Monday, August 6, 2007

ನೀಗಿಸಲು ವಿದ್ಯುತ್ ಬರ, ಏರಿತು ಜನರೇಟರ್ ಮತ್ತಷ್ಟು ಎತ್ತರ!

`Reach for the Sky!' ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಹಂಬಲಿಸುವವರನ್ನು ಪ್ರೋತ್ಸಾಹಿಸುವ ನುಡಿಗಳಿವು. ವಿಮಾನ ಹಾಗೂ ಬಾಹ್ಯಾಕಾಶ ಯಾನಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಬಂದ ಮೇಲೆ, ‘ಮುಗಿಲು ಮುಟ್ಟುವ’ ಅಥವಾ ‘ಆಗಸದತ್ತ ಜಿಗಿಯುವ’ ಕಾರ್ಯಗಳಲ್ಲಿ ನಮಗೆ ವಿಶೇಷತೆಗಳೇನೂ ಕಾಣುತ್ತಿಲ್ಲ. ಡಾ ರೊದ್ದಂ ನರಸಿಂಹ ನಿಮಗೆ ಗೊತ್ತಿರಬೇಕು. ‘ವಾಯು ಚಲನ ವಿಜ್ಞಾನ’ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಾಧ್ಯಾಪಕರು. ಹಿಂದೆ ಬೆಂಗಳೂರಿನ ‘ಭಾರತೀಯ ವಿಜ್ಞಾನ ಮಂದಿರ (ಭಾವಿಮಂ)’ದ ವೈಮಾಂತರಿಕ್ಷ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದವರು. ದೇಶದ ಹೆಮ್ಮೆಯ ‘ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಗಳ (ರಾವೈಪ್ರ)’ ನಿರ್ದೇಶಕರಾಗಿದ್ದವರು. ಇವರ ಅಧಿಕಾರಾವಧಿಯಲ್ಲಿ ‘ರಾವೈಪ್ರ’ ನಾಗರೀಕ ವಿಮಾನಗಳ ವಿನ್ಯಾಸ ಹಾಗೂ ನಿರ್ಮಾಣ ಕೈಗೆತ್ತಿಗೊಂಡಿತು. ಜತೆಗೆ ದೇಶದ ಹೆಮ್ಮೆಯ ‘ಹಗುರ ಯುದ್ಧ ವಿಮಾನ - ತೇಜಸ್’ ಇವರ ನೇತೃತ್ವದಲ್ಲಿ ಮುಗಿಲು ಮುಟ್ಟಿತು. ‘ಭಾವಿಮಂ’ ಆವರಣದಲ್ಲಿಯೇ ಇರುವ ‘ಉನ್ನತ ಅಧ್ಯಯನಗಳ ರಾಷ್ಟ್ರೀಯ ವಿದ್ಯಾಲಯ’ದ ನಿರ್ದೇಶಕತ್ವದ ನಂತರ ಸದ್ಯಕ್ಕೆ ‘ಜವಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನೆಗಳ ಕೇಂದ್ರ’ದ ಪ್ರಾಧ್ಯಾಪಕರಾಗಿದ್ದಾರೆ. ಎಂಜಿನೀರಿಂಗ್ ವಿಭಾಗದಲ್ಲಿ ಬ್ರಿಟನ್ನಿನ ರಾಯಲ್ ಸೊಸೈಟಿಯ ಫೆಲೋಶಿಪ್ ಪಡೆದಿರುವ ಹಾಗೂ ಅಮೆರಿಕದ ರಾಷ್ಟ್ರೀಯ ಎಂಜಿನೀರಿಂಗ್ ಅಕ್ಯಾಡೆಮಿಯ ಸದಸ್ಯತ್ವ ಪಡೆದಿರುವ ಕೆಲವೇ ಭಾರತೀಯರಲ್ಲಿ ರೊದ್ದಂ ಒಬ್ಬರು. ಇಂಥ ರೊದ್ದಂ ಸದಾ ಹೇಳುವ ತಮಾಷೆಯ ಮಾತೊಂದಿದೆ. ನೆಲದ ಮೇಲಿಂದ ಸಹಸ್ರಾರು ಅಡಿಗಳಷ್ಟು ಎತ್ತರದಲ್ಲಿನ ವಾತಾವರಣದ ಬಗ್ಗೆ ನಾವು ಎಷ್ಟೊಂದು ತಿಳಿದಿದ್ದೇವೆ, ಆದರೆ ನಮ್ಮ ಕಾಲಿನ ಅಡಿಯಿಂದ ಒಂದೆರಡು ಅಡಿಗಳಷ್ಟು ಮೇಲಿನವರೆಗಿನ ವಾಯು ಚಲನೆಯ ವಿಜ್ಞಾನದ ಸೂಕ್ಷ್ಮತೆಗಳನ್ನು ಇನ್ನೂ ಸರಿಯಾಗಿ ತಿಳಿದುಕೊಳ್ಳಲಾಗಿಲ್ಲ. ಅಂದರೆ ನಿಮ್ಮ ತಿಳಿವಳಿಕೆಯ ವಿಜ್ಞಾನ ನಿಯಮಗಳನ್ನು ಮೀರಿ ಗಾಳಿ ಹರಿದಾಡುತ್ತದೆ.
ಗಾಳಿಯ ಹರಿದಾಟ ನಮಗೆಂದೂ ಸೋಜಿಗದ ವಿಷಯ. ಗಾಳಿಪಟ ಹಾರಿಬಿಟ್ಟ ದಿನಗಳನ್ನು ನೆನಪಿಸಿಕೊಳ್ಳಿ. ಹಕ್ಕಿಗಳ, ಚಿಟ್ಟೆಗಳ ಹಾರಾಟವನ್ನು ಹತ್ತಿರದಲ್ಲಿ ಕಂಡು ಬೆರಗಾದದ್ದನ್ನು ನೆನಪಿಸಿಕೊಳ್ಳಿ. ಆಗಸದಲ್ಲಿ ಸುಂಯ್ಯೆಂದು ಹಾರಿ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ದಿಗಿಲು ಹುಟ್ಟಿಸಿದ್ದನ್ನು ನೆನಪಿಸಿಕೊಳ್ಳಿ. ನಿಮ್ಮೂರಿನ ಎತ್ತರದ ಬೆಟ್ಟಗಳ ಮೇಲೊ ಅಥವಾ ಸಿನಿಮಾ ಹಾಡುಗಳ ವೀಡಿಯೊ ತುಣಕುಗಳಲ್ಲಿಯೊ ಕಂಡ ಗಾಳಿಗೆ ತಿರುಗುವ ದೊಡ್ಡ ದೊಡ್ಡ ಯಂತ್ರಗಳನ್ನು ನೆನಪಿಸಿಕೊಳ್ಳಿ. ಈ ಎಲ್ಲ ನೆನಪುಗಳ ಹಿಂದೆ ಗಾಳಿ ಎಂಬ ಮಾಯಾ ದ್ರವವಿದೆ. ಚಂಚಲತೆಯೆಂಬುದು ಗಾಳಿಯ ಮೂಲ ಗುಣ. ಅದು ಹರಿಯುವ ದಿಕ್ಕಿಗೆ ತಿರುಗಣಿ ಯಂತ್ರದ ಮೂತಿಯನ್ನು ಇಟ್ಟು ತಿರುಗಿಸುತ್ತಾ ಹೊರಟರೆ, ನೂಕು ಬಲ ತಿರುಗು ಬಲವಾಗಿ ಮಾರ್ಪಾಡಾಗುತ್ತದೆ. ಆ ತಿರುಗು ಬಲವನ್ನು ಆಯಸ್ಕಾಂತೀಯ ಬಲವನ್ನು ಕತ್ತರಿಸುವಂತೆ ಪ್ರಯೋಗಿಸಿದಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ಗಾಳಿ ಯಂತ್ರಗಳ ಕಾರ್ಯಾಚರಣೆಯ ಮೂಲ ತತ್ವ ಇದು. ರೊದ್ದಂ ಅವರ ಮಾತುಗಳು ನೆನಪಿಗೆ ಬಂದದ್ದು ಬ್ರಿಟನ್ನಿನ ಪ್ರತಿಷ್ಠಿತ ವಿಜ್ಞಾನ ಸಾಪ್ತಾಹಿಕ ‘ನ್ಯೂ ಸೈಂಟಿಸ್ಟ್’ನ ಇತ್ತೀಚಿನ ಸಂಚಿಕೆಯೊಂದನ್ನು ತಿರುವಿ ಹಾಕುತ್ತಿದ್ದಾಗ. ಬೀಸು ಗಾಳಿಯಲ್ಲಿ ಅಡಗಿರುವ ಶಕ್ತಿಯನ್ನು ಸೆಳೆದು ವಿದ್ಯುತ್ ತಯಾರಿಸುವಿಕೆಯಲ್ಲಿನ ಹೊಸ ಸಂಶೋಧನೆಗಳ ಬಗ್ಗೆ ಈ ವಾರ ಪತ್ರಿಕೆಯಲ್ಲಿ ವಿಸ್ತೃತವಾಗಿ ಪ್ರಸ್ತಾಪವಾಗಿದೆ.ನೆಲದಿಂದ ಮೇಲೆ ಮೇಲೆ ಹೋದಂತೆ ಗಾಳಿಯ ಸಾಂದ್ರತೆ ಕಡಿಮೆಯಾಗುತ್ತಾ ಹೋಗುವುದು ನಿಮಗೆ ಗೊತ್ತು. ಈ ಕಾರಣದಿಂದಲೇ ಬೆಟ್ಟ, ಗುಡ್ಡ, ಪರ್ವತಗಳನ್ನು ಹತ್ತಿದಾಗ ನಮಗೆ ಉಸಿರಾಡಲು ಸಿಗುವ ಗಾಳಿಯ ಪ್ರಮಾಣ ಕಡಿಮೆಯಾಗುತ್ತದೆ. ಆಮ್ಲಜನಕದ ಕೊರತೆಯಿಂದ ದಣಿವು ಹೆಚ್ಚಾಗುತ್ತದೆ. ಆದರೆ ವಿಮಾನಗಳಿಗೆ ಗಾಳಿಯ ಅಡೆತಡೆ ಕಡಿಮೆ ಇರುವ ಆದರೆ ಇಂಧನದ ದಹನಕ್ಕೆ ಅಗತ್ಯವಿರುವಷ್ಟು ಗಾಳಿ ಇರುವ ವಾತಾವರಣ ಬೇಕು. ಹೀಗಾಗಿ ವಿಮಾನಗಳ ಹಾರಾಟಕ್ಕೆ ಪ್ರಶಸ್ತವಾಗಿರುವುದು ಭೂಮಿಯ ಮೇಲಿನ ಹತ್ತರಿಂದ ಹದಿನೈದು ಕಿಲೋಮೀಟರ್ ಎತ್ತರದ ವಾತಾವರಣ. ಭೂಮಿಯ ಮೇಲಿನ ಒಂದಷ್ಟು ಎತ್ತರದಲ್ಲಿ ಗಾಳಿಯ ಗುಣ ಲಕ್ಷಣಗಳು ತೀರಾ ಚಂಚಲ. ಈ ಕಾರಣದಿಂದ ನಾವು ವಿದ್ಯುತ್ ಉತ್ಪಾದಿಸಲೆಂದು ನೆಟ್ಟ ಗಾಳಿ ಯಂತ್ರಗಳ ಕಾರ್ಯಕ್ಷಮತೆ ತೀರಾ ಕಡಿಮೆ. ಚಂಚಲತೆ ಇಲ್ಲದ, ನಿರ್ದಿಷ್ಟ ನಿಯಮಗಳನ್ನು ಪಾಲಿಸುವ ಬೀಸು ಗಾಳಿ, ವಿದ್ಯುತ್ ಉತ್ಪಾದಿಸುವ ಯಂತ್ರಗಳಿಗೆ ಅಪೇಕ್ಷಣೀಯ. ಹಾಗೆಂದ ಮಾತ್ರಕ್ಕೆ ಭೂಮಿಯಿಂದ ನಾಲ್ಕೈದು ಕಿಲೋಮೀಟರ್ ಎತ್ತರದಲ್ಲಿ ಗಾಳಿ ಯಂತ್ರಗಳನ್ನು ಸ್ಥಾಪಿಸಲಾಗುವುದಿಲ್ಲ. ಕಾರಣ, ಆ ಎತ್ತರದಲ್ಲಿ ಗಂಟೆಗೆ ಐದು ನೂರು ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿಗೆ ಯಂತ್ರ ನೆಟ್ಟಿರುವ ಗುಡ್ಡದ ಬುಡವೇ ಅಲುಗಾಡಬಹುದು. ಅಂದರೆ, ಆ ಎತ್ತರಕ್ಕೆ ಗಾಳಿ ಯಂತ್ರಗಳನ್ನು ನೆಡಲಾಗುವುದಿಲ್ಲ. ಅಕ್ಕಿಯ ಮೇಲಿನ ಆಸೆ ಹೆಚ್ಚಿರಬೇಕು ಹಾಗೂ ನೆಂಟರ ಮೇಲಿನ ಪ್ರೀತಿ ಕಡಿಮೆ ಆಗಬಾರದು - ಇದು ಕೇವಲ ಸಾಮಾನ್ಯ ಮನುಷ್ಯನ ಆಸೆಯಷ್ಟೇ ಅಲ್ಲ, ವಿಜ್ಞಾನಿಗಳ ಹಂಬಲವೂ ಹೌದು. ಎಲ್ಲ ಬಗೆಯ ವೈಪರೀತ್ಯಗಳನ್ನು ಎದುರಿಸಿ ಅತ್ಯಂತ ಅಗ್ಗದ ದರದಲ್ಲಿ, ಸುಲಭ ಮಾರ್ಗದಲ್ಲಿ ವಿದ್ಯುತ್ ಉತ್ಪಾದನೆ ನಮ್ಮೆಲ್ಲರ ಬಹುದಿನದ ಕನಸು.


ಬಹು ಎತ್ತರದ ಪ್ರದೇಶಗಳಲ್ಲಿನ ವಾಯು ಬಲದ ಪ್ರತಿಶತ ಒಂದರಷ್ಟನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡರೆ, ಇಡೀ ಜಗತ್ತಿನ ಒಟ್ಟಾರೆ ಶಕ್ತಿ ಬೇಡಿಕೆಯನ್ನು ಪೂರೈಸಬಹುದು. ಇಂಥದೊಂದು ಬೃಹತ್ ಅಂದಾಜನ್ನು ಕೊಟ್ಟಿರುವವರು ಡೇವಿಡ್ ಶೆಫರ್ಡ್. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ‘ಸ್ಕೈ ವಿಂಡ್‍ಪವರ್’ ಎಂಬ ಗಾಳಿ ವಿದ್ಯುತ್ ಯಂತ್ರ ತಯಾರಿಸುವ ಕಂಪನಿಯ ಅಧ್ಯಕ್ಷರಿವರು. ಪ್ರಚಂಡ ಬುದ್ಧಿವಂತರಾದ ಇವರು ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಜಪಾನ್ ದೇಶದ ಗುಪ್ತ ಮಿಲಿಟರಿ ಸಂಕೇತಗಳನ್ನು ಅಮೆರಿಕ ಸರ್ಕಾರಕ್ಕೆ ಬಿಡಿಸಿಕೊಡುತ್ತಿದ್ದರು. ಮುಂದೆ ಅಮೆರಿಕ ಸರ್ಕಾರಕ್ಕೆ ಕೈಬರಹದ ಅಕ್ಷರಗಳನ್ನು ಓದಬಲ್ಲ ಯಂತ್ರಗಳನ್ನು ನಿರ್ಮಿಸಿಕೊಟ್ಟವರೂ ಇವರೇ. ಈ ಕಾರಣದಿಂದ ಅವರ ಮಾತುಗಳನ್ನು ಕೇವಲ ಗಾಳಿ ಮಾತುಗಳೆಂದು ತಳ್ಳಿ ಹಾಕದೆಯೆ ಗಂಭೀರವಾಗಿ ಆಲಿಸಬೇಕು. ಇವರ ಜತೆಗೂಡಿರುವವರು ಆಸ್ಟ್ರೇಲಿಯ ದೇಶದ ಸಿಡ್ನಿಯಲ್ಲಿನ ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬ್ರಯಾನ್ ರಾಬರ್ಟ್ಸ್. ತೊಂಬತ್ತರ ದಶಕದಲ್ಲಿ ಇವರು ಬಲೂನ್‍ಗಳ ಮೇಲೆ ಗಾಳಿ ತಿರುಗಣಿ ಯಂತ್ರಗಳನ್ನು ಕೂಡಿಸಿ ಅವುಗಳನ್ನು ಎತ್ತರ ಪ್ರದೇಶಗಳಿಗೆ ಹಾರಿಬಿಟ್ಟಿದ್ದರು. ಥೇಟ್ ಗಾಳಿಪಟವನ್ನು ಹಿಡಿತದಲ್ಲಿಟ್ಟುಕೊಳ್ಳುವ ದಾರದಂತೆ, ದಪ್ಪನಾದ ವಿದ್ಯುತ್ ತಂತಿಯೊಂದು ಈ ಹೆಲಿಕಾಪ್ಟರ್ ಆಕಾರದ ಬಲೂನ್ ಅನ್ನು ಹಿಡಿದಿಟ್ಟುಕೊಳ್ಳುತ್ತಿತ್ತು. ಆ ತಂತಿಯ ಮೂಲಕ ಬಲೂನ್ ನಿರ್ದಿಷ್ಟ ಎತ್ತರಕ್ಕೆ ಹಾರಲು ವಿದ್ಯುತ್ ಪೂರೈಕೆಯಾಗುತ್ತಿತ್ತು. ಒಮ್ಮೆ, ಮೇಲೇರಿದ ಗಾಳಿ ಯಂತ್ರ ವಿದ್ಯುತ್ ಉತ್ಪಾದನೆ ಆರಂಭಿಸಿದಂತೆ, ಅದೇ ನಿಯಂತ್ರಕ ತಂತಿಯ ಮೂಲಕ ವಿದ್ಯುತ್ ಹಿಂದೆ ಹರಿದು ಬರುತ್ತಿತ್ತು. ಅತ್ಯಂತ ಜಾಣ್ಮೆಯ ವಿನ್ಯಾಸವಾದ ಈ ‘ಹೆಲಿ(ಕಾಪ್ಟರ್) (ಗಾಳಿ) ಪಟ’ಕ್ಕೆ ಬಹು ದೊಡ್ಡ ಹಿನ್ನೆಲೆಯಿದೆ. ಸುಮಾರು ಮೂರು ದಶಕಗಳ ಕಾಲ ಬ್ರಯಾನ್ ರಾಬರ್ಟ್ಸ್ ಅವರ ತಂಡ ‘ಹೆಲಿ ಪಟ’ದ ವಿವಿಧ ಮಾದರಿಗಳನ್ನು ಸತತವಾಗಿ ಪರೀಕ್ಷಿಸಿದೆ. ಈ ಸುದೀರ್ಘ ಕಾಲದ ಸಂಶೋಧನೆಯ ಫಲವೇ ಸದ್ಯಕ್ಕೆ ಅಮೆರಿಕದಲ್ಲಿ ನಿರ್ಮಾಣವಾಗುತ್ತಿರುವ ‘ಹಾರಾಡುವ ವಿದ್ಯುತ್ ಉತ್ಪಾದಕ’. ಇದರ ಮೊದಲ ಮಾದರಿಯು ಈ ವರ್ಷದ ಕೊನೆಯ ಹೊತ್ತಿಗೆ ಆಗಸಕ್ಕೇರಿ, ೨೨೦ ಕಿಲೋವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಅದು ಭೂಮಿಯಿಂದ ಕನಿಷ್ಠವೆಂದರೂ ನಾಲ್ಕೂವರೆ ಕಿಲೋಮೀಟರ್ ಎತ್ತರದಲ್ಲಿದ್ದು, ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹಿಗ್ಗಿಸಿಕೊಂಡಿರುತ್ತದೆ.


ಭವಿಷ್ಯತ್ತಿನಲ್ಲಿ ನಮ್ಮ ವಿದ್ಯುತ್ ಅಗತ್ಯಕ್ಕೆ ಪೆಟ್ರೋಲಿಯಂ ಆಗಲಿ ಅಥವಾ ಪರಮಾಣು ಶಕ್ತಿಯಾಗಲೀ ಬೇಕಿಲ್ಲ. ಅವುಗಳೆಲ್ಲಕ್ಕಿಂತಲೂ ಹೆಚ್ಚಿನ ಅಗ್ಗದ ದರದಲ್ಲಿ ಗಾಳಿ ಯಂತ್ರಗಳ ಮೂಲಕ ವಿದ್ಯುತ್ ಉತ್ಪಾದಿಸಬಹುದೆಂಬ ಆತ್ಮವಿಶ್ವಾಸ ‘ಸ್ಕೈ ವಿಂಡ್‍ಪವರ್’ ಕಂಪನಿಯದು. ಮುಂದಿನ ಹತ್ತು ವರ್ಷಗಳಲ್ಲಿ ಹಾರಾಡುವ ವಿದ್ಯುತ್ ಜನಕಗಳು ಒಂಬತ್ತು ಕಿಲೋಮೀಟರ್ ಎತ್ತರದಲ್ಲಿ ತೇಲುತ್ತಿರುತ್ತವೆ, ನಮ್ಮ ಬರಿಗಣ್ಣಿಗೆ ಗೋಚರಿಸದೆಯೆ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುತ್ತವೆ ಎಂಬ ಕನಸನ್ನು ಶೆಫರ್ಡ್-ರಾಬರ್ಟ್ಸ್ ಜೋಡಿ ಹಂಚಿಕೊಂಡಿದೆ. ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಯ ವಿಷಯಗಳಿಗೆಂದೇ ಮೀಸಲಿರುವ ನಿಯತಕಾಲಿಕವೊಂದರಲ್ಲಿ ಪ್ರಬಂಧ ಮಂಡಿಸಿರುವ ಈ ಎಂಜಿನೀರ್‌ಗಳ ಪ್ರಕಾರ ಬರಲಿರುವ ದಿನಗಳಲ್ಲಿ ವಿದ್ಯುತ್ ಕ್ಷಾಮವೆಂಬುದು ಕೇವಲ ನಿಘಂಟಿನ ಪದವಾಗಿ ಉಳಿಯುತ್ತದೆ! ಅವರ ಹಾರೈಕೆಗಳನ್ನು ಮತ್ತಷ್ಟು ಉತ್ತೇಜಿಸಲೆಂದು ಇತ್ತ ನೆದರ್‌ಲೆಂಡ್ಸ್ ದೇಶದ ವಿಜ್ಞಾನಿಗಳು ತಮ್ಮ ಸಂಶೋಧನೆಗಳ ವಿವರಗಳನ್ನು ಜಗಜ್ಜಾಹೀರು ಮಾಡಿದ್ದಾರೆ. ಅಲ್ಲಿನ ಡೆಲ್‍ಫ್ಟ್ ತಂತ್ರಜ್ಞಾನ ವಿವಿಯ ಸಂಶೋಧಕರು ವಿಭಿನ್ನ ವಿನ್ಯಾಸವೊಂದರ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ವಿಮಾನದ ರೆಕ್ಕೆಗಳಂತಿರುವ ಗಾಳಿಪಟಗಳ ಸರಣಿಯನ್ನು ಮೇಲಕ್ಕೆ ತೂರಿಬಿಡುವುದು. ಒಂದೇ ತಂತಿಯಲ್ಲಿ ಬಿಗಿದ ಈ ಗಾಳಿಪಟಗಳ ತುದಿಯಲ್ಲಿರುವ ಗಾಳಿ ಯಂತ್ರಗಳು ತಿರುಗಲಾರಂಭಿಸಿ ವಿದ್ಯುತ್ ಉತ್ಪಾದಿಸುವುದು. ಅವೆಲ್ಲವೂ ಪ್ರಧಾನ ತಂತಿಯ ಮೂಲಕ ಕೆಳಗೆ ವಿದ್ಯುತ್ ಕಳುಹಿಸುವ ಯೋಜನೆಯಿದು. ‘ಲ್ಯಾಡರ್‌ಮಿಲ್’ ಎಂಬ ಹೆಸರಿನ ಈ ಯೋಜನೆಯ ಪ್ರಗತಿಯ ಬಗ್ಗೆ ಜಗತ್ತಿನೆಲ್ಲೆಡೆಯ ವಿದ್ಯುತ್ ತಂತ್ರಜ್ಞರು ಕುತೂಹಲದಿಂದ ಓದುತ್ತಿದ್ದಾರೆ.

ಗಾಳಿ ಯಂತ್ರಗಳ ಸ್ಥಾಪನೆಗೆ ನೆಲದ ಮೇಲೆ ಹೆಚ್ಚಿನ ಜಾಗ ಬೇಕು. ಅವುಗಳನ್ನು ತೋಟದಂತೆ ರೂಪಿಸಿದಾಗ ಮಾತ್ರ ಒಂದಷ್ಟು ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬಹುದು. ಇಂಥ ತೋಟಗಳನ್ನು ಎಲ್ಲೆಂದರಲ್ಲಿ ನಿರ್ಮಿಸುವ ಹಾಗಿಲ್ಲ. ಗಾಳಿ ಹೆಚ್ಚು ಬೀಸುವ, ಎತ್ತರದ ಪ್ರದೇಶಗಳಲ್ಲಿ ಮಾತ್ರ ಸ್ಥಾಪಿಸಬಹುದು. ಹೆಚ್ಚು ಸ್ಥಾಪನಾ ವೆಚ್ಚದ ಈ ತೋಟಗಳಿಂದ ಸದ್ಯಕ್ಕೆ ಸಿಗುತ್ತಿರುವ ಇಳುವರಿ ತೀರಾ ಕಮ್ಮಿ. ಈ ಹಿನ್ನೆಲೆಯಲ್ಲಿ ಕೇವಲ ತೊಂಬತ್ತು ಪೈಸೆಗೆ ಒಂದು ಯೂನಿಟ್ (ಗಂಟೆಗೆ ತಲಾ ಒಂದು ಕಿಲೋವ್ಯಾಟ್ ಬಳಕೆ) ವಿದ್ಯುತ್ ಉತ್ಪಾದಿಸಬಹುದೆಂಬ ಹಾರಾಡುವ ಗಾಳಿಯಂತ್ರಗಳ ಲೆಕ್ಕಾಚಾರ ಆಕರ್ಷಕವೆನಿಸುತ್ತದೆ. ಆದರೆ ಅಷ್ಟೆತ್ತರದಲ್ಲಿ ವಿದ್ಯುತ್ ಜನಕವನ್ನು ಹಿಡಿದಿಡುವ ತಂತಿಗಳ ನಿರ್ವಹಣೆ ಸುಲಭವೆ ಎಂಬುದು ಪ್ರಶ್ನೆ. ಗಾಳಿಯ ವೇಗ ಹೆಚ್ಚಿದಂತೆ ಈ ತಂತಿಗಳು ರಭಸದ ಸೆಳೆತಕ್ಕೆ ಒಳಗಾಗುತ್ತವೆ. ಇವೆಲ್ಲ ಎಳೆತ-ಬಿಗಿತಗಳನ್ನು ಮೀರಿ ಅವು ಕೆಲಸ ಮಾಡಬೇಕಾಗುತ್ತದೆ. ಸದ್ಯಕ್ಕೆ ಲಭ್ಯವಿರುವ ತಂತ್ರಜ್ಞಾನದಲ್ಲಿ ಅಗತ್ಯ ಸಾಮರ್ಥ್ಯದ ತಂತಿಗಳನ್ನು ರೂಪಿಸುವುದು ಕಷ್ಟವೇನಲ್ಲ. ಆದರೆ ಎತ್ತರದಲ್ಲಿನ ಅದರ ನಿರ್ವಹಣೆಯ ಸುರಕ್ಷತೆಯ ಬಗ್ಗೆ ಮಾತ್ರ ಕೊಂಚ ಅನುಮಾನ. ಇನ್ನು, ವಿಮಾನಗಳೂ ಸೇರಿದಂತೆ ಗಾಳಿಯಲ್ಲಿ ತೇಲುವ ಯಂತ್ರಗಳೆಲ್ಲ ದಿನಗಟ್ಟಲೆ ಹಾರುತ್ತಲೇ ಇರಲಾಗುವುದಿಲ್ಲ. ಅವುಗಳಿಗೂ ಕಾಲ ಕಾಲಕ್ಕೆ ಸೂಕ್ತ ನಿರ್ವಹಣಾ ವಿರಾಮ ಬೇಕಾಗುತ್ತದೆ. ಹಾರುವ ಗಾಳಿ ಯಂತ್ರಗಳು ಈ ಎಲ್ಲ ಅಡೆತಡೆಗಳನ್ನೂ ಸುರಕ್ಷಿತವಾಗಿ ದಾಟಬೇಕು.


ಭೂಮಿಯಿಂದ ಸಹಸ್ರಾರು ಕಿಲೋಮೀಟರ್ ಎತ್ತರಕ್ಕೆ ಉಪಗ್ರಹಗಳನ್ನು ಕಳುಹಿಸಿ, ಅವುಗಳ ಯಶಸ್ವಿ ನಿರ್ವಹಣೆ ಮಾಡಲು ಇಂದು ನಮಗೆ ಸಾಧ್ಯ. ಥೇಟ್ ನಮ್ಮ ನಾಗರೀಕ ವಿಮಾನದಂತೆ ಬಾಹ್ಯಾಕಾಶಕ್ಕೆ ಶಟಲ್‍ಗಳನ್ನು ಕಳುಹಿಸುವಷ್ಟು ಸಾಮರ್ಥ್ಯವೂ ನಮಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಜನಕಗಳನ್ನು ಹಾರಿಬಿಡುವುದು ಮತ್ತಷ್ಟು ಸುಲಭವಾಗಬಹುದು. ಎತ್ತರ, ಇನ್ನೂ ಎತ್ತರ, ಮತ್ತಷ್ಟು ಎತ್ತರ, ಮಗದಷ್ಟು ಎತ್ತರ .... ಹೀಗೆ ಸಾಧನೆಯ ಹಾದಿಯೆಂಬುದು ಸದಾ ಎತ್ತರೆತ್ತರ. ಎತ್ತರವೊ, ಹತ್ತಿರವೊ, ವಿದ್ಯುತ್ ಕ್ಷಾಮವನ್ನು ನೀಗಿಸಬಲ್ಲ ಇಂಥ ಯಾವುದೇ ಯೋಜನೆ ಬೇಗ ಯಶಸ್ವಿಯಾಗಲಿ.
(ಕೃಪೆ : ವಿಜಯ ಕರ್ನಾಟಕ, 06-08-2007)

No comments: