Monday, June 4, 2007

ಸಿಲಿಕಾನ್ ಕೊಳ್ಳ ಈ(ಗ)-ತ್ಯಾಜ್ಯದ ಗುಂಡಿ!


‘ಬೆಳಗ್ಗೆ ವಾಕಿಂಗ್ ಹೋಗುವಾಗ ಮನೆಯಲ್ಲಿದ್ದ ಹಳೆಯ ವೀಡಿಯೋ ಕ್ಯಾಸೆಟ್ ಪ್ಲೇಯರ್ (ವೀಸೀಪಿ) ಅನ್ನು ಕಸದ ತೊಟ್ಟಿಗೆ ಹಾಕಿಬಂದೆ’ - ಮಕ್ಕಳನ್ನು ನೋಡಲೊ ಅಥವಾ ಕಚೇರಿಯ ಕೆಲಸ ನಿಮಿತ್ತವೊ ಆಗಿಂದಾಗ್ಗೆ ಅಮೆರಿಕಕ್ಕೆ ಭೇಟಿ ಕೊಡುವ ಹಿರಿಯ ಅಧಿಕಾರಿಗಳೊಬ್ಬರು ಮೊನ್ನೆ ಸಿಕ್ಕಾಗ ತಮ್ಮ ಇತ್ತೀಚಿನ ಸಾಹಸದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಅವರ ಮನದಾಳದೊಳಗೆ ‘ನೀವೆಲ್ಲಾ ಯಕಃಶ್ಚಿತ್ ಮಾವಿನ ಓಟೆ, ಪುಸ್ತಕದ ಹೊದಿಕೆ, ಒಡೆದ ಹೂಕುಂಡ ... ಗಳನ್ನು ಕಸದ ತೊಟ್ಟಿಗೆ ಎಸೆದರೆ, ನಾನು ಬೇಡದ ವಸ್ತು ಅದೆಷ್ಟೇ ಮೌಲ್ಯದ್ದಿರಲಿ ಎಸೆಯಬಲ್ಲೆ’ ಎಂಬ ಅಹಂಭಾವವಿತ್ತು. ‘ಈ ಕೆಲಸ ನೀವು ಮಾಡಿದ್ದು, ಅಮೆರಿಕದಲ್ಲಿನ ಮಗಳ ಮನೆಯಲ್ಲಲ್ಲವೆ’? ಎಂಬ ಮುಗ್ಧ ಪ್ರಶ್ನೆ ಎಸೆದೆ. ಥಟ್ಟನೇ ಬಂತು ಉತ್ತರ ‘ಅಲ್ಲೇಕೆ, ಬೆಂಗಳೂರಿನಲ್ಲೇ ನಾನು ವೀಸೀಪಿ ಎಸೆದದ್ದು’ ಎಂದರು ಮತ್ತಷ್ಟು ಹುರುಪಿನಿಂದ. ಅಂಥ ಕೆಲಸವನ್ನು ಅಮೆರಿಕದಲ್ಲಿ ಮಾಡಿದ್ದರೆ ಪೊಲೀಸರೊ, ನಗರಪಾಲಿಕೆಯವರೊ, ನೆರೆಮನೆಯವರೊ, ಪರಿಸರ ಸಂಸ್ಥೆಗಳೊ ಅವರ ಮೇಲೆ ಕೇಸುಗಳನ್ನು ಜಡಿಯುತ್ತಿದ್ದರು. ಆ ವಿಷಯ ಅವರಿಗೆ ತಿಳಿದಿತ್ತೊ, ಇಲ್ಲವೊ ಗೊತ್ತಿಲ್ಲ.


