Monday, October 22, 2007

ಈ ಫೋನ್ ಮುಂದೆ ಬಾಯಿಬಿಟ್ಟರೆ ಬಣ್ಣಗೇಡು!

‘ಆತ್ಮವಿಶ್ವಾಸದ ನಗುವಿಗಾಗಿ’ ಇಲ್ಲವೆ ‘ಉಸಿರಿನ ದುರ್ವಾಸನೆಯ ನಿವಾರಣೆಗಾಗಿ’ ಇಂಥದೇ ಟೂತ್‍ಪೇಸ್ಟ್ ಬಳಸಿ ಎಂದು ಕರೆಕೊಡುವ ನೂರಾರು ಜಾಹೀರಾತುಗಳನ್ನು ನೀವು ಕಂಡಿರುತ್ತೀರಿ. ಜತೆಗೆ ಸುಗಂಧ ಬೀರುವ ಶ್ವಾಸಕ್ಕೆಂದೇ ತಯಾರಿಸಲಾದ ಅನೇಕ ‘ಚ್ಯೂಯಿಂಗ್ ಗಮ್’, ‘ಮಿಂಟ್ ಚಾಕೊಲೆಟ್’ಗಳು ಅಂಗಡಿಗಳಲ್ಲಿ ಭರದಿಂದ ಮಾರಾಟವಾಗುವುದೂ ನಿಮಗೆ ಗೊತ್ತು. ಒಂದೆಡೆ ಈ ಬಗ್ಗೆ ವಿಪರೀತ ಜಾಗರೂಕರಾಗಿ ಒಂದಲ್ಲಾ ಒಂದು ವಸ್ತುವನ್ನು ಬಾಯಿಯಲ್ಲಿ ಜಗಿಯುವವರಿರುತ್ತಾರೆ. ಮತ್ತೊಂದೆಡೆ ತಮ್ಮ ಬಾಯಿಯಿಂದ ಹೊರಡುವ ವಾಸನೆಯನ್ನೂ ಗ್ರಹಿಸುವ ವ್ಯವಧಾನವಿಲ್ಲದೆ ಅಕ್ಕಪಕ್ಕದವರಿಗೆ ಮುಜುಗರ ಉಂಟುಮಾಡುವ ಭಂಡರೂ ಇದ್ದಾರೆ. ಹಾಗಿದ್ದರೆ ವಾಸನೆಯಲ್ಲಿ ಎಷ್ಟರ ಮಟ್ಟಿಗೆ ದುರ್ಗಂಧವಿದೆಯೆಂದು ಗುರುತಿಸಬಲ್ಲ ಮಾಪಕ ಇಲ್ಲವೆ? ಎಂಬುದು ನಿಮ್ಮ ಮುಂದಿನ ಪ್ರಶ್ನೆ. ರಾತ್ರಿ ಒಬ್ಬಂಟಿಯಾಗಿ ವಾಹನ ಚಲಿಸುತ್ತಿದ್ದರೆ ಮಾರ್ಗ ಮಧ್ಯದಲ್ಲಿ ಪೊಲೀಸರು ತಡೆಹಿಡಿದು ನೀವು ಮದ್ಯ ಸೇವಿಸಿರುವಿರೆ? ಎಂದು ಪರೀಕ್ಷೆಗೀಡು ಮಾಡುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಒಮ್ಮೊಮ್ಮೆ ಹೆಚ್ಚಿನ ಸಂಖ್ಯೆಯ ಸವಾರರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರೆ ‘ಉಸಿರು ವಿಶ್ಲೇಷಕ’ದ ಬದಲು ತಮ್ಮ ಮೂಗಿನಿಂದಲೇ ನಿಮ್ಮ ಬಾಯಿಂದ ಹೊರಟ ವಾಸನೆಯನ್ನು ಪರಿಶೀಲಿಸುವುದೂ ಉಂಟು. ಹಿಂದೆ ಇದೇ ಅಂಕಣದಲ್ಲಿ ಬಾಯಿಯಿಂದ ಹೊರಡುವ ಮದ್ಯದ ವಾಸನೆಯ ಮೇಲೆಯೇ ಚಾಲಕನ ಸ್ಥಿಮಿತವನ್ನು ನಿರ್ಧರಿಸಿಕೊಂಡು ಕಾರೊಂದು ಸ್ವಯಂಚಾಲಿತವಾಗಿ ಬಂದ್ ಆಗುವ ವ್ಯವಸ್ಥೆಯೊಂದರ ಬಗ್ಗೆ ಓದಿದ್ದ ನೆನಪು ನಿಮಗಿರಬಹುದು. ಪ್ರಸ್ತುತ ಇಂದಿನ ಚರ್ಚೆಯ ವಿಷಯ - ಬಾಯಿಯಿಂದ ಹೊರಡುವ ದುರ್ವಾಸನೆಯನ್ನು ಸುಲಭವಾಗಿ ಸ್ವಯಂಪರೀಕ್ಷೆ ಮಾಡಿಕೊಳ್ಳಬಹುದಾದ ಸಾಧನ.
ವಾಸನೆ, ಅದರಲ್ಲೂ ದುರ್ವಾಸನೆ ಎಂಬುದನ್ನು ನಿರ್ಧರಿಸುವುದು ಹೇಗೆ? ನಾಲಿಗೆಯ ಹಿಂಬಾಗದಲ್ಲಿ ಸೇರಿಕೊಳ್ಳುವ ಬ್ಯಾಕ್ಟೀರಿಯಗಳಿಂದ ಹಿಡಿದು ಜೀರ್ಣ ವ್ಯವಸ್ಥೆಯಲ್ಲಿನ ಏರುಪೇರಿನಿಂದ ದುರ್ವಾಸನೆ ಬೀರುವ ಅನಿಲಗಳು ಉತ್ಪಾದನೆಯಾಗುತ್ತವೆ. ಕೆಲವೊಮ್ಮೆ ತೀಕ್ಷ್ಣ ವಾಸನೆ ಬೀರುವ ಬೆಳ್ಳುಳ್ಳಿ ಮತ್ತಿತರ ಆಹಾರ ಪದಾರ್ಥಗಳು ಬಾಯಿಯಲ್ಲಿ ಒಂದಷ್ಟು ದುರ್ಗಂಧವನ್ನು ಉಳಿಸಿಡಬಹುದು. ಬಾಯಿಯನ್ನು ಸ್ವಚ್ಛವಾಗಿಟ್ಟುಕೊಂಡಿರದ ಸಂದರ್ಭಗಳಲ್ಲಿ ಅಥವಾ ಆಲ್ಕೋಹಾಲ್‍ನಂಥ ದ್ರಾವಕಗಳು ಉತ್ಪಾದಿಸುವ ಭಾಷ್ಪದಿಂದ ಉಸಿರಿನಲ್ಲಿ ದುರ್ವಾಸನೆ ಹೆಚ್ಚು ಕಾಲ ಇರಬಲ್ಲದು. ಅಸಲಿಗೆ ದುರ್ಗಂಧವೆಂದರೆ ಇತರೆ ಅನಿಲಗಳೊಂದಿಗೆ ಗಂಧಕ ಸೇರಿಹೋದ ವಿವಿಧ ಬಗೆಯ ಸಲ್ಫೈಡ್ ಅನಿಲಗಳ ಮಿಶ್ರಣ. ಸಲ್ಫೈಡ್‍ಗಳೆಂಥವು? ಅವುಗಳಲ್ಲಿ ಸೇರಿಹೋದ ಮೂಲ ವಸ್ತುಗಳ್ಯಾವುವು? ಯಾವ ವಸ್ತುವಿನಿಂದ ಇಂಥ ಅನಿಲಗಳು ಉತ್ಪತ್ತಿಯಾಗಿವೆ? ಮುಂತಾದ ಮಾಹಿತಿಗಳನ್ನು ಇಂದಿನ ರಸಾಯನ ವಿಜ್ಞಾನದ ನೆರವಿನಿಂದ ಸುಲಭವಾಗಿ ಪಡೆಯಬಹುದು. ಚಿಕಿತ್ಸಾಲಯಗಳಲ್ಲಿ ಸ್ಥಾಪಿಸಬಹುದಾದ ಇಂಥ ವಿಶ್ಲೇಷಕಗಳು ದುಬಾರಿ ವೆಚ್ಚದ್ದು. ಜತೆಗೆ ಇವುಗಳ ನಿಖರ ವಿಶ್ಲೇಷಣೆಗೆ ತರಬೇತಿ ಪಡೆದ ರಸಾಯನ ವಿಜ್ಞಾನಿಗಳು ಬೇಕು.
ಯಾವುದೇ ಒಂದು ಹೊಸ ವ್ಯವಸ್ಥೆಯನ್ನು ನಮ್ಮ ಜೀವನಶೈಲಿಗೆ ಒಗ್ಗಿಸಿಕೊಳ್ಳುವುದು ಕಷ್ಟದ ಕೆಲಸ. ಪ್ರತಿದಿನ ಹತ್ತಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಜೇಬಿನಲ್ಲಿ, ಕೈಚೀಲದಲ್ಲಿ, ಕಾರಿನಲ್ಲಿ ಹೊತ್ತೊಯ್ಯುತ್ತಿರುತ್ತೀರಿ. ಸಹೋದ್ಯೋಗಿ ಅಥವಾ ಸಹಧರ್ಮಿಣಿ ಇಲ್ಲವೆ ಪ್ರಿಯತಮೆಯನ್ನು ಮೆಚ್ಚಿಸುಲೋಸುಗ ಮತ್ತೊಂದು ‘ವಾಸನೆ ಮೀಟರ್’ ಅನ್ನು ಕೊಂಡೊಯ್ಯುವುದು ತ್ರಾಸದಾಯಕ. ಈ ಕಾರಣದಿಂದ ನಿಮ್ಮ ನಿತ್ಯ ಬಳಕೆಯ ಯಾವುದಾದರೂ ಒಂದು ಸಾಧನದಲ್ಲಿ ದುರ್ವಾಸನಾ ವಿಶ್ಲೇಷಕವನ್ನು ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗಂತೂ ಮೊಬೈಲ್ ಫೋನ್‍ಗಳು ಬಹುತೇಕ ಕೆಲಸಗಳಿಗೆ ಬಳಕೆಯಾಗುತ್ತಿವೆ. ಉದಾಹರಣೆಗೆ ಸಂಗೀತ ಸುಧೆಯನ್ನು ನೀಡುವ, ಸುದ್ದಿ-ಮಾಹಿತಿ ಹಂಚುವ, ರೇಡಿಯೊ-ಟೀವಿ ಗಳನ್ನು ಬಿತ್ತರಿಸುವ, ಇಂಟರ್‌ನೆಟ್ ಸೌಕರ್ಯ ನೀಡುವ, ಜೀಪೀಎಸ್ ವ್ಯವಸ್ಥೆ ಅಳವಡಿಸಬಲ್ಲ, ಧ್ವನಿ-ಚಿತ್ರ-ಚಲನಚಿತ್ರ ದಾಖಲಿಸಬಲ್ಲ, ಟಾರ್ಚ್‍ನ ಕೆಲಸ ಮಾಡಬಲ್ಲ, ಕಂಪ್ಯೂಟರ್‌ಗೆ ಸಾಟಿಯಾಗಬಲ್ಲ ...... ಕೆಲಸಗಳನ್ನು ಮೊಬೈಲ್ ಫೋನ್‍ಗಳು ಇಂದು ನಿರ್ವಹಿಸಬಲ್ಲವು. ಅಂದ ಮೇಲೆ ಮೊಬೈಲ್ ಫೋನಿಗೆ ದುರ್ವಾಸನೆಯನ್ನು ಗ್ರಹಿಸಿ ಎಚ್ಚರಿಸಬಲ್ಲ ಸೌಕರ್ಯವನ್ನು ನೀಡಬಹುದು.
ಜಪಾನ್ ದೇಶದ ಎಲೆಕ್ಟ್ರಾನಿಕ್ಸ್ ವಸ್ತುಪ್ರದರ್ಶನವೊಂದರಲ್ಲಿ ಕಳೆದ ವಾರವಷ್ಟೇ ಮಿತ್ಸುಬಿಷಿ ಕಂಪನಿ ಅನಾವರಣಗೊಳಿಸಿದ ಹೊಸ ಮೊಬೈಲ್ ಫೋನ್‍ನಲ್ಲಿ ಕೇವಲ ಉಸಿರು ವಿಶ್ಲೇಷಕವಷ್ಟೇ ಅಳವಡಿಕೆಯಾಗಿಲ್ಲ. ನಿಮ್ಮ ಚಟುವಟಿಕೆಯ ಮಟ್ಟ, ನಿಮ್ಮ ನಾಡಿ ಮಿಡಿತ, ಜತೆಗೆ ನಿಮ್ಮ ಬೊಜ್ಜನ್ನು ಪರಿಶೀಲಿಸಿ ಸಲಹೆ ನೀಡಬಲ್ಲ ಸಾಧನಗಳನ್ನು ಜೋಡಿಸಲಾಗಿದೆ. ಅಂಗೈಯಲ್ಲಿ ಇದನ್ನು ಹಿಡಿದಾಗ ಅಲ್ಪ ಶಕ್ತಿಯ ವಿದ್ಯುತ್ ಸಂಕೇತಗಳನ್ನು ದೇಹಕ್ಕೆ ರವಾನಿಸಿ ತನಗೆ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳಬಲ್ಲದು. ದೇಹಕ್ಕೆ ನಿತ್ಯ ತುರುಕಿಕೊಳ್ಳುತ್ತಿರುವ ಕ್ಯಾಲೊರಿಗಳನ್ನು ದಾಖಲಿಸುತ್ತಾ ಹೋದಂತೆ, ಖರ್ಚಾಗುತ್ತಿರುವ ದರದೊಡನೆ ತಾಳೆ ನೋಡಿಕೊಂಡು ಮತ್ತಷ್ಟು ಆಹಾರ ಸೇವಿಸಬೇಕೆ? ಇಲ್ಲ ಇನ್ನೊಂದಷ್ಟು ವ್ಯಾಯಾಮ ಮಾಡಬೇಕೆ? ಎಂದು ಮೊಬೈಲ್ ಫೋನ್ ಸೂಚನೆ ನೀಡಬಲ್ಲದು. ತನ್ನಲ್ಲಿರುವ ಮಾಹಿತಿ ಭಂಡಾರವನ್ನು ಅರಸಿ, ಸರಾಸರಿ ಕ್ಯಾಲೊರಿ ಊಡಿಕೆ/ನೀಡಿಕೆಗಳನ್ನು ನಿರ್ಧರಿಸಿಕೊಂಡು, ಆ ನಿರ್ದಿಷ್ಟ ದಿನದ ನಿಮ್ಮ ಕ್ಯಾಲೊರಿ ಖರ್ಚು/ವೆಚ್ಚಗಳನ್ನು ಹೋಲಿಸಿ ನೋಡಬಲ್ಲದು. ಉಪಹಾರಗೃಹವೊಂದಕ್ಕೆ ಭೇಟಿಯಿತ್ತಾಗ ಅಲ್ಲಿ ಸರ್ವ್ ಮಾಡಿದ ಪೀಡ್ಝಾದಲ್ಲಿ ಒಟ್ಟಾರೆ ಎಷ್ಟು ಕ್ಯಾಲೊರಿಗಳಿರಬಹುದು ಎಂಬ ಮಾಹಿತಿ ನಿಮಗಿರುವುದಿಲ್ಲ. ಫೋನಿನ ನೆರವಿನಿಂದ ಅದರ ಒಂದೆರಡು ಚಿತ್ರಗಳನ್ನು ತೆಗೆದಿಟ್ಟುಕೊಂಡರೆ, ಅದರ ಗಾತ್ರ ಹಾಗೂ ಆಕಾರದ ಮೇಲೆ ಅಂದಾಜು ಕ್ಯಾಲೊರಿಗಳನ್ನು ನಿರ್ಧರಿಸಲು ಪ್ರಯತ್ನಿಸಬಲ್ಲದು. ಫೋನ್ ಬಳಕೆದಾರ ತನ್ನ ಆದ್ಯತೆಗಳನ್ನು ದಾಖಲಿಸಿಟ್ಟುಕೊಂಡಲ್ಲಿ, ‘ಸಾಕಿನ್ನು ಕೆಲಸ, ಇದೀಗ ನಿದ್ದೆ ಮಾಡುವ ಸಮಯ’, ‘ಇಷ್ಟು ಹೊತ್ತು ಹಸಿದಿರಬಾರದು, ಒಂದು ಲೋಟ ಹಣ್ಣಿನ ರಸವನ್ನಾದರೂ ಸೇವಿಸು’, ‘ತಿಂದದ್ದು ಹೆಚ್ಚಾಯಿತು, ಒಂದಷ್ಟು ವ್ಯಾಯಾಮವಿರಲಿ’... ಮುಂತಾದ ಸಂದೇಶಗಳನ್ನು, ನವಿರಾದ ಎಚ್ಚರಿಕೆಗಳನ್ನು ನೀಡಲು ಈ ಫೋನ್ ಸಮರ್ಥ.
ಈ ಫೋನಿನ ಗಿರಾಕಿಗಳು ಎಂಥವರಿರಬಹುದು? ಎಂಬುದರ ಬಗ್ಗೆ ಕಂಪನಿ ಒಂದಷ್ಟು ಕಲ್ಪನೆಗಳನ್ನಿಟ್ಟುಕೊಂಡಿದೆ. ಇದನ್ನು ಇಷ್ಟಪಡುವವರು ಒಂದೊ ಬೊಜ್ಜು ಹೊತ್ತ ಮಧ್ಯವಯಸ್ಕ ಬ್ಯುಸಿನೆಸ್‍ಮನ್ ಅಥವಾ ಡಯಟ್ ಬಗ್ಗೆಯೇ ಸದಾ ಚಿಂತಿಸುವ ಹದಿಹರೆಯದ ಹುಡುಗಿ. ಮೊದಲನೆಯ ಗುಂಪಿನವರಿಗೆ ಇದು ಅತ್ಯಗತ್ಯವಾದರೆ ಎರಡನೆಯ ಗುಂಪಿನವರಿಗೆ ಇದು ಶೋಕಿಯ ಸಾಧನ. ಮೊಬೈಲ್ ಫೋನ್‍ಗಳಲ್ಲಿ ವಿನೂತನ ಸೌಕರ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಜಪಾನ್ ಸದಾ ಮುಂದು. ಸುಂಕದ ಕಟ್ಟೆಗಳಲ್ಲಿ ಮೊಬೈಲ್ ಫೋನ್ ಅಲುಗಾಟದ ಮೂಲಕವೇ ಹಣ ರವಾನಿಸುವ ವ್ಯವಸ್ಥೆ ತಂದ ಕೀರ್ತಿ ಜಪಾನ್ ದೇಶದ್ದು. ಸಿನಿಮಾ ಟಿಕೆಟ್‍ಗಳಿಂದ ಹಿಡಿದು, ಅಂಗಡಿಯಲ್ಲಿನ ದಿನಸಿ ಖರೀದಿಗೂ ಇದೇ ವ್ಯವಸ್ಥೆಯನ್ನು ಯಶಸ್ವಿಯಾಗಿ ಆ ದೇಶದಲ್ಲಿ ಜಾರಿಗೆ ತರಲಾಗಿದೆ. ಜತೆಗೆ ಆಲ್ಕೋಹಾಲ್ ಸೇವನೆಯ ಬಗ್ಗೆ ಖಚಿತ ಪಡಿಸಿಕೊಳ್ಳಲು ಮೊಬೈಲ್ ಫೋನ್‍ಗೆ ಜೋಡಿಸಿದ ಉಸಿರಿನ ವಿಶ್ಲೇಷಕವನ್ನು ಮೊದಲು ಜಾರಿಗೆ ತಂದದ್ದು ಜಪಾನ್. ಚೋದ್ಯದ ವಿಷಯವೆಂದರೆ ಈ ಎಲ್ಲ ಸೌಕರ್ಯಗಳನ್ನು ಮೊಬೈಲ್ ಫೋನ್ ಮೂಲಕ ಜಾರಿಗೆ ತರಲು ಅಮೆರಿಕ ಇನ್ನೂ ತಿಣಕಾಡುತ್ತಿದೆ.
ಇದೀಗ ಮಾರುಕಟ್ಟೆಗೆ ಬರಲಿರುವ ‘ವೆಲ್‍ನೆಸ್ ನ್ಯಾವಿಗೇಟರ್’ ಎಂಬ ಹೆಸರಿನ ಈ ವಿಶ್ಲೇಷಕದಲ್ಲಿ ದುರ್ಗಂಧವನ್ನು ಒಂದರಿಂದ ಹತ್ತರವರೆಗಿನ ಅಳತೆಗೋಲಿನಲ್ಲಿ ಮಾಪನ ಮಾಡಲಾಗುತ್ತದೆ. ಈ ಸಂಖ್ಯೆ ಐದನ್ನು ದಾಟಿದೆಯೆಂದರೆ ಉಸಿರಿನಲ್ಲಿ ದುರ್ಗಂಧದ ಪ್ರಮಾಣ ಹೆಚ್ಚಿದೆ, ಮಿಂಟ್ ಅಥವಾ ಚ್ಯೂಯಿಂಗ್ ಗಮ್ ಬಾಯಿಗೆಸೆದುಕೊಳ್ಳುವ ಅಥವಾ ಮೌತ್‍ವಾಷ್‍ನಿಂದ ಗಂಟಲು ಗಳಗಳ ಮಾಡಿಕೊಳ್ಳುವ ಮುನ್ನ ವೈದ್ಯರನ್ನೊಮ್ಮೆ ಭೇಟಿ ಮಾಡಬೇಕು. ಆರೋಗ್ಯದ ವಿಷಯದಲ್ಲಿ ವಿಪರೀತ ಕಾಳಜಿ ವಹಿಸುವುದು ಎಷ್ಟು ಕೆಟ್ಟದೊ ಅನಾದಾರವೂ ಅಷ್ಟೇ ಕೆಟ್ಟದು. ಉಸಿರು ವಿಶ್ಲೇಷಕ ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡದೆಯೆ ಇರಬಹುದು. ಆದರೆ ಒಂದು ಬಗೆಯ ಮುನ್ನೆಚ್ಚರಿಕೆಯ ಗಂಟೆಯನ್ನು ಅದು ಬಾರಿಸಬಲ್ಲದು ಎನ್ನುತ್ತಾರೆ ಮೊಬೈಲ್ ಫೋನ್ ಕಂಪನಿಯ ವಕ್ತಾರರು. ಜತೆಗೆ ದೈಹಿಕ ಸ್ವಾಸ್ಥ್ಯವನ್ನು ಸುಸ್ಥಿಯಲ್ಲಿಡಲು ಯಾವ ಬಗೆಯ ಗುರಿಮಟ್ಟಗಳನ್ನು ಇಟ್ಟುಕೊಳ್ಳಬೇಕು, ಈ ನಿಟ್ಟಿನಲ್ಲಿ ನಾವು ಸಾಧಿಸಿರುವುದು ಎಷ್ಟು ಎಂಬುದನ್ನು ಆಗಿಂದಾಗ್ಗೆ ತಿಳಿದುಕೊಳ್ಳುತ್ತಿರಬಹುದು.
ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಸದಾ ಮುಂದಿರಬೇಕೆಂಬ ಹಂಬಲದಿಂದ ತಯಾರಕರು ಇಂಥ ‘ಗಿಮಿಕ್’ಗಳನ್ನು ಮಾಡುತ್ತಿರುತ್ತಾರೆ. ಬಳಸುತ್ತಿರುವ ಒಂದು ಫೋನನ್ನು ಒಗೆದು ಮತ್ತೊಂದನ್ನು ಖರೀದಿಸಲು ಬಲವತ್ತರವಾದ ಕಾರಣಗಳು ಬೇಕು. ಮಿತ್ಸುಬಿಷಿ ಕಂಪನಿ ಮಾಡುತ್ತಿರುವುದು ಇಂಥದೇ ಒಂದು ಮಾರಾಟದ ಗಿಮಿಕ್ ಎಂದೇ ಸದ್ಯಕ್ಕೆ ಭಾವಿಸಬಹುದಾದರೂ, ಕೆಲವೊಂದು ಸೌಕರ್ಯಗಳು ವಿನೂತನವೆಂಬುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯ ಜನರೊಂದಿಗೆ ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಹಾಯಕರು, ಹಾಸಿಗೆ ಹಿಡಿದವರು ಸಕಲ ಸೇವೆ ನೀಡುವ ಇಂಥ ಮೊಬೈಲ್ ಫೋನ್‍ಗಳನ್ನು ಇಟ್ಟುಕೊಳ್ಳುವುದು ಉತ್ತಮ. ತಮ್ಮೊಬ್ಬರ ಆರೋಗ್ಯ ಮಾಹಿತಿಯಷ್ಟೇ ಅಲ್ಲ, ಬಂಧು ಮಿತ್ರರಿಗೆ ಸಂಬಂಧಿಸಿದ ಮಾಹಿತಿಗಳನ್ನು ಮೊಬೈಲ್ ಫೋನಿನಲ್ಲಿ ದಾಖಲಿಸಿಟ್ಟುಕೊಳ್ಳಬಹುದು. ಒಬ್ಬರಿಂದೊಬ್ಬರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು.
ಕಂಪ್ಯೂಟರ್ ಸೇರಿದಂತೆ ತಂತ್ರಾಂಶ (ಸಾಫ್ಟ್‍ವೇರ್)ಗಳನ್ನು ಬಳಸುವ ಉಳಿದೆಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೂ ‘ವೈರಸ್’ಗಳ ಬಾಧೆ ತಪ್ಪಿದ್ದಲ್ಲ. ಈ ಭೀತಿ ವಿನೂತನ ಮೊಬೈಲ್ ಫೋನ್‍ಗಳನ್ನೂ ಕಾಡದೆ ಬಿಡದು. ಇಂಥ ಸಂದರ್ಭಗಳಲ್ಲಿ ದಾಖಲಾದ ಮಾಹಿತಿ ತಪ್ಪಾಗಿ ತೋರಿದರೆ, ಅನಗತ್ಯ ಭೀತಿ ಉಂಟಾಗುವುದು ಸಹಜ. ಸುರಕ್ಷಾ ವ್ಯವಸ್ಥೆ ಎಷ್ಟೇ ಪ್ರಬಲವಾಗಿರಲಿ, ವೈರಸ್ ಸೋಂಕಿನಿಂದ ಬಿಡುಗಡೆಯೆಂಬುದಿಲ್ಲ. ಜತೆಗೆ ವೈರಸ್‍ನಿಂದಾಗಿ ನೀವು ಗೌಪ್ಯವೆಂದು ಕಾಪಾಡಿಕೊಂಡಿದ್ದ ಆರೋಗ್ಯ ಮಾಹಿತಿ ಮತ್ತೊಂದು ಫೋನಿಗೆ ರವಾನೆಯಾಗಿಬಿಡಬಹುದು. ಈ ಬಗೆಯ ಸಮಸ್ಯೆಗಳನ್ನು ನಿವಾರಿಸುವತ್ತ ಮಿತ್ಸುಬಿಷಿ ಕೆಲಸ ಮಾಡುತ್ತಿದೆ.
ವಿನೂತನ ಮೊಬೈಲ್ ಫೋನ್‍ನ ಬಗ್ಗೆ ಟೀಕೆಗಳದೆಂಥದೇ ಇರಲಿ, ಸದಾ ನಮ್ಮೊಂದಿಗೆ ಕೊಂಡೊಯ್ಯಬಹುದಾದ ಏಕೈಕ ಎಲೆಕ್ಟ್ರಾನಿಕ್ ಸಾಧನ ಇದೊಂದೇ. ಹೀಗಾಗಿ ಯಾವುದೇ ಸರ್ವವ್ಯಾಪಿ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕೆಂದಿದ್ದರೆ, ಮೊಬೈಲ್ ಫೋನ್ ಅತ್ಯಂತ ಸೂಕ್ತ ಮಾಧ್ಯಮ. ಜಠರ ಅಥವಾ ಪಿತ್ತಕೋಶ ಸರಿಯಾಗಿದೆಯೊ ಇಲ್ಲ ಕರುಳಿನ ಕಾರ್ಯದಲ್ಲಿ ವ್ಯತ್ಯಯವಾಗಿದೆಯೊ ಎಂಬುದನ್ನು ಸಣ್ಣ ಪುಟ್ಟ ಸಾಧನಗಳ ಮೂಲಕ ಸಾಮಾನ್ಯ ಜನರು ತಪಾಸಣೆ ಮಾಡಿಕೊಳ್ಳಬೇಕಿಲ್ಲ. ಆದರೆ ಸದಾ ನೆಗಡಿ ಅಥವಾ ಗಂಟಲು ಕೆರೆತವಿದ್ದು ಅದರಿಂದಾಗಿ ಬಾಯಿ ದುರ್ವಾಸನೆ ಬೀರುತ್ತಿದ್ದೂ ಸ್ವತಃ ಮನವರಿಕೆ ಮಾಡಿಕೊಳ್ಳಲಾಗದ ಸಂದರ್ಭಗಳಲ್ಲಿ ಇಂಥ ಮೊಬೈಲ್ ಫೋನ್ ಅಗತ್ಯವಾಗುತ್ತದೆ. ಹೆಂಡತಿ ಅಥವಾ ಪ್ರಿಯತಮೆ ನಿಮ್ಮ ಬಾಯಿಯಿಂದ ಗಬ್ಬುನಾತ ಹೊರಬರುತ್ತಿದೆ ಎಂದು ಆಕ್ಷೇಪವೆತ್ತುವ ಮುನ್ನವೇ ವೈದ್ಯರ ಮುಂದೆ ನಿಮ್ಮ ಬಾಯಿ ಬಿಡಬಹುದು. ಅವರಿಗೆ ಕಾಣಿಸಿಕೊಳ್ಳಬಲ್ಲ ಬ್ರಹ್ಮಾಂಡ ಅದ್ಯಾವುದೇ ಇದ್ದರೂ ಚಿಂತಿಸಬೇಕಿಲ್ಲ. ಮೂಗು ಮುಚ್ಚಿಕೊಂಡಾದರೂ ಒಂದಷ್ಟು ಔಷಧ ಸೇವನೆಗೆ ಸಲಹೆ ನೀಡಬೇಕಾದ ಕರ್ಮ ಅವರದು!
(ಕೃಪೆ: ವಿಜಯ ಕರ್ನಾಟಕ; 15-10-2007)

1 comment:

Anonymous said...

ಪ್ರೀತಿಯ ಸುಧೀ೦ಧ್ರರವರೆ ಹೊಸತು ಬರೆಯಿರಿ