ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನಂಥ ನಗರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ(ಣಿ)ಗಳ ಗಮನ ಸೆಳೆಯಲು ಪ್ರದರ್ಶಿಸಬಹುದಾಗಿದ್ದ ಏಕೈಕ ವಾಹನ ‘ಯೆಝ್ದಿ ರೋಡ್‍ಕಿಂಗ್’. ಮೈಸೂರಿನಲ್ಲಿದ್ದ ‘ಐಡಿಯಲ್ ಜಾವಾ’ ಮೋಟಾರ್‌ಬೈಕ್ ಕಂಪನಿ ಝೆಕಾಸ್ಲೊವಾಕಿಯಾ ದೇಶದ ಸಹಯೋಗದೊಂದಿಗೆ ‘ಯೆಝ್ದಿ’ ಬೈಕ್‍ಗಳನ್ನು ಉತ್ಪಾದಿಸುತ್ತಿತ್ತು. ವಿಪರೀತ ಬೇಡಿಕೆಯಿದ್ದ ‘ರೋಡ್‍ಕಿಂಗ್’ ಮಾಡೆಲ್‍ಗೆ ಅಂದಿನ ದಿನಗಳಲ್ಲಿ ‘ವಿದೇಶಿ ವಿನಿಮಯ - ಅಮೆರಿಕನ್ ಡಾಲರ್’ ನೀಡಬೇಕಿತ್ತೆಂಬ ಗಾಳಿಸುದ್ದಿಯಿತ್ತು. ‘ಯೆಝ್ದಿ’ ಬಿಟ್ಟರೆ ತೂಕದ ವ್ಯಕ್ತಿಗಳಿಗೆಂದೇ ತಯಾರಾಗುತ್ತಿದ್ದ ‘ರಾಯಲ್ ಎನ್‍ಫೀಲ್ಡ್’ ಬೈಕುಗಳಿದ್ದವು. ಮಿಲಿಟರಿಯವರು ಹರಾಜು ಹಾಕುತ್ತಿದ್ದ ಹಳೆಯ ‘ಬಿ.ಎಸ್.ಎ.’ ಬೈಕುಗಳಿದ್ದವು. ಕಡಿಮೆ ಬೆಲೆಯ ‘ರಾಜ್‍ದೂತ್’ ಎಂಬ ಅನಾಕರ್ಷಕ ಬೈಕನ್ನು ಎಸ್ಕಾರ್ಟ್ಸ್ ಕಂಪನಿ ತಯಾರು ಮಾಡುತ್ತಿತ್ತು. ಉಳಿದಂತೆ ‘ವೆಸ್ಪಾ’ ಸಹಯೋಗದ ಬಜಾಜ್ ಸ್ಕೂಟರ್ ಶ್ರೇಣಿ (ಅದರಲ್ಲೂ ‘ಚೇತಕ್’ ಮಾಡಲ್ ಖರೀದಿಸಲು ವರ್ಷಗಟ್ಟಲೆಯ ಮುಂಗಡ ಕಾಯ್ದಿರಿಸುವಿಕೆ ಅಥವಾ ವಿದೇಶಿ ವಿನಿಮಯದ ಪಾವತಿ ಬೇಕಿತ್ತು), ‘ಲ್ಯಾಂಬ್ರೆಟಾ’ ಸಹಯೋಗದ ‘ವಿಜಯ್ ಸೂಪರ್’ ಶ್ರೇಣಿ .... ದ್ವಿಚಕ್ರ ವಾಹನಗಳ ಮಾರುಕಟ್ಟೆ ಸೀಮಿತ. ಮೋಟರೈಸ್ಡ್ ಪೆಡಲ್ಡ್ ವಾಹನವೆಂಬ ಸೈಕಲ್‍ಗಿಂತ ಮೇಲೆ - ಮೋಟಾರ್‌ಬೈಕ್‍ಗಿಂತ ಕಡಿಮೆಯ ‘ಮೋಪೆಡ್’ಗಳು ಆಗಷ್ಟೇ ಬಳಕೆಗೆ ಬರುತ್ತಿದ್ದವು. ‘ಸುವೇಗಾ’, ‘ಲೂನಾ’, ‘ಹೀರೋ’, ಇವುಗಳ ಜತೆಗೂಡಿದ್ದು ಬಹುತೇಕ ಭಾರತೀಯ ಬಿಡಿಭಾಗಗಳಿಂದ ಕೂಡಿದ್ದ ‘ಟೀವಿಎಸ್’ ಮೋಪೆಡ್. ಜಾಗತೀಕರಣ ಹೆಜ್ಜೆಯ ಮೇಲೊಂದು ಹೆಜ್ಜೆಯನ್ನಿಕ್ಕುತಾ ಭಾರತವನ್ನು ಪ್ರವೇಶಿಸಿದಂತೆ ಮೋಟಾರು ವಾಹನಗಳ ತಯಾರಿಕೆಗೆ ವಿದೇಶಿ ಕಂಪನಿಗಳ ನೇರ ಹಣ ಹೂಡಿಕೆ, ತಾಂತ್ರಿಕ ಸಹಯೋಗ ಮತ್ತಿತರ ನೆರವುಗಳು ಹರಿದು ಬರತೊಡಗಿದವು. ಭಾರತದ ರಸ್ತೆಗಳಲ್ಲಿ ವಿದೇಶಿ ಬೈಕುಗಳ ಸ್ವದೇಶಿ ಮಾದರಿಗಳು ಕಾಣಿಸಿಕೊಂಡವು. ವಿಫುಲ ಆಯ್ಕೆ ಪಟ್ಟಿ ಗ್ರಾಹನಿಗೆ ದಕ್ಕಿತು. ಈ ಸಮಯದಲ್ಲಿ ಮೋಪೆಡ್ ತಯಾರಿಸುತ್ತಿದ್ದ ‘ಟಿ.ವಿ.ಎಸ್.’ ಜಪಾನ್ ದೇಶದ ‘ಸುಝುಕಿ’ಯೊಂದಿಗೆ, ಸ್ಕೂಟರ್ ಕಂಪನಿ ‘ಬಜಾಜ್’ ‘ಕವಾಸಾಕಿ’ಯೊಂದಿಗೆ, ಸೈಕಲ್ ಮತ್ತು ಮೋಪೆಡ್ ತಯಾರಿಸುತ್ತಿದ್ದ ‘ಹೀರೋ’ ‘ಹೋಂಡಾ’ದೊಂದಿಗೆ, ಹಾಗೂ ‘ರಾಜದೂತ್’ ಬೈಕಿನ ‘ಎಸ್ಕಾರ್ಟ್ಸ್’ ‘ಯಮಾಹಾ’ದೊಂದಿಗೆ ಮೋಟಾರ್‌ಸೈಕಲ್‍ಗಳನ್ನು ತಯಾರಿಸಲು ಒಪ್ಪಂದಗಳನ್ನು ಮಾಡಿಕೊಂಡವು.
ಹೀಗೆ ಭಾರತೀಯ ಗ್ರಾಹಕನಿಗೆ ದಕ್ಕಿದ ಮೊದಲ ವಿದೇಶಿ ಬೈಕ್ ‘ಇಂಡ್-ಸುಝುಕಿ’. ಬೆಂಗಳೂರಿನ ಸಮೀಪದ ಹೊಸೂರಿನಲ್ಲಿ 1980ರಿಂದ ಅಪ್ಪಟ ಭಾರತೀಯ ಮೋಪೆಡ್‍ಗಳನ್ನು ತಯಾರಿಸುತ್ತಿದ್ದ ಕಂಪನಿ, ‘ಟಿ.ವಿ.ಎಸ್. - ಸುಝುಕಿ’ ಕಾರ್ಖಾನೆಯಾಯಿತು. ಉಳಿದೆರಡು ದೈತ್ಯ ಕಂಪನಿಗಳ ಪ್ರಬಲ ಪೈಪೋಟಿಯಲ್ಲಿಯೂ ‘ಟಿ.ವಿ.ಎಸ್.’ ತನ್ನ ಪ್ರಾಬಲ್ಯ ಉಳಿಸಿಕೊಂಡಿತು. ಮೈಸೂರಿನಲ್ಲಿ ಕಾರ್ಖಾನೆಯ ವಿಸ್ತರಣೆ ಮಾಡಿತು. ವಿದೇಶಿ ಬೈಕಿಗೆ ಹೆಚ್ಚು ಹೆಚ್ಚು ಭಾರತೀಯ ಬಿಡಿಭಾಗಗಳನ್ನು ತುಂಬತೊಡಗಿತು. ಮುಂದೊಂದು ದಿನ ವಿದೇಶಿ ಸಹಯೋಗ ಅಸಹನೀಯವೆನಿಸಿದಾಗ, ‘ವಿಚ್ಛೇದನ’ ಮಾಡಿಕೊಂಡು ತನ್ನ ಸ್ವಂತ ಕಾಲ್ಬಲದಲ್ಲಿ ಅಪ್ಪಟ ಭಾರತೀಯ ಬೈಕ್‍ಗಳನ್ನು ವಿನ್ಯಾಸಗೊಳಿಸಿತು. ‘ಟಿ.ವಿ.ಎಸ್. ಮೋಟಾರ್’ ಕಂಪನಿ ಅತ್ಯದ್ಭುತ ಪ್ರಗತಿ ಸಾಧಿಸಿತು. ಇಲ್ಲಿ ಹೆಮ್ಮೆ ಪಡಬೇಕಾದ ಅಂಶಗಳೆಂದರೆ ಬೆಂಗಳೂರಿನ ವಿಮಾನ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರತಿಭಾನ್ವಿತ ಎಂಜಿನ್ ವಿನ್ಯಾಸಕಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಸ್ವದೇಶಿ ಮೋಟಾರ್‌ಬೈಕ್ ಎಂಜಿನ್‍ಗಳನ್ನು ರೂಪಿಸಿತು. ಅಂತಾರಾಷ್ಟ್ರೀಯ ಪೇಟೆಂಟ್‍ಗಳನ್ನು ತನ್ನದಾಗಿಸಿಕೊಂಡಿತು. ಬೈಕ್‍ಗಳ ಬೆಲೆಯನ್ನು ತಗ್ಗಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಅತಿ ಹೆಚ್ಚಿನ ಸಂಖ್ಯೆಯ ಮಾಡೆಲ್‍ಗಳನ್ನು ರಸ್ತೆಗೆ ಬಿಟ್ಟಿತು. ಇಂದು ‘ಟಿ.ವಿ.ಎಸ್.’ನ ಹನ್ನೊಂದು ಮಾದರಿಗಳು ಮಾರುಕಟ್ಟೆಯಲ್ಲಿವೆ. ಇದರಲ್ಲಿ ಎರಡು ಮೋಪೆಡ್ ಮಾಡಲ್‍ಗಳು, ಒಂದು ಸ್ಕೂಟರ್ ಮಾಡಲ್ ಕೂಡಾ ಸೇರಿವೆ. ಪ್ರತಿ ತಿಂಗಳೂ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಮೋಟಾರ್‌ಬೈಕ್‍ಗಳನ್ನು ಬಿಕರಿ ಮಾಡುತ್ತಿದೆ. ನಮ್ಮ ದೇಶದ ಎಂಜಿನೀರ್‌ಗಳಿಗೆ ಕೆಲಸ ಕೊಡುವುದರ ಜತೆಗೆ ನಮ್ಮ ಸಣ್ಣ-ಪುಟ್ಟ ಕೈಗಾರಿಕೆಗಳಿಗೆ ಸತತವಾಗಿ ಬ್ಯುಸಿನೆಸ್ ಕೊಡುತ್ತಿದೆ. ನಮ್ಮ ದೇಶದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನತೆಗೆ ತೀರಾ ಅತ್ಯಗತ್ಯವಾದ ದ್ವಿ-ಚಕ್ರ ವಾಹನಗಳನ್ನು ನೀಡುತ್ತಿದೆ.
ಮೂರು-ನಾಲ್ಕು ವರ್ಷಗಳ ಹಿಂದೆ ಈ ‘ಟಿ.ವಿ.ಎಸ್. ಮೋಟಾರ್ ಕಂಪನಿ’ಗೆ ಹೊಸ ಹೊಳಹೊಂದು ಕಂಡಿತು. ನೂರಿಪ್ಪತ್ತು ಕೋಟಿ ಜನಸಂಖ್ಯೆಯ ಇಂಡಿಯಾದಲ್ಲಿ ಪ್ರತಿ ವರ್ಷ ಮಾರಾಟವಾಗುವ ಬೈಕ್‍ಗಳ ಸಂಖ್ಯೆ ಎಂಬತ್ತು ಲಕ್ಷ. ಆದರೆ ಕೇವಲ ಇಪ್ಪತ್ಮೂರು ಕೋಟಿ ಜನಸಂಖ್ಯೆಯ ಇಂಡೋನೇಶಿಯಾ ದ್ವೀಪ ಸಮೂಹದಲ್ಲಿ ಪ್ರತಿ ವರ್ಷ ಐವತ್ತು ಲಕ್ಷ ಬೈಕ್‍ಗಳು ಬಿಕರಿಯಾಗುತ್ತವೆ. ಅಂದರೆ ತಲಾವಾರು ಜನಸಂಖ್ಯೆಯ ಆಧಾರದಲ್ಲಿ ಇಂಡಿಯಾಗಿಂತಲೂ ಮೂರೂಕಾಲು ಪಟ್ಟು ಹೆಚ್ಚಿನ ಮೋಟಾರ್‌ಬೈಕ್ ಬ್ಯುಸಿನೆಸ್ ಇಂಡೋನೇಶಿಯಾದಲ್ಲಿದೆ. ಈ ಒಟ್ಟಾರೆ ವಹಿವಾಟಿನಲ್ಲಿ ಜಪಾನಿನ ಮೂರು ದೈತ್ಯ ಕಂಪನಿಗಳಾದ ‘ಸುಝುಕಿ’, ‘ಹೋಂಡಾ’ ಹಾಗೂ ‘ಯಮಾಹಾ’ ಕಂಪನಿಗಳ ಪಾಲು ಪ್ರತಿಶತ ತೊಂಬತ್ತೈದು. ಈ ಹಿನ್ನೆಲೆಯಲ್ಲಿ ಭಾರತೀಯ ಕಂಪನಿಯೊಂದನ್ನು ಅಲ್ಲಿ

ಅಪ್ಪಟ ಕನ್ನಡಿಗ ಬಿ.ಎಲ್.ಪಿ.(ಪ್ರಸನ್ನ) ಸಿಂಹ ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನೀರಿಂಗ್ ಕಾಲೇಜಿನ (ಯೂ.ವಿ.ಸಿ.ಇ.) ಪ್ರತಿಭಾನ್ವಿತ ವಿದ್ಯಾರ್ಥಿ. 1984ರಲ್ಲಿ ಮೆಕ್ಯಾನಿಕಲ್ ಎಂಜಿನೀರಿಂಗ್ ಪದವಿ ಪಡೆದ ನಂತರ ಕೆಲಕಾಲ ಸಣ್ಣ ಉದ್ದಿಮೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತೆ ಕರೆ ಬಂದದ್ದು ಅಂದಿನ ‘ಟಿ.ವಿ.ಎಸ್. ಸುಝುಕಿ’ಯಿಂದ. ಉತ್ಪಾದನಾ ವಿಭಾಗದಲ್ಲಿ ಅತ್ಯುತ್ತಮ ಕೌಶಲ ತೋರಿಸಿದ ಸಿಂಹ ಅವರನ್ನು ಉನ್ನತ ಅಧ್ಯಯನಕ್ಕಾಗಿ ಕಾರ್ಖಾನೆ ಕಳುಹಿಸಿದ್ದು ಬ್ರಿಟನ್ನಿನ ಪ್ರತಿಷ್ಠಿತ ವಾರ್ವಿಕ್ ವಿವಿಗೆ. ಅಲ್ಲಿ ಅವರ ಸಹಪಾಠಿಯಾಗಿದ್ದವರು ಇಂದು ‘ಬಜಾಜ್ ಆಟೋ’ದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್. ಅತಿ ಕಿರಿ ವಯಸ್ಸಿನಲ್ಲಿ ಮಹಾ ವ್ಯವಸ್ಥಾಪಕ ಹುದ್ದೆಗೇರಿದ್ದ ಸಿಂಹ ಅವರಿಗೆ, ಟಿ.ವಿ.ಎಸ್. ಮೋಟಾರ್ ಕಂಪನಿ ಉತ್ಪನ್ನಗಳ ಗುಣಮಟ್ಟದ ಶ್ರೇಷ್ಠತೆಯನ್ನು ಕಾಪಾಡುವುದು ಆದ್ಯತೆಯ ಹೊಣೆಯಾಗಿತ್ತು. ಸ್ವತಃ ಜಪಾನ್ ಸಹಯೋಗಿ ಕಂಪನಿಯು ಟಿ.ವಿ.ಎಸ್. ಉತ್ಪನ್ನಗಳನ್ನು ಶ್ಲಾಘಿಸುವಷ್ಟರ ಮಟ್ಟಿಗೆ ತಮ್ಮ ವಿಭಾಗವನ್ನು ಸಿಂಹ ಅವರು ಮುನ್ನಡೆಸಿದರು. ಸ್ಫರ್ಧಾತ್ಮಕ ಬೆಲೆಯಲ್ಲಿ ಉನ್ನತ ಗುಣಮಟ್ಟದ ಉತ್ಪನ್ನವನ್ನು ರೂಪಿಸುವ ಸವಾಲನ್ನು ಸ್ವೀಕರಿಸಿದ ಸಿಂಹ ಹಿಂದಿರುಗಿ ನೋಡಲಿಲ್ಲ. ಬಿಡಿಭಾಗ ಪೂರೈಕೆ ವ್ಯವಸ್ಥೆಯಲ್ಲಿ ಹೊಸತನವನ್ನು ಕಂಡುಕೊಂಡರು. ತಮ್ಮ ಕಾರ್ಯವ್ಯಾಪ್ತಿಯ ವಿಭಾಗಗಳನ್ನು ಶ್ರೇಷ್ಠತೆಯತ್ತ ಮುನ್ನಡೆಸಿದರು. ಈ ಸಂದರ್ಭದಲ್ಲಿ ಎಂಜಿನ್‍ಗಳ ಕಾರ್ಯ-ಕ್ಷಮತೆಯನ್ನು ಉತ್ತಮಪಡಿಸಲೆಂದು ಪ್ರಸಿದ್ಧ ಜರ್ಮನ್ ಕಂಪನಿಯೊಂದು ಟಿ.ವಿ.ಎಸ್.ಗೆ ಆಗಮಿಸಿತ್ತು. ಇಲ್ಲಿನ ಉತ್ಪನ್ನವನ್ನು ಕೂಲಂಕಷವಾಗಿ ಗಮನಿಸಿದ ನಂತರ ಆ ವಿದೇಶಿ ವಿನ್ಯಾಸಕಾರರು ಉದ್ಗರಿಸಿದ್ದು ‘ಅಭಿವೃದ್ಧಿ ಪಡಿಸಲು ಕಿಂಚಿತ್ತೂ ಅವಕಾಶವಿಲ್ಲ. ಅಷ್ಟರ ಮಟ್ಟಿಗೆ ಶ್ರೇಷ್ಠ ಉತ್ಪನ್ನ ಇಲ್ಲಿಯದು. ಭಾರತೀಯ ತಂತ್ರಜ್ಞರು ನಿಜಕ್ಕೂ ಅದ್ಭುತ ಕೆಲಸಗಾರರು’! ಮುಂದೆ ಮೈಸೂರಿನ ಕಾರ್ಖಾನೆಯ ಹೊಣೆಗಾರಿಕೆ ಸಿಂಹ ಅವರ ಹೆಗಲಿಗೇರಿತು. ಯಶೋಗಾಥೆ ಆರಂಭವಾದದ್ದು ಇಲ್ಲಿಂದ. ಅವರ ವ್ಯವಸ್ಥಾಪನಾ ಕುಶಲತೆ ಹಾಗೂ ಚುರುಕುತನವನ್ನು ಮನಗಂಡ ಕಂಪನಿಯು ಇಂಡೋನೇಶಿಯಾ ವಹಿವಾಟಿಗೆ ಸಿಂಹ ಅವರೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿತು.
ಭಾಷೆ ಹೊಸತು. ನಡುಗಡ್ಡೆಗಳ ಸಮೂಹದ ಆ ದೇಶದಲ್ಲಿ ಹವಾಮಾನದಂತೆ ರಾಜಕೀಯದಲ್ಲೂ ಸದಾ ಅಸ್ಥಿರತೆ. ಆದರೆ ಕಳೆದ ಎಂಟು ವರ್ಷಗಳಿಂದ ಪ್ರತಿಶತ ಇಪ್ಪತ್ತರಷ್ಟು ಪ್ರಗತಿ ಸಾಧಿಸುತ್ತಾ ಬಂದಿರುವ ಮೋಟಾರ್‌ಬೈಕ್ ಉದ್ದಿಮೆ ಪ್ರಲೋಭನೆ ಒಡ್ಡುತ್ತಾ ಬಂದಿದೆ. ಸವಾಲುಗಳನ್ನು ಸ್ವೀಕರಿಸುವುದರಲ್ಲಿ ‘ಟಿ.ವಿ.ಎಸ್.’ ಅಥವಾ ಸಿಂಹ ಅವರಿಗೆ ಹಿಂಜರಿಕೆಯೆಂಬುದೇ ಇಲ್ಲ. ಎಲ್ಲವೂ ಎಣಿಕೆಯಂತೆ ನಡೆಯುತ್ತಿದ್ದರೆ ಇದ್ದಕ್ಕಿದ್ದಂತೆ ಇಂಡೋನೇಶಿಯಾ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಕಿತ್ತು ಹಾಕಿಬಿಡುತ್ತದೆ. ಪೆಟ್ರೋಲ್ ಬೆಲೆ ದುಪ್ಪಟ್ಟಿಗಿಂತಲೂ ಹೆಚ್ಚಾಗುತ್ತದೆ. ದಿಢೀರೆಂದು ಮೋಟಾರ್‌ಬೈಕು ಮಾರುಕಟ್ಟೆ ಪ್ರತಿಶತ ಹದಿನೈದರಷ್ಟು ಕುಸಿದುಬಿಡುತ್ತದೆ. ಸವಾಲುಗಳೆಲ್ಲವೂ ಅವಕಾಶಗಳೇ ಎಂದು ನಂಬಿಕೊಂಡ ಕಂಪನಿ, ತನ್ನ ಕಾರ್ಖಾನೆಯನ್ನು ಐವತ್ತು ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತದೆ. ಇದೀಗ ಮುಂದಿನ ವರ್ಷದ ಮಾರ್ಚ್ ಹೊತ್ತಿಗೆ ಅಪ್ಪಟ ಭಾರತೀಯ ಒಂದು ಲಕ್ಷ ಮೋಟಾರ್‌ಬೈಕುಗಳು ಇಂಡೋನೇಶಿಯಾದ ರಸ್ತೆಗಳನ್ನು ತುಂಬುತ್ತವೆ. ಪೆಟ್ರೋಲ್ ಬೆಲೆ ಏರಿದಂತೆ ಜನ ಹುಡುಕಲು ಹೊರಡುವುದು ಇಂಧನ-ಕ್ಷಮತೆ ಹೆಚ್ಚಿರುವ ವಾಹನಗಳತ್ತ.
ಸಿಂಹ ಅವರ ಮಾತಿನಲ್ಲೇ ಹೇಳುವುದಾದರೆ ಇಂಡೋನೇಶಿಯಾ ಸ್ಥಾವರದ ಎರಡನೆಯ ಹಂತ ಅತ್ಯಂತ ಪ್ರಮುಖವಾದದ್ದು. ಹೊಸೂರಿನ ವಿನ್ಯಾಸ ಕೇಂದ್ರದಲ್ಲಿ ರೂಪುಗೊಳ್ಳುತ್ತಿರುವ ಎಂಜಿನ್‍ಗಳು ಬರಲಿರುವ ದಿನಗಳಲ್ಲಿ ಇಂಡೋನೇಶಿಯಾದಲ್ಲಿಯೇ ಅಭಿವೃದ್ಧಿಯಾಗಲಿದೆ. ಇಂಡೋನೇಶಿಯಾದ ಸಮೀಪದ ‘ಮಲೇಶಿಯಾ’, ‘ಫಿಲಿಫೈನ್ಸ್’, ‘ಮ್ಯಾನ್‍ಮಾರ್’, ‘ಥೈಲ್ಯಾಂಡ್’, ‘ಕಾಂಬೋಡಿಯಾ’ ದೇಶಗಳಲ್ಲಿ ಭಾರತೀಯ ಉತ್ಪನ್ನವೊಂದನ್ನು ಬಿಕರಿ ಮಾಡುವ ಮಹತ್ವದ ಯೋಜನೆ ಟಿ.ವಿ.ಎಸ್. ಮುಂದಿದೆ. ಮೂರು ತಿಂಗಳ ಹಿಂದೆ ಇಂಡೋನೇಶಿಯಾದಲ್ಲಿ ಬಿಡುಗಡೆಯಾದ ‘ನಿಯೋ’ ಎಂಬ ಸ್ಕೂಟರ್ ರೂಪದ ಮೋಟಾರ್‌ಬೈಕ್

(ಕೃಪೆ: ವಿಜಯ ಕರ್ನಾಟಕ, 16-07-2007)
1 comment:
Very informative article.
I was not aware of so many facts.
Thank you for the article on "Swadesi Bike"
Post a Comment