Monday, August 27, 2007

ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

‘ಶಕ್ತ ರಾಷ್ಟ್ರವನ್ನಷ್ಟೇ ಮತ್ತೊಂದು ಶಕ್ತ ರಾಷ್ಟ್ರ ಗೌರವಿಸುತ್ತದೆ’. ಇದು ನಮ್ಮ ರಾಷ್ಟ್ರಪತಿಗಳಾಗಿದ್ದ ವಿಜ್ಞಾನಿ ಅಬ್ದುಲ್ ಕಲಾಮ್ ಸದಾ ಹೇಳುತ್ತಿದ್ದ ಮಾತು. ಇಲ್ಲಿ ಶಕ್ತಿ ಎಂದರೆ ಕೇವಲ ಮಿಲಿಟರಿ ಪ್ರಾಬಲ್ಯವಲ್ಲ, ದೇಶದ ಆರ್ಥಿಕ ಚೈತನ್ಯ, ವಿದ್ಯುತ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ, ಆಹಾರ ಸ್ವಾವಲಂಬನೆ, ಬೌದ್ಧಿಕ ಸಂಪತ್ತು ಜತೆಗೆ ಯುವ ಜನ ಸಂಪನ್ಮೂಲ ಎಲ್ಲವೂ ಸೇರಿರುತ್ತದೆ. ಅವರ ಒಂದು ಅಂದಾಜಿನಂತೆ ಕ್ರಿ.ಶ.2020ರ ಹೊತ್ತಿಗೆ ಇಡೀ ಜಗತ್ತಿನಲ್ಲಿ ಭಾರತ ಮೊದಲ ಮೂರು ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುತ್ತದೆ. ಮೂರರಲ್ಲಿ ಉಳಿದ ಎರಡು ರಾಷ್ಟ್ರಗಳೆಂದರೆ ಅಮೆರಿಕ ಹಾಗೂ ಚೀನಾ. ಸ್ಥಾನ ಯಾವುದೇ ಇರಲಿ, ಕ್ರಿ.ಶ.2020ರ ಸಮಯಕ್ಕೆ ಭಾರತ ಎದುರಿಸಬಹುದಾದ ಅತಿ ದೊಡ್ಡ ಸಮಸ್ಯೆ ವಿದ್ಯುತ್ ಶಕ್ತಿಯದು. ಈ ನಿಟ್ಟಿನಲ್ಲಿ ಚೀನಾ ದೇಶಕ್ಕೂ ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಅಗತ್ಯವಿರುತ್ತದೆ.

ಜಾಗತಿಕವಾಗಿ ಕ್ರಿ.ಶ.2025ರ ಹೊತ್ತಿಗೆ ಇಂದಿಗಿಂತಲೂ ಒಂದೂವರೆ ಪಟ್ಟು ಹೆಚ್ಚು ವಿದ್ಯುತ್ ಬೇಕೆಂಬ ಅಂದಾಜು ವಿಶ್ವ ಸಂಸ್ಥೆಯದು. ಇನ್ನು ಮುಂದೆ ಮೊಗೆದಂತೆಲ್ಲಾ ಕಚ್ಛಾ ಪೆಟ್ರೋಲಿಯಂ ತೈಲ ಸಿಗದಿರಬಹುದು. ಸಿಕ್ಕರೂ ಪೆಟ್ರೋಲಿಯಂ ಆಧರಿತ ಇಂಧನಗಳನ್ನು ಉರಿಸುವುದರಿಂದ ಪರಿಸರಕ್ಕೆ ಭಾರಿ ಮಟ್ಟದಲ್ಲಿ ಧಕ್ಕೆಯುಂಟಾಗುತ್ತದೆ. ಜಲ ವಿದ್ಯುತ್ ಕೇಂದ್ರಗಳಿಗೆ ನೀರಿನ ಬರ, ಮುಳುಗಿಸಲು ಕಾಡುಗಳೇ ಇಲ್ಲ. ಕಲ್ಲಿದ್ದಿಲಿನ ನಿಕ್ಷೇಪವೂ ಬರಿದಾಗುತ್ತಿದೆ, ಜತೆಗೆ ಕಲ್ಲಿದ್ದಲು ವಿದ್ಯುದಾಗಾರಗಳ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶವೂ ಹೆಚ್ಚಾಗುತ್ತಿದೆ. ಇನ್ನು ಪರಮಾಣು ವಿದ್ಯುತ್ ಸ್ಥಾವರಗಳ ಬಗ್ಗೆಯಂತೂ ಮಾತನಾಡುವ ಹಾಗೇ ಇಲ್ಲ. ಅಸಾಂಪ್ರದಾಯಿಕ ಮೂಲಗಳಿಂದ ಅಂದರೆ ಗಾಳಿ, ಸಮುದ್ರದಲೆ, ಸೌರಶಾಖ ಇತ್ಯಾದಿಗಳ ನೆರವಿನಿಂದ ವಿದ್ಯುತ್ ಉತ್ಪಾದನೆ ಅಷ್ಟು ಲಾಭದಾಯಕವಾಗಿಲ್ಲ. ಸಂಸ್ಥಾಪನೆಗೇ ಅಗಾಧ ಪ್ರಮಾಣದಲ್ಲಿ ಹಣ ವೆಚ್ಚ ಮಾಡಬೇಕು. ಚಂದ್ರನಲ್ಲಿ ಇರಬಹುದಾದ ಶುದ್ಧ ಇಂಧನ ಹೀಲಿಯಂ ಅನಿಲದ ನಿಕ್ಷೇಪವನ್ನು ಭೂಮಿಗೆ ಹೊತ್ತುಕೊಂಡು ಬರುವ ದಿನ ಬಹು ದೂರವಿದೆ. ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಯ ಕತೆ ನಿಜಕ್ಕೂ ‘ಆಘಾತ -ಶಾಕ್’ ಮುಟ್ಟಿಸುವಂಥದು.

ಹಾಗೆಂದ ಮಾತ್ರಕ್ಕೆ ನಿರಾಸೆ ಪಡಬೇಕಿಲ್ಲ. ಜಗತ್ತಿನಾದ್ಯಂತ ವಿಜ್ಞಾನಿಗಳು ವಿದ್ಯುತ್ ಉತ್ಪಾದನೆಯ ಬದಲಿ ಮೂಲಗಳನ್ನು ಅರಸುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುವವರಿಗೆ ಸದಾ ಹಣದ ಹೊಳೆ ಹರಿಯುತ್ತದೆ. ಹೀಗೆ ಹುಟ್ಟಿದ್ದೇ ಜೈವಿಕ ಮೂಲಗಳಿಂದ ಈಥೈಲ್ ಆಲ್ಕೋಹಾಲ್ ಹಾಗೂ ಡೀಸಲ್ ಉತ್ಪಾದಿಸುವ ತಂತ್ರಜ್ಞಾನ. ಮುಸುಕಿನ ಜೋಳ ಅಥವಾ ಕಬ್ಬಿನಿಂದ ಈಥೈಲ್ ಆಲ್ಕೋಹಾಲ್ ಉತ್ಪಾದಿಸುವ, ಹೀಗೆ ಉತ್ಪಾದನೆಯಾದ ಈಥೈಲ್ ಆಲ್ಕೋಹಾಲ್ ಅನ್ನು ಪೆಟ್ರೋಲ್‍ನೊಂದಿಗೆ ಸೂಕ್ತ ಪ್ರಮಾಣದಲ್ಲಿ ಬೆರೆಸಿ ಬಳಸುವ ಪದ್ಧತಿ ಆರಂಭವಾಯಿತು. ಆಹಾರ ಬೆಳೆಗಳನ್ನು ಇಂಧನಕ್ಕಾಗಿ ಈ ರೀತಿ ದುರುಪಯೋಗ ಮಾಡುವುದು ತರವಲ್ಲ ಎಂಬ ಕೂಗೂ ಎದ್ದಿತು. ಜತೆಗೆ ಜೈವಿಕ ಇಂಧನದ ಬೆಲೆ ನೈಸರ್ಗಿಕವಾಗಿ ಸಂಸ್ಕರಿಸಿದ ಇಂಧನಕ್ಕಿಂತ ತುಟ್ಟಿ. ಇದರ ಬದಲು ಇಂಗಾಲ ಹಾಗೂ ಜಲಜನಕ ಹೇರಳವಾಗಿರುವ ಜೈವಿಕ ವಸ್ತುಗಳಿಂದ ನೇರವಾಗಿ ಪೆಟ್ರೋಲ್ ಅಥವಾ ಡೀಸಲ್ ಅನ್ನು ಉತ್ಪಾದಿಸುವ ಬಗ್ಗೆ ಯೋಚಿಸುತ್ತಿದ್ದಾಗ ವಿಜ್ಞಾನಿಗಳ ಗಮನಕ್ಕೆ ಬಂದದ್ದು ಸೂಕ್ಷ್ಮಾಣುಜೀವಿಗಳು. ಬಹುತೇಕ ಸೂಕ್ಷ್ಮಾಣುಜೀವಿಗಳು ಗ್ಲುಕೋಸ್ ಅನ್ನು ಅಣುಗಳ ರೂಪದಲ್ಲಿ ಶಕ್ತಿ ಸಂಗ್ರಹಿಸುವ ಫ್ಯಾಟಿ ಆಸಿಡ್ ಅನ್ನಾಗಿ ಮಾರ್ಪಡಿಸಬಲ್ಲದು. ಜೀವಿಗಳ ಗುಣಾವಗುಣಗಳನ್ನು ನಿರ್ಧರಿಸುವ ‘ಜೀನ್ - ಗುಣಾಣು’ ಗೊತ್ತಲ್ಲ? ಜೈವಿಕ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಒಂದು ಜೀವಿಯ ‘ಜೀನ್’ ಅನ್ನು ಮತ್ತೊಂದು ಜೀವಿಯೊಳಗೆ ಕಸಿ ಮಾಡಿ ಕೂಡಿಸುವ ಕಲೆ ಇದೀಗ ಕರಗತವಾಗಿದೆ. ಹಾಗಿದ್ದಲ್ಲಿ ಸೂಕ್ತ ‘ಜೀನ್’ ಮಾರ್ಪಾಡುಗಳೊಂದಿಗೆ ಸೂಕ್ಷ್ಮಾಣುಜೀವಿಗಳನ್ನು ನೇರವಾಗಿ ಪೆಟ್ರೋಲ್ ಅಥವಾ ಡೀಸಲ್ ಅನ್ನು ಉತ್ಪಾದಿಸುವಂತೆ ಮಾಡಬಹುದು.

ಈ ಬಗ್ಗೆ ಸತತವಾಗಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಯ ಹೆಸರು ಡೇವಿಡ್ ಬೆರ್ರಿ. ಇವರು ಅಮೆರಿಕದ ‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ.’ ಇಂದ ಡಾಕ್ಟರೇಟ್ ಪಡೆದವರು. ಇದಕ್ಕೂ ಮುನ್ನ ವೈದ್ಯಕೀಯ ವಿಜ್ಞಾನದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂ.ಡಿ. ಪದವಿ ಪುರಸ್ಕೃತರು. ಇದಕ್ಕೂ ಮುನ್ನ ಕೇವಲ ಏಳು ವರ್ಷಗಳಷ್ಟು ಹಿಂದೆಯಷ್ಟೇ ಎಂ.ಐ.ಟಿ.ಯಿಂದ ಪದವಿಯನ್ನು ಪಡೆದುಕೊಂಡವರು. ಇವರ ಸಂಶೋಧನಾ ಕ್ಷೇತ್ರಗಳ ವ್ಯಾಪ್ತಿ ಬಹು ದೊಡ್ಡದು. ಇಪ್ಪತ್ತೊಂದಕ್ಕೂ ಹೆಚ್ಚಿನ ಸಂಖ್ಯೆಯ ಅಂತಾರಾಷ್ಟ್ರೀಯ ಪೇಟೆಂಟ್‍ಗಳನ್ನು (ತಂತ್ರಜ್ಞಾನ ಸ್ವಾಮ್ಯ) ಹೆಗಲಿಗೇರಿಸಿಕೊಂಡಿರುವ ಬೆರ್ರಿ ಅವರ ಆಸಕ್ತಿಗಳನ್ನು ಅರಿಯಲು ಹೊರಟರೆ ಬೆರಗು ಹುಟ್ಟಿಸುತ್ತದೆ. ನಿರ್ದಿಷ್ಟ ಚಿಕಿತ್ಸೆಗಳಿಗೆಂದು ರೂಪಿಸಿದ ಔಷಧಗಳು, ತಪಾಸಣಾ ಸಾಧನಗಳು, ಹಾಗೂ ಸದ್ಯಕ್ಕೆ ಬದಲಿ ಇಂಧನ ತಯಾರಿಕಾ ವಿಧಾನಗಳು. ಪಾರ್ಶ್ವವಾಯು ಚಿಕಿತ್ಸೆಗೆ ನೆರವಾಗುವ ಮಿದುಳಿನಲ್ಲಿನ ರಕ್ತತಡೆಗೋಡೆಗಳನ್ನು ಬೇಧಿಸಬಲ್ಲ ಔಷಧಗಳನ್ನು ರೂಪಿಸಿದ್ದಾರೆ. ಇದಕ್ಕಾಗಿ ಇವರು ಜೀನ್‍ಗಳಲ್ಲಿ ಹುದುಗಿರುವ ಪ್ರೊಟೀನ್ ಅನ್ನು ಸೆರೆಹಿಡಿದು ಅಗತ್ಯಕ್ಕೆ ತಕ್ಕಂತೆ ಅದನ್ನು ಮಾರ್ಪಡಿಸಿದರು. ಪ್ರಯೋಗಶಾಲೆಯ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಿದಾಗ, ಪಾರ್ಶ್ವವಾಯುವನ್ನು ಈ ಪ್ರೋಟೀನ್ ಕಣಗಳು ಗುಣಪಡಿಸಿದವು. ಇದು ಅವರನ್ನು ಪ್ರೋಟೀನ್‍ಗಳ ಬಗ್ಗೆಯೇ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಿತು. ಮುಂದೆ ಈ ಅಧ್ಯಯನ ಅವರಿಗೆ ಡಾಕ್ಟರೇಟ್ ಪದವಿಯನ್ನು ಕೊಡಿಸಿತು. ಅಮೆರಿಕದ ಜೈವಿಕ ತಂತ್ರಜ್ಞಾನ ಔಷಧ ತಯಾರಿಕಾ ಕಂಪನಿಯೊಂದು ಬೆರ್ರಿ ಅವರ ನೆರವಿನಿಂದ ಆ ವಿಶಿಷ್ಟ ಪ್ರೋಟೀನ್ ಅನ್ನು ಸಂಸ್ಕರಿಸಿ ಔಷಧಗಳನ್ನು ತಯಾರಿಸುತ್ತಿದೆ.

ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ನೂತನ ವಿಧಾನಕ್ಕೂ ಸಹಾ ಇವರದೇ ವಿಶಿಷ್ಟ ವಿನ್ಯಾಸವಿದೆ. ರಕ್ತವನ್ನು ತೆಳುವಾಗಿಸುವ ಅಣುರೂಪದ ರಾಸಾಯನಿಕ ಸಂಯುಕ್ತದ ಹೆಸರು ‘ಹೆಪಾರಿನ್’. ಸಕ್ಕರೆಯ ಅಣುಗಳಿಗೆ ಪಾಲಿಮರ್ ಅಣುಗಳನ್ನು ಜೋಡಣೆ ಮಾಡುವ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿದ್ದ ಬೆರ್ರಿ ಅವರಿಗೆ ಕೆಲ ತಿಂಗಳ ಸತತ ಪ್ರಯತ್ನಗಳ ನಂತರ ಯಶಸ್ಸು ದೊರೆತಿತ್ತು. ಇದರ ಹಿನ್ನೆಲೆಯಲ್ಲಿ ‘ಹೆಪಾರಿನ್’ ಅಣುಗಳಿಗೆ ಪಾಲಿಮರ್ ಅಣುಗಳನ್ನು ಜೋಡಿಸಲು ಸಾಧ್ಯವೆ? ಎಂದು ಪರಿಶೀಲಿಸತೊಡಗಿದರು. ಪಾಲಿಮರ್‌ಗಳು ಸುತ್ತುವರಿದಿರುವ ಹೆಪಾರಿನ್ ಅನ್ನು ಕ್ಯಾನ್ಸರ್ ತಗುಲಿರುವ ಜೀವಕೋಶಗಳು ಮುಗಿಬಿದ್ದು ತಮ್ಮ ಒಡಲೊಳಗೆ ಹುದುಗಿಸಿಕೊಳ್ಳುವ ಪ್ರಕ್ರಿಯೆಯನ್ನು ಅವರು ಕಂಡುಕೊಂಡರು. ಕ್ಯಾನ್ಸರ್ ಕೋಶದೊಳಗೆ ಸೇರಿದೊಡನೆಯೆ ಬೇರ್ಪಡುತ್ತಿದ್ದ ಹೆಪಾರಿನ್ ಅಣುಗಳು ಬಾಂಬ್‍ಗಳಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆ ಕೋಶಗಳನ್ನು ಕೊಲ್ಲುವುದು ಇವರ ಗಮನಕ್ಕೆ ಬಂದಿತು. ಸದ್ಯಕ್ಕೆ ಈ ತಂತ್ರಜ್ಞಾನವನ್ನು ಮತ್ತೊಂದು ಔಷಧ ತಯಾರಿಕಾ ಕಂಪನಿ ತಮ್ಮ ಸುಪರ್ದಿಗೆ ಸೇರಿಸಿಕೊಂಡಿದ್ದಾರೆ.

ಇಂಥ ಹೆಗ್ಗಳಿಕೆಯ ಬೆರ್ರಿ ಅವರೊಂದಿಗೆ ಸಂಶೋಧನೆಗಳನ್ನು ನಡೆಸಲು ಜತೆಗೂಡಿದವರು ಹಾರ್ವರ್ಡ್ ಮೆಡಿಕಲ್ ಸ್ಕೂಲಿನ ಜೀನ್ ತಜ್ಞರಾದ ಜಾರ್ಜ್ ಚರ್ಚ್ ಹಾಗೂ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದ ಸಸ್ಯ ಜೀವ ವಿಜ್ಞಾನಿಗಳಾದ ಕ್ರಿಸ್ ಸೋಮರ್‌ವಿಲ್. ಇವರೆಲ್ಲರೂ ಒಗ್ಗೂಡಿ ನಿರ್ಮಿಸ ಹೊರಟಿದ್ದು ಜೀನ್ ಬದಲಾದ ಸೂಕ್ಷ್ಮಾಣುಜೀವಿಯೊಂದನ್ನು. ವರ್ಷಗಟ್ಟಲೆಯ ಸಂಶೋಧನೆಗಳ ನಂತರ ಸೂಕ್ಷ್ಮಾಣುಜೀವಿಯೊಂದನ್ನು ಅವರು ಪ್ರಯೋಗಶಾಲೆಗಳಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ತ್ಯಾಜ್ಯವಸ್ತುಗಳೂ ಸೇರಿದಂತೆ ಇಂಗಾಲ ಹಾಗೂ ಜಲಜನಕ ಹೇರಳವಾಗಿರುವ ಸಸ್ಯ ಸಂಪತ್ತನ್ನು ಕಬಳಿಸಿ ಪೆಟ್ರೋಲಿಯಂನಂಥ ರಾಸಾಯನಿಕವನ್ನು ಈ ಸೂಕ್ಷ್ಮಾಣುಜೀವಿಗಳು ಕಕ್ಕಬಲ್ಲದು. ಸೂಕ್ಷ್ಮಾಣುಜೀವಿಯ ಹೆಸರು ಹಾಗೂ ಅದರ ಮೇಲೆ ನಡೆಸಿರುವ ಜೀನ್ ಚಿಕಿತ್ಸೆಯ ಬಗ್ಗೆ ಬೆರ್ರಿ ಮತ್ತವರ ಸಹಚರರು ಹೆಚ್ಚು ವಿವರಗಳನ್ನು ನೀಡುತ್ತಿಲ್ಲ. ಅವರ ಪ್ರಕಾರ ಬರಲಿರುವ ದಿನಗಳಲ್ಲಿ ಇಂಧನ ಕ್ಷಾಮವನ್ನು ದೂರವಾಗಿಸಬಲ್ಲ ಸೂಕ್ಷ್ಮಾಣುಜೀವಿಗಳ ತೈಲಾಗಾರವನ್ನು ಸುಲಭವಾಗಿ ಎಲ್ಲೆಡೆ ಸ್ಥಾಪಿಸಬಹುದು. ಅಷ್ಟೇ ಅಲ್ಲ, ಉತ್ಪಾದಕತೆ ಹಾಗೂ ಬೆಲೆಯಲ್ಲಿ ಇದು ಮುಸುಕಿನ ಜೋಳ ಅಥವಾ ಕಬ್ಬಿನಿಂದ ಸಂಸ್ಕರಿಸಿದ ಈಥೈಲ್ ಆಲ್ಕೋಹಾಲ್‍ಗಿಂತಲೂ ಉತ್ತಮವಾಗಿರುತ್ತದೆ. ಜತೆಗೆ ನೈಸರ್ಗಿಕವಾಗಿ ಸಂಸ್ಕರಿಸುವ ಪೆಟ್ರೋಲಿಯಂಗಿಂತಲೂ ಅಗ್ಗವಾಗಿರುತ್ತದೆ ಎಂಬ ಆಶ್ವಾಸನೆ ಬೆರ್ರಿ ಅವರದು.

ಈಗ ಎಲ್ಲೆಡೆ ಜಾಗೃತಿ ಮೂಡಿಸಿರುವ ಪೆಟ್ರೋಲಿಯಂನೊಂದಿಗೆ ಬೆರೆಸಬಹುದಾದ ಈಥೈಲ್ ಆಲ್ಕೋಹಾಲ್ ಬಗ್ಗೆ ಬೆರ್ರಿ ಅವರ ಅಭಿಪ್ರಾಯ ‘ಇಂಧನ ಸಮಸ್ಯೆಯನ್ನು ಅದು ನೀಗಿಸದು’. ಇದಕ್ಕೆ ಅವರು ಕೊಡುವ ಕಾರಣ ಈಥೈಲ್ ಆಲ್ಕೋಹಾಲ್ ಪೆಟ್ರೋಲಿಗಿಂತ ಮೂರನೆಯ ಎರಡು ಭಾಗದಷ್ಟು ಮಾತ್ರ ಶಕ್ತಿ ಸಂಚಯನ ಮಾಡುತ್ತದೆ. ಅಂದರೆ ಪೆಟ್ರೋಲಿಗಿಂತಲೂ ಮೂರನೆಯ ಒಂದು ಭಾಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ಈಥೈಲ್ ಆಲ್ಕೋಹಾಲ್ ಬಳಸಬೇಕಾಗುತ್ತದೆ. ನೈಸರ್ಗಿಕವಾಗಿ ಕಚ್ಛಾ ತೈಲವನ್ನು ಸಂಸ್ಕರಿಸುವಾಗ ವಿವಿಧ ಹಂತಗಳಲ್ಲಿ ಸೀಮೆ‍ಎಣ್ಣೆ, ಪೆಟ್ರೋಲ್, ಡೀಸಲ್ ಮತ್ತಿತರ ಸಾಮಗ್ರಿಗಳನ್ನು ತೆಗೆಯಬಹುದು. ಇದೇ ರೀತಿ ಸೂಕ್ಷ್ಮಾಣುಜೀವಿಗಳ ಕಾರ್ಯಾಚರಣೆಯಲ್ಲಿ ಜೀನ್ ಮಾರ್ಪಾಡಿನ ಮೂಲಕ ಒಂದಷ್ಟು ಬದಲಾವಣೆಗಳನ್ನು ಮಾಡಿದರೆ ವಿವಿಧ ಉತ್ಪನ್ನಗಳನ್ನು ಅವು ಕಕ್ಕುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಅವರ ಕಾರ್ಯಾಚರಣೆಗಳು ಪ್ರಯೋಗಶಾಲೆಯ ಹಂತದಲ್ಲಿ ಫಲ ಕೊಟ್ಟಿವೆ.

ಸಾಮಾನ್ಯವಾಗಿ ತೈಲ ಸಂಸ್ಕರಣಾ ಘಟಕಗಳು ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಶಕ್ತಿಯನ್ನು ಕಬಳಿಸುತ್ತವೆ, ಜತೆಗೆ ಹೆಚ್ಚಿನ ಮಟ್ಟದಲ್ಲಿ ಪರಿಸರವನ್ನು ಮಲಿನಗೊಳಿಸುತ್ತವೆ. ಇತ್ತ ಬೆರ್ರಿ ಅವರ ಯೋಜನೆಯಲ್ಲಿ ಆಹಾರ ಬೆಳೆಗಳನ್ನು ಹೊರತುಪಡಿಸಿ ಕೇವಲ ಎತ್ತರದ ಹುಲ್ಲುಗಳು, ಮರದ ಚಕ್ಕೆ, ಕೆಲವೊಂದು ನಾರಿನ ಸಸ್ಯಗಳು, ಹೆಚ್ಚು ಉಪಯೋಗವಿಲ್ಲದ ಸಣ್ಣ ಪುಟ್ಟ ಮರಗಳನ್ನು ಮೂಲವಸ್ತುಗಳಾಗಿ ಬಳಸಲಾಗುತ್ತದೆ. ಇವುಗಳನ್ನು ಬೇಕೆಂದಷ್ಟು ಮತ್ತೆ ಮತ್ತೆ ಬೆಳೆಸಬಹುದು. ಹಾಗೆಯೇ ಜೀನ್ ಬದಲಿಸಿಕೊಂಡ ಸೂಕ್ಷ್ಮಾಣುಜೀವಿಗಳನ್ನು ಹುದುಗು ತರಿಸುವ ಪ್ರಕ್ರಿಯೆಯ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಬೆಳೆಸಿಕೊಳ್ಳಬಹುದು.
ಕೇವಲ ಇಪ್ಪತೊಂಬತ್ತು ವರ್ಷ ವಯಸ್ಸಿನ ಬೆರ್ರಿ ಅವರಿಗೆ ‘ಎಂ.ಐ.ಟಿ.’ಯ ತಂತ್ರಜ್ಞಾನ ನಿಯತಕಾಲಿಕೆ ‘ಟೆಕ್ನಾಲಜಿ ರೆವ್ಯೂ’ ‘ವರ್ಷದ ಸಂಶೋಧಕ’ನೆಂಬ ಪುರಸ್ಕಾರ ನೀಡಿ ಗೌರವಿಸಿದೆ. ಪ್ರತಿ ವರ್ಷ ಮೂವತ್ತೈದು ವರ್ಷ ವಯಸ್ಸಿನೊಳಗಿನ ವಿಜ್ಞಾನಿಗಳನ್ನು ಈ ನಿಯತಕಾಲಿಕೆ ಪುರಸ್ಕರಿಸುತ್ತದೆ. ಮುಂಚೂಣಿ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ನೆರವಾಗುವ ‘ವೆಂಚರ್ ಕ್ಯಾಪಿಟಲಿಸ್ಟ್ಸ್’ಗಳೆಂಬ ಆರ್ಥಿಕ ಪ್ರಾಯೋಜಕರುಗಳು ಬೆರ್ರಿ ಅವರನ್ನು ಮುಗಿಬಿದ್ದಿದ್ದಾರೆ. ಅಂಥ ಸಂಸ್ಥೆಯೊಂದರ ನೆರವಿನಿಂದ ಬೆರ್ರಿ ತಂತ್ರಜ್ಞಾನ ಒಕ್ಕೂಟವೊಂದನ್ನು ರೂಪಿಸಿಕೊಂಡಿದ್ದಾರೆ. ಸಹ ಸಂಶೋಧಕರುಗಳ ನೆರವಿನಿಂದ ಜೈವಿಕ ಪೆಟ್ರೋಲ್ ಅನ್ನು ರೂಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಎಲ್ಲವೂ ಬೆರ್ರಿ ಅವರ ಎಣಿಕೆಯಂತೆ ನಡೆದರೆ ಜಗತ್ತಿನಲ್ಲಿ ವಿದ್ಯುತ್ ಕ್ಷಾಮ ಇರುವುದಿಲ್ಲ. ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು.

(ಕೃಪೆ: ವಿಜಯ ಕರ್ನಾಟಕ, 27-08-2007)

No comments: