Monday, October 22, 2007

ಭೀತಿ ಹೊಡೆದಟ್ಟುವ ತಂತ್ರ - ವಿಕಿರಣ ಪತ್ತೆ ಯಂತ್ರ

ಹುಶಃ ‘ಪರಮಾಣು ಶಕ್ತಿ’ ಎಂಬ ಪದಪುಂಜಕ್ಕೆ ಪರ್ಯಾಯವೆಂದರೆ ‘ಅಗಣಿತ ವಿವಾದ’. ಪರಮಾಣುಗಳಲ್ಲಿ ಅಡಗಿರುವ ಅಗಣಿತ ಶಕ್ತಿಯನ್ನು ವಿದ್ಯುತ್ ಉತ್ಪಾದಿಸಲು ಅಥವಾ ಬಾಂಬೊಂದನ್ನು ಪ್ರಬಲವಾಗಿ ಸಿಡಿಸಲು ಬಳಸಿಕೊಳ್ಳಬಹುದು ಎಂದು ಜಗತ್ತು ಕಂಡುಕೊಂಡ ದಿನದಿಂದಲೂ ವಿವಾದ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ಒಂದು ಸಮಾಧಾನಕರ ವಿಷಯವೆಂದರೆ ಪರಮಾಣು ಶಕ್ತಿ ತಂತ್ರಜ್ಞಾನದ ಜತೆ ಜತೆಗೇ ಅದು ತರಬಹುದಾದ ಅಪಾಯಗಳ ಬಗ್ಗೆ ತಿಳಿವಳಿಕೆಯೂ ಬೆಳೆಯುತ್ತಾ ಬಂದಿದೆ. ಇದರ ಒಟ್ಟಾರೆ ಪರಿಣಾಮ ಸುರಕ್ಷತಾ ಎಂಜಿನೀರಿಂಗ್ ಕ್ಷೇತ್ರದ ಅತ್ಯುನ್ನತ ಪ್ರಗತಿ. ಪರಿಸರದ ಬಗ್ಗೆ ಹೆಚ್ಚು ಕಾಳಜಿಯಿರುವವರು ‘ಬೈಜಿಕ ವಿದ್ಯುದಾಗಾರ’ದಿಂದ (ಅಂದರೆ ಪರಮಾಣು ಶಕ್ತಿಯನ್ನು ಬಳಸಿಕೊಳ್ಳುವ ವಿದ್ಯುತ್ ಉತ್ಪಾದನಾ ಕೇಂದ್ರ) ಹೊರಹೊಮ್ಮಬಹುದಾದ ಪರಮಾಣು ವಿಕಿರಣದ ಬಗ್ಗೆ ಚಿಂತಿಸುತ್ತಾರೆ. ನೈಸರ್ಗಿಕ ಅವಘಢಗಳಿಗೆ ಅಥವಾ ಕಿಡಿಗೇಡಿಗಳ ಧಾಳಿಗೆ ಇಂಥ ಕೇಂದ್ರಗಳು ತುತ್ತಾದರೆ ಸಾರ್ವಜನಿಕರು ವರ್ಷಗಟ್ಟಲೆ ಅಥವಾ ತಲೆಮಾರುಗಟ್ಟಲೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದು ಅವರ ವಾದದ ಹುರುಳು. ಆದರೆ ಇಂದು ನಮಗೆ ಕರಗತವಾಗಿರುವ ಸುರಕ್ಷಾ ಎಂಜಿನೀರಿಂಗ್ ಎಂಥ ಅಪಾಯಗಳನ್ನು ಮೊದಲೇ ಗುರುತಿಸಿ ಅವನ್ನು ನಿವಾರಿಸಿಕೊಳ್ಳಬಲ್ಲದು ಎಂಬ ಆತ್ಮವಿಶ್ವಾಸ ಪರಮಾಣು ವಿಜ್ಞಾನ ಕ್ಷೇತ್ರದ ತಂತ್ರಜ್ಞರದು. ಸದಾ ವಿಕಿರಣ ಸೂಸುತ್ತಲೇ ಉಳಿಯಬಲ್ಲ ಇಂಧನದ ವ್ಯರ್ಥಭಾಗದ ವಿಲೇವಾರಿಯ ಬಗ್ಗೆಯೂ ಆತಂಕಗಳಿವೆ. ಸುರಕ್ಷಿತವಾಗಿ ಅವುಗಳನ್ನು ನೆಲದಾಳದಲ್ಲಿ ಹುಗಿಯುವ, ಕಿಡಿಗೇಡಿಗಳ ಕೈಗೆ ಅವು ಸಿಗದಂತೆ ಮುಚ್ಚಿಡುವ ವ್ಯವಸ್ಥೆಯೂ ಅಭಿವೃದ್ಧಿಗೊಂಡಿವೆ. ತುರ್ತು ಸಂದರ್ಭಗಳಲ್ಲಿ ಇವುಗಳೆಲ್ಲವೂ ಕಾರ್ಯನಿರ್ವಹಿಸದಿದ್ದರೆ? ಎಂಬ ಪ್ರಶ್ನೆಗೆ ತಂತ್ರಜ್ಞರ ಬಳಿ ಉತ್ತರವಿದೆ. ವಿದ್ಯುತ್ ಉತ್ಪಾದನಾ ಕೇಂದ್ರದ ಆವರಣದಲ್ಲಿ ಸದಾ ಕಾಲ ಪರೀಕ್ಷೆಗಳನ್ನು ನಡೆಸಲಾಗುತ್ತಿರುತ್ತದೆ. ಪರಿಸರದಲ್ಲಿ ಪರಮಾಣು ವಿಕಿರಣ ಒಂದು ನಿರ್ದಿಷ್ಟ ಮಟ್ಟವನ್ನು ದಾಟಿದೊಡನೆಯೆ ಎಚ್ಚರಿಕೆ ನೀಡಬಲ್ಲ ಹಾಗೂ ಅದನ್ನು ಸುರಕ್ಷಿತವಾಗಿ ತಡೆಹಿಡಿಯುವ ವ್ಯವಸ್ಥೆಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಯಾವುದೇ ಒಂದು ಪ್ರದೇಶದಲ್ಲಿ ಭಯೋತ್ಪಾದಕರ ಧಾಳಿ ನಡೆದಿದ್ದು ಅವರು ಪರಮಾಣು ವಿಕಿರಣ ಸೂಸುವ ಕಡ್ಡಿಗಳನ್ನೊ, ಮತ್ತೊಂದನ್ನೊ ತೂರಿಬಿಟ್ಟಿದ್ದರೆ? ದೊಡ್ಡ ದೊಡ್ಡ ಗಾತ್ರದ ಪರೀಕ್ಷಾ ಯಂತ್ರಗಳನ್ನು ಅಲ್ಲೆಲ್ಲಾ ಕೊಂಡೊಯ್ದು ತಪಾಸಣೆ ನಡೆಸಲಾಗುವುದಿಲ್ಲ. ನಡೆಸಲು ಸಾಧ್ಯವಾದರೂ ಕಾಲ ಮಿಂಚಿ ಹೋಗಿರುತ್ತದೆ. ಹಾಗಿದ್ದಲ್ಲಿ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ‘ಪೋರ್ಟಬಲ್’ ಪರಮಾಣು ವಿಕಿರಣ ಪತ್ತೆ ಸಾಧನವೊಂದನ್ನು ಅಭಿವೃದ್ಧಿ ಪಡಿಸಲಾಗುವುದಿಲ್ಲವೆ? ಎಂಬುದು ನಿಮ್ಮ ಪ್ರಶ್ನೆ.
ಪ್ರಕೃತಿಯಲ್ಲಿ ಲಭ್ಯವಿರುವ ಎಲ್ಲ ಸಾಮಗ್ರಿಗಳ ಮೂಲ ರೂಪ ‘ಪರಮಾಣು’ ಎಂಬುದು ನಿಮಗೆ ಗೊತ್ತು. ‘ಪರಮಾಣುಗಳು’ ಒಂದನ್ನೊಂದು ಬೆಸೆದುಕೊಂಡರೆ ‘ಅಣು’ ಸೃಷ್ಟಿಯಾಗುತ್ತದೆ. ಅಣುವೊಂದರ ಸ್ಥಿರತೆಗೆ ಅದನ್ನು ರೂಪಿಸಿದ ಪರಮಾಣುಗಳ ನಡುವಣ ಬಂಧನ ಶಕ್ತಿ ಕಾರಣ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೀರಿನ ಅಣುವೊಂದನ್ನು ರೂಪಿಸಲು ಜಲಜನಕದ ಎರಡು ಪರಮಾಣುಗಳು ಹಾಗೂ ಆಮ್ಲಜನಕದ ಒಂದು ಪರಮಾಣು ಜತೆಗೂಡಿ ಬಾಂಧವ್ಯ ಹೊಂದಿರಬೇಕು. ಇದೇ ರೀತಿ ಲೋಹ, ಪ್ಲಾಸ್ಟಿಕ್, ಕೂದಲು, ಬಟ್ಟೆ, ಎಲೆ, ಗಾಜು .. ಹೀಗೆ ನಮ್ಮ ಸುತ್ತಮುತ್ತಲ ಎಲ್ಲ ಸಾಮಗ್ರಿಗಳೂ ಪ್ರಕೃತಿಯಲ್ಲಿ ಮೂಲಭೂತವಾಗಿ ಲಭ್ಯವಿರುವ, ವಿವಿಧ ಸಂಖ್ಯೆಯಲ್ಲಿ ಜೋಡಣೆಯಾದ, ಒಂದೊಂದರ ನಡುವೆಯೂ ಬಂಧನವಿರುವ ವಿವಿಧ ಪರಮಾಣುಗಳ ಸಮೂಹ. ಪ್ರತಿಯೊಂದು ಪರಮಾಣುವೂ ಮೂರು ಬಗೆಯ ಮೂಲಕಣಗಳನ್ನು ಹೊಂದಿರುವುದು ನಿಮಗೆ ಗೊತ್ತು. ಮಧ್ಯ ಕೇಂದ್ರ ಸ್ಥಾನದಲ್ಲಿ ಪ್ರೊಟಾನ್ ಹಾಗೂ ನ್ಯೂಟ್ರಾನ್ ಇದ್ದರೆ ಹೊರಗಣ ಕಕ್ಷೆಗಳಲ್ಲಿ ಎಲೆಕ್ಟ್ರಾನ್‍ಗಳಿರುವುದನ್ನು ನೀವು ಶಾಲಾ ಪಠ್ಯಪುಸ್ತಕಗಳಲ್ಲಿ ಓದಿ ತಿಳಿದಿರುತ್ತೀರಿ. ಪ್ರೋಟಾನ್ ಕಣಗಳು ಧನ (ಅಂದರೆ ಪಾಸಿಟಿವ್) ವಿದ್ಯುತ್ ಆವೇಶದಿಂದಿದ್ದರೆ ಎಲೆಕ್ಟ್ರಾನ್ ಕಣಗಳು ಋಣ (ಅಂದರೆ ನೆಗಟಿವ್) ವಿದ್ಯುತ್ ಆವೇಶದಲ್ಲಿರುತ್ತವೆ. ಪರಮಾಣುವೊಂದರಲ್ಲಿ ಪ್ರೋಟಾನ್ ಮೂಲಕಣಗಳ ಸಂಖ್ಯೆಯಷ್ಟೇ ಎಲೆಕ್ಟ್ರಾನ್‍ಗಳೂ ಇರುತ್ತವೆ. ಕೇಂದ್ರದಲ್ಲಿರುವ ನ್ಯೂಟ್ರಾನ್ ಕಣಕ್ಕೆ ಯಾವುದೇ ವಿದ್ಯುದಾವೇಶವಿರುವುದಿಲ್ಲ. ಈ ಎಲ್ಲ ಕಣಗಳು ವಿವಿಧ ಅನುಪಾತದಲ್ಲಿ ಸೇರ್ಪಡೆಯಿಂದ ಪರಮಾಣುವೊಂದಕ್ಕೆ ನಿರ್ದಿಷ್ಟ ಗುಣಲಕ್ಷಣಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ ಪರಮಾಣುವೊಂದರ ಕೇಂದ್ರ ಅಥವಾ ಬೀಜದಲ್ಲಿ 13 ಪ್ರೋಟಾನ್‍ಗಳಿದ್ದು ಜತೆಗೆ 14 ನ್ಯೂಟ್ರಾನ್‍ಗಳಿದ್ದಲ್ಲಿ, ನಿವ್ವಳ ವಿದ್ಯುದಾವೇಶ ಸೊನ್ನೆಯಾಗಲು 13 ಎಲೆಕ್ಟ್ರಾನ್‍ಗಳು ಅಲ್ಲಿರಬೇಕು. ಈ ಸಂಖ್ಯೆಯಲ್ಲಿ ಮೂಲಕಣಗಳು ಇರುವ ಪರಮಾಣು ಅಲ್ಯುಮಿನಿಯಂ ಎನಿಸಿಕೊಳ್ಳುತ್ತದೆ. ಇಂಥ ಲಕ್ಷ, ಕೋಟಿಗಟ್ಟಲೆ ಇಂಥ ಅಲ್ಯುಮಿನಿಯಂ ಪರಮಾಣುಗಳನ್ನು ಸೇರಿಸಿ ಅಲ್ಯುಮಿನಿಯಂ ಡಬ್ಬಿಗಳು, ತೆಳು ಹಾಳೆಗಳು, ಎಂಜಿನೀರಿಂಗ್ ವಸ್ತುಗಳನ್ನು ರೂಪಿಸಬಹುದು. ನೂರಾರು ವರ್ಷಗಳ ಕಾಲ ಅಲ್ಯುಮಿನಿಯಂ ಬದಲಾಗದ ಸ್ಥಿತಿಯಲ್ಲಿರುವ ಕಾರಣ, ಈ ಮೂಲವಸ್ತುವನ್ನು ಸ್ಥಿರ ಎಂದು ಪರಿಗಣಿಸಬಹುದು.
ಒಂದೇ ಸಂಖ್ಯೆಯ ಪ್ರೋಟಾನ್‍ಗಳಿದ್ದು (ಅಂದರೆ ಅಷ್ಟೇ ಸಂಖ್ಯೆಯ ಎಲೆಕ್ಟ್ರಾನ್‍ಗಳಿರುತ್ತವೆ) ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‍ಗಳಿರುವ ಸಾಧ್ಯತೆಗಳಿರುತ್ತವೆ. ಉದಾಹರಣೆಗೆ ತಲಾ 29 ಪ್ರೋಟಾನ್ ಹಾಗೂ ಎಲೆಕ್ಟ್ರಾನ್‍ಗಳಿರುವ ತಾಮ್ರಕ್ಕೆ ಎರಡು ವಿಭಿನ್ನ ಸಂಖ್ಯೆಯ ನ್ಯೂಟ್ರಾನ್‍ಗಳಿರುತ್ತವೆ. ಒಂದರಲ್ಲಿ 34 ನ್ಯೂಟ್ರಾನ್‍ಗಳಿದ್ದರೆ ಮತ್ತೊಂದು ಬಗೆಯಲ್ಲಿ 36 ನ್ಯೂಟ್ರಾನ್‍ಗಳಿರುತ್ತವೆ. ಇವನ್ನು ತಾಮ್ರದ ಸಮಸ್ಥಾನಿ (ಐಸೋಟೋಪ್) ಎಂದು ಗುರುತಿಸಲಾಗುತ್ತದೆ. ಪ್ರೋಟಾನ್-ಎಲೆಕ್ಟ್ರಾನ್ ಸಂಖ್ಯೆಗಳಲ್ಲಿ ಏರುಪೇರಿರದ ಕಾರಣ ವಿದ್ಯುದಾವೇಶಗಳಲ್ಲಿ ವ್ಯತ್ಯಾಸವಿರದು, ಜತೆಗೆ ರಾಸಾಯನಿಕ ಗುಣಗಳು ಒಂದೇ ಇರುವುದು ಸಮಸ್ಥಾನಿಗಳ ವೈಶಿಷ್ಟ್ಯ. ಹಾಗೆಂದ ಮಾತ್ರಕ್ಕೆ ಎಲ್ಲ ಮೂಲಧಾತುಗಳ ಸಮಸ್ಥಾನಿಗಳೂ ಸ್ಥಿರವಾಗಿರಬಹುದೆಂದಲ್ಲ. ಕೆಲವೊಂದು ಮೂಲಧಾತುಗಳ ಸಮಸ್ಥಾನಿಗಳು ‘ವಿಕಿರಣ’ ಸೂಸುತ್ತಾ ತಮ್ಮ ಆಯಸ್ಸನ್ನು ಕರಗಿಸಿಕೊಳ್ಳುತ್ತವೆ. ಸ್ಥಿರ ರೂಪವನ್ನು ಪಡೆಯುವ ತನಕ ಈ ಪ್ರಕ್ರಿಯೆ ಲಕ್ಷಾಂತರ ವರ್ಷಗಳ ತನಕ ಮುಂದುವರಿಯುತ್ತದೆ. ಕೆಲವೊಂದು ಮೂಲವಸ್ತುಗಳ ಸಮಸ್ಥಾನಿಗಳು ಸ್ವಾಭಾವಿಕವಾಗಿಯೇ ವಿಕಿರಣ ಸೂಸುವ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಸ್ವಾಭಾವಿಕವಾಗಿ ಲಭ್ಯವಿರುವ ಅತ್ಯಂತ ತೂಕದ ವಿಕಿರಣ ವಸ್ತು ಯುರೇನಿಯಂ. ಅಂತೆಯೇ ಬೈಜಿಕ ಅಂದರೆ ಪರಮಾಣು ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಗೆ ಯುರೇನಿಯಂ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸ್ವಾಭಾವಿಕವಾಗಿ ಲಭ್ಯವಿರುವ ವಿಕಿರಣಪೂರಕ ಮೂಲವಸ್ತುಗಳೂ ಸೇರಿದಂತೆ ಯಾವುದೇ ಇಂಥ ಗುಣವಿರುವ ಸಮಸ್ಥಾನಿಗಳು ಅಪಾಯಕಾರಿ. ಇಂಥ ವಿಕಿರಣ್ಗಳಲ್ಲಿ ವಿಭಿನ್ನ ಬಗೆಯ ಕಿರಣಗಳಿರುತ್ತವೆ. ಅವು ಪರಮಾಣುವೊಂದನ್ನು ತಾಗಿದೊಡನೆಯೆ ಅದರ ಹೊರ ಕಕ್ಷೆಯಲ್ಲಿರುವ ಎಲೆಕ್ಟ್ರಾನ್‍ಗಳನ್ನು ಕಿತ್ತೊಗೆಯುತ್ತವೆ. ಎಲೆಕ್ಟ್ರಾನ್‍ಗಳ ನಷ್ಟ ಅನೇಕ ಜೈವಿಕ ದುಷ್ಪರಿಣಾಮಗಳನ್ನು ತರಬಲ್ಲವು. ಉದಾಹರಣೆಗೆ ಜೀವಕೋಶವೊಂದರ ಸಾವಿನಿಂದ ಹಿಡಿದು, ಜೀವಿಗಳೆಲ್ಲದರ ಗುಣಾವಗುಣಗಳಿಗೆ ಕಾರಣವಾದ ಜೀನ್‍ನ (ಗುಣಾಣು) ವಿನ್ಯಾಸ ಹಾಗೂ ಕಾರ್ಯಾಚರಣೆಯಲ್ಲಿ ಬದಲಾವಣೆಗಳಾಗುವ ಸಂಭವವಿರುತ್ತವೆ. ಇದರಿಂದಾಗಿ ಅನೇಕ ಆನುವಂಶಿಕ ಕಾಯಿಲೆಗಳು ವಂಶದಿಂದ ವಂಶಕ್ಕೆ ಮುಂದುವರಿಯಬಹುದು. ಈ ಬಗೆಯ ಪ್ರಬಲ ಭೀತಿಯೇ ಪರಮಾಣುವಿಗೆ ಸಂಭವಿಸಿದ ಯಾವುದೇ ಪ್ರಯೋಗಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು, ಬಾಂಬ್‍ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಕಳೆದ ಐದು ದಶಕಗಳಲ್ಲಿ ಈ ಬಗ್ಗೆ ಸಾಕಷ್ಟು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಪ್ರಗತಿ ಕಂಡಿರುವುದರಿಂದ ನಮ್ಮ ಭಯವನ್ನೂ ಮಿತಿಯಲ್ಲಿಟ್ಟುಕೊಳ್ಳಬಹುದು.
ತಮ್ಮ ಪ್ರಯೋಗಗಳು ಸುರಕ್ಷ ಎಂದು ಬಿಂಬಿಸುವುದಷ್ಟೇ ಅಲ್ಲ, ಯಾವುದೇ ಸಮಯದಲ್ಲಿ ತಂತ್ರಜ್ಞಾನವನ್ನು ಅಲ್ಪ ಮಟ್ಟಿಗೆ ತಿಳಿದವರೂ ಅಪಾಯವಿಲ್ಲ ಎಂದು ಸಾಬೀತು ಮಾಡಿ ತೋರಿಸುವಂಥ ತಂತ್ರಜ್ಞಾನಗಳು ಸೃಷ್ಟಿಯಾಗಬೇಕು. ಯಾವುದೇ ಪರಿಸರದಲ್ಲಿ ವಿಕಿರಣ ಹೆಚ್ಚಿದೆಯೆ ಎಂದು ಪರೀಕ್ಷಿಸಬಲ್ಲ ಕೈಯ್ಯಲ್ಲಿ ಹಿಡಿದು ಸಾಗಿಸಬಹುದಾದ ಯಂತ್ರವೊಂದನ್ನು ಅಮೆರಿಕದಲ್ಲಿ ರೂಪಿಸಲಾಗಿದೆ. ಅಲ್ಲಿನ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ಧನಸಹಾಯದಿಂದ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದಲ್ಲಿ ಟಂಗ್‍ಸ್ಟನ್ ಸುರುಳಿಯನ್ನು ಬಳಸಿಕೊಂಡು ಪರಮಾಣು ವಿಕಿರಣವನ್ನು ಅಳೆಯಬಲ್ಲ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚೂ-ಕಮ್ಮಿ ನಮ್ಮ ಕಾರುಗಳಲ್ಲಿ ಬಳಸುವಂಥ ಬ್ಯಾಟರಿಯೊಂದರ ನೆರವಿದ್ದರೆ ಸಾಕು, ವಿಕಿರಣ ತಾಗಿರುವ ದ್ರವದ ಹನಿಗಳನ್ನು ಇದು ವಿಶ್ಲೇಷಿಸಬಲ್ಲದು. ಇಲ್ಲಿ ಗಣನೆಗೆ ಬರುವುದು ಯಾವ ಲೋಹದ ವಿಕಿರಣ ಪರಿಸರದಲ್ಲಿದೆಯೆ ಎಂಬುದು.
ಪ್ರತಿಯೊಂದು ಲೋಹವೂ ನಿರ್ದಿಷ್ಟ ತಾಪಮಾನವನ್ನು ದಾಟಿದ ನಂತರ ನಿರ್ದಿಷ್ಟ ಬಣ್ಣದ ಪ್ರಭೆಯನ್ನು ಹೊರಸೂಸುತ್ತದೆ. ಇದನ್ನು ಆ ಲೋಹದ ವರ್ಣ ಸಹಿ ಎಂದು ವಿಜ್ಞಾನಿಗಳು ಅರ್ಥೈಸಿಕೊಂಡಿದ್ದಾರೆ. ತಪಾಸಣೆಗೊಳಗಾದ ಯಾವುದೇ ಮಾದರಿಯನ್ನು ಮೊದಲು ಒಣಗಿಸಿ ಆನಂತರ ಸುಮಾರು 1650 ಡಿಗ್ರಿ ಸೆಂಟಿಗ್ರೇಡ್ ತಾಪಮಾನಕ್ಕೆ ಅದನ್ನು ಕಾಯಿಸಿದಾಗ ನಿರ್ದಿಷ್ಟ ಬಣ್ಣದ ಮಿಂಚು ಸುಳಿಯುತ್ತದೆ. ಅದನ್ನು ಸೂಕ್ತ ಸಂವೇದಿಯ ಮೂಲಕ ಗ್ರಹಿಸಿ, ಆ ಬೆಳಕಿನಲೆಯ ಉದ್ದ, ಅಗಲ, ಎತ್ತರಗಳ ಆಧಾರದ ಮೇಲೆ ಮೂಲವಸ್ತುವೊಂದರ ಯಾವ ಸಮಸ್ಥಾನಿ ವಿಕಿರಣಕ್ಕೆ ಕಾರಣವಾಗಿತ್ತೆಂದು ಕೆಲನಿಮಿಷಗಳಲ್ಲಿಯೇ ತಿಳಿದುಕೊಳ್ಳಬಹುದು. ಇದುವರೆಗೂ ದೊಡ್ಡ ದೊಡ್ಡ ಪ್ರಯೋಗಶಾಲೆಗಳಲ್ಲಿ, ಹೆಚ್ಚಿನ ಪ್ರಮಾಣದ ಮಾದರಿಗಳನ್ನು ದಿನಗಟ್ಟಲೆ ನಡೆಸುವ ಪ್ರಕ್ರಿಯೆಗಳ ಮೂಲಕವಷ್ಟೇ ತಿಳಿಯಬಹುದಾಗಿದ್ದ ಮಾಹಿತಿ, ಕೇವಲ ಕೈಯ್ಯಲ್ಲಿ ಹಿಡಿದು ಕೊಂಡೊಯ್ಯಬಹುದಾದ ಸಾಧನದಿಂದ ಅತ್ಯಲ್ಪ ಮಾದರಿಯ ವಿಶ್ಲೇಷಣೆಯೊಂದಿಗೆ ಕೆಲ ನಿಮಿಷದಲ್ಲಿಯೇ ಅರಿಯಬಹುದು. ಜತೆಗೆ ಈ ಸಾಧನವನ್ನು ಬಳಸಲು ಪರಿಣತ ತಜ್ಞರು ಬೇಕಾಗಿಲ್ಲ. ವಿಕಿರಣ ಸೂಸುವ ವಸ್ತು ಹತ್ತಿರದಲ್ಲಿದೆಯೆಂದು ಪತ್ತೆಯಾದೊಡನೆಯೆ, ಕೊಲೆ ನಡೆದ ಸ್ಥಳಕ್ಕೆ ನಾಯಿಗಳನ್ನು ಕೊಂಡೊಯ್ಯುವಂತೆ ಈ ವಿಕಿರಣ ಪತ್ತೆ ಸಾಧನವನ್ನು ಪೊಲೀಸರು ಕೊಂಡೊಯ್ಯಬಹುದು.
ಭಯೋತ್ಪಾದಕರು ಕೇವಲ ಭೌತಿಕ ವಸ್ತುಗಳು ಹಾಗೂ ಜೀವಿಅಗಳ ವಿನಾಶವನ್ನಷ್ಟೇ ಬಯಸುವುದಿಲ್ಲ. ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನೇ ನಿರ್ನಾಮ ಮಾಡಲು ಯತ್ನಿಸುತ್ತಾರೆ. ಇದರಿಂದಾಗುವ ಹಾನಿಯ ಪರಿಣಾಮ ಅತ್ಯಂತ ಹೆಚ್ಚಿನದು. ವಿಕಿರಣ ಸೂಸುವ ವಸ್ತುವೊಂದು ಕಳುವಾಗಿದೆಯೆಂಬ ಗಾಳಿಸುದ್ದಿಯೇ ಸಹಸ್ರ ಸಂಖ್ಯೆಯಲ್ಲಿ ಜನರನ್ನು ಬೆದರಿಸಬಲ್ಲದು. ಅಲ್ಲಿದೆ, ಇಲ್ಲಿ ಸಿಕ್ಕಿದೆ, ಮತ್ತಷ್ಟು ಕಳುವಾಗಿವೆ, ಈಗಾಗಲೇ ಒಂದಷ್ಟು ಜನರಿಗೆ ತೊಂದರೆಯಾಗಿದೆ ... ಮುಂತಾದ ಸುದ್ದಿಗಳಿಗೆ ರೆಕ್ಕೆ-ಪುಕ್ಕಗಳು ಹಚ್ಚಿಕೊಂಡು ಸಾಂಪ್ರದಾಯಿಕ ಮಾಧ್ಯಮಗಳೊಂದಿಗೆ ಇಂಟರ್‌ನೆಟ್, ಮೊಬೈಲ್ ಫೋನ್ ಮುಂತಾದ ಸಾಧನಗಳ ಮೂಲಕ ಅಲ್ಪಕಾಲದಲ್ಲಿಯೇ ಭೀತಿಯ ಕಾರ್ಮೋಡ ಕವಿಯಬಹುದು. ಇಂಥ ಭೀತಿಯನ್ನು ತೊಡೆಯುವುದರ ಜತೆಗೆ ಸುರಕ್ಷಾ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜನರಿಗೆ ಮರು-ಆಶ್ವಾಸನೆ ನೀಡಲು, ವಿಕಿರಣ ಪತ್ತೆ ಸಾಧನ ನೆರವಾಗಲಿದೆ.
ದೂಳು, ಮಣ್ಣು, ನೀರು, ಬೆಳೆ ಹೀಗೆ ಯಾವುದೇ ವಸ್ತುವಿನ ಮಾದರಿಗಳನ್ನೂ ಈ ಸಾಧನದ ಮೂಲಕ ತಪಾಸಣೆಗೊಳಿಸಬಹುದು. ಈ ಹಿಂದೆ ರಕ್ತದ ಮಾದರಿಗಳಲ್ಲಿ ಸೀಸದ ಕುರುಹುಗಳಿವೆಯೆ ಎಂದು ಪರೀಕ್ಷಿಸಬಲ್ಲ ಸುಲಭ ಸಾಧನವನ್ನು ನಿರ್ಮಿಸಿದ್ದ ವಿಜ್ಞಾನಿಗಳ ತಂಡವೇ ವಿನೂತನ ವಿಕಿರಣ ಪತ್ತೆ ಸಾಧನವನ್ನೂ ರೂಪಿಸಿದೆ. ಪ್ರಯೋಗಶಾಲೆಯ ಹಂತದಲ್ಲಿ ಸಾಧನ ಯಶಸ್ವಿಯಾಗಿ ವಿಕಿರಣ ಸೋರಿಕೆಯನ್ನು ಪತ್ತೆ ಮಾಡಿದೆ. ಹೆಚ್ಚಿನ ಮಟ್ಟದ ಪರಿಶೀಲನೆಗೆ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಆಯಕಟ್ಟಿನ ಜಾಗಗಳಲ್ಲಿ ಹೊಗೆಯ ಜಾಡನ್ನು ಹಿಡಿದು ಬೆಂಕಿಯನ್ನು ಗುರುತಿಸುವ ಸಾಧನಗಳನ್ನು ಅಳವಡಿಸುವುದು ನಿಮಗೆ ಗೊತ್ತು. ಇದೇ ರೀತಿ ವಿಕಿರಣ ಸೋರಿಕೆಯನ್ನು ಪತ್ತೆ ಮಾಡಲು ಇಂಥ ಅಳವಡಿಕೆಗಳನ್ನು ಉಪಯೋಗಿಸಬಹುದೇನೊ?
(ಕೃಪೆ: ವಿಜಯ ಕರ್ನಾಟಕ 24-09-2007)

No comments: