‘ಶನಿವಾರ ರಂಗಶಂಕರಕ್ಕೆ ಬರ್ತೀನಿ ಅಂದವ್ರು ..’ ಎಂದು ಮಾತು ಮುಗಿಸುವ ಮುನ್ನವೇ ‘ಈ ಸಾಫ್ಟ್ವೇರ್ನವರಿಂದಾಗಿ ಹಲ್ಲು ಕೀಳಿಸಿಕೊಳ್ಳಲೂ ಅಪಾಯಿಂಟ್ಮೆಟ್ ಸಿಗ್ತಾ ಇಲ್ಲ, ನಮ್ಮ ಬೆಂಗಳೂರಿನಲ್ಲಿ’ ಎಂದು ತಮ್ಮ ನೋವನ್ನು ಹಂಚಿಕೊಂಡರು, ಮಿತ್ರರು. ‘ಮೈಸೂರು ಮಲ್ಲಿಗೆ’ಯ ಎಲ್ಲ ಕವನಗಳನ್ನೂ ಹೆಚ್ಚೂ-ಕಮ್ಮಿ ಉರುಹಚ್ಚಿರುವ ಈ ಅಪ್ಪಟ ನರಸಿಂಹಸ್ವಾಮಿ ಭಕ್ತರು ಕಳೆದ ಒಂದು ತಿಂಗಳಿನಿಂದಲೂ ಬಿ.ವಿ.ರಾಜಾರಾಂ ರಂಗಕ್ಕಳವಡಿಸಿರುವ ನಾಟಕ ನೋಡೋಣ ಬನ್ನಿ ಎಂದು ಪೀಡಿಸುತ್ತಿದ್ದರು. ವಾರಕ್ಕೆ ಮೊದಲೇ ಮೊನ್ನೆ ಶನಿವಾರ ಸಂಜೆಯ ಕಾರ್ಯಕ್ರಮ ನಿಗದಿಯಾಗಿತ್ತು. ರಂಗಶಂಕರಕ್ಕೆ ಬಂದರೆ ಮಿತ್ರರು ನಾಪತ್ತೆ, ಮೊಬೈಲ್ ಫೋನ್ ಸ್ವಿಚ್ಆಫ್. ಕೈಕೊಟ್ಟ ಮಿತ್ರರು ಬುದ್ಧಿವಂತಿಕೆಯ ಹಲ್ಲಿನ ಬಾಧೆಯಿಂದ ಬಳಲುತ್ತಿದ್ದರು. ಅಲ್ಪ-ಸ್ವಲ್ಪ ಹೆಸರು ಮಾಡಿರುವ ಯಾವುದೇ ದಂತ ವೈದ್ಯರ ಚಿಕಿತ್ಸಾಲಯಕ್ಕೆ ದಿನಸಿ ಅಂಗಡಿಯಂತೆ ನುಗ್ಗುವ ಹಾಗಿಲ್ಲ. ರಸ್ತೆಯಿಂದ ರಸ್ತೆಗೆ ಇಡೀ ಶನಿವಾರ ದಂತ ವೈದ್ಯರ ಅನ್ವೇಷಣೆಯಲ್ಲಿ ಕಳೆದ ಮಿತ್ರರಿಗೆ, ಕಿಂಚಿತ್ತು ದಯೆ ತೋರಿದ್ದು ಅಂತಕನ ದೂತನಂತಿರದ ವೈದ್ಯರೊಬ್ಬರು. ವೈದ್ಯರ ಭೈರಿಗೆಗೆ ಹಲ್ಲು ಕೊಡುವ ಮುನ್ನ ಮಿತ್ರರು ತಮ್ಮ ಮೊಬೈಲ್ ಫೋನ್ ಬಂದ್ ಮಾಡಿದ್ದರು. ಒಂದು ಶತಕೋಟಿಗೂ ಮಿಕ್ಕ ಜನಸಂಖ್ಯೆ, ಪ್ರತಿಯೊಬ್ಬರಿಗೂ (?) ಮೂವತ್ತೆರಡು ಹಲ್ಲುಗಳು. ಹಲ್ಲಿನ ಬಗ್ಗೆ ಕಾಳಜಿ ಹೆಚ್ಚಾಗುತ್ತಿರುವ ಕಾರಣದಿಂದಲೊ ಅಥವಾ ಹಲ್ಲುಗಳು ಅತಿ ಶೀಘ್ರದಲ್ಲಿಯೆ ಕೆಡುತ್ತಿರುವುದರಿಂದಲೊ ದಂತ ವೈದ್ಯರಿಗೆ ಕೈಭರ್ತಿ ಕೆಲಸ. ‘ಬುದ್ಧ ಈಗ ಇದ್ದಿದ್ದರೆ ಹುಳುಕು ಹಲ್ಲಿಲ್ಲದವರ ಮನೆಯಿಂದ ಸಾಸಿವೆ ಕಾಳು ತಾ ಎನ್ನುತ್ತಿದ್ದನೇನೊ’ - ಭಾನುವಾರ ಸಿಕ್ಕಾಗ ಊದಿಕೊಂಡ ಮೂತಿಯಲ್ಲಿಯೇ ಮಿತ್ರರು ನಗೆಯಾಡಿದರು.
‘ಹಲ್ಲಿನಂತೆಯೇ ಸದೃಢವಾದ, ಎಲ್ಲ ಸಂವೇದನೆಗಳನ್ನು ಸ್ವೀಕರಿಸುವ, ವಯಸ್ಸಾದಂತೆ ಸವೆಯುತ್ತಾ ಹೋಗುವ, ಬಾಯಿ, ನಾಲಿಗೆ ಹಾಗೂ ಇತರ ಹಲ್ಲುಗಳೊಂದಿಗೆ ಸಹಯೋಗದಿಂದ ಕಾರ್ಯನಿರ್ವಹಿಸಬಲ್ಲ ಹಲ್ಲೊಂದನ್ನು ಕೃತಕವಾಗಿ ನಿರ್ಮಿಸಲು ಎಷ್ಟು ಹಣ ಬೇಕಾಗುತ್ತದೆ, ಗೊತ್ತೆ’? - ವಿಮಾನ ನಿರ್ಮಾಣಕ್ಕೆ ಅಗತ್ಯವಾದ ಎಂಜಿನೀರಿಂಗ್ ಸಾಮಗ್ರಿಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಯೊಬ್ಬರು ಹಿಂದೊಮ್ಮೆ ಪ್ರಶ್ನೆ ಹಾಕಿದ್ದಾಗ ‘ಹದಿನೈದು ಇಪ್ಪತ್ತು ಸಹಸ್ರ ರೂಪಾಯಿಗಳಿರಬಹುದು’ ಎಂದಿದ್ದೆ. ‘ರೂಪಾಯಿ ಅನ್ನುವ ಬದಲು ಡಾಲರ್, ಅನ್ನಿ. ನಿಮ್ಮ ಊಹೆ ಸರಿಹೊಂದುತ್ತದೆ’ ಎಂದು ನನ್ನ ಪೆದ್ದುತನವನ್ನು ಹೀಯಾಳಿಸಿದ್ದರು. ಅಂದರೆ ಸ್ವಾಭಾವಿಕವಾಗಿ ನಾವು ಪಡೆದುಕೊಂಡಿರುವ ನಮ್ಮ ಪ್ರತಿಯೊಂದು ಹಲ್ಲಿನ ಬೆಲೆ ಲಕ್ಷಾಂತರ ರೂಪಾಯಿಗಳು. ಆದರೆ ನನ್ನ ಆ ಸಾಮಗ್ರಿ ತಂತ್ರಜ್ಞರೂ ಸೇರಿದಂತೆ ನಾವ್ಯಾರೂ ಹಲ್ಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದಿಲ್ಲ, ಅಥವಾ ಅದಕ್ಕೆ ತಕ್ಕ ಗೌರವವನ್ನು ತೋರುವುದಿಲ್ಲ. ಯಾವುದೇ ದಂತ ವೈದ್ಯರೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಳ್ಳಿ. ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಶ್ರೀಕೃಷ್ಣನಂತೆ ಅವರಿಗೆ ಬ್ರಹ್ಮಾಂಡವನ್ನು ನೀವು ತೋರಿಸಿರುತ್ತೀರಿ. ‘ಅಲ್ಲ ಸರ್, ಹತ್ತು ರೂಪಾಯಿ ಬೆಲೆ ಬಾಳುವ ಚಾಕುವನ್ನು ತರಕಾರಿ ಕತ್ತರಿಸಿದ ಮೇಲೆ ಜತನದಿಂದ ತೊಳೆದಿಡುತ್ತೀರಿ. ರಾತ್ರಿ ಮಲಗುವ ಮುನ್ನ, ಒಮ್ಮೆ ಹಲ್ಲು ತಿಕ್ಕಬಾರದೆ’? ಎಂಬ ಪ್ರವಚನ ನಿಮ್ಮ ಕಿವಿಗೆ ಖಂಡಿತವಾಗಿಯೂ ಬಿದ್ದಿರುತ್ತದೆ. ದಂತ ವೈದ್ಯರೆಂದೊಡನೆ ನಮಗೆ ಮೊದಲು ಅವರ ‘ಡ್ರಿಲ್’ (ಕೊರೆತ) ಭಯ ಹುಟ್ಟಿಸುತ್ತದೆ. ನಂತರ ಮೈ ನಡುಕ ಹುಟ್ಟಿಸುವುದು ‘ಫಿಲ್’ (ತುಂಬುವಿಕೆ). ಇವೆರಡನ್ನೂ ಹೇಗೋ ನಿಭಾಯಿಸಿದರೆ, ಕೊನೆಗೆ ಗಾಭರಿ ಹುಟ್ಟಿಸುವುದು ಅವರು ಕೊಡುವ ‘ಬಿಲ್’. ದಂತ ವೈದ್ಯ ವಿಜ್ಞಾನ ಈ ಡ್ರಿಲ್-ಫಿಲ್-ಬಿಲ್ಗಳಿಗೂ ಮೀರಿ ಬೆಳೆದಿದೆ. ಎಂಜಿನೀರಿಂಗ್, ಜೈವಿಕ ತಂತ್ರಜ್ಞಾನ, ಸೂಕ್ಷ್ಮ ಕಂಪ್ಯೂಟರ್ ವಿಜ್ಞಾನಗಳೆಲ್ಲವನ್ನೂ ಮೇಳೈಸಿಕೊಂಡು ದಂತ ವೈದ್ಯಕೀಯ ಕ್ಷೇತ್ರವು ಹಲ್ಲುಗಳನ್ನು ಹೆಚ್ಚು ಸುರಕ್ಷವಾಗಿಸುವತ್ತ ಮುನ್ನಡಿಯಿಡುತ್ತಿದೆ.
ಹಲ್ಲಿನ ಮೇಲೆ ಗಟ್ಟಿಯಾದ ಹೊಳಪಿನ ಪದರವೇ ‘ಎನಾಮೆಲ್’. ಇದಕ್ಕೆ ಧಕ್ಕೆ ಬಂದರೆ, ಹಲ್ಲಿನಲ್ಲಿ ‘ಹುಳುಕಿನ ಡೊಗರು’ ಗ್ಯಾರಂಟಿ. ಆದರೆ ಇದು ನಮ್ಮ ಅನುಭವಕ್ಕೆ ಬರುವಷ್ಟರಲ್ಲಿ, ಹಲ್ಲಿಗೆ ಸಾಕಷ್ಟು ಹಾನಿಯಾಗಿರುತ್ತದೆ. ಈ ‘ಎನಾಮೆಲ್’ ಪದರದಲ್ಲಿ ಆರಂಭವಾಗುವ ಸೂಕ್ಷ್ಮಾತಿ ಸೂಕ್ಷ್ಮ ಬಿರುಕುಗಳು, ನಮ್ಮ ಕಣ್ಣಿಗಿರಲಿ ವೈದ್ಯರ ಭೂತಕನ್ನಡಿಗೂ ಗೋಚರವಾಗುವುದಿಲ್ಲ. ‘ಎನಾಮೆಲ್’ನ ಸುರಕ್ಷತೆಗೆ ಅಗತ್ಯವಾದ ಕೆಲವೊಂದು ಲವಣಗಳು ನಮ್ಮ ದೇಹದಲ್ಲಿ ಲಭ್ಯವಿಲ್ಲದಾಗ, ಇಂಥ ಬಿರುಕುಗಳು ಏಳಲಾರಂಭಿಸುತ್ತವೆ. ಬೆಳಕಿನ ಕಣಗಳಾದ ‘ಫೋಟಾನ್’ಗಳು ನಿಮಗೆ ಗೊತ್ತು. ಪುಟ್ಟ ಪ್ರದೇಶವೊಂದರಲ್ಲಿನ ತಾಪಮಾನದ ಸೂಕ್ಷ್ಮ ಏರುಪೇರನ್ನು ‘ಫೋಟಾನ್’ಗಳ ಪ್ರತಿಫಲನದಿಂದ ಗುರುತಿಸಬಹುದು. ವಿಮಾನ ಹಾಗೂ ಬಾಹ್ಯಾಕಾಶ ನೌಕೆಗಳಿಗೆ ಬಳಕೆಯಾಗುವ ಲೋಹಗಳಲ್ಲಿ, ಕಂಪ್ಯೂಟರ್ಗಳ ಬಿಡಿಭಾಗಗಳಾದ ಅರೆ-ವಾಹಕಗಳಲ್ಲಿ, ಔಷಧ ತಯಾರಿಕೆಗೆ ಬಳಸುವ ರಾಸಾಯನಿಕ ಹರಳುಗಳಲ್ಲಿ ಅತ್ಯಂತ ಸೂಕ್ಷ್ಮ ಬಿರುಕುಗಳನ್ನು ಗುರುತಿಸುವುದು ಸವಾಲಿನ ಕೆಲಸ. ಈ ಕಾರ್ಯಕ್ಕೆಂದು ಬಳಕೆಯಾಗುತ್ತಿರುವ ತಂತ್ರಜ್ಞಾನವೇ ‘ಥರ್ಮೊಫೋಟಾನಿಕ್ಸ್ - Thermophotonics’. ನೇರವಾಗಿ ಬೆಳಕಿನ ಕಿರಣಗಳನ್ನು ಇಲ್ಲಿ ಬಳಸಲು ಹೊರಟರೆ ಅಷ್ಟು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ, ಕಾರಣ ಬೆಳಕಿನ ಕಿರಣಗಳು ಚೆದುರಿಹೋಗುತ್ತದೆ. ಇದರ ಬದಲು ಅತಿ ಸಾಂದ್ರವಾದ, ಕೇಂದ್ರೀಕೃತ ಬೆಳಕಿನ ಪುಂಜವಾದ ‘ಲೇಸರ್’ ಅನ್ನು ಈ ಕಾರ್ಯಕ್ಕೆ ಸಜ್ಜುಗೊಳಿಸಬಹುದು. ಕೆನಡಾ ದೇಶದ ಟೊರೊಂಟೊ ವಿವಿಯಲ್ಲಿ ‘ಯಾಂತ್ರಿಕ, ಔದ್ಯಮಿಕ ಹಾಗೂ ವಿದ್ಯುತ್ ಎಂಜಿನೀರಿಂಗ್’ ವಿಭಾಗದ ಪ್ರಾಧ್ಯಾಪಕರಾಗಿರುವ ಆಂಡ್ರಿಯಾಸ್ ಮ್ಯಾಂಡಲಿಸ್ ಏಳು ವರ್ಷಗಳ ಹಿಂದೆ ಸೂಕ್ಷ್ಮಾತಿ ಸೂಕ್ಷ್ಮ ಬಿರುಕಗಳನ್ನು ನಿಖರವಾಗಿ ಗುರುತಿಸಬಲ್ಲ ಲೇಸರ್ ಉಪಕರಣವೊಂದನ್ನು ಸಿದ್ಧಪಡಿಸಿದ್ದರು. ಅದರ ಮೊದಲ ಮಾದರಿಗಳನ್ನು ವಿವಿಧ ಸಾಮಗ್ರಿಗಳ ಮೇಲೆ ಪರಿಶೀಲನೆ ನಡೆಸಿ ಯಶಸ್ವಿಯೂ ಆದರು. ಅಕಸ್ಮಾತಾಗಿ ದಂತ ವೈದ್ಯರೊಬ್ಬರನ್ನು ಭೇಟಿಯಾದ ಸಂದರ್ಭದಲ್ಲಿ, ತಮ್ಮ ಉಪಕರಣವನ್ನು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಬಾರದೇಕೆ? ಎಂಬ ಆಲೋಚನೆ ಅವರಿಗೆ ಬಂದಿತು. ಟೊರೊಂಟೊದಲ್ಲಿ ದಂತ ವೈದ್ಯರಾಗಿದ್ದ ಸ್ಟೀಫನ್ ಅಬ್ರಾಮ್ಸ್ ತಮ್ಮ ಕ್ಷೇತ್ರಾನುಭವವನ್ನು ಮ್ಯಾಂಡಲಿಸ್ ಅವರೊಂದಿಗೆ ಹಂಚಿಕೊಂಡರು. ಇಬ್ಬರೂ ಜತೆಗೂಡಿ ಹುಟ್ಟುಹಾಕಿದ ಕಂಪನಿ ‘ಕ್ವಾಂಟಮ್ ಡೆಂಟಲ್ ಟೆಕ್ನಾಲಜೀಸ್’. ಹಲ್ಲಿನ ತಪಾಸಣೆಯನ್ನು ನಿಖರವಾಗಿ ಮಾಡುವ ಉಪಕರಣವನ್ನು ವಿನ್ಯಾಸಗೊಳಿಸಲು ಅವರೊಂದಿಗೆ ಎಂಜಿನೀರಿಂಗ್ ಹಾಗೂ ವೈದ್ಯ ಕ್ಷೇತ್ರದ ಪರಿಣತರು ಸಹಾಯ ಹಸ್ತ ನೀಡಿದರು.
ಹಲ್ಲು ಸೇರಿದಂತೆ ಯಾವುದೇ ಸಾಮಗ್ರಿಯ ಮೇಲೆ ಲೇಸರ್ ಬೆಳಕಿನ ಚಿಮ್ಮುವ ತುಣಕುಗಳನ್ನು ಹಾಯಿಸಿದಾಗ ಏನಾಗುತ್ತದೆ? ಲೇಸರ್ ಬಿದ್ದ ಸ್ಥಳ ಮಿನುಗುತ್ತದೆ ಜತೆಗೆ ಆ ಜಾಗದ ತಾಪಮಾನ ಏರುತ್ತದೆ. ಆ ಸ್ಥಳದಿಂದ ಪ್ರತಿಫಲಿತವಾದ ಬೆಳಕು ಹಾಗೂ ಶಾಖದ ಅಲೆಗಳ ಉದ್ದವನ್ನು ಮತ್ತೊಂದು ಉಪಕರಣದ ಮೂಲಕ ಸೆರೆಹಿಡಿದರೆ ಆ ಸ್ಥಳದ ಮಾಹಿತಿ ಸಿಗುತ್ತದೆ. ಮೊದಲು ಹಾಯಿಸಿದ ಲೇಸರ್ ಬೆಳಕಿನ ಅಲೆಗಳ ಉದ್ದದೊಂದಿಗೆ ಸ್ವೀಕೃತ ಮಾಹಿತಿಯನ್ನು ತುಲನೆ ಮಾಡಿದರೆ ‘ಸ್ಥಳ ಮಹಾತ್ಮೆ’ಯ ಪರಿಚಯವಾಗುತ್ತದೆ. ಯಾವುದೇ ನ್ಯೂನತೆಗಳಿಲ್ಲದ ಶುದ್ಧ ಸಾಮಗ್ರಿ ಪ್ರತಿಶತ ನೂರಕ್ಕೆ ನೂರು ಬೆಳಕಿನ ಪ್ರತಿಫಲನ ಮಾಡಿದರೆ, ಉಳಿದವು ನ್ಯೂನತೆಗೆ ತಕ್ಕಂತೆ ಬೆಳಕನ್ನು ಕಡಿಮೆ ಪ್ರತಿಫಲನ ಮಾಡುತ್ತವೆ. ಉನ್ನತ ಕೌಶಲದ ಉಪಕರಣಗಳ ನೆರವಿನಿಂದ ನ್ಯೂನತೆ ಎಲ್ಲಿದೆಯೆಂದು ಪತ್ತೆ ಮಾಡುವುದಷ್ಟೇ ಅಲ್ಲ, ಆ ಬಿರುಕು ಎಷ್ಟು ಆಳವಿದೆಯೆಂದೂ ಅರಿಯಬಹುದು. ಈಗಾಗಲೇ ಕ್ಷ-ಕಿರಣಗಳ ತಪಾಸಣೆಯಿದೆಯಲ್ಲ, ಇದರಲ್ಲೇನು ವಿಶೇಷ? ಎಂದು ನಿಮಗೆ ಗುಮಾನಿ ಬರುವ ಮೊದಲು ಸ್ಪಷ್ಟೀಕರಣ ನೀಡಲಿಚ್ಛಿಸುತಾರೆ ಮ್ಯಾಂಡಲಿಸ್ ಹಾಗೂ ಅಬ್ರಾಮ್ಸ್. ಕ್ಷ-ಕಿರಣ ನೀಡುವ ಚಿತ್ರದಲ್ಲಿ ಬಿರುಕು ಕಾಣಿಸುವ ಹೊತ್ತಿಗೆ ಕನಿಷ್ಟವೆಂದರೂ ಪ್ರತಿಶತ ಮೂವತ್ತರಷ್ಟು ಲವಣಾಂಶ ಎನಾಮೆಲ್ಗಳ ಅಡಿಯಲ್ಲಿ ನುಂಗಿಹೋಗಿರುತ್ತದೆ. ಅಂದರೆ ಕ್ಷ-ಕಿರಣಗಳು ಪತ್ತೆ ಮಾಡುವಷ್ಟರಲ್ಲಿ, ಎನಾಮೆಲ್ಗೆ ಸಾಕಷ್ಟು ಹಾನಿಯಾಗಿಬಿಟ್ಟಿರುತ್ತದೆ. ಲವಣಗಳ ಕರಗುವಿಕೆಯನ್ನು ಇಷ್ಟು ಮೊದಲೇ ಪತ್ತೆ ಮಾಡುವುದರಿಂದ ಅನುಕೂಲವೇನು? ಎಂಬ ಪ್ರಶ್ನೆಗೆ ಅಮೆರಿಕದಲ್ಲಿರುವ ‘ಅಂತಾರಾಷ್ಟ್ರೀಯ ದಂತ ವೈದ್ಯಕೀಯ ಸಂಶೋಧನಾ ಒಕ್ಕೂಟ’ದ ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಸ್ಟಫರ್ ಫಾಕ್ಸ್ ಹೀಗೆನ್ನುತ್ತಾರೆ. ‘ಸೂಕ್ಷ್ಮ ಬಿರುಕುಗಳನ್ನು ಮುಚ್ಚಿಹಾಕುವ ಮೂಲಕ ಡ್ರಿಲ್-ಫಿಲ್ಗಳ ರೇಜಿಗೆಯಿಲ್ಲದೆಯೆ ಹಲ್ಲುಗಳ ಎನಾಮೆಲ್ಗಳನ್ನು ಮೊದಲಿನಂತೆಯೇ ಗಟ್ಟಿಮುಟ್ಟಾಗಿಸಬಹುದು. ಈ ಹಲ್ಲುಗಳನ್ನು ಸ್ವಾಭಾವಿಕವಾಗಿರುವಷ್ಟೇ ಸದೃಢವಾಗಿಸಬಹುದು’.
ಈ ತಂತ್ರಜ್ಞಾನ ಬಂದಂತೆ ಹಲ್ಲಿನ ಕ್ಷ-ಕಿರಣ ತೆಗೆಯುವುದು ಪೂರ್ಣವಾಗಿ ನಿಲ್ಲುವುದಿಲ್ಲ. ಹಲ್ಲಿನ ಬೇರನ್ನು ಹಿಡಿದಿಟ್ಟುಕೊಳ್ಳುವ ಮೂಳೆಗಳು ನೆಟ್ಟಗಿದೆಯೆ? ಎಂಬುದನ್ನು ಪರಿಶೀಲಿಸಲು ಕ್ಷ-ಕಿರಣ ಚಿತ್ರೀಕರಣವೇ ಬೇಕಾಗುತ್ತದೆ. ಆದರೆ ಹಲ್ಲಿನ ಪರೀಕ್ಷೆಗಳಿಗೆ ಈಗ ಬಳಸುತ್ತಿರುವಷ್ಟು ಯಥೇಚ್ಛವಾಗಿ ಕ್ಷ-ಕಿರಣ ಬಳಸಬೇಕಾಗಿಲ್ಲ. ಪ್ರಯೋಗಶಾಲೆಗಳಲ್ಲಿ ನಡೆಯುತ್ತಿರುವ ಅಧ್ಯಯನಗಳ ಪ್ರಕಾರ ಕ್ವಾಂಟಮ್ ರೂಪಿಸಿರುವ ವ್ಯವಸ್ಥೆಯು ಮಾಮೂಲಿ ಲೇಸರ್ ಬೆಳಕನ್ನು ಚೆಲ್ಲಿ ಪರಿಶೀಲನೆ ನಡೆಸುವುದಕ್ಕಿಂತಲೂ ಪ್ರತಿಶತ ಮೂವತ್ಮೂರರಷ್ಟು ಉತ್ತಮವಾಗಿದೆ. ಕ್ಷ-ಕಿರಣ ತಪಾಸಣೆಗಿಂತಲೂ ಮೂರು ಪಟ್ಟು ಹೆಚ್ಚಿನ ಕಾರ್ಯಕ್ಷಮತೆ ಹೊಂದಿದೆ. ಈಗ ನಿರ್ಮಿತವಾದ ಉಪಕರಣ ಸ್ವಲ್ಪ ದೊಡ್ಡ ಗಾತ್ರದ್ದಾಗಿದ್ದು ದಂತ ಚಿಕಿತ್ಸಾಲಯಗಳಲ್ಲಿ ನೇರವಾಗಿ ಉಪಯೋಗಿಸಲು ಸ್ವಲ್ಪ ಕಷ್ಟದಾಯಕವಾಗಿದೆ. ಇನ್ನು ಹದಿನೈದು ತಿಂಗಳುಗಳಲ್ಲಿ ಸಾಕಷ್ಟು ಪುಟ್ಟದಾಗಿ ಉಪಕರಣವನ್ನು ರೂಪಿಸುವ ಆಶ್ವಾಸನೆಯನ್ನು ಕ್ವಾಂಟಮ್ ನೀಡಿದೆ. ಎಲ್ಲವೂ ಅಲ್ಲಿನ ವಿಜ್ಞಾನಿಗಳ ಎಣಿಕೆಯಂತೆ ನಡೆದರೆ ಮುಂದಿನ ವರ್ಷದ ಮಧ್ಯದಲ್ಲಿ ಹಲ್ಲಿನ ತಪಾಸಣೆ (ಅಮೆರಿಕದಲ್ಲಿ) ಸುಗಮವಾಗಲಿದೆ.
ದಂತ ಕ್ಷಯ (ಟೂತ್ ಪೇಸ್ಟ್ ತಯಾರಕರ ಅಚ್ಚುಮೆಚ್ಚಿನ ಪದ ಪುಂಜ)ದ ನಿವಾರಣೆ ಅಥವಾ ಸರಿಪಡಿಸುವಿಕೆ ದಶಕೋಟಿ ಡಾಲರ್ಗಳಿಗೂ ಮಿಕ್ಕಿದ ವಹಿವಾಟು. ಬದಲಾದ ಆಹಾರ ಪದ್ಧತಿ, ಪೌಷ್ಟಿಕಾಂಶಗಳ ಕೊರತೆ, ಜೀನ್ಗಳಲ್ಲಾಗುತ್ತಿರುವ ಬದಲಾವಣೆ, ನೀರು ಸೇರಿದಂತೆ ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದಾಗಿ ಹಲ್ಲು ಹಿಂದಿನವರಿಗಿದ್ದಷ್ಟು ಗಟ್ಟಿಯಾಗಿಲ್ಲ. ಸಿನಿಕರ ಮಾತಿನಂತೆ, ಹಲ್ಲುಗಳ ಬಗೆಗಿನ ವಿಪರೀತ ಕಾಳಜಿಯೇ ದಂತ ಕ್ಷಯಕ್ಕೆ ನೇರ ಕಾರಣವಾಗಿರಲೂಬಹುದು. ಇತರ ಅಂಗ-ಉಪಅಂಗಗಳಂತೆ ಸ್ವಾಭಾವಿಕವಾಗಿ ನಶಿಸಿಹೋಗುವುದನ್ನು ತಡೆಗಟ್ಟುವ ನಮ್ಮ ಮಹತ್ವಾಕಾಂಕ್ಷೆ ಕೂಡಾ, ದಂತ ವೈದ್ಯರ ಬೆನ್ನು ಹತ್ತಲು ಪ್ರೇರೇಪಿಸುತ್ತಿರಬಹುದು. ಉದ್ದಿಶ್ಯಗಳದೇನೇ ಇರಲಿ, ಉನ್ನತ ತಂತ್ರಜ್ಞಾನ, ಅದರಲ್ಲೂ ಮಿಲಿಟರಿ ವ್ಯವಸ್ಥೆಗಳಿಗೆಂದು ಅಭಿವೃದ್ಧಿಯಾದ ತಂತ್ರಜ್ಞಾನ ಸಾಮಾನ್ಯರ ಬಳಕೆಗೆ ಪರೋಕ್ಷವಾಗಿ ಬರುತ್ತಿರುವುದು ಒಳ್ಳೆಯ ಸಂಗತಿ. ಈ ಮಾತನ್ನು ಓದಿದೊಡನೆಯೆ ಮಿಲಿಟರಿ ತಂತ್ರಜ್ಞಾನಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಹೂಡಿಕೆಯ ವಿರುದ್ಧ ದನಿಯೆತ್ತುವ ಶಾಂತಿಪ್ರಿಯರು ಹಲ್ಲು ಕಡಿದಾರು. ಅಂಥವರ ಹಲ್ಲು ನಿಜಕ್ಕಊ ಗಟ್ಟಿಯಿದೆಯೆ? ಎಂಬ ಪರಿಶೀಲನೆಗೂ ಇದೇ ಲೇಸರ್ ಯಂತ್ರವನ್ನು ಬಳಸಿಕೊಳ್ಳಬಹುದು. ಹಲ್ಲು ಕಡಿದು, ಕಡಿದು ಎನಾಮೆಲ್ ಬಿರುಕು ಹೆಚ್ಚಾದಾಗ ಅದರ ರಿಪೇರಿಗೂ ಇದೇ ತಂತ್ರಜ್ಞಾನ ನೆರವಾದೀತು! (26-03-2007)
2 comments:
Hello Mr Sudhindra,
I read ur article on Laser and its advantages in dentistry recently.I am Dr Ramya Sudheendra, a practising dentist from Bangalore. Your narration was really witty!Liked the way u made fun of dentists in every nook and corner and how they explain things to their patients!!!!Anyway I agree with the fact that lasers are a better way of diagnosis in dentistry when compared to X-rays but do u really think it is affordable and accessible to Indian dentists? First of all patients come to us only when the pain becomes unbearable,secondly they always look for cheaper and less time consuming treatments.Its enough only if the pain subsides immediately.They dont even think of dentists till the pain comes back.
I was happy to know that a scientist like u is keen on enlightning indian dentists on such latest discoveries.Thank u so much and please pass on any such useful info even in future.
Thanks again.
Ramya
Thank You Dr Ramya!
I am basically a mechanical engineer with post-graduation in turbomachines, presently working on the propulsion and fuel systems of aero engines. Light years apart from Dentistry and life sciences. Pardon me, if I have made 'fun' of you dentists, but I really do not mean literally, in those comments. I am happy that I even made a practicing dentist to laugh merrily.
I agree with you that we hardly (that includes me) care for the valuable tool like tooth. We always believe in break-down maintenance instead of preventive maintenance.
Though laser diagnostics is expensive at the present juncture, I envisage, with the advancement of technology, it may be affordable to common people in a decade. We may not be able to completely dispense with X-rays, but we can limit the radiation hazards.
I promise to consult you, if not for the dental care, atleast for any of my future articles referring dentistry.
Post a Comment