Monday, September 3, 2007

ಬ್ಯಾಟರಿ - ಇನ್ನು ಮುಂದೆ ಅರ್ಧಕ್ಕೇ ಕೈ ಕೊಡೋದಿಲ್ರಿ?

ಮೊಬೈಲ್ ಫೋನ್ ಬಳಕೆದಾರರು ಎದುರಿಸುವ ಅತಿ ದೊಡ್ಡ ಸಮಸ್ಯೆ ಅದಕ್ಕೆ ಶಕ್ತಿ ಪೂರೈಸುವ ಬ್ಯಾಟರಿಯದು. ಯಾವ ಸಮಯದಲ್ಲಿ ದಿಢೀರೆಂದು ಬ್ಯಾಟರಿಗಳು ಕೈಕೊಡುತ್ತದೆಂದು ಊಹಿಸಲಾಗುವುದಿಲ್ಲ. ನಮ್ಮ ಕಾರು, ಸ್ಕೂಟರುಗಳಲ್ಲಿ ಪೆಟ್ರೋಲು ಇನ್ನೆಷ್ಟು ಉಳಿದಿದೆ ಎಂಬ ಅಂದಾಜು ಮಟ್ಟವನ್ನು ಸದಾ ಕಾಲ ನೀಡುವ ವ್ಯವಸ್ಥೆ ಇರುತ್ತದೆ. ಇಂಥದೊಂದು ಸುಲಭ ವ್ಯವಸ್ಥೆಯನ್ನು ನೀವು ರೂಪಿಸಲು ಸಾಧ್ಯವಿಲ್ಲವೆ? ಎಂದು ಬ್ಯಾಟರಿ ತಂತ್ರಜ್ಞರನ್ನೊ ಅಥವಾ ವಿದ್ಯುತ್ ಎಂಜಿನೀರ್‌ಗಳನ್ನೊ ಲೇವಡಿ ಮಾಡಿ ನೋಡಿ. ವಿದ್ಯುತ್ ಆಘಾತಕ್ಕಿಂತಲೂ ಪ್ರಬಲವಾದ ‘ಶಾಕ್’ ಒಂದನ್ನು ಅವರು ನೀಡಲೆತ್ನಿಸುತ್ತಾರೆ - ತಮ್ಮ ಪ್ರವಚನದ ಮೂಲಕ. ಪದೇ, ಪದೇ ಚಾರ್ಜ್ ಮಾಡುವ ಮೂಲಕ ವಿದ್ಯುತ್ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಬಲ್ಲ ಬ್ಯಾಟರಿಗಳು ದೀರ್ಘಾವಧಿ ಕಾರ್ಯನಿರ್ವಹಿಸಬೇಕಾದರೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಸಂಗ್ರಹವಾಗಿರುವ ವಿದ್ಯುತ್ ಶಕ್ತಿಯನ್ನು ಪೂರ್ಣವಾಗಿ ಬಳಸಿದ ನಂತರವೇ ಚಾರ್ಜ್ ಮಾಡಲು ಯತ್ನಿಸಬೇಕು. ಈ ರೀತಿ ಚಾರ್ಜ್ ಮಾಡುವಾಗ ವಿದ್ಯುತ್ ಪೂರೈಕೆಯಲ್ಲಿ ಯಾವ ಅಡೆ ತಡೆಗಳು ಇರಬಾರದು. ಪೂರ್ತಿ ಚಾರ್ಜ್ ಆದ ನಂತರವೇ ವಿದ್ಯುತ್ ಸಂಪರ್ಕದಿಂದ ಹೊರತೆಗೆಯಬೇಕು. ಇತ್ಯಾದಿ. ಸಂಪೂರ್ಣವಾಗಿ ನಿಶ್ಚೇತನವಾಗುವ ತನಕ ಬ್ಯಾಟರಿಯನ್ನು ಬಳಸುವುದು ಅಸಾಧ್ಯ. ಮುಖ್ಯವಾದ ಕರೆಯೊಂದನ್ನು ಮಾಡುತ್ತಿರುವಾಗ ಮೊಬೈಲ್ ಫೋನ್ ಕೈ ಕೊಟ್ಟರೆ, ಹತ್ತಿರದಲ್ಲಿಯೇ ವಿದ್ಯುತ್ ಸಂಪರ್ಕ ಇರದಿರಬಹುದು. ಇದ್ದರೂ ಚಾರ್ಜರ್ ನಿಮ್ಮ ಸಂಗಡ ಇರದಿರಬಹುದು. ಹೀಗಾಗಿ ನಿತ್ಯ ಕೆಲಸ ಆರಂಭಿಸುವ ಮುನ್ನ, ಬ್ಯಾಟರಿಯಲ್ಲಿ ಎಷ್ಟು ವಿದ್ಯುತ್ ಇದೆ ಎಂಬುದನ್ನು ಗಮನಿಸದೆಯೆ, ಮೊಬೈಲ್ ಬಳಕೆದಾರರು ತಮ್ಮ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳುತ್ತಾರೆ. ಇತ್ತ ನಿಯಮಬದ್ಧವಾಗಿ ಚಾರ್ಜ್ ಮಾಡಲು ಪ್ರಯತ್ನಿಸುವವರಿಗೆ ವಿದ್ಯುತ್ ಪೂರೈಕೆಯ ಕಣ್ಣು ಮುಚ್ಚಾಲೆಯ ಕಾಟ. ಒಟ್ಟಿನಲ್ಲಿ ಬ್ಯಾಟರಿ ಬಾಂಧವರ ಕಟ್ಟಳೆಗಳನ್ನು ಯಾರೂ ಪಾಲಿಸಲಾಗುವುದಿಲ್ಲ. ಬ್ಯಾಟರಿಗಳು ಒಂದೆರಡು ವರ್ಷದ ನಂತರ ನಿರುಪಯೋಗಿ ಆಗಲಿ ಬಿಡಿ. ಮತ್ತೊಂದು ಬ್ಯಾಟರಿ ಕೊಂಡರಾಯಿತು. ಆದರೆ ಕಾರು, ಸ್ಕೂಟರುಗಳಲ್ಲಿ ಇನ್ನೆಷ್ಟು ಪೆಟ್ರೋಲ್ ಉಳಿದಿದೆ ಎಂದು ತೋರಿಸುವ ಮೀಟರ್ ಒಂದನ್ನು ಬ್ಯಾಟರಿಗಳಿಗೆ ಹಾಕಿ ಕೊಟ್ಟರೆ ಸಾಕು ಎಂಬುದು ನಿಮ್ಮ ಹಾರೈಕೆ ಅಲ್ಲವೆ?

ಇದರಲ್ಲೇನು ಹೊಸತು? ನಮ್ಮ ಮೊಬೈಲ್ ಫೋನ್‌ಗಳಲ್ಲಿಯೇ ಒಂದರ ಮೇಲೊಂದು ಅಥವಾ ಒಂದರ ಪಕ್ಕದಲ್ಲೊಂದೊ ಕಡ್ಡಿಗಳ ಸಾಲಿರುತ್ತವೆ. ಅವುಗಳ ಸಂಖ್ಯೆ ಕಡಿಮೆಯಾದಂತೆಲ್ಲ ವಿದ್ಯುತ್ ಸಂಗ್ರಹ ಕಡಿಮೆಯಾಗುತ್ತಿದೆ ಎಂದು ಗೊತ್ತಾಗುತ್ತದೆ. ಇನ್ನು ಲ್ಯಾಪ್‍ಟಾಪ್ ಕಂಪ್ಯೂಟರ್‌ಗಳಲ್ಲಿ, ಅಂಗೈ ಗಣಕಗಳಲ್ಲಿ ತಮ್ಮ ಒಡಲೊಳಗಿರುವ ಬ್ಯಾಟರಿ ಇನ್ನೆಷ್ಟು ಕಾಲ ಕೆಲಸ ಮಾಡಬಲ್ಲದು ಎಂಬ ಸೂಚನೆಯೂ ಸಿಗುತ್ತದೆ. ಹಾಗಿದ್ದರೆ ಸಮಸ್ಯೆಯೇ ಇಲ್ಲ. ಆದರೆ ಈ ಎಲ್ಲ ಅಂದಾಜುಗಳೂ ಅಂದಾಜುಗಳಷ್ಟೇ ಆಗಿರುವುದೇ ಒಂದು ದೊಡ್ಡ ಸಮಸ್ಯೆ. ಉದಾಹರಣೆಗೆ ನಿಮ್ಮ ಮೊಬೈಲ್ ಫೋನಿಗೆ ಕರೆಯೊಂದು ಬಂದಿದೆ. ಮಾತನಾಡುತ್ತಿರುವಂತೆಯೇ ಬ್ಯಾಟರಿ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಇನ್ನೇನು ಬ್ಯಾಟರಿ ಕೈಕೊಡುತ್ತದೆ ಎಂದು ಕರೆ ಮುಗಿಸಿ ಫೋನ್ ಬಂದ್ ಮಾಡುವಿರಿ, ಕೂಡಲೇ ತನ್ನಲ್ಲಿ ಇನ್ನೊಂದಷ್ಟು ಶಕ್ತಿಯಿದೆ ಎಂಬ ಸೂಚನೆ ಬರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಿಮ್ಮ ಬ್ಯಾಟರಿಯಲ್ಲಿ ಇನ್ನೂ ಶಕ್ತಿಯಿದೆ ಎಂಬ ಸೂಚನೆ ಕಡ್ಡಿಗಳ ಮುಖಾಂತರ ಕಾಣುತ್ತೀರಿ. ಬ್ಯಾಟರಿ ಶಕ್ತಿ ಕಡಿಮೆಯಿದೆ ಎಂಬ ಎಚ್ಚರಿಕೆಯೊಂದಿಗೆ ನಿಮ್ಮ ಮೊಬೈಲ್ ಫೋನ್ ಸ್ವಯಂಚಾಲಿತವಾಗಿ ಬಂದಾಗುತ್ತದೆ. ಅಂದರೆ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹಣೆ ಇನ್ನೆಷ್ಟಿದೆ, ಸಂಗ್ರಹವಾಗಿರುವ ಶಕ್ತಿಯನ್ನು ಇನ್ನೆಷ್ಟು ಕಾಲ ಬಳಸಬಹುದು ಎಂಬ ಅಂಶಗಳನ್ನು ನಿಖರವಾಗಿ ಕಂಡುಹಿಡಿಯಲಾಗುವುದಿಲ್ಲ. ಇದಕ್ಕೆ ಕಾರಣ ಬ್ಯಾಟರಿಯ ಶಕ್ತಿ ಸಂಗ್ರಹಣೆಯನ್ನು ಅಳೆಯುವ ಸಾಧನಗಳು ವಿದ್ಯುತ್ ಚಾಲಕ ಶಕ್ತಿ ಅಂದರೆ ವೋಲ್ಟೇಜ್‍ನ ಮಟ್ಟವನ್ನು ಮಾನಕವನ್ನಾಗಿ ಬಳಸುತ್ತವೆ. ವೊಲ್ಟೇಜ್ ಬ್ಯಾಟರಿಯ ಶಕ್ತಿ ಕ್ಷೀಣವಾದಂತೆ ಅದೇ ಅನುಪಾತದಲ್ಲಿ ಇಳಿಯುವುದಿಲ್ಲ. ಉದಾಹರಣೆಗೆ ಮೊಬೈಲ್ ಫೋನ್‍ನಲ್ಲಿ ಕರೆ ಮಾಡಿದೊಡನೆ ಸಂಕೇತಗಳು ರವಾನೆಯಾದಂತೆ ದಿಢೀರೆಂದು ವೋಲ್ಟೇಜ್ ಇಳಿದು ಬಿಡುತ್ತದೆ. ಈ ಇಳಿತವನ್ನು ವಿದ್ಯುತ್ ಶಕ್ತಿಯ ಇಳಿತ ಎಂದು ಗುರುತಿಸುವ ಸಾಮಾನ್ಯ ಅಳತೆಗೋಲು, ವಿದ್ಯುತ್ ಉಳಿತಾಯದ ತಂತ್ರಾಂಶವನ್ನು ಚಾಲನೆಗೊಳಿಸುತ್ತದೆ. ಗಾಭರಿಗೊಳ್ಳುವ ಮಟ್ಟದಲ್ಲಿ ಶಕ್ತಿ ಕ್ಷೀಣಿಸಿದೆ ಎಂದು ತಂತ್ರಾಂಶಕ್ಕೆ ಮನವರಿಕೆಯಾದರೆ, ಮೊಬೈಲ್ ಫೋನ್ ಅನ್ನು ಅದು ಬಂದ್ ಮಾಡುತ್ತದೆ. ಆದರೆ ವೋಲ್ಟೇಜ್‍ನ ಇಳಿಕೆ ಕ್ಷಣಿಕವಾಗಿದ್ದು, ಗಂಭೀರ ಮಟ್ಟದಲ್ಲಿರದಿದ್ದರೆ, ಫೋನಿನಲ್ಲಿ ಮಾತು ಮುಂದುವರಿದಂತೆ ವೋಲ್ಟೇಜ್ ತಹಬಂದಿಗೆ ಬರುತ್ತದೆ. ಬ್ಯಾಟರಿಯ ಬಳಕೆಯ ಅವಧಿಯಲ್ಲಿ ವೋಲ್ಟೇಜ್ ಯದ್ವಾ-ತದ್ವಾ ಏರಿಳಿಯುತ್ತದೆ. ಬ್ಯಾಟರಿಯ ‘ವಯಸ್ಸು’ ಏರಿದಂತೆ ವೋಲ್ಟೇಜ್ ಏರಿಳಿತಗಳೂ ಹೆಚ್ಚು-ಹೆಚ್ಚಾಗುತ್ತವೆ. ಜತೆಗೆ ಬ್ಯಾಟರಿಯ ತಾಪಮಾನವೂ ವೋಲ್ಟೇಜ್‍ನ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಬ್ಯಾಟರಿಯ ವಿದ್ಯುತ್ ಬೇಡಿಕೆಗಳಿಗೆ ಅನುಗುಣವಾಗಿಯೂ ವೋಲ್ಟೇಜ್ ಮಟ್ಟದಲ್ಲಿ ಬದಲಾವಣೆಗಳಾಗುತ್ತವೆ. ಅಂದರೆ ಕೇವಲ ವೋಲ್ಟೇಜ್ ಒಂದನ್ನು ಗುರುತಿಸುವುದರ ಮೂಲಕ ಬ್ಯಾಟರಿಯೊಳಗೆ ಹುದುಗಿರುವ ವಿದ್ಯುತ್ ಪ್ರಮಾಣ ಎಷ್ಟರ ಮಟ್ಟಿಗಿದೆ ಎಂದು ನಿಖರವಾಗಿ ಅಳೆಯಲಾಗದು.

ಅಮೆರಿಕದ ‘ಟೆಕ್ಸಾಸ್ ಇನ್‍ಸ್ಟ್ರುಮೆಂಟ್ಸ್ - ಟಿ.ಐ.’ ಕಂಪನಿ ನಿಮಗೆ ಗೊತ್ತಿರಬಹುದು. ಬೆಂಗಳೂರಿನಲ್ಲಿ ಆರಂಭವಾದ ಮೊದಲ ವಿದೇಶಿ ಎಲೆಕ್ಟ್ರಾನಿಕ್ಸ್ ಕಂಪನಿಯದು. ನಾವೆಲ್ಲಾ ‘ಐ.ಟಿ. - ಮಾಹಿತಿ ತಂತ್ರಜ್ಞಾನ’ದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮುನ್ನವೇ ‘ಐ.ಟಿ.’ ಶಕೆಯನ್ನು ಬೆಂಗಳೂರಿಗೆ ತಂದ ಕೀರ್ತಿ ‘ಟಿ.ಐ.’ನದು. ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ಸ್‍ಗೆ ಸಂಬಂಧಿಸಿದ ಯಂತ್ರಾಂಶ ಹಾಗೂ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ‘ಟಿ.ಐ.’ನದು ಎತ್ತಿದ ಕೈ. ಈ ಕಂಪನಿಯು ಸದ್ಯಕ್ಕೆ ಮೊಬೈಲ್ ಫೋನ್ ಬ್ಯಾಟರಿಗಳಲ್ಲಿ ಉಳಿದಿರುವ ವಿದ್ಯುತ್ ಶಕ್ತಿಯನ್ನು ನಿಖರವಾಗಿ ಗುರುತಿಸಬಲ್ಲ ‘ಕಂಪ್ಯೂಟರ್ ಚಿಪ್’ ಒಂದನ್ನು ಅಭಿವೃದ್ಧಿಪಡಿಸಿದೆ. ಬ್ಯಾಟರಿಯಲ್ಲಿ ಹುದುಗಿರುವ ವಿದ್ಯುತ್ ಶಕ್ತಿಯನ್ನು ನಿಖರವಾಗಿ ಗುರುತಿಸಲು ಇದರಲ್ಲಿ ಕೇವಲ ವೋಲ್ಟೇಜ್ ಒಂದನ್ನು ಮಾತ್ರ ಅಳತೆ ಮಾಡುವುದಿಲ್ಲ. ಅದು ಅತಿ ಮುಖ್ಯ ವಿದ್ಯುತ್ ಗುಣ ಲಕ್ಷಣವಾದ ‘ಇಂಪಿಡೆನ್ಸ್’ ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ‘ಇಂಪಿಡೆನ್ಸ್’ ಅಂದರೆ ವಿದ್ಯುತ್ ಹರಿದಾಟಕ್ಕೆ ಎದುರಾಗುವ ಪ್ರತಿರೋಧದ ಅಳತೆ. ‘ಇಂಪಿಡೆನ್ಸ್’ ಬ್ಯಾಟರಿಯೊಂದರ ವಯಸ್ಸು, ತಾಪಮಾನ, ಹಾಗೂ ಬ್ಯಾಟರಿಯೊಂದಕ್ಕೆ ಎದುರಾಗುವ ವಿದ್ಯುತ್ ಬೇಡಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ‘ಟಿ.ಐ.’ ಅಭಿವೃದ್ಧಿ ಪಡಿಸಿರುವ ಚಿಪ್‍ನಲ್ಲಿ ‘ಇಂಪಿಡೆನ್ಸ್’ ಅನ್ನು ಗಣನೆಗೆ ತೆಗೆದುಕೊಂಡು ‘ವಿದ್ಯುತ್ ಚಾಲಕ ಶಕ್ತಿ - ವೋಲ್ಟೇಜ್’ ಅನ್ನು ಅಳೆಯಲಾಗುತ್ತದೆ. ಹೀಗೆ ಮರು ಲೆಕ್ಕಾಚಾರ ಹಾಕಿದ ವೋಲ್ಟೇಜ್ ಮೂಲಕ ರೂಪಿಸಿದ ಅಳತೆಗೋಲು ಬ್ಯಾಟರಿಯ ಶಕ್ತಿ ಸಾಮರ್ಥ್ಯವನ್ನು ಬಹುತೇಕ ಸರಿಯಾಗಿ ನಿರ್ಧರಿಸುತ್ತದೆ.

ಹೀಗೆ ಹೊಸತಾಗಿ ನಿರ್ಮಿಸಲಾದ ಕಂಪ್ಯೂಟರ್ ಚಿಪ್ ಅನ್ನು ಮೊಬೈಲ್ ಫೋನಿನ ವಿದ್ಯುನ್ಮಾನ ಮಂಡಲಕ್ಕೆ ನೇರವಾಗಿ ಜೋಡಣೆ ಮಾಡಬಹುದು, ಇಲ್ಲವೆ ಬ್ಯಾಟರಿಗೇ ಹೊಂದಿಸಿಡಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದೊಡನೆಯೆ ಅದರಲ್ಲಿ ಎಷ್ಟು ಶಕ್ತಿ ಸಂಚಯನೆಯಾಗಿದೆ ಎಂದು ಮೊದಲು ಗುರುತಿಸಿಕೊಳ್ಳುತ್ತದೆ. ಇದರ ಆಧಾರದ ಮೇಲೆ ಕಾಲಕ್ರಮೇಣ ಬ್ಯಾಟರಿಯಲ್ಲಿ ಶಕ್ತಿಯ ಬಳಕೆ ಹೇಗೆ ಸಾಗಿದೆ ಎಂದು ಗಮನಿಸುತ್ತಿರುತ್ತದೆ. ಒಮ್ಮೆಲೆ ವೋಲ್ಟೇಜ್ ಇಳಿಕೆಯಾದರೆ ಅದಕ್ಕೆ ಕಾರಣವೇನು ಎಂಬುದನ್ನು ತಕ್ಷಣವೇ ಗುರುತಿಸಿ, ತಕ್ಷಣದ ಇಳಿಕೆಯನ್ನು ಗಮನಕ್ಕೆ ತೆಗೆದುಕೊಳ್ಳದೆಯೆ ಉಳಿದ ಶಕ್ತಿಯು ಎಷ್ಟು ಕಾಲ ಬಳಕೆಗೆ ಬರಬಹುದು ಎಂದು ಲೆಕ್ಕ ಹಾಕುತ್ತದೆ. ಈ ಹಿಂದೆ ನಿರ್ಮಿಸಿದ ಯಾವುದೇ ಅಳತೆಗೋಲುಗಳು ಇಂಥ ಲೆಕ್ಕಾಚಾರಗಳನ್ನು ಹಾಕಲು ಸಾಮರ್ಥ್ಯ ಹೊಂದಿರಲಿಲ್ಲ. ‘ಮೋಟರೋಲ’ ಎಂಬ ಮೊಬೈಲ್ ಫೋನ್ ತಯಾರಿಕಾ ಕಂಪನಿಯ ಬಗ್ಗೆ ನಿಮಗೆ ತಿಳಿದಿರಬಹುದು. ಅಮೆರಿಕದ ಈ ಕಂಪನಿಯೂ ಸಹಾ ಬ್ಯಾಟರಿಯಲ್ಲಿ ಇನ್ನೆಷ್ಟು ಶಕ್ತಿ ಉಳಿದಿದೆ ಎಂದು ನಿಖರವಾಗಿ ಲೆಕ್ಕ ಹಾಕಬಲ್ಲ ಚಿಪ್ ಒಂದನ್ನು ನಿರ್ಮಿಸುತ್ತಿದೆ. ಇತ್ತ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಜಗನ್ಮಾನ್ಯವಾಗಿರುವ ‘ಇಂಟೆಲ್’ ಕಂಪನಿಯ ಧನ ಸಹಾಯದಿಂದ ರೂಪುಗೊಂಡಿರುವ ವಿದ್ಯುನ್ಮಾನ ಕಂಪನಿ ‘ಪವರ್ ಪ್ರಿಸೈಸ್’ ಕೂಡಾ ಬ್ಯಾಟರಿ ಶಕ್ತಿ ಎಷ್ಟಿದೆ ಎಂದು ಕಂಡು ಹಿಡಿಯಬಲ್ಲ ಚಿಪ್ ಅನ್ನು ವಿನ್ಯಾಸಗೊಳಿಸುತ್ತಿದೆ. ಒಂದು ನಿರ್ದಿಷ್ಟ ತಯಾರಿಕೆ ಹಾಗೂ ವಿನ್ಯಾಸದ ಬ್ಯಾಟರಿಯಲ್ಲಿ ವಿದ್ಯುತ್ ಹರಿದಾಟ, ಚಾಲಕ ಶಕ್ತಿಯ ಕ್ಷೀಣಿಸುವಿಕೆ ಮುಂತಾದ ಗಮನಾರ್ಹ ಗುಣಲಕ್ಷಣಗಳು ಕಾಲಕ್ರಮೇಣ ಹೇಗೆ ಬದಲಾಗುತ್ತದೆ? ಈ ಬದಲಾವಣೆಗಳು ಬ್ಯಾಟರಿಯೊಂದರ ಕಾರ್ಯಕ್ಷಮತೆಯ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತವೆ? ಮುಂತಾದ ಅಂಶಗಳನ್ನು ನಿರ್ಧರಿಸಲು ಈ ಕಂಪನಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿವೆ. ಅವುಗಳೆಲ್ಲದರ ಫಲಿತಾಂಶಗಳನ್ನು ಕ್ರೋಢೀಕರಿಸಿ ವಿಶ್ಲೇಷಣೆ ನಡೆಸುವ ಕಾರ್ಯವೂ ಸಾಗುತ್ತಿದೆ. ಒಟ್ಟಾರೆ ಬ್ಯಾಟರಿಯೊಂದು ಕಾರ್ಯಾಚರಣೆ ನಡೆಸುವಾಗ ಅದರೊಳಗಿನ ಶಕ್ತಿ ವ್ಯಯವಾಗುವ ಬಗೆಯನ್ನು ಸಾಧ್ಯವಾದಷ್ಟೂ ನಿಖರವಾಗಿ ಗುರುತಿಸುವ, ಈ ಗುರುತಿಸುವಿಕೆಯನ್ನು ಮಾಪಕವೊಂದರ ಮೂಲಕ ಅಳೆಯುವ, ಅಳೆದ ನಂತರ ಸಾಮಾನ್ಯರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ಸೂಚನೆಗಳನ್ನು ನೀಡುವ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತಿದೆ. ಎಲ್ಲವೂ ಎಣಿಕೆಯಂತೆ ನಡೆದರೆ ಇನ್ನು ಎರಡು ಅಥವಾ ಮೂರು ವರ್ಷಗಳಲ್ಲಿ ನಮ್ಮ ಮೊಬೈಲ್ ಫೋನ್‍ಗಳ ಬ್ಯಾಟರಿ ತೊಂದರೆಗಳು ನಿವಾರಣೆಯಾದೀತೆಂಬ ನಿರೀಕ್ಷೆಯಿದೆ.

ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಗಣಕ ಯಂತ್ರ, ಹತ್ತು ಹಲವಾರು ಬಗೆಯ ಸಂಪರ್ಕ ಹಾಗೂ ಮನರಂಜನಾ ಸಾಧನಗಳಿಗೆ ಬ್ಯಾಟರಿಗಳೇ ಜೀವಾಳ. ಪ್ರಸ್ತುತ ತಂತ್ರಜ್ಞಾನದಲ್ಲಿ ಅದೆಷ್ಟೇ ಪುಟ್ಟದಾದ, ಅತ್ಯುತ್ತಮ ಕಾರ್ಯಕ್ಷಮತೆಯ, ಅತ್ಯುನ್ನತ ಗುಣಮಟ್ಟದ ವಿದ್ಯುನ್ಮಾನ ಸಾಧನಗಳನ್ನು ನಿರ್ಮಿಸಬಹುದು. ಆದರೆ, ಅವುಗಳೆಲ್ಲದರ ಅಭಿವೃದ್ಧಿಗೆ ಮಿತಿಯೊಡ್ಡಿರುವುದು ಸೂಕ್ತ ಬ್ಯಾಟರಿಯ ಲಭ್ಯತೆ. ಅಂತೆಯೇ ಬ್ಯಾಟರಿ ವಿನ್ಯಾಸಗೊಳಿಸುವವರ ಹಾಗೂ ಉತ್ಪಾದಕರ ಮುಂದೆ ಬಹು ದೊಡ್ಡ ಸವಾಲು ಕಾದಿದೆ. ಬ್ಯಾಟರಿಗಳು ಅಗ್ಗವಾಗಿರಬೇಕು, ಪುಟ್ಟದಾಗಿರಬೇಕು, ಹೆಚ್ಚು ವಿದ್ಯುತ್ ಶಕ್ತಿಯನ್ನು ಶೇಖರಿಸಿಟ್ಟುಕೊಳ್ಳಬೇಕು, ಹೆಚ್ಚು ಕಾಲ ಬಾಳಿಕೆ ಬರಬೇಕು, ಕಾರ್ಯಕ್ಷಮತೆ ಉತ್ತಮವಾಗಿರಬೇಕು, ಸುಲಭವಾಗಿ ಚಾರ್ಜ್ ಮಾಡುವಂತಿರಬೇಕು ... ಹೀಗೆ ಹತ್ತು ಹಲವಾರು ಗುಣಲಕ್ಷಣಗಳ ಅಭಿವೃದ್ಧಿಯತ್ತ ಅವರೆಲ್ಲರ ಗಮನ ಹರಿದಿದೆ. ಇವುಗಳ ಜತೆಗೆ ಸೇರಿರುವ ಮತ್ತೊಂದು ಸವಾಲೆಂದರೆ ನಮ್ಮ ಕಾರು, ಸ್ಕೂಟರುಗಳಲ್ಲಿನ ಬಾಕಿ ಇಂಧನದ ಅಳತೆಯನ್ನು ತೋರಿಸುವ ಮೀಟರ್‌ನಂತೆಯೇ ಕಾರ್ಯನಿರ್ವಹಿಸಬಲ್ಲ ಅಳತೆಗೋಲೊಂದರ ಸೃಷ್ಟಿ.

ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ‘ಟಿ.ಐ.’ನ ಬ್ಯಾಟರಿ ವಿದ್ಯುನ್ಮಾನ ಮಂಡಲಗಳ ವಿನ್ಯಾಸಗಾರರಾರದ ರಿಚರ್ಡ್ ಡೆಲ್‍ರೊಸ್ಸಿ ಅವರು ಹೇಳುವಂತೆ ‘ಸದ್ಯಕ್ಕೆ ಬಳಕೆಯಲ್ಲಿರುವ ಬ್ಯಾಟರಿಗಳಲ್ಲಿ ಪ್ರತಿಶತ ಮೂವತ್ತರಷ್ಟು ಶಕ್ತಿ ಉಳಿದಿರುವಾಗಲೇ ಬಹುತೇಕ ಮೊಬೈಲ್ ಫೋನ್‍ಗಳಿಗೆ ಶಕ್ತಿ ಕ್ಷೀಣವಾಗಿದೆ ಎಂಬ ತಪ್ಪು ಸಂದೇಶ ರವಾನೆಯಾಗಿ, ಕಾರ್ಯಾಚರಣೆ ನಿಂತು ಹೋಗುತ್ತಿದೆ. ಇದರಿಂದಾಗಿ ಪೂರ್ತಿ ಖಾಲಿಯಾಗದ ಬ್ಯಾಟರಿಗಳನ್ನು ಬಳಕೆದಾರರು ಚಾರ್ಜ್ ಮಾಡಲು ಹೋಗುತ್ತಿದ್ದಾರೆ. ಬ್ಯಾಟರಿಗಳ ಆಯಸ್ಸಿನ ಮೇಲೆ ಇಂಥ ಆವರ್ತನೆಯ ಕಾರ್ಯ ಚಟುವಟಿಕೆಗಳು ದುಷ್ಪರಿಣಾಮ ಬೀರುತ್ತವೆ. ಜತೆಗೆ ಮೂರನೆಯ ಒಂದು ಭಾಗದಷ್ಟು ಶಕ್ತಿ ಸದಾ ಕಾಲ ಬಳಕೆಗೆ ಲಭ್ಯವಾಗುವುದಿಲ್ಲ’ ಎನ್ನುತ್ತಾರೆ. ಶಕ್ತಿ ಬಳಕೆಯ ಸಮರ್ಥ ನಿರ್ವಹಣೆಯಿಂದ ಬ್ಯಾಟರಿಗಳ ಬಳಕೆಯನ್ನು ಕನಿಷ್ಟವೆಂದರೂ ಪ್ರತಿಶತ ಐವತ್ತರಿಂದ ನೂರರಷ್ಟು ಹೆಚ್ಚಾಗಿಸಬಹುದು. ಜತೆಗೆ ಅಳತೆಗೋಲಿನ ಗ್ರಹಿಕೆಯ ದೋಷದ ಪ್ರಮಾಣ ಪ್ರತಿಶತ ಒಂದಕ್ಕೂ ಕಡಿಮೆಯಾಗಿಸಬಹುದು. ಈ ಬಗ್ಗೆ ರಿಚರ್ಡ್ ಅವರನ್ನು ಯಾರೇ ಪ್ರಶ್ನಿಸಲಿ, ಅವರು ನೀಡುವ ಉತ್ತರ "ಇನ್ನು ಮುಂದೆ ‘ನೋ ವರಿ’ ಬ್ಯಾಟರಿಗಳು ಸೃಷ್ಟಿಯಾಗತ್ರಿ"!


(ಕೃಪೆ: ವಿಜಯ ಕರ್ನಾಟಕ; 03-09-2007)

No comments: