Monday, June 18, 2007

ನೊಣಗಳಿಂದ ಮತ್ತಷ್ಟು ದಿನ ಬದುಕಲು ಕಲಿಯೋಣ!

ದೀಗ ಎಲ್ಲೆಡೆ ಮಾವಿನ ಹಣ್ಣಿನ ಸುಗ್ಗಿ. ಮಾವು ಎಂದೊಡನೆ ಕೈ-ಮೈ-ಬಟ್ಟೆಗೆ ರಸ ಸೋರಿಸಿಕೊಂಡು ಇಡಿಯಾದ ಹಣ್ಣನ್ನು ತಿನ್ನುತ್ತಿದ್ದ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ. ಹಳೆಯ ನೆನಪುಗಳು ಕಾಡುವುದೇ ಹೀಗೆ, ಎಷ್ಟು ಓಡಿಸಿದರೂ ಮತ್ತೆ ಮತ್ತೆ ಮಾವಿನ ಹಣ್ಣನ್ನು ಮುತ್ತುವ ನೊಣಗಳಂತೆ. ಹಣ್ಣನ್ನು ಮುತ್ತುವ ನೊಣಗಳೆಂದರೆ ನಮಗೆ ಅಸಹ್ಯ. ಎಲ್ಲೆಲ್ಲೆಂದಿಲೋ ಹಾರಿ ಬರುವ, ಜತೆಗೆ ಒಂದಷ್ಟು ಸೂಕ್ಷ್ಮ ರೋಗಾಣುಗಳನ್ನು ಹೊತ್ತು ತರುವ ಕೀಟಗಳನ್ನು ಹೋಗಲಾಡಿಸುವುದು ಶುಚಿಪ್ರಿಯರಿಗೆ ದೊಡ್ಡ ಸವಾಲು. ನಾವು ಅದೆಷ್ಟೇ ಬೇಡವೆಂದರೂ ನಮ್ಮೊಂದಿಗೆ ಸಹಬಾಳ್ವೆ ನಡೆಸುವ ಈ ನೊಣಗಳಿಗೂ ನಮಗೂ ಬಹಳಷ್ಟು ಸಾಮ್ಯತೆಗಳಿವೆ.

ಈ ಮಾತು ಕೇಳಿದೊಡನೆ ಅಸಹ್ಯವಾದೀತು. ಗುಂಡುಪಿನ್ನಿನಷ್ಟೇ ದೊಡ್ಡದಾದ ಮಿದುಳು ಹೊತ್ತ, ದಿನಕ್ಕೆ ನೂರರಂತೆ ಮೊಟ್ಟೆಗಳನ್ನಿಟ್ಟು ಸಂತಾನ ಅಭಿವೃದ್ಧಿಪಡಿಸುವ ಕೊಳಕುಮಂಡಲ ವಾಸಿಗಳಾದ ನೊಣಗಳನ್ನು ನಮ್ಮಂಥವರಿಗೆ ಹೋಲಿಸಿಕೊಳ್ಳುವುದೆ? ಛೀ... ಎಂದರೂ ಸರಿಯೇ. ಸದ್ಯಕ್ಕೆ ನಮ್ಮ ‘ಜೀನ್’ ಅಥವಾ ಗುಣಾಣುಗಳಿಗೆ ಸಂಬಂಧಿಸಿದಂತೆ ಹೋಲಿಸಿಕೊಳ್ಳೋಣ. ಮನುಷ್ಯನಿಗೆ ತಗಲುವ ಜೀನ್‍ಗಳಿಗೆ ಸಂಬಂಧಿಸಿದ ರೋಗಗಳಲ್ಲಿ ಪ್ರತಿಶತ 61ರಷ್ಟು ಜೀನ್‍ಗಳು ನೊಣಗಳ ದೇಹದಲ್ಲಿಯೂ ಇವೆ. ಜತೆಗೆ ನೊಣಗಳ ಜೀನ್‍ಗಳಲ್ಲಿ ಪ್ರೋಟೀನ್ ಉತ್ಪಾದಿಸುವ ಪ್ರತಿಶತ 50ರಷ್ಟು ಜೀನ್‍ಗಳ ರಚನೆಯೂ ಮನುಷ್ಯನಿಗಿರುವಂತೆಯೇ ಇದೆ. ಮನುಷ್ಯನ ಜೀನ್‍ಗಳಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿರುವ ಪ್ರಯೋಗಾಲಯಗಳಲ್ಲಿ ನೊಣಗಳ ಜೀನ್‍ಗಳ ಬಗ್ಗೆಯೂ ಅಧ್ಯಯನಗಳು ಜರಗುತ್ತವೆ. ನೊಣಗಳಲ್ಲಿರುವ ಎಲ್ಲ ಜೀನ್‍ಗಳ ಮೋಜಣಿ ಸಂಪೂರ್ಣವಾಗಿ ಮುಗಿದಿದ್ದು ಅವುಗಳೆಲ್ಲದರ ಬ್ರಹ್ಮ ಲಿಖಿತ ವಿಜ್ಞಾನಿಗಳಿಗೆ ಮನದಟ್ಟಾಗಿದೆ. ಆಸಕ್ತಿ ಹುಟ್ಟಿಸುವ ಮತ್ತೊಂದು ವಿಷಯವೆಂದರೆ ಅತಿಶೀಘ್ರ ಗತಿಯಲ್ಲಿ ನೊಣಗಳು ಸಂತಾನೋತ್ಪತ್ತಿ ಮಾಡುವ ಕಾರಣ, ಹಲವು ತಲೆಮಾರಿನ ಅಧ್ಯಯನವನ್ನು ಕಡಿಮೆ ಅವಧಿಯಲ್ಲಿ ನೆರವೇರಿಸಬಹುದು. ಮನುಷ್ಯನ ಮಿದುಳಿಗೆ ಸಂಬಂಧಿಸಿದ ಮದ್ದು ಸಿಗದ ಪಾರ್ಕಿನ್‍ಸನ್ ಹಾಗೂ ಹಟಿಂಗ್‍ಟನ್ ಕಾಯಿಲೆಗಳಿಗೆ ಸಂಬಂಧಿಸಿದ ಅಧ್ಯಯನಗಳನ್ನು ನೊಣಗಳ ಜೀನ್‍ಗಳ ಮೇಲೆ ನಡೆಸಲಾಗುತ್ತಿದೆ.

ನಿಮಗೆ ಗೊತ್ತಿರುವಂತೆ ಜಗನ್ಮಾನ್ಯ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ‘ನಾಸಾ’. ಇದರ ಒಂದು ಕೇಂದ್ರ ‘ಆಮೆಸ್ ರಿಸರ್ಚ್ ಸೆಂಟರ್’ ಇರುವುದು ಕ್ಯಾಲಿಫೋರ್ನಿಯ ರಾಜ್ಯದಲ್ಲಿ. ಈ ಸಂಶೋಧನಾ ಕೇಂದ್ರದಲ್ಲಿ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪ್ರಯೋಗಗಳನ್ನು ಕೈಗೊಳ್ಳಲಾಗಿದೆ. ಬಾಹ್ಯಾಕಾಶದಲ್ಲಿನ ಗುರುತ್ವಾಕರ್ಷಣ ಶಕ್ತಿಯ ಏರುಪೇರು ಮನುಷ್ಯ ಸೇರಿದಂತೆ ಉಳಿದ ಎಲ್ಲ ಜೀವಿಗಳ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತದೆ? ಜೀವಿಗಳ ಗುಣ, ಸ್ವಭಾವ, ಲಕ್ಷಣಗಳನ್ನು ನಿರ್ಧರಿಸುವ ‘ಜೀನ್’ ಅಥವಾ ‘ಗುಣಾಣು’ಗಳ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳಾಗುತ್ತದೆಯೆ? ಅದರಿಂದ ಜೀವಿಗಳಲ್ಲಿ ಏನೆಲ್ಲಾ ಬದಲಾವಣೆಗಳು ಕಂಡುಬರುತ್ತವೆ? .... ಮತ್ತಿತರ ವಿಷಯಗಳ ಬಗ್ಗೆ ಗಮನಾರ್ಹ ಅಧ್ಯಯನಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಬಾಹ್ಯಾಕಾಶಕ್ಕೆ ಉಡ್ಡಯಿಸುವ ಎಲ್ಲ ಬಗೆಯ ವಾಹನಗಳಲ್ಲಿ ಜೀವ ವಿಜ್ಞಾನ ಪ್ರಯೋಗಗಳಿಗೆ ಸಂಬಂಧಿಸಿದ ಮಾದರಿಗಳು ರವಾನೆಯಾಗುತ್ತವೆ. ಒಮ್ಮೊಮ್ಮೆ ಈ ಬಗೆಯ ಪ್ರಯೋಗಗಳಿಗೆಂದೇ ಪ್ರತ್ಯೇಕ ಕೋಶಗಳು ಅಥವಾ ಸಂವೇದಿಗಳನ್ನು ಬಾಹ್ಯಾಕಾಶ ಶಟಲ್‍ನೊಳಗೆ ಕಳುಹಿಸಲಾಗುತ್ತದೆ.

‘ಜೀನ್’ಗಳು ತಾವಿರುವ ಜೀವಕೋಶಗಳಿಗೆ ಪ್ರೋಟೀನ್ ಉತ್ಪಾದಿಸುವಂತೆ ಆಣತಿ ನೀಡುತ್ತವೆ. ಮನುಷ್ಯ ದೇಹದಲ್ಲಿ ಕನಿಷ್ಟವೆಂದರೂ ವಿವಿಧ ಬಗೆಯ ಐವತ್ತು ಸಹಸ್ರ ಗುರುತರ ಪ್ರೋಟೀನ್‍ಗಳಿರುತ್ತವೆ. ಈ ಪ್ರೋಟೀನ್‍ಗಳಿಂದಾಗಿಯೇ ನಾವು ತಿನ್ನುವ ಆಹಾರ ಜೀರ್ಣವಾಗುವುದು, ಗಾಯದ ಮೇಲಿನ ರಕ್ತ ಹೆಪ್ಪುಗಟ್ಟುವುದು, ಜತೆಗೆ ಹರಿದ ಅಂಗಾಂಶಗಳು ಬೆಳೆದು ಮತ್ತೆ ಕೂಡಿಕೊಳ್ಳುವುದು. ಭೂಮಿಯ ಮೇಲೆ ಸುಗಮವಾಗಿ ಕಾರ್ಯನಿರ್ವಹಿಸುವ ಜೀನ್‍ಗಳು ಬಾಹ್ಯಾಕಾಶದ ವಾತಾವರಣದಲ್ಲಿ ಅಂದರೆ ವಿಕಿರಣ ಶಕ್ತಿ ಹೆಚ್ಚಿರುವ ಹಾಗೂ ಗುರುತ್ವಾಕರ್ಷಣ ಬಲ ಕಮ್ಮಿಯಾಗಿರುವ ಸಂದರ್ಭದಲ್ಲಿ ಬೇರೆಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಬಹುದೆ? ಎಂಬುದು ಪ್ರಶ್ನೆ. ಹಾಗಾದಲ್ಲಿ ಜೀನ್‍ಗಳು ಸಾಮಾನ್ಯಕ್ಕಿಂತಲೂ ಬೇರೆಯದಾದ ಪ್ರೋಟೀನ್‍ಗಳಿಗೆ ಪ್ರಚೋದನೆ ನೀಡಿ ಇಡೀ ಜೈವಿಕ ಕ್ರಿಯೆಗಳನ್ನು ಏರುಪೇರಾಗಿಸಬಹುದು. ಇಂಥ ಆತಂಕಗಳಿಗೆ ಕಾರಣಗಳಿಲ್ಲದಿಲ್ಲ. ಕ್ರಿ.ಶ.1999ರಲ್ಲಿ ಬಾಹ್ಯಾಕಾಶ ಶಟಲ್ ಒಳಗಡೆ ಮಾನವ ಮೂತ್ರಪಿಂಡದ ಜೀವಕೋಶಗಳನ್ನು ಬೆಳೆಸುವ ಪ್ರಯೋಗವೊಂದು ನಡೆದಿತ್ತು. ಈ ಜೀವಕೋಶಗಳಲ್ಲಿ ಸಹಸ್ರಕ್ಕೂ ಹೆಚ್ಚಿನ ಜೀನ್‍ಗಳು ವಿಭಿನ್ನವಾಗಿ ಕಾರ್ಯನಿರ್ವಹಿಸಿದ್ದವು. ಕೆಲವೊಂದು ಜೀನ್‍ಗಳು ವೈಟಮಿನ್ (ಜೀವಸತ್ವ) ‘ಡಿ’ ಅನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವಂತೆ ಮಾಡಿದ್ದವು. ಮೂತ್ರಪಿಂಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‘ಡಿ’ ಜೀವಸತ್ವ ಉತ್ಪಾದನೆಯಾದರೆ ಗಂಡಸರಿಗೆ ತಗಲುವ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್‌ನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ಆದರೆ ಬಾಹ್ಯಾಕಾಶ ಪಯಣ ಸದಾಕಾಲ ಒಳಿತನ್ನೇ ತರುವುದಿಲ್ಲ. ಸಾಮಾನ್ಯವಾಗಿ ಭೂಮಿಯ ಮೇಲಿರುವಾಗ ಕಾರ್ಯತತ್ಪರವಾಗುವ ದೇಹದ ರೋಗ ನಿರೋಧಕ ವ್ಯವಸ್ಥೆಯು ಒಮ್ಮೊಮ್ಮೆ ತೂಕ ರಾಹಿತ್ಯ ವಾತಾವರಣದಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಸುದೀರ್ಘ ವ್ಯೋಮಯಾನ ಆರೋಗ್ಯ ಕೆಡಿಸುತ್ತದೆ, ಮೂಳೆಗಳು ಮೃದುವಾಗುತ್ತದೆ, ಸ್ನಾಯುಗಳು ತಮ್ಮ ಬಳಕುವಿಕೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತದೆ. ಉಳಿದ ಮನೋದೈಹಿಕ ಚಟುವಟಿಕೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಹಲವು ಬಾರಿ ವಿವಿಧ ತಲೆಮಾರುಗಳಿಗೆ ಸೇರಿದ ನೊಣಗಳ ತಂಡವನ್ನು ಈಗಾಗಲೇ ಬಾಹ್ಯಾಕಾಶ ಶಟಲ್‍ಗಳ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕೆ ಕಳುಹಿಸಲಾಗಿದೆ. ಇಲ್ಲಿ ಅವುಗಳ ನಿತ್ಯ ಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಯಾವುದೇ ಚಟುವಟಿಕೆಯಲ್ಲಿ ವ್ಯತ್ಯಯ ಕಂಡುಬಂದರೆ, ಅವುಗಳಿಗೆ ಕಾರಣವಾದ ಜೀನ್ ಯಾವುದು. ಅದರ ಕಾರ್ಯಾಚರಣೆಯಲ್ಲಿ ಎಂಥ ವ್ಯತ್ಯಾಸಗಳಾಗಿರಬಹುದು ... ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

‘ಡಿಸ್ಕವರಿ’ ಬಾಹ್ಯಾಕಾಶ ಶಟಲ್ ಕಳೆದ ವರ್ಷದ ಜುಲೈನಲ್ಲಿ ಹದಿನೈದು ದಿನಗಳ ಯಶಸ್ವಿ ಉಡ್ಡಯಣ ಮುಗಿಸಿ ಬಂದದ್ದು ನಿಮ್ಮ ನೆನಪಿನಲ್ಲಿರಬಹುದು. ಈ ಕಾರ್ಯಕ್ರಮದಲ್ಲಿ ‘ನೊಣಗಳ ರೋಗನಿರೋಧಕ ಸಾಮರ್ಥ್ಯ ಹಾಗೂ ಊತಗಳು’ ಎಂಬ ಯೋಜನೆಯೊಂದಿತ್ತು. ಇದರ ನೇತೃತ್ವ ವಹಿಸಿದ್ದವರು ಜೀವವಿಜ್ಞಾನಿ ಶರ್ಮಿಳಾ ಭಟ್ಟಾಚಾರ್ಯ. ಈಕೆ ಪ್ರತಿಷ್ಠಿತ ಪ್ರಿನ್ಸ್‍ಟನ್ ವಿವಿಯಿಂದ ಜೀವ ಅಣು ವಿಜ್ಞಾನ ವಿಷಯದಲ್ಲಿ ಪದವಿಯೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಜತೆಗೆ ನರಜೀವವಿಜ್ಞಾನ ಕ್ಷೇತ್ರದಲ್ಲಿ ಸ್ಟಾನ್‍ಫರ್ಡ್ ವಿವಿಯಲ್ಲಿ ಡಾಕ್ಟರೇಟೋತ್ತರ ಅಧ್ಯಯನವನ್ನು ನಡೆಸಿದ್ದಾರೆ. ಸದ್ಯಕ್ಕೆ ‘ಆಮೆಸ್ ಸಂಶೋಧನಾ ಕೇಂದ್ರ’ದಲ್ಲಿ ‘ಜೈವಿಕ ಮಾದರಿಗಳ ಕಾರ್ಯಕ್ಷಮತೆ ಹಾಗೂ ನಡಾವಳಿ ಅಧ್ಯಯನ ಪ್ರಯೋಗಶಾಲೆ’ಯ ಪ್ರಧಾನ ತನಿಖಾಧಿಕಾರಿಯಾಗಿದ್ದಾರೆ. ಕೀಟಗಳ ಸಹಜ ವಾಸಸ್ಥಾನಗಳ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿರುವ ಶರ್ಮಿಳಾ, ಕೀಟಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಕಾಶ ನಿಲ್ದಾಣದಲ್ಲೊಂದು ವಾಸಸ್ಥಾನ ನಿರ್ಮಿಸಿದ್ದಾರೆ. ‘ಆಸ್ಟ್ರೋಬಯಾನಿಕ್ಸ್’ ಅಂದರೆ ‘ಬಾಹ್ಯಾಕಾಶದಲ್ಲಿ ಜೈವಿಕತೆ’ ಎಂಬ ಹೊಸ ಜ್ಞಾನ ಶಾಖೆಯ ಪರಿಣತರಾದ ಇವರು ವ್ಯೋಮಯಾನದ ಸಮಯದಲ್ಲಿ ‘ರೋಗ ನಿರೋಧ ವ್ಯವಸ್ಥೆ’ ಅಂದರೆ ‘ಇಮ್ಯೂನ್ ಸಿಸ್ಟಮ್’ನಲ್ಲಿ ಆಗುವ ಬದಲಾವಣೆಗಳ ಅಧ್ಯಯನ ನಡೆಸುತ್ತಿದ್ದಾರೆ. ಬದಲಾಗುವ ಗುರುತ್ವಾಕರ್ಷಣ ಬಲ ಹಾಗೂ ವಿಕಿರಣ ಶಕ್ತಿಯು ಜೀವಿಗಳ ಮೇಲೆ ಎಂಥ ಪರಿಣಾಮಗಳನ್ನು ಬೀರುತ್ತವೆಂದು ಅರಿಯುವುದರಲ್ಲಿ ಇವರಿಗೆ ಆಸಕ್ತಿ ಹೆಚ್ಚು. ಇದಕ್ಕೆಂದೇ ಶರ್ಮಿಳಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ನಿರ್ದಿಷ್ಟ ಉದ್ದಿಶ್ಯಗಳಿಗೆಂದೇ ಉಡ್ಡಯಿಸಲಾದ ಪುಟ್ಟ ಕೃತಕ ಉಪಗ್ರಹಗಳು ಹಾಗೂ ಬಾಹ್ಯಾಕಾಶ ಶಟಲ್‍ಗಳಿಗೆ ಪ್ರಯೋಗ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಾರೆ.

ಶರ್ಮಿಳಾ ಅವರ ಪ್ರಯೋಗಗಳಿಗೆ ಇದೀಗ ಹೆಚ್ಚಿನ ಮಹತ್ವ. ಕಾರಣ ಅಮೆರಿಕದ ಸದರ್ನ್ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಹೊರಬಂದಿರುವ ಸುದ್ದಿಯ ಪ್ರಕಾರ ನೊಣಗಳಲ್ಲಿರುವ ಒಂದು ಜೀನ್‍ಗೆ ಕೊಂಚ ಮಾರ್ಪಾಡು ಮಾಡಿದರೆ ಸಾಕು, ಅದನ್ನು ಚಿರಂಜೀವತ್ವಕ್ಕೆ ನೂಕಬಹುದು. ಅಂದರೆ ಅದರ ಜೀವಿತಾವಧಿಯನ್ನು ಮತ್ತಷ್ಟು ಕಾಲ ಹೆಚ್ಚಿಸಬಹುದು. ಯಾವುದೇ ಜೀವಕೋಶವೊಂದರ ಹೊರಪದರದಿಂದ ಸಂಕೇತಗಳನ್ನು ಕಳುಹಿಸಲು ಪ್ರೋಟೀನ್‍ನ ನೆರವು ಬೇಕು. ಇಂಥ ಪ್ರೋಟೀನ್‍ಗಳನ್ನು ಜೀವ ವಿಜ್ಞಾನದಲ್ಲಿ ‘ರಿಸೆಪ್ಟರ್’ಗಳೆಂದು ಗುರುತಿಸಲಾಗುತ್ತದೆ. ‘ರಿಸೆಪ್ಟರ್’ಗಳ ಚಲನವಲನಗಳನ್ನು ನಿರ್ಬಂಧಕ್ಕೆ ಒಳಪಡಿಸುವುದರ ಮೂಲಕ ಜೀವಕೋಶದ ಚಟುವಟಿಕೆಗಳ ಮೇಲೆ ಹತೋಟಿ ಸಾಧಿಸಬಹುದು. ಸದರ್ನ್ ಕ್ಯಾಲಿಫೋರ್ನಿಯ ವಿವಿಯ ವಿಜ್ಞಾನಿಗಳು ನೊಣಗಳ ಜೀವಕೋಶಗಳಿಗೆ ಮುದಿತನ ತರುವಂಥ ‘ರಿಸೆಪ್ಟರ್’ ಪ್ರೋಟೀನ್‍ಗಳು ಯಾವುವು ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಮತ್ಯಾವ ಬಗೆಯ ಪ್ರೋಟೀನ್‍ಗಳನ್ನು ಅಂಥ ಜೀವಕೋಶಗಳ ಮೇಲೆ ಪ್ರಯೋಗಿಸಿದರೆ ಮುದಿತನ ತರುವ ಪ್ರೋಟೀನ್‍ಗಳ ಕಾರ್ಯಚಟುವಟಿಕೆ ಸ್ಥಗಿತವಾಗಬಲ್ಲದು ಎಂದು ಕಂಡುಕೊಂಡಿದ್ದಾರೆ. ಅಂದರೆ ಜೀವಕೋಶಗಳಿಗೆ ಮುದಿತನ ತರುತ್ತಿದ್ದ ‘ರಿಸೆಪ್ಟರ್’ ಪ್ರೋಟೀನ್‍ಗಳು ತಮ್ಮ ಕಾರ್ಯಾಚರಣೆಯನ್ನು ಮುಂದೂಡಬಲ್ಲವು. ಅಂತೆಯೇ ಜೀವಿತಾವಧಿ ಮತ್ತಷ್ಟು ಹೆಚ್ಚಬಹುದೆಂಬ ನಿರೀಕ್ಷೆ ವಿಜ್ಞಾನಿಗಳದು. ಪ್ರಯೋಗಶಾಲೆಯ ಪರೀಕ್ಷೆಗಳಲ್ಲಿ ಇಂಥ ಜೀನ್ ಬದಲಾವಣೆ ಮಾಡಿಕೊಂಡ ನೊಣಗಳು ತಮ್ಮ ಜೀವಿತಾವಧಿಯನ್ನು ಮೂರನೆಯ ಒಂದು ಭಾಗದಷ್ಟು ಹೆಚ್ಚಿಸಿಕೊಂಡಿವೆ. ಇಲ್ಲಿ ಪ್ರಶಂಸನೀಯ ಅಂಶವೆಂದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ಅಡ್ಡ ಪರಿಣಾಮಗಳಿರಲಿಲ್ಲ.

ಪ್ರಯೋಗಗಳು ನಡೆಯುತ್ತಿರುವ ಈ ವಿವಿಯ ಪ್ರಾಧ್ಯಾಪಕರಾದ ರಿಚರ್ಡ್ ರಾಬರ್ಟ್ಸ್ ಹೇಳುವಂತೆ ‘ಎರಡು ಕಾರಣಗಳಿಗಾಗಿ ನೊಣಗಳ ಮೇಲಿನ ಸಂಶೋಧನೆಗಳು ನಮಗೆ ಮಹತ್ವದ್ದು. ಮೊದಲನೆಯದಾಗಿ ಕೇವಲ ಒಂದೇ ಒಂದು ರಿಸೆಪ್ಟರ್ ಬದಲಾವಣೆಯಿಂದ ಅತ್ಯಂತ ಕ್ಲಿಷ್ಟ ಜೀವವಿಜ್ಞಾನ ಪ್ರಕ್ರಿಯೆಯಾದ ಜೀವಿತಾವಧಿಯನ್ನು ಮಾರ್ಪಡಿಸಬಹುದು. ಇದನ್ನು ಕೇವಲ ಒಂದೇ ಒಂದು ಜಿನೆಟಿಕ್ ಬದಲಾವಣೆಯ ಮೂಲಕವೇ ನಡೆಸಬಹುದು’. ಹಾಗೆಂದ ಮಾತ್ರಕ್ಕೆ ಜೀವವಿಜ್ಞಾನಿಗಳ ಮೂಲ ಉದ್ದಿಶ್ಯ ಕೇವಲ ನೊಣಗಳ ಜೀವಿತಾವಧಿಯನ್ನು ವಿಸ್ತರಿಸುವುದಲ್ಲ. ಆದರೆ ಈ ಬಗೆಯ ಪ್ರಯೋಗಗಳು ಯಶಸ್ವಿಯಾದಲ್ಲಿ ಮನುಷ್ಯನ ಜೀವಿತಾವಧಿಯನ್ನು ವಿಸ್ತರಿಸುವ ಬಗ್ಗೆ ಯೋಜನೆಗಳನ್ನು ಹಮ್ಮಿಕೊಳ್ಳಬಹುದು. ಇನ್ನು ಎರಡನೆಯ ಕಾರಣ. ‘ಯಾವುದೇ ಬೆಳವಣಿಗೆಯನ್ನು ತಡೆಗಟ್ಟುವ ಪ್ರೋಟೀನ್‍ಗಳ ಅಭಿವೃದ್ಧಿಯೂ ಜೀವವಿಜ್ಞಾನದಲ್ಲಿ ಮಹತ್ವದ್ದು. ಜೀನ್‍ಗಳಿಗೆ ಸಂಬಂಧಿಸಿದ ಅನೇಕ ದೈಹಿಕ ತೊಂದರೆಗಳಿಗೆ ಕೆಲವೊಂದು ವಿಪರೀತ ಬೆಳವಣಿಗೆಗಳೂ ಕಾರಣ. ಈ ಸಂದರ್ಭದಲ್ಲಿ ಜೀನ್‍ಗಳಲ್ಲಿರುವ ನಿರ್ದಿಷ್ಟ ಪ್ರೋಟೀನ್‍ಗಳ ವಿಪರೀತ ಕಾರ್ಯಚಟುವಟಿಕೆಯನ್ನು ತಡೆಗಟ್ಟಬೇಕಾಗುತ್ತದೆ. ಅಂದರೆ ಕ್ಯಾನ್ಸರ್ ಸೇರಿದಂತೆ ಕೆಲವು ಆನುವಂಶಿಕ ಕಾಯಿಲೆಗಳಿಗೆ ಮದ್ದನ್ನು ರೂಪಿಸಲು ಈ ಬಗೆಯ ಪ್ರೋಟೀನ್‍ಗಳು ಅವಶ್ಯವಾಗುತ್ತವೆ’.

ಸಾಮಾನ್ಯವಾಗಿ ಸಂಶೋಧನಾಲಯಗಳಲ್ಲಿ ನೊಣಗಳು ಹಾರಾಡುತ್ತಿವೆಯೆಂದರೆ ಅಲ್ಲಿನ ವಿಜ್ಞಾನಿಗಳಿಗೆ ಅವುಗಳನ್ನು ಓಡಿಸುವುದು ಬಿಟ್ಟು ಬೇರೇನೂ ಕೆಲಸವಿಲ್ಲ ಎಂದರ್ಥ. ಆದರೆ ಸದರ್ನ್ ಕ್ಯಾಲಿಫೋರ್ನಿಯ ವಿವಿ ಹಾಗೂ ನಾಸಾದ ಜೆ.ಪಿ.ಎಲ್. ಸಂಶೋಧನಾಲಯಗಳಲ್ಲಿ ವಿಜ್ಞಾನಿಗಳ ಒಡನಾಟ ನೊಣಗಳೊಂದಿಗೆ. ಅವುಗಳ ಜೀವಿತಾವಧಿಯಲ್ಲಿನ ಒಟ್ಟಾರೆ ಚಟುವಟಿಕೆಗಳ ಬಗ್ಗೆಯೇ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಜತೆಗೆ ಅವುಗಳ ಜೀವಿತಾವಧಿಯನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ನೊಣಗಳೊಂದಿಗೆ ಸೆಣಸಾಡುವುದಿರಲಿ, ಸರಸವಾಡುವುದರ ಮೂಲಕವೂ ನೆಣ ಕರಗಿಸಿಕೊಳ್ಳಬಹುದೆಂದು ತೋರಿಸಿಕೊಟ್ಟಿದ್ದಾರೆ.

(ಕೃಪೆ: ವಿಜಯ ಕರ್ನಾಟಕ 18-06-2007)

No comments: