Wednesday, May 9, 2007

‘ಮಾರ’ನ ಕಣ್ಣು ದಾರಿ ಮ್ಯಾಗೆ ..... !


ಪರಿಚಿತ ನಗರವೊಂದಕ್ಕೆ ಮೊದಲ ಬಾರಿ ಪ್ರವೇಶಿಸಿದ್ದೀರಿ. ಆ ನಗರದ ಸಮುದ್ರ ತಟ, ಸಮೀಪದಲ್ಲಿಯೇ ಇದ್ದ ವಾಸ್ತು ವೈಭವದ ಹಳೆಯ ದೇವಾಲಯವನ್ನು ಕಂಡು ತಂಗುದಾಣಕ್ಕೆ ಹಿಂದಿರುಗುತ್ತೀರಿ. ಅಲ್ಲಿಯೇ ಪರಿಚಿತರಾದವರೊಂದಿಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳುವಾಗ ‘ನಾಲ್ಕು ಹರಿದಾರಿ ದೂರದಲ್ಲಿದ್ದ ಪುರಾತನ ಕೋಟೆಯನ್ನು ನೋಡದೆಯೆ ಬಂದಿರಲ್ಲ’ ಎಂದಾಗ ನಿಮಗೆ ಪಿಚ್ಚೆನಿಸುತ್ತದೆ. ಮರುದಿನ ಮತ್ತದೇ ದಾರಿಯಲ್ಲಿ ನಿಮ್ಮ ಪಯಣ ಸಾಗಿಸುವಾಗ ‘ಮೊದಲೇ ಈ ವಿಷಯ ತಿಳಿದಿದ್ದಿದ್ದರೆ ಹಣ ಹಾಗೂ ಸಮಯ ಎರಡೂ ಉಳಿದಿರುತ್ತಿತ್ತು’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತೀರಿ. ಅದು ನಿಮ್ಮೊಬ್ಬರ ಅನುಭವವಷ್ಟೇ ಅಲ್ಲ, ಪ್ರತಿಯೊಬ್ಬ ಪ್ರವಾಸಿಯೂ ಪಡುವ ಬವಣೆ. ಊರಿಗೆ ತೆರಳುವ ಮುನ್ನ ಅದೆಷ್ಟೇ ಸಂಶೋಧನೆ ನಡೆಸಿ, ಪ್ರವಾಸಿ ಗೈಡುಗಳನ್ನು ಅಭ್ಯಸಿಸಿ, ನಕ್ಷೆಗಳನ್ನು ಪರಿವೀಕ್ಷಿಸಿದ್ದರೂ, ದಾರಿ ತಪ್ಪುವುದು ನಿಮ್ಮ ಆ ಜನ್ಮ ಸಿದ್ಧ ಹಕ್ಕು. ಸ್ಥಳ ಪುರಾಣವನ್ನು ಮೊದಲೇ ಮನನ ಮಾಡಿಕೊಂಡು, ದಾರಿಹೋಕರನ್ನು ಮಾರ್ಗದರ್ಶನಕ್ಕೆ ಯಾಚಿಸಿದಿರೊ, ನೂರಕ್ಕೆ ತೊಂಬತ್ತರಷ್ಟು ಬಾರಿ ಅವರು ನಿಮ್ಮನ್ನು ರವಾನಿಸುವುದು ಗೊಂದಲಪುರತ್ತಲೇ. ನೀವೆಲ್ಲಿ ನಡೆದರೂ ನಿಮ್ಮ ದಾರಿ ತಪ್ಪಿಸದಂಥಹ ಅನುಕೂಲ ವಿದೇಶಗಳಲ್ಲಿನ ಅನೇಕ ಕಾರುಗಳಲ್ಲಿವೆ. ನಭೋಮಂಡಲದಲ್ಲಿ ಸದಾಕಾಲ ಸುತ್ತುತ್ತಿರುವ ಉಪಗ್ರಹಗಳ ದಂಡೊಂದರ ನೆರವಿನಿಂದ ನಿಮ್ಮ ಬಳಿಯಿರುವ ಎಲೆಕ್ಟ್ರಾನಿಕ್ ಉಪಕರಣಕ್ಕೆ ‘ತಾವು’ ಎಲ್ಲಿದ್ದೀರೆಂದು ಸಂದೇಶಗಳನ್ನು ಕಳುಹಿಸಬಹುದು. ಇದನ್ನೇ ಜೀ.ಪಿ.ಎಸ್. (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಎನ್ನುವುದು. ಉಪಗ್ರಹ ನಿರ್ದೇಶಿತ ಮಾರ್ಗದರ್ಶನ ವ್ಯವಸ್ಥೆಯಿದು. ಈ ವ್ಯವಸ್ಥೆಯ ಕಾರ್ಯಾಚರಣೆಯನ್ನು ಮನದಟ್ಟು ಮಾಡಿಕೊಳ್ಳಬೇಕಾದರೆ, ನಿಮ್ಮ ಮೊಬೈಲ್ ಫೋನಿನ ಪರದೆಯತ್ತ ಒಮ್ಮೆ ಕಣ್ಣು ಹಾಯಿಸಬಹುದು. ಬಹುತೇಕ ಮೊಬೈಲ್ ಫೋನ್ ಸೇವೆ ನೀಡುವವರು, ತಮ್ಮ ಸಂಪರ್ಕ ಸ್ತಂಭದಿಂದ (ಟವರ್) ಸಂದೇಶಗಳನ್ನು ಕಳುಹಿಸುವಾಗ ‘ಸ್ಥಳದ’ ಮಾಹಿತಿಯನ್ನೂ ಕೊಡುತ್ತಾರೆ. ಹೀಗಾಗಿ ರೈಲಿನಲ್ಲಿ ಪಯಣಿಸುವಾಗ ನಿಮ್ಮ ಮೊಬೈಲ್ ಫೋನಿನಲ್ಲಿ, ‘ದಾವಣಗೆರೆ, ಚಿಕ್ಕಜಾಜೂರು, ಅರಸೀಕೆರೆ ... ಯಶವಂತಪುರ, ಮಲ್ಲೇಶ್ವರ ...’ ಇತ್ಯಾದಿ ಹೆಸರುಗಳು ಮೂಡಿಬರುತ್ತವೆ.


ಅಮೆರಿಕದ ರಕ್ಷಣಾ ಇಲಾಖೆ ಇಪ್ಪತ್ನಾಲ್ಕು ಕೃತಕ ಉಪಗ್ರಹಗಳ ಸರಮಾಲೆಯೊಂದನ್ನು ಭೂಮಂಡಲದಿಂದ ಹನ್ನೊಂದು ಸಾವಿರ ಮೈಲುಗಳ ಎತ್ತರದಲ್ಲಿ ಇಟ್ಟಿದೆ. ದಶಕಗಳ ಹಿಂದೆ ನಿರ್ಮಿಸಿದ ಈ ಅತ್ಯದ್ಭುತ ಸಂಪರ್ಕ ವ್ಯವಸ್ಥೆ ‘ಜೀಪೀಎಸ್’ಗೆ ಜಗತ್ತಿನ ಏಕೈಕ ವಿಶ್ವವ್ಯಾಪಿ ಸಂಪರ್ಕ ವ್ಯವಸ್ಥೆ ಎಂಬ ಹೆಗ್ಗಳಿಕೆಯಿದೆ. ಈ ಉಪಗ್ರಹ ಮಾಲೆಯಿಂದ ಹೊಮ್ಮುವ ಸಂಕೇತಗಳನ್ನು ಗ್ರಹಿಸಬಲ್ಲ ‘ಜೀಪೀಎಸ್ ರಿಸೀವರ್’ ಮೂಲಕ ಜಗತ್ತಿನ ಯಾವುದೇ ಒಂದು ತಾಣದ ಅಕ್ಷಾಂಶ, ರೇಖಾಂಶ, ಎತ್ತರವನ್ನು ನಿಖರವಾಗಿ ಗುರುತಿಸಬಹುದು. ರಿಸೀವರ್‌ನ ಸಂಪರ್ಕ ಹೊಂದಿದ ಯಾವುದೇ ಒಬ್ಬ ವ್ಯಕ್ತಿ ಭೂಮಂಡಲದ ಯಾವ ನಿರ್ದಿಷ್ಟ ಭಾಗದಲ್ಲಿದ್ದಾನೆ? ಎಂಬುದನ್ನು ಉಪಗ್ರಹ ಮಾಲೆ ಸ್ವೀಕರಿಸುವ ಸಂಕೇತಗಳ ಮೂಲಕ ತಿಳಿಯಬಹುದು. ನಕ್ಸಲರನ್ನು ಅರಸುತ್ತಾ ದಟ್ಟ ಅಡವಿಯಲ್ಲಿ ದಾರಿ ತಪ್ಪಿದವರು, ಮೋಜಿನ ದೋಣಿ ವಿಹಾರ, ವಾಯುಯಾನ, ಕಾರ್‌ರೇಸ್‍ಗಳಲ್ಲಿ ದಿಕ್ಕೆಟ್ಟವರು, ಚಾರಣದಲ್ಲಿ ತಪ್ಪಿಸಿಕೊಂಡವರು, ಎಲ್ಲಿದ್ದಾರೆಂಬುದನ್ನು ನಿಖರವಾಗಿ ಕಂಡುಹಿಡಿಯಬಹುದು (ಅವರ ಬಳಿ ಜೀಪೀಎಸ್ ರಿಸೀವರ್ ಇದ್ದು, ಅದರ ಸ್ವಿಚ್ ಬಂದ್ ಮಾಡಿಲ್ಲದಿದ್ದರೆ). ಭೂಮಂಡಲವನ್ನು ಸತತವಾಗಿ ಸುತ್ತುತ್ತಿರುವ ಇಪ್ಪತ್ನಾಲ್ಕು ಉಪಗ್ರಹಗಳಲ್ಲಿ ಕನಿಷ್ಟ ನಾಲ್ಕು ಉಪಗ್ರಹಗಳು ಸ್ವೀಕರಿಸಿದ ಸಂಕೇತಗಳನ್ನು ವಿಶ್ಲೇಷಿಸಿ, ಸಂಕೇತ ಬಂದ ಜಾಗವು ಭೂಮಿಯ ಯಾವ ಅಕ್ಷಾಂಶ-ರೇಖಾಂಶದಲ್ಲಿ ಇದೆಯೆಂದು ನಿಯಂತ್ರಣ ವ್ಯವಸ್ತೆ ನಿರ್ಧರಿಸುತ್ತದೆ. ಆ ಸ್ಥಳದ ಭೂಪಟದ ಪುಟ್ಟ ಪ್ರತಿಯನ್ನು ರಿಸೀವರ್‌ನ ತೆರೆಯ ಮೇಲೆ ಮೂಡಿಸುತ್ತದೆ. ಇಡೀ ಪ್ರದೇಶದ ಭೂಪಟವನ್ನು ಪರಿಶೀಲಿಸಿ, ತಾನು ಹೋಗಬೇಕಾಗಿರುವುದೆಲ್ಲಿ ಎಂಬುದನ್ನು ಗುರುತಿಸಿ, ಅಲ್ಲಿಗೆ ಸಮೀಪದ ಹಾದಿ ಯಾವುದು? ಎಂಬ ಪ್ರಶ್ನೆಗೆ ಮಾರ್ಗದರ್ಶನ ಪಡೆಯಬಹುದು. ಕಾರಿನಲ್ಲಿ ಜೀ.ಪಿ.ಎಸ್. ಆಧರಿತ ಸಂಪರ್ಕ ಸೇವೆ ಇದ್ದ ಮಾತ್ರಕ್ಕೆ ನಿಮ್ಮ ಸಮಸ್ಯೆಗಳು ಪರಿಹಾರವಾದವು ಎಂದುಕೊಳ್ಳಬೇಡಿ. ಸ್ಥಳ ಯಾವುದೆಂದು ತಿಳಿಸುತ್ತದೆಯೇ ವಿನಃ ಸಮೀಪದಲ್ಲಿರುವ ಮತ್ತೊಂದು ಪ್ರೇಕ್ಷಣೀಯ ಸ್ಥಳ, ನಿಮ್ಮ ಆಸಕ್ತಿಯ ಊಟದ ತಾಣ, ಹತ್ತಿರದ ಪೆಟ್ರೋಲ್ ಬಂಕ್ .. ಇತ್ಯಾದಿ ವಿವರಗಳನ್ನು ಅದು ತಿಳಿಸುವುದಿಲ್ಲ. ಈ ಬಗೆಯ ಸೇವೆಗಳನ್ನು ಮೊಬೈಲ್ ಫೋನಿನ ಮೂಲಕ ನೀಡುವ ಕೆಲ ಪ್ರಯತ್ನಗಳು ನಾಲ್ಕೈದು ವರ್ಷಗಳ ಹಿಂದೆಯೇ ನಡೆದಿದ್ದವು. ಮೊಬೈಲ್ ಫೋನ್‍ಗಳಿಗೆ ಅಳವಡಿಸಲಾದ ‘ಆಮ್ನಿಪ್ರೆಸೆನ್ಸ್’ ಎಂಬ ಸರ್ವಾಂತರ್ಯಾಮಿ ಯಂತ್ರಾಂಶ-ತಂತ್ರಾಂಶಗಳು ನಿಮ್ಮ ತಾವನ್ನು ನಿಮಗೆ ತಿಳಿಸುವುದಷ್ಟೇ ಅಲ್ಲ, ತಾವು ಎಲ್ಲಿದ್ದೀರಿ ಎಂಬ ಮಾಹಿತಿಯನ್ನೂ ಗುಪ್ತವಾಗಿ ಕಲೆಹಾಕುತ್ತಿತ್ತು. ಸಂದರ್ಭಕ್ಕನುಸಾರವಾಗಿ ನಿಮಗೆ ಪೂರಕ ಮಾಹಿತಿಯನ್ನು ಒದಗಿಸುವ ವ್ಯವಸ್ಥೆಯೂ ಅಲ್ಲಿ ಅಡಕವಾಗಿತ್ತು.


ಪ್ರಖ್ಯಾತ ಮೊಬೈಲ್ ತಯಾರಿಕಾ ಕಂಪನಿ ‘ನೋಕಿಯಾ’ ಫಿನ್‍ಲೆಂಡ್ ದೇಶದಲ್ಲಿ ಸ್ಥಾಪಿಸಿರುವ ಸಂಶೋಧನಾ ಕೇಂದ್ರವು ಇದೀಗ ಹೊಸ ಸೌಕರ್ಯವೊಂದನ್ನು ಕಲ್ಪಿಸಿದೆ. ‘ಮೊಬೈಲ್ ಆಗ್‍ಮೆಂಟೆಡ್ ರಿಯಾಲಿಟಿ ಅಪ್ಲಿಕೇಶನ್ಸ್ - ಮಾರ’ ಎಂದು ಗುರುತಿಸಲಾದ ಈ ತಂತ್ರಜ್ಞಾನದಲ್ಲಿ ಮೊಬೈಲ್ ಬಳಕೆದಾರರಿಗೆ ವಾಸ್ತವವಾಗಿ ಬೇಕಾದ ಅನುಕೂಲಗಳನ್ನು ಹೆಚ್ಚುವರಿಯಾಗಿ ನೀಡುವ ಬಗ್ಗೆ ಚಿಂತಿಸಲಾಗಿದೆ. ನೋಕಿಯಾ ಬಿಡುಗಡೆ ಮಾಡುತ್ತಿರುವ ಹೊಸ ಮೊಬೈಲ್ ಫೋನ್ ಸರಣಿಯಲ್ಲಿ ಒಂದು ಜೀಪಿಎಸ್ ಸಂವೇದಿ, ಒಂದು ದಿಕ್ಸೂಚಿ ಹಾಗೂ ಹಲವಾರು ‘ಆಕ್ಸಿಲೋಮೀಟರ್‌’ಗಳನ್ನು (ಅಂದರೆ ಸೂಕ್ಷ್ಮ ಅಲುಗಾಟಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುವ ಸಂವೇದಿಗಳು) ಜೋಡಿಸಲಾಗುತ್ತಿದೆ. ಮೊಬೈಲ್ ಫೋನ್‍ಗಳನ್ನು ‘ಚೂಟಿ’ (ಸ್ಮಾರ್ಟ್) ಆಗಿಸುವ ನಿಟ್ಟಿನಲ್ಲಿ ಇದನ್ನು ಮಹತ್ತರ ಹೆಜ್ಜೆಯೆಂದೇ ಪರಿಗಣಿಸಬಹುದು. ಫೋನಿನಲ್ಲಿನ ಕ್ಯಾಮೆರಾ ಯಾವುದೇ ವಸ್ತುವತ್ತ ಕೇಂದ್ರೀಕೃತವಾದಾಗ ಅದರೊಳಗಿನ ಎಲ್ಲ ಸಂವೇದಿಗಳು ಕಳುಹಿಸುವ ಮಾಹಿತಿಯನ್ನು ವಿಶ್ಲೇಷಕವು ಕಲೆಹಾಕುತ್ತದೆ. ತನ್ನ ಸ್ಮರಣಕೋಶದಲ್ಲಿನ ಸಂಗ್ರಹಿತ ಮಾಹಿತಿಯೊಂದಿಗೆ ಇವುಗಳನ್ನು ತಾಳೆ ಹಾಕಿ ಆ ಸ್ಥಳದ ಸುತ್ತಮುತ್ತಲಿನ ಪ್ರದೇಶದ ಬಗ್ಗೆಯೂ ಮಾಹಿತಿಯನ್ನು ಹೊರಹಾಕುತ್ತದೆ. ಉದಾಹರಣೆಗೆ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಒಂದು ಸುತ್ತಾಟ ನಡೆಸಿ, ಮುಖ್ಯ ದ್ವಾರದ ಬಳಿ ನೀವು ಬಂದೊಡನೆಯೆ ಹತ್ತಿರದಲ್ಲಿಯೇ ಎಂ.ಟಿ.ಆರ್. ಇದೆ ಎಂದೊ, ಹಾಪ್‍ಕಾಮ್ಸ್‍ನ ಮಳಿಗೆಯಲ್ಲಿ ಆಲ್ಫಾನ್ಸೊ ಮಾವು ಬಂದಿದೆ ಎಂದೊ, ಊರ್ವಶಿ ಚಿತ್ರಮಂದಿರದಲ್ಲಿ ‘ಸ್ಪೈಡರ್‌ಮ್ಯಾನ್-3' ಚಿತ್ರ ಪ್ರದರ್ಶನವಾಗುತ್ತಿದೆ ಎಂದೊ ಮಾಹಿತಿ ಬಿತ್ತರವಾದರೆ ಎಷ್ಟು ಚೆನ್ನ ಅಲ್ಲವೆ? ಜತೆಗೆ ಮಿನರ್ವ ಸರ್ಕಲ್ ಬಳಿ ಸಂಚಾರ ದಟ್ಟಣೆಯಿಂದ ವಾಹನ ಚಲನೆ ಸ್ಥಗಿತ, ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ಸಂಚರಿಸಬಹುದು ಎಂಬ ಸಲಹೆ ಬಂದರೆ ಮತ್ತಷ್ಟು ಚೆನ್ನ ಅಲ್ಲವೆ? ಲಾಲ್‍ಬಾಗ್ ಆವರಣದಲ್ಲಿಯೇ ಬೋನ್ಸಾಯ್ ವೃಕ್ಷಗಳ ಪ್ರದರ್ಶನ ನಡೆಯುತ್ತಿರುವುದು ನಿಮಗೆ ಗೊತ್ತೆ ಎಂಬ ಪ್ರಶ್ನೆ ಬಂದರೆ ನಿಮಗೆ ಖಂಡಿತವಾಗಿಯೂ ಖುಷಿಯಾದೀತು.


ತಂತ್ರಜ್ಞ ಮಾರ್ಕಸ್ ಕಹಾರಿ ನೇತೃತ್ವದಲ್ಲಿ ನೋಕಿಯಾ ನಡೆಸುತ್ತಿರುವ ಈ ಅತ್ಯದ್ಭುತ ಸಂಶೋಧನೆಯ ಬಗ್ಗೆ ಖ್ಯಾತ ವಿವಿಗಳು ಹೊಟ್ಟೆಕಿಚ್ಚಿನ ಪ್ರಶಂಸೆ ನೀಡಿವೆ. ಮೊಬೈಲ್ ಫೋನ್‍ಗಳಲ್ಲಿ ಇಂಥ ಸೌಕರ್ಯಗಳನ್ನು ನಿರ್ಮಿಸಲು ಅಮೆರಿಕದ ಕೊಲಂಬಿಯ ವಿವಿಯ ‘ಕಂಪ್ಯೂಟರ್ ಗ್ರಾಫಿಕ್ಸ್ (ದೃಶ್ಯ ಚಲನೆ) ಹಾಗೂ ಬಳಕೆದಾರರೊಂದಿಗೆ ವಹಿವಾಟು ನಡೆಸುವ ತಂತ್ರಾಂಶಗಳ ವಿಭಾಗ’ದಲ್ಲಿ ಕಳೆದ ಒಂದು ದಶಕದಿಂದ ಸಂಶೋಧನೆಗಳು ನಡೆಯುತ್ತಿವೆ. ಅಲ್ಲಿನ ಮುಖ್ಯಸ್ಥರಾದ ಸ್ಟೀಫನ್ ಫೀಯ್ನರ್ ಅತ್ಯಂತ ಪುಟ್ಟ ಗಣಕ ಯಂತ್ರಗಳಲ್ಲಿ ಅತ್ಯುನ್ನತ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ನಿಸ್ಸೀಮರು. ತಾವು ಪುಟ್ಟ ಗಣಕ ಯಂತ್ರಗಳಲ್ಲಿ ಅಳವಡಿಸಲು ನಡೆಸಿದ ಪ್ರಯತ್ನಗಳನ್ನು ಮೊಬೈಲ್ ಫೋನ್‍ಗಳಲ್ಲಿ ಸಾಕಾರಗೊಂಡಿರುವುದು ಅವರಿಗೆ ಅಚ್ಚರಿ ತಂದಿದೆ. ನೋಕಿಯಾ ಹೊರತಂದಿರುವ ಫೋನ್‍ಗಳಲ್ಲಿ ನೀವು ಗ್ರಹಿಸಿದ ಮಾಹಿತಿಯನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಹುದು. ಅಷ್ಟೇ ಅಲ್ಲ, ನಿಮ್ಮ ಆತ್ಮೀಯರು ಹತ್ತಿರದಲ್ಲಿಯೇ ಓಡಾಡುತ್ತಿದ್ದರೆ, ಆ ಗೌಪ್ಯ ಮಾಹಿತಿಯನ್ನೂ ಅದು ನಿಮಗೆ ಒದಗಿಸಬಲ್ಲವು. ಸಂಜೆಯ ಕಾಫಿ, ಚಲನ ಚಿತ್ರ ವೀಕ್ಷಣೆಗೆ ಸಮೀಪದಲ್ಲಿಯೇ ಇರುವ ಮಿತ್ರರನ್ನು ನೀವು ಆಹ್ವಾನಿಸಬಹುದು.


ಇತ್ತ ಫ್ರಾನ್ಸ್ ದೇಶದಲ್ಲಿರುವ ‘ಟೋಟಲ್ ಇಮ್ಮರ್ಶನ್’ ಕಂಪನಿಯಲ್ಲಿಯೂ ಇದೇ ಬಗೆಯ ತಂತ್ರಜ್ಞಾನದ ಬಗ್ಗೆ ಸಂಶೋಧನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೊಬೈಲ್ ಫೋನ್ ಒಳ ಪ್ರವೇಶಿಸಿದ ಯಾವುದೇ ಚಿತ್ರದ ಚಹರೆಯನ್ನು ಗುರುತಿಸುವ ತಂತ್ರಾಂಶದ ಅಭಿವೃದ್ಧಿಗೆ ಈ ಕಂಪನಿ ಹೆಚ್ಚಿನ ಒತ್ತು ನೀಡಿದೆ. ಸೆರೆಹಿಡಿದ ಚಿತ್ರದ ಕಚ್ಚಾ ಚಹರೆಯನ್ನು ಸ್ಮರಣ ಕೋಶದಲ್ಲಿರುವ ಸಂಪುಟದೊಂದಿಗೆ ಅತಿ ಶೀಘ್ರದಲ್ಲಿ ತಾಳೆ ನೋಡಿ ಮಾಹಿತಿಯನ್ನು ತೆರೆಯ ಮೇಲೆ ಫೋನ್ ಬಿತ್ತರಿಸಬಲ್ಲದು. ಮಾಹಿತಿ ಫೋನಿನ ಸ್ಮರಣ ಕೋಶದಲ್ಲಿ ಇರದಿದ್ದರೆ, ಫೋನ್ ಸಂಪರ್ಕ ನೀಡುವ ಕಂಪನಿಯ ದಾಖಲೆಗಳನ್ನಾಗಲಿ ಅಥವಾ ನೇರವಾಗಿ ಇಂಟರ್‌ನೆಟ್ ಅನ್ನು ತಲಾಶು ಮಾಡುವ ಸಾಮರ್ಥ್ಯವನ್ನು ನೀಡಲು ಸಾಧ್ಯವೆ? ಎಂಬ ಪರಿಶೀಲನೆ ನಡೆಯುತ್ತಿದೆ. ಪರೀಕ್ಷಾರ್ಥ ಬಳಕೆದಾರರು ಈಗಾಗಲೇ ಹಂಚಿಕೊಂಡಿರುವ ಅನುಭವಗಳಲ್ಲಿ ಕೆಲವನ್ನು ಪರಿಹರಿಸಲು ನೋಕಿಯಾ ಕಂಪನಿ ಪ್ರಯತ್ನಿಸುತ್ತಿದೆ. ಉದಾಹರಣೆಗೆ ಕುಚೇಷ್ಟೆಯ ಬಳಕೆದಾರನೊಬ್ಬ ಕಟ್ಟಡ ಅಥವಾ ಪ್ರೇಕ್ಷಣೀಯ ಸ್ಥಳವೊಂದರತ್ತ ಮೊಬೈಲ್ ಫೋನಿನ ಕ್ಯಾಮೆರಾ ತಿರುಗಿಸುವ ಬದಲು, ತಟ್ಟೆಯಲ್ಲಿರುವ ಬ್ರೆಡ್ ತುಣಕು ಅಥವಾ ಟೀವಿ ಪರದೆಯ ಮೇಲೆ ಗಮನ ಹಾಯಿಸಿದರೆ, ಪ್ರತಿಕ್ರಿಯೆ ಹೇಗಿರುತ್ತದೆ? ಅಂದರೆ ಯಾವುದೇ ಒಂದು ದೃಶ್ಯದ ಬದಲು ಸಾಮಾನ್ಯ ಬಳಕೆಯ ವಸ್ತುವಿನತ್ತ ಗಮನ ಕೇಂದ್ರೀಕರಿಸಿದರೆ, ಫೋನು ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಇಂಥ ಯಾವುದೇ ಸೌಲಭ್ಯವನ್ನು ಗ್ರಾಹಕರು ಬಯಸುವುದಾದರೆ, ಹೆಚ್ಚಿನ ಚಂದಾ ಹಣವನ್ನು ಅವರು ತೆರಬೇಕಾಗುತ್ತದೆ. ಹೀಗಾಗಿ ಹಣ ಉಳಿಸ ಬಯಸುವವರು ಹಾಗೂ ತಮ್ಮ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬಯಸುವವರು ಇಂಥ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಿಲ್ಲ. ಈ ಒಂದು ಹೇಳಿಕೆ ಮತ್ತೊಬ್ಬರ ಮೇಲೆ ಗುಪ್ತಚಾರಿಕೆ ನಡೆಸಲು ಬಯಸುವವರಿಗೆ ಬೇಸರ ತರಿಸಬಹುದು. ಇಷ್ಟಾಗಿಯೂ ‘ಮಾರ’ ತಂತ್ರಜ್ಞಾನ ಬಳಸಿ ಮತ್ತೊಬ್ಬರ ಗೌಪ್ಯ ಮಾಹಿತಿಯನ್ನು ಕಲೆ ಹಾಕುವವರು ‘ಮಾರಾಮಾರಿ’ಗೂ ಸಿದ್ಧವಾಗಬೇಕಾದೀತು.


ಜಾಹೀರಾತುದಾರರಿಗೆ ಇಂಥ ತಂತ್ರಜ್ಞಾನಗಳು ‘ಮಾರು’ಕಟ್ಟೆಯನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ. ಉದಾಹರಣೆಗೆ ಜೀಪೀಎಸ್ ನೆರವಿನ ಸೆಲ್ ಫೋನ್ ಹಿಡಿದ ವ್ಯಕ್ತಿ ಎಲ್ಲಿ ಓಡಾಡುತ್ತಿದ್ದಾನೆಂದು ನಿಯಂತ್ರಣ ಕೊಠಡಿಯಲ್ಲಿನ ಕಂಪ್ಯೂಟರ್ ತಿಳಿದುಕೊಳ್ಳಬಲ್ಲದು. ನಿತ್ಯ ಪಬ್‍ಗೆ ಭೇಟಿ ನೀಡುವವ ಎಂಬ ಮಾಹಿತಿ ಆ ಕಂಪ್ಯೂಟರ್‌ನಲ್ಲಿ ದಾಖಲಾಗಿದ್ದರೆ, ಮಬ್ಬು ಬೆಳಕಿನಲ್ಲಿ ‘ಪಬ್’ ಕಾಣಿಸದಿದ್ದಲ್ಲಿ, ‘ರಿಯಾಯಿತಿ ಕೂಪನ್’ ಒಂದನ್ನು ಮೊಬೈಲ್ ಫೋನಿಗೆ ಕಳುಹಿಸಿ ಅವನ ಗಮನವನ್ನು ಗಡಂಗಿನತ್ತ ಸೆಳೆಯಬಹುದು. ಈ ಕಾರ್ಯವನ್ನು ಮಿಂಚಿನಂತೆ ನಿರ್ವಹಿಸಬಲ್ಲ ಚಾಕಚಕ್ಯತೆ ನಿಯಂತ್ರಣ ಕಚೇರಿಯಲ್ಲಿನ ಸಾಫ್ಟ್‍ವೇರ್‌ಗಿರುತ್ತದೆ. ಇಂಥ ವ್ಯವಸ್ಥೆಯೊಂದು ಬಳಕೆಗೆ ಬಂದಲ್ಲಿ, ಭಗ್ನಪ್ರೇಮಿಗಳು ‘ಎಲ್ಲಡಗಿದೆ ನಲ್ಲೆ, ಇನ್ಯಾರ ತೆಕ್ಕೆಯಲ್ಲೆ?’ ಎಂದು ಹಲಬುವ ಅಗತ್ಯ ಬೀಳುವುದಿಲ್ಲ (ಆಕೆ ಫೋನ್ ಸ್ವಿಚ್ ಅನ್ನು ಆರಿಸಿರದಿದ್ದರೆ)!

(07-05-2007)

2 comments:

ಶಶಿಧರ ಕಾಕಾ said...

ಪರವಾಗಿಲ್ಲಾ ರೀ. ಈ ಜೀಪೀಎಸ್ ಬಳಕೆ ಹೇಗೆ ಹೊಸ ಸಾಧ್ಯತೆಗಳನ್ನು ಕೊಡಬಲ್ಲದು ಎಂಬುದನ್ನು ಸುಲಭವಾಗಿ ತಿಳಿಯುವಂತೆ ಹೇಳಿದ್ದೀರಾ.

Anonymous said...

i read the artical of gps on monday it was too impresive can you sen me some material if any thing with you