Monday, July 30, 2007

ಕಲಾಮ್ ಮತ್ತೆ ಪಾಠ ಮಾಡುತ್ತಾರಂತೆ, ಕಲಿಯಲು ಸಜ್ಜಾಗೋಣ!


‘ ನೀವು ಮೂಲತಃ ವಿಜ್ಞಾನಿ, ನಂತರ ರಾಷ್ಟ್ರಪತಿ ಆಗಿದ್ದೀರಿ. ಭಾರತದಂಥ ದೇಶದಲ್ಲಿ ಹೊಸ ಶಕೆಯೊಂದನ್ನು ಆರಂಭಿಸಬಹುದು ಎಂಬ ನಂಬಿಕೆ ನಿಮಗಿದೆಯೆ? ಹೌದು ಎಂದಾದರೆ, ಅದು ಹೇಗೆ’? - ಐದು ವರ್ಷಗಳ ಹಿಂದೆ ಅಬ್ದುಲ್ ಕಲಾಮ್ ಅವರಿಗೆ ಹೀಗೊಂದು ಪ್ರಶ್ನೆ ಹಾಕಿದ್ದು ಪತ್ರಕರ್ತರಲ್ಲ, ಜಸ್‍ಪ್ರೀತ್ ಎಂಬ ಶಾಲಾ ಬಾಲಕ. ‘ಭಾರತ ಒಂದು ಅಭಿವೃದ್ಧ ದೇಶವಾಗುವತ್ತ ಹಾಗೂ ಅದರ ಶತಕೋಟಿ ಜನರ ಮುಖಗಳಲ್ಲಿ ಮುಗುಳ್ನಗೆ ತರಿಸುವತ್ತ ನಾನು ಕೆಲಸ ಮಾಡುತ್ತಿದ್ದೇನೆ’. ಎಂದಿನ ಮುಗುಳ್ನಗೆಯೊಂದಿಗೆ ರಾಷ್ಟ್ರಪತಿ ಭವನದಿಂದ ಹೊರನಡೆಯುತ್ತಿರುವ ಕಲಾಮ್ ತಮ್ಮ ಅಧಿಕಾರಾವಧಿಯನ್ನು ಅರ್ಥಪೂರ್ಣವಾಗಿ ಮುಗಿಸಿದ್ದಾರೆ. ಈ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ ಹಾಗೂ ಶತಕೋಟಿ ಜನರ ಮುಖಗಳಲ್ಲಿ ಮುಗುಳ್ನಗೆ ಚಿಮ್ಮಿದೆ ಎಂದು ಹೇಳಿದರೆ ಅದು ಕೇವಲ ಔಪಚಾರಿಕ ವಿದಾಯದ ಮಾತಾದೀತು. ಅಬ್ದುಲ್ ಕಲಾಮ್ ಅವರನ್ನು ಏನು ಮಾಡಬಲ್ಲಿರಿ ಎಂದು ಪ್ರಶ್ನೆ ಹಾಕಿದ್ದ ಜಸ್‍ಪ್ರೀತ್ ಎಲ್ಲಿದ್ದಾನೊ, ಗೊತ್ತಿಲ್ಲ. ಬಹುಶಃ ಕಾಲೇಜು ಕಲಿಯುತ್ತಿರಬಹುದು. ಆದರೆ ಜಸ್‍ಪ್ರೀತ್‍ನಂಥ ಕೋಟ್ಯಂತರ ಮಕ್ಕಳಲ್ಲಿ ಅವರು ಕೇವಲ ಮುಗುಳ್ನಗೆಯನ್ನಷ್ಟೇ ಮೂಡಿಸಿಲ್ಲ, ಅವರೆಲ್ಲರ ಹೃದಯದಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. ಅವರಲ್ಲಿ ಒಂದಷ್ಟು ಮಕ್ಕಳಲ್ಲಿಯಾದರೂ ಸ್ವದೇಶಿ ತಂತ್ರಜ್ಞಾನದ ಕಿಚ್ಚನ್ನು ಹಚ್ಚಿದ್ದಾರೆ.
ಕಲಾಮ್ ಹೇಗಿದ್ದರು, ಏನು ಮಾಡುತ್ತಿದ್ದರು, ಅವರ ಚಿಂತನೆಗಳೇನು, ಅವರು ಕಟ್ಟಿದ್ದ ಕನಸುಗಳು ಯಾವುವು ....... ಹೀಗೊಂದಷ್ಟು ಪ್ರಶ್ನೆಗಳನ್ನು ಮುಂದೆ ಹರಡಿಕೊಂಡು ಕುಳಿತರೆ ರಾಶಿ ರಾಶಿ ಉತ್ತರಗಳನ್ನು ಗುಡ್ಡೆ ಹಾಕಿಕೊಳ್ಳಬಹುದು. ಅವುಗಳನ್ನು ವಿಶ್ಲೇಷಣೆ ಮಾಡ ಹೊರಟರೆ ಬಲಿಷ್ಟ ಭಾರತ ಕಟ್ಟಲು ಸರಳ ಸೂತ್ರಗಳು ಕೈಗೆಟುಕಬಹುದು. ಇಂಥ ದಿಕ್ಸೂಚಿಗಳು ಎಷ್ಟಿವೆಯೆಂದರೆ ಬಹುಶಃ ನಮ್ಮ ಮುಂದಿನ ರಾಷ್ಟ್ರಪತಿಗಳು ನಿವೃತ್ತರಾಗುವವರೆಗೆ ನಾವು ಕಲಾಮ್ ಅಧ್ಯಯನವನ್ನು ಮುಂದುವರಿಸಬಹುದು. ನೀವೆಂದಾದರೂ ನಮ್ಮ ದೇಶದ ರಾಷ್ಟ್ರಪತಿಗಳ ಅಧಿಕೃತ ಇಂಟರ್‌ನೆಟ್ ವೆಬ್‍ಸೈಟ್ ಅಂದರೆ ಅಂತರ್‌ಜಾಲ ತಾಣ- http://www.presidentofindia.nic.in/ ಗೆ ಭೇಟಿ ಕೊಟ್ಟಿದ್ದರೆ ಮೇಲಿನ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ಎಂದು ಮನವರಿಕೆಯಾದೀತು. ಅಂತರ್‌ಜಾಲ ತಾಣದಲ್ಲಿ ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗವಿದೆ. ಅಂಕಣದ ಆರಂಭದಲ್ಲಿ ಪ್ರಸ್ತಾಪಿಸಿದಂಥದೇ 758 ಶಾಲಾ ಮಕ್ಕಳ ಪ್ರಶ್ನೆಗಳಿಗೆ ಕಲಾಮ್ ಇಲ್ಲಿ ಉತ್ತರಗಳನ್ನು ದಾಖಲಿಸಿದ್ದಾರೆ.




ಕಲಾಮ್ ಮೂಲತಃ ಒಬ್ಬ ಮೇಷ್ಟ್ರು, ಹೀಗಾಗಿ ತಮ್ಮ ಮುಂದೆ ಕಾಣುವವರನ್ನೆಲ್ಲಾ ಮಕ್ಕಳೆಂದೇ ಭಾವಿಸಿಬಿಡುತ್ತಾರೆ. ಭಾವಪರವಶರಾಗಿ ಪಾಠ ಹೇಳಲು ಹೊರಡುತ್ತಾರೆ - ಎಂಬ ಲಘು ಲೇವಡಿಗಳು ಅವರನ್ನು ಅಂಟಿಕೊಂಡಿದ್ದವು. ತೀರಾ ಹತ್ತಿರದಿಂದ ಕಲಾಮ್ ಅವರೊಂದಿಗೆ ಸಂಪರ್ಕವಿಟ್ಟುಕೊಂಡವರು ಇಂಥ ಆಪಾದನೆಗಳನ್ನು ಒಪ್ಪಲಾರರು. ಕಲಾಮ್ ದೇಶದ ರಕ್ಷಣಾ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾದಂದಿನಿಂದಲೂ ಹತ್ತಿರದ ಅಧಿಕೃತ ಒಡನಾಟಗಳನ್ನಿಟ್ಟುಕೊಂಡಿರುವ ಪ್ರತಿಷ್ಠಿತ ಇಂಗ್ಲಿಷ್ ಸಾಪ್ತಾಹಿಕ ‘ದ ವೀಕ್’ನ ದೆಹಲಿ ಸ್ಥಾನಿಕ ಸಂಪಾದಕ ಕೆ.ಎಸ್.ಸಚ್ಚಿದಾನಂದ ಮೂರ್ತಿ (ಕನ್ನಡಿಗ ‘ಸಚ್ಚಿ’), ಅದೇ ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥ ಹಾಗೂ ರಕ್ಷಣಾ ವಿಷಯಗಳ ತಜ್ಞ ಆರ್.ಪ್ರಸನ್ನನ್ ಇವರುಗಳನ್ನು ಮಾತನಾಡಿಸಿದರೆ ಸಾಕು, ಕಲಾಮ್ ‘ಪಾಠ’ಗಳಲ್ಲೂ ಜಿಗಿತು ಬರುವ ಹೊಸ ಹೊಳಹುಗಳನ್ನು ಪ್ರಸ್ತಾಪಿಸುತ್ತಾರೆ. ಅಷ್ಟೇಕೆ, ಕಲಾಮ್ ಅವರೊಂದಿಗೆ ಹದಿನಾಲ್ಕು ದಿನಗಳ ಕಾಲ ನಾಲ್ಕು ರಾಷ್ಟ್ರಗಳನ್ನು ಸುತ್ತಿ ಬಂದ ‘ವಿಜಯ ಕರ್ನಾಟಕ’ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಒಮ್ಮೆ ಕೇಳಿ ನೋಡಿ. ಹೊರರಾಷ್ಟ್ರಗಳಲ್ಲಿ ಕಲಾಮ್ ಅವರ ಮಾತುಗಳಿಗಿರುವ ಮೌಲ್ಯದ ಬಗ್ಗೆ ಖಂಡಿತವಾಗಿಯೂ ನೂರೆಂಟು ಮಾತುಗಳನ್ನಾಡದೇ ಬಿಡುವುದಿಲ್ಲ. ಇನ್ನು ವಿಜ್ಞಾನಿ ಸಿ.ಆರ್.ಸತ್ಯ - ತಿರುವನಂತಪುರದ ಬಾಹ್ಯಾಕಾಶ ಕೇಂದ್ರದ ರಾಕೆಟ್ ಯೋಜನೆಗಳಲ್ಲಿ ಕಲಾಮ್ ಅವರೊಟ್ಟಿಗೆ ಕೆಲಸ ಮಾಡಿದ್ದ ಎಂಜಿನೀರಿಂಗ್ ಸಾಮಗ್ರಿ ಪರಿಣತ ಹಾಗೂ ಪ್ರಸ್ತುತ ‘ಟಾಟಾ ಅಡ್ವಾನ್ಸ್‍ಡ್ ಮೆಟೀರಿಯಲ್ಸ್’ನ ಹಿರಿಯ ಉಪಾಧ್ಯಕ್ಷ - ಅವರೊಂದಿಗೆ ಮಾತು ಶುರು ಹಚ್ಚಿಕೊಂಡರೆ ಹತ್ತು ಪದಗಳಿಗೊಮ್ಮೆ ಕಲಾಮ್ ಪ್ರತ್ಯಕ್ಷರಾಗಿಬಿಡುತ್ತಾರೆ. ಹಳೆಯ ಪತ್ರಿಕೆ ಹಾಗೂ ದೂರದರ್ಶನ ಸಂಚಿಕೆಗಳನ್ನು ಒಮ್ಮೆ ತಿರುವಿ ನೋಡಿದರೆ ಕಲಾಮ್ ಅವರ ಪಟ್ಟ ಶಿಷ್ಯ ಪ್ರಹ್ಲಾದ ತಾವು ಕ್ಷಿಪಣಿ ಯೋಜನೆಗಳನ್ನು ಸುಸೂತ್ರವಾಗಿ ಮುನ್ನಡೆಸಲು ಕಲಾಮ್ ಏನೆಲ್ಲಾ ಪಾಠಗಳನ್ನು ಕಲಿಸಿದ್ದರೆಂದು ನೆನಪಿಸಿಕೊಳ್ಳುತ್ತಾರೆ. ಈ ಬಗೆಯ ನಿಷ್ಪಕ್ಷಪಾತ ವಿಮರ್ಶೆಗಳಷ್ಟೇ ಸಾಕು, ಕಲಾಮ್ ಅವರ ‘ಮೇಷ್ಟ್ರಗಿರಿ’ಯ ಸಾರ್ಥಕತೆಗೆ.




ಬೆಂಗಳೂರಿನ ಮಲ್ಲೇಶ್ವರದ ಕೊನೆಯಲ್ಲಿರುವ ‘ಟಾಟಾ ಇನ್‍ಸ್ಟಿಟ್ಯೂಟ್’ (ಭಾರತೀಯ ವಿಜ್ಞಾನ ಮಂದಿರ - ಐ.ಐ.ಎಸ್‍ಸಿ.) ನಿಮಗೆ ಗೊತ್ತು. ಇನ್ನೆರಡು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿರುವ ಈ ಜಗನ್ಮಾನ್ಯ ವಿಜ್ಞಾನ ಬೋಧನಾ ಸಂಸ್ಥೆಯೊಂದಿಗೆ ಅಬ್ದುಲ್ ಕಲಾಮ್ ಅವರ ಒಡನಾಟ 1958ರಿಂದಲೂ ಇದೆ. ಈ ಐಐಎಸ್‍ಸಿಯ ಶತಮಾನೋತ್ಸವವನ್ನು ಸಾರ್ಥಕವಾಗಿ ಆಚರಿಸಲು ಹಾಗೂ ಆ ಸಂದರ್ಭದಲ್ಲಿ ಮಹತ್ತರ ಯೋಜನೆಗಳನ್ನು ಹಮ್ಮಿಕೊಳ್ಳಲು ಸದ್ಯಕ್ಕೆ ಅಮೆರಿಕದಲ್ಲಿ ನೆಲೆಸಿರುವ ಐಐಎಸ್‍ಸಿಯ ಹಿರಿಯ ವಿದ್ಯಾರ್ಥಿಗಳು ಜೂನ್ ಕೊನೆಯ ವಾರದಲ್ಲಿ ಜಾಗತಿಕ ಸಮ್ಮೇಳನವೊಂದನ್ನು ಹಮ್ಮಿಕೊಂಡಿದ್ದರು. ಈ ವಿದ್ಯಾಲಯದ ಪ್ರತಿಷ್ಠಿತ ವಿದ್ಯಾರ್ಥಿಗಳಾದ ರೊದ್ದಂ ನರಸಿಂಹ, ಆರ್.ಚಿದಂಬರಂ, ಎನ್.ಬಾಲಕೃಷ್ಣನ್, ಕೋಟಾ ಹರಿನಾರಾಯಣ, ವಾಸುದೇವ ಆತ್ರೆ, ಬಿ.ದತ್ತಗುರು, ಎ.ಆರ್.ಉಪಾಧ್ಯ, ಬಿ.ಎನ್.ರಘುನಂದನ್, ರಾಘವೇಂದ್ರ ಗದಗಕರ ಮುಂತಾದವರು ಸಮ್ಮೆಳನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಇವರೆಲ್ಲರೂ ದೇಶದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಮಹತ್ತರ ಕಾಣಿಕೆಯನ್ನಿತ್ತವರು. ಜತೆಗೆ ಇಡೀ ಜಗತ್ತಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿಕೊಟ್ಟವರು. ಕಳೆದೊಂದು ಶತಮಾನದಲ್ಲಿ ಐ.ಐ.ಎಸ್‍ಸಿ. ಕನಿಷ್ಠವೆಂದರೂ ಮೂವತ್ತು ಸಹಸ್ರ ಪ್ರತಿಭಾನ್ವಿತ ವಿಜ್ಞಾನಿಗಳಿಗೆ ವಿದ್ಯಾರ್ಥಿ ದೆಸೆಯಲ್ಲಿ ಮಾರ್ಗದರ್ಶನ ಮಾಡಿದೆ. ಇವರಲ್ಲಿ ಐದು ಸಹಸ್ರಕ್ಕೂ ಹೆಚ್ಚಿನ ಮಂದಿ ಅಮೆರಿಕದಲ್ಲಿನ ಪ್ರತಿಷ್ಠಿತ ಕಂಪನಿಗಳ ಏಳಿಗೆಗೆ ಕಾರಣರಾಗಿದ್ದಾರೆ. ‘ಇಂಟೆಲ್’, ‘ಸ್ಟ್ರಾಂಡ್ ಲೈಫ್ ಸೈನ್ಸಸ್’, ‘ಮೆಕ್‍ಕಿನ್ಸೆ’, ‘ಗೂಗಲ್’, ‘ಐ.ಬಿ.ಎಂ.’, ‘ಎಚ್.ಪಿ.’, ‘ಇಬೇ’, ‘ಮೈಕ್ರೊಸಾಫ್ಟ್’, ‘ಯಾಹೂ’, ‘ಸ್ಯಾಪ್’, ‘ಸಿಸ್ಕೊ’, ‘ಬೋಯಿಂಗ್’, ‘ಬ್ರಿಟಿಷ್ ಏರೋಸ್ಪೇಸ್’, ‘ಡೆಲ್’, ‘ನಾಸಾ’, ‘ಸನ್’ ...... ಹೀಗೆ ಜಗನ್ಮಾನ್ಯ ಕಂಪನಿಗಳನ್ನು ಪಟ್ಟಿ ಮಾಡುತ್ತಾ ಹೋಗಿ. ಇವೆಲ್ಲವುಗಳ ಸೂತ್ರಧಾರ ಸ್ಥಾನದಲ್ಲಿ ಐ.ಐ.ಎಸ್‍ಸಿಯ ಹಿರಿಯ ವಿದ್ಯಾರ್ಥಿಗಳಿದ್ದಾರೆ. ಜತೆಗೆ ಅಮೆರಿಕದ ಮೊದಲ ಹತ್ತಿಪ್ಪತ್ತು ವಿಶ್ವವಿದ್ಯಾಲಯಗಳ ವಿಖ್ಯಾತ ಪ್ರಾಧ್ಯಾಪಕರುಗಳ ಪಟ್ಟಿಯಲ್ಲಿ ಐಐಎಸ್‍ಸಿಯಿಂದ ಪಾಠ ಕಲಿತವರು ಸ್ಥಾನ ಗಿಟ್ಟಿಸಿದ್ದಾರೆ. ಇವೆಲ್ಲ ಸಾಧನೆಗಳ ಒಂದು ಪರಾಮರ್ಶೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೂಡಿದ್ದ ಮೇಳವನ್ನು ರಾಷ್ಟ್ರಪತಿ ಅಬ್ದುಲ್ ಕಲಾಮ್ ಉದ್ಘಾಟಿಸಿದರು, ತಮ್ಮ ದೆಹಲಿಯ ಕೋಣೆಯಲ್ಲಿಯೇ ಕುಳಿತು. ತಂತ್ರಜ್ಞಾನವನ್ನು ಆಪ್ತವಾಗಿಸಿಕೊಳ್ಳುವುದರಲ್ಲಿ ಸದಾ ಮುಂದಾದ ಕಲಾಮ್ ಅತ್ಯುತ್ತಮವಾದ ಪ್ರಾತ್ಯಕ್ಷಿಕೆಯೊಂದನ್ನು ವೀಡಿಯೊ ಸಂವಾದದ ಮೂಲಕ ನೀಡಿದ್ದರು.




ಈ ಉಪನ್ಯಾಸದಲ್ಲಿ ಕಲಾಮ್ ಅವರಿಗೆ ಪಾಠ ಹೇಳುವ ಕಲೆ ಸಿದ್ಧಿಸಿದ್ದು ಹೇಗೆಂದು ಪತ್ತೆಯಾಗುತ್ತದೆ. ಅರವತ್ತರ ದಶಕದಲ್ಲಿ ಐಐಎಸ್‍ಸಿಯಲ್ಲಿ ವೈಮಾನಿಕ ಎಂಜಿನೀರಿಂಗ್ ಬೋಧಿಸುತ್ತಿದ್ದವರು ಜಾಗತಿಕವಾಗಿ ಹೆಸರು ಮಾಡಿದ್ದ ಡಾಸತೀಶ್ ಧವನ್. ಬೆಂಗಳೂರಿನ ಡಿಆರ್‌ಡಿಓದಲ್ಲಿ ವೈಜ್ಞಾನಿಕ ಸಹಾಯಕರಾಗಿದ್ದ ಅಬ್ದುಲ್ ಕಲಾಮ್ ತಮ್ಮ ಎಂಜಿನೀರಿಂಗ್ ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳಲು ಧವನ್ ಅವರನ್ನು ಸಂಪರ್ಕಿಸುತ್ತಾರೆ. ಹಮ್ಮು-ಬಿಮ್ಮಿಲ್ಲದ ಧವನ್, ಕಲಾಮ್ ಅವರನ್ನು ಪ್ರತಿ ಶನಿವಾರ ಮಧ್ಯಾಹ್ನ ಎರಡರಿಂದ ಮೂರು ಗಂಟೆಯ ತನಕ ನಡೆಯುತ್ತಿದ್ದ ತರಗತಿಗೆ ಆಹ್ವಾನಿಸುತ್ತಾರೆ. ಈ ಒಡನಾಟ ಆರು ವಾರಗಳ ಕಾಲ ಮುಂದುವರಿಯುತ್ತದೆ. ಪ್ರತಿಯೊಂದು ತರಗತಿಯ ಆರಂಭಕ್ಕೆ ಮುನ್ನ ಹಿಂದೆ ಬೋಧಿಸಿದ ವಿಷಯಗಳು ಅರ್ಥವಾಗಿದೆಯೆ? ಎಂದು ಪ್ರಶ್ನೆಗಳ ಮೂಲಕ ಧವನ್ ತಿಳಿದುಕೊಳ್ಳುತ್ತಿದ್ದರಂತೆ. ತಮ್ಮ ಬೋಧನಾವಧಿಯ ಪ್ರತಿಯೊಂದು ನಿಮಿಷವನ್ನೂ ಹೇಗೆ ಯಶಸ್ವಿಯಾಗಿ ಬಳಸಿಕೊಳ್ಳಬೇಕೆಂಬ ಕಲೆ ಧವನ್ ಅವರಿಗೆ ಕರಗತವಾಗಿತ್ತು. ವಿದೇಶಗಳಲ್ಲಿ ಪಡೆದು ಕೊಂಡು ಬಂದಿದ್ದ ಪರಿಣತಿಯನ್ನು ಇಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ಅವರು ಬಳಸಿಕೊಂಡರು. ಪಾಠ ಮಾಡುವುದೆಂದರೆ ಬಾಯಿಮಾತನ್ನು ಒಪ್ಪಿಸುವುದಷ್ಟೇ ಅಲ್ಲ, ವಿದ್ಯಾರ್ಥಿಯೊಬ್ಬನ ಕಲ್ಪನಾಶಕ್ತಿಯನ್ನು ಚಿಗುರಿಸುದು ಎಂದು ಧವನ್ ನಂಬಿದ್ದರು. ಚಾತುರ್ಯ ಬೆರೆತ ಜ್ಞಾನ ಕನಸುಗಳೊಂದಿಗೆ ಕಲೆತಾಗ ಎಂಜಿನೀರಿಂಗ್ ಆಪ್ತವೆನಿಸುತ್ತದೆ ಎಂದವರು ನಂಬಿದ್ದರು. ಕೇವಲ ಆರೇ ವಾರಗಳಲ್ಲಿ ಧವನ್ ಅವರಿಗಿದ್ದ ನಂಬಿಕೆಯನ್ನು ಕಲಾಮ್ ನಿಜಗೊಳಿಸಿಬಿಟ್ಟರು. ಅತ್ಯಂತ ಚಿಕ್ಕ ಹುದ್ದೆಯಲ್ಲಿದ್ದ ವಿಜ್ಞಾನಾಸಕ್ತನೊಬ್ಬನಿಗೆ ಅತ್ಯಂತ ಹಿರಿಯ ಪ್ರೊಫೆಸರ್ ಒಬ್ಬರು ತಿಳಿಯಾಗಿ ಅರ್ಥವಾಗುವಂತೆ ಪಾಠ ಮಾಡಿದ್ದು ಗಮನಾರ್ಹ ಸಂಗತಿ. ಮುಂದೆ ಆತ ದೇಶದ ಅತ್ಯುನ್ನತ ವೈಜ್ಞಾನಿಕ ಹುದ್ದೆಗೇರಲು ಧವನ್ ಅವರೊಂದಿಗಿದ್ದ ಆ ಹಿಂದಿನ ಸಾಂಗತ್ಯವೇ ಪ್ರೇರಣೆಯಾಯಿತು. ಮುಂದಿನದು ಇತಿಹಾಸ. ಕಲಾಮ್ ಅವರನ್ನು ರಾಷ್ಟ್ರಪತಿ ಹುದ್ದೆಯ ತನಕ ಕೊಂಡೊಯ್ದದ್ದು ಬೋಧಕನ ಉತ್ಸಾಹ ಹಾಗೂ ವಿದ್ಯಾರ್ಥಿಯ ಆಸಕ್ತಿ. ಹೀಗಾಗಿಯೇ ಕಲಾಮ್ ನಿಂತೆಡೆಯಲ್ಲಿಯೇ ಮೇಷ್ಟ್ರ ವೇದಿಕೆಯನ್ನೇರುತ್ತಾರೆ. ನಿಷ್ಕಳಂಕ ಬೋಧನೋತ್ಸಾಹ ಅವರನ್ನು ಆವರಿಸಿಬಿಡುತ್ತದೆ.




‘ವಯಸ್ಸು ಯಾವುದೇ ಇರಲಿ. ಕನಸುಗಳು ಸದಾ ನಿಮ್ಮೊಂದಿಗಿರಲಿ. ಆ ಕನಸುಗಳು ಎಂದೆಂದಿಗೂ ದೊಡ್ಡದಾಗಿರಲಿ’. ಈ ಪಾಠವನ್ನು ಕಲಾಮ್ ತಪ್ಪದೆಯೇ ಬೋಧಿಸುತ್ತಿದ್ದರು, ಮುಂದಿಗೂ ಬೋಧಿಸುತ್ತಾರೆ. ‘ಕನಸುಗಳು ಸದಾ ಚಿಂತನೆಗಳಾಗಿ ಬದಲಾಗುತ್ತವೆ, ಆ ಚಿಂತನೆಗಳು ಮುಂದಿನ ಕ್ರಿಯೆಗಳಿಗೆ ದಾರಿಯಾಗುತ್ತವೆ’ - ಇದೊಂದು ಅಪ್ಪಟ ಕಲಾಮ್ ವಾದ ಸರಣಿಯೆಂದರೆ ತಪ್ಪಾಗಲಾರದು. ತಮ್ಮ ನಂಬಿಕೆಯ ನುಡಿಗಟ್ಟನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಪಾಲಿಸಿಕೊಂಡು ಬಂದಿದ್ದಾರೆ. ಕಲಾಮ್ ಅವರ ಯಶೋಗಾಥೆಗೆ ಕನಸುಗಳ ಬಗ್ಗೆ ಅವರಿಗಿರುವ ವಿಶ್ವಾಸಾರ್ಹತೆಯೇ ಕಾರಣವೆಂದರೆ ತಪ್ಪಾಗಲಾರದು. ಇಡೀ ದೇಶದ ಜನತೆಯ ಮುಂದೆ ರಾಷ್ಟ್ರಪತಿ ಸ್ಥಾನದ ಬಗ್ಗೆ ಅತ್ಯಂತ ಗೌರವಯುತವಾದ ಕಲ್ಪನೆಯೊಂದನ್ನು ಬಿತ್ತಿ ಹೋದ ಕಲಾಮ್ ಮುಂದೇನು ಮಾಡುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ಸುಲಭ. ಎಂದಿನಂತೆ ತಮ್ಮ ಬೋಧನೆಯನ್ನು ಮುಂದುವರಿಸುತ್ತಾರೆ. ಮಕ್ಕಳೊಂದಿಗೆ ಮತ್ತಷ್ಟು ಹೆಚ್ಚು ಬೆರೆಯುತ್ತಾರೆ. ಎಂಜಿನೀರಿಂಗ್ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಾರೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಪರಿಣತರಿಗೆ ಮತ್ತಷ್ಟು ಮಾರ್ಗದರ್ಶನ ಮಾಡುತ್ತಾರೆ. ‘ಬತ್ತಿದರೊಂದು ತೆರೆವುದು ಚಿಲುಮೆ, ತುಂಬಿಯೇ ಇರುವುದು ಬಾಳ್ಮೆಯ ಒಲುಮೆ’ ಎಂಬ ಕವಿನುಡಿ ಕಲಾಮ್ ಅವರನ್ನು ಕುರಿತೇ ಬರೆದದ್ದೆಂದು ಗುಮಾನಿ ಪಡುವಷ್ಟು ರೀತಿಯಲ್ಲಿ ಸ್ಫೂರ್ತಿ ತುಂಬುತ್ತಾರೆ.




ವಿಜ್ಞಾನವಷ್ಟೇ ಅರಿತಿದ್ದರೆ ಸಾಲದು, ತಂತ್ರಜ್ಞಾನವೂ ಬೇಕು. ಯಂತ್ರಗಳೊಂದಿಗೆ ಮನುಷ್ಯರ ನಿರ್ವಹಣೆಯೂ ಮುಖ್ಯ ಎಂದು ಬಲವಾಗಿ ನಂಬಿದ್ದ ಕಲಾಮ್ ಅವರು ದೇಶದ ರಕ್ಷಣಾ ಸಂಶೋಧನೆಯ ಚುಕ್ಕಾಣಿ ಹಿಡಿದಿದ್ದ ಕಾಲದಲ್ಲಿ ಸ್ವದೇಶಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು. ಒಬ್ಬಂಟಿಗಳಾಗಿದ್ದಾಗ ತಮ್ಮ ಮೇಧಾಶಕ್ತಿ ಪ್ರದರ್ಶಿಸುವ ಭಾರತೀಯರು, ಒಗ್ಗೂಡಿ ಕ್ರಿಯಾತ್ಮಕ ಕೆಲಸ ಎಂದೂ ಮಾಡುವವರಲ್ಲ, ಎಂಬ ಆಪಾದನೆಯನ್ನು ಕಲಾಮ್ ಸುಳ್ಳು ಮಾಡಿದ್ದರು. ಅಪ್ಪಟ ಭಾರತೀಯ ಕ್ಷಿಪಣಿ ಮತ್ತು ವಿಮಾನಗಳು ಜಗತ್ತನ್ನು ನಿಬ್ಬೆರಗಾಗಿಸಿದ್ದು ಇವರ ನೇತೃತ್ವದಲ್ಲಿ. ಇಂಥ ಹೆಗ್ಗಳಿಕೆಯ ಕಲಾಮ್ ಮತ್ತೆ ಕಲಿಸಲು ಬರಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ದೇಶ ಮತ್ತಷ್ಟು ಸಂಖ್ಯೆಯಲ್ಲಿ ಕೋಟಾ ಹರಿನಾರಾಯಣ, ರೊದ್ದಂ ನರಸಿಂಹ, ಎ.ಆರ್.ಉಪಾಧ್ಯ, ವಾಸುದೇವ ಆತ್ರೆ, ಎನ್.ಬಾಲಕೃಷ್ಣನ್, ಯು.ಆರ್.ರಾವ್, ... ಮತ್ತಿತರರನ್ನು ಪಡೆಯಲಿ. ಕಲಾಮ್ ಅವರಷ್ಟೇ ಸಮರ್ಥರಾಗಿ ದೇಶದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರವನ್ನು ಮುನ್ನಡೆಸಲಿ. ಇದು ನಿಮ್ಮೆಲ್ಲರ ಹಾರೈಕೆಯೂ ಹೌದಲ್ಲವೆ?






(ಕೃಪೆ : ವಿಜಯ ಕರ್ನಾಟಕ, 23-07-2007)

1 comment:

Shyam Sajankila said...

Very nice article.
I am a fan of Dr.Kalam.
I really wonder and am amazed about his enthusiasm and spirits even at this age.
He is real inspiration to all we youth.
Thank you once again for the nice article