‘ಮತ್ತೊಮ್ಮೆ ತಿನ್ನುವ ಆಹಾರದಿಂದ ನಾವು ಇಂಧನ ರೂಪಿಸಲು ಯೋಚಿಸುತ್ತಿದ್ದೇವೆ, ಅಂದರೆ ಶಕ್ತಿ ಸಂಚಯಿಸಿಕೊಳ್ಳುವಲ್ಲಿ ಇದೀಗ ನಮಗೂ ನಮ್ಮ ಕಾರಿಗೂ ನೇರ ಸ್ಫರ್ಧೆ. ಅಲ್ಲ ಸರ್, ನಾವು ತಿನ್ನಬೇಕೊ? ಅಥವಾ ಕಾರ್ ಓಡಿಸಬೇಕೊ’? ‘ಇಂಧನ ಕೋಶ’ದ ಬಗ್ಗೆ ವಿಜ್ಞಾನ ಪತ್ರಿಕೆಯೊಂದರಲ್ಲಿ ಮೊನ್ನೆ ಶುಕ್ರವಾರ ಪ್ರಕಟವಾದ ಲೇಖನವೊಂದಕ್ಕೆ ಓದುಗರೊಬ್ಬರು ಥಟ್ಟೆಂದು ಕೊಟ್ಟ ಪ್ರತಿಕ್ರಿಯೆಯಿದು. ಆ ಪ್ರತಿಕ್ರಿಯೆಯ ಪೂರ್ಣಪಾಠವನ್ನು ಮುಂದೆ ಓದೋಣ. ಯಾವುದೇ ಒಂದು ಲೇಖನ ಪ್ರಕಟವಾದ ಅರ್ಧ ಗಂಟೆಯೊಳಗೆ ಓದುಗನ/ಳ ಪ್ರತಿಕ್ರಿಯೆ ಈ ರೀತಿ ಬಂತೆಂದರೆ ಅದು ಲೇಖಕನ ಹಾಗೂ ಸಂಪಾದಕನ ಸೌಭಾಗ್ಯ. ಇಂಟರ್ನೆಟ್ನಲ್ಲಿ ಲಭ್ಯವಿರುವ ‘ಆನ್ಲೈನ್’ ಪತ್ರಿಕೆಗಳಲ್ಲಿ ಪ್ರಕಟವಾದ ಯಾವುದೇ ಸುದ್ದಿ, ವರದಿ, ವಿಶ್ಲೇಷಣೆ, ಲೇಖನ, ಚಿತ್ರಗಳಿಗೆ ಅದರಡಿಯಲ್ಲಿಯೇ ಓದುಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಈ ಸೌಲಭ್ಯ ಕೇವಲ ಇಂಗ್ಲಿಷ್ ಹಾಗೂ ಕೆಲ ಯೂರೋಪ್ ಭಾಷೆಗಳಿಗೆ ಮಾತ್ರ ಸಿಕ್ಕಿದೆ. ಸಾರ್ವತ್ರಿಕ ಹಾಗೂ ಜಗನ್ಮಾನ್ಯ ಲಿಪಿ ಸಂಕೇತಗಳ ಸೌಕರ್ಯವಿದ್ದರೆ ನಮ್ಮ ಕನ್ನಡವೂ ಸೇರಿದಂತೆ ಯಾವುದೇ ಇಂಗ್ಲಿಷ್-ಅಲ್ಲದ ಭಾಷೆಯ ಇಂಟರ್ನೆಟ್ ಪ್ರಕಟನೆಗಳಿಗೆ ಬಾಲಂಗೋಚಿ ಸೇರಿಸಬಹುದು.
ಇಂ’ಧನ’ ಎಂದೊಡನೆ ಕೇವಲ ಅದರೊಳಗೇ ಹಾಸುಹೊಕ್ಕಾಗಿರುವ ‘ಧನ’ದ ಬಗ್ಗೆ ಮಾತ್ರ ಚಿಂತಿಸುವ ಹಾಗಿಲ್ಲ. ದನ ತಿನ್ನುವ ಹುಲ್ಲಿನಿಂದ ಹಿಡಿದು ಮನುಷ್ಯರು ಮೆಲ್ಲುವ ಜೋಳ-ಕಬ್ಬು ಅಥವಾ ಸವಿಯುವ ಆಲ್ಕೋಹಾಲ್ ಇತ್ಯಾದಿಗಳ ಬಗ್ಗೆಯೂ ಚರ್ಚಿಸಬೇಕಾಗುತ್ತದೆ. ‘ಜಾಗತಿಕ ಬಿಸಿ’ಯನ್ನು ಕಮ್ಮಿಯಾಗಿಸುವ, ಹೆಚ್ಚು ಮಾಲಿನ್ಯ ಮಾಡದ ಪರ್ಯಾಯ ಇಂಧನಗಳು ಹಾಗೂ ಇಂಧನಕ್ಕೆ ಬೆರೆಸಬಹುದಾದ ದ್ರಾವಣಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಜಲಜನಕ ತುಂಬಿದ ಇಂಧನ ಕೋಶಗಳ್ (ಫ್ಯೂಯಲ್ ಸೆಲ್) ಅನುಕೂಲಗಳೇನೆಂದರೆ ಉತ್ತಮ ಕಾರ್ಯಕ್ಷಮತೆ ಹಾಗೂ ಸಂಪೂರ್ಣ ಮಾಲಿನ್ಯರಹಿತ್ಯ. ಆದರೆ ಜಲಜನಕ ದಹನಕಾರಿ ಅನಿಲವಾದ್ದರಿಂದ ಅದರ ಸುರಕ್ಷ ಶೇಖರಣೆಯೊಂದು ದೊಡ್ಡ ಸಮಸ್ಯೆ. ಜತೆಗೆ ತಂತ್ರಜ್ಞಾನ ಅದೆಷ್ಟೇ ಪ್ರಗತಿ ಸಾಧಿಸಿದ್ದರೂ ಅಗ್ಗದ ದರದಲ್ಲಿ ಭಾರಿ ಪ್ರಮಾಣದ ಜಲಜನಕವನ್ನು ಉತ್ಪಾದನೆ ಮಾಡುವುದು ಸಾಧ್ಯವಾಗಿಲ್ಲ. ಹೀಗಾಗಿ ಗಾಳಿ ಹಾಗೂ ನೀರಿನ ಹೊರತಾದ ಜಲಜನಕ ಮೂಲಗಳನ್ನು ವಿಜ್ಞಾನಿಗಳು ಅರಸುತ್ತಿದ್ದಾರೆ.
ಗಾಳಿ ಹಾಗೂ ನೀರಿನಿಂದ ಜಲಜನಕವನ್ನು ಹೊರತೆಗೆಯಲು ಅಪಾರ ಪ್ರಮಾಣದ ವಿದ್ಯುತ್ ಬೇಕು. ಇತ್ತ ಜಲಜನಕ ಸಮೃದ್ಧವಾಗಿರುವ ಜೈವಿಕ ವಸ್ತುಗಳಿಂದ ಈ ಅನಿಲ ಹೊರತೆಗೆಯುವ ಸಾಂಪ್ರದಾಯಿಕ ಪದ್ಧತಿಗಳು ಸಾಮಾನ್ಯವಾಗಿ ಹೆಚ್ಚಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಹೆಚ್ಚು ಶಕ್ತಿಯನ್ನು ಕಬಳಿಸುತ್ತವೆ. ಈ ಶಕ್ತಿ ಸಮಸ್ಯೆಯಿಂದ ಪಾರಾಗಲು ತಂತ್ರಜ್ಞರು ಹೂಡಿದ ಹಂಚಿಕೆ, ಸಾಮಾನ್ಯ ತಾಪಮಾನದಲ್ಲಿ ಜಲಜನಕವನ್ನು ಹೊರತೆಗೆಯುವ ರಾಸಾಯನಿಕ ಕಿಣ್ವಗಳ ವಿನ್ಯಾಸಗೊಳಿಸುವುದು. ಈ ಕಿಣ್ವಗಳೆಂದರೆ ನಿಮಗೆ ಗೊತ್ತು. ಜೀವರಾಸಾಯನಿಕ ಕ್ರಿಯೆಯನ್ನು ವೃದ್ಧಿಸುವ ಈ ವಸ್ತು ಜೀವಕೋಶಗಳಲ್ಲಿ ಉತ್ಪತ್ತಿಯಾಗುತ್ತದೆ. ಅಸಂಖ್ಯಾತ ಸಂಕೀರ್ಣ ಪ್ರೋಟೀನ್ಗಳು ಒಗ್ಗೂಡಿ ಇದು ನಿರ್ಮಾಣವಾಗಿರುತ್ತದೆ. ಸಹಜ ಉಷ್ಣತೆಯಲ್ಲಿ ತಾನು ನಶಿಸದೆಯೆ/ಬದಲಾಗದೆಯೆ ಜೀವರಸಾಯನಿಕ ಕ್ರಿಯೆಗಳನ್ನು ಪ್ರೇರೇಪಿಸುತ್ತದೆ. ಅಮೆರಿಕದಲ್ಲಿನ ವರ್ಜೀನಿಯ ವಿವಿ, ಜಾರ್ಜಿಯ ವಿವಿ ಹಾಗೂ ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಶಾಲೆಯ ವಿಜ್ಞಾನಿಗಳು ಒಟ್ಟಾಗಿ ನಡೆಸಿದ ಸಂಶೋಧನೆಯಲ್ಲಿ ಹಲವಾರು ಕಿಣ್ವಗಳ ‘ರಸಾಯನ’ವು ಜಲಜನಕವನ್ನು ಅತ್ಯಂತ ಸಮರ್ಥವಾಗಿ ಹೊರತೆಗೆಯಲು ಸಾಧ್ಯವೆಂದು ಇದೀಗ ಸಾಬೀತಾಗಿದೆ.
ನಮ್ಮ ಬಹುತೇಕ ಆಹಾರ ಧಾನ್ಯಗಳಲ್ಲಿರುವ ‘ಪಿಷ್ಟ’ (ಸ್ಟಾರ್ಚ್) ಗೊತ್ತಲ್ಲವೆ? ಇದರೊಂದಿಗೆ ನೀರನ್ನು ಬೆರೆಸಿ ‘ಕಿಣ್ವ ಸಂಯುಕ್ತ’ದ ನೆರವಿನಿಂದ ಜಲಜನಕ ಹಾಗೂ ಇಂಗಾಲದ ಡೈ ಆಕ್ಸೈಡ್ ಉತ್ಪಾದಿಸುವ ಯೋಜನೆ ಪ್ರಯೋಗಶಾಲೆಯ ಹಂತದಲ್ಲಿ ಯಶಸ್ವಿಯಾಗಿದೆ. ಹಿಟ್ಟಿಗೆ ಹುದುಗು ಬರಿಸುವ ಯೀಸ್ಟ್, ಬ್ಯಾಕ್ಟೀರಿಯ, ಸೊಪ್ಪು, ಹಾಗೂ ಮೊಲದ ಸ್ನಾಯುಗಳಿಂದ ಹೊರತೆಗೆದ ಕಿಣ್ವಗಳನ್ನು ಹದವಾಗಿ ಬೆರೆಸಿ ರೂಪಿಸಿದ ಸಂಯುಕ್ತಕ್ಕೆ ಜಲಜನಕವನ್ನು ಸಾಮಾನ್ಯ ಉಷ್ಣತೆಯಲ್ಲಿಯೇ ಬೇರ್ಪಡಿಸುವ ಸಾಮರ್ಥ್ಯವಿರುವುದು ಪತ್ತೆಯಾಗಿದೆ. ಇಲ್ಲಿ ಉತ್ಪಾದನೆಯಾಗುವ ಇಂಗಾಲದ ಡೈ ಆಕ್ಸೈಡ್ ಅನ್ನು (ಪಿಷ್ಟ ಹಾಗೂ ಸಸ್ಯಮೂಲ ಕಿಣ್ವಗಳನ್ನು ಕೊಡುವ) ಗಿಡಮರಗಳು ಸ್ವೀಕರಿಸುವುದರಿಂದ ಪರಿಸರ ಸಮತೋಲನಕ್ಕೆ ಹೆಚ್ಚಿನ ಧಕ್ಕೆಯಾಗುವುದಿಲ್ಲವೆಂಬ ನಂಬಿಕೆ ವಿಜ್ಞಾನಿಗಳದು.
ಸಕ್ಕರೆ ಹಾಗೂ ಶರ್ಕರ ಪಿಷ್ಟಗಳಿಂದ ಜಲಜನಕವನ್ನು ಉತ್ಪಾದಿಸುವ ಹಿಂದಿನ ಪ್ರಯತ್ನಗಳಲ್ಲಿಯೂ ಕಿಣ್ವಗಳನ್ನು ಬಳಸಲಾಗಿತ್ತು. ಆದರೆ ಈ ಕ್ರಿಯೆಯ ಕಾರ್ಯಕ್ಷಮತೆ ಅತ್ಯಂತ ಕಡಿಮೆಯಾಗಿತ್ತು. ಕಾರಣ, ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಣ್ವಗಳನ್ನು ಈ ಪ್ರಯೋಗಗಳಿಗೆ ಬಳಸಲಾಗಿತ್ತು. ಹಾಗೆಂದ ಮಾತ್ರಕ್ಕೆ ಸಧ್ಯಕ್ಕೆ ರೂಪಿಸಲಾದ ವ್ಯವಸ್ಥೆಯಲ್ಲಿ ನ್ಯೂನತೆಗಳಿಲ್ಲವೆಂದೇನಲ್ಲ. ಒಂದು ಕಿಣ್ವ ರಾಸಾಯನಿಕ ಕ್ರಿಯೆಯಲ್ಲಿ ಹೊರಗೆಡಹುವ ಉಪ-ಉತ್ಪನ್ನ ಮತ್ತೊಂದು ಕಿಣ್ವದ ಕಾರ್ಯಾಚರಣೆಗೆ ಅಡ್ಡಿಯಾಗಬಹುದು. ಅಂದರೆ ರಾಸಾಯನಿಕ ಕ್ರಿಯೆಯ ಮುಂದಿನ ಹಂತಗಳು ಗತಿ ಕುಂಠಿತವಾಗಬಹುದು. ಈ ಯೋಜನಎಯಲ್ಲಿ ಭಾಗಿಯಾಗಿರುವ ಜಾರ್ಜಿಯ ವಿವಿಯ ಜೈವಿಕ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮೈಕೇಲ್ ಆಡಮ್ಸ್ ಅವರು ಹೇಳುವಂತೆ ಇಡೀ ಪ್ರಕ್ರಿಯೆಯನ್ನು ಕೊಂಚ ಹೆಚ್ಚಿನ ತಾಪಮಾನದಲ್ಲಿ ನಡೆಸಿದರೆ, ಜಲಜನಕದ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು. ಅವರ ಒಂದು ವೈಜ್ಞಾನಿಕ ಅಂದಾಜಿನಂತೆ ಪ್ರತಿ ಹತ್ತು ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಹೆಚ್ಚಳ, ಜಲಜನಕ ಉತ್ಪಾದನಾ ಕ್ರಿಯೆಯ ವೇಗವನ್ನು ದುಪ್ಪಟ್ಟಾಗಿಸಬಲ್ಲದು.
ಈ ಬಗೆಯ ಜಲಜನಕ ಉತ್ಪಾದನೆಯನ್ನು ಹೆಚ್ಚಾಗಿ ಎಲ್ಲಿ ಬಳಸಬಹುದು? ಎಂಬ ಪ್ರಶ್ನೆಗೆ ಆಡಮ್ಸ್ ಉತ್ತರಿಸುವುದು ಹೀಗೆ. ಎಲ್ಲೆಂದರಲ್ಲಿ ಹೊತ್ತೊಯ್ಯಬಹುದಾದ ಪೋರ್ಟಬಲ್ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವ ಇಂಧನ ಕೋಶಗಳಲ್ಲಿ ಇವನ್ನು ಹುದುಗಿಸಬಹುದು. ಇದುವರೆಗೂ ಪುಟ್ಟ ಜಲಜನಕ ಇಂಧನ ಕೋಶಗಳಲ್ಲಿ ಆಕರ ದ್ರವದ ಪಾತ್ರವನ್ನು ಮೀಥೈಲ್ ಆಲ್ಕೊಹಾಲ್ ವಹಿಸುತ್ತಿತ್ತು. ಪಿಷ್ಟ ಹಾಗೂ ನೀರಿನ ಮಿಶ್ರಣವು ಮೀಥೈಲ್ ಆಲ್ಕೋಹಾಲ್ಗಿಂತ ಹೆಚ್ಚು ಸುರಕ್ಷವಾಗಿರುವ ಕಾರಣ, ಬರಲಿರುವ ದಿನಗಳಲ್ಲಿ ಇಂಧನ ಕೋಶಗಳಿಗೆ ಪಿಷ್ಟದ ಬಳಕೆ ಹೆಚ್ಚಾಗಬಹುದು. ಆಡಮ್ಸ್ ಆಶಾವಾದಿ. ಮುಂದಿನ ಎಂಟು ವರ್ಷಗಳಲ್ಲಿ ಇಂಥ ಪುಟಾಣಿ ಇಂಧನ ಕೋಶಗಳು ಬಳಕೆಗೆ ಬರುವುದಷ್ಟೇ ಅಲ್ಲ, ನಮ್ಮ ನಿತ್ಯ ಬಳಕೆಯ ಮೋಟಾರು ವಾಹನಗಳಲ್ಲಿಯೂ ಪಿಷ್ಟಭರಿತ ಇಂಧನ ಕೋಶಗಳೇ ಉಪಯೋಗಕ್ಕೆ ಬರುವುದಂತೆ.
ಇದೀಗ ಲೇಖನದ ಮೊದಲ ಪ್ಯಾರಕ್ಕೆ ಹಿಂದಿರುಗೋಣ. ಉದ್ವಿಗ್ನ ಓದುಗರೊಬ್ಬರು ತಮ್ಮ ಪ್ರತಿಕ್ರಿಯೆಯನ್ನು ಹೀಗೆ ಮುಂದುವರಿಸಿದ್ದಾರೆ. ‘ನಮ್ಮ ಆಹಾರಕ್ಕೆ ಬಳಸದ ಪಿಷ್ಟ ಭರಿತ ವಸ್ತುಗಳನ್ನೇಕೆ ಜಲಜನಕ ಉತ್ಪಾದಿಸಲು ಬಳಸಿಕೊಳ್ಳಬಾರದು? ಸಾಮಾನ್ಯ ಹುಲ್ಲಿನಿಂದ ಜಲಜನಕ ಉತ್ಪಾದಿಸಲಾಗದೆ? ನಮ್ಮ ಅಮೆರಿಕದಲ್ಲಿ ಶೋಕಿಗೆಂದು ಹುಲ್ಲುಗಾವಲನ್ನು ಬೆಳೆಸುವ ದೊಡ್ಡ ಉದ್ಯಮವೇ ಇದೆ. ಚೆನ್ನಾಗಿ ನೀರುಣಿಸಿ, ಗೊಬ್ಬರ ತುಂಬಿ, ಕೀಟನಾಶಕ ಸಿಂಪಡಿಸಿ, ಮೈಕೈ ನೋಯಿಸಿಕೊಳ್ಳುವುದು. ಹುಲ್ಲು ಹುಲುಸಾಗಿ ಬೆಳೆದಂತೆ, ಕತ್ತರಿಸುವುದು. ಕತ್ತರಿಸಿದ ಹುಲ್ಲನ್ನು ತ್ಯಾಜ್ಯದಂತೆ ಹೊರಗೆಸೆಯುವುದು’. ಹುಲ್ಲು, ಹತ್ತಿಯಂಥ ಹಸಿರು ಗಿಡ ಮರಗಳಲ್ಲಿ ‘ಸೆಲ್ಯುಲೋಸ್’ ಎಂಬ ನಾರು ಹೇರಳವಾಗಿರುತ್ತದೆ. ಈ ನಾರನ್ನು ದನ, ಮರಕೊರೆಯುವ ಹುಳು ಮುಂತಾದ ಸೊಪ್ಪು ಸದೆ ತಿನ್ನುವ ಪ್ರಾಣಿಗಳು ಜೀರ್ಣಿಸಿಕೊಳ್ಳಬಲ್ಲವು. ಆ ಪ್ರಾಣಿಗಳ ದೇಹದಲ್ಲಿರುವ ‘ಸೆಲ್ಯುಲೇಸ್’ ಎಂಬ ಕಿಣ್ವ ಮನುಷ್ಯ ದೇಹದ ಜೀರ್ಣಕೋಶಗಳಲ್ಲಿರದ ಕಾರಣ, ಅಂಥ ನಾರುಗಳು ಪಚನವಾಗುವುದಿಲ್ಲ. ಅಂದರೆ ಸೆಲ್ಯುಲೋಸ್ಭರಿತ ಹಸಿರು ಪದಾರ್ಥಗಳನ್ನು ಜಲಜನಕ ಉತ್ಪಾದಿಸಲು ಬಳಸಿಕೊಳ್ಳಬಹುದಲ್ಲವೆ? ಎಂಬುದು ಆ ಉದ್ವಿಗ್ನ ಓದುಗರ ಲೇವಡಿಯ ಹಿಂದಿನ ಅರ್ಥ. ಈ ರೀತಿ ಕಾಳಜಿ ಪಡುವುದಕ್ಕೆ ಕಾರಣಗಳಿವೆ.
‘ಮೆಸಾಶ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ.’ಯ ರಸಾಯನ ವಿಜ್ಞಾನ ಪ್ರಾಧ್ಯಾಪಕರಾದ ಜಾನ್ ಡ್ಯೂಯ್ಸ್ಚ್ ಹೇಳುವಂತೆ ‘ನಮ್ಮ ಆಹಾರವನ್ನು ಜಲಜನಕ ಉತ್ಪಾದಿಸಲು ಬಳಸುವುದು ತರವಲ್ಲ. ಈಗಾಗಲೇ ಈಥೈಲ್ ಆಲ್ಕೊಹಾಲ್ ಉತ್ಪಾದನೆಗೆ ಮುಸುಕಿನ ಜೋಳದ ಕಾಳುಗಳನ್ನು ಬಳಸಲಾಗುತ್ತಿದೆ. ಇಂಥ ಬಳಕೆ ಆರಂಭವಾದಂತೆ ಜೋಳದ ಬೆಲೆ ಅಮೆರಿಕದಲ್ಲಿ ವಿಪರೀತ ತುಟ್ಟಿಯಾಗಿದೆ. ಇನ್ನು ಜೋಳದ ಪಿಷ್ಟವನ್ನು ಜಲಜನಕ ಉತ್ಪಾದನೆಗೆ ಬಳಸಲು ಹೊರಟರೆ, ನಾವ್ಯಾರೂ ಜೋಳವನ್ನು ಕೊಳ್ಳಲಾಗದು’. ಈ ಮಾತುಗಳನ್ನು ನೇರವಾಗಿ ಒಪ್ಪದ ಜಲಜನಕ ಪ್ರಿಯರು, ಜೋಳವನ್ನು ಆಲ್ಕೋಹಾಲ್ ಆಗಿ ಬದಲಿಸಿ ಅದನ್ನು ಅಂತರ್ದಹನ ಮೋಟಾರು ಎಂಜಿನ್ಗಳಲ್ಲಿ ಬಳಸುವುದರ ಬದಲು, ನೇರವಾಗಿ ಅದರಿಂದ ಜಲಜನಕವನ್ನು ಉತ್ಪಾದಿಸುವುದು ಒಳ್ಳೆಯದೆನ್ನುತ್ತಾರೆ. ಇಂಧನ ಕೋಶಗಳು ಅಂತರ್ದಹನ ಎಂಜಿನ್ಗಳಿಗಿಂತ ಮೂರು ಪಟ್ಟು ಹೆಚ್ಚು ಕಾರ್ಯಕ್ಷಮತೆ ಹೊಂದಿರುತ್ತವೆ ಎಂಬುದು ಅವರು ನೀಡುವ ಸಮಜಾಯಿಶಿ.
ಜೋಳದ ಮುಸುಕು, ಮರದ ಹೊಟ್ಟು, ಹುಲ್ಲು ಮತ್ತಿತರ ಜೈವಿಕ ತ್ಯಾಜ್ಯ ಪದಾರ್ಥಗಳಿಂದ ಸೆಲ್ಯುಲೋಸ್ ಬೇರ್ಪಡಿಸಿ, ಅದರಿಂದ ಜಲಜನಕವನ್ನು ಹೊರತೆಗೆಯುವ ಬಗ್ಗೆ ಸಂಶೋಧನೆಗಳು ಭರದಿಂದ ಸಾಗಿವೆ. ಆದರೆ ಸದ್ಯಕ್ಕೆ ಬಳಕೆ ಅಥವಾ ಪ್ರಯೋಗಶಾಲೆಯಲ್ಲಿರುವ ಎಲ್ಲ ಜಲಜನಕ ಉತ್ಪಾದನಾ ‘ಕಾರ್ಖಾನೆಗಳ’ ಗಾತ್ರ ದೊಡ್ಡದಾಗಿರುವುದರ ಜತೆಗೆ ವಿಪರೀತ ನೀರನ್ನು ಬಳಸುತ್ತವೆ. ಇಂಥ ಕಾರ್ಯಾಗಾರಗಳನ್ನು ವಾಹನಗಳೊಂದಿಗೆ ಹೊತ್ತೊಯ್ಯುವುದು ಎಷ್ಟರ ಮಟ್ಟಿಗೆ ಅನುಕೂಲ? ಎಂಬ ಪ್ರಶ್ನೆಯನ್ನು ಕೆಲ ತಜ್ಞರು ಎತ್ತಿದ್ದಾರೆ. ಅಮೆರಿಕ ಸರ್ಕಾರದ ಶಕ್ತಿ ಇಲಾಖೆಯಲ್ಲಿ ಜಲಜನಕ-ಸಂಗ್ರಹಣೆಯ ಬಗೆಗಿನ ಸಂಶೋಧನೆಗಳಿಗೆಂದೇ ಪ್ರತ್ಯೇಕ ವಿಭಾಗವಿದೆ. ಇದರ ಮುಖ್ಯಸ್ಥರಾದ ಸುನೀತ ಸತ್ಯಪಾಲ್ ಅಮೆರಿಕದಲ್ಲಿಯೇ ಹುಟ್ಟಿ ಬೆಳೆದ ಈಕೆ ಭಾರತೀಯ ಸಂಜಾತರ ಪುತ್ರಿ. ಇವರ ಅಭಿಪ್ರಾಯದಂತೆ ಇಂಥ ಉತ್ಪಾದನಾ ಕೇಂದ್ರಗಳಲ್ಲಿ ಬಳಸುವ ನೀರಿನದೇ ತೂಕದಲ್ಲಿ ದೊಡ್ಡ ಪಾಲು. ನೀರನ್ನು ಮರು ಬಳಕೆ ಮಾಡಲು ಪ್ರಯತ್ನಿಸಿದರೂ ಜಲಜನಕದ ಇಂಧನ ಕೋಶಗಳನ್ನು ಹೊತ್ತ ವಾಹನಗಳು ಶಕ್ತಿ ಸಂಚಯನೆಯಲ್ಲಿ ಪೆಟ್ರೋಲ್/ಡೀಸಲ್ ವಾಹನಗಳಿಗಿಂತ ಹಿಂದೆ ಬೀಳುತ್ತವೆ.
ಮೀಥೈಲ್ ಆಲ್ಕೋಹಾಲ್ಗಿಂತಲೂ ಸುರಕ್ಷವಾಗಿ ಪಿಷ್ಟವನ್ನು ಶೇಖರಣೆ, ಸಂಸ್ಕರಣೆ ಹಾಗೂ ಸಾಗಣೆ ಮಾಡಬಹುದಾದ ಕಾರಣ ಜಲಜನಕ ಉತ್ಪಾದನೆಗೆ ಪಿಷ್ಟವನ್ನು ಬಳಸುವುದೇ ಸೂಕ್ತ. ಇದುವರೆಗೂ ಜಲಜನಕ ಪೂರೈಕೆ ಕೇಂದ್ರದಲ್ಲಿ ಮೀಥೈಲ್ ಆಲ್ಕೋಹಾಲ್ ಶೇಖರಣೆ ಒಂದು ದೊಡ್ಡ ಸಮಸ್ಯೆಯಾಗಿತ್ತು. ಕಾರು ಅಥವಾ ಮೋಟರು ವಾಹನದಲ್ಲಿಯೇ ಜಲಜನಕವನ್ನು ಉತ್ಪಾದಿಸಿಕೊಳ್ಳುವ ಬದಲು ಅಲ್ಲಲ್ಲಿ (ನಮ್ಮ ಪೆಟ್ರೋಲ್ ಬಂಕ್ಗಳಿರುವಂತೆ) ಜಲಜನಕದ ಪಂಪ್ಗಳನ್ನು ನಿರ್ಮಿಸಬಹುದು. ಆ ಪಂಪ್ಗಳ ಹಿಂಭಾಗದಲ್ಲಿಯೇ ಜಲಜನಕ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಬಹುದು.
ಈ ಒಂದು ಅನುಕೂಲದ ಹಿನ್ನೆಲೆಯಲ್ಲಿ ಪಿಷ್ಟದಿಂದ ಜಲಜನಕ ಹೊರತೆಗೆಯುವ ಕೆಲಸ ಇನ್ನು ಕಷ್ಟವಾಗಲಾರದು. ಜತೆಗೆ ಪರಿಸರ ಪ್ರೇಮಿಗಳೂ ಸೇರಿದಂತೆ ಎಲ್ಲರೂ ಇಷ್ಟಪಡುವಂಥ ಇಂಧನಜನಕವೆಂಬ ಕೀರ್ತಿ ಪಿಷ್ಟದ್ದಾಗಬಹುದು.
(28-05-2007 ; ಕೃಪೆ: ವಿಜಯ ಕರ್ನಾಟಕ)
2 comments:
In your article in Vijaya Karnataka dated 28th May, you have written that cellulose in grass is not digestable by the human digestive system.
However nature cure recommends wheat grass heavily. Please let me know if wheat grass is good for a person's health.
I would be obliged if you could answer my query.
Regards,
Raghothama
Dear Mr Raghu
Thanks for the response.
As a nature cure if grass is fed, it is only to add 'fibrous' portion along with the digestible food. It is my understanding.
I might check up with the experts, on the exact dynamics of digestive system on this issue, and inform you about the same.
Regards
- Sudhindra
Post a Comment