Monday, August 20, 2007

ಮಾಹಿತಿ ತಂತ್ರಜ್ಞಾನ ಜನಸಾಮಾನ್ಯರನ್ನು ನಿಜಕ್ಕೂ ಮುಟ್ಟೀತೆ?

` ನೀವು ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿದ್ರಿ. ನಾಲ್ಕು ಸಾಲು ದಾಟಿ ಬರುವ ಬದಲು ಫೋನ್ ಮಾಡಿದೆ. ಸ್ವಿಚ್ ಆಫ್ ಎಂಬ ಸಂದೇಶ ಬರ್ತಿತ್ತು. ನಮ್ಮಂಥವರ ಕರೆ ಬಂದೊಡನೆ ಸ್ವಯಂಚಾಲಿತವಾಗಿ ಇಂಥ ಸಂದೇಶಗಳು ಬರುವಂತೆ ಮಾಡಿದ್ದೀರಾ?’ - ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಕಂಡ ಪತ್ರಕರ್ತ ಗೆಳೆಯ ಶ್ಯಾಮ್ ಅವರನ್ನು ಪ್ರಶ್ನಿಸಿದೆ. ಮಾತಿನಲ್ಲೇ ಮೋಡಿ ಮಾಡುವ ಶ್ಯಾಮ್ ಮಾತುಗಾರ ಗೆಳೆಯರನ್ನು ಎಂದಿಗೂ ‘ಅವಾಯ್ಡ್’ ಮಾಡುವವರಲ್ಲ. ‘ಅವರಿಗಿಂತ ಮಾತು ಬಲ್ಲವರಿಲ್ಲ, ಈ ಊರಿನಲ್ಲಿ’ ಎಂದರೆ ಉತ್ಪ್ರೇಕ್ಷೆಯಿಲ್ಲ. ‘ರಜೆ ದಿನಗಳಂದು ಖಾಸಗಿ ಗೆಳೆಯರೊಂದಿಗೆ ಮಾತನಾಡಲು ಮತ್ತೊಂದು ಮೊಬೈಲ್ ಫೋನ್ ಕೊಂಡಿದ್ದೇನೆ. ಅಧಿಕೃತ ಮೊಬೈಲ್ ಸಂಖ್ಯೆಯನ್ನು ಭಾನುವಾರಗಳಂದು ಮನೆಯಲ್ಲಿಯೇ ಇಟ್ಟು ಸ್ವಿಚ್ ಆಫ್ ಮಾಡಿರುತ್ತೇನೆ’ ಎಂದರು. ಹಿಂದೆ ವಿಶ್ವೇಶ್ವರಯ್ಯನವರು ಕಚೇರಿ ಕೆಲಸಕ್ಕೆ, ಮನೆ ಕೆಲಸಕ್ಕೆ ಎಂದು ಪ್ರತ್ಯೇಕವಾದ ಪೆನ್‍ಗಳನ್ನು ಜೇಬಿನಲ್ಲಿಡುತ್ತಿದ್ದರು ಎಂಬುದು ದಂತಕತೆ. ಸದ್ಯಕ್ಕೆ ಕಚೇರಿ, ಮನೆ, ಖಾಸಗಿ ... ಹೀಗೆ ಮೂರು-ನಾಲ್ಕು ಮೊಬೈಲ್ ಫೋನ್‍ಗಳನ್ನು ಒಟ್ಟೊಟ್ಟಿಗೆ ಇಟ್ಟುಕೊಳ್ಳುವವರಿದ್ದಾರೆ. ಬಹು ದೊಡ್ಡ ಉದ್ದಿಮೆದಾರರಿಂದ ಅತಿ ಸಣ್ಣ ವ್ಯಾಪಾರಿಗಳ ವರೆಗೆ ಮೊಬೈಲ್ ಫೋನ್ ಅತ್ಯಗತ್ಯ ಸಂಪರ್ಕ ಸಾಧನ. ರಜೆ ಕಳೆಯಲೆಂದು ಸ್ವಂತ ಊರು ಕೇರಳಕ್ಕೆ ಹೋಗಿದ್ದ ಸಹೋದ್ಯೋಗಿಯೊಬ್ಬರು ಮೊನ್ನೆ ಹೇಳುತ್ತಿದ್ದರು. ‘ನಮ್ಮೂರಿನ ಬೆಸ್ತರು ಮೀನು ಹಿಡಿದ ನಂತರ ಹೊರಟ ಸ್ಥಳಕ್ಕೇ ಹಿಂದಿರುಗುವುದಿಲ್ಲ. ಯಾವ ಯಾವ ಮೀನುಗಟ್ಟೆಗಳಲ್ಲಿ ಎಂಥ ಜಾತಿಯ ಮೀನುಗಳು ಬಿಕರಿಗೆ ಬಂದಿವೆ? ಎಂಬ ವಿಷಯವನ್ನು ಮೊಬೈಲ್ ಫೋನಿನ ಮೂಲಕ ತಿಳಿದುಕೊಂಡು, ತಾವು ಹಿಡಿದ ಮೀನಿನ ಜಾತಿಗೆ ಎಲ್ಲಿ ಮಾರುಕಟ್ಟೆಯಿದೆಯೋ ಅಲ್ಲಿಗೇ ನೇರ ಹೊರಡುತ್ತಾರೆ. ಹಿಂದೆ ನಮ್ಮಪ್ಪನ ಕಾಲದಲ್ಲಿ ಅದೊಂದು ಲಾಟರಿಯಂತೆ ನಡೆಯುತ್ತಿತ್ತು. ಅದೃಷ್ಟ ಇಲ್ಲದಿದ್ದರೆ ಒಂದೇ ಮೀನುಗಟ್ಟೆಯಲ್ಲಿ ಒಂದೇ ಜಾತಿಯ ಮೀನುಗಳು ಹೇರಳವಾಗಿ ತುಂಬಿಕೊಂಡು, ಬೆಲೆ ಕುಸಿಯುತ್ತಿತ್ತು. ಮೊಬೈಲ್ ಫೋನ್‍ಗಳ ದೆಸೆಯಿಂದ ಈಗ ಬೆಸ್ತರು, ಮಾರುಕಟ್ಟೆ ದಲ್ಲಾಳಿಗಳಿಗೆ ಮೀನಿನ ಸರಿಯಾದ ಬೆಲೆಯನ್ನು ನಿರ್ಧರಿಸಲು ಸಾಧ್ಯವಾಗಿದೆ. ಇವರೆಲ್ಲರೊಂದಿಗೆ ಗಿರಾಕಿಗಳಿಗೂ ಅನುಕೂಲವಾಗಿದೆ’ ಎಂದರು. ಇದು ಮೊಬೈಲ್ ಫೋನ್‍ನಿಂದಾಗಿರುವ ಲಾಭ. ಇಂಟರ್‌ನೆಟ್ ಎಂಬ ಸಂಪರ್ಕ ಜಾಲದಿಂದಾಗಿ ಇಡೀ ಜಗತ್ತು ಒಂದು ಹಳ್ಳಿಯಂತಾಗಿದೆ. ಆ ಸಂಪರ್ಕ ಜಾಲಕ್ಕೆ ಮೊಬೈಲ್ ಫೋನ್‍ಗಳನ್ನು ಮೇಳೈಸಿದರೆ ನಮ್ಮ ಇಡೀ ವಿಶ್ವೇ ಒಂದು ವಸುಧೈವ ಕುಟುಂಬವಾದೀತು. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿರುವ ಮೊಬೈಲ್ ಫೋನ್ ಗ್ರಾಹಕರ ಸಂಖ್ಯೆ ಹದಿನೆಂಟೂವರೆ ಕೋಟಿ.

‘ಮಾಹಿತಿ ತಂತ್ರಜ್ಞಾನ’ ಅಥವಾ ‘ಐ.ಟಿ.’ ಎಂದೊಡನೆ ನಮ್ಮ ನೆನಪಿಗೆ ಬರುವುದು ಬಿಲಿಯಗಟ್ಟಲೆ ಡಾಲರ್ ವಾರ್ಷಿಕ ಆದಾಯ ತರುವ ದೊಡ್ಡ ದೊಡ್ಡ ಕಂಪನಿಗಳು. ಆ ಕಂಪನಿಗಳು ಸೃಷ್ಟಿಸುವ ಕೈತುಂಬಾ ಪಗಾರ ತರುವ ಲಕ್ಷಗಟ್ಟಲೆ ಉದ್ಯೋಗಗಳು. ಮಾಹಿತಿ ತಂತ್ರಜ್ಞಾನ ಕ್ರಾಂತಿಯೆಂದರೆ ಕೇವಲ ಎಕರೆಗಟ್ಟಲೆ ವಿಸ್ತೀರ್ಣದ ಕಂಪನಿಗಳಲ್ಲ. ಅಥವಾ ಹೊರಗುತ್ತಿಗೆಯ ಮೂಲಕ ಆ ಕಂಪನಿಗಳು ಇಡೀ ಜಗತ್ತಿನಿಂದ ಸಂಪಾದಿಸಿಕೊಂಡ ಬ್ಯುಸಿನೆಸ್‍ಗಳಲ್ಲ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಹಿಡುವಳಿದಾರರಿರುವ ದೇಶ ನಮ್ಮದು. ಸಾಧಾರಣ ಮಟ್ಟದ ವಿದ್ಯೆ ಪಡೆದ ಲಕ್ಷಾಂತರ ಶ್ರಮಜೀವಿಗಳಿರುವ ದೇಶ ನಮ್ಮದು. ಇಂಥವರೆಲ್ಲರ ಜೀವನ ಮಟ್ಟ ಸುಧಾರಿಸುವ ತಂತ್ರಜ್ಞಾನಗಳ ಅಭಿವೃದ್ಧಿಯೇ ನಿಜವಾದ ಮಾಹಿತಿ ತಂತ್ರಜ್ಞಾನ ಕ್ರಾಂತಿ. ಭಾರತದಲ್ಲಿಯೇ ಕುಳಿತು ಸಾಮಾನ್ಯ ಅಮೆರಿಕನ್ನರ ಜೀವನ ಮಟ್ಟ ಸುಧಾರಿಸಲು ಬೆವರು ಸುರಿಸುವ ಸಹಸ್ರಾರು ತಂತ್ರಜ್ಞರಿರುವಂತೆ, ಅಮೆರಿಕದಲ್ಲಿಯೇ ಕುಳಿತು ಸಾಮಾನ್ಯ ಭಾರತೀಯರ ಜೀವನ ಮಟ್ಟ ಸುಧಾರಿಸಲು ಶ್ರಮ ಪಡುತ್ತಿರುವ ಬೆರಳೆಣಿಕೆಯಷ್ಟು ತಂತ್ರಜ್ಞರಿದ್ದಾರೆ. ಇಂಥ ಶ್ರಮಜೀವಿಯೊಬ್ಬರ ಹೆಸರು ತಪನ್ ಪಾರೀಖ್. ಅಮೆರಿಕದ ವಾಷಿಂಗ್‍ಟನ್ ವಿಶ್ವವಿದ್ಯಾಲಯದಲ್ಲಿನ ಕಂಪ್ಯೂಟರ್ ವಿಜ್ಞಾನ ವಿಭಾಗಗದಲ್ಲಿ ಡಾಕ್ಟರೇಟ್ ಪದವಿಗೆ ಅಧ್ಯಯನ ನಡೆಸುತ್ತಿರುವುದರ ಜತೆಗೆ ತನ್ನದೇ ಆದ ‘ಏಕ್‍ಗಾಂವ್ ಟೆಕ್ನಾಲಜೀಸ್’ ಕಂಪನಿಯ ಒಡೆಯನೀತ. ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಸಣ್ಣ-ಪುಟ್ಟ ವಹಿವಾಟು ನಡೆಸುವವರಿಗೆ ಅನುಕೂಲವಾಗುವ ಮಾಹಿತಿ ತಂತ್ರಜ್ಞಾನ ಉತ್ಪನ್ನಗಳನ್ನು ಸಿದ್ಧಪಡಿಸುವ ಕಂಪನಿಯಿದು. ಕಂಪ್ಯೂಟರ್‌ಗಳನ್ನು ಖರೀದಿಸಲಾಗದಿದ್ದರೂ ಸಣ್ಣ-ಪುಟ್ಟ ಉದ್ದಿಮೆದಾರರು ಮೊಬೈಲ್ ಫೋನ್‍ಗಳನ್ನು ಖಂಡಿತವಾಗಿಯೂ ಬಳಸುತ್ತಿರುತ್ತಾರೆ. ಈ ಮೊಬೈಲ್ ಫೋನ್ ಸಂಪರ್ಕದ ಮೂಲಕವೇ ತಮ್ಮ ಬ್ಯುಸಿನೆಸ್ ಅನ್ನು ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಿಕೊಂಡು ಹೋಗಲು ಪಾರೀಖ್ ಅನುವು ಮಾಡಿಕೊಡುತ್ತಿದ್ದಾರೆ. ಜತೆಗೆ ಅಭಿವೃದ್ಧ ರಾಷ್ಟ್ರಗಳ ದೊಡ್ಡ ದೊಡ್ಡ ಕಂಪನಿಗಳೊಂದಿಗೆ ವಹಿವಾಟು ನಡೆಸಬಲ್ಲ ಸಾಮರ್ಥ್ಯವನ್ನೂ ಅವರ ತಂತ್ರಾಂಶ ಅಂದರೆ ಸಾಫ್ಟ್‍ವೇರ್ ನೀಡುತ್ತಿದೆ.

ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಮೊಬೈಲ್ ಫೋನ್‍ಗಳ ವ್ಯಾಪಕ ಬಳಕೆಯನ್ನು ಗಮನಿಸಿದ್ದ ಪಾರೀಖ್, ಅವುಗಳಿಗೇ ಪಕ್ಕಾದ ತಂತ್ರಾಂಶವನ್ನು ರೂಪಿಸುವತ್ತ ಗಮನ ಹರಿಸಿದರು. ಹೀಗೆ ಅವರು ಸೃಷ್ಟಿಸಿದ ಮೊದಲ ತಂತ್ರಾಂಶದ ಹೆಸರು ‘ಕ್ಯಾಮ್’ - ಈ ಹೆಸರು ಏಕೆಂದರೆ ಕ್ಯಾಮೆರ ಸಹಿತವಾದ ಮೊಬೈಲ್ ಫೋನ್‍ಗಳನ್ನು ಬಳಸಿಕೊಳ್ಳುವ ಮಧ್ಯವರ್ತಿ ತಂತ್ರಾಂಶವಿದು. ಈ ಮಧ್ಯವರ್ತಿ ಸಲಕರಣೆಯ ಕರ್ತವ್ಯವೇನೆಂದರೆ ಮೊಬೈಲ್ ಫೋನನ್ನು ಕೇವಲ ಚಿತ್ರ, ಅಂಕೆ-ಅಂಶ, ದತ್ತಾಂಶ ಸೆರೆಹಿಡಿವ ಕ್ಯಾಮೆರ ಮಾತ್ರವಾಗಿ ಬಳಸದೆಯೆ ದಾಖಲೆಗಳನ್ನು ಚಿತ್ರೀಕರಿಸಿಕೊಳ್ಳಬಲ್ಲ ಸ್ಕ್ಯಾನರ್ ಆಗಿ ಮಾರ್ಪಡಿಸುತ್ತದೆ. ಅಲ್ಲದೆ ದತ್ತಾಂಶಗಳನ್ನು ಸಂಸ್ಕರಣೆ ಮಾಡುತ್ತದೆ. ಹಾಗೂ ಧ್ವನಿ ಮತ್ತು ಚಲನಚಿತ್ರ ತುಣುಕುಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತದೆ. ಅಂದರೆ ನಿಮ್ಮ ಕಂಪ್ಯೂಟರ್ ಮಾಡಬಲ್ಲ ಬಹುತೇಕ ಕೆಲಸಗಳನ್ನು ಮಧ್ಯವರ್ತಿ ಸಲಕರಣೆಯ ನೆರವಿನಿಂದ ಮೊಬೈಲ್ ಫೋನೇ ಮಾಡುತ್ತದೆ. ನಿಮಗೆ ‘ಮೈಕ್ರೊಫೈನಾನ್ಸ್’ ಗೊತ್ತಿರಬೇಕು. ತಮ್ಮ ಅದೆಷ್ಟೋ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಳ್ಳಿಗಳಲ್ಲಿನ ಜನ ಒಂದು ಸಾವಿರ ರೂಪಾಯಿಗಿಂತಲೂ ಕಡಿಮೆ ಮೊತ್ತದ ಸಾಲವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯುತ್ತಾರೆ. ಇಂಥ ಮೈಕ್ರೊಫೈನಾನ್ಸ್ ಯೋಜನೆಗಳನ್ನು ಜಾರಿಗೊಳಿಸುವಾಗ ಸಾಕಷ್ಟು ಸಂಖ್ಯೆಯಲ್ಲಿ ದಾಖಲೆ ಪತ್ರಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ದೊಡ್ಡ ಹಣಕಾಸು ಸಂಸ್ಥೆಗಳಿಗೆ ಇಂಥ ವಹಿವಾಟುಗಳು ಲಾಭದಾಯಕವಲ್ಲ. ಇದರ ಬದಲು ಹಳ್ಳಿಯ ಒಂದಷ್ಟು ಜನರು ಒಗ್ಗೂಡಿ ಸಹಕಾರ ಒಕ್ಕೂಟವನ್ನು ಸ್ಥಾಪಿಸಿಕೊಳ್ಳಬಹುದು. ಸದಸ್ಯರ ಮೂಲಕ ಸಂಗ್ರಹಿಸಿದ ಠೇವಣಿಗಳನ್ನು ಅಗತ್ಯ ಬಿದ್ದವರಿಗೆ ಅಲ್ಪಾವಧಿಯ ಸಾಲದಂತೆ ನೀಡಬಹುದು. ಇಂಥ ಸ್ವಸಹಾಯ ಸಮೂಹಗಳು ದೊಡ್ಡದಾಗಿ ಬೆಳೆದಂತೆ ಬ್ಯಾಂಕುಗಳು ಅಥವಾ ಸಹಕಾರ ಸಂಸ್ಥೆಗಳ ಮೂಲಕ ದೊಡ್ಡ ಮೊತ್ತದ, ದೀರ್ಘಾವಧಿಯ ಸಾಲಗಳನ್ನು ಪಡೆಯಬಹುದು. ಇಂಥ ಹಣವನ್ನು ಸದಸ್ಯರಿಗೆ ಸಾಲ ನೀಡಲು ಬಳಸಬಹುದು.


ಗ್ರಾಮೀಣ ಮಟ್ಟದಲ್ಲಿ, ಬಹುತೇಕವಾಗಿ ಮಹಿಳೆಯರು ಇಂಥ ಸ್ವಸಹಾಯ ಒಕ್ಕೂಟವನ್ನು ಸ್ಥಾಪಿಸಿಕೊಂಡರೆ, ಇವರನ್ನು ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗೆ ಒಗ್ಗಿಸುವುದು ಹೇಗೆ? ಇದು ಪಾರೀಖ್ ಅವರ ಮುಂದಿದ್ದ ಪ್ರಶ್ನೆ. ತಮ್ಮ ಕ್ಯಾಮ್ ಸಲಕರಣೆಯ ಮೂಲಕ ಕ್ಯಾಮೆರ ಫೋನ್ ಸೆರೆಹಿಡಿದ ಮಾಹಿತಿಯನ್ನು ಆಗಿಂದಾಗಲೇ ಬ್ಯಾಂಕಿಗೆ ತಲುಪಿಸಬೇಕು. ಇದಕ್ಕಾಗಿ ಅವರು ಮೊರೆಹೊಕ್ಕಿದ್ದು ಇಂಟರ್‌ನೆಟ್ ತಂತ್ರಜ್ಞಾನ. ಇಂಟರ್‌ನೆಟ್ ಎಂದೊಡನೆಯೆ ನಮ್ಮ ಕಲ್ಪನೆಗೆ ಬರುವುದು ಇಂಗ್ಲಿಷ್ ಹಾಗೂ ಹಳ್ಳಿಯ ಹೆಣ್ಣು ಮಕ್ಕಳಿಗೆ ಅರ್ಥವಾಗದ ಕಂಪ್ಯೂಟರ್ ಸಂಜ್ಞೆಗಳು. ಈ ಸಮಸ್ಯೆಯನ್ನು ಮೊದಲೇ ಮನಗಂಡಿದ್ದ ಪಾರೀಖ್ ಅಲ್ಪಮಟ್ಟದ ವಿದ್ಯಾಭ್ಯಾಸ ಇರುವವರೂ ಸುಲಭವಾಗಿ ಉಪಯೋಗಿಸಬಲ್ಲಂತೆ ತಮ್ಮ ವ್ಯವಸ್ಥೆಯನ್ನು ರೂಪಿಸಹೊರಟರು. ಸಾಧ್ಯವಿರುವೆಡೆಯೆಲ್ಲ ‘ಐಕಾನ್’ ಅಥವಾ ‘ಸಂಜ್ಞೆ ಗುರುತು’ಗಳನ್ನು ಬಳಸಿದರು. ಅನಿವಾರ್ಯವಿಲ್ಲದೆಡೆ ದೇಶೀ ಭಾಷೆಯ ಅಕ್ಷರಗಳಿರುವ ಗುಂಡಿಗಳನ್ನೇ ಅಳವಡಿಸಿದರು. ಭಾರತದಂಥ ದೇಶದಲ್ಲಿ ಕಾಗದದ ಮೇಲಿನ ದಾಖಲೆಗಳೇ ನಂಬಿಕಾರ್ಹ. ಅದಕ್ಕೆಂದು ಪಾರೀಖ್ ಜಾರಿಗೆ ತಂದದ್ದು ಬಾರ್‌ಕೋಡ್ ಅಂದರೆ ವಿವಿಧ ಗಾತ್ರದ ಗೆರೆಗಳ ಸಂಕೇತವನ್ನು ಓದುವ ವ್ಯವಸ್ಥೆ. ಪ್ರತಿಯೊಂದು ಅರ್ಜಿ ನಮೂನೆಯ ಕೊನೆಯಲ್ಲಿ ಇಂಥ ಸಂಕೇತವನ್ನು ಮೊದಲೇ ಮುದ್ರಿಸಿದ್ದರೆ, ಕೇವಲ ಸಂಕೇತವನ್ನು ಮೊಬೈಲ್ ಫೋನ್ ಸೆರೆಹಿಡಿದು ಯಾವ ದಾಖಲೆ ಸಂಗ್ರಾಹಕನ ಕಡತದಲ್ಲಿದೆಯೆಂದು ಧನ ಸಹಾಯ ಮಾಡುವ ಬ್ಯಾಂಕಿಗೆ ತಿಳಿಸಬಹುದು. ಜತೆಗೆ ಇಡೀ ಅರ್ಜಿ ನಮೂನೆ, ದಾಖಲೆ ಪತ್ರಗಳು ಮತ್ತಿತರ ಅಡಕಗಳನ್ನು ಫೋನಿನ ಮೂಲಕ ಸ್ಕ್ಯಾನ್ ಮಾಡಿ ಕೂಡಲೇ ಬ್ಯಾಂಕಿನ ಕಂಪ್ಯೂಟರ್‌ಗೆ ರವಾನಿಸಬಹುದು. ಅಂದರೆ ಪುಟ್ಟ ಗ್ರಾಮ ಹಾಗೂ ದೊಡ್ಡ ಪಟ್ಟಣಗಳ ನಡುವೆ ಸಂಪರ್ಕ ಸೇತುವಾಗಿ ಈ ಮೊಬೈಲ್ ಫೋನ್ ಕೆಲಸ ಮಾಡಬಲ್ಲದು ಎಂದರ್ಥ. ನಿಜವಾದ ಅರ್ಥದಲ್ಲಿ ಅತ್ಯಾಧುನಿಕ ತಂತ್ರಜ್ಞಾನವೊಂದು ಜನ ಸಾಮಾನ್ಯರನ್ನು ಮುಟ್ಟಿದೆಯೆಂದೂ ಅರ್ಥ.

ಸದ್ಯಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲಗಳಿಗೆ ನಿರ್ದಿಷ್ಟ ಬಡ್ಡಿ ದರಗಳಿವೆ. ಯಾವುದೇ ಒಂದು ಹಳ್ಳಿಯ ಜನರು ನಿಯತ್ತಾಗಿ ಕಾಲಾವಧಿಗೆ ಮುನ್ನವೇ ಸಾಲ ತೀರಿಸಿದರೆ ವಿಶೇಷವಾದ ಪ್ರೋತ್ಸಾಹ ಧನವನ್ನು ನೀಡಲಾಗುವುದಿಲ್ಲ. ಅಥವಾ ಯಾವುದೇ ಒಂದು ಉತ್ಸಾಹಿ ಸ್ವಸಹಾಯ ಒಕ್ಕೂಟವು ಅತ್ಯುತ್ತಮ ಕಾರ್ಯಕ್ಷಮತೆಯಿಂದ ನಿರ್ವಹಣೆ ಮಾಡಿ ಬ್ಯಾಂಕಿಗೆ ಲಾಭ ತಂದುಕೊಟ್ಟಿದ್ದರೆ, ಅದನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಲು ಸಾಧ್ಯವಿಲ್ಲ. ಅಂದರೆ ಉತ್ತಮ ಕಾರ್ಯಕ್ಕೆ ವಿಶೇಷವಾದ ಬೆಲೆಯಿರುವುದಿಲ್ಲ. ಅಂಥದೊಂದು ವಿಶೇಷ ಕಾರ್ಯ ನಡೆದಿದೆಯೆಂಬುದೇ ಎಷ್ಟೋ ಬಾರಿ ಗೊತ್ತಾಗುವುದಿಲ್ಲ. ಕಾರಣ, ಅಗತ್ಯ ದಾಖಲೆ, ಅಂಕೆ-ಅಂಶಗಳನ್ನು ಕಾಲದಿಂದ ಕಾಲಕ್ಕೆ ಬ್ಯಾಂಕ್ ಪಡೆದಿರುವುದಿಲ್ಲ. ಅಕಸ್ಮಾತ್ ಅಂಥ ದಾಖಲೆಗಳು ಲಭ್ಯವಿದ್ದರೂ ಅವುಗಳನ್ನು ವಿಶ್ಲೇಷಣೆ ಮಾಡಿ ಸಾಧಕರ ಪಟ್ಟಿ ತಯಾರಿಸುವ ವ್ಯವಧಾನವಿರುವುದಿಲ್ಲ. ಪಾರೀಖ್ ಅವರ ತಂತ್ರಾಂಶ ಸಲಕರಣೆಯಲ್ಲಿ ಈ ಎಲ್ಲ ನ್ಯೂನತೆಗಳನ್ನೂ ಹೋಗಲಾಡಿಸಲಾಗಿದೆ. ನಿರ್ದಿಷ್ಟ ಕಾಲಾವಧಿಯಲ್ಲಿ ಬ್ಯಾಂಕ್ ನೀಡಿದ ಧನ ಸಹಾಯವೆಷ್ಟು? ಅದರಲ್ಲಿ ಸದ್ವಿನಿಯೋಗವಾದ ಮೊತ್ತವೆಷ್ಟು? ಎಷ್ಟರ ಮಟ್ಟಿಗೆ ವಸೂಲಾತಿ ನಡೆದಿದೆ? ವಿಳಂಬವಾಗಿದ್ದಲ್ಲಿ, ಕಾರಣಗಳೇನು? ಇದನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ... ಹೀಗೆ ಹತ್ತಾರು ಬಗೆಯ ಬ್ಯಾಂಕಿಂಗ್ ಲೆಕ್ಕಾಚಾರಗಳನ್ನು ಸರಳವಾಗಿ ಗಣನೆ ಮಾಡಬಹುದು.

ಪಾರೀಖ್ ಅವರ ತಂತ್ರಾಂಶವು ತಮಿಳುನಾಡಿನ ಮಧುರೈ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿನ ರೈತ ಸಮುದಾಯದಿಂದ ಪ್ರಮಾಣೀಕರಣಗೊಂಡಿದೆ. ಅಷ್ಟೇ ಅಲ್ಲ, ಮಧ್ಯ ಅಮೆರಿಕದ ಪುಟ್ಟ ರಾಷ್ಟ್ರ ಗ್ವಾಟೆಮಾಲದ ಕಾಫಿ ಬೆಳೆಗಾರರ ಅರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದೆ. ಈ ಕಾರ್ಯಗಳಿಗೆಂದೇ ರೂಪುಗೊಂಡ ಮಾಹಿತಿ ನಿರ್ವಹಣಾ ವ್ಯವಸ್ಥೆಯ ಹೆಸರು ‘ಮಹಾ ಕಲಶಂ’. ಪಾರೀಖ್ ಅವರ ಮೇರು ಸದೃಶ ಕಾರ್ಯಕ್ಕೆ ಸಾಕ್ಷಿಯಂತಿರುವ ಈ ವ್ಯವಸ್ಥೆಗೆ ಅಮೆರಿಕದ ಪ್ರತಿಷ್ಠಿತ ತಂತ್ರಜ್ಞಾನ ವಿದ್ಯಾಲಯ ‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ’ಯು ಹೊರಡಿಸುವ ನಿಯತಕಾಲಿಕ ‘ಟೆಕ್ನಾಲಜಿ ರೆವ್ಯೂ’ವಿನ ವಾರ್ಷಿಕ ಪುರಸ್ಕಾರ ದಕ್ಕಿದೆ. ಮೂವತ್ತೈದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ತಂತ್ರಜ್ಞಾನ ಸಂಶೋಧಕರುಗಳಿಗೆಂದೇ ಮೀಸಲಿಟ್ಟ ಈ ಪ್ರತಿಷ್ಠಿತ ಪುರಸ್ಕಾರಗಳ ಪಟ್ಟಿಯಲ್ಲಿ ಪಾರೀಖ್ ಅವರ ಸಾಧನೆ ಗಣನೀಯವಾಗಿ ದಾಖಲಾಗಿದೆ. ‘ಇದೊಂದು ಮಾನವೀಯ ಸಾಧನೆ’ ಎಂದು ನಿಯತಕಾಲಿಕದ ಸಂಪಾದಕ ಮಂಡಳಿ ಕೊಂಡಾಡಿದೆ. ತಂತ್ರಜ್ಞಾನ ಅದರಲ್ಲೂ ಮಾಹಿತಿ ತಂತ್ರಜ್ಞಾನ ಉಳ್ಳವರು ಮತ್ತು ಉಳ್ಳದವರ ನಡುವೆ ದೊಡ್ಡ ಕಂದಕ ನಿರ್ಮಿಸುತ್ತಿದೆ. ಇಂಥ ಕಂದಕ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಎಂಬುದು ಸಾಮಾನ್ಯ ಆಪಾದನೆ. ಪಾರೀಖ್ ಇಂಥ ಕಂದಕವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು, ಅಂಥ ಕಾರ್ಯ ಮಾಹಿತಿ ತಂತ್ರಜ್ಞಾನದಿಂದಲೇ ಸಾಧ್ಯವಾಗಬೇಕು ಎಂದು ಬಲವಾಗಿ ನಂಬಿದವರು. ತಮ್ಮ ಕನಸಿನ ಮೊದಲ ಮಾದರಿಯನ್ನವರು ಆಗಲೇ ಯಶಸ್ವಿಗೊಳಿಸಿದ್ದಾರೆ. ಪಾರೀಖರಂತವರು ಅದೇಶ್ಟೋ ಮಂದಿ ಅಮೆರಿಕಕ್ಕೆ ಹೋಗಿದ್ದಾರೆ, ಅಲ್ಲಿಯೇ ಹುಟ್ಟಿ ಬೆಳೆದು ಗಣನೀಯ ಸಾಧನೆಗಳನ್ನು ಮಾಡಿದ್ದಾರೆ. ಆದರೆ ಜನ ಸಾಮಾನ್ಯರಿಗೆ ಅದರಲ್ಲೂ ಭಾರತದಂಥ ಅಭಿವೃದ್ಧಶೀಲ ರಾಷ್ಟ್ರಗಳ ಬಡಮಂದಿಗೆ ನೆರವಾಗುವಂತೆ ತಂತ್ರಜ್ಞಾನಗಳನ್ನು ಬಳಸಿಕೊಂಡವರು ಕಡಿಮೆ. ಇದಕ್ಕೆ ಅಪವಾದವೆಂಬಂತೆ ಪಾರೀಖ್ ಪ್ರಶಂಸಾರ್ಹ ಸಾಧನೆ ಮಾಡಿದ್ದಾರೆ. ಭಾರತದಲ್ಲೊ, ಅಮೆರಿಕದಲ್ಲೊ ಮತ್ತಷ್ಟು ಪಾರೀಖರು ಹುಟ್ಟಿಬರಲಿ ಎಂದು ಹಾರೈಸೋಣ.


(ಕೃಪೆ: ‘ವಿಜಯ ಕರ್ನಾಟಕ’, 20-08-2007)

No comments: