Tuesday, August 14, 2007

ಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿನಾಶ, ಕುತ್ತು!

ಮ್ಮ ದೇಹಕ್ಕೆ ಯಾವುದೇ ಒಂದು ಮದ್ದು ಒಗ್ಗುತ್ತದೆಯೆ? ಎಂಬ ಪರಿಶೀಲನೆ ನಡೆಸುವಾಗ ಅದು ‘ಲಿವರ್’ ಅಥವಾ ‘ಯಕೃತ್ತು’ವಿನ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಯುವುದು ಅವಶ್ಯ. ಹೀಗಾಗಿ ಆವಿಷ್ಕಾರವಾದ ಹೊಸ ಮದ್ದಿನ ಮೊದಲ ಮಾದರಿಗಳನ್ನು ಯಕೃತ್ತಿನ ಮೇಲೆ ಪ್ರಯೋಗಿಸಿ ಅಡ್ಡ ಪರಿಣಾಮಗಳ ಬಗ್ಗೆ ದೀರ್ಘ ಕಾಲ ಅಧ್ಯನಗಳನ್ನು ನಡೆಸಲಾಗುತ್ತದೆ. ಏಕೆಂದರೆ, ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲಿ ‘ಯಕೃತ್ತಿನ ಪಾತ್ರ ಬಹು ದೊಡ್ಡದು. ಪಿತ್ತರಸ ಸ್ರವಿಸುವ ಈ ನಾಳಿಯ ಗ್ರಂಥಿಯು ಜಠರದ ಬಲಭಾಗದಲ್ಲಿರುತ್ತದೆ. ನಾವು ಸೇವಿಸುವ ಆಹಾರದಲ್ಲಿನ ಕೊಬ್ಬನ್ನು ಇದು ಕರಗಿಸುತ್ತದೆ. ಗ್ಲುಕೋಸ್ ಅನ್ನು ಸಂಗ್ರಹಿಸಬಹುದಾದ ಶಕ್ತಿರೂಪವಾದ ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ. ಪ್ರೋಟಿನ್‍ಗಳ ಆಧಾರ ಸ್ತಂಭಗಳಾದ ಅಮೈನೊ ಆಮ್ಲವನ್ನು ಇದು ರೂಪಿಸುತ್ತದೆ. ಮೂತ್ರಕ್ಕೆ ಸೇರುವ ವ್ಯರ್ಥ ಸಾಮಗ್ರಿ ಯೂರಿಯ ಅನ್ನು ಇದೇ ಉತ್ಪಾದಿಸುತ್ತದೆ. ದೇಹಕ್ಕೆ ಅಗತ್ಯವಾದ ಕೆಲವೊಂದು ರಕ್ತ ಪ್ರೋಟಿನ್‍ಗಳನ್ನು ಹಾಗೂ ಕಿಣ್ವಗಳನ್ನು ಇದು ಉತ್ಪಾದಿಸುತ್ತದೆ. ದೇಹವಿಡೀ ಪರಿಚಲಿಸುವ ರಕ್ತ ಯಕೃತ್ತಿನ ವ್ಯಾಪ್ತಿಯಡಿಯಲ್ಲಿ ಬಂದಾಗ ಜೀವಾಣು ವಿಷಗಳ ಇರುವಿಕೆಯ ಬಗ್ಗೆ ಅದು ತಪಾಸಣೆ ನಡೆಸುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಅಂಥ ವಿಷಗಳನ್ನು ನಿವಾರಿಸುತ್ತದೆ. ಅಂದರೆ ನಮ್ಮ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿದ್ದರೆ ದೇಹದ ಸ್ವಾಸ್ಥ್ಯವೂ ಚೆನ್ನಾಗಿದೆಯೆಂದು ಅರ್ಥ.

ಮನುಷ್ಯ ದೇಹದ ಯಕೃತ್ತು ಒಂದು ವಿಸ್ಮಯಗಳ ಆಗರ. ತನ್ನೊಳಗೆ ಬಂದ ರಾಸಾಯನಿಕ ಸಂಯುಕ್ತಗಳನ್ನು ಮತ್ತೊಂದು ರಾಸಾಯನಿಕ ಸಂಯುಕ್ತವಾಗಿ ಇದು ಪರಿವರ್ತಿಸುತ್ತದೆ. ಆದರೆ ಪ್ರಯೋಗಶಾಲೆಯಲ್ಲಿ ನೀವು ಸಂಸ್ಕರಿಸಿದ ರಾಸಾಯನಿಕ ಸಂಯುಕ್ತವನ್ನು ಮತ್ತೊಂದು ಯಾವ ರೂಪದ ರಾಸಾಯನಿಕ ಸಂಯುಕ್ತವಾಗಿ ಇದು ಪರಿವರ್ತಿಸಬಲ್ಲದು ಎಂದು ಲೆಕ್ಕ ಹಾಕಲಾಗುವುದಿಲ್ಲ. ಅಷ್ಟರ ಮಟ್ಟಿಗೆ ಅದೊಂದು ಗೌಪ್ಯ ಕಾರ್ಯಾಗಾರ. ಎಷ್ಟೋ ಬಾರಿ ಔಷಧದ ರಾಸಾಯನಿಕವು ವಿಷವಸ್ತುವಾಗಿರುವುದಿಲ್ಲ, ಆದರೆ ಯಕೃತ್ತಿನ ಕಾರ್ಯಾಚರಣೆಯಿಂದ ವಿಷವಸ್ತುವಾಗಿ ಬದಲಾಗುವ ಸಾಧ್ಯತೆಯಿರುತ್ತದೆ. ಕಂಪ್ಯೂಟರ್ ಮಾದರಿಗಳೂ ಸೇರಿದಂತೆ ಸದ್ಯಕ್ಕೆ ಲಭ್ಯವಿರುವ ಯಾವುದೇ ತಂತ್ರಜ್ಞಾನಗಳು ಯಕೃತ್ತಿನ ಕಾರ್ಯಾಚರಣೆಯನ್ನು ನಿಖರವಾಗಿ ತಿಳಿಪಡಿಸಲು ಸಾಧ್ಯವಿಲ್ಲ. ಅಂದರೆ ಮದ್ದೊಂದರ ಕಾರ್ಯಕ್ಷಮತೆಯನ್ನು ಪರಿಪೂರ್ಣವಾಗಿ ಅಳೆಯಲು ಯಕೃತ್ತಿನ ಮೇಲೆ ಪ್ರಯೋಗ ನಡೆಸಬೇಕು. ಮನುಷ್ಯನಿಗೆ ಹತ್ತಿರದ ಸ್ತನಿಗಳ ಮೇಲೆ (ಅವುಗಳ ಯಕೃತ್ತಿನ ಮೇಲೆ) ಪ್ರಯೋಗಗಳನ್ನು ಹಮ್ಮಿಕೊಳ್ಳಬಹುದಲ್ಲವೆ? ಎಂಬುದು ಪ್ರಶ್ನೆ. ಪ್ರತಿಯೊಂದು ಜೀವಿಯ ಯಕೃತ್ತಿನ ಸಂಯೋಜನೆ ಹಾಗೂ ಕಾರ್ಯಾಚರಣೆಗಳು ವಿಭಿನ್ನವಾಗಿರುವ ಕಾರಣ, ತುಲನಾತ್ಮಕ ಪ್ರಯೋಗ ಫಲಿತಾಂಶಗಳು ನಿಖರವಾಗಿರಲು ಸಾಧ್ಯವಿಲ್ಲ.


ಯಕೃತ್ತನ್ನು ಕಾಡುವ ಮಾರಣಾಂತಕ ಕಾಯಿಲೆಗಳೆಂದರೆ ‘ಮಲೇರಿಯ’ ಹಾಗೂ ‘ಹೆಪಟೈಟಿಸ್-ಸಿ’. ಇವುಗಳ ನಿವಾರಣೆಗೆ ಅತ್ಯಂತ ಸುರಕ್ಷವಾದ, ಅಗ್ಗದ ದರದಲ್ಲಿ ಲಭ್ಯವಾಗುವ, ಅಡ್ಡ ಪರಿಣಾಮಗಳು ಕಡಿಮೆ ಇರುವ, ಸುಲಭ ಮಾರ್ಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಬಲ್ಲ ಔಷಧಗಳನ್ನು ಸಂಯೋಜಿಸಲಾಗುತ್ತಿದೆ. ಹೊಸ ಮದ್ದುಗಳು ಆವಿಷ್ಕಾರವಾದ ಸಂದರ್ಭಗಳಲ್ಲಿ, ಮನುಷ್ಯನ ಯಕೃತ್ತಿನ ಮೇಲೆ ನೇರವಾಗಿ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗದ ಕಾರಣ, ಯಕೃತ್ತಿನಿಂದ ಹೊರತೆಗೆದ ಜೀವಕೋಶಗಳ ಮೇಲೆ ವಿಸ್ತೃತ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತದೆ. ಹೀಗಾಗಿ ಜಗತ್ತಿನಾದ್ಯಂತ ಯಕೃತ್ತಿನ ಜೀವಕೋಶಗಳಿಗೆ ಬೇಡಿಕೆ ಅತ್ಯಂತ ಹೆಚ್ಚಿನದು. ಒಂದು ಅಂದಾಜಿನಂತೆ ಈ ಮಾರುಕಟ್ಟೆಯ ಮೌಲ್ಯ ವಾರ್ಷಿಕ ಎರಡು ಶತ ಕೋಟಿ ಅಮೆರಿಕನ್ ಡಾಲರ್‌ಗಳು (ಅಂದರೆ ಸರಿ ಸುಮಾರು ಎಂಟು ಸಹಸ್ರ ಕೋಟಿ ರೂಪಾಯಿಗಳು). ಆದರೆ ದುಡ್ಡು ಚೆಲ್ಲುತ್ತೇನೆಂದರೂ ಯಕೃತ್ತಿನ ಜೀವಕೋಶಗಳು ಅಷ್ಟು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಈ ಹಿಂದೆ ತಿಳಿಸಿದಂತೆ ಯಕೃತ್ತು ಮನುಷ್ಯ ದೇಹದ ಅತಿ ಮುಖ್ಯ ಅಂಗ. ಇಂದಿನ ಬದಲಿ ಜೋಡಣೆ ಯುಗದಲ್ಲಿ ಯಕೃತ್ತನ್ನು ‘ಆಕರ ಕೋಶ’ ಅಂದರೆ ‘ಸ್ಟೆಮ್ ಸೆಲ್ಸ್’ಗಳ ನೆರವಿನಿಂದ ಪ್ರತ್ಯೇಕವಾಗಿ ಬೆಳೆಸಿ ಶಸ್ತ್ರಕ್ರಿಯೆಯ ಮೂಲಕ ಪುನರ್ಜೋಡಣೆ ಮಾಡಬಹುದು. ಹೀಗೆ ಯಕೃತ್ತನ್ನು ನಿರ್ಮಿಸುವಾಗ ಹೆಚ್ಚುವರಿಯಾದ ಅಥವಾ ಪರಿಪೂರ್ಣವಾಗಿ ಬೆಳೆಯದ ಅಥವಾ ನಿರುಪಯೋಗಿಯೆನಿಸಿದ ಜೀವಕೋಶಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಗುಣ ಮಟ್ಟ ಕಡಿಮೆಯಿರುವ ಅಂಥ ಜೀವಕೋಶಗಳನ್ನು ಔಷಧ ಕಂಪನಿಗಳು ಕೊಂಡು ತಮ್ಮ ಪ್ರಯೋಗಗಳಿಗೆ ಬಳಸಿಕೊಳ್ಳುತ್ತವೆ. ಇವುಗಳ ಜೀವಿತಾವಧಿ ತೀರಾ ಕಡಿಮೆಯಿರುವುದರಿಂದ ಲಭ್ಯವಿರುವ ಸಮಯದಲ್ಲಿಯೇ ಪ್ರಯೋಗಗಳನ್ನು ಹಮ್ಮಿಕೊಳ್ಳಬೇಕು. ಅಂದರೆ ಬೇಕೆಂದಾಗಲೆಲ್ಲಾ ಯಕೃತ್ತಿನ ಜೀವಕೋಶಗಳು ಸಿಗುವುದಿಲ್ಲ ಎಂದರ್ಥ.


ಈ ಬಗ್ಗೆ ಚಿಂತಿಸುತ್ತಿದ್ದ ಜೀವ ವಿಜ್ಞಾನಿಗಳು ಹಾಗೂ ಜೈವಿಕ ತಂತ್ರಜ್ಞರು ಕಳೆದ ಹತ್ತು ವರ್ಷಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ. ಜೀವಿಯೊಂದರ ಗುಣಾವಗುಣಗಳನ್ನು ನಿರ್ಧರಿಸುವ ‘ಜೀನ್’ ಅಥವಾ ‘ಗುಣಾಣು’ ಹಾಗೂ ‘ವರ್ಣತಂತು’ ಅಥವಾ ‘ಕ್ರೋಮೋಸೋಮ್’ಗಳ ರಚನೆ ಹಾಗೂ ಅವುಗಳ ರಾಸಾಯನಿಕ ಸಂಯೋಜನೆಗಳ ಬಗ್ಗೆ ಆರಂಭವಾದ ಮಹತ್ವದ ಯೋಜನೆಯ ಹೆಸರು ‘ಜೀನೋಮ್’. ‘ಜೀನ್’ಗಳು ರೂಪುಗೊಳ್ಳಲು ಎಂಥ ನೀಲಿನಕ್ಷೆ ಆಧಾರವಾಗಿದೆಯೆಂಬ ವಿಷಯ ಮನದಟ್ಟಾದಂತೆ ಒಂದು ಜೀವಿಯ ಜೀನ್ ಅನ್ನು ಮತ್ತೊಂದು ಜೀವಿಗೆ ಜೋಡಿಸುವ ಕಸಿ ವಿಜ್ಞಾನ ಪ್ರಗತಿ ಸಾಧಿಸಿತು. ಈ ಸಂದರ್ಭದಲ್ಲಿ ಜೀವ ವಿಜ್ಞಾನಿಗಳು ಇಲಿಗಳ ದೇಹದಲ್ಲಿ ಮನುಷ್ಯನ ಯಕೃತ್ತಿನ ಜೀವಕೋಶಗಳನ್ನು ಬೆಳೆಸಲು ಸಾಧ್ಯವೆ? ಎಂಬ ಪರಿಶೀಲನೆ ನಡೆಸಿದರು. ಮೂರು ವರ್ಷಗಳ ಹಿಂದೆ ಮಾನವ ಯಕೃತ್ತಿನ ಜೀವಕೋಶಗಳನ್ನು ಇಲಿಯ ದೇಹದಲ್ಲಿ ಸಂಸ್ಕರಿಸಲು ಸಾಧ್ಯವೂ ಆಯಿತು. ಆದರೆ ಪ್ರಯೋಗಗಳು ಅಷ್ಟೊಂದು ಯಶಸ್ಸನ್ನು ತರಲಿಲ್ಲ. ಜೀನ್ ಮಾರ್ಪಡಿಸಿಕೊಂಡ ಇಲಿಗಳನ್ನು ಸಾಕುವುದು ಅಷ್ಟು ಸುಲಭವಾಗಿರಲಿಲ್ಲ. ಇಲಿಗಳ ದೇಹದಲ್ಲಿ ಮಾನವ ಯಕೃತ್ತಿನ ಜೀವಕೋಶಗಳನ್ನು (ಜೀನ್ ಕಸಿಯ ಮೂಲಕ) ಸೇರ್ಪಡೆ ಮಾಡಲು ಲಭ್ಯವಿರುವ ಕಾಲಾವಧಿಯೂ ತೀರಾ ಅಲ್ಪವಾಗಿರುತ್ತಿದ್ದವು. ಬಹುತೇಕ ಬಾರಿ ಇಲಿಯ ಯಕೃತ್ತು ಮಾನವ ಯಕೃತ್ತಿನ ಜೀವಕೋಶಗಳನ್ನು ಒಪ್ಪಿಕೊಳ್ಳದೆಯೆ ತಿರಸ್ಕರಿಸುತ್ತಿದ್ದವು. ಜತೆಗೆ ಇಲಿಗಳಿಗೆ ಅದೇಷ್ಟೇ ರೋಗನಿರೋಧಕ ಚಿಕಿತ್ಸೆ ನೀಡಿದ್ದರೂ, ಬಹುಬೇಗ ಕಾಯಿಲೆಗಳಿಗೆ ತುತ್ತಾಗುತ್ತಿದ್ದವು.


ಇವೆಲ್ಲ ಕೊರತೆಗಳ ನಿವಾರಣೆಗೆ ಜಗತ್ತಿನ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಸಂಶೋಧನೆಗಳನ್ನು ಹಮ್ಮಿಕೊಂಡಿದ್ದವು. ಇವುಗಳಲ್ಲಿ ಅಮೆರಿಕದ ಓರೆಗಾನ್‍ನಲ್ಲಿನ ‘ಸ್ವಾಸ್ಥ್ಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ’ ಗಣನೀಯ ಪ್ರಗತಿ ಸಾಧಿಸಿದೆ. ಜೈವಿಕ ತಂತ್ರಜ್ಞಾನ ವಿಷಯಗಳಿಗೆಂದೇ ಪ್ರತ್ಯೇಕವಾದ ನಿಯತಕಾಲಿಕ ಆರಂಭಿಸಿರುವ ಪ್ರತಿಷ್ಠಿತ ವಿಜ್ಞಾನ ಪತ್ರಿಕೆ ‘ನೇಚರ್’ನ ಇತ್ತೀಚಿನ ಸಂಚಿಕೆಯಲ್ಲಿ ವರದಿಯಾಗಿರುವಂತೆ ಇನ್ನು ಮುಂದೆ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ. ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಇಲಿಗಳ ದೇಹದಲ್ಲಿಯೇ ಇನ್ನು ಮುಂದೆ ಉತ್ಪಾದಿಸಬಹುದು. ಅದು ಎಷ್ಟರ ಮಟ್ಟಿಗೆಂದರೆ ಇಲಿಗಳ ಹಿಂಡೊಂದನ್ನು ಸಾಕುವುದರ ಮೂಲಕ ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಉತ್ಪಾದಿಸುವ ಕಾರ್ಖಾನೆಯೊಂದನ್ನೇ ಆರ್‍ಅಂಭಿಸಬಹುದು. ವಿಶ್ವವಿದ್ಯಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಇನ್ನು ಮುಂದೆ ಯಾವುದೇ ಹೊಸ ಮದ್ದಿನ ಪರಿಣಾಮ ಅಡ್ಡ ಪರಿಣಾಮಗಳನ್ನು ನಿರ್ಧರಿಸಲು ಇಲಿಗಳ ಯಕೃತ್ತು ವೇದಿಕೆಯಾಗಲಿದೆ. ಅಂದರೆ ಇಲಿಗಳ ದೇಹದಿಂದ ಉತ್ಪತ್ತಿಯಾದ ಮನುಷ್ಯ ಯಕೃತ್ತಿನ ಜೀವಕೋಶಗಳ ಮೇಲಿನ ಪರೀಕ್ಷೆಗಳೇ ಮಾನದಂಡವಾಗಲಿವೆ. ಯಕೃತ್ತಿನ ಸಂಸ್ಕರಣೆಯ ನಂತರ ಯಾವ ರಾಸಾಯನಿಕ ಸಂಯುಕ್ತವು ವಿಷವಸ್ತುವಾಗಿ ಬದಲಾಗಲಿದೆ ಎಂದೂ ಸಹ ತಿಳಿದುಕೊಳ್ಳಬಹುದು. ಈ ಒಂದು ವಿನೂತನ ಯೋಜನೆಯ ನೇತೃತ್ವ ವಹಿಸಿದ್ದವರು ಓರೆಗಾನ್ ವಿವಿಯಲ್ಲಿ ಜೀನೆಟಿಕ್ಸ್‍ಗೆ ಸಂಬಂಧಿಸಿದ ಅಣು ಹಾಗೂ ವೈದ್ಯಕೀಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ ಮಾರ್ಕಸ್ ಗ್ರೊಂಪ್. ಅವರ ಅಭಿಪ್ರಾಯದಂತೆ ಜೀನ್ ಚಿಕಿತ್ಸೆ, ಆಕರ ಕೋಶ ಅಭಿವೃದ್ಧಿ ಹಾಗೂ ಯಕೃತ್ತಿಗೆ ಸಂಬಂಧಿಸಿದ ಮಾರಣಾಂತಕ ಕಾಯಿಲೆಗಳ ನಿವಾರಣೆಯಲ್ಲಿ ಈ ಜೀವಕೋಶಗಳು ಮಹತ್ತರ ಪಾತ್ರ ವಹಿಸಲಿವೆ.


ಈ ಯೋಜನೆಯ ಕಾರ್ಯನಿರ್ವಹಣೆಯಲ್ಲೊಂದು ವೈಶಿಷ್ಟ್ಯವಿದೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳ ಫಲಿತಾಂಶ ಜನಸಾಮಾನ್ಯರನ್ನು ತಲುಪುವುದು ನಿಧಾನವಾಗುತ್ತದೆ. ಕಾರಣ, ಸಂಶೋಧನೆಯಲ್ಲಿ ಕಂಡ ಹೊಳಹುಗಳನ್ನು ಕಾರ್ಯರೂಪಕ್ಕಿಳಿಸುವ ಉದ್ದಿಮೆಗಳಿಗೂ ವಿದ್ಯಾಲಯಗಳಿಗೂ ಅಷ್ಟೊಂದು ಹೊಂದಾಣಿಕೆಯಿರುವುದಿಲ್ಲ. ಇದ್ದಕ್ಕೆ ಅಪವಾದವೆಂಬಂತೆ ಓರೆಗಾನ್ ವಿಶ್ವವಿದ್ಯಾಲಯ ಗ್ರೊಂಪ್ ಅವರ ಹೆಸರಿನಲ್ಲಿ ‘ಹಕ್ಕು ಸ್ವಾಮ್ಯ’ ಅಥವಾ ‘ಪೇಟೆಂಟ್’ಗಾಗಿ ಅರ್ಜಿಯನ್ನು ಈಗಾಗಲೇ ಸಲ್ಲಿಸಿದೆ. ಜತೆಗೆ ‘ಯೆಕ್ಯುರಿಸ್’ ಎಂಬ ಔಷಧ ಸಂಸ್ಥೆಯೊಂದಿಗೆ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಮಾಡಿದೆ. ಇಂಥ ಹೆಗ್ಗಳಿಕೆ ಓರೆಗಾನ್ ವಿಶ್ವವಿದ್ಯಾಲಯಕ್ಕೆ ಹೊಸತೇನಲ್ಲ. ಅಲ್ಲಿ ತಂತ್ರಜ್ಞಾನ ಹಾಗೂ ಸಂಶೋಧನಾ ಸಹಭಾಗಿತ್ವಕ್ಕೆಂದೇ ಒಂದು ಪ್ರತ್ಯೇಕ ಕೇಂದ್ರವಿದೆ. ಅದರ ನಿರ್ದೇಶಕರಾದ ಅರುಣದೀಪ್ ಪ್ರಧಾನ್ ಅವರ ಮೇರೆ ಮೀರಿದ ಉತ್ಸಾಹದಿಂದ ಓರೆಗಾನ್ ವಿಶ್ವವಿದ್ಯಾಲಯದ ಸಂಶೋಧನೆಗಳಿಗೆ ಜಾಗತಿಕ ಮನ್ನಣೆ ಸಿಕ್ಕಿವೆ, ಜತೆಗೆ ಸಂಶೋಧನೆಗಳ ಫಲಿತಾಂಶ ಹೆಚ್ಚು ಜನರನ್ನು ಮುಟ್ಟಿವೆ. ಔಷಧ ಅಭಿವೃದ್ಧಿಯಲ್ಲಿ ಇದುವರೆಗೂ ಇದ್ದ ಅಡೆತಡೆಗಳನ್ನು ಸದ್ಯದ ಸಂಶೋಧನೆ ನಿವಾರಿಸಲಿದೆ ಎಂಬ ಆತ್ಮವಿಶ್ವಾಸ ಪ್ರಧಾನ್ ಅವರದು. ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಜೋಡಿಸಿದೊಡನೆಯೆ ಅವುಗಳ ವಿರುದ್ಧ ಧಾಳಿ ನಡೆಸುತ್ತಿದ್ದ ಸುರಕ್ಷಾ ವ್ಯವಸ್ಥೆಯ ಕಾರ್ಯಾಚರಣೆಯನ್ನು ಗ್ರೊಂಪ್ ನೇತೃತ್ವದ ತಂಡ ಗುರುತಿಸಿದೆ. ಅಂಥ ಧಾಳಿಯನ್ನು ತಡೆಗಟ್ಟಲು ಯಾವ ಬಗೆಯ ಔಷಧವನ್ನು ಇಲಿಗಳಿಗೆ ಮೊದಲೇ ಚುಚ್ಚಿರಬೇಕು ಎಂಬುದನ್ನೂ ತಂಡ ನಿರ್ಧರಿಸಿಕೊಂಡಿದೆ. ಕೆಲವೊಂದು ಯಕೃತ್ತಿನ ಕಾಯಿಲೆಗಳು ಉಗಮವಾಗಲು ಜೀವಕೋಶಗಳಲ್ಲಿನ ಯಾವ ನ್ಯೂನತೆಗಳು ಕಾರಣ? ಅವುಗಳಿಗೆ ಸೂಕ್ತವಾದ ಜೀನ್ ಚಿಕಿತ್ಸೆಯೊಂದನ್ನು ಅಭಿವೃದ್ಧಿ ಪಡಿಸಬಹುದೆ? ಮತ್ತಿತರ ಪ್ರಶ್ನೆಗಳಿಗೂ ಓರೆಗಾನ್ ವಿಶ್ವವಿದ್ಯಾಲಯದ ವೈದ್ಯ ವಿಜ್ಞಾನಿಗಳ ತಂಡ ಉತ್ತರಗಳನ್ನು ಕಂಡುಕೊಳ್ಳುತ್ತಿವೆ. ಇಲಿಯೊಂದರ ಜೀವಿತಾವಧಿಯಲ್ಲಿ ಕನಿಷ್ಠವೆಂದರೂ ನಾಲ್ಕು ಬಾರಿ ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಚುಚ್ಚಬಹುದು. ಪ್ರತಿ ಬಾರಿಯೂ ಇಲಿಯೊಂದು ಎರಡು ಕೋಟಿ ಮಾನವ ಯಕೃತ್ತಿನ ಜೀವಕೋಶಗಳನ್ನು ಉತ್ಪಾದಿಸಬಲ್ಲದು.


ಈ ಬಗೆಯ ಮಾಹಿತಿಯನ್ನು ಸಮರ್ಪಕವಾಗಿ ಕ್ರೋಢೀಕರಿಸುವುದು ಬಹು ಕಷ್ಟದ ಕೆಲಸ. ಇದನ್ನು ಪ್ರಧಾನವಾಗಿ ಕೈಗೆತ್ತಿಕೊಂಡಿರುವ ಅರುಣದೀಪ್ ಅವರ ಕಾರ್ಯಕ್ಷೇತ್ರ ‘ತಂತ್ರಜ್ಞಾನ ವ್ಯವಸ್ಥಾಪನೆ’. ರಾಜಾಸ್ಥಾನದ ಪಿಲಾನಿಯಲ್ಲಿರುವ ಪ್ರತಿಷ್ಠಿತ ‘ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸಸ್ - ಬಿಐಟಿಎಸ್’ನಲ್ಲಿ ಎಂಜಿನೀರಿಂಗ್ ಪದವಿ ಪಡೆದಿರುವ ಪ್ರಧಾನ ಮುಂದೆ ತಮ್ಮ ವಿದ್ಯಾವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದು ಓರೆಗಾನ್ ವಿಶ್ವವಿದ್ಯಾಲಯದಲ್ಲಿ. ತಂತ್ರಜ್ಞಾನಗಳ ಅಭಿವೃದ್ಧಿಗಿಂತಲೂ ಅವುಗಳ ನಿರ್ವಹಣೆ ಹಾಗೂ ವ್ಯವಸ್ಥಾಪನೆ ಬಹು ಕಷ್ಟದ್ದೆಂದು ಆ ವೇಳೆಗೆ ಅವರಿಗೆ ಮನವರಿಕೆಯಾಗಿತ್ತು. ತಮ್ಮ ಕಾರ್ಯಕ್ಷೇತ್ರವನ್ನು ತಂತ್ರಜ್ಞಾನ ವ್ಯವಸ್ಥಾಪನೆಯತ್ತ ಹಿಗ್ಗಿಸಿಕೊಂಡ ಪ್ರಧಾನ ಸದ್ಯಕ್ಕೆ ಓರೆಗಾನ್ ವಿಶ್ವವಿದ್ಯಾಲಯಕ್ಕೆ ಲಭ್ಯವಿರುವ ಅಮೂಲ್ಯ ಆಸ್ತಿ. ಕೇವಲ ಓರೆಗಾನ್ ವಿಶ್ವವಿದ್ಯಾಲಯವಷ್ಟೇ ಅಲ್ಲ, ಜಗತ್ತಿನ ತಂತ್ರಜ್ಞಾನ ವ್ಯವಸ್ಥಾಪನಾ ಕ್ಷೇತ್ರದಲ್ಲಿ ಅವರದು ಅತಿ ದೊಡ್ಡ ಹೆಸರು. ಮನುಷ್ಯನ ದೇಹಕ್ಕೆ ಯಕೃತ್ತು ಎಷ್ಟು ಪ್ರಧಾನವೋ ಅಭಿವೃದ್ಧಿಗೊಂಡ ತಂತ್ರಜ್ಞಾನಗಳಿಗೆ ಸೂಕ್ತ ವ್ಯವಸ್ಥಾಪನೆಯೂ ಮುಖ್ಯ. ಇಂಥದೊಂದು ಬಲವಾದ ನಂಬಿಕೆಯೇ ಅರುಣದೀಪ್ ಅವರನ್ನು ಪ್ರಧಾನ ಸ್ಥಾನಕ್ಕೇರಿಸಿದೆ. ಮನುಕುಲಕ್ಕೆ ಒಳಿತು ತರುವ ಅವರ ಕಾರ್ಯಗಳಿಗೆ ಶುಭವಾಗಲಿ.




(ಕೃಪೆ: ವಿಜಯ ಕರ್ನಾಟಕ, 13-08-2007)

No comments: