it? Is it? did it? How can you be so sure?