ಹೊಸ ಆವಿಷ್ಕಾರಗಳಿಲ್ಲದ ಕ್ಷಣವೇ ಇಲ್ಲವೆನ್ನಬಹುದು. ಅತ್ಯಂತ ವೇಗದ ವಿಶ್ಲೇಷಕಗಳು, ಸಪಾಟಾದ ತೆರೆಗಳು, ಮುಷ್ಟಿ ಗಾತ್ರದಲ್ಲಿ ಮಿಲಿಯಗಟ್ಟಲೆ ಮಾಹಿತಿ ತುಂಬಿಟ್ಟುಕೊಳ್ಳುವ ಸ್ಮರಣಕೋಶಗಳು ಬರುತ್ತಿವೆ. ಇವುಗಳ ಜತೆಗೆ ಹೊಸ ಟೀವಿಗಳು, ಮೊಬೈಲ್ ಫೋನ್‌ಗಳು, ಡೀವೀಡಿ ಪ್ಲೇಯರ್‌ಗಳು, ಮ್ಯೂಸಿಕ್ ಸಿಸ್ಟಮ್‍ಗಳು, ಸಂಗೀತ ವಾದ್ಯಗಳು, ವಾಚುಗಳು, ಬ್ಯಾಟರಿಗಳು, ಮಿಕ್ಸಿಗಳು, ವಾಷಿಂಗ್ ಮೆಶಿನ್‍ಗಳು, ರಿಮೋಟ್ ಕಂಟ್ರೋಲ್‌ಗಳು, ಏರ್ ಕಂಡೀಶನರ್‌ಗಳು, ಸೀಡಿಗಳು, ಫ್ಲಾಪಿಗಳು, ಪೆನ್ ಡ್ರೈವ್‍ಗಳು, .... ಇಂದಿನ ‘ಹೊಸ’ ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ನಾಳೆಗೆ ‘ಹಳೆ’ಯದು. ನಿರುಪಯೋಗಿ ವಸ್ತುಗಳನ್ನೆಲ್ಲ ನೇರವಾಗಿ ಕಸದ ಬುಟ್ಟಿಗೆ ಎಸೆಯುವ ಇಂದಿನ ಯುಗದಲ್ಲಿ ಇ-‘ತ್ಯಾಜ್ಯ’ಗಳ ನಿರ್ವಹಣೆ ದೊಡ್ಡ ತಲೆನೋವಾಗಿದೆ. ಬಣ್ಣ ಅಥವಾ ಅವುಗಳನ್ನು ಕರಗಿಸುವ ರಾಸಾಯನಿಕಗಳನ್ನು ಶೇಖರಿಸುವ ಡಬ್ಬಿಗಳನ್ನು ಮನೆಯ ಗ್ಯಾರೇಜು ಮೂಲೆಯಲ್ಲಿ ಎಸೆಯುವಂತೆ, ನಮ್ಮ ಮನೆಗಳಲ್ಲಿಯೇ ಈಗ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನೂ ತುಂಬಲಾಗುತ್ತಿದೆ, ಈ ತ್ಯಾಜ್ಯ ವಸ್ತುಗಳಲ್ಲಿ ಅಡಗಿರುವ ವಿಷ ಮಿಶ್ರಿತ ಲೋಹಗಳು ತರಬಹುದಾದ ಅಪಾಯಗಳ ಬಗ್ಗೆ ಯಾವುದೇ ಚಿಂತನೆಗಳಿಲ್ಲದೆಯೇ.


ನಮ್ಮಂಥ ಖಾಸಗಿ ವ್ಯಕ್ತಿಗಳ ಮಾತು ಬಿಡಿ, ದೊಡ್ಡ ಕಂಪನಿಗಳೂ ಸಹಾ ಹಳೆಯ ಕಂಪ್ಯೂಟರ್‌ಗಳನ್ನು ಬಿಸಾಕದಿರಲು ‘ಪರಿಸರ ಸಂರಕ್ಷಣಾ ಪ್ರಜ್ಞೆ’ ಕಾರಣವಲ್ಲ. ಮುಂದೆಂದಾದರೂ ತಮಗೇ ಉಪಯೋಗವಾಗಬಹುದು ಅಥವಾ ‘ಗಿರಾಕಿ’ ಸಿಗಬಹುದೇನೋ ಎಂಬ ನಿರೀಕ್ಷೆಯಿಂದ ಈ ಕಂಪ್ಯೂಟರ್‌ಗಳನ್ನೂ ‘ಹಿತ್ತಲಿನಲ್ಲಿ’ ಜಮಾಯಿಸುತ್ತಿದ್ದೇವೆ. ಬಳಕೆದಾರರು ಹೆಚ್ಚಾದಂತೆ, ನವ ನವೀನ ಕಂಪ್ಯೂಟರ್‌ಗಳು ಬಿಕರಿಗೆ ಬಂದಂತೆ ಈ ಸಂಗ್ರಹಣೆ ಹೆಚ್ಚಾಗುತ್ತಾ ಹೋಗುತ್ತಿದೆ. ಭಾರತ ಪ್ರತಿ ವರ್ಷ ಉತ್ಪಾದಿಸುವ ಇ-ತ್ಯಾಜ್ಯದ ಪ್ರಮಾಣ 1,46,180 ಟನ್‍ಗಳಷ್ಟಾದರೆ ‘ಕಂಪ್ಯೂಟರ್ ವ್ಯಾಮೋಹಿ’ಗಳ ತವರೂರಾದ ಬೆಂಗಳೂರಿನಲ್ಲಿ ಪ್ರತಿ ವರ್ಷ ಉತ್ಪತ್ತಿಯಾಗುವ ಇ-ತ್ಯಾಜ್ಯದ ಪ್ರಮಾಣ 8,000 ಟನ್‍ಗಳಷ್ಟು! ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ನಿರ್ವಹಿಸುವ ಕಂಪನಿಗಳ ವಕ್ತಾರರು ಹೇಳುವಂತೆ ಸದ್ಯಕ್ಕೆ ತಿಂಗಳಿಗೆ ಒಂದು ಲಾರಿ ಭರ್ತಿ ‘ಕಸ’ವನ್ನು ನಮ್ಮೂರಿನಲ್ಲಿ ಶೇಖರಣೆಯಾಗುತ್ತಿದೆ.


ಜಗನ್ಮಾನ್ಯ ಮ್ಯಾನೇಜ್‍ಮೆಂಟ್ ಗುರು ‘ಸಿ.ಕೆ. ಪ್ರಹ್ಲಾದ್’ ನಿಮಗೆ ಗೊತ್ತಿರಬೇಕು. ಅಹ್ಮದಾಬಾದಿನ ಪ್ರತಿಷ್ಠಿತ ‘ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ - ಐ.ಐ.ಎಂ.’ನ ಮ್ಯಾನೇಜ್‍ಮೆಂಟ್ ಸ್ನಾತಕೋತ್ತರ ಪದವಿಯ ನಂತರ ಅಮೆರಿಕದ ‘ಹಾರ್ವರ್ಡ್ ವಿವಿ’ಯಿಂದ ಎರಡು ಪದವಿಗಳನ್ನು ಪಡೆದವರು. ‘ಕಂಪೀಟಿಂಗ್ ಫಾರ್ ದ ಫ್ಯೂಚರ್’, ‘ದಿ ಫಾರ್ಚ್ಯೂನ್ ಅಟ್ ದ ಬಾಟಮ್ ಆಫ್ ದ ಪಿರಮಿಡ್’ ಮತ್ತಿತರ ಮ್ಯಾನೇಜ್‍ಮೆಂಟ್ ಸಂಬಂಧಿತ ಪುಸ್ತಕಗಳ ಕರ್ತೃವಾದ ಸಿ.ಕೆ. ಪ್ರಹ್ಲಾದ್, ‘ಹಾರ್ವರ್ಡ್ ಬ್ಯುಸಿನೆಸ್ ರೆವ್ಯೂ’ ಜಗನ್ಮಾನ್ಯ ನಿಯತಕಾಲಿಕದ ಬರಹಗಾರರು. ತಮ್ಮ ಲೇಖನವೊಂದರಲ್ಲಿ ಪ್ರಹ್ಲಾದ್ ಹೇಳುತ್ತಾರೆ - ‘ಭಾರತ ಭೀತಿ ಪಡಬೇಕಾಗಿರುವುದು ತನ್ನ ಶತಕೋಟಿ ಜನಸಂಖ್ಯೆಯ ಬಗ್ಗೆ ಖಂಡಿತವಾಗಿಯೂ ಅಲ್ಲ. ಆ ಒಂದು ಶತಕೋಟಿ ಜನ ಎಸೆಯಬಹುದಾದ ಕಸದ ನಿರ್ವಹಣೆ’. ಈ ಮಾತನ್ನು ಅವರು ಉದ್ಘರಿಸಿ ಒಂದು ದಶಕ ಕಳೆದಿರಬಹುದು. ಬಹುಶಃ ಇಂದು ಅವರು ಮಾತಿಗೆ ಸಿಕ್ಕರೆ ಹೇಳಬಹುದಾದ ಮಾತುಗಳು - ‘ಭಾರತದಲ್ಲಿ ಕಂಪ್ಯೂಟರ್ ಸಾಕ್ಷರರ ಸಂಖ್ಯೆ ಕೋಟಿ ಸಂಖ್ಯೆ ಮುಟ್ಟಲಿದೆಯೆಂದು ಖುಷಿ ಪಡಬೇಕಾಗಿಲ್ಲ. ನಿಜವಾದ ಆತಂಕವಿರುವುದು ಆ ಸಾಕ್ಷರರು ರಸ್ತೆಗೆ ಎಸೆಯಬಹುದಾದ ಇ-ತ್ಯಾಜ್ಯದ ನಿರ್ವಹಣೆ’.


ಹೋದೆಯಾ ಪಿಶಾಚಿ ಎಂದು ನಾವು ಉತ್ಪಾದಿಸುವ ಇ-ತ್ಯಾಜ್ಯ ನಿರ್ವಹಣೆಗೆ ಹರಸಾಹಸ ಮಾಡುತ್ತಿದ್ದರೆ ಇತ್ತ ಬಂದೆ ಗವಾಕ್ಷಿಯಲ್ಲಿ ಎಂಬಂತೆ ತಿಂಗಳಿಗೆ 40,000 ಟನ್‍ಗಳಷ್ಟು ತೂಕದ ಬಳಕೆಯಾದ ಎಲೆಕ್ಟ್ರಾನಿಕ್ ಉಪಕರಣಗಳು ವಿವಿಧ ದೇಶಗಳಿಂದ ಭಾರತಕ್ಕೆ ಬಂದು ಬೀಳುತ್ತಿವೆ. ಇತ್ತೀಚೆಗಷ್ಟೇ ಇಂಥ ಆಮದುಗಳನ್ನು ಚೀನಾ ದೇಶ ತಡೆ ಹಾಕಿರುವುದರಿಂದ ಭಾರತ ಮತ್ತು ಪಾಕಿಸ್ತಾನ ದೇಶಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಇ-ತ್ಯಾಜ್ಯ ಹರಿದು ಬರುತ್ತಿದೆ. ಈ ಪ್ರಕ್ರಿಯೆಗೊಂದು ಆರ್ಥಿಕ ಹಿನ್ನೆಲೆಯಿದೆ. ಅಮೆರಿಕದಲ್ಲಿ ಒಂದು ತ್ಯಾಜ್ಯ ಕಂಪ್ಯೂಟರ್ ಅನ್ನು ಮರುಬಳಕೆಗೆ ಸಿದ್ಧಗೊಳಿಸಲು ತಗಲುವ ವೆಚ್ಚ ತಲಾ ಇಪ್ಪತ್ತು ಡಾಲರ್‌ಗಳು. ಇಂಥ ತ್ಯಾಜ್ಯ ಕಂಪ್ಯೂಟರ್‌ಗಳನ್ನು ಭಾರತದ ಗುಜರಿ ವ್ಯಾಪಾರಿಗಳು ತಲಾ ಹದಿನೈದು ಡಾಲರ್ ಬೆಲೆ ಕೊಟ್ಟು ಕೊಳ್ಳುತ್ತಾರೆ. ಅಂದರೆ ಕಂಪನಿಗಳಿಗೆ ಒಂದೊಂದು ತ್ಯಾಜ್ಯ ಕಂಪ್ಯೂಟರ್‌ಗಳಿಂದ ಒಟ್ಟು ಮೂವತ್ತೈದು ಡಾಲರ್ ಲಾಭ. ಇತ್ತ ತ್ಯಾಜ್ಯ ಕಂಪ್ಯೂಟರ್‌ಗಳಲ್ಲಡಗಿರುವ ಅಮೂಲ್ಯ ಲೋಹಗಳನ್ನು ಹೊರತೆಗೆಯುವ ಗುಜರಿ ವ್ಯಾಪಾರಿಗಳು ಪ್ರತಿ ಕಂಪ್ಯೂಟರ್‌ನಿಂದ ಗಳಿಸುವ ಹಣ ಇಪ್ಪತ್ತೈದು ಡಾಲರ್‌ಗಳು. ಅಂದರೆ ಹತ್ತು ಡಾಲರ್‌ಗಳ ನಿವ್ವಳ ಲಾಭ.


ಎಸೆಯುವವ, ಆಯುವವ - ಇಬ್ಬರಿಗೂ ಲಾಭ ತರುವ ಈ ಉದ್ದಿಮೆಯಿಂದ ಒಟ್ಟಾರೆ ನಷ್ಟವಾಗುವುದು ಯಾರಿಗೆ? ಒಂದು, ನಮ್ಮ ದೇಶದ ಪರಿಸರಕ್ಕೆ. ಮತ್ತೊಂದು ಇಂಥ ತ್ಯಾಜ್ಯ ನಿರ್ವಹಣಾ ಕೇಂದ್ರಗಳಲ್ಲಿ ದುಡಿಯುವ ಅಶಿಕ್ಷಿತ ಮಕ್ಕಳು ಹಾಗೂ ದೊಡ್ಡವರಿಗೆ. ಯಾವುದೇ ರೂಪದಲ್ಲಿ ನಮ್ಮ ದೇಹ ಸೇರಿಕೊಂಡರೂ ಸೀಸದಿಂದಾಗುವ ಅಪಾಯ ಹೇಳಲಸದಳ. ಇದರ ಬಳಕೆ ಹೆಚ್ಚಾಗಿರುವುದು, ಪಿ.ಸಿ ಗಳಲ್ಲಿ (ಪರ್ಸನಲ್ ಕಂಪ್ಯೂಟರ್) ಇರುವ ಟೀವಿಯಂತಹ ತೆರೆಯಲ್ಲಿ (ಮಾನಿಟರ್). ಉಳಿದಂತೆ ಪಾದರಸ ಮತ್ತು ಕ್ಯಾಡ್ಮಿಯಮ್ ಲೋಹಗಳು ಎಲ್ಲ ವಿದ್ಯುನ್ಮಾನ ಬಿಡಿಭಾಗಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಇಂಥ ನಿರುಪಯೋಗಿ ಇ-ತ್ಯಾಜ್ಯವನ್ನು ಈ ಹಿಂದೆ ಅಮೆರಿಕದ ನಗರಗಳಲ್ಲಿ ಹಳ್ಳ-ಕೊಳ್ಳಗಳನ್ನು ಮುಚ್ಚಲು ಬಳಸಲಾಗುತ್ತಿತ್ತು. ಪರಿಸರ ಕಾಳಜಿ ಹೊಂದಿರುವ ಸೇವಾ ಸಂಸ್ಥೆ ‘ಸಿಲಿಕಾನ್ ವ್ಯಾಲಿ ಟಾಕ್ಸಿಕ್ಸ್ ಕೋಅಲಿಶನ್’ ನ ವರದಿಯಂತೆ ಕಂಪ್ಯೂಟರ್‌ಗಳ ತವರೂರಾದ ‘ಸಿಲಿಕಾನ್ ಕೊಳ್ಳ’ದ (ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನ್‍ಫ್ರಾನ್ಸಿಸ್ಕೋ/ಸ್ಯಾನ್ ಹ್ಯೂಸೆ ಪಟ್ಟಣಗಳು) ಅಂತರ್ಜಲ ಈಗಾಗಲೇ ಕಲುಷಿತವಾಗಿದೆ. ಇ-ತ್ಯಾಜ್ಯ ನಿರ್ವಹಣೆಯ ಮಾತು ಬಂದಾಗ ಕಂಪ್ಯೂಟರ್ ತ್ಯಾಜ್ಯಕ್ಕೇ ಏಕಿಷ್ಟು ಪ್ರಾಮುಖ್ಯವೆಂದರೆ ಬಟ್ಟೆ ಒಗೆಯುವ ಯಂತ್ರ, ಹವಾ ನಿಯಂತ್ರಕ, ಶೈತ್ಯೀಕರಣ ಯಂತ್ರ ಮುಂತಾದ ಗೃಹ ಬಳಕೆ ವಸ್ತುಗಳಲ್ಲಿ ಶೇ.70ರಷ್ಟು ತ್ಯಾಜ್ಯ ವಸ್ತುಗಳು ಮರುಬಳಕೆಯಾಗಿದ್ದರೆ, ತ್ಯಾಜ್ಯ ಕಂಪ್ಯೂಟರ್‌ಗಳ ಮರುಬಳಕೆ ಕೇವಲ ಶೇ.6.


ಭಾರತದಲ್ಲಿ ಇ-ತ್ಯಾಜ್ಯ ನಿರ್ವಹಣೆ ನಡೆಯುವುದು ಅಸಂಘಟಿತ ಉದ್ದಿಮೆಗಳಲ್ಲಿ. ದೆಹಲಿ, ಬೆಂಗಳೂರು, ಮೀರತ್, ಚೆನ್ನೈ, ಮುಂಬೈ ನಗರಗಳ ಗಲ್ಲಿಗಳಲ್ಲಿ ಕಾರ್ಯನಿರ್ವಹಿಸುವ ಇಂಥ ಕಾರ್ಖಾನೆಗಳ ಪ್ರಧಾನ ಆಸಕ್ತಿ, ಎಲೆಕ್ಟ್ರಾನಿಕ್ ಮಂಡಲಗಳಲ್ಲಿ ಹುದುಗಿರಬಹುದಾದ ಚಿನ್ನ ಹಾಗೂ ಪ್ಲಾಟಿನಂ ಲೋಹಗಳ ತುಣಕುಗಳು. ಈ ಪ್ರಕ್ರಿಯೆಯ ಮೊದಲ ಭಾಗ ಪ್ಲಾಸ್ಟಿಕ್ ಭಾಗಗಳನ್ನು ಕುಟ್ಟಿ, ತಟ್ಟಿ, ಸುಟ್ಟು ಹೊರತೆಗೆಯುವುದು. ನಂತರ ತೀಕ್ಷ್ಣ ಶಕ್ತಿಯ ಆಮ್ಲಗಳಲ್ಲಿ ಉಳಿದ ಭಾಗಗಳನ್ನು ಅದ್ದಿ ತೆಗೆದು ಅಮೂಲ್ಯ ಲೋಹಗಳನ್ನು ಕರಗಿಸಿಕೊಳ್ಳುವುದು. ನಂತರ ರಾಸಾಯನಿಕಗಳನ್ನು ಬೆರೆಸಿ ಲೋಹಗಳನ್ನು ಹೊರತೆಗೆಯುವುದು. ಸೂಕ್ತ ಚರ್ಮ ರಕ್ಷಕ ಕವಚಗಳನ್ನು ನೀಡದೆಯೆ ಅನಕ್ಷರಸ್ಥ ಕಾರ್ಮಿಕವರ್ಗದಿಂದ ಮಾಡಿಸಿಕೊಳ್ಳುವ ಅಮಾನವೀಯ ಕೆಲಸವಿದು. ನಿರುಪಯೋಗಿ ಎನಿಸಿದ ಕೇಬಲ್‍ಗಳು, ಮುದ್ರಕದ ಇಂಕು ಖಾಲಿಯಾದ ಟೋನರ್ ಕಾರ್ಟ್ರಿಜ್‍ಗಳು, ನಿರುಪಯೋಗಿ ವಿದ್ಯುನ್ಮಾನ ಮಂಡಲಗಳು ಪುಡಿಯಾಗುವುದರ ಜತೆಗೆ ಬೆಂಕಿಗಾಹುತಿಯಾಗಿ ತಮ್ಮೊಳಗೆ ಅಡಗಿರುವ ಕ್ಯಾಡ್ಮಿಯಂ, ಕ್ರೋಮಿಯಂ, ಸೀಸ, ಪಾದರಸ ಮತ್ತಿತರ ವಿಷವಸ್ತುವಿನ ಅನಿಲಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತವೆ.


ಏತನ್ಮಧ್ಯೆ ಪರಿಸರ ವಾದಿಗಳ ಬೆದರಿಕೆಗೆ ಮಣಿದು ಉತ್ಪಾದಕರು, ಅಪಾಯಕಾರಿ ಲೋಹಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುತ್ತಿದ್ದಾರೆ. ಆದರೆ ಬಳಕೆದಾರರು ಹೆಚ್ಚುತ್ತಿರುವುದರಿಂದ ಒಟ್ಟಾರೆ ಉತ್ಪಾದನೆ ಏರುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. ತ್ಯಾಜ್ಯ ವಸ್ತುಗಳನ್ನು ಮರುಬಳಕೆಗೆ ತರುವುದರಿಂದ ಒಟ್ಟಾರೆ ಪರಿಸರ ಸಮತೋಲನವನ್ನು ಸಾಧ್ಯವಾದಷ್ಟು ಕಾಪಾಡಬಹುದು. ಇಂತಹ ಪ್ರಯತ್ನಗಳಿಗೆ ಸಾಕಷ್ಟು ಉತ್ತೇಜನ ಕೊಡಿ ಎಂದು ಉತ್ಪಾದಕರನ್ನು ‘ಪರಿಸರ ಸಂಸ್ಥೆಗಳು’ ಒತ್ತಾಯಿಸುತ್ತಿವೆ. ರಾಸಾಯನಿಕ ಅಪಾಯಗಳನ್ನು ಮನಗಂಡು ಹಳ್ಳ ಕೊಳ್ಳಗಳಲ್ಲಿ ನಿರುಪಯೋಗಿ ಕಂಪ್ಯೂಟರ್ ತೆರೆಗಳು, ಟೀವಿಗಳು ಮತ್ತಿತರ ಗಾಜಿನ ತೆರೆಗಳನ್ನು ಎಸೆಯುವಂತಿಲ್ಲವೆಂಬ ನಿಯಮ ನಮ್ಮ ಮಹಾನಗರ ಪಾಲಿಕೆಯಲ್ಲಿಯೇ ಇದೆ. ಕುಟ್ಟಿ, ಪುಡಿಮಾಡಿ, ಕರಗಿಸಿ, ರಾಸಾಯನಿಕ ‘ಸಾರ’ವನ್ನು ಹೊರ ತೆಗೆಯಲು ಸಾಧ್ಯವೇ ಎಂಬ ಪರಿಶೀಲನೆಯನ್ನು ಕೆಲವು ಕಂಪನಿಗಳು ನಡೆಸಿ, ತುಟ್ಟಿಯ ಬಾಬ್ತೆಂದು ಕೈಚೆಲ್ಲಿವೆ. ಇತ್ತ ಎಸೆಯುವಂತಿಲ್ಲ, ಅತ್ತ ಬಳಸುವಂತಿಲ್ಲ ಎಂಬ ಸಂದಿಗ್ದದಲ್ಲಿರುವ ಕಂಪ್ಯೂಟರ್ ಬಳಕೆದಾರರು, ಶಾಲಾ ಕಾಲೇಜುಗಳಿಗೆ ‘ದಾನ’ ನೀಡಿ ಪುಣ್ಯ ಕಟ್ಟಿಕೊಳ್ಳುವ ಸನ್ನಾಹದಲ್ಲಿದ್ದಾರೆ. ‘ಸೂಕ್ತ’ ರಿಪೇರಿ ಮಾಡಿ, ಬಿಕರಿ ಮಾಡಬಲ್ಲ ‘ಗುಜರಿ’ ಕಂಪನಿಗಳೂ ಸಾಕಷ್ಟು ತಲೆಯೆತ್ತಿವೆ. ಸರ್ವದಾ ಹೊಸತನ್ನೇ ಅರಸುವವರೇ ಹೆಚ್ಚಾಗಿರುವ (ಹೊಸ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಯುತ್ತಿರುವ) ಇಂದಿನ ದಿನಗಳಲ್ಲಿ ಈ ವ್ಯಾಪಾರ ಲಾಭದಾಯಕವಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರುಪಯೋಗಿ, ಕಂಪ್ಯೂಟರ್‌ಗಳನ್ನು ಏನು ಮಾಡಬೇಕೆಂಬ ಚಿಂತೆ ಕಂಪ್ಯೂಟರ್ ತಜ್ಞರಿಗಿಂತ, ಪರಿಸರ ವಿಜ್ಞಾನಿಗಳನ್ನು ಕಾಡುತ್ತಿದೆ. ಪರಮಾಣು ‘ತ್ಯಾಜ್ಯ’ ವಸ್ತುಗಳನ್ನು ಆಳವಾದ ಸುರಕ್ಷಿತ ಗಣಿಗಳಲ್ಲಿ ಹೂತಿಡುವಂತೆ, ಕಂಪ್ಯೂಟರ್‌ಗಳನ್ನೂ ಭೂಗರ್ಭದಲ್ಲಿ ನೇರವಾಗಿ ಹುದುಗಿಸುವ ಯೋಜನೆಯೊಂದು ಮೆಸಾಶ್ಯುಸೆಟ್ಸ್ ರಾಜ್ಯದ ಕಂಪನಿಯ ಮೇಜಿನ ಮೇಲಿದೆ. ರಸ್ತೆಗಳ ಗುಂಡಿಗಳನ್ನು ಮುಚ್ಚಲು ತ್ಯಾಜ್ಯ ಕಂಪ್ಯೂಟರಿನ ಪ್ಲಾಸ್ಟಿಕ್ ಬಳಸುವಂತಹ ಮತ್ತೊಂದು ವಿನೂತನ ಯೋಜನೆಗಳ ಬಗ್ಗೆಯೂ ಅಲ್ಲಲ್ಲಿ ಚಿಂತನೆ ನಡೆದಿದೆ.


ನಮ್ಮ ನಿಮ್ಮೆಲ್ಲರ ಮನೆಗಳಲ್ಲಿರುವ ನಿರುಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳ ಪಟ್ಟಿ ಮಾಡಿ, ಅವುಗಳನ್ನು ರಸ್ತೆಗೆ ಎಸೆಯದೆಯೆ ನಿರ್ವಹಿಸುವುದು ಹೇಗೆಂದು ಯೋಚಿಸಲು ನಾಳೆಗಿಂತ (ವಿಶ್ವ ಪರಿಸರ ದಿನ) ಪ್ರಶಸ್ತ ದಿನ ಮತ್ತೊಂದಿಲ್ಲ.


(ಕೃಪೆ : ವಿಜಯ ಕರ್ನಾಟಕ, 04-06-2007)

4 comments:

Anonymous said...

E-waste management is very difficult process now a days... Your writing makes awareness in people .. Good one.

- Praveen Bhat, BDT Engg College, Davanagere

Anonymous said...

namaskaara.

ivattina lEkhana chennaagide.

naanu, B.Sc- biotechnology [3rd year] OduttiddEne. saMSodhaneyalli aasakti ide. muMde plastic degradation athavaa e-waste nirvahane bagge solution find out maaDbEkUnta iddIni.

idara bagge namma dEshadalli sadyakke research aaguttideyaa?

- Swathi P

Haldodderi said...

namaskara

biotech is an interesting subject. Right now there may not be a direct subject for working on e-waste disposal. But I am sure it is a PhD subject altogether.

Do your MSc in Biotech and you would find subjects of greater interests soon.

Regards

- Sudhindra

Unknown said...

Dear sir,
Timely article on the eve of WE day(June 5,2007). Thanks a lot.
ashok