Monday, October 22, 2007

ನೀರಿಗೂ ಅಂಟು - ಚ್ಯೂಯಿಂಗ್ ಗಮ್‍ನ ಹೊಸ ನೆಂಟು

ಸದ್ಯಕ್ಕೆ ಎಲ್ಲೆಡೆ ಒಂದೇ ಮಾತು. ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ನಡುವಿನ ನಂಟು ಹರಿದುಹೋಗಿದೆ. ವಿಭಿನ್ನ ಧ್ಯೇಯ, ತತ್ವ, ಆದರ್ಶ ಹಾಗೂ ನಾಯಕತ್ವದ ಎರಡು ಪಕ್ಷಗಳ ನಡುವಿನ ನಂಟು ಉಳಿಯಬೇಕಿದ್ದಿದ್ದರೆ, ಅವೆರಡನ್ನೂ ಬೆಸೆಯುವ ಅಂಟು ಶಕ್ತಿಶಾಲಿಯಾಗಿರಬೇಕಿತ್ತು. ಆದರೆ ತತ್ವಾದರ್ಶಗಳಿಗೇ ಅಂಟಿಕೊಂಡಿದ್ದರೆ ರಾಜಕೀಯ ಪಕ್ಷಗಳಿಗೆ ಅಧಿಕಾರದ ಕುರ್ಚಿಯ ನಂಟು ಎಂದಿಗೂ ಸಿಗುವುದಿಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಹೊರತಾಗಿ ಮತ್ಯಾವುದೇ ಸಾಮಾನ್ಯ ಅಂಶಗಳಿಲ್ಲದ ಪಕ್ಷಗಳು ಅಧಿಕಾರಕ್ಕೆ ಅಂಟಿಕೊಳ್ಳುವುದು, ನಂತರ ಪರಸ್ಪರ ದೂರಾಗುವುದು-ದೂರುವುದು ಭಾರತಕ್ಕೆ ಹೊಸತೇನಲ್ಲ. ಇಲ್ಲಿ ರಾಜಕೀಯ ಪಕ್ಷಗಳಿಗೆ ಜನಾದೇಶವೆಂಬುದು ಕೇವಲ ಅಗಿದಗಿದು ಉಗಿದೆಸೆಯಬಲ್ಲ ಚ್ಯೂಯಿಂಗ್ ಗಮ್. ಚ್ಯೂಯಿಂಗ್ ಅಗೆದವರಿಗೆ ಅಂಟು ಎಂದಿಗೂ ಮೆತ್ತಿಕೊಳ್ಳದ ಕಾರಣ ಸಮಸ್ಯೆಯಿಲ್ಲ!
ನಮಗೆ ಸಮಸ್ಯೆಗಳು ಚ್ಯೂಯಿಂಗ್ ಗಮ್‍ನಂತೆ ಕಾಡಿದರೆ ಅನೇಕ ಪ್ರಜ್ಞಾವಂತ ರಾಷ್ಟ್ರಗಳಿಗೆ ಚ್ಯೂಯಿಂಗ್ ಗಮ್ ನಿರ್ವಹಣೆಯೇ ಸಮಸ್ಯೆಯಾಗಿಬಿಟ್ಟಿದೆ. ಅತಿ ಹೆಚ್ಚಿನ ಜನಸಂಖ್ಯೆಯ ಸರ್ವಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದಲ್ಲಿ ‘ಉಗಿಯುವುದು’ ಆಜನ್ಮ ಸಿದ್ಧ ಹಕ್ಕು. ಯಾರನ್ನು, ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಉಗಿದು ಉಪ್ಪು ಹಾಕಲು ನಮಗೆ ಸ್ವಾತಂತ್ರ್ಯವಿದೆ. ಏನಿಲ್ಲದಿದ್ದರೂ ಎಂಜಲು ಅಥವಾ ಬಾಯ್ದಂಬುಲ ಇಲ್ಲವೆ ಚ್ಯೂಯಿಂಗ್ ಗಮ್ ಅನ್ನು ಎಲ್ಲೆಂದರಲ್ಲಿ ಉಗಿಯಲು ನಮಗೆ ಯಾವ ಎಗ್ಗೂ ಇಲ್ಲ. ಆದರೆ ಎಲ್ಲೆಂದರೆಲ್ಲಿ ಚ್ಯೂಯಿಂಗ್ ಗಮ್ ಉಗಿಯುವ ವಿಷಯದಲ್ಲಿ ಪಾಶ್ಚಾತ್ಯ ದೇಶಗಳಲ್ಲಿನ ನಾಗರೀಕರೂ ಸಹಾ ನಮ್ಮೊಂದಿಗೆ ಸ್ಫರ್ಧೆಯಲ್ಲಿದ್ದಾರೆ. ಬ್ರಿಟನ್ನಿನ ಪಕ್ಕದ ಪುಟ್ಟ ರಾಷ್ಟ್ರ ಐರ್‌ಲೆಂಡ್ ಗೊತ್ತಲ್ಲ? ಈ ವರ್ಷದ ಜುಲೈ ತಿಂಗಳಲ್ಲಿ ಅಲ್ಲಿನ ಸರಕಾರದ ಪರಿಸರ ಇಲಾಖೆಯು ತಂತ್ರಜ್ಞಾನ ಅಭಿವೃದ್ಧಿಗಾಗಿ ಸ್ಫರ್ಧೆಯೊಂದನ್ನು ಘೋಷಿಸಿತ್ತು. ‘ಅಂಟಿಕೊಳ್ಳದ ಚ್ಯೂಯಿಂಗ್ ಗಮ್’ ಅನ್ನು ರೂಪಿಸುವ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯ ಒಂದು ದಶಲಕ್ಷ ಬ್ರಿಟನ್ ಪೌಂಡ್ (ಅಂದರೆ ಸುಮಾರು ಎಂಟು ಕೋಟಿ ರೂಪಾಯಿಗಳು) ಬಹುಮಾನವನ್ನು ಗೆಲ್ಲಬಹುದೆಂಬ ಆಮಿಷವನ್ನು ಪರಿಸರ ಖಾತೆಯ ಮಂತ್ರಿ ಒಡ್ಡಿದ್ದರು. ಅಷ್ಟೇ ಅಲ್ಲ, ‘ಚ್ಯೂಯಿಂಗ್ ಗಮ್ ತ್ಯಾಜ್ಯ’ ನಿವಾರಣೆಗೆ ಸೂಕ್ತ ಪರಿಹಾರ ಕಂಡುಹಿಡಿಯಬಲ್ಲ ಖಾಸಗಿ ಉದ್ದಿಮೆಗೆ ಎರಡು ದಶಲಕ್ಷ ಬ್ರಿಟನ್ ಪೌಂಡ್ ಬಹುಮಾನವನ್ನು ಸಹಾ ಅವರು ಘೋಷಿಸಿದ್ದರು. ಈ ವಿಷಯ ಓದಿದ ತಕ್ಷಣ ಐರ್‌ಲೆಂಡಿನಲ್ಲಿ ಮಾತ್ರ ಚ್ಯೂಯಿಂಗ್ ಗಮ್ ಜಗಿಯುವವರು ಹೆಚ್ಚಿದ್ದಾರೆಂದು ಭಾವಿಸಬೇಕಿಲ್ಲ. ಚಟಕ್ಕಾಗಿ ಚ್ಯೂಯಿಂಗ್ ಗಮ್ ಅಗಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಎಷ್ಟೆಂದರೆ ಜಗತ್ತಿನಾದ್ಯಂತ ಪ್ರತಿ ವರ್ಷ ಉತ್ಪಾದನೆಯಾಗುವ ಚ್ಯೂಯಿಂಗ್ ಗಮ್‍ನ ಪ್ರಮಾಣ ಆರು ಲಕ್ಷ ಟನ್‍ಗಳು. ತಮ್ಮ ನಾಲಿಗೆ ಹಲ್ಲುಗಳಿಗೆ ಅಂಟಿಸಿಕೊಳ್ಳದೆಯೆ ‘ಚಟಕ್ಕೆಂದೊ’ ಅಥವಾ ‘ಹಲ್ಲು ದವಡೆಗಳಿಗೆ ವ್ಯಾಯಾಮಕ್ಕೆಂದೊ’ ಅಥವಾ ‘ತಮ್ಮ ದಂತಪಂಕ್ತಿಗಳನ್ನು ಫಳಫಳನೆ ಹೊಳೆಯುವಂತೆ ಮಾಡಲೆಂದೊ’ ಜನ ಹೆಚ್ಚು ಹೆಚ್ಚಾಗಿ ಚ್ಯೂಯಿಂಗ್ ಗಮ್ ಅಗೆಯುತ್ತಿದ್ದಾರೆ. ಬ್ರಿಟನ್ನಿನ ವೆಸ್ಟ್‍ಮಿನ್‍ಸ್ಟರ್ ನಗರಪಾಲಿಕೆಯೊಂದೇ ವರ್ಷವೊಂದಕ್ಕೆ ತೊಂಬತ್ತೈದು ಸಹಸ್ರ ಪೌಂಡ್ (ಸುಮಾರು ಎಪ್ಪತ್ತಾರು ಲಕ್ಷ ರೂಪಾಯಿಗಳು) ಹಣವನ್ನು ಚ್ಯೂಯಿಂಗ್ ಗಮ್ ತ್ಯಾಜ್ಯ ವಿಲೇವಾರಿಗೆಂದೇ ವ್ಯಯ ಮಾಡುತ್ತಿದೆ. ಕಸ ಎಸೆಯುವುದಿರಲಿ ಸಾರ್ವಜನಿಕವಾಗಿ ಉಗಿಯಲೂ ಸ್ವಾತಂತ್ರ್ಯವಿರದ ದೇಶವಾದ ಸಿಂಗಾಪುರದ ಹೊರತಾಗಿ ಬಹುತೇಕ ಮುಂದುವರಿದ ದೇಶಗಳಲ್ಲಿ ಚ್ಯೂಯಿಂಗ್ ಗಮ್‍ನದು ಅತಿ ದೊಡ್ಡ ಸಮಸ್ಯೆ. ಆರೋಗ್ಯಕ್ಕೆ ಹಾನಿಕರವೆಂಬ ನೆಪದಲ್ಲಿ ನಿಷೇಧಾಜ್ಞೆ ಹೊರಡಿಸುವಂತಿಲ್ಲ. ಎಷ್ಟೇ ಬುದ್ಧಿವಾದ ಹೇಳಿದರೂ, ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರೂ ಸಾಮಾನ್ಯ ಜನರಷ್ಟೇ ಅಲ್ಲ, ಸೆಲೆಬ್ರಿಟಿಗಳು, ಸಮಾಜದ ಗಣ್ಯರು ಚ್ಯೂಯಿಂಗ್ ಗಮ್ ಚಟಕ್ಕೆ ಅಂಟಿಕೊಂಡುಬಿಟ್ಟಿದ್ದಾರೆ.
ಚ್ಯೂಯಿಂಗ್ ಗಮ್ ಅನ್ನು ತಯಾರಿಸಲು ಮೊದಲು ಬಳಕೆಯಾಗುತ್ತಿದ್ದ ಸಾಮಗ್ರಿಯ ಹೆಸರು ’ಚಿಕಲ್’. ಬಹುಶಃ ನಿಮ್ಮ ನೆನಪಿನಲ್ಲಿರಬಹುದು, ನಮ್ಮ ದೇಶಕ್ಕೆ ಮೊದಲು ಬಂದ ಚ್ಯೂಯಿಂಗ್ ಗಮ್‍ನ ಹೆಸರು ‘ಚಿಕಲೆಟ್ಸ್’ (ಅಂದರೆ ಪುಟಾಣಿ ಚಿಕಲ್‍ಗಳು) ಎಂದಾಗಿತ್ತು. ಪ್ರತಿಶತ ಹದಿನೈದು ಭಾಗ ರಬ್ಬರ್ ಹಾಗೂ ಪ್ರತಿಶತ ಮೂವತ್ತೆಂಟು ಭಾಗ ಅಂಟು ಸೇರಿಕೊಂಡಿದ್ದ ಈ ’ಚಿಕಲ್’ನ ರಾಸಾಯನಿಕ ಹೆಸರು ‘ಪಾಲಿಟೆರ್‌ಪೀನ್’. ಆದರೆ ಇಂದಿನ ’ಗಮ್’ಗಳನ್ನು ಕೃತಕ ಲ್ಯಾಟೆಕ್ಸ್‍ಗಳಿಂದ (ರಬ್ಬರ್) ರೂಪಿಸಲಾಗುತ್ತಿದೆ. ಎಲ್ಲ ಹವಾಮಾನಗಳಲ್ಲೂ ತಮ್ಮ ಗುಣ ವೈಶಿಷ್ಟ್ಯಗಳನ್ನು ಕೃತಕ ಲ್ಯಾಟೆಕ್ಸ್‍ಗಳು ಬಹುಕಾಲ ಉಳಿಸಿಕೊಳ್ಳಬಲ್ಲವು. ಅಂಟಿಕೊಳ್ಳುವ ಗುಣ ಹೆಚ್ಚಿರುವುದರ ಜತೆಗೆ ರಾಸಾಯನಿಕಗಳ ಧಾಳಿಗೆ ಕರಗಿಹೋಗದ ಗುಣ ಇದಕ್ಕಿದೆ. ಈ ಲ್ಯಾಟೆಕ್ಸ್‍ಗೆ ಮೆದುಕಾರಕಗಳು, ಸ್ವಾದಕಾರಕಗಳು, ಸುವಾಸನಾವಸ್ತುಗಳು ಹಾಗೂ ಸಿಹಿಯನ್ನು ಬೆರೆಸಿ ಚ್ಯೂಯಿಂಗ್ ಗಮ್ ಅನ್ನು ಸಿದ್ಧಗೊಳಿಸಲಾಗುತ್ತದೆ. ಚ್ಯೂಯಿಂಗ್ ಗಮ್ ಎಂಥ ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದನ್ನು ಬ್ರಿಟನ್ನಿನ ಅತಿ ದೊಡ್ಡ ಚ್ಯೂಯಿಂಗ್ ತಯಾರಿಕಾ ಕಂಪನಿ ‘ರಿವಾಲಿಮರ್’ನ ಮುಖ್ಯಸ್ಥರಾದ ರೋಜರ್ ಪೆಟ್‍ಮಾನ್ ಅವರ ಬಾಯಿಂದಲೇ ಕೇಳಬೇಕು. ಜಗಿದ ನಂತರ ಉಗಿಯುವ ಚ್ಯೂಯಿಂಗ್ ಗಮ್‍ನ ತುಣಕುಗಳ ಬಹುಪಾಲು ಆಶ್ರಯ ಪಡೆಯುವುದು ರಸ್ತೆ ಬದಿ ಹಾಗೂ ಪಾದಚಾರಿಗಳ ಹಾದಿಯಲ್ಲಿ. ಇಂಥ ಅಂಟಿನುಂಡೆಗಳನ್ನು ಸಂಗ್ರಹಿಸಲು ಬೇರೆ ಯಾವುದೇ ಮಾರ್ಗಗಳಿಲ್ಲ. ಲಂಡನ್ ನಗರದಲ್ಲಿನ ಸಂಚಾರ ವ್ಯವಸ್ಥೆಗೆ ಮೆಟ್ರೊ (ಅಂಡರ್‌ಗ್ರೌಂಡ್) ರೈಲಿನ ಕೊಡುಗೆ ಅತಿ ದೊಡ್ಡದು. ಮೆಟ್ರೋ ರೈಲಿನ ಬೋಗಿಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಚ್ಯೂಯಿಂಗ್ ಗಮ್‍ನ ಹಾವಳಿ ಹೆಚ್ಚಾಗುತ್ತಿದೆ. ಈ ‘ಅಂಟು ಕಸ’ವನ್ನು ತೆಗೆಯಲೆಂದೇ ರೈಲು ಕಂಪನಿ ವರ್ಷವೊಂದಕ್ಕೆ ಖರ್ಚು ಮಾಡುತ್ತಿರುವ ಹಣ ಎರಡು ದಶಲಕ್ಷ ಪೌಂಡ್‍ಗಳು (ಅಂದರೆ ಹದಿನಾರು ಕೋಟಿ ರೂಪಾಯಿಗಳು). ಸಿಂಗಾಪುರದಂತೆ ಚ್ಯೂಯಿಂಗ್ ಜಗಿಯುವುದನ್ನು ನಿಷೇಧ ಮಾಡಲು ಸಾಧ್ಯವಾಗದ ಕಾರಣ ಬ್ರಿಟನ್ ಹಾಗೂ ಐರ್‌ಲೆಂಡ್ ದೇಶಗಳು ‘ಅಂಟದ’ ಚ್ಯೂಯಿಂಗ್ ಗಮ್ ತಯಾರಿಕೆ ಸಾಧ್ಯವೆ? ಎಂದು ಪರಿಶೀಲಿಸುತ್ತಿವೆ.
ನಾಲಿಗೆ, ಹಲ್ಲುಗಳಿಗೆ ಅಂಟದ ಚ್ಯೂಯಿಂಗ್ ಗಮ್ ಕೈ, ಕಾಲಿಗೆ, ರಸ್ತೆ ಬದೆಗೆ, ಕುರ್ಚಿಗೆ ಹೀಗೆ ಎಲ್ಲೆಂದರಲ್ಲಿಗೆ ಅಂಟಿಕೊಳ್ಳುವುದು ಹೇಗೆ? ಮತ್ತು ಏಕೆ? ಎಂಬುದು ನಮ್ಮನ್ನು ಕಾಡುವ ಪ್ರಶ್ನೆಗಳು. ಪೆಟ್ರೋಲಿಯಂ ವಸ್ತುಗಳಿಂದ ಕೃತಕವಾಗಿ ರೂಪಿಸಿದ ಪಾಲಿಮರ್‌ಗಳು, ಸ್ವಾಭಾವಿಕವಾಗಿ ಲಭ್ಯವಿರುವ ರಬ್ಬರ್, ಅಂಟುಗಳು ಹಾಗೂ ಮೇಣಗಳ ಮಿಶ್ರಣವಾದ ಚ್ಯೂಯಿಂಗ್ ಗಮ್ ಸ್ವಭಾವತಃ ‘ಜಲದ್ವೇಷಿ’ ಅಂದರೆ ನೀರಿಗೆ ಅಂಟಿಕೊಳ್ಳದ ಗುಣ ಹೊಂದಿರುತ್ತದೆ. ಬಾಯಿಯಲ್ಲಿ ಸದಾ ಜೊಲ್ಲಿನ ರಸವಿರುವುದರಿಂದ ಚ್ಯೂಯಿಂಗ್ ಗಮ್ ನಾಲಿಗೆ ಹಾಗೂ ಹಲ್ಲುಗಳಿಗೆ ಅಂಟಿಕೊಳ್ಳುವುದಿಲ್ಲ. ನೀರನ್ನು ಕಂಡರೆ ಚ್ಯೂಯಿಂಗ್ ಗಮ್‍ಗೆ ಆಗದಿದ್ದರೂ ಎಣ್ಣೆಯ ಬಗ್ಗೆ ಅಪಾರ ಪ್ರೇಮ. ಎಣ್ಣೆಯ ಪಸೆಯಿದ್ದಲ್ಲಿ ತಕ್ಷಣವೇ ಅಂಟಿಕೊಳ್ಳುವ ಗುಣ ಇದರದ್ದು. ನಮ್ಮ ಮೈ, ಕೈ, ಕಾಲು ಸೇರಿದಂತೆ ರಸ್ತೆ ಬದಿ, ರೈಲಿನ ಸರಳು, ಕುರ್ಚಿ .... ಹೀಗೆ ಎಲ್ಲ ಸ್ಥಳಗಳಲ್ಲೂ ಎಣ್ಣೆ, ಗ್ರೀಸ್ ಮುಂತಾದ ತೈಲಾಧಾರಿತ ಲೇಪನಗಳಿದ್ದೇ ಇರುತ್ತವೆ. ಹೀಗಾಗಿ ಬಾಯಿಂದ ಹೊರಬಿದ್ದ ಚ್ಯೂಯಿಂಗ್ ಗಮ್‍ನ ತುಣಕಿಗೆ ಅಂಟಿಕೊಳ್ಳಲು ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಹಾಗಿದ್ದರೆ ಇದಕ್ಕೇನು ಉಪಾಯ? ಅಂಟಿಕೊಳ್ಳುವ ಗುಣ ಕಡಿಮೆಯಾಗಿಸುವ ಹಾಗೂ ಮಣ್ಣಿನೊಂದಿಗೆ ಬೆರೆತು ಕೊಳೆಯಬಲ್ಲ ಗುಣವನ್ನು ಚ್ಯೂಯಿಂಗ್ ಗಮ್‍ಗೆ ಅಂಟಿಸಿದರೆ ಸಮಸ್ಯೆ ಪರಿಹಾರವಾದಂತೆ. ಆದರೆ ಈ ಗುಣ ಲಕ್ಷಣಗಳ ಬದಲಾವಣೆಗಳನ್ನು ಮಾಡ ಹೊರಟರೆ ಚ್ಯೂಯಿಂಗ್ ಗಮ್‍ನ ರಾಸಾಯನಿಕ ಬಂಧವನ್ನೇ ಬದಲಾಯಿಸಬೇಕು. ಇಲ್ಲಿ ರುಚಿಯನ್ನು ಹಿಡಿದಿಟ್ಟುಕೊಳ್ಳುವ, ಎಷ್ಟು ಹೊತ್ತಾದರೂ ಅಗೆಯಬಲ್ಲ, ಬಿಕರಿಯಾಗುವ ಮುನ್ನ ಹಾಗೂ ಹೆಚ್ಚು ಕಾಲ ಸುರಕ್ಷವಾಗಿರಬಲ್ಲ ಗುಣಗಳನ್ನು ಉಳಿಸಿಕೊಳ್ಳುವುದು ಸಹಾ ಮುಖ್ಯವಾಗುತ್ತದೆ. ಮೂರು ವರ್ಷಗಳ ಹಿಂದೆ ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕೃತಕ ಪಾಲಿಮರ್‌ಗಳ ಬದಲು ಮುಸುಕಿನ ಜೋಳದ ಪ್ರೊಟೀನ್ ಅನ್ನು ಬಳಸುವ ಬಗ್ಗೆ ಪ್ರಯೋಗಗಳು ನಡೆದಿದ್ದವು. ಪಾಲಿಮರ್‌ಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ, ಆದರೆ ಮುಸುಕಿನ ಜೋಳದ ಪ್ರೊಟೀನ್ ದೇಹದಲ್ಲೇ ಜೀರ್ಣವಾಗುತ್ತವೆ, ಇಲ್ಲ ಮಣ್ಣಿನೊಂಡಿಗೆ ಬೆರೆತು ಕರಗಿ ಹೋಗುತ್ತವೆ. ಈ ಸಂಶೋಧನೆಗೆ ಹೆಚ್ಚಿನ ಪ್ರಚಾರ ಸಿಗಲಿಲ್ಲ, ಕೆಲಸ ಮತ್ತೆ ಮುಂದುವರಿಯಲಿಲ್ಲ. ಚ್ಯೂಯಿಂಗ್ ಗಮ್ ತಯಾರಿಕೆಯಲ್ಲಿ ಜಗದ್ವಿಖ್ಯಾತ ಕಂಪನಿಯಾದ ‘ರಿಗ್ಲೆ’ ಪರಿಸರ ಸ್ನೇಹಿ ಚ್ಯೂಯಿಂಗ್ ಗಮ್ ಅನ್ನು ರೂಪಿಸುತ್ತಿರುವ ಸುದ್ದಿ ಹೊರಬಂದಿದೆ. ಇಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧನೆಗೆ ಇದು ಬಹಳ ಹತ್ತಿರದ್ದು ಎನ್ನಲಾಗಿದೆ. ಒಂದು ಕೋಟಿ ಅಮೆರಿಕನ್ ಡಾಲರ್ ಹಣ (ಸುಮಾರು ನಲವತ್ತು ಕೋಟಿ ರೂಪಾಯಿಗಳು) ಹೂಡಿಕೆಯೊಂದಿಗೆ ಪ್ರಯೋಗಗಳು ಗೌಪ್ಯವಾಗಿ ಮುಂದೆ ಸಾಗಿವೆ.
ಬಾಯಲ್ಲಿದ್ದಾಗ ಜಲದ್ವೇಷಿಯಾಗಿದ್ದು ಉಗಿದೆಸೆದ ನಂತರ ಜಲಪ್ರೇಮಿಯಾಗಿಬಿಡುವ ಹಾಗೆ ಚ್ಯೂಯಿಂಗ್ ಗಮ್ ಅನ್ನು ಮಾಡಿದರೆ ತೊಂದರೆ ಕಡಿಮೆಯಾಗುತ್ತದೆ. ಅಂದರೆ ಹೊರಗೆ ಬಿದ್ದ ಚ್ಯೂಯಿಂಗ್ ಗಮ್ ನೀರಿದ್ದ ಸ್ಥಳಕ್ಕೆ ಮಾತ್ರ ಮೆತ್ತಿಕೊಳ್ಳಬೇಕು. ನೀರಿಗೆ ಮೆತ್ತಿಕೊಳ್ಳುವುದೆಂದರೆ ತೈಲದಂಶವನ್ನು ತೊಡೆದು ನೀರಿನೊಂದಿಗೆ ಹೊರಬರಬೇಕು. ಅದು ಬಿದ್ದ ಸ್ಥಳದಲ್ಲಿ ನೀರು ಹುಯ್ದರೆ ಕಿತ್ತು ಬರಬೇಕು. ಉಗಿಯುವವರನ್ನು ನಿಯಂತ್ರಿಸಲಂತೂ ಆಗುವುದಿಲ್ಲ, ಕನಿಷ್ಠ ಚ್ಯೂಯಿಂಗ್ ಗಮ್ ಬಿದ್ದೆಡೆ ನೀರಿನ ಮೂಲಕ ಶುದ್ಧಗೊಳಿಸಲು ಸಾಧ್ಯವಾಗಬೇಕು. ಹೀಗೆ ಆಲೋಚಿಸಿರುವ ರಿವಾಲಿಮರ್ ಕಂಪನಿಯು ಹೊಸ ಮಿಶ್ರಣವೊಂದನ್ನು ಚ್ಯೂಯಿಂಗ್ ಗಮ್ ತಯಾರಿಕೆಗೆಂದು ರೂಪಿಸಿದೆ. ವಸ್ತುವೊಂದಕ್ಕೆ ಅಂಟಿಕೊಂಡ ಕ್ಷಣವೇ ಒಳಗಿನಿಂದ ದ್ರವ ಸ್ರವಿಸಲು ಆರಂಭಿಸಿ ಅಂಟನ್ನು ಬೇರ್ಪಡಿಸಲು ಆರಂಭಿಸುತ್ತದೆ. ನೀರು ಹೊಯ್ದ ಕೂಡಲೇ ಉಳಿದ ಕಸದೊಡನೆ ಕೊಚ್ಚಿ ಹೋಗುತ್ತದೆ. ಮೊದಲ ಹಂತದ ಪರೀಕ್ಷೆಗಳಲ್ಲಿ ನೆಲಕ್ಕೆ ಬಿದ್ದ ಇಪ್ಪತ್ನಾಲ್ಕು ಗಂಟೆಗಳ ನಂತರವೂ ನೀರಿನೊಂದಿಗೆ ಶುದ್ಧಿಗೊಳಿಸಲು ಸಾಧ್ಯವಾಗಿತ್ತು. ಎಂಟು ವಾರಗಳ ಹಿಂದೆ ಅಂಟಿಕೊಂಡಿದ್ದ ಚ್ಯೂಯಿಂಗ್ ಗಮ್‍ನ ತುಣಕುಗಳನ್ನೂ ಸಹಾ ಕೇವಲ ನೀರಿನ ಸಿಂಪರಣೆಯಿಂದ ತೆಗೆಯಲು ಸಾಧ್ಯವಾಗಿದೆ.
ಹಾಗಿದ್ದರೆ ಚ್ಯೂಯಿಂಗ್ ಅಗಿಯುವವರಿಗೆ ರಾಸಾಯನಿಕ ಬದಲಾವಣೆಗಳಿಂದ ರುಚಿ ಕೆಟ್ಟು ಹೋಗಿರಬಹುದೆ? ಈ ಪ್ರಶ್ನೆಗೂ ರಿವಾಲಿಮರ್ ಕಂಪನಿ ಉತ್ತರ ಕಂಡು ಕೊಂಡಿದೆ. ತನ್ನ ಮೂಲ ವಸ್ತುವಿನಲ್ಲಾಗಿರುವ ಬದಲಾವಣೆಗಳನ್ನು ತಿಳಿಸದೆಯೆ ಸಾಮಾನ್ಯ ಚ್ಯೂಯಿಂಗ್ ಗಮ್‍ನೊಂದಿಗೆ ಹೊಸ ವಸ್ತುವಿನಿಂದ ರೂಪಿಸಿದ ಚ್ಯೂಯಿಂಗ್ ಗಮ್ ಅನ್ನು ಬೆರೆಸಿ ಮಾರುಕಟ್ಟೆ ಸಂಶೋಧನೆಗಳನ್ನು ಕಂಪನಿ ಕೈಗೊಂಡಿತ್ತು. ಬಹುತೇಕ ಬಳಕೆದಾರರಿಗೆ ಎರಡೂ ಬಗೆಯ ಚ್ಯೂಯಿಂಗ್ ಗಮ್‍ಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಕೆಲವೊಂದು ಸೂಕ್ಷ್ಮಮತಿಗಳು ಮಾತ್ರ ಹೊಸ ಚ್ಯೂಯಿಂಗ್ ಗಮ್ ಹೆಚ್ಚು ಮಿದುವಾಗಿತ್ತು ಎಂದು ನವಿರಾಗಿ ಆಕ್ಷೇಪಿಸಿದ್ದಾರೆ. ಒಳಗಿನ ಜಲಪ್ರೇಮಿ ರಾಸಾಯನಿಕವು ಬಾಯಿಯ ಜೊಲ್ಲಿನೊಂದಿಗೆ ಬೆರೆತಾಗ, ಚ್ಯೂಯಿಂಗ್ ಗಮ್ ಹಿಂದಿಗಿಂತಲೂ ಮಿದುವಾಗಿ ಭಾಸವಾಗಿರಬಹುದು. ‘ರಿವಾಲಿಮರ್’ ಕಂಪನಿಯ ಉತ್ಪನ್ನವು ಇದೀಗ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾ ಪ್ರಾಧಿಕಾರದ ಒಪ್ಪಿಗೆಗೆ ಕಾಯುತ್ತಿದೆ. ಮೂರು ವಿಶಿಷ್ಟ ಸ್ವಾದಗಳೊಂದಿಗೆ ಹೊಸ ಸಾಮಗ್ರಿಯ ಚ್ಯೂಯಿಂಗ್ ಗಮ್ ಅನ್ನು ಬಿಡುಗಡೆ ಮಾಡಲು ರಿವಾಲಿಮರ್ ಸಿದ್ಧವಾಗಿದೆ.
(ಕೃಪೆ: ವಿಜಯ ಕರ್ನಾಟಕ; 08-10-2007)

No comments: