Monday, June 25, 2007

ಮಕ್ಕಳ ಮನಸ್ಸಿನಲ್ಲೀಗ ಸುನಿತಾಳಂತೆ ಹಾರುವ ಕನಸು!

ನಿವಾರ ಮುಂಜಾನೆ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಧರೆಗೆ ಮರಳಿದ್ದಾರೆ - ಅಲ್ಲಿಯ ತನಕ ಕಾಡಿದ್ದ ದೊಡ್ಡದೊಂದು ಆತಂಕಕ್ಕೆ ಮಂಗಳ ಹಾಡಿದ್ದಾರೆ. ಬಾಹ್ಯಾಂತರಿಕ್ಷದಲ್ಲಿ ಭಾರತೀಯ ಮೂಲದ ಈ ಹೆಣ್ಣಿನ ಅಪ್ರತಿಮ ಸಾಧನೆಯನ್ನು ಜಗತ್ತಿನ ಎಲ್ಲ ಮಾಧ್ಯಮಗಳು ಇನ್ನೂ ಕೊಂಡಾಡುತ್ತಿವೆ. ಮಾಧ್ಯಮಗಳ ಇಂಥದೊಂದು ‘ಅತಿರೇಕ-ಪ್ರಚಾರ’ದಿಂದ ಬೆಂಗಳೂರು ಬಿಡಿ, ಕರ್ನಾಟಕದ ಸಣ್ಣ ಊರಿನ ಶಾಲಾ ಮಕ್ಕಳಲ್ಲಿಯೂ ಸಹಾ ತಾನೊಬ್ಬ ಕಲ್ಪನಾ ಚಾವ್ಲಾ ಅಥವಾ ಸುನಿತಾ ವಿಲಿಯಮ್ಸ್ ಆಗಬೇಕೆಂಬ ಹಂಬಲ ಉಂಟಾಗಿದೆ. ಸುನಿತಾ ಅವರಿಗೆ ಸಿಕ್ಕಂಥ ಅವಕಾಶಗಳು ಕೋಟಿಗೊಬ್ಬರಿಗೆ ಮಾತ್ರ ಸಿಗುವಂಥದು. ಇರಲಿ, ಅಂತರಿಕ್ಷ ಯಾನ ಕೈಗೊಳ್ಳಲಾಗದಿದ್ದರೂ ನಮ್ಮ ಬಾಹ್ಯಾಂತರಿಕ್ಷದ ಆವರಣದಲ್ಲಿ ಏನೆಲ್ಲಾ ಸೋಜಿಗಗಳು ಜರಗುತ್ತಿವೆ? ಅವುಗಳನ್ನು ಅರಿಯಲು ಜಗತ್ತಿನ ವೈಮಾಂತರಿಕ್ಷ ವಿಜ್ಞಾನಿಗಳು ಎಂಥ ಕಸರತ್ತುಗಳನ್ನು ನಡೆಸುತ್ತಿದ್ದಾರೆ? ಅಂಥ ಕಸರತ್ತುಗಳಿಗೆಂದೇ ಸೃಷ್ಟಿಯಾಗುವ ಎಂಜಿನೀರಿಂಗ್ ವಿಸ್ಮಯಗಳು ಎಂಥವು? ಒಟ್ಟಾರೆ ಈ ಎಲ್ಲ ಪರಿಶ್ರಮಗಳ ಫಲ ಜನಸಾಮಾನ್ಯರಿಗೆ ಲಭ್ಯವಾಗುವುದೆ? ... ಹೀಗೆ ಮಕ್ಕಳ ಮನಸ್ಸಿನಲ್ಲಿ ಒಂದಷ್ಟು ಪ್ರಶ್ನೆಗಳು ಏಳುವಂತಾದರೆ, ಸುನಿತಾ ವಿಲಿಯಮ್ಸ್ ಸುಖಾಗಮನದ ಬಗ್ಗೆ ಅತಿಯಾದ ಪ್ರಚಾರ ನೀಡಿದ ಇದೇ ಮಾಧ್ಯಮಗಳಿಗೆ ನಾವು ಅತಿರೇಕದ್ದೇ ಆದ ಪ್ರಶಂಸೆಗಳನ್ನು ನೀಡೋಣ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ನಡೆಸಿದ ಇತ್ತೀಚಿನ ಪ್ರಯೋಗಗಳ ಬಗ್ಗೆ ಕನ್ನಡದ ಮಾಧ್ಯಮಗಳೂ ಸೇರಿದಂತೆ ಜಗತ್ತಿನ ಎಲ್ಲ ಮಾಧ್ಯಮಗಳು ಅತಿರೇಕ-ಪ್ರಚಾರವನ್ನು ನೀಡಿದವು. ಇಂಥ ಪ್ರಚಾರವನ್ನು ಆಗಿಂದಾಗಲೇ ನೇರ ಪ್ರಸಾರಗಳ ಮೂಲಕ ನೀಡಲು ಇಂದು ಸಾಧ್ಯವಾಗಿರುವುದು ಬಾಹ್ಯಾಕಾಶ ಸಂಶೋಧನೆಗಳಿಂದಲೇ. ನಿಮ್ಮ ಕೈಯ್ಯಲ್ಲಿರುವ ಪತ್ರಿಕೆಯಾಗಲಿ, ಸ್ಥಿರ ಮತ್ತು ಮೊಬೈಲ್ ದೂರವಾಣಿಯಾಗಲಿ, ರೇಡಿಯೊ ಆಗಲಿ, ಟೆಲಿವಿಶನ್ ಆಗಲಿ, ಅಂತರ್ಜಾಲ ಸಂಪರ್ಕವಾಗಲಿ, ಅದಕ್ಕೆ ಜೋಡಿಯಾಗಿರುವ ಗಣಕಯಂತ್ರವಾಗಲಿ, ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದಾದ ಸಂಪರ್ಕ ವ್ಯವಸ್ಥೆಗಳೆಲ್ಲದರ ಸುಗಮ ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಅಂತರಿಕ್ಷದಲ್ಲಿ ಸುತ್ತುತ್ತಿರುವ ಕೃತಕ ಉಪಗ್ರಹಗಳಿವೆ. ಈ ಉಪಗ್ರಹಗಳನ್ನು ವಿನ್ಯಾಸಗೊಳಿಸುವುದರಿಂದ ಹಿಡಿದು ಅವುಗಳನ್ನು ಉಡ್ಡಯಿಸಲು ರಾಕೆಟ್ ವಾಹನಗಳನ್ನು ಸೃಷ್ಟಿಸುವ ತನಕ ಅಗತ್ಯ ವ್ಯವಸ್ಥೆ-ಸಾಮಗ್ರಿಗಳನ್ನು ಕಲೆ ಹಾಕಿದ್ದು ವಿಮಾನ ಮತ್ತು ಅಂತರಿಕ್ಷ ಕ್ಷೇತ್ರದ ಎಂಜಿನೀರ್‌ಗಳು. ತಂತುಗಳ ಮೂಲಕವಷ್ಟೇ ಕಾರ್ಯನಿರ್ವಹಿಸುತ್ತಿದ್ದ ದೂರವಾಣಿ ಯಂತ್ರಗಳ ವ್ಯಾಪ್ತಿಯನ್ನು ನಿಸ್ತಂತು ಜಾಲಗಳ ಮೂಲಕ ವಿಸ್ತರಿಸಲು ಉಪಗ್ರಹಗಳು ನೆರವಾದವು. ಬೆಳೆದು ನಿಂತ ದೂರವಾಣಿ ಜಾಲದ ಮೂಲಕ ಫ್ಯಾಕ್ಸ್, ಇಂಟರ್‌ನೆಟ್ ಮತ್ತಿತರ ಸೌಕರ್ಯಗಳು ಬಹುತೇಕರನ್ನು ತಲುಪಿದವು. ಟೆಲಿವಿಶನ್ ಹಾಗೂ ರೇಡಿಯೊಗಳಂತೂ ಯಾರ ಎಣಿಕೆಗೂ ಸಿಗದಷ್ಟು ವೇಗದಲ್ಲಿ ಬೆಳೆದವು. ಇತ್ತೀಚೆಗಂತೂ ಇಂಟರ್‌ನೆಟ್ ನೆರವಿನ ಟೀವಿ ಹಾಗೂ ರೇಡಿಯೊ ಪ್ರಸಾರ ಜಗತ್ತಿನ ಎಲ್ಲೆಗಳನ್ನು ಭೇದಿಸಿವೆ. ಹೀಗೆ ಮಾಧ್ಯಮಗಳ ಅತಿರೇಕದ ಬೆಳವಣಿಗೆಗೆ ಸಂಪನ್ಮೂಲಗಳನ್ನು ಒದಗಿಸಿದ್ದೇ ಬಾಹ್ಯಾಂತರಿಕ್ಷ ಕ್ಷೇತ್ರ. ಅಂದರೆ ಜನಸಾಮಾನ್ಯರನ್ನು ಮುಟ್ಟಿ-ತಟ್ಟಿ-ಬಡಿದೆಬ್ಬಿಸುವ ಎಲ್ಲ ಮಾಧ್ಯಮಗಳ ಯಶಸ್ಸಿನ ಹಿನ್ನೆಲೆಯಲ್ಲಿರುವುದು ವಿಮಾನ ಹಾಗೂ ಅಂತರಿಕ್ಷ ವಿಜ್ಞಾನ. ಬಾಹ್ಯಾಂತರಿಕ್ಷ ಕ್ಷೇತ್ರದ ಎಲ್ಲ ಚಟುವಟಿಕೆಗಳೂ ಒಮ್ಮೆಲೆ ಸ್ಥಗಿತವಾದರೆ ನಮ್ಮೆಲ್ಲರ ನಿತ್ಯದ ಕಾರ್ಯಾಚರಣೆಗಳನ್ನು ಊಹಿಸಿಕೊಳ್ಳುವುದು ಕಷ್ಟ.

ಈ ಭೂಮಿಯ ಮೇಲೇ ಇಷ್ಟೊಂದು ಬಗೆಹರಿಯದ ಸಮಸ್ಯೆಗಳಿರುವಾಗ ನಾವ್ಯಾಕೆ ಬಾಹ್ಯಾಂತರಿಕ್ಷಕ್ಕೆ ಹಾರಿ ಮತ್ತಷ್ಟು ತೊಂದರೆಗಳನ್ನು ಮೈಗೆಳೆದುಕೊಳ್ಳಬೇಕು? ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿ ಅಮೆರಿಕದವರೊ, ಯುರೋಪ್ ದೇಶಗಳವರೊ, ಕೊನೆಗೆ ಜಪಾನ್, ಬ್ರೆಝಿಲ್, ಚೀನಾ, ಭಾರತ ಮತ್ತಿತರ ರಾಷ್ಟ್ರಗಳು ತೆಪ್ಪಗಿದ್ದಿದ್ದರೆ ಇಂದಿನ ಆಧುನಿಕ ಶೈಲಿಯ ಜೀವನ ಮಟ್ಟ ಸಾಧಿಸಲಾಗುತ್ತಿರಲಿಲ್ಲ. ಜತೆಗೆ ಸುರಕ್ಷೆ, ಆರ್ಥಿಕ ಪ್ರಾಬಲ್ಯ, ಒಟ್ಟಾರೆ ಉತ್ಪಾದಕತೆಯನ್ನು ಈ ಮಟ್ಟಕ್ಕೆ ಏರಿಸಿಕೊಳ್ಳಲಾಗುತ್ತಿರಲಿಲ್ಲ. ಮೇಲಿನ ಸಾಲುಗಳಲ್ಲಿ ಬಾಹ್ಯಾಂತರಿಕ್ಷ ಯೋಜನೆಗಳ ಪ್ರತ್ಯಕ್ಷ ಫಲಗಳ ಬಗ್ಗೆ ಮಾತ್ರ ಓದಿದ್ದೀರಿ. ಪರೋಕ್ಷ ಫಲಗಳನ್ನು ಪಟ್ಟಿ ಮಾಡುತ್ತಾ ಹೊರಟರೆ ಈ ಅಂಕಣ ಲೇಖನವು ತನ್ನ ಗಾತ್ರವನ್ನು ಮೀರಿಬಿಡಬಹುದು. ಎಲ್ಲವನ್ನೂ ಕರಾರುವಾಕ್ಕಾಗಿ ಲೆಕ್ಕ ಹಾಕುವ ಅಮೆರಿಕದಲ್ಲಿ ಈ ಬಗ್ಗೆ ಒಂದು ಅಧ್ಯಯನವನ್ನು ನಡೆಸಲಾಗಿದೆ. ದೇಶದ ಒಟ್ಟಾರೆ ಮುಂಗಡಪತ್ರದಲ್ಲಿ ಪ್ರತಿಶತ ಒಂದಕ್ಕೂ ಕಡಿಮೆ ಹಣವನ್ನು ಬಾಹ್ಯಾಕಾಶ ಸಂಶೋಧನೆಗಳಿಗೆ ವೆಚ್ಚ ಮಾಡಲಾಗುತ್ತದೆ. ಪ್ರತಿ ಡಾಲರ್ ಒಟ್ಟಾರೆ ವೆಚ್ಚದಲ್ಲಿ ಬಾಹ್ಯಾಕಾಶದ ಪಾಲು ಒಂದು ಪೆನ್ನಿಗೂ ಕಡಿಮೆ (ಒಂದು ಡಾಲರ್ = ನೂರು ಪೆನ್ನಿಗಳು). ಆದರೆ ಬಾಹ್ಯಾಕಾಶ ಸಂಶೋಧನೆಗಳಿಗೆ ಖರ್ಚು ಮಾಡುವ ಪ್ರತಿಯೊಂದು ಪೆನ್ನಿಗೂ ಸಿಗುತ್ತಿರುವ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರತಿಫಲ ಏಳು ಪೆನ್ನಿಗಳಿಗೂ ಹೆಚ್ಚು! ಇದರಲ್ಲಿ ಬಾಹ್ಯಾಕಾಶ ಯೋಜನೆಗಳಿಂದಾಗಿ ಹೆಚ್ಚುವರಿಯಾದ ಉದ್ಯೋಗಾವಕಾಶಗಳು ಹಾಗೂ ಆರ್ಥಿಕ ಅಭಿವೃದ್ಧಿಯಿಂದಾಗಿ ಹೆಚ್ಚಳವಾಗುವ ತೆರಿಗೆಗಳನ್ನು ಸೇರಿಸಿಕೊಳ್ಳಲಾಗಿದೆ. ಅಮೆರಿಕದಂಥ ಅಮೆರಿಕ ದೇಶವೇ ಒಪ್ಪಿಕೊಂಡಿರುವಂತೆ ಖರ್ಚಿನ ಏಳು ಪಟ್ಟು ಆದಾಯ ತರುವ ಇಂಥ ವಹಿವಾಟು ಜಗತ್ತಿನಲ್ಲಿ ಮತ್ತೊಂದಿಲ್ಲ.

ಸಣ್ಣದೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಅಂತರಿಕ್ಷದ ಕಣ್ಣು ಎಂದೇ ಭಾವಿಸಲಾದ ಬಾಹ್ಯಾಕಾಶದಲ್ಲಿ ತೇಲಾಡುತ್ತಿರುವ ದೂರದರ್ಶಕದ ಹೆಸರು ‘ಹಬಲ್’. ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ತೊಂದರೆಗಳಿವೆ, ವ್ಯರ್ಥದ ಪ್ರಯೋಗವೆಂಬ ಆಪಾದನೆ ಈ ಯೋಜನೆಯ ಮೇಲಿತ್ತು. ಆದರೂ ಭೂಮಿಯ ಮೇಲಿಂದ ತೆಗೆಯುತ್ತಿದ್ದ ಬಾಹ್ಯಾಕಾಶ ಚಿತ್ರಗಳಿಗಿಂತಲೂ ಹೆಚ್ಚು ನಿಖರವಾದ ಹಾಗೂ ಸ್ಪಷ್ಟವಾದ ಚಿತ್ರಗಳನ್ನು ‘ಹಬಲ್’ ತೆಗೆದು ಕಳುಹಿಸುತ್ತಿತ್ತು. ‘ನಾಸಾ’ದ ಬಾಹ್ಯಾಕಾಶ ಶಟಲ್ ಪಯಣಗಳಲ್ಲಿ ಪರಿಣತ ವಿಜ್ಞಾನಿಗಳು ಖುದ್ದಾಗಿ ಈ ದೂರದರ್ಶಕದತ್ತ ತೆರಳಿ ನ್ಯೂನತೆಗಳನ್ನು ಸರಿಪಡಿಸಿದ್ದರು. ಇದೀಗ ಹಿಂದೆಂದಿಗಿಂತಲೂ ಉತ್ತಮವಾದ ಅಂತರಿಕ್ಷ ವಿದ್ಯಮಾನಗಳ ಚಿತ್ರಣ ನಮಗೀಗ ದೊರೆಯುತ್ತಿದೆ. ‘ಹಬಲ್’ ದೂರದರ್ಶಕ ಮತ್ತು ಅಂಥ ಅನೇಕ ದೃಶ್ಯಗ್ರಹಣ ಸಾಧನಗಳಿಗೆಂದೇ ‘ಚಾರ್ಜ್ ಕಪಲ್ಡ್ ಡಿವೈಸ್ (ಸಿ.ಸಿ.ಡಿ.)’ ಎಂಬ ಎಲೆಕ್ಟ್ರಾನಿಕ್ ಬಿಡಿಭಾಗವನ್ನು ಒಳಗೊಂಡ ಕಂಪ್ಯೂಟರ್ ಚಿಪ್ ಒಂದನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ಸಿ.ಸಿ.ಡಿ. ಚಿಪ್‍ಗಳಿಗೆ ವಸ್ತುವೊಂದರ ಮೇಲ್ಮೈ ಹಾಗೂ ಆಳದಲ್ಲಿನ ಅತ್ಯಂತ ಸೂಕ್ಷ್ಮ ವ್ಯತ್ಯಾಸ ಹಾಗೂ ವ್ಯತ್ಯಯಗಳನ್ನು ಗುರುತಿಸಬಲ್ಲ ಸಾಮರ್ಥ್ಯವಿದೆ. ಇದೀಗ ‘ಸ್ತನ ಕ್ಯಾನ್ಸರ್’ ತಪಾಸಣೆಗೆಂದು ಹೊರತೆಗೆದ ಅಂಗಾಂಶಗಳ ಸೂಕ್ಷ್ಮ ಪರಿಶೀಲನೆಗೆ ಈ ಚಿಪ್ ಒಳಗೊಂಡಿರುವ ಯಂತ್ರಗಳನ್ನು ಬಳಸಲಾಗುತ್ತಿದೆ. ಕ್ಯಾನ್ಸರ್ ತಗಲಿರುವ ಅಥವಾ ಮುಂದೆ ತಗಲಬಹುದಾದ ಅಂಗಾಂಶಗಳ ಹಾಗೂ ಆರೋಗ್ಯವಂತ ಅಂಗಾಂಶಗಳ ನಡುವಿನ ಸೂಕ್ಷ್ಮಾತಿ ಸೂಕ್ಷ್ಮ ವ್ಯತ್ಯಾಸಗಳನ್ನು ಸಿ.ಸಿ.ಡಿ. ಚಿಪ್ ಯುಕ್ತ ತಪಾಸಣಾ ಸಾಧನ ಗುರುತಿಸಬಲ್ಲದು. ಜತೆಗೆ ಅತ್ಯುತ್ತಮ ಚಿತ್ರವೊಂದನ್ನು ತೆಗೆದುಕೊಡಬಲ್ಲದು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆ? ಬೇಡವೆ? ಎಂದು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅನಗತ್ಯ ಶಸ್ತ್ರಚಿಕಿತ್ಸೆಯ ಕಿರಿಕಿರಿಯಿಂದ ತಪ್ಪಿಸುವುದರ ಜತೆಗೆ ದುಬಾರಿ ಖರ್ಚುಗಳಿಂದ ಮುಕ್ತಿಗೊಳಿಸುತ್ತದೆ.

ಕಂಪ್ಯೂಟರ್ ಕ್ಷೇತ್ರದಲ್ಲಂತೂ ಬಾಹ್ಯಾಕಾಶ ಯೋಜನೆಗಳದೇ ಸಿಂಹಪಾಲು. ಅತ್ಯಾಧುನಿಕ ಕಂಪ್ಯೂಟರ್ ಚಿಪ್‍ಗಳು, ವಿಮಾನ ನಿಯಂತ್ರಕ ಯಂತ್ರಾಂಶ-ತಂತ್ರಾಂಶಗಳು, ಹಗುರ ತೂಕದ ಸೀ.ಡಿ.ಗಳು, ರೋಬಾಟ್‍ಗಳು, ಕೃತಕ ಬುದ್ಧಿಮತ್ತೆಯ ಯಂತ್ರಗಳು, ಲೇಸರ್ ನೆರವಿನ ತಪಾಸಣಾ ಯಂತ್ರಗಳು ಮೊದಲು ಸೃಷ್ಟಿಯಾಗಿದ್ದು ಬಾಹ್ಯಾಕಾಶ ಯೋಜನೆಗಳಿಗೆಂದೇ. ಇನ್ನು ಮನೆಬಳಕೆಯ ಸಾಧನಗಳಾದ ಆಘಾತ ನೀಡದ ಹೆಲ್ಮೆಟ್‍ಗಳು, ಸಪಾಟಾದ ತೆರೆಯ ಟೆಲಿವಿಶನ್‍ಗಳು, ಹೆಚ್ಚು ಕಾಲ ಬಾಳಿಕೆ ಬರುವ - ಹಗುರವಾದ - ಪುಟ್ಟದಾದ - ಅಗ್ಗದ ಬ್ಯಾಟರಿಗಳು, ಶೀತಲೀಕರಣದ ಮೂಲಕ ಆಹಾರವನ್ನು ಒಣಗಿಸುವ ಸಾಧನ, ವಿಕಿರಣವನ್ನು ಎದುರಿಸಬಲ್ಲ ತಂಪು ಕನ್ನಡಕಗಳು, ಗೀಚಾಗದ ಕನ್ನಡಕ ಗಾಜುಗಳು, ಹೆಚ್ಚು ಕಾಲ ಕಾಪಾಡಬಹುದಾದ ರುಚಿಯುಳಿಸಿಕೊಂಡ ಆಹಾರಗಳು ... ಹೀಗೆ ನೂರಾರು ಬಗೆಯ ತಂತ್ರಜ್ಞಾನಗಳು ಮೊದಲು ಅಭಿವೃದ್ಧಿಯಾದದ್ದು ಬಾಹ್ಯಾಕಾಶ ಯೋಜನೆಗಳಲ್ಲಿನ ಬಳಕೆಗೆಂದು.

ಬೆಂಕಿ, ವಿಕಿರಣ, ಶೀತಲ ವಾತಾವರಣ ರಕ್ಷಣೆಗೆ ಬಳಸುವ ಕವಚಗಳು, ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯಂತ್ರಗಳು, ಶಬ್ದ ಮಾಲಿನ್ಯದಿಂದ ರಕ್ಷಿಸುವ ಸಾಧನಗಳು, ಬೆಂಕಿ ಗುರುತಿಸುವ ಸಾಧನಗಳು, ಪರಮಾಣು ವಿಕಿರಣ ಗುರುತಿಸುವ ಸಾಧನಗಳು, ಭೂಕಂಪ ಮಾಪಕಗಳು ಮೊದಲು ಬಳಕೆಗೆ ಬಂದದ್ದು ಬಾಹ್ಯಾಕಾಶ ಯೋಜನೆಗಳಲ್ಲಿ. ಆರೋಗ್ಯ ತಪಾಸಣೆ ಹಾಗೂ ಅನಾರೋಗ್ಯ ಚಿಕಿತ್ಸೆಗಳಲ್ಲಂತೂ ಬಾಹ್ಯಾಕಾಶ ತಂತ್ರಜ್ಞಾನಗಳು ಸಾಕಷ್ಟು ಕೊಡುಗೆಗಳನ್ನು ನೀಡಿವೆ. ಹೃದ್ರೋಗ ಚಿಕಿತ್ಸೆಗಳಲ್ಲಿ ಬಳಸುವ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಕುಸಿಯುವ ನಾಳಗಳನ್ನು ಸದೃಢವಾಗಿಸುವ ‘ಸ್ಟೆಂಟ್’ಗಳು, ದೇಹದೊಳಗಣ ಚಿತ್ರವನ್ನು ವಿಕಿರಣ ರಹಿತವಾಗಿ ಪಡೆದುಕೊಳ್ಳಲು ಶಬ್ದ ತರಂಗಗಳನ್ನು ಬಳಸುವ ‘ಅಲ್ಟ್ರಾಸೌಂಡ್ ಸ್ಕ್ಯಾನಿಂಗ್’, ದೇಹದೊಳಗೆ ಕೂಡಿಸಬಹುದಾದ ಸಣ್ಣ-ಪುಟ್ಟ ಸಾಧನಗಳು, ಕೃತಕ ಉಸಿರಾಟ ಯಂತ್ರಗಳು, ಹೃದಯದ ಬಹುತೇಕ ಕೆಲಸಗಳನ್ನು ಮಾಡುವ ಯಂತ್ರಗಳು, ಮೂಳೆ ತಪಾಸಕಗಳು, ಕಣ್ಣಿನ ಪೊರೆ ತೆಗೆಯುವ ಯಂತ್ರಗಳು ... ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇನ್ನು ವಾಹನಗಳಿಗೆ ಅಗತ್ಯವಾದ ಹಗುರ ವಸ್ತುಗಳು, ಉತ್ತಮ ಇಂಧನ ಹಾಗೂ ತೈಲ, ಉನ್ನತ ಕಾರ್ಯಕ್ಷಮತೆಯ ಎಂಜಿನ್‍ಗಳು, ಅಪಘಾತ ರಕ್ಷಕ ಸಾಧನಗಳು, ಅಪಘಾತವಾದರೂ ಜೀವವನ್ನು ಉಳಿಸಲು ಪ್ರಯತ್ನಿಸುವ ವಾಹನ ಸಾಮಗ್ರಿಗಳು.. ನಮ್ಮೆಲ್ಲರ ನಿತ್ಯಬಳಕೆಗೆ ಬಂದಿವೆ. ವಿಕಲ ಚೇತನರ ಕೃತಕ ಅಂಗಗಳು, ಊರುಗೋಲುಗಳು, ಅಗ್ಗದ ಪ್ಲಾಸ್ಟಿಕ್‍ಗಳು, ಮಿಶ್ರವಸ್ತುಗಳ ಕಟ್ಟಡ ಸಾಮಗ್ರಿಗಳು, ರಕ್ಷಣಾ ಕವಚಗಳು, ದೋಸೆಯ ಕಾವಲಿಗೆ ಹಚ್ಚುವ ಹಿಟ್ಟು ಅಂಟಿಕೊಳ್ಳದ ಲೇಪನಗಳೂ ಸೇರಿದಂತೆ ಅನೇಕ ಲೇಪನ, ಅಂಟು, ಬಣ್ಣಗಳು ಮೊದಲ ಬಾರಿಗೆ ಅಭಿವೃದ್ಧಿಯಾದದ್ದು ಬಾಹ್ಯಾಕಾಶ ಬಳಕೆಗಳಿಗೆ.

ಮನುಕುಲದ ಒಳಿತಿಗಾಗಿ ನಡೆಸುವ ಅನೇಕ ಪ್ರಯೋಗಗಳಿಗೆ ಅನುವು ಮಾಡಿಕೊಡಲು ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಶೂನ್ಯ ಗುರುತ್ವಾಕರ್ಷಣೆಯ ನಿರ್ವಾತ ಪ್ರದೇಶದಲ್ಲಿದೆ. ಇದರ ದುರಸ್ತಿ ಹಾಗೂ ನಿರ್ವಹಣೆಗೆಂದೇ ಆಗಿಂದಾಗ್ಗೆ ವಿಜ್ಞಾನಿಗಳ ತಂಡ ಬಾಹ್ಯಾಕಾಶ ಶಟಲ್‍ಗಳ ಮೂಲಕ ತೆರಳುತ್ತದೆ. ಅಲ್ಲಿಯೇ ಬಹುಕಾಲ ಇರುವವರನ್ನು ಹಿಂದಕ್ಕೆ ತರಲು ಹಾಗೂ ಅವರ ಜಾಗಕ್ಕೆ ಮತ್ತಷ್ಟು ಜನರನ್ನು ರವಾನಿಸಲು ಈ ಯಾನಗಳು ನೆರವಾಗುತ್ತವೆ. ಮೊನ್ನೆ ಧರೆಗೆ ಸುಖಾಗಮನವಾದ ‘ಅಂಟ್ಲಾಂಟಿಸ್’ನ ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೊಸ ಸೌರಫಲಕಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟಿದ್ದಾರೆ. ಮಡಚಿಹೋಗಿದ್ದ ಸೌರಫಲಕಗಳನ್ನು ಸರಿಪಡಿಸಿದ್ದಾರೆ. ಕಂಪ್ಯೂಟರ್ ತೊಂದರೆಗಳಿಂದ ಆಮ್ಲಜನಕದ ಪೂರೈಕೆ ಕಡಿಮೆ, ಕಕ್ಷಾಪಥದ ಬದಲಾವಣೆ, ಅಸಮರ್ಪಕ ವಿದ್ಯುತ್ ಪೂರೈಕೆಗಳಿಂದ ಇನ್ನೇನು ಮುಚ್ಚೇ ಹೋಗಬಹುದಾಗಿದ್ದ ‘ರಶಿಯನ್ ಆವರಣ’ವನ್ನು ಮರುಸಜ್ಜುಗೊಳಿಸಿದ್ದಾರೆ. ಆರು ತಿಂಗಳುಗಳ ಕಾಲ ಅಲ್ಲೇ ಪ್ರಯೋಗಗಳನ್ನು ನಡೆಸುತ್ತಿದ್ದ ಸುನಿತಾ ವಿಲಿಯಮ್ಸ್ ಜಾಗಕ್ಕೆ ಕ್ಲೇ ಆಂಡರ್‌ಸನ್ ಅವರನ್ನು ಅಮೆರಿಕದ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಸಿ ಬಂದಿದ್ದಾರೆ.

ಈ ಯಶಸ್ವಿ ಸಾಹಸ ಯಾತ್ರೆಗೆ ಸಿಕ್ಕ ಅದ್ಭುತ ಮಾಧ್ಯಮ ಪ್ರಚಾರದಿಂದ ತಾವೊಬ್ಬ ‘ಸುನಿತಾ ವಿಲಿಯಮ್ಸ್’ ಆಗುವ ಕನಸು ಅನೇಕ ಶಾಲಾ ಮಕ್ಕಳಲ್ಲಿ ಉದ್ಭವಿಸಿದೆ. ‘ನಾವು ಸದಾ ಕನಸು ಕಾಣಬೇಕು, ಆ ಕನಸುಗಳು ದೊಡ್ಡದಿರಬೇಕು’ ಎಂದು ಶಾಲಾ ಮಕ್ಕಳನ್ನು ಪ್ರೇರೇಪಿಸುವ ಅಜ್ಜ ಅಬ್ದುಲ್ ಕಲಾಮ್ ಅವರೊಂದಿಗೆ ನಮ್ಮ ಶಾಲಾ ಮಕ್ಕಳೇನಾದರೂ ತಮ್ಮ ಇಂಥ ಕನಸುಗಳನ್ನು ಹಂಚಿಕೊಂಡರೆ ‘ಕನಸುಗಳೆಂದರೆ ಹೀಗೆಯೇ ಇರಬೇಕೆಂದು’ ಅವರು ಮಕ್ಕಳ ಬೆನ್ನು ಚಪ್ಪರಿಸಬಹುದು. ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಅವರುಗಳಿಗಿಂತ ನಮ್ಮ ದೇಶಕ್ಕೆ ಈಗ ಬೇಕಿರುವುದು ಮತ್ತೊಬ್ಬ ಅಬ್ದುಲ್ ಕಲಾಮ್, ಮತ್ತೊಬ್ಬ ವಿಕ್ರಮ್ ಸಾರಾಭಾಯ್, ಮತ್ತೊಬ್ಬ ಸತೀಶ್ ಧವನ್, ಮತ್ತೊಬ್ಬ ರಾಜಾರಾಮಣ್ಣ, ಮತ್ತೊಬ್ಬ ಹೋಮಿ ಭಾಭಾ, ಮತ್ತೊಬ್ಬ ರೊದ್ದಂ ನರಸಿಂಹ, ಮತ್ತೊಬ್ಬ ಸಿ.ಎನ್.ಆರ್.ರಾವ್, ಮತ್ತೊಬ್ಬ ಯು.ಆರ್.ರಾವ್, ಮತ್ತೊಬ್ಬ ಕೋಟಾ ಹರಿನಾರಾಯಣ ... ಇವರೆಲ್ಲರಿಗೂ ಮಿಗಿಲಾಗಿ ಮತ್ತೊಬ್ಬ ವಿಶ್ವೇಶ್ವರಯ್ಯ. ನಮ್ಮ ಮಕ್ಕಳಲ್ಲೇ ಅಂಥವರು ಹುಟ್ಟಿಬರಲಿ. ನಾವೆಲ್ಲರೂ ಅಂಥ ಕನಸುಗಳನ್ನು ಕಟ್ಟೋಣ.

(ಕೃಪೆ: ವಿಜಯ ಕರ್ನಾಟಕ, 25-06-2007)

3 comments:

Anonymous said...

Very Sensible and Touching....last Para. Please let us have more such paragraphs..

Anonymous said...

DEAR SIR,


NAMASKARAGALU.

BAHALA VARSHAGALINDA NIMMA LEKHANAGALANNU OODUTIDDENE.

INDU MAKKALA MANASSINALLIGA SUNNETALANTE HAARUVA KANASU!
OODIDE.

BAHALA HINDE NIMMA TANDEYAVARA BAGGE NEEVU BAREDA LEKHANA
OODIDDE.

INDU COMMUNICATE MAADUVA AVAKASHA SIIKITU.

DHANYAVADAGALU

KUMAR CHIDAMBARA ANAJI

Anonymous said...

I have watched your Interaction programme on TV9 about 10 days back, while Sunita Williams on her way back to earth from ISS. It was very informative and interesting.

I have small quiry please clarify it, I came to know from your discussions The Space Shuttle outer face attains 1650 Degree C while it is entering Earth due to friction and gravitational force, Please inform what is the temp it attains while it is going from Earth to Space.
- S.Vishwanath