Monday, October 22, 2007

ನಮಗೆ ಅಗತ್ಯವಿರುವುದು ಉತ್ತಮ ಸಮಾಜ ನಿರ್ಮಿಸುವ ಎಂಜಿನೀರ್‌ಗಳು

ಕಾರು ಅಪಘಾತದಲ್ಲಿ ಪ್ರತಿಭಾವಂತ ಎಂಜಿನೀರ್ ಒಬ್ಬರ ಸಾವಿನ ಬಗ್ಗೆ ನಿನ್ನೆಯ ಪತ್ರಿಕೆಯಲ್ಲಿನ ಸುದ್ದಿ ಓದಿರುತ್ತೀರಿ. ಅಪಘಾತ ಆದದ್ದು ಹೇಗೆ? ಎಂಬ ಪ್ರಶ್ನೆಗೆ ಪತ್ರಿಕೆಯ ಸುದ್ದಿಯಲ್ಲೇ ಉತ್ತರವಿದೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಆ ಕಾರಿನ ಚಕ್ರ ಪಂಕ್ಚರ್ ಆಯಿತು. ಕಾರಿನ ರಭಸದ ಆ ಓಟದಲ್ಲಿ ಗಾಳಿಯಿಲ್ಲದ ಒಂದು ಚಕ್ರ ಗಾಳಿ ತುಂಬಿದ ಮತ್ತೊಂದು ಚಕ್ರದೊಡನೆ ಸಮತೋಲ ಕಳೆದುಕೊಂಡಿತು. ಈ ಅಸಮತೋಲನದಿಂದ ಚಕ್ರಗಳೆರಡನ್ನು ಹಿಡಿದಿಟ್ಟಿದ್ದ ಸರಳು ತುಂಡಾಯಿತು. ಸ್ಥಿರತೆ ಕಳೆದುಕೊಂಡ ಕಾರು ಬುಡಮೇಲಾಯಿತು. ಈ ಸಂದರ್ಭದಲ್ಲಿ ಕಾರು ಚಲನೆ ಮಾಡುತ್ತಿದ್ದ ಹುಡುಗನ ಎದೆಗೆ ಸ್ಟೀರಿಂಗ್ ಚಕ್ರ ಬಡಿದು ಸಾವುಂಟಾಯಿತು. ಉಳಿದ ಸಹ ಪಯಣಿಗರಿಗೆ ತೀವ್ರವಾದ ಗಾಯಗಳಾಗಿವೆ. ಇಂಥ ಅಪಘಾತಗಳ ವರದಿಯನ್ನೋದಿದ ಸಾರ್ವಜನಿಕರಲ್ಲಿ ಹಲವಾರು ಪ್ರಶ್ನೆಗಳೇಳುತ್ತವೆ. ಅಪಘಾತ ತಪ್ಪಿಸುವಂಥ ಸುರಕ್ಷ ವ್ಯವಸ್ಥೆಗಳು ಕಾರಿನಲ್ಲಿರಲಿಲ್ಲವೆ? ಟೈರು-ಟ್ಯೂಬುಗಳಿಂದ ಹಿಡಿದು ಸ್ಟೀರಿಂಗ್ ಚಕ್ರದ ತನಕ ಎಲ್ಲ ಎಂಜಿನೀರಿಂಗ್ ವಸ್ತುಗಳು ದೋಷಮುಕ್ತವಾಗಿದ್ದವೆ? ರಸ್ತೆ ಅಸಮರ್ಪಕವಾಗಿ ನಿರ್ಮಾಣವಾಗಿತ್ತೆ? ರಸ್ತೆಯಲ್ಲಿ ಮುನ್ನೆಚ್ಚರಿಕಾ ಸಂಕೇತಗಳು ಕಾಣುವಂತಿದ್ದವೆ? ಉಳಿದ ರಸ್ತೆ ಬಳಕೆದಾರರು ಯಾವ ತಪ್ಪೆಸಗಿರಲಿಲ್ಲವೆ? ದೀಪ ಹಾಗೂ ಬೆಳಕಿನ ವ್ಯವಸ್ಥೆಯಲ್ಲಿ ಯಾವುದೇ ಕೊರತೆಯಿರಲಿಲ್ಲವೆ? .... ಈ ಎಲ್ಲ ಕ್ಷೇತ್ರಗಳ ಎಂಜಿನೀರ್‌ಗಳು ಸರಿಯಾಗಿ ಕೆಲಸ ಮಾಡಿದ್ದರೆ? ಅವರು ಸರಿಯಾಗಿ ಕೆಲಸ ಮಾಡುತ್ತವೆಂದು ಪ್ರಮಾಣೀಕರಿಸಿದ್ದ ವ್ಯವಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದವೆ? ಹಾಗಿದ್ದಲ್ಲಿ ಯಾವ ಅನಿರೀಕ್ಷಿತ ಸಂದರ್ಭಗಳು ಅಪಘಾತಕ್ಕೆಡೆ ಮಾಡಿಕೊಟ್ಟವು? ಮುಂದಿನ ಬಾರಿ ಇಂಥ ಪ್ರಮಾದಗಳು ಮರುಕಳಿಸದಂತೆ ನೋಡಿಕೊಳ್ಳಲಾದೀತೆ? ಇಂಥ ಪ್ರಶ್ನೆಗಳು ಕೇವಲ ರಸ್ತೆ ಅಪಘಾತಗಳಾದಾಗ ಮಾತ್ರ ಏಳುವುದಿಲ್ಲ. ಇತ್ತೀಚೆಗೆ ಗಗನಕ್ಕೇರಿದ ಕೆಲ ಹೊತ್ತಿನಲ್ಲಿಯೇ ಪುಟ್ಟ ವಿಮಾನವೊಂದು ಧರೆಗುರುಳಿದಾಗಲೂ ಈ ಬಗೆಯ ಪ್ರಶ್ನೆಗಳೆದ್ದಿದ್ದವು.
ಹಾಗಿದ್ದರೆ ಬದಲಿ ಚಿಂತನೆಗಳಿಗೆ ಅವಕಾಶವೇ ಇಲ್ಲವೆ? ಎಂಜಿನೀರಿಂಗ್ ಕಾಲೇಜುಗಳು ಕೇವಲ ಯಂತ್ರಮಾನವ (ರೋಬಾಟ್) ಗಳನ್ನು ಉತ್ಪಾದಿಸುವ ಕಾರ್ಖಾನೆಗಳೆ? ಹೀಗಾಗಬಾರದು, ‘ನಮ್ಮೆಲ್ಲರನ್ನು ನಾಗರಿಕರಂತೆ ಸುಖವಾಗಿಡಬಲ್ಲ ಆದರೆ ಲೆಕ್ಕಾಚಾರ ಹಾಕುವ ಯಂತ್ರಗಳಲ್ಲದ’ ಎಂಜಿನೀರ್‌ಗಳನ್ನು ಸೃಷ್ಟಿಸಬೇಕು - ಎಂಬ ಚಿಂತನೆಗೆ ಚಾಲನೆ ದೊರೆತಿದೆ. ಅಮೆರಿಕದ ಮೆಸಾಶ್ಯುಸೆಟ್ಸ್ ರಾಜ್ಯದ ನೀಧಾಮ್ ಪಟ್ಟಣದಲ್ಲೊಂದು ಕಾಲೇಜು ಆರಂಭವಾಗಿದೆ. ಫ್ರಾಂಕ್ಲಿನ್ ಓಲಿನ್ ಎಂಜಿನೀರಿಂಗ್ ಕಾಲೇಜ್ ಹೆಸರಿನ ಈ ವಿದ್ಯಾಸಂಸ್ಥೆ ಸ್ಥಾಪನೆಯಾದ (2002) ಕೇವಲ ಐದು ವರ್ಷಗಳಲ್ಲಿ ಜಗತ್ತಿನೆಲ್ಲೆಡೆ ತನ್ನ ಛಾಪು ಮೂಡಿಸಿದೆ. ಮದ್ದು-ಗುಂಡುಗಳನ್ನು ತಯಾರಿಸುತ್ತಿದ್ದ ಫ್ರಾಂಕ್ಲಿನ್ ಓಲಿನ್‍ಗೆ ಶಿಕ್ಷಣ ಕ್ಷೇತ್ರದಲ್ಲಿ ತೀರಾ ಒಲವಿತ್ತು. ಆತ ನಿಧನವಾಗುವ ಹೊತ್ತಿಗೆ (1951) ಅಪಾರ ಆಸ್ತಿಯನ್ನಷ್ಟೇ ಅಲ್ಲ, ಬಹು ದೊಡ್ಡ ಕನಸುಗಳನ್ನೂ ಬಿಟ್ಟು ಹೋಗಿದ್ದ. ಅವನ ಹೆಸರಿನಲ್ಲಿ ಪ್ರತಿಷ್ಠಾನವೊಂದನ್ನು ಸ್ಥಾಪಿಸಿದ ಬಂಧು-ಮಿತ್ರರು ಎಂಜಿನೀರಿಂಗ್ ಕ್ಷೇತ್ರದಲ್ಲಿನ ಹೆಚ್ಚಿನ ಸಂಶೋಧನೆಗಳಿಗೆ ನೆರವು ನೀಡಲಾರಂಭಿಸಿದರು. ಕ್ರಿ.ಶ.1993ರ ಹೊತ್ತಿಗೆ ಪ್ರತಿಷ್ಠಾನದ ನೇತೃತ್ವ ವಹಿಸಿಕೊಂಡಿದ್ದ ಲಾರೆನ್ಸ್ ಮಿಲಾಸ್ ಹಾಗೂ ಇತರೆ ಸದಸ್ಯರಿಗೆ ಓಲಿನ್ ಹೊತ್ತಿದ್ದ ಕನಸುಗಳು ಸಾಕಾರವಾಗುತ್ತಿಲ್ಲ. ಪ್ರತಿಷ್ಠಾನದ ಕೊಡುಗೆಯಿಂದ ಕೇವಲ ಸಾಮಾನ್ಯ ಎಂಜಿನೀರ್‌ಗಳನ್ನು ಉತ್ಪಾದಿಸುವ ಬೃಹತ್ ಕಟ್ಟಡಗಳನ್ನು, ಪ್ರಯೋಗಶಾಲೆ ಉಪಕರಣಗಳನ್ನಷ್ಟೇ ನಿರ್ಮಿಸಲಾಗುತ್ತಿದೆ ಎಂಬ ಚಿಂತೆ ಕಾಡತೊಡಗಿತು. ತಾವು ಇದುವರೆಗೂ ಮಾಡುತ್ತಿರುವ ಕಾರ್ಯವನ್ನು ಯಾವುದೇ ಶ್ರೀಮಂತ ಉದ್ಯಮಿ ಅಥವಾ ಪ್ರತಿಷ್ಠಾನ ಕೈಗೊಳ್ಳಬಹುದು. ತಮ್ಮ ಕೆಲಸದಲ್ಲಿ ಯಾವುದೇ ವೈಶಿಷ್ಟ್ಯವಿಲ್ಲವೆಂದು ಮನವರಿಕೆಯಾಯಿತು. ಜನಪ್ರಿಯತೆಯ ಅಲೆಯಲ್ಲಿ ಸೃಜನಶೀಲತೆ ಕೊಚ್ಚಿಕೊಂಡು ಹೋಗುತ್ತಿದೆಯೆಂಬ ಭೀತಿ ಅವರಲ್ಲಿ ಮೂಡತೊಡಗಿತು.
ಈ ಸಂದರ್ಭದಲ್ಲಿ ಅಮೆರಿಕ ಸರಕಾರದ ಧನ ಸಹಾಯದಿಂದ ಕಾರ್ಯನಿರ್ವಹಿಸುವ ‘ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ’ದೊಂದಿಗೆ ಲಾರೆನ್ಸ್ ಮಿಲಾಸ್ ಮತ್ತು ಸಂಗಡಿಗರು ಚರ್ಚೆ ಮಾಡಿದರು. ಕುತೂಹಲದಿಂದಲೇ ಅನ್ವೇಷಣೆ ನಡೆಸಬಲ್ಲ ಯುವ ಜನರನ್ನು ಪ್ರೋತ್ಸಾಹಿಸಲು ಇವೆರಡೂ ಪ್ರತಿಷ್ಠಾನಗಳು ಯೋಜನೆಗಳನ್ನು ಹಮ್ಮಿಕೊಂಡವು. ಯಾವ ಕಾಲೇಜುಗಳಲ್ಲಿ ಹೊಸ ಸಂಶೋಧನೆಗಳಿಗೆ, ಹೊಸ ಚಿಂತನೆಗಳಿಗೆ ಅವಕಾಶಗಳಿವೆಯೋ ಅಂಥವುಗಳಿಗೆ ಹೆಚ್ಚಿನ ಧನಸಹಾಯ ನೀಡಲಾರಂಭಿಸಿದವು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾರಂಭಿಸಿದಾಗ ಕೆಲವು ಸ್ವಾರಸ್ಯಕರ ಅಂಶಗಳು ಹೊರಬಂದವು. ಎಂಜಿನೀರಿಂಗ್ ಕಾಲೇಜುಗಳ ಪಠ್ಯಕ್ರಮ ಅಲ್ಲಿ ಲಭ್ಯವಿರುವ ಬೋಧಕರ ವಿಷಯ ಪಾಂಡಿತ್ಯದ ಆಧಾರದ ಮೇಲೆ ನಿರ್ಮಾಣವಾಗುತ್ತಿತ್ತು. ಆ ಪಠ್ಯಕ್ರಮ ಕೇವಲ ಶಿಕ್ಷಕರಿಗೆ ಬೋಧನೆ ಮಾಡಲು ನೆರವಾಗುತ್ತಿದ್ದವೇ ಹೊರತು ವಿದ್ಯಾರ್ಥಿಗಳು ಕಲಿಯಲು ಅನುಕೂಲಕರವಾಗಿರಲಿಲ್ಲ. ಇತ್ತ ವಿದ್ಯಾರ್ಥಿಗಳು ಒಂದೇ ವಿಷಯದ ಬಗ್ಗೆ ಪದವಿಯೋತ್ತರ ವ್ಯಾಸಂಗ ನಡೆಸಲು ಇಚ್ಛಿಸುತ್ತಿದ್ದರೆ. ಆದರೆ ಒಂದಕ್ಕೊಂದು ಪೂರಕವಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಆಸಕ್ತರಿರಲಿಲ್ಲ. ಇನ್ನು ಕಾಲೇಜುಗಳೋ ಪದವಿಗೆ ಸಂಭಂಧಿಸಿದ ಬೋಧನೆಯ ಬಗ್ಗೆ ಕೇಂದ್ರೀಕರಿಸುವ ಬದಲು ಸಂಶೋಧನೆಗೆ ಒತ್ತು ನೀಡುತ್ತಿದ್ದವು. ಕಾರಣ, ಸಂಶೋಧನಾ ಯೋಜನೆಗಳಲ್ಲಿ ಹೆಚ್ಚಿನ ಹಣ ಸಿಗುತ್ತಿದ್ದವು. ಅಂದರೆ ಒಟ್ಟಿನಲ್ಲಿ ವಿದ್ಯಾರ್ಥಿಗಳಿಗಿಂತಲು ಮುಖ್ಯವಾದದ್ದು ಕಾಲೇಜಿನ ಬೋಧಕರು ಹಾಗೂ ಅವರ ಜೀವನೋಪಾಯ.
ಹೀಗೆ ಓಲಿನ್ ಪ್ರತಿಷ್ಠಾನಕ್ಕೆ ನಿರಾಸೆಯ ಕಾರ್ಮೋಡ ಕವಿಯಲಾರಂಭಿಸಿತು. ಆದರೆ ಲಾರೆನ್ಸ್ ಮಿಲಾಸ್ ಮತ್ತವನ ಸಹಚರರಿಗೆ ಏನಾದರೂ ಒಂದು ಹೊಸ ಬಗೆಯ ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳಬೇಕೆಂಬ ತುಡಿತವಿತ್ತು. ನಾಲ್ಕು ನೂರು ದಶಲಕ್ಷ ಅಮೆರಿಕನ್ ಡಾಲರ್ (ಸುಮಾರು ಒಂದು ಸಾವಿರದ ಆರು ನೂರು ಕೋಟಿ ರೂಪಾಯಿಗಳು) ಗಳ ಹಣ ಹೂಡಿಕೆಯೊಂದಿಗೆ ಹೊಸ ಎಂಜಿನೀರಿಂಗ್ ಕಾಲೇಜನ್ನು ಪ್ರತಿಷ್ಠಾನ ಆರಂಭಿಸಿತು. ಈ ಹಿಂದೆ ಪ್ರತಿಷ್ಠಿತ ಸದರ್ನ್ ಕ್ಯಾಲಿಫೋರ್ನಿಯಾ ಹಾಗೂ ಅಯೋವಾ‍ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದ್ದ ಹೊಸ ಬಗೆಯ ಚಿಂತಕ ಪ್ರಾಧ್ಯಾಪಕ ರಿಚರ್ಡ್ ಮಿಲ್ಲರ್ ಮುಖ್ಯಸ್ಥರಾಗಿ ನೇಮಕಗೊಂಡರು. ಅಮೆರಿಕದಲ್ಲಿ ಪದವಿ ಶಿಕ್ಷಣ ಅತ್ಯಂತ ದುಬಾರಿ. ಇಂಥ ವಿಶಿಷ್ಟ ಕಾಲೇಜಿಗೆ ಆಸಕ್ತ ವಿದ್ಯಾರ್ಥಿಗಳನ್ನು ಸೆಳೆಯಲು ಏನಾದರೊಂದು ಹೊಸ ಪ್ರಲೋಭನೆ ನೀಡಬೇಕಿತ್ತು. ಲಾರೆನ್ಸ್ ಮಿಲಾಸ್ ನಿರ್ಧರಿಸಿದ್ದೇನೆಂದರೆ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಿಂದ ವಿನಾಯತಿ ನೀಡುವುದು. ತಮ್ಮೊಂದಿಗೆ ಸಹಭಾಗಿಯಾಗಿ ಎಂದು ಕರೆಕೊಟ್ಟ ಮೊದಲ ವರ್ಷದಲ್ಲಿಯೇ ಆರು ನೂರು ಉತ್ಸಾಹಿ ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದವು. ಅವರಲ್ಲಿ ಪ್ರವೇಶಕ್ಕೆ ಆಯ್ಕೆಯಾದವರು ಮೂವತ್ತು ಮಂದಿ. ‘ಯೋಜನೆ ಆಧರಿತ ಕಲಿಕೆ’ ಎಂಬ ತತ್ವದಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಚಟುವಟಿಕೆಗಳನ್ನು ಆರಂಭಿಸಿದರು. ಮೊದಲ ಯೋಜನೆ ‘ಗಾಲ್ಫ್ ಚೆಂಡುಗಳನ್ನು ತೂರಬಲ್ಲ ಫಿರಂಗಿ’ ನಿರ್ಮಾಣ. ಭೌತ ವಿಜ್ಞಾನ, ಸಾಮಗ್ರಿ ವಿಜ್ಞಾನ, ಗಣಿತ ಸೂತ್ರಗಳನ್ನು ಆಧರಿಸಿದ ಮಾದರಿ ರಚನೆ ಮುಂತಾದ ವಿಷಯಗಳಲ್ಲಿನ ಪರಿಣತ ಬೋಧಕರೊಂದಿಗೆ ವಿದ್ಯಾರ್ಥಿಗಳು ಚರ್ಚೆ ನಡೆಸಲಾರಂಭಿಸಿದರು. ಹೀಗೇಕೆ, ಹಾಗೂ ಮಾಡಬಹುದಲ್ಲವೆ, ಇದೇ ಸೂಕ್ತ, ಈ ಒಂದು ಬದಲಾವಣೆ ನಿರೀಕ್ಷೆಗೂ ಮೀರಿದ ಫಲಿತಾಂಶ ತರಲಿದೆ, ಇದರ ಕಾರ್ಯಕ್ಷಮತೆ ಅಪ್ರತಿಮವಾದದ್ದು ..... ವಿದ್ಯಾರ್ಥಿ ವೃಂದ ಹಾಗೂ ಬೋಧಕ ತಂಡದ ನಡುವಿನ ಕ್ರಿಯಾಶೀಲ ಜಟಾಪಟಿಯ ನಡುವೆ ಯಂತ್ರವೊಂದು ಸಿದ್ಧವಾಯಿತು. ಮುನ್ನೂರು ಗಜಕ್ಕೂ ಹೆಚ್ಚಿನ ದೂರಕ್ಕೆ ಗಾಲ್ಫ್ ಚೆಂಡುಗಳನ್ನು ನಿಯಮಕ್ಕನುಸಾರವಾಗಿ ತೂರಬಲ್ಲ ಫಿರಂಗಿ ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸಿತು.
ಸಮಾಜಕ್ಕೆ ಹೆಚ್ಚು ಪ್ರಯೋಜನಕಾರಿಯಾಗಬಲ್ಲ ಉತ್ತಮ ಎಂಜಿನೀರ್‌ಗಳನ್ನು ರೂಪಿಸುವಲ್ಲಿ ಓಲಿನ್ ಕಾಲೇಜು ಇಂದು ಹೆಸರುವಾಸಿ. ನಿರ್ದಿಷ್ಟ ವಿಭಾಗಗಳು, ಇಂತಿಷ್ಟೇ ಸಂಬಳ ಹಾಗೂ ಅವಧಿಯ ಶಿಕ್ಷಕರು, ಕಟ್ಟುನಿಟ್ಟಿನ ಪಠ್ಯಕ್ರಮ - ಇವ್ಯಾವುವೂ ಇಲ್ಲದ ಈ ಸರ್ವಸ್ವತಂತ್ರ ಎಂಜಿನೀರಿಂಗ್ ಕಾಲೇಜಿಗೆ ಒಳ್ಳೆಯ ಹೆಸರಿದೆ. ಜಗನ್ಮಾನ್ಯ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಿಂದ ಹಿಡಿದು ಪ್ರತಿಷ್ಠಿತ ವಾರಪತ್ರಿಕೆ ನ್ಯೂಸ್‍ವೀಕ್‍ನ ತನಕ ಓಲಿನ್ ಕಾಲೇಜಿನ ಸಾಧನೆ ಪ್ರಶಂಸೆಗೊಳಗಾಗಿದೆ. ಸದ್ಯಕ್ಕೆ ವಿದ್ಯಾರ್ಥಿವೇತನದೊಂದಿಗೆ ದಕ್ಷಿಣ ಕೊರಿಯಾದಲ್ಲಿ ಉನ್ನತ ಅಧ್ಯನ ನಡೆಸುತ್ತಿರುವ ಇಲ್ಲಿನ ಹಳೆಯ ವಿದ್ಯಾರ್ಥಿ ಆಲಿಸನ್ ಲೀ ಪ್ರಕಾರ ‘ನಾನೇನಾದರೂ ಮಾಡಬಲ್ಲೆ ಎಂಬ ಛಲ ನನಗೆ ಮೂಡಿದ್ದು ಓಲಿನ್ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ’. ಆಕೆ ಈಗಾಗಲೇ ಗೋಡೆಯನ್ನು ಹತ್ತಬಲ್ಲ ರೋಬಾಟ್ (ಯಂತ್ರಮಾನವ) ನಿರ್ಮಾಣದಲ್ಲಿ ಯಶಸ್ವಿಯಾಗಿದ್ದಾಳೆ. ‘ಯಾವ ಸಮಸ್ಯೆ ಅತ್ಯಂತ ಕ್ಲಿಷ್ಟವೆಂದು ಪರಿಗಣಿತವಾಗಿದೆಯೊ ಅದನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಬಿಡಿಸಲು ಓಲಿನ್ ಕಾಲೇಜನ್ನು ಪ್ರವೇಶಿಸಬೇಕು’ - ಹೀಗೆನ್ನುವವಳು ಮತ್ತೊಬ್ಬ ವಿದ್ಯಾರ್ಥಿನಿ ಮೀನಾಕ್ಷಿ ವೆಂಬುಸುಬ್ರಮಣಿಯನ್. ಉಷ್ಣ ವಿಜ್ಞಾನದಲ್ಲಿನ ಎಂಜಿನೀರಿಂಗ್ ಕೌತುಕಗಳನ್ನು ಅಭ್ಯಸಿಸುವುದರ ಜತೆಗೆ ಅದರ ಚಂಚಲತೆಯ ಮೂಲಗಳನ್ನು ಅರಿಯುವುದರಲ್ಲಿ ಆಕೆಗೆ ಆಸಕ್ತಿ. ಇತ್ತ ಡಯಾನಾ ಡ್ಯಾಬಿಗೆ ಕೊಳಲು, ಪಿಯಾನೊ ಮುಂತಾದ ಸಂಗೀತ ವಾದ್ಯಗಳಲ್ಲಿ ಪರಿಣತಿಯಿದೆ. ಎಂಜಿನೀರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದಿದ್ದಾಳೆ. ಸಂಗೀತದೊಂದಿಗೆ ಏನಾದರೂ ಹೊಸ ವಿಷಯದಲ್ಲಿ ಸಾಧನೆ ಮಾಡಬೇಕೆಂಬ ಒಲವಿನಿಂದ ಓಲಿನ್ ಕಾಲೇಜನ್ನಾಕೆ ಸೇರಿದ್ದಾಳೆ. ಪ್ರಸ್ತುತ ಬುರುಗುಗಳ ನಡುವೆ ಸೇತುವೆಗಳ ನಿರ್ಮಾಣ ಸಾಧ್ಯವೆಂತು ಎಂಬ ಚಿಂತನೆಯಲ್ಲಿದ್ದಾಳೆ. ವಿದ್ಯುನ್ಮಾನ ಕ್ಷೇತ್ರಕ್ಕೆ ಬಹೂಪಯೋಗಿಯಾಗಬಲ್ಲ ಎಂಜಿನೀರಿಂಗ್ ವಿಷಯವಿದು. ಈ ಕಾಲೇಜಿನಲ್ಲಿ ಪ್ರತಿಶತ ನಲವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರಿರುವುದೊಂದು ವಿಶೇಷ.
‘ಉತ್ತಮ ಸಮಾಜಕ್ಕಾಗಿ’ ಎಂಬುದು ಕೇವಲ ಟೀವಿ ಚಾನೆಲ್ ಒಂದರ ಘೋಷವಾಕ್ಯವಷ್ಟೇ ಅಲ್ಲ, ಇತ್ತೀಚಿನ ಸ್ಥಳೀಯ ಸಂಸ್ಥೆಗಳಿಗಾಗಿ ನಡೆದ ಚುನಾವಣೆಯ ಅಭ್ಯರ್ಥಿಯೊಬ್ಬರ ಪ್ರಚಾರ ಸಾಲೂ ಆಗಿತ್ತು. ಓಲಿನ್ ಕಾಲೇಜಿನ ಅಘೋಷಿತ ನಿಲುಮೆ - ‘ಉತ್ತಮ ಸಮಾಜಕ್ಕಾಗಿ ಅಗತ್ಯವಿರುವ ಎಂಜಿನೀರ್‌ಗಳನ್ನು ರೂಪಿಸುವುದು’! ಇದರರ್ಥ ಬಹುಶಃ ಮತ್ತಷ್ಟು ವಿಶ್ವೇಶ್ವರಯ್ಯನವರನ್ನು ದೇಶ ನಿರ್ಮಾಣಕ್ಕೆಂದು ರೂಪಿಸುವುದು, ಅಲ್ಲವೆ?
(ಕೃಪೆ: ವಿಜಯ ಕರ್ನಾಟಕ; 01-10-2007)

No comments: