Monday, June 11, 2007

ಹೀಗೊಂದು ಮುಕ್ತ ‘ಕಾವ್ಯ’ ಮೀಮಾಂಸೆ !

ಪ್ರವಾಸಿಗರ ಸ್ವರ್ಗವೆಂದೇ ಪರಿಗಣಿತವಾದ ರಿಯೋ ಡಿ ಜನೈರೊ ನಗರ ಕೇವಲ ಬ್ರೆಝಿಲ್ ದೇಶದಲ್ಲಷ್ಟೇ ಅಲ್ಲ, ಇಡೀ ಜಗತ್ತಿಗೇ ಹೆಸರುವಾಸಿ. ನಾಲ್ಕು ವರ್ಷಗಳ ಹಿಂದಿನ ಮಾತು. ಸಮುದ್ರದಂಡೆಗೆ ಎದುರಾದ ಇಲ್ಲಿನ ಶ್ರೀಮಂತ ವಸತಿ ಸಮುಚ್ಛಯವೊಂದರ ಮೇಲಂತಸ್ತಿನ ಐಷಾರಾಮಿ ಫ್ಲಾಟ್‍ನಲ್ಲಿ ಸಂಜೆ ರಂಗೇರಿದಂತೆ ನಗು, ಹರಟೆ, ಸಂಗೀತ, ವಾಗ್ಯುದ್ಧ ನಡೆಯುತ್ತಿದೆ. ಆ ಫ್ಲಾಟಿನ ಒಡೆಯ ಗ್ರಾಮಿ ಪ್ರಶಸ್ತಿ ಪುರಸ್ಕೃತ ಹಾಡುಗಾರ, ಗಿಟಾರ್ ವಾದಕ ಹಾಗೂ ಗೀತ ರಚನಕಾರ ಗಿಲ್ಬರ್ಟೋ ಗಿಲ್. ಹಾಸಿಲ್ಲದ ಬರಿಯ ನೆಲದ ಮೇಲೆ, ಬರಿಗಾಲಿನಲ್ಲಿ ಚಕ್ಕಳಮಕ್ಕಳ ಹಾಕಿ ಆ ಸಂತೋಷ ಕೂಟವನ್ನಾತ ಆನಂದಿಸುತ್ತಿದ್ದಾನೆ. ಲುಲ ಡ ಸಿಲ್ವ ನೇತೃತ್ವದ ಬ್ರೆಝಿಲ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಈ ಹೆಮ್ಮೆಯ ಸಂಗೀತಗಾರನನ್ನು ಸಂಸ್ಕೃತಿ ಇಲಾಖೆಯ ಸಚಿವನನ್ನಾಗಿ ನೇಮಿಸಿ ಕೆಲ ದಿನಗಳಷ್ಟೇ ಆಗಿದೆ. ತನ್ನೊಂದಿಗೆ ಚರ್ಚೆ ನಡೆಸಲು ಅಮೆರಿಕದಿಂದ ಬಂದವರಿಗೆ ಆತ ಆತಿಥ್ಯ ನೀಡುತ್ತಿದ್ದಾನೆ. ವಿಷಯ ಇಷ್ಟೇ ಆಗಿದ್ದರೆ ಅದನ್ನಿಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಗಿಲ್‍ನೊಂದಿಗೆ ಅಂದು ಮಾತುಕತೆ ನಡೆಸಲು ಬಂದವರು ಸ್ಟಾನ್‍ಫರ್ಡ್ ವಿವಿಯ ಪ್ರಾಧ್ಯಾಪಕ ಲಾರೆನ್ಸ್ ಲೆಸಿಗ್, ಹಾರ್ವರ್ಡ್ ವಿವಿಯ ಪ್ರಾಧ್ಯಾಪಕ ವಿಲಿಯಮ್ ಫಿಶರ್ ಹಾಗೂ ಅಮೆರಿಕದ ‘ಮುಂಚೂಣಿ ವಿದ್ಯುನ್ಮಾನ ಪ್ರತಿಷ್ಠಾನ’ದ ನೇತಾರ ಜಾನ್ ಪೆರಿ ಬಾರ್ಲೊ. ಇವರೆಲ್ಲರೂ ಅಮೆರಿಕವಷ್ಟೇ ಅಲ್ಲ, ಜಗನ್ಮಾನ್ಯ ಕಂಪ್ಯೂಟರ್ ತಜ್ಞರು. ಜತೆಗೆ ಇಂಟರ್‌ನೆಟ್ ಕ್ಷೇತ್ರದ ಪರಿಣತರು. ಗಿಲ್ ಸಂಪರ್ಕ ಖಾತೆ ಅಥವಾ ವಿದ್ಯುನ್ಮಾನ ಖಾತೆ ಅಥವಾ ವಿಜ್ಞಾನ ಖಾತೆ ಕೊನೆಗೆ ವಾಣಿಜ್ಯ ಖಾತೆ ಅಥವಾ ವಿತ್ತ ಖಾತೆಯ ಸಚಿವನಾಗಿದ್ದರೂ ಇಂಥದೊಂದು ದಂಡು ದಾಳಿ ನಡೆಸಲು ಸಕಾರಣಗಳಿರುತ್ತಿದ್ದವು. ಆದರೆ ಬಂದಿದ್ದ ಈ ತಜ್ಞವೃಂದಕ್ಕೆ ಗಿಲ್‍ನ ಭೇಟಿ ಅತಿ ಮುಖ್ಯವಾಗಿತ್ತು.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬ್ರೆಝಿಲ್ ದೇಶದ ಸಾಂಸ್ಕೃತಿಕ ವಕ್ತಾರನಾಗಿದ್ದ ಗಿಲ್‍ಗೆ ರಾಜಕಾರಣ ಹೊಸತಲ್ಲದಿದ್ದರೂ ಸಚಿವ ಪದವಿ ಅಪರಿಚಿತವಾಗಿತ್ತು. ತನ್ನ ಮುಂದಿದ್ದ ಗಣ್ಯರಿಗೆ ಗಿಟಾರ್‌ನ ಆತಿಥ್ಯ ಸೂಕ್ತವೆಂದಾತ ಭಾವಿಸಿದ. ಸಂಗೀತ ಸುಧೆ ಹರಿಯುತ್ತಿದ್ದಂತೆ ಮಾತುಕತೆ ಆರ್‍ಅಂಭವಾದವು. ‘ಇಂಟರ್‌ನೆಟ್‍ನಲ್ಲಿ ಗಿಲ್‍ನ ರಾಗಮಾಲಿಕೆಯೂ ಸೇರಿದಂತೆ ಇಡೀ ಬ್ರೆಝಿಲ್ ಸಂಗೀತವನ್ನು ಶೇಖರಿಸಿಟ್ಟರೆ ಎಷ್ಟು ಚೆನ್ನ ಅಲ್ಲವೆ’? - ಪ್ರಾಧ್ಯಾಪಕರೊಬ್ಬರು ಪ್ರಸ್ತಾವನೆಯನ್ನಿಟ್ಟರು. ‘ಈ ಸಂಗೀತ ಸಂಚಿಕೆಯಲ್ಲಿ ನೇರ ಪ್ರಸಾರಗಳನ್ನೂ ಅಳವಡಿಸಿಕೊಳ್ಳಬಹುದು’ - ಮತ್ತೊಬ್ಬರು ಪ್ರಲೋಭನೆ ತೋರಿಸಿದರು. ‘ಈ ಎಲ್ಲ ಸಂಗೀತ ಸ್ಮರಣಿಕೆಗಳು ಬೇಕೆಂದವರಿಗೆಲ್ಲ ಉಚಿತವಾಗಿ ಲಭ್ಯವಾಗಬೇಕು’ - ಎಂಬ ಮೂರನೆಯವರ ಮಾತು ಮುಗಿಯುವಷ್ಟರಲ್ಲಿ ಗಿಲ್ ‘ಖಂಡಿತವಾಗಿಯೂ ಮಾಡೋಣ. ನನ್ನಿಂದೇನಾಗಬೇಕು, ಹೇಳಿ’? ಎಂದ ತನ್ನ ಗಿಟಾರ್ ತಂತಿಗಳನ್ನು ಮತ್ತೊಮ್ಮೆ ಮೀಟಿ. ಗಿಲ್‍ನೊಂದಿಗೆ ಅಮೆರಿಕದ ತಂಡವೂ ಸರಿಯಾದ ತಂತಿಗಳನ್ನು ಮೀಟಿತ್ತು. ಸಂಗೀತ ಕೂಟ ಬರಾಕಸ್ತಾಗುವ ಹೊತ್ತಿಗೆ ತನ್ನ ಜನಪ್ರಿಯ ಸಂಗೀತ ಮಟ್ಟುಗಳನ್ನು ಯಾವ ರಾಯಧನದ ಅಪೇಕ್ಷೆಯೂ ಇಲ್ಲದೆಯೆ ಇಂಟರ್‌ನೆಟ್‍ನಲ್ಲಿ ಪುಕ್ಕಟೆ ಹಂಚಲು ಆತ ಸಹಿ ಹಾಕಿಬಿಟ್ಟಿದ್ದ. ಮೈಕ್ರೋಸಾಫ್ಟ್‍ನಿಂದ ಹೊರತಾದ ಮುಕ್ತ ಕಂಪ್ಯೂಟರ್ ಕಾರ್ಯಾಚರಣೆ ವ್ಯವಸ್ಥೆ ತಂತ್ರಾಂಶ ಹಾಗೂ ಉಳಿದ ಉಪಯೋಗಿ ಸಲಕರಣೆಯನ್ನು ಜಗತ್ತಿನೆಲ್ಲೆಡೆ ಜನಪ್ರಿಯಗೊಳಿಸಲು ಹೊರಟಿದ್ದ ಅಮೆರಿಕದ ತಜ್ಞರ ತಂಡಕ್ಕೆ ಬ್ರೆಝಿಲ್‍ನ ಮೊದಲ ಭೇಟಿಯಲ್ಲಿಯೇ ಯಶಸ್ಸು ದಕ್ಕಿತ್ತು. ಮುಂದಿನದು ಇತಿಹಾಸ.

ಕಂಪ್ಯೂಟರಿನ ಕಾರ್ಯ ನಿರ್ವಹಣೆಗೆ ಅಗತ್ಯವಾಗಿ ಬೇಕಾದ ತಂತ್ರಾಂಶ ಯಾವುದು ಎಂದರೆ ತಕ್ಷಣವೇ ಸಿಗುವ ಉತ್ತರ - ‘ವಿಂಡೋಸ್’. ಬಿಲ್‍ಗೇಟ್ಸ್ ಒಡೆತನದ ‘ಮೈಕ್ರೋಸಾಫ್ಟ್’ ಸೃಷ್ಟಿಸಿದ ಈ ‘ಕಾರ್ಯಾಚರಣೆ ವ್ಯವಸ್ಥೆಯು - ಕಾ.ವ್ಯ.’ (Operating System - OS) ನಿಮ್ಮ ಗಣಕಯಂತ್ರದ ಒಳಗಡೆಯಿರುವ ಸ್ಮೃತಿ (ಮೆಮೊರಿ), ಸೂಕ್ಷ್ಮ ಸಂಸ್ಕಾರಕ (ಮೈಕ್ರೊಪ್ರಾಸೆಸರ್, ಚಿಪ್) ಮತ್ತಿತರ ವ್ಯವಸ್ಥೆಗಳ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಜತೆಗೆ ಕಂಪ್ಯೂಟರಿಗೆ ಹೊರಗಡೆಯಿಂದ ಜೋಡಿಸುವ ಸಾಧನಗಳಾದ ಮುದ್ರಕ, ಪ್ರದರ್ಶಕ ತೆರೆ (ಮಾನಿಟರ್), ಮೋಡೆಮ್ (ಅಂತರ್ಜಾಲ ಸಂಪರ್ಕಕ್ಕೆ ಬೇಕಾದ ಸಂವಹನಾ ಸಾಧನ) ಮುಂತಾದವುಗಳ ವ್ಯವಸ್ಥಾ ಸಂಪನ್ಮೂಲ ನಿರ್ವಹಣೆಯೂ ಸಹಾ ‘ಕಾ.ವ್ಯ.’ದ್ದೇ ಜವಾಬ್ದಾರಿ. ಹೀಗಾಗಿ ಕಂಪ್ಯೂಟರ್ ಕ್ಷೇತ್ರದಲ್ಲಿ ಔನ್ನತ್ಯ ಸಾಧಿಸಬೇಕೆಂಬ ಹಂಬಲವಿರುವವರಿಗೆ ‘ಕಾವ್ಯ’ ಪ್ರಜ್ಞೆ ಚೆನ್ನಾಗಿರಬೇಕು. ಹಾಗೆಂದ ಮಾತ್ರಕ್ಕೆ ‘ವಿಂಡೋಸ್’ ಒಂದೇ ಜಗತ್ತಿನ ಎಲ್ಲ ಕಂಪ್ಯೂಟರುಗಳ ಕಾರ್ಯ ನಿರ್ವಹಣೆ ಮಾಡುತ್ತಿದೆಯೆಂದು ಅರ್ಥವಲ್ಲ. ‘ಯೂನಿಕ್ಸ್’, ‘ಲಿನಕ್ಸ್’, ‘ಮ್ಯಾಕ್’ ಮುಂತಾದ ಕಾ.ವ್ಯ.ಗಳು ಇದೀಗ ಸಾಕಷ್ಟು ಜನಪ್ರಿಯವಾಗುತ್ತಿವೆ.

‘ವಿಂಡೋಸ್’ನ ಮೊದಲ ಮಾದರಿ ಸೃಷ್ಟಿಸುವ ಮುನ್ನ ಮೈಕ್ರೋಸಾಫ್ಟ್ ಕಂಪನಿ ‘ಡಿಸ್ಕ್ ಆಪರೇಟಿಂಗ್ ಸಿಸ್ಟಮ್ - ಡಾಸ್’ ಎಂಬ ಕಾ.ವ್ಯ.ವನ್ನು ಮೇಜಿನ ಮೇಲಿಡಬಹುದಾದ ಪುಟ್ಟ ಕಂಪ್ಯೂಟರ್‌ಗಳಿಗೆ ಅಳವಡಿಸಿತ್ತು. ಈ ಹೊತ್ತಿಗೆ ಬೃಹತ್ ಕಂಪ್ಯೂಟರ್‌ಗಳ ಕಾರ್ಯಾಚರಣೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ತಂತ್ರಾಂಶ ‘ಯೂನಿಕ್ಸ್’. ‘ಡಾಸ್’ನಷ್ಟು ಸುಲಲಿತವಾಗಿರದಿದ್ದ ‘ಯೂನಿಕ್ಸ್’ ಕೇವಲ ಎಂಜಿನಿಯರುಗಳ ಸೊತ್ತಾಗಿತ್ತು. ಕಂಪ್ಯೂಟರಾಸಕ್ತ ಸಾಮಾನ್ಯರು ಅತಿ ಶೀಘ್ರದಲ್ಲಿ ‘ಡಾಸ್’ನ ವ್ಯಾಮೋಹಕ್ಕೆ ‘ಬಲಿ’ಯಾದರು. ದೂರದರ್ಶಿತ್ವ ಹೊಂದಿದ್ದ ಮೈಕ್ರೋಸಾಫ್ಟ್ ‘ವಿಂಡೋಸ್’ ಆವೃತ್ತಿಗಳನ್ನು ಒಂದೊಂದಾಗಿ ಬಿಡುಗಡೆ ಮಾಡ ಹೊರಟಿತು. ಬಳಕೆದಾರ-ಸ್ನೇಹಿಯಾಗಿದ್ದ ಈ ಕಾ.ವ್ಯ. ವ್ಯವಸ್ಥೆಗಳು ಜಗತ್ತಿನೆಲ್ಲೆಡೆ ಜನಪ್ರಿಯವಾಗತೊಡಗಿತು. ಎಲ್ಲೆಡೆಯಿಂದ ಮೈಕ್ರೋಸಾಫ್ಟ್ ಕಂಪನಿಗೆ ಹಣದ ಹೊಳೆ ಹರಿಯಲಾರಂಭಿಸಿತು. ‘ವಿಂಡೋಸ್’ನಲ್ಲಿ ಅದೆಷ್ಟೇ ನ್ಯೂನತೆಗಳಿದ್ದರು ದಾಸ್ಯಕ್ಕೆ ಬಲಿ ಬಿದ್ದ ಕಂಪ್ಯೂಟರ್ ಬಳಕೆದಾರರಿಗೆ ಅದರಿಂದ ಬಿಡಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಆವೃತ್ತಿಯಿಂದ ಆವೃತ್ತಿಗೆ ಹೆಚ್ಚಿನ ರಾಯಧನ ನೀಡಲಾರಂಭಿಸಿದರು. ಬೇರೆ ದಾರಿಯಿಲ್ಲದೆಯೇ ಅವುಗಳಿಗೆ ಅನುಗುಣವಾದ ತಂತ್ರಾಂಶ ಸಲಕರಣೆಗಳನ್ನು ಮಾತ್ರ ಕೊಳ್ಳಲಾರಂಭಿಸಿದರು.

ಏತನ್ಮಧ್ಯೆ ಮೇಜಿನ ಮೇಲಿಡಬಹುದಾದ ಪುಟ್ಟ ಕಂಪ್ಯೂಟರುಗಳಿಗೆಂದೇ ‘ಮಿನಿಕ್ಸ್’ ಎಂಬ ‘ಯೂನಿಕ್ಸ್’ ಕಾ.ವ್ಯ.ದ ಕಿರು ಅವತರಣಿಕೆ ಬಳಕೆಗೆ ಬಂತು. ಫಿನ್‍ಲೆಂಡ್ ದೇಶದ ಹೆಲ್ಸಿಂಕಿ ವಿವಿಯಲ್ಲಿ ಕಂಪ್ಯೂಟರ್ ತಂತ್ರಜ್ಞಾನ ವಿದ್ಯಾರ್ಥಿಯಾಗಿದ್ದ ಲಿನಸ್ ಟೊರ್‌ವಾಲ್ಡ್‍ಸ್ ಮಿನಿಕ್ಸ್‍ನ ಸೌಲಭ್ಯಗಳನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರಯತ್ನಿಸತೊಡಗಿದ. ಕ್ರಿ.ಶ.1991ರಲ್ಲಿ ಮೊದಲ ಮಾದರಿಯೊಂದನ್ನು ಆತ ಸೃಷ್ಟಿಸಿದ, ಗೆಳೆಯರ ಒತ್ತಾಸೆಯ ಮೇರೆಗೆ ಆ ಕಾ.ವ್ಯ. ತಂತ್ರಾಂಶದ ಹೆಸರು ‘ಲಿನಕ್ಸ್’ ಎಂದಾಯಿತು. ಮುಂದಿನ ಮೂರು ವರ್ಷಗಳಲ್ಲಿ (1994) ‘ಲಿನಕ್ಸ್’ನ ಅಧಿಕೃತ ಅವತರಣಿಕೆ 1.0 ಮಾರುಕಟ್ಟೆಗೆ ಬಂತು - ಉಚಿತವಾಗಿ. ತನ್ನೆಲ್ಲ ಆಕರ ಸಂಕೇತಗಳನ್ನು ಹೊಂದಿದ್ದ ಹೃದಯ ಭಾಗ ‘ಕರ್ನೆಲ್’ ಕೂಡಾ ಮುಕ್ತವಾಗಿ ತಜ್ಞರ ಪರಿಶೀಲನೆಗೆ ಬಂತು. ‘ಲಿನಕ್ಸ್’ ಕಾ.ವ್ಯ.ದ ಮೂಲ ಹಂದರ ‘ಕರ್ನೆಲ್’ ತನ್ನ ಆಕರ ಸಂಕೇತಗಳೊಂದಿಗೆ ಬಳಕೆದಾರರೆಲ್ಲರಿಗೂ ಮುಕ್ತವಾಗಿ ಲಭ್ಯವಾದಂತೆ, ‘ಲಿನಕ್ಸ್’ ವೈಯಕ್ತಿಕ ಅವತರಣಿಕೆಗಳನ್ನು ನೂರಾರು ತಜ್ಞರು ರೂಪಿಸತೊಡಗಿದರು. ಅಂಥ ಅವತರಣಿಕೆಗಳನ್ನು ಮುಕ್ತವಾಗಿ ಅಂತರ್ಜಾಲದಲ್ಲಿ ಉಚಿತವಾಗಿ ಹಂಚಿಕೊಳ್ಳಲಾರಂಭಿಸಿದರು. ಅವುಗಳೊಂದಿಗೆ ‘ನೆಂಚಿ’ಕೊಳ್ಳಲು ಅನ್ವಯ ತಂತ್ರಾಂಶಗಳೂ ಮುಕ್ತವಾಗಿ ಸಿಗುವ ಅವಕಾಶ ದೊರೆತಿತು.

ಆದರೂ, ಮೈಕ್ರೋಸಾಫ್ಟ್ ಸ್ವಾಮ್ಯತೆಗೆ ತೀರಾ ಧಕ್ಕೆಯೇನಾಗಲಿಲ್ಲ. ಒಟ್ಟಾರೆ ಬಳಕೆಯಲ್ಲಿ ‘ಲಿನಕ್ಸ್’ನ ಪ್ರಾತಿನಿಧ್ಯ ಕಡಿಮೆಯೇ ಇತ್ತು. ನಮ್ಮಷ್ಟೇ ಬಡತನ, ನಮಗಿಂತಲೂ ಹೆಚ್ಚಿನ ಅರಾಜಕತೆ, ನಮ್ಮಲ್ಲಿರುವಷ್ಟೇ ಬುದ್ಧಿವಂತರ ಅದರಲ್ಲೂ ಕಂಪ್ಯೂಟರ್ ಕ್ಷೇತ್ರದಲ್ಲಿ ನಮಗಿಂತ ತುಸು ಕಡಿಮೆ ಹಾಗೂ ವಿಮಾನ ವಿಜ್ಞಾನ ಕ್ಷೇತ್ರದಲ್ಲಿ ನಮಗಿಂತಲೂ ಗಣನೀಯ ಪ್ರಗತಿ ಸಾಧಿಸಿರುವ, ನಮ್ಮಷ್ಟು ಅಮೆರಿಕವನ್ನು ಪ್ರೀತಿಸದಿರುವ ದೇಶ ಬ್ರೆಝಿಲ್. ಗಿಲ್‍ನ ಭೇಟಿಯ ನಂತರ ರಾಷ್ಟ್ರಾಧ್ಯಕ್ಷರಿಗೇ ‘ಲಿನಕ್ಸ್’ ಹಾಗೂ ಮುಕ್ತ ತಂತ್ರಾಂಶಗಳ ಮಹತ್ವ ಮನವರಿಕೆಯಾಯಿತು. ಇಂಥ ಕಂಪ್ಯೂಟರ್ ಸಲಕರಣೆಗಳ ಅಭಿವೃದ್ಧಿ ಮತ್ತು ಅಳವಡಿಕೆಗೆಂದೇ ಅಧ್ಯಕ್ಷರು ಸಂಚಾಲನಾ ಸಮಿತಿಯನ್ನು ಸ್ಥಾಪಿಸಿದರು. ಈ ಸಮಿತಿ ಮೊದಲ ಪರಿಶೀಲನಾ ಸಭೆಯನ್ನು ನಡೆಸಿದಾಗ ಹೊರಬಂದ ಅಂಕೆ-ಅಂಶ ದಂಗು ಬಡಿಸುವಂತಿತ್ತು. ‘ದೇಶದ ಎರಡೂಕಾಲು ಕೋಟಿ ಜನ ಅರೆ ಹೊಟ್ಟೆಯಲ್ಲಿದ್ದಾರೆ. ಆದರೆ ಪ್ರತಿಯೊಂದು ವಿಂಡೋಸ್ ಆವೃತ್ತಿಯನ್ನು ಅಧಿಕೃತವಾಗಿ ಕೊಳ್ಳುವಾಗ ನೀಡುವ ವಿದೇಶಿ ವಿನಿಮಯವನ್ನು ಸರಿದೂಗಿಸಲು ದೇಶ ಕನಿಷ್ಠ ಅರವತ್ತು ಸೋಯಾ ಅವರೆ ಚೀಲಗಳನ್ನು ಹೊರ ದೇಶಗಳಿಗೆ ರಫ್ತು ಮಾಡಬೇಕು. ಇದೆಂಥ ವಿಪರ್ಯಾಸ’? ಅಧ್ಯಕ್ಷರು ಫರ್ಮಾನು ಹೊರಡಿಸಲು ಇದೊಂದೇ ಹೇಳಿಕೆ ಸಾಕಾಗಿತ್ತು. ದೇಶದೆಲ್ಲೆಡೆ ಸರಕಾರಿ ಅನುದಾನ ಪಡೆಯುವ ಯಾವುದೇ ಸಂಸ್ಥೆ ‘ವಿಂಡೋಸ್’ ಬಳಸುವಂತಿಲ್ಲ, ಹಾಗೂ ಕೇವಲ ‘ಲಿನಕ್ಸ್’ ಆಧರಿತ ತಂತ್ರಾಂಶಗಳನ್ನಷ್ಟೇ ಅಭಿವೃದ್ಧಿ ಪಡಿಸಬೇಕು. ಹೀಗೆ ರೂಪುಗೊಂಡ ಎಲ್ಲ ಕಂಪ್ಯೂಟರ್ ತಂತ್ರಾಂಶಗಳೂ ದೇಶದ ಜನತೆಗೆ ಮುಕ್ತವಾಗಿ ಲಭ್ಯವಾಗಬೇಕು’. ಇಂದು ಇಡೀ ದೇಶದ ಎಲ್ಲ ಬ್ಯಾಂಕುಗಳ ಎ.ಟಿ.ಎಂ.ಗಳು (ಬೇಕೆಂದಾಗ ನಗದು ನೀಡುವ ಸ್ವಯಂಚಾಲಿತ ಯಂತ್ರ) ಸಂಪೂರ್ಣವಾಗಿ ‘ಲಿನಕ್ಸ್’ ಆಧರಿತ ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂಥ ಹೆಗ್ಗಳಿಕೆ ಇಡೀ ಜಗತ್ತಿನಲ್ಲಿ ಬ್ರೆಝಿಲ್ ದೇಶಕ್ಕೆ ಮಾತ್ರವಿದೆ. ಇಡೀ ದೇಶದ ಮಾಹಿತಿ ತಂತ್ರಜ್ಞಾನ ನೀತಿ ಸಂಹಿತೆ (ಐ.ಟಿ. ಪಾಲಿಸಿ) ಎರಡೇ ಪದಗಳದ್ದು ‘ಲಿನಕ್ಸ್‍ನದೇ ರಾಜ್ಯಭಾರ - Linux roolz'.

ಇವೆಲ್ಲದರ ನೆನಪು ಬಂದದ್ದು ಕಳೆದ ಬುಧವಾರ ಬೆಂಗಳೂರಿನ ‘ಕನ್ನಡ ಗೆಳೆಯರ ಬಳಗ’ ಹಾಗೂ ಎಚ್.ಎ.ಎಲ್. ಕಾರ್ಖಾನೆಯ ‘ಕಾರ್ಮಿಕ ಲೋಕ’ಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಪಂಪ ಸಭಾಂಗಣದೊಳಗೆ ಜರುಗಿದ ‘ಸುವರ್ಣ ಕರ್ನಾಟಕ ಉಪನ್ಯಾಸ ಮಾಲೆ’ಯಲ್ಲಿ ಮಾತನಾಡಲು ನಿಂತಾಗ. ಕರ್ನಾಟಕ ಏಕೀಕರಣ, ಜಲ ಸಂಪನ್ಮೂಲಗಳು, ಪರಿಸರ, ಕನ್ನಡ ಭಾಷೆ ಹಾಗೂ ಸಾಹಿತ್ಯ ... ಹೀಗೆ ಮೌಲ್ಯಯುತ ವಿಷಯಗಳ ಬಗ್ಗೆ ಗೆಳೆಯರ ಬಳಗ ಪ್ರತಿ ತಿಂಗಳ ಮೊದಲ ಬುಧವಾರ ಸಂಜೆ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದೆ. ಈ ಬಾರಿಯ ಉಪನ್ಯಾಸದಲ್ಲಿ ‘ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿ’ಯ ನೋಟ ಮತ್ತು ಓಟದ ಬಗ್ಗೆ ಮಾತನಾಡುವಾಗ ‘ಬ್ರೆಝಿಲ್ ದೇಶ ನಮಗೆ ಮಾದರಿಯಾದರೆ ಕನ್ನಡವೂ ಸೇರಿದಂತೆ ಎಲ್ಲ ಭಾರ್‍ಅತೀಯ ಭಾಷೆಗಳ ಜನ ಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಕೈಗೆಟಕುವುದರಲ್ಲಿ ಸಂಶಯವಿಲ್ಲ’ವೆಂದೆ.

ಇಂಟರ್‌ನೆಟ್‍ನಲ್ಲಿರುವ ಎಲ್ಲರೂ ಬಳಸಬಲ್ಲಂಥ, ಎಲ್ಲರೂ ಬದಲಾವಣೆ ಮಾಡಬಹುದಾದಂಥ ಮುಕ್ತ ವಿಶ್ವಕೋಶ ‘ವಿಕಿಪೀಡಿಯ’ ನಿಮಗೆ ಗೊತ್ತು. 4667 ಲೇಖನಗಳಿಂದ ಸಮೃದ್ಧವಾದ ಇದರ ಕನ್ನಡ ಅವತರಣಿಕೆಯನ್ನು (kn.wikipedia.org) ಹೊರತಂದಿರುವ ಯುವ ಕಂಪ್ಯೂಟರ್ ತಂತ್ರಜ್ಞ ಹರಿಪ್ರಸಾದ್ ನಾಡಿಗ್. ‘ಸಂಪದ’ (www.sampada.net) ಎಂಬ ಕನ್ನಡ ಅಂತರ್ಜಾಲ ತಾಣವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಕೀರ್ತಿ ನಾಡಿಗ್ ಅವರದು. ಅಂದಿನ ಉಪನ್ಯಾಸದಲ್ಲಿ ನಾಡಿಗ್ ‘ಯೂನಿಕೋಡ್ ಮಾನಕ ಸಂಕೇತದ ಅನುಕೂಲಗಳನ್ನು’ ಪ್ರಸ್ತಾಪಿಸುವುದರ ಜತೆಗೆ ‘ಅಂತರ್ಜಾಲದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು’ ಏನೆಲ್ಲಾ ಮಾಡಬಹುದೆಂದು ಪಾಂಡಿತ್ಯಪೂರ್ಣವಾಗಿ ವಿವರಿಸಿದರು. ‘ಬ್ರೆಝಿಲ್ ದೇಶದ ಲಿನಕ್ಸ್ ಮಾದರಿಯನ್ನು ಈಗಾಗಲೇ ಕೇರಳ ರಾಜ್ಯದಲ್ಲಿ ಈಗಾಗಲೇ ಅನುಕರಿಸಲಾಗುತ್ತಿದೆ’ಯೆಂದರು.

ಈ ಹೊಸ ಹೊಳಹನ್ನು ಥಟ್ಟೆಂದು ಗ್ರಹಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲರು ಇಂಥ ಕೆಲಸಗಳಿಗೆ ಕ.ಸಾ.ಪ. ಮುಕ್ತ ಸಹಕಾರ ನೀಡುವುದಾಗಿ ಘೋಷಿಸಿದರು. ಸಭೆಯಲ್ಲಿ ಹಾಜರಿದ್ದ ‘ಕನ್ನಡ ಗಣಕ ಪರಿಷತ್’ನ ಪದಾಧಿಕಾರಿಗಳು ಪಾಟೀಲರು, ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ‘ಕಗಪ’ ಅನ್ನು ಪ್ರೇರೇಪಿಸಿ ‘ನುಡಿ’ ಮಾನಕ ಕನ್ನಡ ತಂತ್ರಾಂಶದ ಅಭಿವೃದ್ಧಿ ಕಾರಣರಾದ ಸಂದರ್ಭವನ್ನು ನೆನೆಸಿಕೊಂಡರು.

(ಕೃಪೆ: ವಿಜಯ ಕರ್ನಾಟಕ, 11 - 06 - 2007)

No comments: