Monday, October 22, 2007

ಕದಡಿದ ನೀರಲಿ ಮೀನಿನ ಹೆಜ್ಜೆಯ ಹುಡುಕುತ .....

ದ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸುವಾಗ ‘ಕ್ಷೋಭೆ’ (turbulence) ಎಂಬ ಪದವನ್ನು ವಿಪರೀತವಾಗಿ ಬಳಸಲಾಗುತ್ತಿದೆ. ಹಠಾತ್ ತಿರುವು ಹಾಗೂ ಸುಳಿಗಳನ್ನೊಳಗೊಂಡ ಯಾವುದೇ ಕ್ರಮ ರಹಿತ ಚಲನೆ ಕ್ಷೋಭೆ ಎನಿಸಿಕೊಳ್ಳುತ್ತದೆ. ಎಂಜಿನೀರಿಂಗ್ ಕ್ಷೇತ್ರದಲ್ಲಿ ದ್ರವ ಅಥವಾ ಅನಿಲದ ಏರುಪೇರಿನ ಚಲನೆಯ ಬಗ್ಗೆ ಪ್ರಸ್ತಾಪಿಸುವಾಗ ನೆನಪಿಗೆ ಬರುವ ಶಬ್ದ ಕ್ಷೋಭೆ. ಸ್ಥಳೀಯವಾಗಿ ದ್ರವವೊಂದರ ಒತ್ತಡ ಅಥವಾ ವೇಗ ಯಾವುದೇ ನಿರ್ದಿಷ್ಟ ಕ್ರಮವಿಲ್ಲದೆಯೆ ಏರುಪೇರಾದರೆ ಕ್ಷೋಭೆ ಸಂಭವಿಸುತ್ತದೆ. ದ್ರವದ ಕ್ಷೋಭೆಯನ್ನು ನೀವು ಸ್ವತಃ ಅನುಭವಿಸಬಹುದು. ಪಾತ್ರೆಯೊಂದರಲ್ಲಿಟ್ಟ ನೀರಲ್ಲಿ ಕೈಬೆರಳುಗಳನ್ನಿಳಿಸಿ ಬಿರುಸಾಗಿ ಅಲುಗಾಡಿಸಹೊರಟರೆ ಸಾಕು, ನೀರಿನ ಅಲೆಗಳು ಎತ್ತೆತ್ತಲೋ ತಾಂಡವವಾಡುತ್ತವೆ. ಅಷ್ಟೇಕೆ, ಮನೆಯ ಗಾಜಿನ ತೊಟ್ಟಿಯಲ್ಲಿ ಮೀನುಗಳು ಯರ್ರಾಬಿರ್ರಿ ಚಲಿಸಲಾರಂಭಿಸಿದರೆ ಆ ನೀರಿನಲ್ಲಿ ಕ್ಷೋಭೆ ತಲೆದೋರುತ್ತದೆ. ವಿಮಾನದಲ್ಲಿ ಪಯಣಿಸುವಾಗ ಒಮ್ಮೊಮ್ಮೆ ವಿಪರೀತ ಅಲುಗಾಟದ ಅನುಭವ ನಿಮಗುಂಟಾಗಬಹುದು. ಏನಾಯಿತೊ ಎಂಬ ಗಾಭರಿಯಲ್ಲಿ ನೀವಿರುವಾಗ ಚಾಲಕ ತಣ್ಣನೆಯ ದನಿಯಲ್ಲಿ ‘ವಿಮಾನ ಗಾಳಿಯ ಪ್ರಕ್ಷುಬ್ದ ಚಲನೆಗೆ ಸಿಲುಕಿದೆ, ಅಡಚಣೆಗಾಗಿ ಕ್ಷಮೆಯಿರಲಿ’ ಎಂದು ಸಮಾಧಾನಿಸಿರುತ್ತಾನೆ. ನ್ಯೂಟನ್ ನಿಯಮ ನಿಮಗೆ ಗೊತ್ತು. ಯಾವುದೇ ಒಂದು ವಸ್ತು ತನ್ನ ತಟಸ್ಥ ಸ್ಥಿತಿ ಅಥವಾ ನಿರ್ದಿಷ್ಟ ಚಲನೆಯಿಂದ ಆಚೆಗೆ ಬರಬೇಕಾದರೆ ಹೊರಗಿನಿಂದ ಬಲ ಪ್ರಯೋಗವಾಗಿರಬೇಕು. ಅಂದರೆ ಅಲ್ಲಿ ಶಕ್ತಿ ಸಂಚಯನವಾಗಿರಬೇಕು. ತಟಸ್ಥ ಸ್ಥಿತಿ ಅಥವಾ ನಿರ್ದಿಷ್ಟ ಚಲನೆಯಲ್ಲಿರುವ ನೀರು ಅಥವಾ ಗಾಳಿಗೆ ಪ್ರಕ್ಷುಬ್ದತೆ ಉಂಟು ಮಾಡಬೇಕಾದರೆ ಶಕ್ತಿಯನ್ನು ವ್ಯಯ ಮಾಡಿರಲೇಬೇಕು. ಅಂದರೆ ಕ್ಷೋಭೆಗೆ ಒಳಗಾದ ಗಾಳಿ ಅಥವಾ ನೀರಿನಲ್ಲಿ ಶಕ್ತಿ ಸಂವಹನೆಯಾಗಿರುತ್ತದೆ. ಹೀಗೆ ಸಂವಹನೆಯಾದ ಶಕ್ತಿ ಮತ್ತಷ್ಟು ಪ್ರಕ್ಷುಬ್ದತೆಗೆ ಕಾರಣವಾಗುತ್ತಾ ವ್ಯಯವಾಗುತ್ತದೆ.
ಮತ್ತೆ ಮೀನಿನ ಚಲನೆಯನ್ನು ಹಿಂಬಾಲಿಸೋಣ. ನದಿ, ಸಮುದ್ರಗಳಲ್ಲಿ ಹರಿದಾಡುವ ಮೀನುಗಳು ತಮ್ಮ ಸುತ್ತಲಿರುವ ಅಗಾಧ ಶಕ್ತಿ ಹೊಂದಿರುವ ಪ್ರಕ್ಷುಬ್ದ ಅಲೆಗಳಿಂದ ಒಂದಷ್ಟು ಶಕ್ತಿಯನ್ನು ಆವಾಹಿಸಿಕೊಳ್ಳುತ್ತವೆ. ಈ ಕಾರ್ಯಕ್ಕೆ ತಮ್ಮ ಈಜು ರೆಕ್ಕೆಗಳನ್ನು ಪ್ರಕ್ಷುಬ್ದ ಅಲೆಗಳ ಚಲನೆಗೆ ಅನುಗುಣವಾಗಿ ಬಾಗಿ, ಬಳುಕಿಸಿಕೊಳ್ಳುತ್ತವೆ. ಸಣ್ಣ ಪುಟ್ಟ ತೊಟ್ಟಿಗಳಲ್ಲಿ ಒಂದು ಮೀನು ಸೃಷ್ಟಿಸಿದ ಕ್ಷೋಭೆಗೆ ಕದಡಿದ ನೀರಿನಿಂದ ಮತ್ತೊಂದು ಮೀನು ಶಕ್ತಿಯನ್ನು ಸಂಚಯಿಸಿಕೊಳ್ಳುತ್ತದೆ. ಹೀಗೆ ಉತ್ಪತ್ತಿಯಾಗುವ ಶಕ್ತಿಯನ್ನು ಸಂಗ್ರಹಿಸಬಹುದೆ? ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಬಹುದಿನಗಳಿಂದ ಕಾಡುತ್ತಿತ್ತು. ಇದಕ್ಕೆಂದೇ ಅಮೆರಿಕದ ಪಸಡೀನಾದಲ್ಲಿರುವ ‘ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ವಿದ್ಯಾಸಂಸ್ಥೆಯಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆಯಾಗಿತ್ತು. ನೀರಿನಲ್ಲಿ ವಾಸಿಸುವ ಜೀವಿಗಳಲ್ಲಿನ ಚಲನೆ, ಆ ಚಲನೆಗೆ ಅಗತ್ಯವಿರುವ ಶಕ್ತಿ ಸಂಚಯನೆ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಸುಳಿಗೆ ಸಿಲುಕಿದ ದ್ರವಗಳಿಂದ ಶಕ್ತಿಯನ್ನು ಸೆಳೆಯುವಂಥ ಯಂತ್ರಗಳನ್ನು ನಿರ್ಮಿಸುವ ಪ್ರಯತ್ನಗಳು ಇಲ್ಲಿ ನಡೆದಿವೆ. ಇದಕ್ಕೆಂದು ಮೀನು ಮತ್ತಿತರ ಜಲಚರಗಳ ನಡುಗೆಗಳ ಕಂಪ್ಯೂಟರ್ ಮಾದರಿಗಳನ್ನು ಸೃಷ್ಟಿಸಿ ಅವುಗಳ ಹಿಂದಿನ ‘ಗಣಿತ ಸೂತ್ರ’ಗಳನ್ನು ಅರ್ಥೈಸಿಕೊಳ್ಳುವ ಯತ್ನಗಳು ಸಾಗಿವೆ.
ಮೀನು ನಾವು ತಿಳಿದುಕೊಂಡಿರುವುದಕ್ಕಿಂತಲೂ ಬುದ್ಧಿವಂತ ಜಲಚರ. ಹರಿವ ನೀರಿನಲ್ಲಿ ಸುಳಿಗಳೇಳುವುದು ನಿಮಗೆ ಗೊತ್ತು. ಈ ಸುಳಿಗಳು ಒಂದು ಆವರ್ತನೆಯಲ್ಲಿ ಗಡಿಯಾರ ಸುತ್ತುವಂತೆ ಪ್ರದಕ್ಷಿಣೆ ಹಾಕಿದರೆ ಮತ್ತೊಂದು ಆವರ್ತನೆಯಲ್ಲಿ ಅಪ್ರದಕ್ಷಿಣೆ ಹಾಕುತ್ತವೆ. ಇಂಥ ಉಂಗುರದಲೆಗಳಲ್ಲಿ ಹುದುಗಿರುವ ಶಕ್ತಿಯನ್ನು ತಮ್ಮ ಚಲನೆಗೆ ಅನುಕುಳವಾಗುವಂತೆ ಬಳಸಿಕೊಳ್ಳಲು ಮೀನುಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸತೊಡಗುತ್ತವೆ. ಯಾವುದೇ ಶ್ರಮವಿಲ್ಲದೆಯೆ ಸುಳಿಗಳಿಂದ ಉಂಟಾದ ಶಕ್ತಿಯನ್ನು ತಮ್ಮ ಚಲನೆಗೆ ಮೀನುಗಳು ಬಳಸಿಕೊಳ್ಳುತ್ತವೆ. ಇದೇ ರೀತಿ ಯಂತ್ರಗಳು ಶಕ್ತಿಯನ್ನು ತುಂಬಿಕೊಳ್ಳಬಯಸಿದರೆ ಅವು ಥೇಟ್ ಮೀನುಗಳಂತೆ ಸುಳಿಗಳಿಗನುಗುಣವಾಗಿ ಬದಿಯಿಂದ ಬದಿಗೆ ಚಲಿಸಬೇಕು. ಅವುಗಳಿಗಿರುವಂತೆಯೇ ಬಾಗಿ ಬಳುಕಬಲ್ಲ ರೆಕ್ಕೆಗಳನ್ನು ಅಂಟಿಸಿಕೊಂಡಿರಬೇಕು. ಮುಂದಿನ ಜಲಧಾರೆ ಯಾವ ರೀತಿ ಅಮರಿಕೊಳ್ಳಬಹುದೆಂದು ನಿರ್ಧರಿಸಿಕೊಂಡು ತನ್ನ ಹೆಜ್ಜೆಯನ್ನು ಸೂಕ್ಷ್ಮ ಹಾಗೂ ಸುರಕ್ಷವಾಗಿ ಮುಂದಿಡುವ ಚಾಕಚಕ್ಯತೆಯನ್ನೂ ಅವು ಹೊಂದಿರಬೇಕು. ಸುಳಿಗೆ ಸಿಲಿಕಿದೊಡನೆಯೆ ಅದರಿಂದ ಸಾಧ್ಯವಾದಷ್ಟು ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯ ಅವುಗಳಿಗಿರಬೇಕು. ಇಲ್ಲಿ ನೆನಪಿಡಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಎದುರಾಗುವ ಅಲೆಗಳಿಗೆ ಅಥವಾ ಸುಳಿಗೆ ಮೀನು ಹೇಗೆ ತನ್ನ ಮೂತಿಯ ಕೋನವನ್ನು ಬದಲಿಸಿಕೊಂಡು ಮುಂದೆ ಸಾಗುವುದೋ ಅದೇ ರೀತಿ ಈ ಯಂತ್ರಗಳು ಮುನ್ನಡೆ ಸಾಧಿಸಿದಲ್ಲಿ ಮಾತ್ರ ಶಕ್ತಿ ಸಂವಹನೆಯಾಗಬಲ್ಲದು.
ಇದರಲ್ಲೇನು, ವಿಶೇಷ? ಗಾಳಿಯಲೆಗಳಿಂದ ಶಕ್ತಿ ಉತ್ಪಾದಿಸುವ ಯಂತ್ರಗಳನ್ನು ನಾವು ಸೃಷ್ಟಿಸಿಕೊಂಡಿಲ್ಲವೆ? ಎಂದು ಪ್ರಶ್ನಿಸುವ ಮುನ್ನ ಯೋಚಿಸಿ ನೋಡಿ. ಈ ಯಂತ್ರಗಳು ಕೇವಲ ಸರಾಗವಾಗಿ ಹರಿಯುವ ಗಾಳಿಯ ಬಲದಿಂದ ಮಾತ್ರ ಶಕ್ತಿಯನ್ನು ಉತ್ಪಾದಿಸಿಕೊಳ್ಳಬಲ್ಲವು. ಪ್ರಕ್ಷುಬ್ದವಾದ ವಾತಾವರಣದಲ್ಲಿ ಅವು ಕಾರ್ಯನಿರ್ವಹಿಸಲಾರವು. ನಮ್ಮ ನಗರ ಪ್ರದೇಶಗಳಲ್ಲಿ ಎತ್ತರೆತ್ತರದ ಕಟ್ಟಡಗಳಿರುತ್ತವೆ. ಈ ಕಟ್ಟಡಗಳ ಮೇಲ್ತುದಿಯಲ್ಲಿ ನಿಂತರೆ ಬೆಕ್ಕಸ ಬೆರಗಾಗಿಸುವ ಗಾಳಿಯ ಹರಿದಾಟ ಅನುಭವಕ್ಕೆ ಬಂದೀತು. ಆದರೆ ಇಲ್ಲಿ ಹರಿದಾಡುವುದು ಪ್ರಕ್ಷುಬ್ದ ಅಲೆಯ ಗಾಳಿ, ವಿಪರೀತು ಸುಳಿಗಳನ್ನು ಹೊಂದಿರುವಂಥದು. ಹೀಗಾಗಿ ಇಂಥ ಕಟ್ಟಡಗಳ ತುದಿಯಲ್ಲಿ ಗಾಳಿಯಂತ್ರಗಳನ್ನು ಸ್ಥಾಪಿಸಿ, ಶಕ್ತಿ ಉತ್ಪಾದಿಸಲಾಗುವುದಿಲ್ಲ. ಇಲ್ಲಿ ಬೇಕಾಗಿರುವುದು ಮೀನಿನಂತೆ ಸುಳಿಗಳಿಂದ ಶಕ್ತಿ ಹೀರಬಲ್ಲ ಯಂತ್ರಗಳು.
ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜಾನ್ ಡಾಬಿರಿ ಎಂಬ ಪ್ರಾಧ್ಯಾಪಕರ ನೇತೃತ್ವದಲ್ಲಿ ವಿಶಿಷ್ಟವಾದ ಅಧ್ಯಯನವೊಂದು ಮುನ್ನಡೆ ಸಾಧಿಸಿದೆ. ಪ್ರಕ್ಷುಬ್ದತೆಗೆ ಸಿಲುಕಿದ ನೀರು ಹಾಗೂ ಗಾಳಿ ಎರಡರಲ್ಲೂ ಕಾರ್ಯನಿರ್ವಹಿಸಿ ಶಕ್ತಿ ಉತ್ಪಾದಿಸಬಲ್ಲ ಪುಟ್ಟ ಪುಟ್ಟ ಯಂತ್ರಗಳ ಸೃಷ್ಟಿ ಕಾರ್ಯ ಇಲ್ಲಿ ನಡೆಯುತ್ತಿದೆ. ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಸುಳಿಗಳಲ್ಲಿ ಶಕ್ತಿ ಹೇಗೆ ಕೇಂದ್ರೀಕೃತವಾಗುತ್ತದೆ, ಅದನ್ನು ಹೊರತೆಗೆಯುವುದು ಹೇಗೆ? ಎಂದು ಅರಿತುಕೊಳ್ಳಲು ಇಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕೇವಲ ಮೀನೊಂದರ ಮರುಸೃಷ್ಟಿಯಾಗುತ್ತಿಲ್ಲ, ಚಲನೆಗೆ ಸಂಬಂಧಿಸಿದಂತೆ ಮೀನಿನ ಹೊರಮೈನ ಹೊಯ್ದಾಟ, ಅವುಗಳ ನಿರ್ದಿಷ್ಟ ಗತಿ ಮತ್ತಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೀನಿಗಿಂತಲೂ ಹೆಚ್ಚು ಕಾರ್ಯಕ್ಷಮತೆಯ ಯಂತ್ರವನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಸಾಮಾನ್ಯ ಗಾಳಿಯಂತ್ರಗಳು ಉತ್ಪಾದಿಸುವಷ್ಟು ಶಕ್ತಿಯನ್ನು ಇಂಥ ಯಂತ್ರಗಳು ಉತ್ಪಾದಿಸಲು ಸಾಧ್ಯವಾಗದು ಎಂಬ ಮಾತು ದಿಟ. ಆದರೆ ಸುಳಿಗಾಳಿಯಲ್ಲಿ ಸಾಮಾನ್ಯ ಗಾಳಿಯಂತ್ರಗಳು ಕೆಲಸ ಮಾಡದೆಯೆ ಇರುವುದರಿಂದ ಈ ಬಗೆಯ ಹೋಲಿಕೆ ಸಲ್ಲ.
ಇಷ್ಟಕ್ಕೂ ಈ ಬಗೆಯ ಪ್ರಯೋಗಗಳ ಮಹತ್ವವೇನು? ಎಂಬ ಪ್ರಶ್ನೆ ನಿಮ್ಮ ಮುಂದಿರಬಹುದು. ರಾಕೆಟ್‍ಗಳಿಂದ ಹಿಡಿದು ನಮ್ಮ ಗಾಳಿಯಂತ್ರದವರೆಗೆ ಸ್ತಿಮಿತ ಸ್ಥಿತಿಯಲ್ಲಿರುವ ದ್ರವಗಳ ಪರಿಚಲನೆಯ ಸೂತ್ರಗಳು ಉಪಯೋಗಕ್ಕೆ ಬರುವುದು ನಿಮಗೆ ಗೊತ್ತು. ಆದರೆ ಪ್ರಕೃತಿಯಲ್ಲಿನ ಬಹುತೇಕ ಜೀವಿಗಳ ಚಲನೆ ಹಾಗೂ ನೈಸರ್ಗಿಕ ವಿದ್ಯಮಾನಗಳಲ್ಲಿ ಸ್ತಿಮಿತ ಸ್ಥಿತಿಯಲ್ಲಿಲ್ಲದಿರುವ ದ್ರವಗಳದೇ ಮೇಲಾಟ. ಅದು ನಮ್ಮ ದೇಹದಲ್ಲಿ ರಕ್ತ ಪರಿಚಲನೆಗೆ ನೆರವಾಗುವ ಹೃದಯವೆಂಬ ಪಂಪ್‍ನ ಕಾರ್ಯವಿರಬಹುದು ಅಥವಾ ನೀರಿನಾಳದಲ್ಲಿ ಚಡಪಡಿಸುವ ಅಂಬಲಿ ಮೀನಿನ ಹರಿದಾಟವಿರಬಹುದು. ಎಲ್ಲವೂ ಗಣಿತ ಸೂತ್ರಗಳಿಗೆ, ಕಂಪ್ಯೂಟರ್ ಮಾದರಿಗಳಿಗೆ ಸುಲಭವಾಗಿ ಸಿಗದ ಪರಿಚಲನೆಗಳು. ಇವುಗಳನ್ನು ಅರ್ಥೈಸಿಕೊಂಡರೆ ನಮ್ಮ ಸುಗಮ ಜೀವನಕ್ಕೆ ಅನುಕೂಲ ತರುವಂಥ ಅನೇಕಾನೇಕ ಯಂತ್ರಗಳನ್ನು ಸೃಷ್ಟಿಸಿಕೊಳ್ಳಬಹುದು. ಈ ಒಂದು ಮಹದಾಸೆಯಿಂದ ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಜಗತ್ತಿನ ಅನೇಕ ಸಂಶೋಧನಾಲಯಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬೃಹತ್ ಕಾರ್ಯವೊಂದನ್ನು ಹಮ್ಮಿಕೊಂಡಿದ್ದಾರೆ.
ಯಾವುದೇ ಒಂದು ಕ್ಷಿಪ್ರ ಚಲನೆಗೆ ಆ ವಸ್ತುವಿನ ಉದ್ದ ಹಾಗೂ ವ್ಯಾಸದ ನಡುವಿನ ಅನುಪಾತ ಮುಖ್ಯವಾಗುತ್ತದೆ. ಉದಾಹರಣೆಗೆ ಸಮುದ್ರದಾಳಕ್ಕೆ ಇಳಿಯುವ ಈಜುಗಾರರು ತಮ್ಮ ವೇಗದ ಚಲನೆಗೆ ಬೆನ್ನಿಗೆ ರಾಕೆಟ್‍ನಂಥ ಶಕ್ತಿ ಸಂವಾಹಕವನ್ನು ಹೊತ್ತುಕೊಂಡಿರುತ್ತಾರೆ. ಅವರು ಮುನ್ನಡೆಯುವ ಭಂಗಿ, ವೇಗವನ್ನು ನಿರ್ಧರಿಸಬಲ್ಲ ಪ್ರಮುಖ ಅಂಶವಾಗುತ್ತದೆ. ಅಂತೆಯೇ ಸಮುದ್ರದಾಳದಲ್ಲಿ ಚಲಿಸುವ ಸಬ್‍ಮರೀನ್‍ಗಳ ಆಕಾರ ಹಾಗೂ ಗಾತ್ರವೂ ಸಹಾ ಅವುಗಳು ಚಲಿಸುವ ವೇಗವನ್ನು ನಿಯಂತ್ರಿಸುತ್ತವೆ. ಸಮುದ್ರದಲ್ಲಿನ ನೀರು ಸ್ತಿಮಿತವಲ್ಲದ ಸ್ಥಿತಿಯಲ್ಲಿರುವಂತೆ ವಾತಾವರಣದಲ್ಲಿನ ಗಾಳಿಯೂ ಸ್ತಿಮಿತದಲ್ಲಿರುವುದಿಲ್ಲ. ಆದ್ದರಿಂದ ವಿಮಾನ ಅಥವಾ ಯಾವುದೇ ಹಾರುವ ಯಂತ್ರಗಳ ವಿನ್ಯಾಸ ಮಾಡುವಾಗ ಆಕಾರ, ಗಾತ್ರ ಹಾಗೂ ಕೋನಗಳನ್ನು ಲೆಕ್ಕ ಹಾಕಿ ವಿನ್ಯಾಸಗೊಳಿಸಲಾಗಿರುತ್ತದೆ.
ಎಲ್ಲವೂ ಸರಿ, ಸದ್ಯಕ್ಕೆ ಮೀನಿನಂಥ ಯಂತ್ರಗಳ ಸೃಷ್ಟಿ ಕಾರ್ಯ ಎಷ್ಟು ಪ್ರಗತಿ ಸಾಧಿಸಿದೆ? ನಾಲ್ಕು ವರ್ಷಗಳ ಹಿಂದೆ ಜಗದ್ವಿಖ್ಯಾತ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಇಂಥ ಯಂತ್ರಗಳನ್ನು ನಿರ್ಮಿಸಿದ ವಿಜ್ಞಾನಿ ಜೇಮ್ಸ್ ಲಿಯಾವೊ ಅವರ ಮಾತು ಇಲ್ಲಿ ಮುಖ್ಯವಾಗುತ್ತದೆ. ‘ಯೋಜನೆ ನಿರ್ದಿಷ್ಟ ಗತಿಯಲ್ಲಿ ಮುನ್ನಡೆದಿದೆ. ಈ ಕೆಲಸದ ವ್ಯಾಪ್ತಿ ಹೆಚ್ಚುತ್ತಿದ್ದು, ಬಹಳಷ್ಟು ಯಂತ್ರಗಳ ಸೃಷ್ಟಿಗೆ ಇದು ಪ್ರೇರಕವಾಗುತ್ತಿದೆ. ಸದ್ಯಕ್ಕೆ ನಿರ್ಮಾಣವಾಗುತ್ತಿರುವ ಯಂತ್ರದ ಮಾದರಿ ಸರಳವಾಗಿದೆ. ಆದರೆ ಜಲಚರದ ಚಲನೆಗಳೆಲ್ಲವನ್ನೂ ಮೈಗೂಡಿಸಿಕೊಂಡ ಪೂರ್ಣ ಪ್ರಮಾಣದ ಯಂತ್ರಗಳ ನಿರ್ಮಾಣಕ್ಕೆ ಇನ್ನೂ ಸಮಯ ಪಕ್ವವಾಗಿಲ್ಲ. ಏಕೆಂದರೆ ದ್ರವ ಹಾಗೂ ಮೀನಿನ ಚಲನೆಗಳೆರಡನ್ನೂ ಒಂದೇ ವ್ಯಾಪ್ತಿಗೆ ಸಿಲುಕಿಸುವುದು ಅಷ್ಟು ಸುಲಭವಲ್ಲ’. ಲಿಯಾವೊ ಹೇಳಿರುವ ಮಾತುಗಳಲ್ಲಿ ಸತ್ಯವಿದೆ. ಮೀನುಗಳು ತಮ್ಮ ಮುಂದಿರುವ ಸುಳಿಯೆಂಥದು? ಎಂಬುದನ್ನು ಗ್ರಹಿಸಿ, ತನ್ನ ಚಲನೆಯ ಗತಿ, ದಿಸೆಗಳನ್ನು ಬದಲಿಸಿಕೊಳ್ಳುತ್ತವೆ. ಈ ಬಗೆಯ ಚೂಟಿತನವನ್ನು ಯಂತ್ರಗಳಲ್ಲಿ ಮೈಗೂಡಿಸದ ಹೊರತು ಯಂತ್ರಗಳ ಕಾರ್ಯಕ್ಷಮತೆಯನ್ನು ಹಿಗ್ಗಿಸಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ನಿರಾಶರಾಗಬೇಕಿಲ್ಲ. ಜಗತ್ತಿನೆಲ್ಲೆಡೆ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರಯೋಗಗಳನ್ನು ಗಮನಿಸಿದರೆ ಈ ಕೆಲಸ ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳುವುದರಲ್ಲಿ ಸಂಶಯವಿಲ್ಲ.
ಮೀನಿನ ಹೆಜ್ಜೆಯನ್ನು ಗುರುತಿಸುವುದೇ ಕಷ್ಟದ ಕೆಲಸ. ಅದರಲ್ಲೂ ಕದಡಿದ ನೀರಿನಲ್ಲಿ ಮೀನಿನ ಪರಿಚಲನೆಯನ್ನು ಗ್ರಹಿಸುವುದು ಮತ್ತಷ್ಟು ಕಷ್ಟದ ಕೆಲಸ. ಹೀಗೆ ಗ್ರಹಿಸಿದ ಚಲನೆಯ ಹಿಂದಿನ ಗಣಿತ ಸೂತ್ರಗಳನ್ನು ಅರ್ಥೈಸಿಕೊಂಡು ಅವುಗಳ ಆಧಾರದ ಮೇಲೆ ಕಂಪ್ಯೂಟರ್ ಮಾದರಿಗಳನ್ನು ಮರುಸೃಷ್ಟಿಸುವುದು ಮಗದಷ್ಟು ಕ್ಲಿಷ್ಟದ ಕಾರ್ಯ. ಆನಂತರ ಅವುಗಳ ನೆರವಿನಿಂದ ಮೀನುಗಳಂತೆ ಕಾರ್ಯನಿರ್ವಹಿಸುವ ಯಂತ್ರವನ್ನು ವಿನ್ಯಾಸಗೊಳಿಸುವುದು ಎಂಜಿನೀರ್‌ಗಳ ಮುಂದಿರುವ ಅತಿ ದೊಡ್ಡ ಸವಾಲು. ಈ ಸವಾಲನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿ-ತಂತ್ರಜ್ಞರನ್ನು ನಿಜವಾದ ಆಶಾವಾದಿಗಳೆನ್ನಬೇಕು.
(ಕೃಪೆ: ವಿಜಯ ಕರ್ನಾಟಕ; 22-10-2007)

ಈ ಫೋನ್ ಮುಂದೆ ಬಾಯಿಬಿಟ್ಟರೆ ಬಣ್ಣಗೇಡು!

‘ಆತ್ಮವಿಶ್ವಾಸದ ನಗುವಿಗಾಗಿ’ ಇಲ್ಲವೆ ‘ಉಸಿರಿನ ದುರ್ವಾಸನೆಯ ನಿವಾರಣೆಗಾಗಿ’ ಇಂಥದೇ ಟೂತ್‍ಪೇಸ್ಟ್ ಬಳಸಿ ಎಂದು ಕರೆಕೊಡುವ ನೂರಾರು ಜಾಹೀರಾತುಗಳನ್ನು ನೀವು ಕಂಡಿರುತ್ತೀರಿ. ಜತೆಗೆ ಸುಗಂಧ ಬೀರುವ ಶ್ವಾಸಕ್ಕೆಂದೇ ತಯಾರಿಸಲಾದ ಅನೇಕ ‘ಚ್ಯೂಯಿಂಗ್ ಗಮ್’, ‘ಮಿಂಟ್ ಚಾಕೊಲೆಟ್’ಗಳು ಅಂಗಡಿಗಳಲ್ಲಿ ಭರದಿಂದ ಮಾರಾಟವಾಗುವುದೂ ನಿಮಗೆ ಗೊತ್ತು. ಒಂದೆಡೆ ಈ ಬಗ್ಗೆ ವಿಪರೀತ ಜಾಗರೂಕರಾಗಿ ಒಂದಲ್ಲಾ ಒಂದು ವಸ್ತುವನ್ನು ಬಾಯಿಯಲ್ಲಿ ಜಗಿಯುವವರಿರುತ್ತಾರೆ. ಮತ್ತೊಂದೆಡೆ ತಮ್ಮ ಬಾಯಿಯಿಂದ ಹೊರಡುವ ವಾಸನೆಯನ್ನೂ ಗ್ರಹಿಸುವ ವ್ಯವಧಾನವಿಲ್ಲದೆ ಅಕ್ಕಪಕ್ಕದವರಿಗೆ ಮುಜುಗರ ಉಂಟುಮಾಡುವ ಭಂಡರೂ ಇದ್ದಾರೆ. ಹಾಗಿದ್ದರೆ ವಾಸನೆಯಲ್ಲಿ ಎಷ್ಟರ ಮಟ್ಟಿಗೆ ದುರ್ಗಂಧವಿದೆಯೆಂದು ಗುರುತಿಸಬಲ್ಲ ಮಾಪಕ ಇಲ್ಲವೆ? ಎಂಬುದು ನಿಮ್ಮ ಮುಂದಿನ ಪ್ರಶ್ನೆ. ರಾತ್ರಿ ಒಬ್ಬಂಟಿಯಾಗಿ ವಾಹನ ಚಲಿಸುತ್ತಿದ್ದರೆ ಮಾರ್ಗ ಮಧ್ಯದಲ್ಲಿ ಪೊಲೀಸರು ತಡೆಹಿಡಿದು ನೀವು ಮದ್ಯ ಸೇವಿಸಿರುವಿರೆ? ಎಂದು ಪರೀಕ್ಷೆಗೀಡು ಮಾಡುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಒಮ್ಮೊಮ್ಮೆ ಹೆಚ್ಚಿನ ಸಂಖ್ಯೆಯ ಸವಾರರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರೆ ‘ಉಸಿರು ವಿಶ್ಲೇಷಕ’ದ ಬದಲು ತಮ್ಮ ಮೂಗಿನಿಂದಲೇ ನಿಮ್ಮ ಬಾಯಿಂದ ಹೊರಟ ವಾಸನೆಯನ್ನು ಪರಿಶೀಲಿಸುವುದೂ ಉಂಟು. ಹಿಂದೆ ಇದೇ ಅಂಕಣದಲ್ಲಿ ಬಾಯಿಯಿಂದ ಹೊರಡುವ ಮದ್ಯದ ವಾಸನೆಯ ಮೇಲೆಯೇ ಚಾಲಕನ ಸ್ಥಿಮಿತವನ್ನು ನಿರ್ಧರಿಸಿಕೊಂಡು ಕಾರೊಂದು ಸ್ವಯಂಚಾಲಿತವಾಗಿ ಬಂದ್ ಆಗುವ ವ್ಯವಸ್ಥೆಯೊಂದರ ಬಗ್ಗೆ ಓದಿದ್ದ ನೆನಪು ನಿಮಗಿರಬಹುದು. ಪ್ರಸ್ತುತ ಇಂದಿನ ಚರ್ಚೆಯ ವಿಷಯ - ಬಾಯಿಯಿಂದ ಹೊರಡುವ ದುರ್ವಾಸನೆಯನ್ನು ಸುಲಭವಾಗಿ ಸ್ವಯಂಪರೀಕ್ಷೆ ಮಾಡಿಕೊಳ್ಳಬಹುದಾದ ಸಾಧನ.
ವಾಸನೆ, ಅದರಲ್ಲೂ ದುರ್ವಾಸನೆ ಎಂಬುದನ್ನು ನಿರ್ಧರಿಸುವುದು ಹೇಗೆ? ನಾಲಿಗೆಯ ಹಿಂಬಾಗದಲ್ಲಿ ಸೇರಿಕೊಳ್ಳುವ ಬ್ಯಾಕ್ಟೀರಿಯಗಳಿಂದ ಹಿಡಿದು ಜೀರ್ಣ ವ್ಯವಸ್ಥೆಯಲ್ಲಿನ ಏರುಪೇರಿನಿಂದ ದುರ್ವಾಸನೆ ಬೀರುವ ಅನಿಲಗಳು ಉತ್ಪಾದನೆಯಾಗುತ್ತವೆ. ಕೆಲವೊಮ್ಮೆ ತೀಕ್ಷ್ಣ ವಾಸನೆ ಬೀರುವ ಬೆಳ್ಳುಳ್ಳಿ ಮತ್ತಿತರ ಆಹಾರ ಪದಾರ್ಥಗಳು ಬಾಯಿಯಲ್ಲಿ ಒಂದಷ್ಟು ದುರ್ಗಂಧವನ್ನು ಉಳಿಸಿಡಬಹುದು. ಬಾಯಿಯನ್ನು ಸ್ವಚ್ಛವಾಗಿಟ್ಟುಕೊಂಡಿರದ ಸಂದರ್ಭಗಳಲ್ಲಿ ಅಥವಾ ಆಲ್ಕೋಹಾಲ್‍ನಂಥ ದ್ರಾವಕಗಳು ಉತ್ಪಾದಿಸುವ ಭಾಷ್ಪದಿಂದ ಉಸಿರಿನಲ್ಲಿ ದುರ್ವಾಸನೆ ಹೆಚ್ಚು ಕಾಲ ಇರಬಲ್ಲದು. ಅಸಲಿಗೆ ದುರ್ಗಂಧವೆಂದರೆ ಇತರೆ ಅನಿಲಗಳೊಂದಿಗೆ ಗಂಧಕ ಸೇರಿಹೋದ ವಿವಿಧ ಬಗೆಯ ಸಲ್ಫೈಡ್ ಅನಿಲಗಳ ಮಿಶ್ರಣ. ಸಲ್ಫೈಡ್‍ಗಳೆಂಥವು? ಅವುಗಳಲ್ಲಿ ಸೇರಿಹೋದ ಮೂಲ ವಸ್ತುಗಳ್ಯಾವುವು? ಯಾವ ವಸ್ತುವಿನಿಂದ ಇಂಥ ಅನಿಲಗಳು ಉತ್ಪತ್ತಿಯಾಗಿವೆ? ಮುಂತಾದ ಮಾಹಿತಿಗಳನ್ನು ಇಂದಿನ ರಸಾಯನ ವಿಜ್ಞಾನದ ನೆರವಿನಿಂದ ಸುಲಭವಾಗಿ ಪಡೆಯಬಹುದು. ಚಿಕಿತ್ಸಾಲಯಗಳಲ್ಲಿ ಸ್ಥಾಪಿಸಬಹುದಾದ ಇಂಥ ವಿಶ್ಲೇಷಕಗಳು ದುಬಾರಿ ವೆಚ್ಚದ್ದು. ಜತೆಗೆ ಇವುಗಳ ನಿಖರ ವಿಶ್ಲೇಷಣೆಗೆ ತರಬೇತಿ ಪಡೆದ ರಸಾಯನ ವಿಜ್ಞಾನಿಗಳು ಬೇಕು.
ಯಾವುದೇ ಒಂದು ಹೊಸ ವ್ಯವಸ್ಥೆಯನ್ನು ನಮ್ಮ ಜೀವನಶೈಲಿಗೆ ಒಗ್ಗಿಸಿಕೊಳ್ಳುವುದು ಕಷ್ಟದ ಕೆಲಸ. ಪ್ರತಿದಿನ ಹತ್ತಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಜೇಬಿನಲ್ಲಿ, ಕೈಚೀಲದಲ್ಲಿ, ಕಾರಿನಲ್ಲಿ ಹೊತ್ತೊಯ್ಯುತ್ತಿರುತ್ತೀರಿ. ಸಹೋದ್ಯೋಗಿ ಅಥವಾ ಸಹಧರ್ಮಿಣಿ ಇಲ್ಲವೆ ಪ್ರಿಯತಮೆಯನ್ನು ಮೆಚ್ಚಿಸುಲೋಸುಗ ಮತ್ತೊಂದು ‘ವಾಸನೆ ಮೀಟರ್’ ಅನ್ನು ಕೊಂಡೊಯ್ಯುವುದು ತ್ರಾಸದಾಯಕ. ಈ ಕಾರಣದಿಂದ ನಿಮ್ಮ ನಿತ್ಯ ಬಳಕೆಯ ಯಾವುದಾದರೂ ಒಂದು ಸಾಧನದಲ್ಲಿ ದುರ್ವಾಸನಾ ವಿಶ್ಲೇಷಕವನ್ನು ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗಂತೂ ಮೊಬೈಲ್ ಫೋನ್‍ಗಳು ಬಹುತೇಕ ಕೆಲಸಗಳಿಗೆ ಬಳಕೆಯಾಗುತ್ತಿವೆ. ಉದಾಹರಣೆಗೆ ಸಂಗೀತ ಸುಧೆಯನ್ನು ನೀಡುವ, ಸುದ್ದಿ-ಮಾಹಿತಿ ಹಂಚುವ, ರೇಡಿಯೊ-ಟೀವಿ ಗಳನ್ನು ಬಿತ್ತರಿಸುವ, ಇಂಟರ್‌ನೆಟ್ ಸೌಕರ್ಯ ನೀಡುವ, ಜೀಪೀಎಸ್ ವ್ಯವಸ್ಥೆ ಅಳವಡಿಸಬಲ್ಲ, ಧ್ವನಿ-ಚಿತ್ರ-ಚಲನಚಿತ್ರ ದಾಖಲಿಸಬಲ್ಲ, ಟಾರ್ಚ್‍ನ ಕೆಲಸ ಮಾಡಬಲ್ಲ, ಕಂಪ್ಯೂಟರ್‌ಗೆ ಸಾಟಿಯಾಗಬಲ್ಲ ...... ಕೆಲಸಗಳನ್ನು ಮೊಬೈಲ್ ಫೋನ್‍ಗಳು ಇಂದು ನಿರ್ವಹಿಸಬಲ್ಲವು. ಅಂದ ಮೇಲೆ ಮೊಬೈಲ್ ಫೋನಿಗೆ ದುರ್ವಾಸನೆಯನ್ನು ಗ್ರಹಿಸಿ ಎಚ್ಚರಿಸಬಲ್ಲ ಸೌಕರ್ಯವನ್ನು ನೀಡಬಹುದು.
ಜಪಾನ್ ದೇಶದ ಎಲೆಕ್ಟ್ರಾನಿಕ್ಸ್ ವಸ್ತುಪ್ರದರ್ಶನವೊಂದರಲ್ಲಿ ಕಳೆದ ವಾರವಷ್ಟೇ ಮಿತ್ಸುಬಿಷಿ ಕಂಪನಿ ಅನಾವರಣಗೊಳಿಸಿದ ಹೊಸ ಮೊಬೈಲ್ ಫೋನ್‍ನಲ್ಲಿ ಕೇವಲ ಉಸಿರು ವಿಶ್ಲೇಷಕವಷ್ಟೇ ಅಳವಡಿಕೆಯಾಗಿಲ್ಲ. ನಿಮ್ಮ ಚಟುವಟಿಕೆಯ ಮಟ್ಟ, ನಿಮ್ಮ ನಾಡಿ ಮಿಡಿತ, ಜತೆಗೆ ನಿಮ್ಮ ಬೊಜ್ಜನ್ನು ಪರಿಶೀಲಿಸಿ ಸಲಹೆ ನೀಡಬಲ್ಲ ಸಾಧನಗಳನ್ನು ಜೋಡಿಸಲಾಗಿದೆ. ಅಂಗೈಯಲ್ಲಿ ಇದನ್ನು ಹಿಡಿದಾಗ ಅಲ್ಪ ಶಕ್ತಿಯ ವಿದ್ಯುತ್ ಸಂಕೇತಗಳನ್ನು ದೇಹಕ್ಕೆ ರವಾನಿಸಿ ತನಗೆ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳಬಲ್ಲದು. ದೇಹಕ್ಕೆ ನಿತ್ಯ ತುರುಕಿಕೊಳ್ಳುತ್ತಿರುವ ಕ್ಯಾಲೊರಿಗಳನ್ನು ದಾಖಲಿಸುತ್ತಾ ಹೋದಂತೆ, ಖರ್ಚಾಗುತ್ತಿರುವ ದರದೊಡನೆ ತಾಳೆ ನೋಡಿಕೊಂಡು ಮತ್ತಷ್ಟು ಆಹಾರ ಸೇವಿಸಬೇಕೆ? ಇಲ್ಲ ಇನ್ನೊಂದಷ್ಟು ವ್ಯಾಯಾಮ ಮಾಡಬೇಕೆ? ಎಂದು ಮೊಬೈಲ್ ಫೋನ್ ಸೂಚನೆ ನೀಡಬಲ್ಲದು. ತನ್ನಲ್ಲಿರುವ ಮಾಹಿತಿ ಭಂಡಾರವನ್ನು ಅರಸಿ, ಸರಾಸರಿ ಕ್ಯಾಲೊರಿ ಊಡಿಕೆ/ನೀಡಿಕೆಗಳನ್ನು ನಿರ್ಧರಿಸಿಕೊಂಡು, ಆ ನಿರ್ದಿಷ್ಟ ದಿನದ ನಿಮ್ಮ ಕ್ಯಾಲೊರಿ ಖರ್ಚು/ವೆಚ್ಚಗಳನ್ನು ಹೋಲಿಸಿ ನೋಡಬಲ್ಲದು. ಉಪಹಾರಗೃಹವೊಂದಕ್ಕೆ ಭೇಟಿಯಿತ್ತಾಗ ಅಲ್ಲಿ ಸರ್ವ್ ಮಾಡಿದ ಪೀಡ್ಝಾದಲ್ಲಿ ಒಟ್ಟಾರೆ ಎಷ್ಟು ಕ್ಯಾಲೊರಿಗಳಿರಬಹುದು ಎಂಬ ಮಾಹಿತಿ ನಿಮಗಿರುವುದಿಲ್ಲ. ಫೋನಿನ ನೆರವಿನಿಂದ ಅದರ ಒಂದೆರಡು ಚಿತ್ರಗಳನ್ನು ತೆಗೆದಿಟ್ಟುಕೊಂಡರೆ, ಅದರ ಗಾತ್ರ ಹಾಗೂ ಆಕಾರದ ಮೇಲೆ ಅಂದಾಜು ಕ್ಯಾಲೊರಿಗಳನ್ನು ನಿರ್ಧರಿಸಲು ಪ್ರಯತ್ನಿಸಬಲ್ಲದು. ಫೋನ್ ಬಳಕೆದಾರ ತನ್ನ ಆದ್ಯತೆಗಳನ್ನು ದಾಖಲಿಸಿಟ್ಟುಕೊಂಡಲ್ಲಿ, ‘ಸಾಕಿನ್ನು ಕೆಲಸ, ಇದೀಗ ನಿದ್ದೆ ಮಾಡುವ ಸಮಯ’, ‘ಇಷ್ಟು ಹೊತ್ತು ಹಸಿದಿರಬಾರದು, ಒಂದು ಲೋಟ ಹಣ್ಣಿನ ರಸವನ್ನಾದರೂ ಸೇವಿಸು’, ‘ತಿಂದದ್ದು ಹೆಚ್ಚಾಯಿತು, ಒಂದಷ್ಟು ವ್ಯಾಯಾಮವಿರಲಿ’... ಮುಂತಾದ ಸಂದೇಶಗಳನ್ನು, ನವಿರಾದ ಎಚ್ಚರಿಕೆಗಳನ್ನು ನೀಡಲು ಈ ಫೋನ್ ಸಮರ್ಥ.
ಈ ಫೋನಿನ ಗಿರಾಕಿಗಳು ಎಂಥವರಿರಬಹುದು? ಎಂಬುದರ ಬಗ್ಗೆ ಕಂಪನಿ ಒಂದಷ್ಟು ಕಲ್ಪನೆಗಳನ್ನಿಟ್ಟುಕೊಂಡಿದೆ. ಇದನ್ನು ಇಷ್ಟಪಡುವವರು ಒಂದೊ ಬೊಜ್ಜು ಹೊತ್ತ ಮಧ್ಯವಯಸ್ಕ ಬ್ಯುಸಿನೆಸ್‍ಮನ್ ಅಥವಾ ಡಯಟ್ ಬಗ್ಗೆಯೇ ಸದಾ ಚಿಂತಿಸುವ ಹದಿಹರೆಯದ ಹುಡುಗಿ. ಮೊದಲನೆಯ ಗುಂಪಿನವರಿಗೆ ಇದು ಅತ್ಯಗತ್ಯವಾದರೆ ಎರಡನೆಯ ಗುಂಪಿನವರಿಗೆ ಇದು ಶೋಕಿಯ ಸಾಧನ. ಮೊಬೈಲ್ ಫೋನ್‍ಗಳಲ್ಲಿ ವಿನೂತನ ಸೌಕರ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಜಪಾನ್ ಸದಾ ಮುಂದು. ಸುಂಕದ ಕಟ್ಟೆಗಳಲ್ಲಿ ಮೊಬೈಲ್ ಫೋನ್ ಅಲುಗಾಟದ ಮೂಲಕವೇ ಹಣ ರವಾನಿಸುವ ವ್ಯವಸ್ಥೆ ತಂದ ಕೀರ್ತಿ ಜಪಾನ್ ದೇಶದ್ದು. ಸಿನಿಮಾ ಟಿಕೆಟ್‍ಗಳಿಂದ ಹಿಡಿದು, ಅಂಗಡಿಯಲ್ಲಿನ ದಿನಸಿ ಖರೀದಿಗೂ ಇದೇ ವ್ಯವಸ್ಥೆಯನ್ನು ಯಶಸ್ವಿಯಾಗಿ ಆ ದೇಶದಲ್ಲಿ ಜಾರಿಗೆ ತರಲಾಗಿದೆ. ಜತೆಗೆ ಆಲ್ಕೋಹಾಲ್ ಸೇವನೆಯ ಬಗ್ಗೆ ಖಚಿತ ಪಡಿಸಿಕೊಳ್ಳಲು ಮೊಬೈಲ್ ಫೋನ್‍ಗೆ ಜೋಡಿಸಿದ ಉಸಿರಿನ ವಿಶ್ಲೇಷಕವನ್ನು ಮೊದಲು ಜಾರಿಗೆ ತಂದದ್ದು ಜಪಾನ್. ಚೋದ್ಯದ ವಿಷಯವೆಂದರೆ ಈ ಎಲ್ಲ ಸೌಕರ್ಯಗಳನ್ನು ಮೊಬೈಲ್ ಫೋನ್ ಮೂಲಕ ಜಾರಿಗೆ ತರಲು ಅಮೆರಿಕ ಇನ್ನೂ ತಿಣಕಾಡುತ್ತಿದೆ.
ಇದೀಗ ಮಾರುಕಟ್ಟೆಗೆ ಬರಲಿರುವ ‘ವೆಲ್‍ನೆಸ್ ನ್ಯಾವಿಗೇಟರ್’ ಎಂಬ ಹೆಸರಿನ ಈ ವಿಶ್ಲೇಷಕದಲ್ಲಿ ದುರ್ಗಂಧವನ್ನು ಒಂದರಿಂದ ಹತ್ತರವರೆಗಿನ ಅಳತೆಗೋಲಿನಲ್ಲಿ ಮಾಪನ ಮಾಡಲಾಗುತ್ತದೆ. ಈ ಸಂಖ್ಯೆ ಐದನ್ನು ದಾಟಿದೆಯೆಂದರೆ ಉಸಿರಿನಲ್ಲಿ ದುರ್ಗಂಧದ ಪ್ರಮಾಣ ಹೆಚ್ಚಿದೆ, ಮಿಂಟ್ ಅಥವಾ ಚ್ಯೂಯಿಂಗ್ ಗಮ್ ಬಾಯಿಗೆಸೆದುಕೊಳ್ಳುವ ಅಥವಾ ಮೌತ್‍ವಾಷ್‍ನಿಂದ ಗಂಟಲು ಗಳಗಳ ಮಾಡಿಕೊಳ್ಳುವ ಮುನ್ನ ವೈದ್ಯರನ್ನೊಮ್ಮೆ ಭೇಟಿ ಮಾಡಬೇಕು. ಆರೋಗ್ಯದ ವಿಷಯದಲ್ಲಿ ವಿಪರೀತ ಕಾಳಜಿ ವಹಿಸುವುದು ಎಷ್ಟು ಕೆಟ್ಟದೊ ಅನಾದಾರವೂ ಅಷ್ಟೇ ಕೆಟ್ಟದು. ಉಸಿರು ವಿಶ್ಲೇಷಕ ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡದೆಯೆ ಇರಬಹುದು. ಆದರೆ ಒಂದು ಬಗೆಯ ಮುನ್ನೆಚ್ಚರಿಕೆಯ ಗಂಟೆಯನ್ನು ಅದು ಬಾರಿಸಬಲ್ಲದು ಎನ್ನುತ್ತಾರೆ ಮೊಬೈಲ್ ಫೋನ್ ಕಂಪನಿಯ ವಕ್ತಾರರು. ಜತೆಗೆ ದೈಹಿಕ ಸ್ವಾಸ್ಥ್ಯವನ್ನು ಸುಸ್ಥಿಯಲ್ಲಿಡಲು ಯಾವ ಬಗೆಯ ಗುರಿಮಟ್ಟಗಳನ್ನು ಇಟ್ಟುಕೊಳ್ಳಬೇಕು, ಈ ನಿಟ್ಟಿನಲ್ಲಿ ನಾವು ಸಾಧಿಸಿರುವುದು ಎಷ್ಟು ಎಂಬುದನ್ನು ಆಗಿಂದಾಗ್ಗೆ ತಿಳಿದುಕೊಳ್ಳುತ್ತಿರಬಹುದು.
ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಸದಾ ಮುಂದಿರಬೇಕೆಂಬ ಹಂಬಲದಿಂದ ತಯಾರಕರು ಇಂಥ ‘ಗಿಮಿಕ್’ಗಳನ್ನು ಮಾಡುತ್ತಿರುತ್ತಾರೆ. ಬಳಸುತ್ತಿರುವ ಒಂದು ಫೋನನ್ನು ಒಗೆದು ಮತ್ತೊಂದನ್ನು ಖರೀದಿಸಲು ಬಲವತ್ತರವಾದ ಕಾರಣಗಳು ಬೇಕು. ಮಿತ್ಸುಬಿಷಿ ಕಂಪನಿ ಮಾಡುತ್ತಿರುವುದು ಇಂಥದೇ ಒಂದು ಮಾರಾಟದ ಗಿಮಿಕ್ ಎಂದೇ ಸದ್ಯಕ್ಕೆ ಭಾವಿಸಬಹುದಾದರೂ, ಕೆಲವೊಂದು ಸೌಕರ್ಯಗಳು ವಿನೂತನವೆಂಬುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯ ಜನರೊಂದಿಗೆ ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಹಾಯಕರು, ಹಾಸಿಗೆ ಹಿಡಿದವರು ಸಕಲ ಸೇವೆ ನೀಡುವ ಇಂಥ ಮೊಬೈಲ್ ಫೋನ್‍ಗಳನ್ನು ಇಟ್ಟುಕೊಳ್ಳುವುದು ಉತ್ತಮ. ತಮ್ಮೊಬ್ಬರ ಆರೋಗ್ಯ ಮಾಹಿತಿಯಷ್ಟೇ ಅಲ್ಲ, ಬಂಧು ಮಿತ್ರರಿಗೆ ಸಂಬಂಧಿಸಿದ ಮಾಹಿತಿಗಳನ್ನು ಮೊಬೈಲ್ ಫೋನಿನಲ್ಲಿ ದಾಖಲಿಸಿಟ್ಟುಕೊಳ್ಳಬಹುದು. ಒಬ್ಬರಿಂದೊಬ್ಬರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು.
ಕಂಪ್ಯೂಟರ್ ಸೇರಿದಂತೆ ತಂತ್ರಾಂಶ (ಸಾಫ್ಟ್‍ವೇರ್)ಗಳನ್ನು ಬಳಸುವ ಉಳಿದೆಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೂ ‘ವೈರಸ್’ಗಳ ಬಾಧೆ ತಪ್ಪಿದ್ದಲ್ಲ. ಈ ಭೀತಿ ವಿನೂತನ ಮೊಬೈಲ್ ಫೋನ್‍ಗಳನ್ನೂ ಕಾಡದೆ ಬಿಡದು. ಇಂಥ ಸಂದರ್ಭಗಳಲ್ಲಿ ದಾಖಲಾದ ಮಾಹಿತಿ ತಪ್ಪಾಗಿ ತೋರಿದರೆ, ಅನಗತ್ಯ ಭೀತಿ ಉಂಟಾಗುವುದು ಸಹಜ. ಸುರಕ್ಷಾ ವ್ಯವಸ್ಥೆ ಎಷ್ಟೇ ಪ್ರಬಲವಾಗಿರಲಿ, ವೈರಸ್ ಸೋಂಕಿನಿಂದ ಬಿಡುಗಡೆಯೆಂಬುದಿಲ್ಲ. ಜತೆಗೆ ವೈರಸ್‍ನಿಂದಾಗಿ ನೀವು ಗೌಪ್ಯವೆಂದು ಕಾಪಾಡಿಕೊಂಡಿದ್ದ ಆರೋಗ್ಯ ಮಾಹಿತಿ ಮತ್ತೊಂದು ಫೋನಿಗೆ ರವಾನೆಯಾಗಿಬಿಡಬಹುದು. ಈ ಬಗೆಯ ಸಮಸ್ಯೆಗಳನ್ನು ನಿವಾರಿಸುವತ್ತ ಮಿತ್ಸುಬಿಷಿ ಕೆಲಸ ಮಾಡುತ್ತಿದೆ.
ವಿನೂತನ ಮೊಬೈಲ್ ಫೋನ್‍ನ ಬಗ್ಗೆ ಟೀಕೆಗಳದೆಂಥದೇ ಇರಲಿ, ಸದಾ ನಮ್ಮೊಂದಿಗೆ ಕೊಂಡೊಯ್ಯಬಹುದಾದ ಏಕೈಕ ಎಲೆಕ್ಟ್ರಾನಿಕ್ ಸಾಧನ ಇದೊಂದೇ. ಹೀಗಾಗಿ ಯಾವುದೇ ಸರ್ವವ್ಯಾಪಿ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕೆಂದಿದ್ದರೆ, ಮೊಬೈಲ್ ಫೋನ್ ಅತ್ಯಂತ ಸೂಕ್ತ ಮಾಧ್ಯಮ. ಜಠರ ಅಥವಾ ಪಿತ್ತಕೋಶ ಸರಿಯಾಗಿದೆಯೊ ಇಲ್ಲ ಕರುಳಿನ ಕಾರ್ಯದಲ್ಲಿ ವ್ಯತ್ಯಯವಾಗಿದೆಯೊ ಎಂಬುದನ್ನು ಸಣ್ಣ ಪುಟ್ಟ ಸಾಧನಗಳ ಮೂಲಕ ಸಾಮಾನ್ಯ ಜನರು ತಪಾಸಣೆ ಮಾಡಿಕೊಳ್ಳಬೇಕಿಲ್ಲ. ಆದರೆ ಸದಾ ನೆಗಡಿ ಅಥವಾ ಗಂಟಲು ಕೆರೆತವಿದ್ದು ಅದರಿಂದಾಗಿ ಬಾಯಿ ದುರ್ವಾಸನೆ ಬೀರುತ್ತಿದ್ದೂ ಸ್ವತಃ ಮನವರಿಕೆ ಮಾಡಿಕೊಳ್ಳಲಾಗದ ಸಂದರ್ಭಗಳಲ್ಲಿ ಇಂಥ ಮೊಬೈಲ್ ಫೋನ್ ಅಗತ್ಯವಾಗುತ್ತದೆ. ಹೆಂಡತಿ ಅಥವಾ ಪ್ರಿಯತಮೆ ನಿಮ್ಮ ಬಾಯಿಯಿಂದ ಗಬ್ಬುನಾತ ಹೊರಬರುತ್ತಿದೆ ಎಂದು ಆಕ್ಷೇಪವೆತ್ತುವ ಮುನ್ನವೇ ವೈದ್ಯರ ಮುಂದೆ ನಿಮ್ಮ ಬಾಯಿ ಬಿಡಬಹುದು. ಅವರಿಗೆ ಕಾಣಿಸಿಕೊಳ್ಳಬಲ್ಲ ಬ್ರಹ್ಮಾಂಡ ಅದ್ಯಾವುದೇ ಇದ್ದರೂ ಚಿಂತಿಸಬೇಕಿಲ್ಲ. ಮೂಗು ಮುಚ್ಚಿಕೊಂಡಾದರೂ ಒಂದಷ್ಟು ಔಷಧ ಸೇವನೆಗೆ ಸಲಹೆ ನೀಡಬೇಕಾದ ಕರ್ಮ ಅವರದು!
(ಕೃಪೆ: ವಿಜಯ ಕರ್ನಾಟಕ; 15-10-2007)

ನೀರಿಗೂ ಅಂಟು - ಚ್ಯೂಯಿಂಗ್ ಗಮ್‍ನ ಹೊಸ ನೆಂಟು

ಸದ್ಯಕ್ಕೆ ಎಲ್ಲೆಡೆ ಒಂದೇ ಮಾತು. ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ನಡುವಿನ ನಂಟು ಹರಿದುಹೋಗಿದೆ. ವಿಭಿನ್ನ ಧ್ಯೇಯ, ತತ್ವ, ಆದರ್ಶ ಹಾಗೂ ನಾಯಕತ್ವದ ಎರಡು ಪಕ್ಷಗಳ ನಡುವಿನ ನಂಟು ಉಳಿಯಬೇಕಿದ್ದಿದ್ದರೆ, ಅವೆರಡನ್ನೂ ಬೆಸೆಯುವ ಅಂಟು ಶಕ್ತಿಶಾಲಿಯಾಗಿರಬೇಕಿತ್ತು. ಆದರೆ ತತ್ವಾದರ್ಶಗಳಿಗೇ ಅಂಟಿಕೊಂಡಿದ್ದರೆ ರಾಜಕೀಯ ಪಕ್ಷಗಳಿಗೆ ಅಧಿಕಾರದ ಕುರ್ಚಿಯ ನಂಟು ಎಂದಿಗೂ ಸಿಗುವುದಿಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಹೊರತಾಗಿ ಮತ್ಯಾವುದೇ ಸಾಮಾನ್ಯ ಅಂಶಗಳಿಲ್ಲದ ಪಕ್ಷಗಳು ಅಧಿಕಾರಕ್ಕೆ ಅಂಟಿಕೊಳ್ಳುವುದು, ನಂತರ ಪರಸ್ಪರ ದೂರಾಗುವುದು-ದೂರುವುದು ಭಾರತಕ್ಕೆ ಹೊಸತೇನಲ್ಲ. ಇಲ್ಲಿ ರಾಜಕೀಯ ಪಕ್ಷಗಳಿಗೆ ಜನಾದೇಶವೆಂಬುದು ಕೇವಲ ಅಗಿದಗಿದು ಉಗಿದೆಸೆಯಬಲ್ಲ ಚ್ಯೂಯಿಂಗ್ ಗಮ್. ಚ್ಯೂಯಿಂಗ್ ಅಗೆದವರಿಗೆ ಅಂಟು ಎಂದಿಗೂ ಮೆತ್ತಿಕೊಳ್ಳದ ಕಾರಣ ಸಮಸ್ಯೆಯಿಲ್ಲ!
ನಮಗೆ ಸಮಸ್ಯೆಗಳು ಚ್ಯೂಯಿಂಗ್ ಗಮ್‍ನಂತೆ ಕಾಡಿದರೆ ಅನೇಕ ಪ್ರಜ್ಞಾವಂತ ರಾಷ್ಟ್ರಗಳಿಗೆ ಚ್ಯೂಯಿಂಗ್ ಗಮ್ ನಿರ್ವಹಣೆಯೇ ಸಮಸ್ಯೆಯಾಗಿಬಿಟ್ಟಿದೆ. ಅತಿ ಹೆಚ್ಚಿನ ಜನಸಂಖ್ಯೆಯ ಸರ್ವಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದಲ್ಲಿ ‘ಉಗಿಯುವುದು’ ಆಜನ್ಮ ಸಿದ್ಧ ಹಕ್ಕು. ಯಾರನ್ನು, ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಉಗಿದು ಉಪ್ಪು ಹಾಕಲು ನಮಗೆ ಸ್ವಾತಂತ್ರ್ಯವಿದೆ. ಏನಿಲ್ಲದಿದ್ದರೂ ಎಂಜಲು ಅಥವಾ ಬಾಯ್ದಂಬುಲ ಇಲ್ಲವೆ ಚ್ಯೂಯಿಂಗ್ ಗಮ್ ಅನ್ನು ಎಲ್ಲೆಂದರಲ್ಲಿ ಉಗಿಯಲು ನಮಗೆ ಯಾವ ಎಗ್ಗೂ ಇಲ್ಲ. ಆದರೆ ಎಲ್ಲೆಂದರೆಲ್ಲಿ ಚ್ಯೂಯಿಂಗ್ ಗಮ್ ಉಗಿಯುವ ವಿಷಯದಲ್ಲಿ ಪಾಶ್ಚಾತ್ಯ ದೇಶಗಳಲ್ಲಿನ ನಾಗರೀಕರೂ ಸಹಾ ನಮ್ಮೊಂದಿಗೆ ಸ್ಫರ್ಧೆಯಲ್ಲಿದ್ದಾರೆ. ಬ್ರಿಟನ್ನಿನ ಪಕ್ಕದ ಪುಟ್ಟ ರಾಷ್ಟ್ರ ಐರ್‌ಲೆಂಡ್ ಗೊತ್ತಲ್ಲ? ಈ ವರ್ಷದ ಜುಲೈ ತಿಂಗಳಲ್ಲಿ ಅಲ್ಲಿನ ಸರಕಾರದ ಪರಿಸರ ಇಲಾಖೆಯು ತಂತ್ರಜ್ಞಾನ ಅಭಿವೃದ್ಧಿಗಾಗಿ ಸ್ಫರ್ಧೆಯೊಂದನ್ನು ಘೋಷಿಸಿತ್ತು. ‘ಅಂಟಿಕೊಳ್ಳದ ಚ್ಯೂಯಿಂಗ್ ಗಮ್’ ಅನ್ನು ರೂಪಿಸುವ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯ ಒಂದು ದಶಲಕ್ಷ ಬ್ರಿಟನ್ ಪೌಂಡ್ (ಅಂದರೆ ಸುಮಾರು ಎಂಟು ಕೋಟಿ ರೂಪಾಯಿಗಳು) ಬಹುಮಾನವನ್ನು ಗೆಲ್ಲಬಹುದೆಂಬ ಆಮಿಷವನ್ನು ಪರಿಸರ ಖಾತೆಯ ಮಂತ್ರಿ ಒಡ್ಡಿದ್ದರು. ಅಷ್ಟೇ ಅಲ್ಲ, ‘ಚ್ಯೂಯಿಂಗ್ ಗಮ್ ತ್ಯಾಜ್ಯ’ ನಿವಾರಣೆಗೆ ಸೂಕ್ತ ಪರಿಹಾರ ಕಂಡುಹಿಡಿಯಬಲ್ಲ ಖಾಸಗಿ ಉದ್ದಿಮೆಗೆ ಎರಡು ದಶಲಕ್ಷ ಬ್ರಿಟನ್ ಪೌಂಡ್ ಬಹುಮಾನವನ್ನು ಸಹಾ ಅವರು ಘೋಷಿಸಿದ್ದರು. ಈ ವಿಷಯ ಓದಿದ ತಕ್ಷಣ ಐರ್‌ಲೆಂಡಿನಲ್ಲಿ ಮಾತ್ರ ಚ್ಯೂಯಿಂಗ್ ಗಮ್ ಜಗಿಯುವವರು ಹೆಚ್ಚಿದ್ದಾರೆಂದು ಭಾವಿಸಬೇಕಿಲ್ಲ. ಚಟಕ್ಕಾಗಿ ಚ್ಯೂಯಿಂಗ್ ಗಮ್ ಅಗಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಎಷ್ಟೆಂದರೆ ಜಗತ್ತಿನಾದ್ಯಂತ ಪ್ರತಿ ವರ್ಷ ಉತ್ಪಾದನೆಯಾಗುವ ಚ್ಯೂಯಿಂಗ್ ಗಮ್‍ನ ಪ್ರಮಾಣ ಆರು ಲಕ್ಷ ಟನ್‍ಗಳು. ತಮ್ಮ ನಾಲಿಗೆ ಹಲ್ಲುಗಳಿಗೆ ಅಂಟಿಸಿಕೊಳ್ಳದೆಯೆ ‘ಚಟಕ್ಕೆಂದೊ’ ಅಥವಾ ‘ಹಲ್ಲು ದವಡೆಗಳಿಗೆ ವ್ಯಾಯಾಮಕ್ಕೆಂದೊ’ ಅಥವಾ ‘ತಮ್ಮ ದಂತಪಂಕ್ತಿಗಳನ್ನು ಫಳಫಳನೆ ಹೊಳೆಯುವಂತೆ ಮಾಡಲೆಂದೊ’ ಜನ ಹೆಚ್ಚು ಹೆಚ್ಚಾಗಿ ಚ್ಯೂಯಿಂಗ್ ಗಮ್ ಅಗೆಯುತ್ತಿದ್ದಾರೆ. ಬ್ರಿಟನ್ನಿನ ವೆಸ್ಟ್‍ಮಿನ್‍ಸ್ಟರ್ ನಗರಪಾಲಿಕೆಯೊಂದೇ ವರ್ಷವೊಂದಕ್ಕೆ ತೊಂಬತ್ತೈದು ಸಹಸ್ರ ಪೌಂಡ್ (ಸುಮಾರು ಎಪ್ಪತ್ತಾರು ಲಕ್ಷ ರೂಪಾಯಿಗಳು) ಹಣವನ್ನು ಚ್ಯೂಯಿಂಗ್ ಗಮ್ ತ್ಯಾಜ್ಯ ವಿಲೇವಾರಿಗೆಂದೇ ವ್ಯಯ ಮಾಡುತ್ತಿದೆ. ಕಸ ಎಸೆಯುವುದಿರಲಿ ಸಾರ್ವಜನಿಕವಾಗಿ ಉಗಿಯಲೂ ಸ್ವಾತಂತ್ರ್ಯವಿರದ ದೇಶವಾದ ಸಿಂಗಾಪುರದ ಹೊರತಾಗಿ ಬಹುತೇಕ ಮುಂದುವರಿದ ದೇಶಗಳಲ್ಲಿ ಚ್ಯೂಯಿಂಗ್ ಗಮ್‍ನದು ಅತಿ ದೊಡ್ಡ ಸಮಸ್ಯೆ. ಆರೋಗ್ಯಕ್ಕೆ ಹಾನಿಕರವೆಂಬ ನೆಪದಲ್ಲಿ ನಿಷೇಧಾಜ್ಞೆ ಹೊರಡಿಸುವಂತಿಲ್ಲ. ಎಷ್ಟೇ ಬುದ್ಧಿವಾದ ಹೇಳಿದರೂ, ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರೂ ಸಾಮಾನ್ಯ ಜನರಷ್ಟೇ ಅಲ್ಲ, ಸೆಲೆಬ್ರಿಟಿಗಳು, ಸಮಾಜದ ಗಣ್ಯರು ಚ್ಯೂಯಿಂಗ್ ಗಮ್ ಚಟಕ್ಕೆ ಅಂಟಿಕೊಂಡುಬಿಟ್ಟಿದ್ದಾರೆ.
ಚ್ಯೂಯಿಂಗ್ ಗಮ್ ಅನ್ನು ತಯಾರಿಸಲು ಮೊದಲು ಬಳಕೆಯಾಗುತ್ತಿದ್ದ ಸಾಮಗ್ರಿಯ ಹೆಸರು ’ಚಿಕಲ್’. ಬಹುಶಃ ನಿಮ್ಮ ನೆನಪಿನಲ್ಲಿರಬಹುದು, ನಮ್ಮ ದೇಶಕ್ಕೆ ಮೊದಲು ಬಂದ ಚ್ಯೂಯಿಂಗ್ ಗಮ್‍ನ ಹೆಸರು ‘ಚಿಕಲೆಟ್ಸ್’ (ಅಂದರೆ ಪುಟಾಣಿ ಚಿಕಲ್‍ಗಳು) ಎಂದಾಗಿತ್ತು. ಪ್ರತಿಶತ ಹದಿನೈದು ಭಾಗ ರಬ್ಬರ್ ಹಾಗೂ ಪ್ರತಿಶತ ಮೂವತ್ತೆಂಟು ಭಾಗ ಅಂಟು ಸೇರಿಕೊಂಡಿದ್ದ ಈ ’ಚಿಕಲ್’ನ ರಾಸಾಯನಿಕ ಹೆಸರು ‘ಪಾಲಿಟೆರ್‌ಪೀನ್’. ಆದರೆ ಇಂದಿನ ’ಗಮ್’ಗಳನ್ನು ಕೃತಕ ಲ್ಯಾಟೆಕ್ಸ್‍ಗಳಿಂದ (ರಬ್ಬರ್) ರೂಪಿಸಲಾಗುತ್ತಿದೆ. ಎಲ್ಲ ಹವಾಮಾನಗಳಲ್ಲೂ ತಮ್ಮ ಗುಣ ವೈಶಿಷ್ಟ್ಯಗಳನ್ನು ಕೃತಕ ಲ್ಯಾಟೆಕ್ಸ್‍ಗಳು ಬಹುಕಾಲ ಉಳಿಸಿಕೊಳ್ಳಬಲ್ಲವು. ಅಂಟಿಕೊಳ್ಳುವ ಗುಣ ಹೆಚ್ಚಿರುವುದರ ಜತೆಗೆ ರಾಸಾಯನಿಕಗಳ ಧಾಳಿಗೆ ಕರಗಿಹೋಗದ ಗುಣ ಇದಕ್ಕಿದೆ. ಈ ಲ್ಯಾಟೆಕ್ಸ್‍ಗೆ ಮೆದುಕಾರಕಗಳು, ಸ್ವಾದಕಾರಕಗಳು, ಸುವಾಸನಾವಸ್ತುಗಳು ಹಾಗೂ ಸಿಹಿಯನ್ನು ಬೆರೆಸಿ ಚ್ಯೂಯಿಂಗ್ ಗಮ್ ಅನ್ನು ಸಿದ್ಧಗೊಳಿಸಲಾಗುತ್ತದೆ. ಚ್ಯೂಯಿಂಗ್ ಗಮ್ ಎಂಥ ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದನ್ನು ಬ್ರಿಟನ್ನಿನ ಅತಿ ದೊಡ್ಡ ಚ್ಯೂಯಿಂಗ್ ತಯಾರಿಕಾ ಕಂಪನಿ ‘ರಿವಾಲಿಮರ್’ನ ಮುಖ್ಯಸ್ಥರಾದ ರೋಜರ್ ಪೆಟ್‍ಮಾನ್ ಅವರ ಬಾಯಿಂದಲೇ ಕೇಳಬೇಕು. ಜಗಿದ ನಂತರ ಉಗಿಯುವ ಚ್ಯೂಯಿಂಗ್ ಗಮ್‍ನ ತುಣಕುಗಳ ಬಹುಪಾಲು ಆಶ್ರಯ ಪಡೆಯುವುದು ರಸ್ತೆ ಬದಿ ಹಾಗೂ ಪಾದಚಾರಿಗಳ ಹಾದಿಯಲ್ಲಿ. ಇಂಥ ಅಂಟಿನುಂಡೆಗಳನ್ನು ಸಂಗ್ರಹಿಸಲು ಬೇರೆ ಯಾವುದೇ ಮಾರ್ಗಗಳಿಲ್ಲ. ಲಂಡನ್ ನಗರದಲ್ಲಿನ ಸಂಚಾರ ವ್ಯವಸ್ಥೆಗೆ ಮೆಟ್ರೊ (ಅಂಡರ್‌ಗ್ರೌಂಡ್) ರೈಲಿನ ಕೊಡುಗೆ ಅತಿ ದೊಡ್ಡದು. ಮೆಟ್ರೋ ರೈಲಿನ ಬೋಗಿಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಚ್ಯೂಯಿಂಗ್ ಗಮ್‍ನ ಹಾವಳಿ ಹೆಚ್ಚಾಗುತ್ತಿದೆ. ಈ ‘ಅಂಟು ಕಸ’ವನ್ನು ತೆಗೆಯಲೆಂದೇ ರೈಲು ಕಂಪನಿ ವರ್ಷವೊಂದಕ್ಕೆ ಖರ್ಚು ಮಾಡುತ್ತಿರುವ ಹಣ ಎರಡು ದಶಲಕ್ಷ ಪೌಂಡ್‍ಗಳು (ಅಂದರೆ ಹದಿನಾರು ಕೋಟಿ ರೂಪಾಯಿಗಳು). ಸಿಂಗಾಪುರದಂತೆ ಚ್ಯೂಯಿಂಗ್ ಜಗಿಯುವುದನ್ನು ನಿಷೇಧ ಮಾಡಲು ಸಾಧ್ಯವಾಗದ ಕಾರಣ ಬ್ರಿಟನ್ ಹಾಗೂ ಐರ್‌ಲೆಂಡ್ ದೇಶಗಳು ‘ಅಂಟದ’ ಚ್ಯೂಯಿಂಗ್ ಗಮ್ ತಯಾರಿಕೆ ಸಾಧ್ಯವೆ? ಎಂದು ಪರಿಶೀಲಿಸುತ್ತಿವೆ.
ನಾಲಿಗೆ, ಹಲ್ಲುಗಳಿಗೆ ಅಂಟದ ಚ್ಯೂಯಿಂಗ್ ಗಮ್ ಕೈ, ಕಾಲಿಗೆ, ರಸ್ತೆ ಬದೆಗೆ, ಕುರ್ಚಿಗೆ ಹೀಗೆ ಎಲ್ಲೆಂದರಲ್ಲಿಗೆ ಅಂಟಿಕೊಳ್ಳುವುದು ಹೇಗೆ? ಮತ್ತು ಏಕೆ? ಎಂಬುದು ನಮ್ಮನ್ನು ಕಾಡುವ ಪ್ರಶ್ನೆಗಳು. ಪೆಟ್ರೋಲಿಯಂ ವಸ್ತುಗಳಿಂದ ಕೃತಕವಾಗಿ ರೂಪಿಸಿದ ಪಾಲಿಮರ್‌ಗಳು, ಸ್ವಾಭಾವಿಕವಾಗಿ ಲಭ್ಯವಿರುವ ರಬ್ಬರ್, ಅಂಟುಗಳು ಹಾಗೂ ಮೇಣಗಳ ಮಿಶ್ರಣವಾದ ಚ್ಯೂಯಿಂಗ್ ಗಮ್ ಸ್ವಭಾವತಃ ‘ಜಲದ್ವೇಷಿ’ ಅಂದರೆ ನೀರಿಗೆ ಅಂಟಿಕೊಳ್ಳದ ಗುಣ ಹೊಂದಿರುತ್ತದೆ. ಬಾಯಿಯಲ್ಲಿ ಸದಾ ಜೊಲ್ಲಿನ ರಸವಿರುವುದರಿಂದ ಚ್ಯೂಯಿಂಗ್ ಗಮ್ ನಾಲಿಗೆ ಹಾಗೂ ಹಲ್ಲುಗಳಿಗೆ ಅಂಟಿಕೊಳ್ಳುವುದಿಲ್ಲ. ನೀರನ್ನು ಕಂಡರೆ ಚ್ಯೂಯಿಂಗ್ ಗಮ್‍ಗೆ ಆಗದಿದ್ದರೂ ಎಣ್ಣೆಯ ಬಗ್ಗೆ ಅಪಾರ ಪ್ರೇಮ. ಎಣ್ಣೆಯ ಪಸೆಯಿದ್ದಲ್ಲಿ ತಕ್ಷಣವೇ ಅಂಟಿಕೊಳ್ಳುವ ಗುಣ ಇದರದ್ದು. ನಮ್ಮ ಮೈ, ಕೈ, ಕಾಲು ಸೇರಿದಂತೆ ರಸ್ತೆ ಬದಿ, ರೈಲಿನ ಸರಳು, ಕುರ್ಚಿ .... ಹೀಗೆ ಎಲ್ಲ ಸ್ಥಳಗಳಲ್ಲೂ ಎಣ್ಣೆ, ಗ್ರೀಸ್ ಮುಂತಾದ ತೈಲಾಧಾರಿತ ಲೇಪನಗಳಿದ್ದೇ ಇರುತ್ತವೆ. ಹೀಗಾಗಿ ಬಾಯಿಂದ ಹೊರಬಿದ್ದ ಚ್ಯೂಯಿಂಗ್ ಗಮ್‍ನ ತುಣಕಿಗೆ ಅಂಟಿಕೊಳ್ಳಲು ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಹಾಗಿದ್ದರೆ ಇದಕ್ಕೇನು ಉಪಾಯ? ಅಂಟಿಕೊಳ್ಳುವ ಗುಣ ಕಡಿಮೆಯಾಗಿಸುವ ಹಾಗೂ ಮಣ್ಣಿನೊಂದಿಗೆ ಬೆರೆತು ಕೊಳೆಯಬಲ್ಲ ಗುಣವನ್ನು ಚ್ಯೂಯಿಂಗ್ ಗಮ್‍ಗೆ ಅಂಟಿಸಿದರೆ ಸಮಸ್ಯೆ ಪರಿಹಾರವಾದಂತೆ. ಆದರೆ ಈ ಗುಣ ಲಕ್ಷಣಗಳ ಬದಲಾವಣೆಗಳನ್ನು ಮಾಡ ಹೊರಟರೆ ಚ್ಯೂಯಿಂಗ್ ಗಮ್‍ನ ರಾಸಾಯನಿಕ ಬಂಧವನ್ನೇ ಬದಲಾಯಿಸಬೇಕು. ಇಲ್ಲಿ ರುಚಿಯನ್ನು ಹಿಡಿದಿಟ್ಟುಕೊಳ್ಳುವ, ಎಷ್ಟು ಹೊತ್ತಾದರೂ ಅಗೆಯಬಲ್ಲ, ಬಿಕರಿಯಾಗುವ ಮುನ್ನ ಹಾಗೂ ಹೆಚ್ಚು ಕಾಲ ಸುರಕ್ಷವಾಗಿರಬಲ್ಲ ಗುಣಗಳನ್ನು ಉಳಿಸಿಕೊಳ್ಳುವುದು ಸಹಾ ಮುಖ್ಯವಾಗುತ್ತದೆ. ಮೂರು ವರ್ಷಗಳ ಹಿಂದೆ ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕೃತಕ ಪಾಲಿಮರ್‌ಗಳ ಬದಲು ಮುಸುಕಿನ ಜೋಳದ ಪ್ರೊಟೀನ್ ಅನ್ನು ಬಳಸುವ ಬಗ್ಗೆ ಪ್ರಯೋಗಗಳು ನಡೆದಿದ್ದವು. ಪಾಲಿಮರ್‌ಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ, ಆದರೆ ಮುಸುಕಿನ ಜೋಳದ ಪ್ರೊಟೀನ್ ದೇಹದಲ್ಲೇ ಜೀರ್ಣವಾಗುತ್ತವೆ, ಇಲ್ಲ ಮಣ್ಣಿನೊಂಡಿಗೆ ಬೆರೆತು ಕರಗಿ ಹೋಗುತ್ತವೆ. ಈ ಸಂಶೋಧನೆಗೆ ಹೆಚ್ಚಿನ ಪ್ರಚಾರ ಸಿಗಲಿಲ್ಲ, ಕೆಲಸ ಮತ್ತೆ ಮುಂದುವರಿಯಲಿಲ್ಲ. ಚ್ಯೂಯಿಂಗ್ ಗಮ್ ತಯಾರಿಕೆಯಲ್ಲಿ ಜಗದ್ವಿಖ್ಯಾತ ಕಂಪನಿಯಾದ ‘ರಿಗ್ಲೆ’ ಪರಿಸರ ಸ್ನೇಹಿ ಚ್ಯೂಯಿಂಗ್ ಗಮ್ ಅನ್ನು ರೂಪಿಸುತ್ತಿರುವ ಸುದ್ದಿ ಹೊರಬಂದಿದೆ. ಇಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧನೆಗೆ ಇದು ಬಹಳ ಹತ್ತಿರದ್ದು ಎನ್ನಲಾಗಿದೆ. ಒಂದು ಕೋಟಿ ಅಮೆರಿಕನ್ ಡಾಲರ್ ಹಣ (ಸುಮಾರು ನಲವತ್ತು ಕೋಟಿ ರೂಪಾಯಿಗಳು) ಹೂಡಿಕೆಯೊಂದಿಗೆ ಪ್ರಯೋಗಗಳು ಗೌಪ್ಯವಾಗಿ ಮುಂದೆ ಸಾಗಿವೆ.
ಬಾಯಲ್ಲಿದ್ದಾಗ ಜಲದ್ವೇಷಿಯಾಗಿದ್ದು ಉಗಿದೆಸೆದ ನಂತರ ಜಲಪ್ರೇಮಿಯಾಗಿಬಿಡುವ ಹಾಗೆ ಚ್ಯೂಯಿಂಗ್ ಗಮ್ ಅನ್ನು ಮಾಡಿದರೆ ತೊಂದರೆ ಕಡಿಮೆಯಾಗುತ್ತದೆ. ಅಂದರೆ ಹೊರಗೆ ಬಿದ್ದ ಚ್ಯೂಯಿಂಗ್ ಗಮ್ ನೀರಿದ್ದ ಸ್ಥಳಕ್ಕೆ ಮಾತ್ರ ಮೆತ್ತಿಕೊಳ್ಳಬೇಕು. ನೀರಿಗೆ ಮೆತ್ತಿಕೊಳ್ಳುವುದೆಂದರೆ ತೈಲದಂಶವನ್ನು ತೊಡೆದು ನೀರಿನೊಂದಿಗೆ ಹೊರಬರಬೇಕು. ಅದು ಬಿದ್ದ ಸ್ಥಳದಲ್ಲಿ ನೀರು ಹುಯ್ದರೆ ಕಿತ್ತು ಬರಬೇಕು. ಉಗಿಯುವವರನ್ನು ನಿಯಂತ್ರಿಸಲಂತೂ ಆಗುವುದಿಲ್ಲ, ಕನಿಷ್ಠ ಚ್ಯೂಯಿಂಗ್ ಗಮ್ ಬಿದ್ದೆಡೆ ನೀರಿನ ಮೂಲಕ ಶುದ್ಧಗೊಳಿಸಲು ಸಾಧ್ಯವಾಗಬೇಕು. ಹೀಗೆ ಆಲೋಚಿಸಿರುವ ರಿವಾಲಿಮರ್ ಕಂಪನಿಯು ಹೊಸ ಮಿಶ್ರಣವೊಂದನ್ನು ಚ್ಯೂಯಿಂಗ್ ಗಮ್ ತಯಾರಿಕೆಗೆಂದು ರೂಪಿಸಿದೆ. ವಸ್ತುವೊಂದಕ್ಕೆ ಅಂಟಿಕೊಂಡ ಕ್ಷಣವೇ ಒಳಗಿನಿಂದ ದ್ರವ ಸ್ರವಿಸಲು ಆರಂಭಿಸಿ ಅಂಟನ್ನು ಬೇರ್ಪಡಿಸಲು ಆರಂಭಿಸುತ್ತದೆ. ನೀರು ಹೊಯ್ದ ಕೂಡಲೇ ಉಳಿದ ಕಸದೊಡನೆ ಕೊಚ್ಚಿ ಹೋಗುತ್ತದೆ. ಮೊದಲ ಹಂತದ ಪರೀಕ್ಷೆಗಳಲ್ಲಿ ನೆಲಕ್ಕೆ ಬಿದ್ದ ಇಪ್ಪತ್ನಾಲ್ಕು ಗಂಟೆಗಳ ನಂತರವೂ ನೀರಿನೊಂದಿಗೆ ಶುದ್ಧಿಗೊಳಿಸಲು ಸಾಧ್ಯವಾಗಿತ್ತು. ಎಂಟು ವಾರಗಳ ಹಿಂದೆ ಅಂಟಿಕೊಂಡಿದ್ದ ಚ್ಯೂಯಿಂಗ್ ಗಮ್‍ನ ತುಣಕುಗಳನ್ನೂ ಸಹಾ ಕೇವಲ ನೀರಿನ ಸಿಂಪರಣೆಯಿಂದ ತೆಗೆಯಲು ಸಾಧ್ಯವಾಗಿದೆ.
ಹಾಗಿದ್ದರೆ ಚ್ಯೂಯಿಂಗ್ ಅಗಿಯುವವರಿಗೆ ರಾಸಾಯನಿಕ ಬದಲಾವಣೆಗಳಿಂದ ರುಚಿ ಕೆಟ್ಟು ಹೋಗಿರಬಹುದೆ? ಈ ಪ್ರಶ್ನೆಗೂ ರಿವಾಲಿಮರ್ ಕಂಪನಿ ಉತ್ತರ ಕಂಡು ಕೊಂಡಿದೆ. ತನ್ನ ಮೂಲ ವಸ್ತುವಿನಲ್ಲಾಗಿರುವ ಬದಲಾವಣೆಗಳನ್ನು ತಿಳಿಸದೆಯೆ ಸಾಮಾನ್ಯ ಚ್ಯೂಯಿಂಗ್ ಗಮ್‍ನೊಂದಿಗೆ ಹೊಸ ವಸ್ತುವಿನಿಂದ ರೂಪಿಸಿದ ಚ್ಯೂಯಿಂಗ್ ಗಮ್ ಅನ್ನು ಬೆರೆಸಿ ಮಾರುಕಟ್ಟೆ ಸಂಶೋಧನೆಗಳನ್ನು ಕಂಪನಿ ಕೈಗೊಂಡಿತ್ತು. ಬಹುತೇಕ ಬಳಕೆದಾರರಿಗೆ ಎರಡೂ ಬಗೆಯ ಚ್ಯೂಯಿಂಗ್ ಗಮ್‍ಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಕೆಲವೊಂದು ಸೂಕ್ಷ್ಮಮತಿಗಳು ಮಾತ್ರ ಹೊಸ ಚ್ಯೂಯಿಂಗ್ ಗಮ್ ಹೆಚ್ಚು ಮಿದುವಾಗಿತ್ತು ಎಂದು ನವಿರಾಗಿ ಆಕ್ಷೇಪಿಸಿದ್ದಾರೆ. ಒಳಗಿನ ಜಲಪ್ರೇಮಿ ರಾಸಾಯನಿಕವು ಬಾಯಿಯ ಜೊಲ್ಲಿನೊಂದಿಗೆ ಬೆರೆತಾಗ, ಚ್ಯೂಯಿಂಗ್ ಗಮ್ ಹಿಂದಿಗಿಂತಲೂ ಮಿದುವಾಗಿ ಭಾಸವಾಗಿರಬಹುದು. ‘ರಿವಾಲಿಮರ್’ ಕಂಪನಿಯ ಉತ್ಪನ್ನವು ಇದೀಗ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾ ಪ್ರಾಧಿಕಾರದ ಒಪ್ಪಿಗೆಗೆ ಕಾಯುತ್ತಿದೆ. ಮೂರು ವಿಶಿಷ್ಟ ಸ್ವಾದಗಳೊಂದಿಗೆ ಹೊಸ ಸಾಮಗ್ರಿಯ ಚ್ಯೂಯಿಂಗ್ ಗಮ್ ಅನ್ನು ಬಿಡುಗಡೆ ಮಾಡಲು ರಿವಾಲಿಮರ್ ಸಿದ್ಧವಾಗಿದೆ.
(ಕೃಪೆ: ವಿಜಯ ಕರ್ನಾಟಕ; 08-10-2007)

ನಮಗೆ ಅಗತ್ಯವಿರುವುದು ಉತ್ತಮ ಸಮಾಜ ನಿರ್ಮಿಸುವ ಎಂಜಿನೀರ್‌ಗಳು

ಕಾರು ಅಪಘಾತದಲ್ಲಿ ಪ್ರತಿಭಾವಂತ ಎಂಜಿನೀರ್ ಒಬ್ಬರ ಸಾವಿನ ಬಗ್ಗೆ ನಿನ್ನೆಯ ಪತ್ರಿಕೆಯಲ್ಲಿನ ಸುದ್ದಿ ಓದಿರುತ್ತೀರಿ. ಅಪಘಾತ ಆದದ್ದು ಹೇಗೆ? ಎಂಬ ಪ್ರಶ್ನೆಗೆ ಪತ್ರಿಕೆಯ ಸುದ್ದಿಯಲ್ಲೇ ಉತ್ತರವಿದೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಆ ಕಾರಿನ ಚಕ್ರ ಪಂಕ್ಚರ್ ಆಯಿತು. ಕಾರಿನ ರಭಸದ ಆ ಓಟದಲ್ಲಿ ಗಾಳಿಯಿಲ್ಲದ ಒಂದು ಚಕ್ರ ಗಾಳಿ ತುಂಬಿದ ಮತ್ತೊಂದು ಚಕ್ರದೊಡನೆ ಸಮತೋಲ ಕಳೆದುಕೊಂಡಿತು. ಈ ಅಸಮತೋಲನದಿಂದ ಚಕ್ರಗಳೆರಡನ್ನು ಹಿಡಿದಿಟ್ಟಿದ್ದ ಸರಳು ತುಂಡಾಯಿತು. ಸ್ಥಿರತೆ ಕಳೆದುಕೊಂಡ ಕಾರು ಬುಡಮೇಲಾಯಿತು. ಈ ಸಂದರ್ಭದಲ್ಲಿ ಕಾರು ಚಲನೆ ಮಾಡುತ್ತಿದ್ದ ಹುಡುಗನ ಎದೆಗೆ ಸ್ಟೀರಿಂಗ್ ಚಕ್ರ ಬಡಿದು ಸಾವುಂಟಾಯಿತು. ಉಳಿದ ಸಹ ಪಯಣಿಗರಿಗೆ ತೀವ್ರವಾದ ಗಾಯಗಳಾಗಿವೆ. ಇಂಥ ಅಪಘಾತಗಳ ವರದಿಯನ್ನೋದಿದ ಸಾರ್ವಜನಿಕರಲ್ಲಿ ಹಲವಾರು ಪ್ರಶ್ನೆಗಳೇಳುತ್ತವೆ. ಅಪಘಾತ ತಪ್ಪಿಸುವಂಥ ಸುರಕ್ಷ ವ್ಯವಸ್ಥೆಗಳು ಕಾರಿನಲ್ಲಿರಲಿಲ್ಲವೆ? ಟೈರು-ಟ್ಯೂಬುಗಳಿಂದ ಹಿಡಿದು ಸ್ಟೀರಿಂಗ್ ಚಕ್ರದ ತನಕ ಎಲ್ಲ ಎಂಜಿನೀರಿಂಗ್ ವಸ್ತುಗಳು ದೋಷಮುಕ್ತವಾಗಿದ್ದವೆ? ರಸ್ತೆ ಅಸಮರ್ಪಕವಾಗಿ ನಿರ್ಮಾಣವಾಗಿತ್ತೆ? ರಸ್ತೆಯಲ್ಲಿ ಮುನ್ನೆಚ್ಚರಿಕಾ ಸಂಕೇತಗಳು ಕಾಣುವಂತಿದ್ದವೆ? ಉಳಿದ ರಸ್ತೆ ಬಳಕೆದಾರರು ಯಾವ ತಪ್ಪೆಸಗಿರಲಿಲ್ಲವೆ? ದೀಪ ಹಾಗೂ ಬೆಳಕಿನ ವ್ಯವಸ್ಥೆಯಲ್ಲಿ ಯಾವುದೇ ಕೊರತೆಯಿರಲಿಲ್ಲವೆ? .... ಈ ಎಲ್ಲ ಕ್ಷೇತ್ರಗಳ ಎಂಜಿನೀರ್‌ಗಳು ಸರಿಯಾಗಿ ಕೆಲಸ ಮಾಡಿದ್ದರೆ? ಅವರು ಸರಿಯಾಗಿ ಕೆಲಸ ಮಾಡುತ್ತವೆಂದು ಪ್ರಮಾಣೀಕರಿಸಿದ್ದ ವ್ಯವಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದವೆ? ಹಾಗಿದ್ದಲ್ಲಿ ಯಾವ ಅನಿರೀಕ್ಷಿತ ಸಂದರ್ಭಗಳು ಅಪಘಾತಕ್ಕೆಡೆ ಮಾಡಿಕೊಟ್ಟವು? ಮುಂದಿನ ಬಾರಿ ಇಂಥ ಪ್ರಮಾದಗಳು ಮರುಕಳಿಸದಂತೆ ನೋಡಿಕೊಳ್ಳಲಾದೀತೆ? ಇಂಥ ಪ್ರಶ್ನೆಗಳು ಕೇವಲ ರಸ್ತೆ ಅಪಘಾತಗಳಾದಾಗ ಮಾತ್ರ ಏಳುವುದಿಲ್ಲ. ಇತ್ತೀಚೆಗೆ ಗಗನಕ್ಕೇರಿದ ಕೆಲ ಹೊತ್ತಿನಲ್ಲಿಯೇ ಪುಟ್ಟ ವಿಮಾನವೊಂದು ಧರೆಗುರುಳಿದಾಗಲೂ ಈ ಬಗೆಯ ಪ್ರಶ್ನೆಗಳೆದ್ದಿದ್ದವು.
ಹಾಗಿದ್ದರೆ ಬದಲಿ ಚಿಂತನೆಗಳಿಗೆ ಅವಕಾಶವೇ ಇಲ್ಲವೆ? ಎಂಜಿನೀರಿಂಗ್ ಕಾಲೇಜುಗಳು ಕೇವಲ ಯಂತ್ರಮಾನವ (ರೋಬಾಟ್) ಗಳನ್ನು ಉತ್ಪಾದಿಸುವ ಕಾರ್ಖಾನೆಗಳೆ? ಹೀಗಾಗಬಾರದು, ‘ನಮ್ಮೆಲ್ಲರನ್ನು ನಾಗರಿಕರಂತೆ ಸುಖವಾಗಿಡಬಲ್ಲ ಆದರೆ ಲೆಕ್ಕಾಚಾರ ಹಾಕುವ ಯಂತ್ರಗಳಲ್ಲದ’ ಎಂಜಿನೀರ್‌ಗಳನ್ನು ಸೃಷ್ಟಿಸಬೇಕು - ಎಂಬ ಚಿಂತನೆಗೆ ಚಾಲನೆ ದೊರೆತಿದೆ. ಅಮೆರಿಕದ ಮೆಸಾಶ್ಯುಸೆಟ್ಸ್ ರಾಜ್ಯದ ನೀಧಾಮ್ ಪಟ್ಟಣದಲ್ಲೊಂದು ಕಾಲೇಜು ಆರಂಭವಾಗಿದೆ. ಫ್ರಾಂಕ್ಲಿನ್ ಓಲಿನ್ ಎಂಜಿನೀರಿಂಗ್ ಕಾಲೇಜ್ ಹೆಸರಿನ ಈ ವಿದ್ಯಾಸಂಸ್ಥೆ ಸ್ಥಾಪನೆಯಾದ (2002) ಕೇವಲ ಐದು ವರ್ಷಗಳಲ್ಲಿ ಜಗತ್ತಿನೆಲ್ಲೆಡೆ ತನ್ನ ಛಾಪು ಮೂಡಿಸಿದೆ. ಮದ್ದು-ಗುಂಡುಗಳನ್ನು ತಯಾರಿಸುತ್ತಿದ್ದ ಫ್ರಾಂಕ್ಲಿನ್ ಓಲಿನ್‍ಗೆ ಶಿಕ್ಷಣ ಕ್ಷೇತ್ರದಲ್ಲಿ ತೀರಾ ಒಲವಿತ್ತು. ಆತ ನಿಧನವಾಗುವ ಹೊತ್ತಿಗೆ (1951) ಅಪಾರ ಆಸ್ತಿಯನ್ನಷ್ಟೇ ಅಲ್ಲ, ಬಹು ದೊಡ್ಡ ಕನಸುಗಳನ್ನೂ ಬಿಟ್ಟು ಹೋಗಿದ್ದ. ಅವನ ಹೆಸರಿನಲ್ಲಿ ಪ್ರತಿಷ್ಠಾನವೊಂದನ್ನು ಸ್ಥಾಪಿಸಿದ ಬಂಧು-ಮಿತ್ರರು ಎಂಜಿನೀರಿಂಗ್ ಕ್ಷೇತ್ರದಲ್ಲಿನ ಹೆಚ್ಚಿನ ಸಂಶೋಧನೆಗಳಿಗೆ ನೆರವು ನೀಡಲಾರಂಭಿಸಿದರು. ಕ್ರಿ.ಶ.1993ರ ಹೊತ್ತಿಗೆ ಪ್ರತಿಷ್ಠಾನದ ನೇತೃತ್ವ ವಹಿಸಿಕೊಂಡಿದ್ದ ಲಾರೆನ್ಸ್ ಮಿಲಾಸ್ ಹಾಗೂ ಇತರೆ ಸದಸ್ಯರಿಗೆ ಓಲಿನ್ ಹೊತ್ತಿದ್ದ ಕನಸುಗಳು ಸಾಕಾರವಾಗುತ್ತಿಲ್ಲ. ಪ್ರತಿಷ್ಠಾನದ ಕೊಡುಗೆಯಿಂದ ಕೇವಲ ಸಾಮಾನ್ಯ ಎಂಜಿನೀರ್‌ಗಳನ್ನು ಉತ್ಪಾದಿಸುವ ಬೃಹತ್ ಕಟ್ಟಡಗಳನ್ನು, ಪ್ರಯೋಗಶಾಲೆ ಉಪಕರಣಗಳನ್ನಷ್ಟೇ ನಿರ್ಮಿಸಲಾಗುತ್ತಿದೆ ಎಂಬ ಚಿಂತೆ ಕಾಡತೊಡಗಿತು. ತಾವು ಇದುವರೆಗೂ ಮಾಡುತ್ತಿರುವ ಕಾರ್ಯವನ್ನು ಯಾವುದೇ ಶ್ರೀಮಂತ ಉದ್ಯಮಿ ಅಥವಾ ಪ್ರತಿಷ್ಠಾನ ಕೈಗೊಳ್ಳಬಹುದು. ತಮ್ಮ ಕೆಲಸದಲ್ಲಿ ಯಾವುದೇ ವೈಶಿಷ್ಟ್ಯವಿಲ್ಲವೆಂದು ಮನವರಿಕೆಯಾಯಿತು. ಜನಪ್ರಿಯತೆಯ ಅಲೆಯಲ್ಲಿ ಸೃಜನಶೀಲತೆ ಕೊಚ್ಚಿಕೊಂಡು ಹೋಗುತ್ತಿದೆಯೆಂಬ ಭೀತಿ ಅವರಲ್ಲಿ ಮೂಡತೊಡಗಿತು.
ಈ ಸಂದರ್ಭದಲ್ಲಿ ಅಮೆರಿಕ ಸರಕಾರದ ಧನ ಸಹಾಯದಿಂದ ಕಾರ್ಯನಿರ್ವಹಿಸುವ ‘ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ’ದೊಂದಿಗೆ ಲಾರೆನ್ಸ್ ಮಿಲಾಸ್ ಮತ್ತು ಸಂಗಡಿಗರು ಚರ್ಚೆ ಮಾಡಿದರು. ಕುತೂಹಲದಿಂದಲೇ ಅನ್ವೇಷಣೆ ನಡೆಸಬಲ್ಲ ಯುವ ಜನರನ್ನು ಪ್ರೋತ್ಸಾಹಿಸಲು ಇವೆರಡೂ ಪ್ರತಿಷ್ಠಾನಗಳು ಯೋಜನೆಗಳನ್ನು ಹಮ್ಮಿಕೊಂಡವು. ಯಾವ ಕಾಲೇಜುಗಳಲ್ಲಿ ಹೊಸ ಸಂಶೋಧನೆಗಳಿಗೆ, ಹೊಸ ಚಿಂತನೆಗಳಿಗೆ ಅವಕಾಶಗಳಿವೆಯೋ ಅಂಥವುಗಳಿಗೆ ಹೆಚ್ಚಿನ ಧನಸಹಾಯ ನೀಡಲಾರಂಭಿಸಿದವು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾರಂಭಿಸಿದಾಗ ಕೆಲವು ಸ್ವಾರಸ್ಯಕರ ಅಂಶಗಳು ಹೊರಬಂದವು. ಎಂಜಿನೀರಿಂಗ್ ಕಾಲೇಜುಗಳ ಪಠ್ಯಕ್ರಮ ಅಲ್ಲಿ ಲಭ್ಯವಿರುವ ಬೋಧಕರ ವಿಷಯ ಪಾಂಡಿತ್ಯದ ಆಧಾರದ ಮೇಲೆ ನಿರ್ಮಾಣವಾಗುತ್ತಿತ್ತು. ಆ ಪಠ್ಯಕ್ರಮ ಕೇವಲ ಶಿಕ್ಷಕರಿಗೆ ಬೋಧನೆ ಮಾಡಲು ನೆರವಾಗುತ್ತಿದ್ದವೇ ಹೊರತು ವಿದ್ಯಾರ್ಥಿಗಳು ಕಲಿಯಲು ಅನುಕೂಲಕರವಾಗಿರಲಿಲ್ಲ. ಇತ್ತ ವಿದ್ಯಾರ್ಥಿಗಳು ಒಂದೇ ವಿಷಯದ ಬಗ್ಗೆ ಪದವಿಯೋತ್ತರ ವ್ಯಾಸಂಗ ನಡೆಸಲು ಇಚ್ಛಿಸುತ್ತಿದ್ದರೆ. ಆದರೆ ಒಂದಕ್ಕೊಂದು ಪೂರಕವಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಆಸಕ್ತರಿರಲಿಲ್ಲ. ಇನ್ನು ಕಾಲೇಜುಗಳೋ ಪದವಿಗೆ ಸಂಭಂಧಿಸಿದ ಬೋಧನೆಯ ಬಗ್ಗೆ ಕೇಂದ್ರೀಕರಿಸುವ ಬದಲು ಸಂಶೋಧನೆಗೆ ಒತ್ತು ನೀಡುತ್ತಿದ್ದವು. ಕಾರಣ, ಸಂಶೋಧನಾ ಯೋಜನೆಗಳಲ್ಲಿ ಹೆಚ್ಚಿನ ಹಣ ಸಿಗುತ್ತಿದ್ದವು. ಅಂದರೆ ಒಟ್ಟಿನಲ್ಲಿ ವಿದ್ಯಾರ್ಥಿಗಳಿಗಿಂತಲು ಮುಖ್ಯವಾದದ್ದು ಕಾಲೇಜಿನ ಬೋಧಕರು ಹಾಗೂ ಅವರ ಜೀವನೋಪಾಯ.
ಹೀಗೆ ಓಲಿನ್ ಪ್ರತಿಷ್ಠಾನಕ್ಕೆ ನಿರಾಸೆಯ ಕಾರ್ಮೋಡ ಕವಿಯಲಾರಂಭಿಸಿತು. ಆದರೆ ಲಾರೆನ್ಸ್ ಮಿಲಾಸ್ ಮತ್ತವನ ಸಹಚರರಿಗೆ ಏನಾದರೂ ಒಂದು ಹೊಸ ಬಗೆಯ ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳಬೇಕೆಂಬ ತುಡಿತವಿತ್ತು. ನಾಲ್ಕು ನೂರು ದಶಲಕ್ಷ ಅಮೆರಿಕನ್ ಡಾಲರ್ (ಸುಮಾರು ಒಂದು ಸಾವಿರದ ಆರು ನೂರು ಕೋಟಿ ರೂಪಾಯಿಗಳು) ಗಳ ಹಣ ಹೂಡಿಕೆಯೊಂದಿಗೆ ಹೊಸ ಎಂಜಿನೀರಿಂಗ್ ಕಾಲೇಜನ್ನು ಪ್ರತಿಷ್ಠಾನ ಆರಂಭಿಸಿತು. ಈ ಹಿಂದೆ ಪ್ರತಿಷ್ಠಿತ ಸದರ್ನ್ ಕ್ಯಾಲಿಫೋರ್ನಿಯಾ ಹಾಗೂ ಅಯೋವಾ‍ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದ್ದ ಹೊಸ ಬಗೆಯ ಚಿಂತಕ ಪ್ರಾಧ್ಯಾಪಕ ರಿಚರ್ಡ್ ಮಿಲ್ಲರ್ ಮುಖ್ಯಸ್ಥರಾಗಿ ನೇಮಕಗೊಂಡರು. ಅಮೆರಿಕದಲ್ಲಿ ಪದವಿ ಶಿಕ್ಷಣ ಅತ್ಯಂತ ದುಬಾರಿ. ಇಂಥ ವಿಶಿಷ್ಟ ಕಾಲೇಜಿಗೆ ಆಸಕ್ತ ವಿದ್ಯಾರ್ಥಿಗಳನ್ನು ಸೆಳೆಯಲು ಏನಾದರೊಂದು ಹೊಸ ಪ್ರಲೋಭನೆ ನೀಡಬೇಕಿತ್ತು. ಲಾರೆನ್ಸ್ ಮಿಲಾಸ್ ನಿರ್ಧರಿಸಿದ್ದೇನೆಂದರೆ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಿಂದ ವಿನಾಯತಿ ನೀಡುವುದು. ತಮ್ಮೊಂದಿಗೆ ಸಹಭಾಗಿಯಾಗಿ ಎಂದು ಕರೆಕೊಟ್ಟ ಮೊದಲ ವರ್ಷದಲ್ಲಿಯೇ ಆರು ನೂರು ಉತ್ಸಾಹಿ ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದವು. ಅವರಲ್ಲಿ ಪ್ರವೇಶಕ್ಕೆ ಆಯ್ಕೆಯಾದವರು ಮೂವತ್ತು ಮಂದಿ. ‘ಯೋಜನೆ ಆಧರಿತ ಕಲಿಕೆ’ ಎಂಬ ತತ್ವದಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಚಟುವಟಿಕೆಗಳನ್ನು ಆರಂಭಿಸಿದರು. ಮೊದಲ ಯೋಜನೆ ‘ಗಾಲ್ಫ್ ಚೆಂಡುಗಳನ್ನು ತೂರಬಲ್ಲ ಫಿರಂಗಿ’ ನಿರ್ಮಾಣ. ಭೌತ ವಿಜ್ಞಾನ, ಸಾಮಗ್ರಿ ವಿಜ್ಞಾನ, ಗಣಿತ ಸೂತ್ರಗಳನ್ನು ಆಧರಿಸಿದ ಮಾದರಿ ರಚನೆ ಮುಂತಾದ ವಿಷಯಗಳಲ್ಲಿನ ಪರಿಣತ ಬೋಧಕರೊಂದಿಗೆ ವಿದ್ಯಾರ್ಥಿಗಳು ಚರ್ಚೆ ನಡೆಸಲಾರಂಭಿಸಿದರು. ಹೀಗೇಕೆ, ಹಾಗೂ ಮಾಡಬಹುದಲ್ಲವೆ, ಇದೇ ಸೂಕ್ತ, ಈ ಒಂದು ಬದಲಾವಣೆ ನಿರೀಕ್ಷೆಗೂ ಮೀರಿದ ಫಲಿತಾಂಶ ತರಲಿದೆ, ಇದರ ಕಾರ್ಯಕ್ಷಮತೆ ಅಪ್ರತಿಮವಾದದ್ದು ..... ವಿದ್ಯಾರ್ಥಿ ವೃಂದ ಹಾಗೂ ಬೋಧಕ ತಂಡದ ನಡುವಿನ ಕ್ರಿಯಾಶೀಲ ಜಟಾಪಟಿಯ ನಡುವೆ ಯಂತ್ರವೊಂದು ಸಿದ್ಧವಾಯಿತು. ಮುನ್ನೂರು ಗಜಕ್ಕೂ ಹೆಚ್ಚಿನ ದೂರಕ್ಕೆ ಗಾಲ್ಫ್ ಚೆಂಡುಗಳನ್ನು ನಿಯಮಕ್ಕನುಸಾರವಾಗಿ ತೂರಬಲ್ಲ ಫಿರಂಗಿ ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸಿತು.
ಸಮಾಜಕ್ಕೆ ಹೆಚ್ಚು ಪ್ರಯೋಜನಕಾರಿಯಾಗಬಲ್ಲ ಉತ್ತಮ ಎಂಜಿನೀರ್‌ಗಳನ್ನು ರೂಪಿಸುವಲ್ಲಿ ಓಲಿನ್ ಕಾಲೇಜು ಇಂದು ಹೆಸರುವಾಸಿ. ನಿರ್ದಿಷ್ಟ ವಿಭಾಗಗಳು, ಇಂತಿಷ್ಟೇ ಸಂಬಳ ಹಾಗೂ ಅವಧಿಯ ಶಿಕ್ಷಕರು, ಕಟ್ಟುನಿಟ್ಟಿನ ಪಠ್ಯಕ್ರಮ - ಇವ್ಯಾವುವೂ ಇಲ್ಲದ ಈ ಸರ್ವಸ್ವತಂತ್ರ ಎಂಜಿನೀರಿಂಗ್ ಕಾಲೇಜಿಗೆ ಒಳ್ಳೆಯ ಹೆಸರಿದೆ. ಜಗನ್ಮಾನ್ಯ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಿಂದ ಹಿಡಿದು ಪ್ರತಿಷ್ಠಿತ ವಾರಪತ್ರಿಕೆ ನ್ಯೂಸ್‍ವೀಕ್‍ನ ತನಕ ಓಲಿನ್ ಕಾಲೇಜಿನ ಸಾಧನೆ ಪ್ರಶಂಸೆಗೊಳಗಾಗಿದೆ. ಸದ್ಯಕ್ಕೆ ವಿದ್ಯಾರ್ಥಿವೇತನದೊಂದಿಗೆ ದಕ್ಷಿಣ ಕೊರಿಯಾದಲ್ಲಿ ಉನ್ನತ ಅಧ್ಯನ ನಡೆಸುತ್ತಿರುವ ಇಲ್ಲಿನ ಹಳೆಯ ವಿದ್ಯಾರ್ಥಿ ಆಲಿಸನ್ ಲೀ ಪ್ರಕಾರ ‘ನಾನೇನಾದರೂ ಮಾಡಬಲ್ಲೆ ಎಂಬ ಛಲ ನನಗೆ ಮೂಡಿದ್ದು ಓಲಿನ್ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ’. ಆಕೆ ಈಗಾಗಲೇ ಗೋಡೆಯನ್ನು ಹತ್ತಬಲ್ಲ ರೋಬಾಟ್ (ಯಂತ್ರಮಾನವ) ನಿರ್ಮಾಣದಲ್ಲಿ ಯಶಸ್ವಿಯಾಗಿದ್ದಾಳೆ. ‘ಯಾವ ಸಮಸ್ಯೆ ಅತ್ಯಂತ ಕ್ಲಿಷ್ಟವೆಂದು ಪರಿಗಣಿತವಾಗಿದೆಯೊ ಅದನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಬಿಡಿಸಲು ಓಲಿನ್ ಕಾಲೇಜನ್ನು ಪ್ರವೇಶಿಸಬೇಕು’ - ಹೀಗೆನ್ನುವವಳು ಮತ್ತೊಬ್ಬ ವಿದ್ಯಾರ್ಥಿನಿ ಮೀನಾಕ್ಷಿ ವೆಂಬುಸುಬ್ರಮಣಿಯನ್. ಉಷ್ಣ ವಿಜ್ಞಾನದಲ್ಲಿನ ಎಂಜಿನೀರಿಂಗ್ ಕೌತುಕಗಳನ್ನು ಅಭ್ಯಸಿಸುವುದರ ಜತೆಗೆ ಅದರ ಚಂಚಲತೆಯ ಮೂಲಗಳನ್ನು ಅರಿಯುವುದರಲ್ಲಿ ಆಕೆಗೆ ಆಸಕ್ತಿ. ಇತ್ತ ಡಯಾನಾ ಡ್ಯಾಬಿಗೆ ಕೊಳಲು, ಪಿಯಾನೊ ಮುಂತಾದ ಸಂಗೀತ ವಾದ್ಯಗಳಲ್ಲಿ ಪರಿಣತಿಯಿದೆ. ಎಂಜಿನೀರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದಿದ್ದಾಳೆ. ಸಂಗೀತದೊಂದಿಗೆ ಏನಾದರೂ ಹೊಸ ವಿಷಯದಲ್ಲಿ ಸಾಧನೆ ಮಾಡಬೇಕೆಂಬ ಒಲವಿನಿಂದ ಓಲಿನ್ ಕಾಲೇಜನ್ನಾಕೆ ಸೇರಿದ್ದಾಳೆ. ಪ್ರಸ್ತುತ ಬುರುಗುಗಳ ನಡುವೆ ಸೇತುವೆಗಳ ನಿರ್ಮಾಣ ಸಾಧ್ಯವೆಂತು ಎಂಬ ಚಿಂತನೆಯಲ್ಲಿದ್ದಾಳೆ. ವಿದ್ಯುನ್ಮಾನ ಕ್ಷೇತ್ರಕ್ಕೆ ಬಹೂಪಯೋಗಿಯಾಗಬಲ್ಲ ಎಂಜಿನೀರಿಂಗ್ ವಿಷಯವಿದು. ಈ ಕಾಲೇಜಿನಲ್ಲಿ ಪ್ರತಿಶತ ನಲವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರಿರುವುದೊಂದು ವಿಶೇಷ.
‘ಉತ್ತಮ ಸಮಾಜಕ್ಕಾಗಿ’ ಎಂಬುದು ಕೇವಲ ಟೀವಿ ಚಾನೆಲ್ ಒಂದರ ಘೋಷವಾಕ್ಯವಷ್ಟೇ ಅಲ್ಲ, ಇತ್ತೀಚಿನ ಸ್ಥಳೀಯ ಸಂಸ್ಥೆಗಳಿಗಾಗಿ ನಡೆದ ಚುನಾವಣೆಯ ಅಭ್ಯರ್ಥಿಯೊಬ್ಬರ ಪ್ರಚಾರ ಸಾಲೂ ಆಗಿತ್ತು. ಓಲಿನ್ ಕಾಲೇಜಿನ ಅಘೋಷಿತ ನಿಲುಮೆ - ‘ಉತ್ತಮ ಸಮಾಜಕ್ಕಾಗಿ ಅಗತ್ಯವಿರುವ ಎಂಜಿನೀರ್‌ಗಳನ್ನು ರೂಪಿಸುವುದು’! ಇದರರ್ಥ ಬಹುಶಃ ಮತ್ತಷ್ಟು ವಿಶ್ವೇಶ್ವರಯ್ಯನವರನ್ನು ದೇಶ ನಿರ್ಮಾಣಕ್ಕೆಂದು ರೂಪಿಸುವುದು, ಅಲ್ಲವೆ?
(ಕೃಪೆ: ವಿಜಯ ಕರ್ನಾಟಕ; 01-10-2007)

ಭೀತಿ ಹೊಡೆದಟ್ಟುವ ತಂತ್ರ - ವಿಕಿರಣ ಪತ್ತೆ ಯಂತ್ರ

ಹುಶಃ ‘ಪರಮಾಣು ಶಕ್ತಿ’ ಎಂಬ ಪದಪುಂಜಕ್ಕೆ ಪರ್ಯಾಯವೆಂದರೆ ‘ಅಗಣಿತ ವಿವಾದ’. ಪರಮಾಣುಗಳಲ್ಲಿ ಅಡಗಿರುವ ಅಗಣಿತ ಶಕ್ತಿಯನ್ನು ವಿದ್ಯುತ್ ಉತ್ಪಾದಿಸಲು ಅಥವಾ ಬಾಂಬೊಂದನ್ನು ಪ್ರಬಲವಾಗಿ ಸಿಡಿಸಲು ಬಳಸಿಕೊಳ್ಳಬಹುದು ಎಂದು ಜಗತ್ತು ಕಂಡುಕೊಂಡ ದಿನದಿಂದಲೂ ವಿವಾದ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ಒಂದು ಸಮಾಧಾನಕರ ವಿಷಯವೆಂದರೆ ಪರಮಾಣು ಶಕ್ತಿ ತಂತ್ರಜ್ಞಾನದ ಜತೆ ಜತೆಗೇ ಅದು ತರಬಹುದಾದ ಅಪಾಯಗಳ ಬಗ್ಗೆ ತಿಳಿವಳಿಕೆಯೂ ಬೆಳೆಯುತ್ತಾ ಬಂದಿದೆ. ಇದರ ಒಟ್ಟಾರೆ ಪರಿಣಾಮ ಸುರಕ್ಷತಾ ಎಂಜಿನೀರಿಂಗ್ ಕ್ಷೇತ್ರದ ಅತ್ಯುನ್ನತ ಪ್ರಗತಿ. ಪರಿಸರದ ಬಗ್ಗೆ ಹೆಚ್ಚು ಕಾಳಜಿಯಿರುವವರು ‘ಬೈಜಿಕ ವಿದ್ಯುದಾಗಾರ’ದಿಂದ (ಅಂದರೆ ಪರಮಾಣು ಶಕ್ತಿಯನ್ನು ಬಳಸಿಕೊಳ್ಳುವ ವಿದ್ಯುತ್ ಉತ್ಪಾದನಾ ಕೇಂದ್ರ) ಹೊರಹೊಮ್ಮಬಹುದಾದ ಪರಮಾಣು ವಿಕಿರಣದ ಬಗ್ಗೆ ಚಿಂತಿಸುತ್ತಾರೆ. ನೈಸರ್ಗಿಕ ಅವಘಢಗಳಿಗೆ ಅಥವಾ ಕಿಡಿಗೇಡಿಗಳ ಧಾಳಿಗೆ ಇಂಥ ಕೇಂದ್ರಗಳು ತುತ್ತಾದರೆ ಸಾರ್ವಜನಿಕರು ವರ್ಷಗಟ್ಟಲೆ ಅಥವಾ ತಲೆಮಾರುಗಟ್ಟಲೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದು ಅವರ ವಾದದ ಹುರುಳು. ಆದರೆ ಇಂದು ನಮಗೆ ಕರಗತವಾಗಿರುವ ಸುರಕ್ಷಾ ಎಂಜಿನೀರಿಂಗ್ ಎಂಥ ಅಪಾಯಗಳನ್ನು ಮೊದಲೇ ಗುರುತಿಸಿ ಅವನ್ನು ನಿವಾರಿಸಿಕೊಳ್ಳಬಲ್ಲದು ಎಂಬ ಆತ್ಮವಿಶ್ವಾಸ ಪರಮಾಣು ವಿಜ್ಞಾನ ಕ್ಷೇತ್ರದ ತಂತ್ರಜ್ಞರದು. ಸದಾ ವಿಕಿರಣ ಸೂಸುತ್ತಲೇ ಉಳಿಯಬಲ್ಲ ಇಂಧನದ ವ್ಯರ್ಥಭಾಗದ ವಿಲೇವಾರಿಯ ಬಗ್ಗೆಯೂ ಆತಂಕಗಳಿವೆ. ಸುರಕ್ಷಿತವಾಗಿ ಅವುಗಳನ್ನು ನೆಲದಾಳದಲ್ಲಿ ಹುಗಿಯುವ, ಕಿಡಿಗೇಡಿಗಳ ಕೈಗೆ ಅವು ಸಿಗದಂತೆ ಮುಚ್ಚಿಡುವ ವ್ಯವಸ್ಥೆಯೂ ಅಭಿವೃದ್ಧಿಗೊಂಡಿವೆ. ತುರ್ತು ಸಂದರ್ಭಗಳಲ್ಲಿ ಇವುಗಳೆಲ್ಲವೂ ಕಾರ್ಯನಿರ್ವಹಿಸದಿದ್ದರೆ? ಎಂಬ ಪ್ರಶ್ನೆಗೆ ತಂತ್ರಜ್ಞರ ಬಳಿ ಉತ್ತರವಿದೆ. ವಿದ್ಯುತ್ ಉತ್ಪಾದನಾ ಕೇಂದ್ರದ ಆವರಣದಲ್ಲಿ ಸದಾ ಕಾಲ ಪರೀಕ್ಷೆಗಳನ್ನು ನಡೆಸಲಾಗುತ್ತಿರುತ್ತದೆ. ಪರಿಸರದಲ್ಲಿ ಪರಮಾಣು ವಿಕಿರಣ ಒಂದು ನಿರ್ದಿಷ್ಟ ಮಟ್ಟವನ್ನು ದಾಟಿದೊಡನೆಯೆ ಎಚ್ಚರಿಕೆ ನೀಡಬಲ್ಲ ಹಾಗೂ ಅದನ್ನು ಸುರಕ್ಷಿತವಾಗಿ ತಡೆಹಿಡಿಯುವ ವ್ಯವಸ್ಥೆಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಯಾವುದೇ ಒಂದು ಪ್ರದೇಶದಲ್ಲಿ ಭಯೋತ್ಪಾದಕರ ಧಾಳಿ ನಡೆದಿದ್ದು ಅವರು ಪರಮಾಣು ವಿಕಿರಣ ಸೂಸುವ ಕಡ್ಡಿಗಳನ್ನೊ, ಮತ್ತೊಂದನ್ನೊ ತೂರಿಬಿಟ್ಟಿದ್ದರೆ? ದೊಡ್ಡ ದೊಡ್ಡ ಗಾತ್ರದ ಪರೀಕ್ಷಾ ಯಂತ್ರಗಳನ್ನು ಅಲ್ಲೆಲ್ಲಾ ಕೊಂಡೊಯ್ದು ತಪಾಸಣೆ ನಡೆಸಲಾಗುವುದಿಲ್ಲ. ನಡೆಸಲು ಸಾಧ್ಯವಾದರೂ ಕಾಲ ಮಿಂಚಿ ಹೋಗಿರುತ್ತದೆ. ಹಾಗಿದ್ದಲ್ಲಿ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ‘ಪೋರ್ಟಬಲ್’ ಪರಮಾಣು ವಿಕಿರಣ ಪತ್ತೆ ಸಾಧನವೊಂದನ್ನು ಅಭಿವೃದ್ಧಿ ಪಡಿಸಲಾಗುವುದಿಲ್ಲವೆ? ಎಂಬುದು ನಿಮ್ಮ ಪ್ರಶ್ನೆ.
ಪ್ರಕೃತಿಯಲ್ಲಿ ಲಭ್ಯವಿರುವ ಎಲ್ಲ ಸಾಮಗ್ರಿಗಳ ಮೂಲ ರೂಪ ‘ಪರಮಾಣು’ ಎಂಬುದು ನಿಮಗೆ ಗೊತ್ತು. ‘ಪರಮಾಣುಗಳು’ ಒಂದನ್ನೊಂದು ಬೆಸೆದುಕೊಂಡರೆ ‘ಅಣು’ ಸೃಷ್ಟಿಯಾಗುತ್ತದೆ. ಅಣುವೊಂದರ ಸ್ಥಿರತೆಗೆ ಅದನ್ನು ರೂಪಿಸಿದ ಪರಮಾಣುಗಳ ನಡುವಣ ಬಂಧನ ಶಕ್ತಿ ಕಾರಣ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೀರಿನ ಅಣುವೊಂದನ್ನು ರೂಪಿಸಲು ಜಲಜನಕದ ಎರಡು ಪರಮಾಣುಗಳು ಹಾಗೂ ಆಮ್ಲಜನಕದ ಒಂದು ಪರಮಾಣು ಜತೆಗೂಡಿ ಬಾಂಧವ್ಯ ಹೊಂದಿರಬೇಕು. ಇದೇ ರೀತಿ ಲೋಹ, ಪ್ಲಾಸ್ಟಿಕ್, ಕೂದಲು, ಬಟ್ಟೆ, ಎಲೆ, ಗಾಜು .. ಹೀಗೆ ನಮ್ಮ ಸುತ್ತಮುತ್ತಲ ಎಲ್ಲ ಸಾಮಗ್ರಿಗಳೂ ಪ್ರಕೃತಿಯಲ್ಲಿ ಮೂಲಭೂತವಾಗಿ ಲಭ್ಯವಿರುವ, ವಿವಿಧ ಸಂಖ್ಯೆಯಲ್ಲಿ ಜೋಡಣೆಯಾದ, ಒಂದೊಂದರ ನಡುವೆಯೂ ಬಂಧನವಿರುವ ವಿವಿಧ ಪರಮಾಣುಗಳ ಸಮೂಹ. ಪ್ರತಿಯೊಂದು ಪರಮಾಣುವೂ ಮೂರು ಬಗೆಯ ಮೂಲಕಣಗಳನ್ನು ಹೊಂದಿರುವುದು ನಿಮಗೆ ಗೊತ್ತು. ಮಧ್ಯ ಕೇಂದ್ರ ಸ್ಥಾನದಲ್ಲಿ ಪ್ರೊಟಾನ್ ಹಾಗೂ ನ್ಯೂಟ್ರಾನ್ ಇದ್ದರೆ ಹೊರಗಣ ಕಕ್ಷೆಗಳಲ್ಲಿ ಎಲೆಕ್ಟ್ರಾನ್‍ಗಳಿರುವುದನ್ನು ನೀವು ಶಾಲಾ ಪಠ್ಯಪುಸ್ತಕಗಳಲ್ಲಿ ಓದಿ ತಿಳಿದಿರುತ್ತೀರಿ. ಪ್ರೋಟಾನ್ ಕಣಗಳು ಧನ (ಅಂದರೆ ಪಾಸಿಟಿವ್) ವಿದ್ಯುತ್ ಆವೇಶದಿಂದಿದ್ದರೆ ಎಲೆಕ್ಟ್ರಾನ್ ಕಣಗಳು ಋಣ (ಅಂದರೆ ನೆಗಟಿವ್) ವಿದ್ಯುತ್ ಆವೇಶದಲ್ಲಿರುತ್ತವೆ. ಪರಮಾಣುವೊಂದರಲ್ಲಿ ಪ್ರೋಟಾನ್ ಮೂಲಕಣಗಳ ಸಂಖ್ಯೆಯಷ್ಟೇ ಎಲೆಕ್ಟ್ರಾನ್‍ಗಳೂ ಇರುತ್ತವೆ. ಕೇಂದ್ರದಲ್ಲಿರುವ ನ್ಯೂಟ್ರಾನ್ ಕಣಕ್ಕೆ ಯಾವುದೇ ವಿದ್ಯುದಾವೇಶವಿರುವುದಿಲ್ಲ. ಈ ಎಲ್ಲ ಕಣಗಳು ವಿವಿಧ ಅನುಪಾತದಲ್ಲಿ ಸೇರ್ಪಡೆಯಿಂದ ಪರಮಾಣುವೊಂದಕ್ಕೆ ನಿರ್ದಿಷ್ಟ ಗುಣಲಕ್ಷಣಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ ಪರಮಾಣುವೊಂದರ ಕೇಂದ್ರ ಅಥವಾ ಬೀಜದಲ್ಲಿ 13 ಪ್ರೋಟಾನ್‍ಗಳಿದ್ದು ಜತೆಗೆ 14 ನ್ಯೂಟ್ರಾನ್‍ಗಳಿದ್ದಲ್ಲಿ, ನಿವ್ವಳ ವಿದ್ಯುದಾವೇಶ ಸೊನ್ನೆಯಾಗಲು 13 ಎಲೆಕ್ಟ್ರಾನ್‍ಗಳು ಅಲ್ಲಿರಬೇಕು. ಈ ಸಂಖ್ಯೆಯಲ್ಲಿ ಮೂಲಕಣಗಳು ಇರುವ ಪರಮಾಣು ಅಲ್ಯುಮಿನಿಯಂ ಎನಿಸಿಕೊಳ್ಳುತ್ತದೆ. ಇಂಥ ಲಕ್ಷ, ಕೋಟಿಗಟ್ಟಲೆ ಇಂಥ ಅಲ್ಯುಮಿನಿಯಂ ಪರಮಾಣುಗಳನ್ನು ಸೇರಿಸಿ ಅಲ್ಯುಮಿನಿಯಂ ಡಬ್ಬಿಗಳು, ತೆಳು ಹಾಳೆಗಳು, ಎಂಜಿನೀರಿಂಗ್ ವಸ್ತುಗಳನ್ನು ರೂಪಿಸಬಹುದು. ನೂರಾರು ವರ್ಷಗಳ ಕಾಲ ಅಲ್ಯುಮಿನಿಯಂ ಬದಲಾಗದ ಸ್ಥಿತಿಯಲ್ಲಿರುವ ಕಾರಣ, ಈ ಮೂಲವಸ್ತುವನ್ನು ಸ್ಥಿರ ಎಂದು ಪರಿಗಣಿಸಬಹುದು.
ಒಂದೇ ಸಂಖ್ಯೆಯ ಪ್ರೋಟಾನ್‍ಗಳಿದ್ದು (ಅಂದರೆ ಅಷ್ಟೇ ಸಂಖ್ಯೆಯ ಎಲೆಕ್ಟ್ರಾನ್‍ಗಳಿರುತ್ತವೆ) ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‍ಗಳಿರುವ ಸಾಧ್ಯತೆಗಳಿರುತ್ತವೆ. ಉದಾಹರಣೆಗೆ ತಲಾ 29 ಪ್ರೋಟಾನ್ ಹಾಗೂ ಎಲೆಕ್ಟ್ರಾನ್‍ಗಳಿರುವ ತಾಮ್ರಕ್ಕೆ ಎರಡು ವಿಭಿನ್ನ ಸಂಖ್ಯೆಯ ನ್ಯೂಟ್ರಾನ್‍ಗಳಿರುತ್ತವೆ. ಒಂದರಲ್ಲಿ 34 ನ್ಯೂಟ್ರಾನ್‍ಗಳಿದ್ದರೆ ಮತ್ತೊಂದು ಬಗೆಯಲ್ಲಿ 36 ನ್ಯೂಟ್ರಾನ್‍ಗಳಿರುತ್ತವೆ. ಇವನ್ನು ತಾಮ್ರದ ಸಮಸ್ಥಾನಿ (ಐಸೋಟೋಪ್) ಎಂದು ಗುರುತಿಸಲಾಗುತ್ತದೆ. ಪ್ರೋಟಾನ್-ಎಲೆಕ್ಟ್ರಾನ್ ಸಂಖ್ಯೆಗಳಲ್ಲಿ ಏರುಪೇರಿರದ ಕಾರಣ ವಿದ್ಯುದಾವೇಶಗಳಲ್ಲಿ ವ್ಯತ್ಯಾಸವಿರದು, ಜತೆಗೆ ರಾಸಾಯನಿಕ ಗುಣಗಳು ಒಂದೇ ಇರುವುದು ಸಮಸ್ಥಾನಿಗಳ ವೈಶಿಷ್ಟ್ಯ. ಹಾಗೆಂದ ಮಾತ್ರಕ್ಕೆ ಎಲ್ಲ ಮೂಲಧಾತುಗಳ ಸಮಸ್ಥಾನಿಗಳೂ ಸ್ಥಿರವಾಗಿರಬಹುದೆಂದಲ್ಲ. ಕೆಲವೊಂದು ಮೂಲಧಾತುಗಳ ಸಮಸ್ಥಾನಿಗಳು ‘ವಿಕಿರಣ’ ಸೂಸುತ್ತಾ ತಮ್ಮ ಆಯಸ್ಸನ್ನು ಕರಗಿಸಿಕೊಳ್ಳುತ್ತವೆ. ಸ್ಥಿರ ರೂಪವನ್ನು ಪಡೆಯುವ ತನಕ ಈ ಪ್ರಕ್ರಿಯೆ ಲಕ್ಷಾಂತರ ವರ್ಷಗಳ ತನಕ ಮುಂದುವರಿಯುತ್ತದೆ. ಕೆಲವೊಂದು ಮೂಲವಸ್ತುಗಳ ಸಮಸ್ಥಾನಿಗಳು ಸ್ವಾಭಾವಿಕವಾಗಿಯೇ ವಿಕಿರಣ ಸೂಸುವ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಸ್ವಾಭಾವಿಕವಾಗಿ ಲಭ್ಯವಿರುವ ಅತ್ಯಂತ ತೂಕದ ವಿಕಿರಣ ವಸ್ತು ಯುರೇನಿಯಂ. ಅಂತೆಯೇ ಬೈಜಿಕ ಅಂದರೆ ಪರಮಾಣು ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಗೆ ಯುರೇನಿಯಂ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸ್ವಾಭಾವಿಕವಾಗಿ ಲಭ್ಯವಿರುವ ವಿಕಿರಣಪೂರಕ ಮೂಲವಸ್ತುಗಳೂ ಸೇರಿದಂತೆ ಯಾವುದೇ ಇಂಥ ಗುಣವಿರುವ ಸಮಸ್ಥಾನಿಗಳು ಅಪಾಯಕಾರಿ. ಇಂಥ ವಿಕಿರಣ್ಗಳಲ್ಲಿ ವಿಭಿನ್ನ ಬಗೆಯ ಕಿರಣಗಳಿರುತ್ತವೆ. ಅವು ಪರಮಾಣುವೊಂದನ್ನು ತಾಗಿದೊಡನೆಯೆ ಅದರ ಹೊರ ಕಕ್ಷೆಯಲ್ಲಿರುವ ಎಲೆಕ್ಟ್ರಾನ್‍ಗಳನ್ನು ಕಿತ್ತೊಗೆಯುತ್ತವೆ. ಎಲೆಕ್ಟ್ರಾನ್‍ಗಳ ನಷ್ಟ ಅನೇಕ ಜೈವಿಕ ದುಷ್ಪರಿಣಾಮಗಳನ್ನು ತರಬಲ್ಲವು. ಉದಾಹರಣೆಗೆ ಜೀವಕೋಶವೊಂದರ ಸಾವಿನಿಂದ ಹಿಡಿದು, ಜೀವಿಗಳೆಲ್ಲದರ ಗುಣಾವಗುಣಗಳಿಗೆ ಕಾರಣವಾದ ಜೀನ್‍ನ (ಗುಣಾಣು) ವಿನ್ಯಾಸ ಹಾಗೂ ಕಾರ್ಯಾಚರಣೆಯಲ್ಲಿ ಬದಲಾವಣೆಗಳಾಗುವ ಸಂಭವವಿರುತ್ತವೆ. ಇದರಿಂದಾಗಿ ಅನೇಕ ಆನುವಂಶಿಕ ಕಾಯಿಲೆಗಳು ವಂಶದಿಂದ ವಂಶಕ್ಕೆ ಮುಂದುವರಿಯಬಹುದು. ಈ ಬಗೆಯ ಪ್ರಬಲ ಭೀತಿಯೇ ಪರಮಾಣುವಿಗೆ ಸಂಭವಿಸಿದ ಯಾವುದೇ ಪ್ರಯೋಗಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು, ಬಾಂಬ್‍ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಕಳೆದ ಐದು ದಶಕಗಳಲ್ಲಿ ಈ ಬಗ್ಗೆ ಸಾಕಷ್ಟು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಪ್ರಗತಿ ಕಂಡಿರುವುದರಿಂದ ನಮ್ಮ ಭಯವನ್ನೂ ಮಿತಿಯಲ್ಲಿಟ್ಟುಕೊಳ್ಳಬಹುದು.
ತಮ್ಮ ಪ್ರಯೋಗಗಳು ಸುರಕ್ಷ ಎಂದು ಬಿಂಬಿಸುವುದಷ್ಟೇ ಅಲ್ಲ, ಯಾವುದೇ ಸಮಯದಲ್ಲಿ ತಂತ್ರಜ್ಞಾನವನ್ನು ಅಲ್ಪ ಮಟ್ಟಿಗೆ ತಿಳಿದವರೂ ಅಪಾಯವಿಲ್ಲ ಎಂದು ಸಾಬೀತು ಮಾಡಿ ತೋರಿಸುವಂಥ ತಂತ್ರಜ್ಞಾನಗಳು ಸೃಷ್ಟಿಯಾಗಬೇಕು. ಯಾವುದೇ ಪರಿಸರದಲ್ಲಿ ವಿಕಿರಣ ಹೆಚ್ಚಿದೆಯೆ ಎಂದು ಪರೀಕ್ಷಿಸಬಲ್ಲ ಕೈಯ್ಯಲ್ಲಿ ಹಿಡಿದು ಸಾಗಿಸಬಹುದಾದ ಯಂತ್ರವೊಂದನ್ನು ಅಮೆರಿಕದಲ್ಲಿ ರೂಪಿಸಲಾಗಿದೆ. ಅಲ್ಲಿನ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ಧನಸಹಾಯದಿಂದ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದಲ್ಲಿ ಟಂಗ್‍ಸ್ಟನ್ ಸುರುಳಿಯನ್ನು ಬಳಸಿಕೊಂಡು ಪರಮಾಣು ವಿಕಿರಣವನ್ನು ಅಳೆಯಬಲ್ಲ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚೂ-ಕಮ್ಮಿ ನಮ್ಮ ಕಾರುಗಳಲ್ಲಿ ಬಳಸುವಂಥ ಬ್ಯಾಟರಿಯೊಂದರ ನೆರವಿದ್ದರೆ ಸಾಕು, ವಿಕಿರಣ ತಾಗಿರುವ ದ್ರವದ ಹನಿಗಳನ್ನು ಇದು ವಿಶ್ಲೇಷಿಸಬಲ್ಲದು. ಇಲ್ಲಿ ಗಣನೆಗೆ ಬರುವುದು ಯಾವ ಲೋಹದ ವಿಕಿರಣ ಪರಿಸರದಲ್ಲಿದೆಯೆ ಎಂಬುದು.
ಪ್ರತಿಯೊಂದು ಲೋಹವೂ ನಿರ್ದಿಷ್ಟ ತಾಪಮಾನವನ್ನು ದಾಟಿದ ನಂತರ ನಿರ್ದಿಷ್ಟ ಬಣ್ಣದ ಪ್ರಭೆಯನ್ನು ಹೊರಸೂಸುತ್ತದೆ. ಇದನ್ನು ಆ ಲೋಹದ ವರ್ಣ ಸಹಿ ಎಂದು ವಿಜ್ಞಾನಿಗಳು ಅರ್ಥೈಸಿಕೊಂಡಿದ್ದಾರೆ. ತಪಾಸಣೆಗೊಳಗಾದ ಯಾವುದೇ ಮಾದರಿಯನ್ನು ಮೊದಲು ಒಣಗಿಸಿ ಆನಂತರ ಸುಮಾರು 1650 ಡಿಗ್ರಿ ಸೆಂಟಿಗ್ರೇಡ್ ತಾಪಮಾನಕ್ಕೆ ಅದನ್ನು ಕಾಯಿಸಿದಾಗ ನಿರ್ದಿಷ್ಟ ಬಣ್ಣದ ಮಿಂಚು ಸುಳಿಯುತ್ತದೆ. ಅದನ್ನು ಸೂಕ್ತ ಸಂವೇದಿಯ ಮೂಲಕ ಗ್ರಹಿಸಿ, ಆ ಬೆಳಕಿನಲೆಯ ಉದ್ದ, ಅಗಲ, ಎತ್ತರಗಳ ಆಧಾರದ ಮೇಲೆ ಮೂಲವಸ್ತುವೊಂದರ ಯಾವ ಸಮಸ್ಥಾನಿ ವಿಕಿರಣಕ್ಕೆ ಕಾರಣವಾಗಿತ್ತೆಂದು ಕೆಲನಿಮಿಷಗಳಲ್ಲಿಯೇ ತಿಳಿದುಕೊಳ್ಳಬಹುದು. ಇದುವರೆಗೂ ದೊಡ್ಡ ದೊಡ್ಡ ಪ್ರಯೋಗಶಾಲೆಗಳಲ್ಲಿ, ಹೆಚ್ಚಿನ ಪ್ರಮಾಣದ ಮಾದರಿಗಳನ್ನು ದಿನಗಟ್ಟಲೆ ನಡೆಸುವ ಪ್ರಕ್ರಿಯೆಗಳ ಮೂಲಕವಷ್ಟೇ ತಿಳಿಯಬಹುದಾಗಿದ್ದ ಮಾಹಿತಿ, ಕೇವಲ ಕೈಯ್ಯಲ್ಲಿ ಹಿಡಿದು ಕೊಂಡೊಯ್ಯಬಹುದಾದ ಸಾಧನದಿಂದ ಅತ್ಯಲ್ಪ ಮಾದರಿಯ ವಿಶ್ಲೇಷಣೆಯೊಂದಿಗೆ ಕೆಲ ನಿಮಿಷದಲ್ಲಿಯೇ ಅರಿಯಬಹುದು. ಜತೆಗೆ ಈ ಸಾಧನವನ್ನು ಬಳಸಲು ಪರಿಣತ ತಜ್ಞರು ಬೇಕಾಗಿಲ್ಲ. ವಿಕಿರಣ ಸೂಸುವ ವಸ್ತು ಹತ್ತಿರದಲ್ಲಿದೆಯೆಂದು ಪತ್ತೆಯಾದೊಡನೆಯೆ, ಕೊಲೆ ನಡೆದ ಸ್ಥಳಕ್ಕೆ ನಾಯಿಗಳನ್ನು ಕೊಂಡೊಯ್ಯುವಂತೆ ಈ ವಿಕಿರಣ ಪತ್ತೆ ಸಾಧನವನ್ನು ಪೊಲೀಸರು ಕೊಂಡೊಯ್ಯಬಹುದು.
ಭಯೋತ್ಪಾದಕರು ಕೇವಲ ಭೌತಿಕ ವಸ್ತುಗಳು ಹಾಗೂ ಜೀವಿಅಗಳ ವಿನಾಶವನ್ನಷ್ಟೇ ಬಯಸುವುದಿಲ್ಲ. ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನೇ ನಿರ್ನಾಮ ಮಾಡಲು ಯತ್ನಿಸುತ್ತಾರೆ. ಇದರಿಂದಾಗುವ ಹಾನಿಯ ಪರಿಣಾಮ ಅತ್ಯಂತ ಹೆಚ್ಚಿನದು. ವಿಕಿರಣ ಸೂಸುವ ವಸ್ತುವೊಂದು ಕಳುವಾಗಿದೆಯೆಂಬ ಗಾಳಿಸುದ್ದಿಯೇ ಸಹಸ್ರ ಸಂಖ್ಯೆಯಲ್ಲಿ ಜನರನ್ನು ಬೆದರಿಸಬಲ್ಲದು. ಅಲ್ಲಿದೆ, ಇಲ್ಲಿ ಸಿಕ್ಕಿದೆ, ಮತ್ತಷ್ಟು ಕಳುವಾಗಿವೆ, ಈಗಾಗಲೇ ಒಂದಷ್ಟು ಜನರಿಗೆ ತೊಂದರೆಯಾಗಿದೆ ... ಮುಂತಾದ ಸುದ್ದಿಗಳಿಗೆ ರೆಕ್ಕೆ-ಪುಕ್ಕಗಳು ಹಚ್ಚಿಕೊಂಡು ಸಾಂಪ್ರದಾಯಿಕ ಮಾಧ್ಯಮಗಳೊಂದಿಗೆ ಇಂಟರ್‌ನೆಟ್, ಮೊಬೈಲ್ ಫೋನ್ ಮುಂತಾದ ಸಾಧನಗಳ ಮೂಲಕ ಅಲ್ಪಕಾಲದಲ್ಲಿಯೇ ಭೀತಿಯ ಕಾರ್ಮೋಡ ಕವಿಯಬಹುದು. ಇಂಥ ಭೀತಿಯನ್ನು ತೊಡೆಯುವುದರ ಜತೆಗೆ ಸುರಕ್ಷಾ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜನರಿಗೆ ಮರು-ಆಶ್ವಾಸನೆ ನೀಡಲು, ವಿಕಿರಣ ಪತ್ತೆ ಸಾಧನ ನೆರವಾಗಲಿದೆ.
ದೂಳು, ಮಣ್ಣು, ನೀರು, ಬೆಳೆ ಹೀಗೆ ಯಾವುದೇ ವಸ್ತುವಿನ ಮಾದರಿಗಳನ್ನೂ ಈ ಸಾಧನದ ಮೂಲಕ ತಪಾಸಣೆಗೊಳಿಸಬಹುದು. ಈ ಹಿಂದೆ ರಕ್ತದ ಮಾದರಿಗಳಲ್ಲಿ ಸೀಸದ ಕುರುಹುಗಳಿವೆಯೆ ಎಂದು ಪರೀಕ್ಷಿಸಬಲ್ಲ ಸುಲಭ ಸಾಧನವನ್ನು ನಿರ್ಮಿಸಿದ್ದ ವಿಜ್ಞಾನಿಗಳ ತಂಡವೇ ವಿನೂತನ ವಿಕಿರಣ ಪತ್ತೆ ಸಾಧನವನ್ನೂ ರೂಪಿಸಿದೆ. ಪ್ರಯೋಗಶಾಲೆಯ ಹಂತದಲ್ಲಿ ಸಾಧನ ಯಶಸ್ವಿಯಾಗಿ ವಿಕಿರಣ ಸೋರಿಕೆಯನ್ನು ಪತ್ತೆ ಮಾಡಿದೆ. ಹೆಚ್ಚಿನ ಮಟ್ಟದ ಪರಿಶೀಲನೆಗೆ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಆಯಕಟ್ಟಿನ ಜಾಗಗಳಲ್ಲಿ ಹೊಗೆಯ ಜಾಡನ್ನು ಹಿಡಿದು ಬೆಂಕಿಯನ್ನು ಗುರುತಿಸುವ ಸಾಧನಗಳನ್ನು ಅಳವಡಿಸುವುದು ನಿಮಗೆ ಗೊತ್ತು. ಇದೇ ರೀತಿ ವಿಕಿರಣ ಸೋರಿಕೆಯನ್ನು ಪತ್ತೆ ಮಾಡಲು ಇಂಥ ಅಳವಡಿಕೆಗಳನ್ನು ಉಪಯೋಗಿಸಬಹುದೇನೊ?
(ಕೃಪೆ: ವಿಜಯ ಕರ್ನಾಟಕ 24-09-2007)

Monday, September 17, 2007

‘ಜೋಕೆ ... ಜಾಲದ ಬಲೆಗೆ ಬಿದ್ದಾಗಲೇ ಅರಿವೆ ನೀ ಸಂಚು’

ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿ ಭಯೋತ್ಪಾತ ಕೃತ್ಯ ನಡೆದರೂ ನಾವೀಗ ನಡುಗಬೇಕಾದ ಪರಿಸ್ಥಿತಿಯಿದೆ. ಸಮೂಹ ಮಾಧ್ಯಮದ ಅತ್ಯದ್ಭುತ ಪ್ರಗತಿಯಿಂದ ಆಯಾ ಕ್ಷಣದಿಂದಲೇ ರೆಕ್ಕೆಪುಕ್ಕಗಳನ್ನು ಹಚ್ಚಿಕೊಂಡ ಸುದ್ದಿ ಜಗತ್ತಿನಾದ್ಯಂತ ಹರಡಿ ಆತಂಕಕ್ಕೆಡೆ ಮಾಡಿಕೊಡುತ್ತದೆ. ಹತ್ತಾರು ಜನರನ್ನು ಕೊಲ್ಲುವುದಕ್ಕಿಂತಲೂ ಅಂಥ ಸುದ್ದಿಯೊಂದನ್ನು ಲಕ್ಷಾಂತರ ಜನರಿಗೆ ಮುಟ್ಟಿಸುವುದು ಭಯೋತ್ಪಾದಕರ ಮುಖ್ಯ ಉದ್ದೇಶವಾಗುತ್ತಿದೆ. ಉಪಗ್ರಹ ಸಂಪರ್ಕ ಜಾಲದ ನೆರವಿನ ಟೀವಿಯಂಥ ಪ್ರಬಲ ಸಮೂಹ ಮಾಧ್ಯಮ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಂತೆ ಸಾಮಾನ್ಯ ಜನರನ್ನು ಕಂಗಾಲು ಮಾಡುವುದು ಭಯೋತ್ಪಾದಕರಿಗೆ ಸುಲಭವಾಗುತ್ತಿದೆ. ಈ ನಿಟ್ಟಿನಲ್ಲಿ ಅವರು ಜಯ ಸಾಧಿಸಿದರೂ, ಸಾಂಪ್ರದಾಯಿಕ ಸಂಪರ್ಕ ಸಾಧನಗಳ ಮೂಲಕ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುವ ಅಥವಾ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕೆಲಸ ಕಷ್ಟವಾಗುತ್ತಿದೆ. ಎಲ್ಲ ದೇಶಗಳ ಬೇಹುಗಾರಿಕಾ ಸಂಸ್ಥೆಗಳು, ಆಂತರಿಕ ಸುರಕ್ಷಾ ಏಜೆನ್ಸಿಗಳು, ಮಿಲಿಟರಿ ಭಯೋತ್ಪಾದಕರ ಸಂಪರ್ಕ ಜಾಲವನ್ನು ಬೇಧಿಸುವುದರ ಜತೆಗೆ ತಮ್ಮ ಸಂಪರ್ಕ ಜಾಲದಲ್ಲಿ ವಿನಿಮಯವಾಗುವ ಮಾಹಿತಿ ಅವರಿಗೆ ಲಭ್ಯವಾಗದಂತೆ ನೋಡಿಕೊಳ್ಳುತ್ತಿವೆ. ಆದರೆ ಇವೆರಡು ಬಣಗಳ ನಡುವಣ ಮೇಲಾಟ 20-20 ಕ್ರಿಕೆಟ್ ಪಂದ್ಯಗಳಿಗಿಂತಲೂ ರೋಮಾಂಚಕ. ನಿತ್ಯ ಸಮರವೆಂದೇ ಪರಿಗಣಿಸಬಹುದಾದ ಹೋರಾಟವಿದು.

ಇಂಟರ್‌ನೆಟ್ ನಿಮಗೆ ಗೊತ್ತು. ಅಮೆರಿಕ ಹಾಗೂ ರಶಿಯ ದೇಶಗಳ ನಡುವಣ ಬಾಹ್ಯಾಂತರಿಕ್ಷ ಪೈಪೋಟಿಯಲ್ಲಿ (ಸ್ಪುಟ್ನಿಕ್ Vs. ಅಪೋಲೊ) ಕೆಲ ಕಾಲ ರಶಿಯ ದೇಶ ಮೇಲುಗೈ ಸಾಧಿಸಿತ್ತು. ಈ ಸಂದರ್ಭದಲ್ಲಿ ಬಾಹ್ಯಾಂತರಿಕ್ಷದಿಂದ ರಶಿಯ ನಡೆಸಬಹುದಾದ ಸಂಭವನೀಯ ಧಾಳಿಯಿಂದ ತನ್ನ ದೇಶದ ಮಿಲಿಟರಿ ಮಾಹಿತಿಗಳ ರಕ್ಷೆ ಹಾಗೂ ಸುರಕ್ಷ ವಿನಿಮಯಕ್ಕೆಂದು ಅಮೆರಿಕ ಸ್ಥಾಪಿಸಿಕೊಂಡ ಸಂಪರ್ಕ ಜಾಲ ‘ಅರ್ಪಾ - ಅಡ್ವಾನ್ಸ್‍ಡ್ ರಿಸರ್ಚ್ ಪ್ರಾಜೆಚ್ಟ್ ಏಜೆನ್ಸಿ’ನೆಟ್ (ಕ್ರಿ.ಶ.1969). ಮಿಲಿಟರಿ ದರ್ಪದೊಂದಿಗೆ ಈ ‘ಅರ್ಪಾನೆಟ್’ ಮಿಳಿತಗೊಂಡು ‘ಡರ್ಪಾ - ಡಿಫೆನ್ಸ್ ಅರ್ಪಾ’ನೆಟ್ ಎಂದು ಬದಲಾಯಿತು. ಮಿಲಿಟರಿ ಸಂಶೋಧನೆಗಳಿಗೆ ನೆರವು ನೀಡುತ್ತಿದ್ದ ಅಮೆರಿಕದ ವಿಶ್ವವಿದ್ಯಾಲಯಗಳು ಒಂದಕ್ಕೊಂದು ಜೋಡಣೆಯಾದವು. ಮಿಲಿಟರಿ ಪ್ರಯೋಗಶಾಲೆಗಳೊಂದಿಗೆ ನಾಗರಿಕರಿಗೆ ಅಗತ್ಯವಾದ ವಿಜ್ಞಾನ ಸಂಶೋಧನೆಗಳನ್ನು ನಡೆಸುತ್ತಿದ್ದ ಸರ್ಕಾರಿ ಸಂಸ್ಥೆಗಳು ಈ ಸಂಪರ್ಕ ಜಾಲಕ್ಕೆ ಸೇರ್ಪಡೆಯಾದವು. ರಶಿಯ ಹಾಗೂ ಅಮೆರಿಕಗಳ ನಡುವಣ ‘ಶೀತಲ ಸಮರ’ ಕೊನೆಗೊಳ್ಳುತ್ತಾ ಬಂದಂತೆ ಈ ಸುರಕ್ಷ ಸಂಪರ್ಕ ಜಾಲ ‘ಮುಕ್ತ’ಗೊಂಡಿತು. ಕೇವಲ ಅಮೆರಿಕ ಬೆಂಬಲಿತ ದೇಶಗಳಲ್ಲಿ ಚಾಲನೆಯಲ್ಲಿದ್ದ ಈ ಸರ್ವ ಸ್ವತಂತ್ರ ಹಾಗೂ ಮುಕ್ತ ವಿನಿಮಯದ ಸಂಪರ್ಕ ಜಾಲ ಉಳಿದೆಲ್ಲ ದೇಶಗಳಿಗೆ ವಿಸ್ತರಿಸಲಾರಂಭಿಸಿತು. ಕಾಲ ಕಳೆದಂತೆ ಈ ವಿಸ್ಮಯ ಸಂಪರ್ಕ ಜಾಲದ ವ್ಯಾಪ್ತಿ ನಿರೀಕ್ಷೆಗೂ ಮೀರಿ ವಿಸ್ತೃತಗೊಂಡಿತು. ಇಂಟರ್‌ನೆಟ್ ಎಂಬ ಮಾಯಾಜಾಲ ಸಂಪರ್ಕ ಕ್ಷೇತ್ರದ ಮಹೇಂದ್ರ ಜಾಲದ ಸ್ಥಾನ ಪಡೆಯಿತು. ಅತ್ಯಂತ ಅಗ್ಗದ ಕ್ಷಿಪ್ರ ಸಂಪರ್ಕ ಜಾಲವೆಂದು ಹೆಸರಾಯಿತು.

ವಿಧ್ಯ್ವಂಸಕ ಕೃತ್ಯಗಳಿಗೆ ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರಲ್ಲಿ ಭಯೋತ್ಪಾದಕರು ಸದಾ ಮುಂದು. ಇಂಟರ್‌ನೆಟ್‍ನಂಥ ಶಕ್ತಿಶಾಲಿ ಸಂಪರ್ಕ ಮಾಧ್ಯಮ ಎಲ್ಲರಿಗೂ ಸುಲಭವಾಗಿ ಲಭ್ಯವಾದಂತೆ ಭಯೋತ್ಪಾದಕರಿಗೆ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಸುಲಭವಾಯಿತು. ಇಂಟರ್‌ನೆಟ್ ಮೂಲಕ ದೂರ ಸಂಪರ್ಕ ಅಗ್ಗವಷ್ಟೇ ಅಲ್ಲ ಸುರಕ್ಷ ಎಂದು ಮನವರಿಕೆಯಾದ ಮೇಲೆ ಅವರದನ್ನು ಹೆಚ್ಚು ಹೆಚ್ಚಾಗಿ ಬಳಸಲಾರಂಭಿಸಿದರು. ತಮ್ಮದೇ ಆದ ಇಂಟರ್‌ನೆಟ್ ತಾಣದ ಮೂಲಕ ಮಾಹಿತಿಯ ಮಹಾಪೂರ ಹರಿಸುವುದರ ಜತೆಗೆ, ಪ್ರತ್ಯೇಕ ಇ-ಮೇಲ್ ಜಾಲದಲ್ಲಿ ಮಾಹಿತಿ ವಿನಿಯಮ ಮಾಡಿಕೊಳ್ಳಲಾರಂಭಿಸಿದರು. ಸಾರ್ವಜನಿಕ ಚರ್ಚೆಗಳಿಗೋಸ್ಕರ ‘ಬ್ಲಾಗ್ - (ವೆ)ಬ್+ಲಾಗ್’ ಎಂಬ ಮುಕ್ತ ವೇದಿಕೆಗಳನ್ನು ಸೃಷ್ಟಿಸತೊಡಗಿದರು. ತಮ್ಮ ಸಿದ್ಧಾಂತಗಳ ಪ್ರಸರಣೆಗೆ ಇಂಟರ್‌ನೆಟ್ ಹರಟೆಕಟ್ಟೆಗಳನ್ನು ಬಳಸತೊಡಗಿದರು. ಯಾವುದೇ ನಿರ್ಬಂಧಗಳಿಲ್ಲದ ಇಂಟರ್‌ನೆಟ್ ಭಯೋತ್ಪಾದಕರುಗಳಿಗೆ ಅತ್ಯಗತ್ಯ ಸಂಪರ್ಕ ಜಾಲವಾಯಿತು. ಸಮಸ್ಯೆ ಹುಟ್ಟಿಕೊಂಡಿರುವುದೇ ಇಲ್ಲಿ. ಯಾವ ಸಮಯದಲ್ಲಿ, ಯಾವ ಭಾಷೆಯಲ್ಲಿ, ಯಾವ ನೆಲೆಯಿಂದ, ಎಂಥ ಪ್ರಚೋದಕ ಸಾಮಗ್ರಿಯನ್ನು ತುಂಬುತ್ತಿದ್ದಾರೆ? ಅಂಥ ಸಾಮಗ್ರಿಗಳು ಜಗತ್ತಿನ ಯಾವ ಯಾವ ಬಳಕೆದಾರರ ಕಣ್ನೋಟವನ್ನು ತುಂಬುತ್ತಿವೆ? ಅವುಗಳ ಒಟ್ಟಾರೆ ಪರಿಣಾಮವೆಂಥದು? ಅವುಗಳ ಪ್ರಸರಣೆಯನ್ನು ನಿಗ್ರಹಿಸುವುದು ಹೇಗೆ? ಎಲ್ಲ ಜವಾಬ್ದಾರಿಯುತ ದೇಶಗಳ ಮುಂದಿರುವ ಪ್ರಶ್ನೆಗಳು. ಆತಂಕ ಹುಟ್ಟಿಸಿರುವ ವಿಷಯವೆಂದರೆ ಇಂಟರ್‌ನೆಟ್ ಅನ್ನೇ ಒಂದು ಬೃಹತ್ ಮಳಿಗೆಯಾಗಿಸಿಕೊಂಡು ತಮ್ಮ ಸಿದ್ಧಾಂತಗಳ ಪ್ರಚಾರ, ಅಮಾಯಕರುಗಳ ನೇಮಕ, ಹಾಗೂ ಧಾಳಿಗಳ ಆಯೋಜನೆಗಳನ್ನು ಈ ಭಯೋತ್ಪಾದಕರು ಮಾಡುತ್ತಿರುವುದು.

ಇಂಟರ್‌ನೆಟ್‍ನ ತವರೂರಾದ ಅಮೆರಿಕದಲ್ಲಿ ಈ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಉಂಟಾಗಿದೆ. ಪ್ರಚಾರಕ್ಕೆ ಸಿಲುಕದ ಅದೆಷ್ಟೋ ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಯೋತ್ಪಾತ ನಿಗ್ರಹಕ್ಕೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಮೆರಿಕದ ಮರುಭೂಮಿ ಪ್ರದೇಶ ಅರಿಝೋನ ರಾಜ್ಯ. ಅಲ್ಲಿನ ಒಂದು ಜಿಲ್ಲೆ ಟ್ಯುಸನ್. ಇಲ್ಲಿ ಅರಿಝೋನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ‘ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ’ದ ಧನ ಸಹಾಯ ಹಾಗೂ ಸರ್ಕಾರದ ಬೇಹುಗಾರಿಕಾ ಏಜೆನ್ಸಿಗಳಲ್ಲಿ ಲಭ್ಯವಿರುವ ತಂತ್ರಜ್ಞಾನದ ನೆರವಿನಿಂದ ಇಂಟರ್‌ನೆಟ್ ಮೂಲಕ ನಡೆಯುತ್ತಿರುವ ಭಯೋತ್ಪಾತ ಪ್ರಸರಣೆಯನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ‘ಡಾರ್ಕ್ ವೆಬ್ - ಕರಾಳ ಜಾಲ’ ಎಂಬ ಹೆಸರಿನ ಈ ಯೋಜನೆಯಲ್ಲಿ ಇಂಟರ್‌ನೆಟ್ ಮೂಲಕ ಹರಿದಾಡುವ ಭಯೋತ್ಪಾತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಹಾಗೂ ವಿಶ್ಲೇಷಿಸುವ ಕಾರ್ಯ ಭರದಿಂದ ಸಾಗಿದೆ. ‘ಆಲ್ ಖೈದಾ’ ಸೇರಿದಂತೆ ಗುರುತರ ಭಯೋತ್ಪಾದನಾ ಸಂಘಟನೆಗಳಿಗೆ ಸಂಬಂಧಿಸಿದ ಸುಮಾರು ಐದು ಸಹಸ್ರ ಇಂಟರ್‌ನೆಟ್ ತಾಣಗಳು ‘ಕರಾಳ ಜಾಲ’ದ ಹದ್ದಿನ ಕಣ್ಣಿನ ತಪಾಸಣೆಗೆ ಒಳಗಾಗಿವೆ. ಇರಾಕ್, ಪಾಕಿಸ್ತಾನಗಳಷ್ಟೇ ಅಲ್ಲ, ಯುರೋಪ್ ದೇಶಗಳಲ್ಲಿಯೂ ಗೌಪ್ಯವಾಗಿ ಹರಡಿಕೊಂಡಿರುವ ನೂರಾರು ಸಂಘಟನೆಗಳು ಇಂಟರ್‌ನೆಟ್‍ನಲ್ಲಿ ಪ್ರಸರಿಸುತ್ತಿರುವ ಹಲವು ಭಾಷೆಗಳ, ಸಂಕೇತೀಕರಿಸಿದ ಸಾಮಗ್ರಿಗಳು ‘ಕರಾಳ’ ಹಸ್ತದ ವ್ಯಾಪ್ತಿಗೆ ಸಿಲುಕಿವೆ.

‘ಕರಾಳ ಜಾಲ’ ಯೋಜನೆಯಲ್ಲಿ ಸಂಪರ್ಕ ಜಾಲಕ್ಕೆ ಸಂಬಂಧಿಸಿದ ಹಲವಾರು ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ‘ವೆಬ್ ಸ್ಪೈಡರಿಂಗ್’ ಅಂದರೆ ಮಿಕವೊಂದನ್ನು ಸಿಲುಕಿಸಲು ಆಯಕಟ್ಟಿನ ಸ್ಥಾನದಲ್ಲಿ ಬಲೆ ಹೆಣೆಯುವ ಹಂಚಿಕೆ. ಹಾಗೆಯೇ ‘ಕೊಂಡಿ’, ‘ಸಾಮಗ್ರಿ’ ಹಾಗೂ ‘ಒಡೆತನ’ದ ವಿಶ್ಲೇಷಣಾ ತಂತ್ರಜ್ಞಾನ. ಭಯೋತ್ಪಾತಕ್ಕೆ ಸಂಬಂಧಿಸಿದ ತಾಣ ಪತ್ತೆಯಾದೊಡನೆ ಅವು ಯಾವ ಯಾವ ತಾಣಗಳಿಗೆ ಕೊಂಡಿಯನ್ನು ಕೊಟ್ಟಿವೆ? ಆ ಸಾಮಗ್ರಿಗಳಲ್ಲಿ ಗೌಪ್ಯವಾಗಿ ಅಡಗಿರುವ ಸಂದೇಶಗಳು ಎಂಥವು? ಯಾರ ಪ್ರಚೋದನೆಯ ಮೇಲೆ ಇಂಥ ಮಾಹಿತಿ ಹರಿದಾಡುತ್ತಿವೆ? ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಹಲವು ಗಾತ್ರದ, ಹಲವು ಭಾಷೆಗಳ, ಹಲವು ಸ್ವರೂಪದ ಅಗಾಧ ಮಾಹಿತಿ ಭಂಡಾರವನ್ನು ವಿಶ್ಲೇಷಿಸಲು ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್ ಸ್ಮರಣಕೋಶಗಳು ಬೇಕು. ಜತೆಗೆ ಮಾಹಿತಿ ವಿಶ್ಲೇಷಣೆಯ ವೇಗವನ್ನು ಹೆಚ್ಚಿಸಲು ಶಕ್ತಿಶಾಲಿ ಸಂಸ್ಕಾರಕಗಳು ಅವಶ್ಯ. ವಿವಿಧ ಭಾಷೆ, ಸಂಕೇತಗಳ ಗೂಡಾರ್ಥವನ್ನು ಒಡೆಯಲು ತನ್ನದೇ ಆದ ಬುದ್ಧಿಮತ್ತೆಯುಳ್ಳ ಅಂದರೆ ತನ್ನ ಸ್ಮರಣಕೋಶದೊಳಗಿನ ಮಾಹಿತಿಯೊಂದಿಗೆ ತಾಳೆ ನೋಡಿ ಇಂಥದೇ ಇರಬಹುದು ಎಂದು ಚಹರೆಯನ್ನು ಗ್ರಹಿಸಬಲ್ಲ ಯಂತ್ರಾಂಶ/ತಂತ್ರಾಂಶವೂ ಅಗತ್ಯ. ‘ಕರಾಳ ಜಾಲ’ ಹೊರತಂದಿರುವ ಮತ್ತೊಂದು ಸೌಲಭ್ಯವೆಂದರೆ ‘ರೈಟ್‍ಪ್ರಿಂಟ್ - ಬರಹ ಮುದ್ರಣ’. ಒಂದು ಆಕ್ಷೇಪಾರ್ಹ ವಿಷಯ ಇಂಟರ್‌ನೆಟ್‍ನಲ್ಲಿ ಪ್ರಕಟವಾಗಿದೆಯೆಂದು ಭಾವಿಸಿ. ಅದರ ಕರ್ತೃ ಯಾರೆಂದು ಪತ್ತೆಯಾಗಿಲ್ಲ. ಆ ಬರಹವನ್ನು ಗುರುತು ಮತ್ತು ಮನನ ಮಾಡಿಕೊಳ್ಳುವ ಸಲಕರಣೆಯು, ಇಂಟರ್‌ನೆಟ್ ಜಾಲಾಡಲು ಹೊರಡುತ್ತದೆ. ಅದೇ ಶೈಲಿಯ ಬರಹಗಳು ಎಲ್ಲೆಲ್ಲಿ ಪ್ರಕಟವಾಗಿವೆ ಎಂಬುದನ್ನು ಪತ್ತೆ ಮಾಡುತ್ತದೆ. ಅವುಗಳ ಕರ್ತೃ ಯಾರಿರಬಹುದೆಂದು ಹುಡುಕುತ್ತದೆ. ಇಂಥ ಕೆಲಸ ಮಾಡುವವರು ಎಲ್ಲೋ ಒಂದೆಡೆ ತಮ್ಮ ಜಾಡನ್ನು ಬಿಟ್ಟಿರುತ್ತಾರೆ ಎಂಬ ಅಂದಾಜಿನ ಮೇಲೆ ಈ ಪತ್ತೇದಾರಿ ನಿಂತಿದೆ. ಅಕಸ್ಮಾತ್ ಆತ/ಆಕೆ ಯಾರೆಂದು ಗೊತ್ತಾಗದಿದ್ದರೂ ಸರಿ. ಅದೇ ಶೈಲಿಯ ಬರಹಗಳು ಹೊಸತಾಗಿ ಇಂಟರ್‌ನೆಟ್‍ನಲ್ಲಿ ಎಲ್ಲೇ ಪ್ರಕಟವಾಗಲಿ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯೊಂದನ್ನು ಅಳವಡಿಸಿಕೊಳ್ಳಬಹುದು.

ಇಂಟರ್‌ನೆಟ್‍ನಲ್ಲಿ ಜೇಡರ ಬಲೆಯನ್ನು ಹರಡುವುದು ಮಳೆ ಸುರಿವ ಕಾಡಿನಲ್ಲಿ ಹಕ್ಕಿಗೆ ಬಲೆ ಬೀಸುವಷ್ಟೇ ವ್ಯರ್ಥದ ಕೆಲಸ. ಒಮ್ಮೊಮ್ಮೆ ಬಲೆ ಬೀಸಿರುವುದು ಪತ್ತೆಯಾಗಿ ತಮ್ಮ ಜಾಡು ಮತ್ತು ಚಹರೆಯನ್ನು ಬದಲಿಸಿಕೊಳ್ಳುತ್ತಲೇ ಇರುತ್ತಾರೆ ಭಯೋತ್ಪಾದಕರು. ಅಷ್ಟಲ್ಲದೆಯೆ ತಮ್ಮ ಪಹರೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಾರೆ. ಅವರ ಚಾಣಕ್ಷತನ ಒಮ್ಮೊಮ್ಮೆ ಹೇಗಿರುತ್ತೆದೆಂದರೆ, ತಾವು ಬಲೆಗೆ ಬಿದ್ದಿದ್ದೇವೆಂದು ತೋರಿಸಿಕೊಳ್ಳುತ್ತಲೇ ಧಾಳಿ ಆರಂಭಿಸತೊಡಗುತ್ತಾರೆ. ಅವರ ಸಾಮಗ್ರಿಗಳನ್ನೆಲ್ಲವನ್ನೂ ಬೇಹುಗಾರರು ತಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದೊಡನೆಯೆ ಅಂಥ ಸಾಮಗ್ರಿಗಳಿಗೆ ವೈರಸ್‌ಗಳನ್ನು ಸೇರಿಸಹೊರಡುತ್ತಾರೆ. ಯಾವ ಯಾವ ವೆಬ್‍ತಾಣದಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಅರಿವಾದೊಡನೆಯೆ ಆ ತಾಣಕ್ಕೆ ಧಾಂಗುಡಿಯಿಡಲು ಶುರು ಹಚ್ಚಿಕೊಳ್ಳುತ್ತಾರೆ. ಇದು ಹೆಚ್ಚೂ-ಕಮ್ಮಿ ಬೆಕ್ಕು-ಇಲಿಗಳ ಚೆಲ್ಲಾಟದಂತೆ ಮುಂದುವರಿಯುತ್ತದೆ. ಪಾತ್ರ ಒಮ್ಮೊಮ್ಮೆ ಬದಲಾಗುತ್ತದೆ. ಒಬ್ಬರಿಗೆ ಚೆಲ್ಲಾಟವಾದರೆ ಮತ್ತೊಬ್ಬರಿಗೆ ಪ್ರಾಣಸಂಕಟ.

ಭಯೋತ್ಪಾತ ವಿರುದ್ಧದ ಜಾಗತಿಕ ಧಾಳಿ ನಿರಂತರ. ಇಂಥದೊಂದು ವ್ಯವಸ್ಥೆಯನ್ನು ಆರಂಭಿಸಿದ ನಂತರ ಯೋಜನೆ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಉದಾಹರಣೆಗೆ ವೆಬ್‍ತಾಣವೊಂದರಲ್ಲಿ ‘ಉತ್ತಮಪಡಿಸಿದ ಸ್ಫೋಟಕ ಸಾಧನಗಳು - ಐ.ಇ.ಡಿ.’ಗಳನ್ನು ತಯಾರಿಸುವುದು ಹೇಗೆ? ಎಂಬುದನ್ನು ಸವಿವರವಾಗಿ ತಿಳಿಸಲಾಗಿದೆಯೆಂದು ಭಾವಿಸಿ. ಇದರಲ್ಲಿ ಸ್ಫೋಟಕ ಸಾಧನವನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಯಾವುವು? ಅವು ಸಿಗುವ ಮಳಿಗೆಗಳು ಯಾವುವು? ಅದನ್ನು ತಯಾರಿಸುವುದು ಹೇಗೆ? ಮತ್ತೊಬ್ಬರಿಗೆ ತಿಳಿಯದಂತೆ ಅದನ್ನು ಸಾಗಿಸುವುದು ಯಾವ ರೀತಿ? ಸ್ಫೋಟಗೊಳಿಸುವ ಬಗೆ ಎಂಥದು? ಆನಂತರ ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳು ಯಾವುವು? ಎಂಬ ವಿಷಯಗಳನ್ನು ಸಚಿತ್ರವಾಗಿ ತಿಳಿಸುವುದರ ಜತೆಗೆ ಪೂರಕವಾದ ವೀಡಿಯೋ ತುಣಕುಗಳನ್ನು ಸೇರಿಸಿದ್ದಾರೆಂದುಕೊಳ್ಳಿ. ಮೊದಲಿಗೆ ಈ ತಾಣಕ್ಕೆ ಭೇಟಿ ಕೊಡುವವರ ಜಾಡು ಹಿಡಿಯುವವರ ಗುರುತು ಪತ್ತೆ ಮಾಡಬೇಕು. ಅವರು ಭೇಟಿ ನೀಡುವ ಇನ್ನಿತರ ತಾಣಗಳು, ಸಂಪರ್ಕ ಹೊಂದುವ ಇತರ ವ್ಯಕ್ತಿಗಳು, ಅವರ ಸಂಪರ್ಕ ಜಾಲ ಹೀಗೆ ಪತ್ತೆ ಮಾಡುತ್ತಾ ಹೋಗಿ, ಒಂದು ದತ್ತಾಂಶ ಸಂಚಯವನ್ನು ರೂಪಿಸಿಕೊಳ್ಳಬಹುದು. ಇನ್ನು ತಾಣದಲ್ಲಿ ವಿವರಿಸಿರುವಂತೆ ಸಾಮಗ್ರಿ ಬಿಕರಿ ಮಾಡುವ ಮಳಿಗೆಗಳ ಸುತ್ತ ಪಹರೆ ಹಾಕಬಹುದು. ಅದರಲ್ಲಿ ತೋರಿಸಿರುವಂತೆ ಸಾಧನಗಳು ಪತ್ತೆಯಾದಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು. ಇಂಥ ಯೋಜನೆಗಳನ್ನು ಈ ವಿಧಾನದ ಮೂಲಕ ಕರಾಳ ಜಾಲದ ಅಡಿಯಲ್ಲಿ ಹೊಸಕಿ ಹಾಕಲಾಗಿದೆ.

ಭಯೋತ್ಪಾತ ಜಾಗತಿಕ ಸಮಸ್ಯೆ. ಸಾರ್ವಜನಿಕರ ನೆರವಿಲ್ಲದೆಯೆ ಯಾವುದೇ ಆಡಳಿತ ಈ ಸಮಸ್ಯೆಯನ್ನು ಏಕಪಕ್ಷೀಯವಾಗಿ ನಿವಾರಿಸಲಾಗುವುದಿಲ್ಲ. ಯಾವುದೇ ಅನಪೇಕ್ಷಣೀಯ ಸಾಮಗ್ರಿ ಅಥವಾ ಆಕ್ಷೇಪಾರ್ಹ ಬರಹ ಇಂಟರ್‌ನೆಟ್‍ನಲ್ಲಿ ಕಣ್ಣಿಗೆ ಬಿದ್ದರೆ ಸಮೀಪದ ‘ಸೈಬರ್ ಪೊಲೀಸ್ ಠಾಣೆ’ಗಳಿಗೆ ಮಾಹಿತಿ ನೀಡಬೇಕಾದ ಕರ್ತವ್ಯ ಎಲ್ಲ ಪ್ರಜ್ಞಾವಂತ ನಾಗರಿಕರದು. ‘ಕರಾಳ ಜಾಲ’ ಯೋಜನೆಗೆ ಯಶ ಸಿಗಲಿ, ನೈಜ ಲೋಕದಲ್ಲಿ ಭಯೋತ್ಪಾತ ಹೆಚ್ಚಿಸುವ ಸೈಬರ್ ಲೋಕದ ಎಲ್ಲ ಪ್ರಯತ್ನಗಳೂ ನಿಷ್ಫಲವಾಗಲಿ. ಮಾಹಿತಿಯ ಮುಕ್ತ ಪ್ರಸರಣೆಗೆಂದೇ ಹುಟ್ಟಿ ಬಂದ ಇಂಟರ್‌ನೆಟ್‍ಗೆ ಮುಕ್ತತೆಯೇ ಕುತ್ತಾಗದಿರಲಿ.

(ಕೃಪೆ : ವಿಜಯ ಕರ್ನಾಟಕ, 17-09-2007)

Monday, September 10, 2007

‘ರೊಬಾಟ್’ ಮಿಡತೆಯ ರೆಕ್ಕೆಯಲ್ಲಿ ನಮ್ಮ ಹೃದಯ ಸ್ನಾಯು?

ಮ್ಮ ದೇಹದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ಸ್ನಾಯುಗಳು ಯಾವುವು ಎಂಬ ಪ್ರಶ್ನೆಗೆ ಹೃದಯದಲ್ಲಿ ಹುದುಗಿರುವ ಸ್ನಾಯುಗಳೆಂದು ನಿಸ್ಸಂಶಯವಾಗಿ ಹೇಳಬಹುದು. ಕಾರಣ, ಹಗಲೂ ರಾತ್ರಿ ಹೃದಯವೆಂಬ ಪಂಪು ನಿರಂತರವಾಗಿ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಸ್ನಾಯುಗಳೆಲ್ಲವೂ ಪ್ರತಿಸ್ಪಂದಿಸಬೇಕು. ಒಂದೊಂದು ಹೃದಯ ಮಿಡಿತಕ್ಕೂ ಮೇಳೈಸುವಂತೆ ಸ್ನಾಯುಗಳು ಸಂಕುಚಿತವಾಗಬೇಕು/ವಿಕಸನವಾಗಬೇಕು. ಇದು ಸಾಧ್ಯವಾಗುವುದು ಹೇಗೆಂದರೆ ಹೃದಯ ಸ್ನಾಯುಗಳಲ್ಲಿ ಜೀವಕೋಶಗಳು ಒಂದು ನಿರ್ದಿಷ್ಟ ಮಾದರಿಯಲ್ಲಿ ಜೋಡಣೆಯಾಗಿರುತ್ತವೆ. ಈ ಜೋಡಣೆ ಕೇವಲ ಯಾಂತ್ರಿಕ ಜೋಡಣೆಯಷ್ಟೇ ಅಲ್ಲ, ವಿದ್ಯುತ್ ಸಂಕೇತಗಳ ಸುಗಮ ಹರಿದಾಟಕ್ಕೂ ಅನುವು ಮಾಡಿಕೊಡುತ್ತದೆ. ಅಂದರೆ ನಮ್ಮ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹುದುಗಿರುವ ಸೂಕ್ಷ್ಮಾತಿ ಸೂಕ್ಷ್ಮ ಅಳತೆಯ ‘ಎಲೆಕ್ಟ್ರಾನಿಕ್ ಸರ್ಕ್ಯೂಟ್ - ವಿದ್ಯುನ್ಮಾನ ಮಂಡಲ’ದಂತೆ ಈ ಜೀವಕೋಶ ಮಂಡಲ ಕೆಲಸ ಮಾಡುತ್ತಿರುತ್ತದೆ. ಕಾರ್ಯ ನಿರ್ವಹಿಸುತ್ತಿರುವ ಸ್ನಾಯುಗಳಿಗೆ ಬೇಕಾದ ಶಕ್ತಿ ಸಂಚಯನಕ್ಕೆ ಅಗತ್ಯವಾದ ಗ್ಲುಕೋಸ್ ಅಂಶ ಸತತವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿರುತ್ತದೆ. ಇಂಥ ಅತ್ಯದ್ಭುತ ಕಾರ್ಯಪಟುತ್ವವಿರುವ ಸಾಮಗ್ರಿಯನ್ನು ಕೃತಕವಾಗಿ ತಯಾರಿಸುವಂತಿದ್ದರೆ ಎಷ್ಟೆಲ್ಲಾ ಅನುಕೂಲಗಳಿರುತ್ತಿದ್ದವು. ಹೃದಯಾಘಾತವಾದಾಗ ಆ ಭಾಗದಲ್ಲಿ ನಿಶ್ಚೇತನಗೊಂಡ ಸ್ನಾಯುಗಳಿಗೆ ಬದಲಿಯಾಗಿ ಇಂಥ ಕೃತಕ ಸ್ನಾಯುಗಳನ್ನು ಜೋಡಿಸಬಹುದಿತ್ತು. ತೊಂದರೆಗೀಡಾದ ಸ್ನಾಯುಗಳನ್ನು ಕತ್ತರಿಸಿ ಆ ಭಾಗದಲ್ಲಿ ಕೃತಕ ಸ್ನಾಯುಗಳನ್ನು ಅಳವಡಿಸಬಹುದಿತ್ತು. ಥೇಟ್ ನಮ್ಮ ಮನೆಯ ವಿವಿಧ ಭಾಗಗಳಿಗೆ ವಿದ್ಯುತ್ ಸಂಪರ್ಕ ನೀಡುವ ವೈರುಗಳಂತೆ, ಹಳತಾದ, ಹರಿದು ಹೋದ ತಂತಿಗಳನ್ನು ಬದಲಿಸುವಂತೆ ಅಥವಾ ಹೊಸ ಸಂಪರ್ಕ ಬೇಕೆಂದೆಡೆ ತಂತುಗಳನ್ನು ಸೇರ್ಪಡೆ ಮಾಡುವಂತೆ, ನಮ್ಮ ಹೃದಯದ ಸ್ನಾಯು ಮಂಡಲದಲ್ಲಿ ಮಾರ್ಪಾಡುಗಳನ್ನು ಮಾಡಬಹುದಿತ್ತು.
ನಮ್ಮ ದೇಹದಲ್ಲಿ ಸೃಷ್ಟಿಯಾಗಿರುವ ಪರಿಪಕ್ವ ಎಂಜಿನೀರಿಂಗ್ ವ್ಯವಸ್ಥೆಯನ್ನು ಕೃತಕವಾಗಿ ಮರುಸೃಷ್ಟಿಸುವುದು ಅಷ್ಟು ಸುಲಭವಲ್ಲ. ಸ್ವಲ್ಪ ಮಟ್ಟಿಗೆ ಅಂಥದೇ ಸಾಮಗ್ರಿಗಳನ್ನು ರೂಪಿಸಲು ಸಾಧ್ಯವಾದರೂ ಅದು ಕೈಗೆಟುಕದಷ್ಟು ದುಬಾರಿಯಾಗಿರುತ್ತದೆ. ಜತೆಗೆ ಬೇಕೆಂದೆಡೆ ಕೂಡಿಸಲು ಸಾಧ್ಯವಾಗದಷ್ಟು ದೊಡ್ಡದಾಗಿರುತ್ತದೆ. ಬೇಕಾದಂತೆ ಬಾಗಿಸಲು, ಜೋಡಿಸಲು, ಹೆಣೆಯಲು ಸಾಧ್ಯವಾಗದಂತೆ ರೂಪುಗೊಂಡಿರುತ್ತದೆ. ನಮ್ಮದೇ ದೇಹದಿಂದ ಹೊರತೆಗೆದ ‘ಆಕರ ಕೋಶ’ ಅಥವಾ ‘ಸ್ಟೆಮ್ ಸ್ಟೆಲ್ಸ್’ಗಳಿಂದ ಸ್ನಾಯುಗಳನ್ನು ಮರು ರೂಪಿಸುವ ಸಾಧ್ಯತೆಯೇನೋ ಇದೆ. ಅದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಎಲ್ಲ ಜನರ ‘ಆಕರ ಕೋಶಗಳನ್ನು’ ಬ್ಯಾಂಕುಗಳಲ್ಲಿ ಶೇಖರಣೆ ಇನ್ನೂ ಮಾಡಿಲ್ಲ ಹಾಗೂ ಈ ಬಗ್ಗೆ ನೀತಿ ಸಂಹಿತೆಗಳು ಇನ್ನೂ ರೂಪುಗೊಂಡಿಲ್ಲ. ಹಾಗೆಂದ ಮಾತ್ರಕ್ಕೆ ಜೀವ ವಿಜ್ಞಾನಿಗಳು ಕೈಕಟ್ಟಿ ಕೂತಿಲ್ಲ, ನಮಗೆ ಹತ್ತಿರದ ಸಂಬಂಧಿಗಳಾದ, ಸುಲಭವಾಗಿ ಸಿಗಬಲ್ಲ ಇಲಿಗಳ ಮೇಲೆ ತಮ್ಮ ಪ್ರಯೋಗಗಳನ್ನು ಮುಂದುವರಿಸಿದ್ದಾರೆ. ಅವುಗಳ ನಾಶದ ಬಗ್ಗೆ ಯಾರೂ ಹೆಚ್ಚಾಗಿ ಗುಲ್ಲೆಬ್ಬಿಸದ ಕಾರಣ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ಈ ಬಗೆಯ ಪ್ರಯೋಗಗಳಿಂದ ಎರಡು ಬಗೆಯ ಅನುಕೂಲಗಳಿವೆ. ಮೊದಲನೆಯದು ಇಂಥ ಸ್ನಾಯುಗಳನ್ನು ಸೃಷ್ಟಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದು, ಎರಡನೆಯದು ಇತರೆ ಕೃತಕ ವಸ್ತುಗಳೊಂದಿಗೆ ಈ ಬಗೆಯ ಸ್ನಾಯುಗಳನ್ನು ಮಿಳಿತಗೊಳಿಸಿ ಅವುಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡುವುದು. ಮೊದಲನೆಯ ಸೃಷ್ಟಿಕ್ರಿಯೆಯ ಅನುಕೂಲಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಎರಡನೆಯ ಸೃಷ್ಟಿಕ್ರಿಯೆಯಲ್ಲಿ ಯಶಸ್ವಿಯಾದರೆ ಭವಿಷ್ಯದಲ್ಲಿ ವಿನ್ಯಾಸಗೊಳಿಸಬಹುದಾದ ಸಣ್ಣ ಸಣ್ಣ ‘ರೋಬಾಟ್ - ಯಂತ್ರಮಾನವ’ಗಳಿಗೆ ಉತ್ತಮ ಕಾರ್ಯಕ್ಷಮತೆಯ ಚಲನೆಗಳನ್ನು ನೀಡಬಹುದು.
ಅಮೆರಿಕದ ಜಗನ್ಮಾನ್ಯ ಹಾರ್ವರ್ಡ್ ವಿಶ್ವವಿದ್ಯಾಲಯ ನಿಮಗೆ ಗೊತ್ತು. ಇಲ್ಲಿನ ಯಂತ್ರ ವಿಜ್ಞಾನ ವಿಭಾಗದ ತಜ್ಞರು ಜೀವ ವಿಜ್ಞಾನಿಗಳು ಹಾಗೂ ವೈದ್ಯರೊಡಗೂಡಿ ಮಹತ್ತರ ಪ್ರಯೋಗವೊಂದನ್ನು ಹಮ್ಮಿಕೊಂಡಿದ್ದಾರೆ. ಇಲಿಗಳ ಆಕರ ಕೋಶಗಳಿಂದ ರೂಪಿಸಿದ ಹೃದಯ ಸ್ನಾಯುಗಳನ್ನು ಪ್ಲಾಸ್ಟಿಕ್ ಎಳೆಗಳೊಂದಿಗೆ ಮಿಳಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಇಂಥ ಸಾಮಗ್ರಿಯನ್ನು ಬಳಸಿಕೊಂಡು ಪುಟ್ಟ ‘ರೊಬಾಟ್’ಗಳನ್ನು ರೂಪಿಸಿದ್ದಾರೆ. ಇರುವೆಗಳಂತೆ ಚಲಿಸುವ, ಪುಟಾಣಿ ಮೀನಿನ ಮರಿಯಂತೆ ಈಜುವ, ಮಿಡತೆಗಳಂತೆ ನೆಗೆಯುವ ಯಂತ್ರಗಳನ್ನವರು ವಿನ್ಯಾಸಗೊಳಿಸಿದ್ದಾರೆ. ಪ್ಲಾಸ್ಟಿಕ್ ಹಾಳೆಗಳ ಆಯಕಟ್ಟಿನ ಜಾಗಗಳಲ್ಲಿ ಕೂರಿಸಿದ ಇಲಿಗಳ ಹೃದಯ ಸ್ನಾಯುಗಳು ಬೇಕೆಂದೆಡೆ ಬಾಗಿ, ಬಳಕಿ, ತಿರುಗಿ, ಸಂಕುಚಿತಗೊಂಡು, ವಿಕಸನಗೊಳ್ಳುವ ಕಾರ್ಯಗಳನ್ನು ಪ್ಲಾಸ್ಟಿಕ್‍ನಿಂದ ಮಾಡಿಸಿವೆ. ಈ ಸ್ನಾಯುಗಳು ಪದೇ ಪದೇ ಸಂಕುಚನ/ವಿಕಸನಗೊಳ್ಳುವ ಮೂಲಕ ಪ್ಲಾಸ್ಟಿಕ್ ಹಾಳೆ ಆಲಿಕೆಯಾಕಾರದಲ್ಲಿ ಸುತ್ತಿಕೊಳ್ಳುವ, ಬಿಚ್ಚಿಕೊಳ್ಳುವ ಕೆಲಸಗಳನ್ನು ಅತ್ಯಂತ ಕ್ಷಿಪ್ರವಾಗಿ ಮಾಡಿವೆ. ಆಯತಾಕಾರ, ತ್ರಿಕೋನಾಕೃತಿ, ವೃತ್ತಾಕಾರದ ಪ್ಲಾಸ್ಟಿಕ್ ಹಾಳೆಗಳ ನಿರ್ದಿಷ್ಟ ಭಾಗಗಳಲ್ಲಿ ಅಳವಡಿಸಿದ ಸ್ನಾಯುಗಳಿಗೆ ಆಣತಿಗಳನ್ನು ನೀಡುವುದು ಹೇಗೆ? ಎಂಬುದು ಪ್ರಶ್ನೆ. ದೇಹವೊಂದರಲ್ಲಿ ಅಡಗಿರುವ ಸ್ನಾಯುಗಳಿಗೆ ಆಣತಿಗಳನ್ನು ನರತಂತುಗಳು ನೀಡುತ್ತವೆ. ಸಂಪರ್ಕ ಮಾಹಿತಿಯನ್ನು ಜೀವಕೋಶಗಳ ನಡುವಣ ಪ್ರೋಟೀನ್ ರವಾನಿಸುತ್ತವೆ. ಶಕ್ತಿ ಸಂಚಯನವನ್ನು ಗ್ಲುಕೋಸ್ ಮಾಡುತ್ತದೆ.
ಇವೆಲ್ಲ ಕಾರ್ಯಗಳನ್ನು ಕೃತಕವಾಗಿ ನಡೆಸುವುದು ಹೇಗೆ? ಮೊದಲಿಗೆ ಸ್ನಾಯುವೊಂದರ ಜೀವಕೋಶಗಳು ನಿರ್ದಿಷ್ಟ ರೀತಿಯಲ್ಲಿ ಜೋಡಣೆಯಾಗಬೇಕು. ಇದಕ್ಕಾಗಿ ವಿಜ್ಞಾನಿಗಳು ಸೂಕ್ಷ್ಮ ಅಳತೆಯಲ್ಲಿ ಪ್ರೋಟೀನ್ ಕಣಗಳನ್ನು ಸಂಸ್ಕರಿಸಿಕೊಂಡರು. ಸ್ನಾಯು ಕೋಶಗಳ ಜತೆಗೆ ಈ ಪ್ರೋಟೀನ್ ಕಣಗಳನ್ನು ಬೆರೆಸಿ ಪ್ಲಾಸ್ಟಿಕ್ ಹಾಳೆಯ ಮೇಲೆ ಮಿಶ್ರಣ ಮಾಡಿದೊಡನೆ ತನ್ನಷ್ಟಕ್ಕೆ ತಾನೇ ಜೋಡಣೆಗೊಂಡವು. ಕಾರ್ಯನಿರ್ವಹಿಸಬಲ್ಲ ಅಂಗಾಂಶ (ಟಿಶ್ಯೂ) ರೂಪುಗೊಳ್ಳಲಾರಂಭಿಸಿದವು. ಮುಂದಿನದು ಜೀವಕೋಶಗಳಿಗೆ ಚೈತನ್ಯ ತುಂಬುವ ಕಾರ್ಯ. ಇದನ್ನು ಗ್ಲುಕೋಸ್ ತುಂಬುವ ಮೂಲಕ ಸಾಧಿಸಲಾಯಿತು. ಪೌಷ್ಟಿಕಾಂಶಗಳನ್ನು ಸತತವಾಗಿ ಪೂರೈಸುವ ಮೂಲಕ ಈ ಬಗೆಯ ಸಮ್ಮಿಶ್ರ ವಸ್ತುಗಳನ್ನು ಕೆಲ ವಾರಗಳ ಕಾರ್ಯ ನಿರ್ವಹಿಸುವಂತೆ ಮಾಡಲು ಸಾಧ್ಯವಾಗಿದೆ. ವಿನ್ಯಾಸವನ್ನು ಮತ್ತಷ್ಟು ಉತ್ತಮಗೊಳಿಸುವುದರ ಮೂಲಕ ಜೀವಿತಾವಧಿಯನ್ನು ಹೆಚ್ಚಿಸಬಹುದೆಂಬ ನಿರೀಕ್ಷೆ ವಿಜ್ಞಾನಿಗಳದು. ವಿಜ್ಞಾನಿಗಳ ಕಲ್ಪನೆಯಲ್ಲಿ ಎಂಥ ಸೃಷ್ಟಿಗಳಿವೆ? ನೀರಿನಲ್ಲಿ ಜೀವಿಸುವ ಎಂಟೆಂಟು ಕೈಗಳಿರುವ, ಆ ಇಡೀ ಕೈಗಳಲ್ಲಿ ರಕ್ತ ಹೀರುವ ಗ್ರಂಥಿಗಳಿರುವ, ಎಲ್ಲೆಂದರಲ್ಲಿ ನುಸುಳಿ ಹೋಗಿ ತನ್ನ ಕಬಂಧ ಬಾಹುಗಳ ಮೂಲಕ ತನ್ನ ಆಹಾರವಾಗಬಲ್ಲ ಜೀವಿಗಳನ್ನು ಸೆರೆಹಿಡಿಯಬಲ್ಲ ಅಷ್ಟಪದಿ ಅಥವಾ ‘ಆಕ್ಟೋಪಸ್’ ನಿಮಗೆ ಗೊತ್ತಲ್ಲವೆ? ಇಂಥ ಅಷ್ಟಪದಿಗಳ ಮಾದರಿಯಲ್ಲಿ ಪುಟಾಣಿ ರೊಬಾಟ್‍ಗಳನ್ನು ನಿರ್ಮಿಸುವ ಹಂಬಲ ಹಾರ್ವರ್ಡ್ ತಂತ್ರಜ್ಞರದು. ಈಗಾಗಲೇ ದಕ್ಷಿಣ ಕೊರಿಯಾದಲ್ಲಿ ‘ಏಡಿ’ಯಾಕಾರದ ಪುಟಾಣಿ ಸಾಧನವೊಂದು ಹತ್ತು ದಿನಗಳ ಕಾಲ ಪ್ರಯೋಗಶಾಲೆಯಲ್ಲಿ ಸಂಚಾರ ನಡೆಸಿ ದಣಿವಾರಿಸಿಕೊಳ್ಳುತ್ತಿದೆ. ತನ್ನ ಆಕಾರವನ್ನು ಬೇಕೆಂದಂತೆ ಬದಲಿಸಿಕೊಳ್ಳಬಲ್ಲ ರೊಬಾಟ್‍ಗಳನ್ನು ಸೃಷ್ಟಿಸುವ ತಂತ್ರಜ್ಞರ ಕನಸಿಗೆ ಈ ಯಶಸ್ಸು ಇಂಬುಕೊಡುತ್ತಿದೆ. ಅನಪೇಕ್ಷಣೀಯ ವಾತಾವರಣದಲ್ಲಿ ಕಾರ್ಯನಿರ್ವಹಿಸಬಲ್ಲ, ಅತ್ಯಂತ ಕಡಿಮೆ ಜಾಗ ಇರುವ ಸ್ಥಳಗಳಲ್ಲಿ ನುಸುಳಿಹೋಗಬಲ್ಲ ರೊಬಾಟ್‍ಗಳು ವಿಜ್ಞಾನಿಗಳ ಕನಸಿನ ಯೋಜನೆಗಳಲ್ಲಿವೆ. ಅನೇಕ ಮಾದರಿಗಳ ವಿನ್ಯಾಸದ ಪರಿಪೂರ್ಣತೆಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಹೃದಯ ಸ್ನಾಯುಗಳ ಬಗ್ಗೆ ವಿಸ್ತೃತ ಅಧ್ಯಯನಕ್ಕೆ ಬೇಕಾಗುವ ಮಾದರಿಗಳನ್ನೂ ಇಲ್ಲಿ ಸೃಷ್ಟಿಸಬಹುದು. ಆರೋಗ್ಯವಂತ ಹಾಗೂ ದೋಷಯುಕ್ತ ಸ್ನಾಯುಗಳ ಕಾರ್ಯಾಚರಣೆಯಲ್ಲಿ ಯಾವ ಬಗೆಯ ವ್ಯತ್ಯಾಸಗಳಿರುತ್ತವೆ? ಜೀವಕೋಶಗಳ ಜೋಡಣೆಯಲ್ಲಿ ವ್ಯತ್ಯಯಗಳಿವೆಯೆ? ವ್ಯವಸ್ಥೆಯಲ್ಲಿನ ಯಾವ ದೋಷದಿಂದ ಸ್ನಾಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ? ಎಂಥ ರಿಪೇರಿಗಳನ್ನು ನಡೆಸಿದರೆ ಸ್ನಾಯುಗಳನ್ನು ಮೊದಲಿನಂತೆ ಕಾರ್ಯನಿರ್ವಹಿಸಬಲ್ಲದು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು. ಇವೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಘನ ಉದ್ದೇಶವೊಂದಿದೆ. ಅದು ಔಷಧವೊಂದರ ಪರಿಣಾಮವನ್ನು ಅಳೆಯುವುದು. ಹೃದ್ರೋಗ ಚಿಕಿತ್ಸೆಗೆಂದು ನೂರಾರು ಬಗೆಯ ಔಷಧಗಳನ್ನು ಸಂಸ್ಕರಿಸುತ್ತಿರುವುದು ನಿಮಗೆ ಗೊತ್ತು. ಇವೆಲ್ಲದರ ಕಾರ್ಯಕ್ಷಮತೆ, ಜೀವಕೋಶಗಳ ಮೇಲಿನ ಪರಿಣಾಮ, ಚಿಕಿತ್ಸೆಯ ಸಫಲತೆ ಮತ್ತಿತರ ಅಂಶಗಳನ್ನು ಅಳೆಯಲು ಸಹಸ್ರಾರು ಮಾದರಿಗಳ ಮೇಲೆ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅಷ್ಟೊಂದು ಸಂಖ್ಯೆಯ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ. ಈ ಕೊರತೆಯನ್ನು ಸದ್ಯದ ಪ್ರಕ್ರಿಯೆಯು ನೀಗಿಸಬಹುದು. ಬೇಕೆಂದಷ್ಟು ಮಾದರಿಗಳನ್ನು ಪ್ರಯೋಗಶಾಲೆಗಳಲ್ಲಿಯೇ ಸೃಷ್ಟಿಸಿಕೊಳ್ಳಬಹುದು. ಜತೆಗೆ ಅಧ್ಯಯನದ ಫಲಿತಾಂಶಗಳ ನಿಖರತೆಯನ್ನು ಪರಿಶೀಲಿಸಬಹುದು.
ಇನ್ನೂ ಚಿಕ್ಕದು, ಮತ್ತಷ್ಟು ಚಿಕ್ಕದು .. ಇದು ಸದ್ಯದ ಮಂತ್ರ. ಯಾವುದೇ ಯಂತ್ರ ಅಥವಾ ಸಾಧನವನ್ನು ಮತ್ತಷ್ಟು ಚಿಕ್ಕದಾಗಿಸುವುದರಿಂದ ಸಾಕಷ್ಟು ಅನುಕೂಲಗಳಿವೆ. ನಮ್ಮ ದೇಹವೂ ಸೇರಿದಂತೆ ಅನೇಕಾನೇಕ ಸಣ್ಣ ಪುಟ್ಟ ಸ್ಥಳಗಳಲ್ಲಿ ತಪಾಸಣಾ ಯಂತ್ರಗಳನ್ನು ಕಳುಹಿಸಬಹುದು. ದೇಹದ ಅನೇಕ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬಹುದು. ಔಷಧಗಳನ್ನು ತಲುಪಿಸಬಹುದು. ಈ ನಿಟ್ಟಿನಲ್ಲಿ ರೊಬಾಟ್ ವಿಜ್ಞಾನ ಸಾಕಷ್ಟು ಪ್ರಗತಿ ಸಾಧಿಸಿದೆ. ಕೃತಕವಾಗಿ ರೂಪಿಸುವ ಎಷ್ಟೋ ಯಂತ್ರ ಮಾದರಿಗಳಿಗೆ ನಮ್ಮ ದೇಹದ ಅಂಗಾಂಗಳೇ ಸ್ಫೂರ್ತಿ. ಅವುಗಳ ಮಾದರಿಯಲ್ಲಿ, ಅವು ನಿರ್ವಹಿಸುವ ಕಾರ್ಯವೈಖರಿಯನ್ನು ಅನುಕರಿಸಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾದರೆ ಸದ್ಯದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಜನ್ಮದತ್ತವಾಗಿಯೇ ಹೃದಯದ ಸ್ನಾಯುಗಳಲ್ಲಿ ನ್ಯೂನತೆಗಳಿದ್ದರೆ ಅದನ್ನಿಂದು ಸರಿಪಡಿಸಬಹುದು. ಈ ರಿಪೇರಿ ಕಾರ್ಯ ಸಾಧ್ಯವಾದಷ್ಟು ಮಟ್ಟಿಗೆ ಸ್ವಾಭಾವಿಕವಾಗಿರುವಂತೆ ಮಾಡಲು ಸ್ನಾಯುಗಳು ಅತ್ಯವಶ್ಯ.
ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಹೃದಯದ ಕಾರ್ಯವೈಖರಿಯನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳಲು ಈ ಬಗೆಯ ಅಧ್ಯಯನಗಳು ನೆರವಾಗುತ್ತವೆ. ಸ್ನಾಯುವೊಂದು ಬಲಹೀನವಾಗಲು ಕಾರಣಗಳೇನು? ಅವುಗಳನ್ನು ಸ್ವಾಭಾವಿಕವಾಗಿಯೇ ಸದೃಢಗೊಳಿಸಲು ಏನೆಲ್ಲಾ ಮಾಡಬೇಕು? ಅದಕ್ಕೆಂದು ಪೂರೈಸುವ ರಾಸಾಯನಿಕಗಳು ಅಥವಾ ಔಷಧಗಳು ದುಷ್ಪರಿಣಾಮಗಳನ್ನು ಬೀರುತ್ತವೆಯೆ? ಅಂಥ ದುಷ್ಪರಿಣಾಮಗಳನ್ನು ತಡೆಗಟ್ಟಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು? ಹೀಗೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಈ ಬಗೆಯ ಅಧ್ಯಯನದಲ್ಲಿ ಉತ್ತರಗಳನ್ನು ಕಂಡುಕೊಳ್ಳಬಹುದು. ಹೃದಯದ ಸ್ನಾಯುಗಳೂ ಸೇರಿದಂತೆ ದೇಹದ ಅನೇಕ ಭಾಗಗಳನ್ನು ಕೃತಕವಾಗಿ ರೂಪಿಸಲು ನ್ಯಾನೊ ತಂತ್ರಜ್ಞಾನದಂಥ ಮುಂಚೂಣಿ ವಿಜ್ಞಾನ ಶಾಖೆ ನೆರವಾಗಬಲ್ಲದು. ಅಂಥ ಮಾದರಿಗಳನ್ನು ರೂಪಿಸುವಾಗ ಮೂಲ ವಿನ್ಯಾಸವನ್ನು ಅಭ್ಯಸಿಸಲು ಸದ್ಯದ ಹಾರ್ವರ್ಡ್ ನಿರ್ಮಿತ ಸ್ನಾಯುಗಳು ನೆರವಾಗುತ್ತವೆ. ಹೃದಯ ಹಾಗೂ ಮಿದುಳಿನ ಕಾರ್ಯಗಳನ್ನು ನೇರ್ಪಡಿಸುವ ಯಾವುದೇ ವಿಜ್ಞಾನ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ಅಂತೆಯೇ ಹಾರ್ವರ್ಡ್ ವಿವಿಯ ಸಂಶೋಧಕರುಗಳಿಗೆ ಭಾರಿ ಮೊತ್ತದ ಧನ ಸಹಾಯ ದೊರೆತಿದೆ. ಎಲ್ಲವೂ ವಿಜ್ಞಾನಿಗಳ ಎಣಿಕೆಯಂತೆ ನಡೆದರೆ, ಹೃದಯವನ್ನು ಮತ್ತಷ್ಟು ಸದೃಢಗೊಳಿಸಬಹುದು. ಅಂತ ಹೃದಯಗಳು ಮಿದುಳನ್ನು ಮತ್ತಷ್ಟು ಚುರುಕಾಗಿ ಹೆಚ್ಚು ಕಾಲ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಸದ್ಯಕ್ಕೆ ಈ ಬಗೆಯ ಸಂಶೋಧನೆಗಳನ್ನು ಕೈಗೊಳ್ಳುತ್ತಿರುವ ವೈದ್ಯರು, ವಿಜ್ಞಾನಿಗಳು ಹಾಗೂ ತಂತ್ರಜ್ಞರ ಹೃದಯ ಮತ್ತು ಮಿದುಳುಗಳು ಹೆಚ್ಚು ಕಾಲ ಕಾರ್ಯ ನಿರ್ವಹಿಸಲಿ ಎಂದು ಹಾರೈಸೋಣ. ಅಂಥ ಹಾರೈಕೆಗಳಿಂದ ನಮ್ಮ ಹೃದಯ ಮತ್ತಷ್ಟು ಸುರಕ್ಷವಾದೀತು.

(ಕೃಪೆ: ವಿಜಯ ಕರ್ನಾಟಕ, 10-09-2007)