Monday, July 30, 2007

‘ಬಿ.ಪಿ.ಓ.’, ‘ಕೆ.ಪಿ.ಓ.’ ನಂತರದ ಹೊರಗುತ್ತಿಗೆ ಯಾವುದು?

‘ ಬಿ.ಪಿ.ಓ.’ ಗೊತ್ತಲ್ಲ? ವಿದೇಶಿ ಕಂಪನಿಗಳು ತಮ್ಮ ವಹಿವಾಟಿನ ನಿತ್ಯ ಚಟುವಟಿಕೆಗಳನ್ನು ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆಯಿದು. ತಮ್ಮದೇ ತಾಣದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸುವುದು ತುಟ್ಟಿಯ ಬಾಬ್ತು ಎಂದು ಮನವರಿಕೆಯಾದಾಗ ದೊಡ್ಡ ಕಂಪನಿಗಳು ಅವುಗಳನ್ನು ಅಗ್ಗದ ದರದಲ್ಲಿ ಮಾಡಿಕೊಡಬಲ್ಲ ಪುಟ್ಟ ಕಂಪನಿಗಳ ಮೊರೆಹೋಗುತ್ತವೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಹಾಗೂ ಯೂರೋಪ್ ದೇಶಗಳಿಂದ ನಮ್ಮ ದೇಶದ ಐ.ಟಿ. ಕಂಪನಿಗಳಿಗೆ ಈ ‘ಬಿ.ಪಿ.ಓ.’ ಪ್ರಕ್ರಿಯೆಯಿಂದ ‘ಬ್ಯುಸಿನೆಸ್’ ಹೆಚ್ಚುತ್ತಿದೆ. ಲಾಭಾಂಶ ಹೆಚ್ಚಿರುವ ಸ್ವದೇಶಿ ಕಂಪನಿಗಳೂ ಸಹಾ ಸಣ್ಣ-ಪುಟ್ಟ ಬ್ಯುಸಿನೆಸ್ ಅನ್ನು ಇದೇ ರೀತಿ ಮತ್ತೊಂದು ಸ್ವದೇಶಿ ಕಂಪನಿಗೆ ವರ್ಗಾಯಿಸುತ್ತವೆ - ವೇತನ ಉಳಿತಾಯ ದೃಷ್ಟಿಯಿಂದ. ಇನ್ನು ಜ್ಞಾನವನ್ನು ವಹಿವಾಟು ಮಾಡುವ ಕೆ.ಪಿ.ಓ. ಕಂಪನಿಗಳು ಅಂದರೆ ಉದಾಹರಣೆಗೆ ವಿದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಇಂಟರ್‌ನೆಟ್ ಸಂಪರ್ಕವಿರುವ ಕಂಪ್ಯೂಟರ್ ಮುಂದೆ ಕುಳಿತ ಗುರುಗಳು ‘ಟ್ಯೂಶನ್’ (ಮನೆಪಾಠ) ನಡೆಸುವುದು, ನ್ಯಾಯಾಂಗ ಸಲಹೆ - ವೈದ್ಯಕೀಯ ವರದಿಗಳ ತಪಾಸಣೆ - ತಾಂತ್ರಿಕ ವಿಶ್ಲೇಷಣೆ - ತೆರಿಗೆ ಲೆಕ್ಕಾಚಾರ - ತರಬೇತಿ - ತಾಂತ್ರಿಕ ಬರಹ ಇತ್ಯಾದಿಗಳನ್ನು ವಿದೇಶಿ ಗ್ರಾಹಕರಿಗೆ ಮಾಡಿಕೊಡುವುದು ‘ಕೆ.ಪಿ.ಓ.’ ವ್ಯಾಪ್ತಿಗೆ ಬರುತ್ತವೆ. ಬಿ.ಪಿ.ಓ. ‘ಬ್ಯುಸಿನೆಸ್’ ನಂತರ ಮುಂದೇನು? ಎಂದು ಭಾರತದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಮುನ್ನವೇ ಮುನ್ನುಗ್ಗಿ ಬಂದದ್ದು ಕೆ.ಪಿ.ಓ. ವಹಿವಾಟು. ಆದರೆ ಯಾವುದೇ ‘ಬ್ಯುಸಿನೆಸ್’ ನಿರಂತರವಲ್ಲ. ಹೀಗಾಗಿ ಸದ್ಯದ ಪ್ರಶ್ನೆ - ಕೆ.ಪಿ.ಓ. ನಂತರ ಮುಂದೇನು?

ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ದ್ವೈ-ವಾರ್ಷಿಕ ವೈಮಾಂತರಿಕ್ಷ ಮೇಳ ‘ಏರೋ-ಇಂಡಿಯಾ’ ಸಂದರ್ಭದಲ್ಲಿ ಇಂಥದೊಂದು ಚರ್ಚೆಗೆ ಚಾಲನೆ ದೊರೆತಿತ್ತು. ವಿಮಾನ ಹಾಗೂ ಬಾಹ್ಯಾಂತರಿಕ್ಷ ಎಂಜಿನೀರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ‘ಬಿ.ಪಿ.ಓ.’ ಕೆಲಸಗಳು ಭಾರತಕ್ಕೆ ಹೆಚ್ಚುವರಿಯಾಗಿ ಹರಿದುಬರಲಿದೆ. ಇಂಥ ಉದ್ಯೋಗಗಳ ವಹಿವಾಟು ಸದ್ಯದ ಐ.ಟಿ. ‘ಬ್ಯುಸಿನೆಸ್’ ಅನ್ನು ಮೀರಿಸುತ್ತದೆ ಎಂಬ ಭವಿಷ್ಯವಾಣಿ ಕಿವಿಗೆ ಬಿದ್ದಿದ್ದವು. ಒಂದೆಡೆ ‘ಇಸ್ರೋ’ದಂಥ ಸರ್ಕಾರಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ವಾವವಲಂಬಿಯಾಗಿದೆ. ಜತೆಗೆ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಉಪಗ್ರಹ ಉಡ್ಡಯಣದಂಥ ಕೆಲಸಗಳನ್ನು ಮಾಡಿಕೊಡುವುದರ ಮೂಲಕ ಹಣವನ್ನೂ ಗಳಿಸುತ್ತಿದೆ. ಭವಿಷ್ಯತ್ತಿನಲ್ಲಿ ಭಾರತ ದೇಶವು ಉಪಗ್ರಹ ಉಡ್ಡಯಣಗಳಿಗೆ ಅತ್ಯಂತ ಅಗ್ಗದ ತಾಣವಾಗುವ ನಿರೀಕ್ಷೆಯೂ ಇದೆ. ಇನ್ನು ‘ನವರತ್ನ’ ವಿಮಾನ ಕಂಪನಿ ‘ಎಚ್.ಎ.ಎಲ್.’ ದೇಶದ ಮಿಲಿಟರಿ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುತ್ತಿದೆ. ಜಗತ್ತೇ ಹೆಮ್ಮೆ ಪಡುವಂಥ ವೈಮಾಂತರಿಕ್ಷ ಎಂಜಿನೀರಿಂಗ್ ಶಿಕ್ಷಣ ವಿಭಾಗ ಬೆಂಗಳೂರಿನ ‘ಐ.ಐ.ಎಸ್‍ಸಿ.’ಯಲ್ಲಿದೆ. ಇನ್ನು ಬೆಂಗಳೂರನ್ನು ಭಾರತದ ವಿಮಾನ ಎಂಜಿನೀರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಜಿನೀರಿಂಗ್ ರಾಜಧಾನಿಯನ್ನಾಗಿ ಮಾಡಲು ಡಿ.ಆರ್.ಡಿ.ಓ. ಹತ್ತಾರು ಪ್ರಯೋಗಶಾಲೆಗಳನ್ನು ತೆರೆದಿದೆ. ಉಳಿದಂತೆ ನಾಗರೀಕ ವಿಮಾನಗಳನ್ನು ವಿನ್ಯಾಸಗೊಳಿಸುತ್ತಿರುವ ‘ಎನ್.ಎ.ಎಲ್.’ ಪ್ರಯೋಗಶಾಲೆ, ಎಲೆಕ್ಟ್ರಾನಿಕ್ಸ್ ಬಿಡಿಭಾಗ, ಕಂಪ್ಯೂಟರ್ ವ್ಯವಸ್ಥೆಗಳ ವಿನ್ಯಾಸ ಹಾಗೂ ಉತ್ಪಾದನೆಯನ್ನು ಕೈಗೊಂಡಿರುವ ‘ಭಾರತ್ ಎಲೆಕ್ಟ್ರಾನಿಕ್ಸ್’, ಖಾಸಗಿ ವಲಯದ ‘ತನೇಜಾ ಏರೋಸ್ಪೇಸ್’ .... ಬೆಂಗಳೂರನ್ನು ಎಂಜಿನೀರಿಂಗ್ ಕ್ಷೇತ್ರದ ಬಲಾಢ್ಯ ನಗರವನ್ನಾಗಿಸಿದೆ. ಹೀಗಾಗಿ ಹತ್ತು-ಹಲವು ಜಗನ್ಮಾನ್ಯ ಎಂಜಿನೀರಿಂಗ್ ಸಂಸ್ಥೆಗಳು ತಮ್ಮ ವಹಿವಾಟನ್ನು ಬೆಂಗಳೂರಿನಲ್ಲಿ ವಿಸ್ತರಿಸಿಕೊಂಡಿವೆ. ಜಗತ್ತಿನ ಅತಿ ದೊಡ್ಡ ವಿಮಾನ ತಯಾರಿಕಾ ಕಂಪನಿಗಳಾದ ‘ಬೋಯಿಂಗ್’ ಹಾಗೂ ‘ಏರ್‌ಬಸ್’ ಬೆಂಗಳೂರಿನ ‘ಎಚ್.ಎ.ಎಲ್.’ ಸೇರಿದಂತೆ ಹಲವು ಕಂಪನಿಗಳೊಂದಿಗೆ ಎಂಜಿನೀರಿಂಗ್ ವಿನ್ಯಾಸ ಹಾಗೂ ಉತ್ಪಾದನಾ ವಹಿವಾಟನ್ನು ಹಂಚಿಕೊಂಡಿವೆ. ಇನ್ನು ವಿಮಾನ ಎಂಜಿನ್‍ಗಳನ್ನು ಉತ್ಪಾದಿಸುವ ‘ಜಿ.ಇ.’, ‘ಸ್ನೆಕ್ಮಾ’, ‘ರೋಲ್ಸ್‍ರಾಯ್ಸ್’, ‘ಹನಿವೆಲ್’ ... ತಮ್ಮ ಎಂಜಿನೀರಿಂಗ್ ವಿನ್ಯಾಸ ಕೇಂದ್ರಗಳನ್ನು ಭಾರತದಲ್ಲಿ ಆರಂಭಿಸಿವೆ. ಈ ನಿಟ್ಟಿನಲ್ಲಿ ಭಾರತೀಯ ದೈತ್ಯ ಐ.ಟಿ. ಕಂಪನಿಗಳೂ ಹಿಂದೆ ಬಿದ್ದಿಲ್ಲ. ‘ಇನ್ಫೋಸಿಸ್’, ‘ವಿಪ್ರೋ’, ‘ಟಿ.ಸಿ.ಎಸ್.’ಗಳೂ ತಮ್ಮ ವೈಮಾಂತರಿಕ್ಷ ವಿಭಾಗಗಳ ಮೂಲಕ ವಿದೇಶಿ ‘ಬ್ಯುಸಿನೆಸ್’ ಹೆಚ್ಚಿಸಿಕೊಳ್ಳುತ್ತಿವೆ. ಯೂರೋಪ್ ದೇಶಗಳ ವೈಮಾಂತರಿಕ್ಷ ವಹಿವಾಟಿನ ಬಹುದೊಡ್ಡ ಒಕ್ಕೂಟ ‘ಇ.ಎ.ಡಿ.ಎಸ್.’ ಸದ್ಯದಲ್ಲಿಯೇ ಬೆಂಗಳೂರನ್ನು ಕೇಂದ್ರಸ್ಥಾನವಾಗಿಸಿಕೊಳ್ಳಲಿದೆ. ಅಂದರೆ ಬೆಂಗಳೂರು ಎಂಜಿನೀರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ‘ಬಿ.ಪಿ.ಓ. ರಾಜಧಾನಿ’ ಆಗುವ ಆಗುವುದರಲ್ಲಿ ಸಂಶಯವೇ ಇಲ್ಲ.

ಈ ಬಗೆಯ ‘ಬಿ.ಪಿ.ಓ.’ ಅನ್ನು ‘ಇ.ಪಿ.ಓ.’ ಎಂದು ಗುರುತಿಸಲಾಗಿದೆ. ಜಗತ್ತಿನ ಮುಂಚೂಣಿ ಆಟೋಮೊಬೈಲ್ ಹಾಗೂ ಏರೋಸ್ಪೇಸ್ ಕಂಪನಿಗಳಿಗೆ ಭಾರತದ ಎಂಜಿನೀರ್‌ಗಳು ‘ಇ.ಪಿ.ಓ.’ ಕೆಲಸಗಳಾದ ಕಂಪ್ಯೂಟರ್ ನೆರವಿನ ವಿನ್ಯಾಸ (‘ಸಿ.ಎ.ಡಿ’), ಉತ್ಪಾದನೆ (‘ಸಿ.ಎ.ಎಂ.’) ಹಾಗೂ ಎಂಜಿನೀರಿಂಗ್ (‘ಸಿ.ಎ.ಇ.’) ಮುಂತಾದವುಗಳನ್ನು ಮಾಡಿಕೊಡಲಿದ್ದಾರೆ. ‘ಇ.ಪಿ.ಓ.’ ವಹಿವಾಟು ಭಾರತದಲ್ಲಿ ಲಭ್ಯವಿರುವ ವಿನ್ಯಾಸ - ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ತಜ್ಞರುಗಳ ಭಾಗ್ಯದ ಬಾಗಿಲನ್ನು ತೆರೆಯಲಿದೆ. ಈ ಬಗ್ಗೆ ಯಾವ ಬಗೆಯ ಜಾಗೃತಿ ಮೂಡುತ್ತಿವೆಯೆಂದರೆ ಎಂಜಿನೀರಿಂಗ್ ವಿನ್ಯಾಸದ ಬಗ್ಗೆ ಜರಗುವ ಎಲ್ಲ ಸಮ್ಮೇಳನಗಳೂ ಭರ್ತಿಯಾಗಿ ತುಂಬಿರುತ್ತವೆ. ಜಾಗತೀಕರಣದ ಗಾಳಿ ಇದೀಗ ಭಾರತದ ಎಂಜಿನೀರಿಂಗ್ ವಿನ್ಯಾಸ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವನ್ನು ಪುಳಕಗೊಳಿಸುತ್ತಿದೆ. ಕಂಪ್ಯೂಟರ್ ತಂತ್ರಾಂಶಗಳ ನೆರವಿನ ಎಂಜಿನೀರಿಂಗ್ ವಿನ್ಯಾಸಗಳ ಸೂಕ್ಷ್ಮ ವಿಶ್ಲೇಷಣೆ, ಮೊದಲ ಮಾದರಿಗಳ ಕ್ಷಿಪ್ರ ಉತ್ಪಾದನೆ, ಮೂಲ ವಿನ್ಯಾಸ ಲಭ್ಯವಿಲ್ಲದ ಬಿಡಿಭಾಗಗಳನ್ನು ಮರು ರೂಪಿಸುವ ಎಂಜಿನೀರಿಂಗ್ ವಿಧಾನ, ಎಂಜಿನೀರಿಂಗ್ ಮಾದರಿಗಳ ಪರೀಕ್ಷೆ, ಕ್ಲಿಷ್ಟ ಬಿಡಿಭಾಗಗಳ ಉತ್ಪಾದನಾ ವಿಜ್ಞಾನ, ತ್ರಿ-ಗಾತ್ರ ಕಂಪ್ಯೂಟರ್ ಮಾದರಿಗಳ ರಚನೆ .... ಈ ಬಗೆಯ ಕೆಲಸ ಕಾರ್ಯಗಳು ನಮ್ಮ ದೇಶದ ಎಂಜಿನೀರಿಂಗ್ ಕಂಪನಿಗಳಿಗೆ ಬಹುದೊಡ್ಡ ವಹಿವಾಟನ್ನು ತಂದುಕೊಡುತ್ತಿದೆ. ಇಂಥ ವಿಷಯಗಳಲ್ಲಿ ಪರಿಣತಿಯನ್ನು ಪಡೆಯಲು ನಮ್ಮ ಎಂಜಿನೀರ್‌ಗಳು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಬಗೆಗಿನ ಜ್ಞಾನ, ಸ್ಫರ್ದಾತ್ಮಕ ರೀತಿಯಲ್ಲಿ ಕೆಲಸ ಮಾಡಬಲ್ಲ ಚಾಕಚಕ್ಯತೆ, ಸದಾ ಜಾಗೃತವಾಗಿರುವ ಕುಶಲತೆ, ವಿದ್ಯಾ ಸಂಸ್ಥೆಗಳೊಂದಿಗಿನ ಸಂಪರ್ಕ, ಜಾಗತಿಕವಾಗಿ ಲಭ್ಯವಿರುವ ಉತ್ಪಾದನಾ ತಂತ್ರಜ್ಞಾನ ... ಇತ್ಯಾದಿ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಎಂಜಿನೀರಿಂಗ್ ಕ್ಷೇತ್ರ ಮುನ್ನಡೆಯಬೇಕಾದರೆ ಮೇಲೆ ಪಟ್ಟಿ ಮಾಡಿರುವ ವಿಷಯಗಳನ್ನು ಕಂಪನಿಗಳು, ವಿದ್ಯಾಸಂಸ್ಥೆಗಳು, ಸಂಶೋಧನಾಲಯಗಳು, ಎಂಜಿನೀರ್‌ಗಳು ಮನದಟ್ಟು ಮಾಡಿಕೊಳ್ಳಬೇಕು. ಈ ಬಗ್ಗೆ ಚಿಂತಿಸುವಾಗ ನೆನಪಿಗೆ ಬರುವ ಮೊದಲ ಹೆಸರು ‘ಟಾಟಾ ಇನ್‍ಸ್ಟಿಟ್ಯೂಟ್’ ಎಂದೇ ಹೆಸರಾದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐ.ಐ.ಎಸ್‍ಸಿ.). ಇಲ್ಲೊಂದು ವಿಶಿಷ್ಟವಾದ ಎಂಜಿನೀರೀಂಗ್ ಕೇಂದ್ರವಿದೆ. ಅದರ ಹೆಸರು ‘ಎಂಜಿನೀರಿಂಗ್ ಉತ್ಪನ್ನ ವಿನ್ಯಾಸ ಹಾಗೂ ತಯಾರಿಕಾ ಕೇಂದ್ರ’. ಈ ಕೇಂದ್ರವು ಬೆಂಗಳೂರಿನ ಖಾಸಗಿ ಎಂಜಿನೀರಿಂಗ್ ವಿನ್ಯಾಸ ಸಂಸ್ಥೆ ‘ಪ್ರೋಸಿಮ್’ನ ಜತೆಗೂಡಿ ಆಗಸ್ಟ್ ತಿಂಗಳಿನಲ್ಲಿ (9 ರಿಂದ 12) ಅಂತಾರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದೆ. ‘ಎಂಜಿನೀರಿಂಗ್, ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಜಾಗತೀಕರಣ’ ಒಡ್ಡುವ ಸವಾಲುಗಳು ಹಾಗೂ ನೀಡುವ ಅವಕಾಶಗಳ ಬಗ್ಗೆ ಇಲ್ಲಿ ಪರಿಣತರು ಚರ್ಚಿಸಲಿದ್ದಾರೆ. ಐ.ಐ.ಎಸ್‍ಸಿ. ಆವರಣದಲ್ಲಿಯೇ ಜರಗುವ ಈ ಸಮ್ಮೇಳನವನ್ನು ಐ.ಐ.ಎಸ್‍ಸಿ. ಹಾಗೂ ಪ್ರೋಸಿಮ್‍ಗಳ ಜತೆಗೆ ‘ತಾಂತ್ರಿಕ ಶಿಕ್ಷಣದ ಭಾರತೀಯ ಸಂಸ್ಥೆ - ಐ.ಎಸ್.ಟಿ.ಇ.’, ‘ಲೋಹ ಬಿಡಿಭಾಗಗಳ ಉತ್ಪಾದಕರ ಸಂಘಟನೆ - ಎಂ.ಸಿ.ಎಂ.ಎ.’ಗಳು ಜಂಟಿಯಾಗಿ ಪ್ರಾಯೋಜಿಸುತ್ತಿವೆ. ಅಂದ ಮೇಲೆ ಎಂಜಿನೀರಿಂಗ್‍ಗೆ ಸಂಬಂಧಿಸಿದ ಎಲ್ಲ ಪ್ರಾತಿನಿಧಿಕ ಸಂಘಟನೆಗಳೂ ಒಗ್ಗೂಡಿ ಈ ಸಮ್ಮೇಳನದಲ್ಲಿ ಚಿಂತನೆ ನಡೆಸಲಿವೆ. ಐ.ಟಿ. ಕಂಪನಿಗಳಾದ ‘ಇನ್ಫೋಸಿಸ್’, ‘ಟಿ.ಸಿ.ಎಸ್.’, ಕಾರು ಉತ್ಪಾದಮಾ ಕಂಪನಿಗಳಾದ ‘ಜನರಲ್ ಮೋಟಾರ್ಸ್’, ‘ಮಹೀಂದ್ರ’, ‘ಟಾಟಾ ಮೋಟಾರ್ಸ್’, ‘ಡಾಲ್ಮಿಯರ್ ಕ್ರೈಸ್ಲರ್’, ‘ಫೋರ್ಡ್’ ಮುಂತಾದವುಗಳೂ ಸಹಾ ಈ ಮೇಳದಲ್ಲಿ ಭಾಗಿಯಾಗಲಿವೆ. ಹೊಸ ತಂತ್ರಜ್ಞಾನದ ಬಗ್ಗೆ ಪ್ರದರ್ಶನವೊಂದನ್ನೂ ಇಲ್ಲಿ ಹಮ್ಮಿಕೊಳ್ಳಲಾಗಿದೆ, ಸಂಶೋಧಕರ ಪ್ರಬಂಧಗಳು ಮಂಡಣೆಯಾಗಲಿವೆ, ಬ್ಯುಸಿನೆಸ್‍ನ ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆಯಾಗಲಿವೆ, ವಿದ್ಯಾಸಂಸ್ಥೆಗಳು ಹಾಗೂ ಉದ್ದಿಮೆಗಳ ನಡುವೆ ಹೊಸ ಒಡಂಬಡಿಕೆಗಳಾಗಲಿವೆ. ದೇಶದ ಪ್ರತಿಷ್ಠಿತ ಎಂಜಿನೀರಿಂಗ್ ವಿದ್ಯಾಸಂಸ್ಥೆಗಳಾದ ‘ಐ.ಐ.ಟಿ.’, ‘ಎನ್.ಐ.ಟಿ.’ಗಳ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರುಗಳೊಂದಿಗೆ ಇದರಲ್ಲಿ ಸಕ್ರಿಯವಾಗಿ ಭಾಗಿಯಾಗುವ ನಿರೀಕ್ಷೆಯಿದೆ. ಹಲವು ವಿದೇಶಿ ಎಂಜಿನೀರಿಂಗ್ ಸಂಶೋಧನಾ ಕೇಂದ್ರಗಳಿಂದಲೂ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ಇಡೀ ಸಮ್ಮೇಳನದ ಸೂತ್ರಧಾರ ಬೆಂಗಳೂರಿನ ‘ಪ್ರೋಸಿಮ್’ ಕಂಪನಿಯ ನೇತಾರ ಡಾ ಎಸ್. ಶಾಮಸುಂದರ್. ಎಂಜಿನೀರಿಂಗ್ ಕ್ಷೇತ್ರದಲ್ಲಿ ಬೆಂಗಳೂರಿನ ಐ.ಐ.ಎಸ್‍ಸಿ’ಯಿಂದ ಡಾಕ್ಟರೇಟ್ ಪಡೆದಿರುವ ಶಾಮಸುಂದರ್, ಲಂಡನ್ನಿನ ಇಂಪೀರಿಯಲ್ ಕಾಲೇಜು, ಅಮೆರಿಕದ ಡ್ರೆಕ್ಸೆಲ್ ವಿವಿ, ರೈಟ್ ಸ್ಟೇಟ್ ವಿವಿ, ರೈಟ್ ಪ್ಯಾಟರ್‌ಸನ್ ವಾಯುಸೇನಾ ನೆಲೆ ಮುಂತಾದ ಪ್ರತಿಷ್ಠಿತ ಕಂಪನಿಗಳಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ. ಬಾಸ್‍ಗಳಿಂದ ಭೇಷ್ ಅನಿಸಿಕೊಂಡಿದ್ದಾರೆ. ಉತ್ಪಾದನಾ ಎಂಜಿನೀರಿಂಗ್ ಕ್ಷೇತ್ರದಲ್ಲಿ ಹೆಸರು ಪಡೆದಿರುವ ಶಾಮ್, ‘ಜನರಲ್ ಮೋಟಾರ್ಸ್’, ‘ಫೋರ್ಡ್’, ‘ಜಿ.ಇ.’, ‘ಸೀಮನ್ಸ್’ ಮುಂತಾದ ಕಂಪನಿಗಳಿಗೆ ನೆರವು ನೀಡಿದ್ದಾರೆ. ಭಾರತಕ್ಕೆ ಮರಳಿದ ನಂತರ ಜಾಗತಿಕ ಗುಣಮಟ್ಟದ ಎಂಜಿನೀರಿಂಗ್ ಸೌಕರ್ಯಗಳನ್ನು ನಿರ್ಮಿಸುವುದರಲ್ಲಿ ಮುಂದಾದ ಶಾಮ್, ತಮ್ಮ ಅನುಭವಗಳನ್ನು ಭಾರತದ ಸರ್ವಶ್ರೇಷ್ಠ ಎಂಜಿನೀರಿಂಗ್ ಕಂಪನಿಗಳಾದ ‘ಟಾಟಾ ಸ್ಟೀಲ್’, ‘ಟೆಲ್ಕೋ’, ಟೀವಿಎಸ್’, ‘ಭಾರತ್ ಫೋರ್ಜ್’, ‘ವೀಡಿಯಾ’, ‘ಕಲ್ಯಾಣಿ ಫೋರ್ಜ್’ ಮುಂತಾದವುಗಳೊಂದಿಗೆ ಹಂಚಿಕೊಂಡಿದ್ದಾರೆ. ಇಲ್ಲಿ ಗಮನಾರ್ಹ ಅಂಶವೇನೆಂದರೆ ರಕ್ಷಣಾ ಉತ್ಪಾದನಾ ಕಂಪನಿಗಳಾದ ‘ಆರ್ಡ್‍ನೆನ್ಸ್ ಕಾರ್ಖಾನೆಗಳು’, ‘ಎಚ್.ಎ.ಎಲ್’, ಹಾಗೂ ಸಂಶೋಧನಾಲಯಗಳಾದ ‘ಡಿ.ಆರ್.ಡಿ.ಓ.’, ‘ಇಸ್ರೋ’ಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದ್ದಾರೆ. ದೇಶ ಕಟ್ಟುವ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.

ವಿದೇಶಗಳಲ್ಲಿ ಎಂಜಿನೀರಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯ ನಂತರ ಭಾರತಕ್ಕೆ ಹಿಂದಿರುಗಿ ಸ್ವದೇಶಿ ಕಂಪನಿಗಳ ನೆರವಿಗೆ ತೊಂಕ ಕಟ್ಟಿ ನಿಂತಿರುವ ಶಾಮ್ ಅವರನ್ನು ಅಭಿನಂದಿಸಲೇ ಬೇಕು. ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಮತ್ತಷ್ಟು ಕಾರಣಗಳಿವೆ. ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಅಪ್ಪಟ ಕನ್ನಡಿಗ ಶಾಮ್ ಸಾಮಾಜಿಕ ಚಟುವಟಿಕೆಗಳಿಗೆ ಕೆಲ ಸಮಯ ಮೀಸಲಿಟ್ಟಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಯುವಜನರಲ್ಲಿ ಬಿತ್ತಲೆಂದು ‘ಯುಗಯಾತ್ರಿ’ ಎಂಬ ಸಾಂಸ್ಕೃತಿಕ ಸಂಘಟನೆಯೊಂದನ್ನು ಆರಂಭಿಸಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಅಭಿವೃದ್ಧಿ ಕೆಲಸಗಳಿಗೆಂದೇ ಮೀಸಲಿಟ್ಟಿರುವ ಶಾಮ್, ‘ಸಮಗ್ರ ವಿಕಾಸ’ ಎಂಬ ಕಾರ್ಯಾಚರಣಾ ವಿಶ್ವಸ್ಥ ಸಂಸ್ಥೆಯೊಂದರ ಸಹಭಾಗಿಯಾಗಿದ್ದಾರೆ. ಸಂಸ್ಕೃತ ಭಾಷೆಯ ಬಳಕೆಯನ್ನು ಉತ್ತೇಜಿಸಲು ‘ಸಂಸ್ಕೃತ ಭಾರತಿ’ ಎಂಬ ವಿಶ್ವಸ್ಥ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.

ಎಂಜಿನೀರಿಂಗ್ ವಿನ್ಯಾಸ ಕ್ಷೇತ್ರದಲ್ಲಿ ಸಾಮಗ್ರಿಗಳನ್ನು ನಿರ್ದಿಷ್ಟ ಕೆಲಸಗಳಿಗೆ ಪದೇ ಪದೇ ಬಳಸುವುದರಿಂದ ಅವುಗಳಿಗೆ ‘ದಣಿವು’ (ಫ್ಯಾಟೀಗ್) ಆಗಿರುತ್ತದೆ. ಈ ‘ದಣಿವು’ ಎಷ್ಟರ ಮಟ್ಟಿಗಾಗಿದೆ, ಅವುಗಳನ್ನು ಕಡಿಮೆ ಮಾಡುವುದು ಹೇಗೆ, ಒಟ್ಟಾರೆ ದಣಿವಿನಿಂದ ಸಾಮಗ್ರಿ ಇನ್ನು ಎಷ್ಟು ಕಾಲ ಕೆಲಸ ಮಾಡಬಲ್ಲದು ... ಮುಂತಾದ ಲೆಕ್ಕಾಚಾರಗಳು ಅತ್ಯಂತ ಸ್ವಾರಸ್ಯಕರವಾದದ್ದು. ಅಷ್ಟೇ ಅಲ್ಲ, ಅವುಗಳ ವಿಶ್ಲೇಷಣೆ ಅತ್ಯಂತ ಕ್ಲಿಷ್ಟಕರವಾದದ್ದು. ಈ ಬೌದ್ಧಿಕ ಸವಾಲಿನ ಕೆಲಸವನ್ನು ಯಾವುದೇ ‘ದಣಿವಿಲ್ಲದೆಯೆ’ ನಗುಮುಖದಿಂದ ನಿರ್ವಹಿಸುವುದರಲ್ಲಿ ಶಾಮ್ ನಿಸ್ಸೀಮರು. ದಣಿವಿನ ನಿರ್ವಹಣೆಯನ್ನು ಎಂಜಿನೀರಿಂಗ್ ಮೂಲಕ ಕಲಿತಿರುವ ಶಾಮ್ ಅವರಿಗೆ ತಮ್ಮ ಕಚೇರಿ ಹಾಗೂ ಕಚೇರಿಯೇತರ ಕೆಲಸಗಳನ್ನು ಸುಗಮವಾಗಿ ನಡೆಸುವುದರಲ್ಲಿ ದಣಿವೆಂಬುದಿಲ್ಲ. ‘ಇ.ಪಿ.ಓ.’ ಕ್ರಾಂತಿಯಿಂದ ದೇಶದ ಎಂಜಿನೀರ್‌ಗಳಿಗೆ ಹೆಚ್ಚು ಉದ್ಯೋಗಾವಕಾಶ ದೊರೆಯುವಂತಾಗಲಿ, ಈ ಬಗ್ಗೆ ಸ್ಫೂರ್ತಿದಾಯಕವಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಮ್‍ಗೆ ಮತ್ತಷ್ಟು ಚೈತನ್ಯ ದೊರೆಯಲಿ ಎಂದು ಹಾರೈಸೋಣ!

(ಕೃಪೆ : ವಿಜಯ ಕರ್ನಾಟಕ ; 30-07-2007)

No comments: