Monday, September 10, 2007

‘ರೊಬಾಟ್’ ಮಿಡತೆಯ ರೆಕ್ಕೆಯಲ್ಲಿ ನಮ್ಮ ಹೃದಯ ಸ್ನಾಯು?

ಮ್ಮ ದೇಹದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ಸ್ನಾಯುಗಳು ಯಾವುವು ಎಂಬ ಪ್ರಶ್ನೆಗೆ ಹೃದಯದಲ್ಲಿ ಹುದುಗಿರುವ ಸ್ನಾಯುಗಳೆಂದು ನಿಸ್ಸಂಶಯವಾಗಿ ಹೇಳಬಹುದು. ಕಾರಣ, ಹಗಲೂ ರಾತ್ರಿ ಹೃದಯವೆಂಬ ಪಂಪು ನಿರಂತರವಾಗಿ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಸ್ನಾಯುಗಳೆಲ್ಲವೂ ಪ್ರತಿಸ್ಪಂದಿಸಬೇಕು. ಒಂದೊಂದು ಹೃದಯ ಮಿಡಿತಕ್ಕೂ ಮೇಳೈಸುವಂತೆ ಸ್ನಾಯುಗಳು ಸಂಕುಚಿತವಾಗಬೇಕು/ವಿಕಸನವಾಗಬೇಕು. ಇದು ಸಾಧ್ಯವಾಗುವುದು ಹೇಗೆಂದರೆ ಹೃದಯ ಸ್ನಾಯುಗಳಲ್ಲಿ ಜೀವಕೋಶಗಳು ಒಂದು ನಿರ್ದಿಷ್ಟ ಮಾದರಿಯಲ್ಲಿ ಜೋಡಣೆಯಾಗಿರುತ್ತವೆ. ಈ ಜೋಡಣೆ ಕೇವಲ ಯಾಂತ್ರಿಕ ಜೋಡಣೆಯಷ್ಟೇ ಅಲ್ಲ, ವಿದ್ಯುತ್ ಸಂಕೇತಗಳ ಸುಗಮ ಹರಿದಾಟಕ್ಕೂ ಅನುವು ಮಾಡಿಕೊಡುತ್ತದೆ. ಅಂದರೆ ನಮ್ಮ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹುದುಗಿರುವ ಸೂಕ್ಷ್ಮಾತಿ ಸೂಕ್ಷ್ಮ ಅಳತೆಯ ‘ಎಲೆಕ್ಟ್ರಾನಿಕ್ ಸರ್ಕ್ಯೂಟ್ - ವಿದ್ಯುನ್ಮಾನ ಮಂಡಲ’ದಂತೆ ಈ ಜೀವಕೋಶ ಮಂಡಲ ಕೆಲಸ ಮಾಡುತ್ತಿರುತ್ತದೆ. ಕಾರ್ಯ ನಿರ್ವಹಿಸುತ್ತಿರುವ ಸ್ನಾಯುಗಳಿಗೆ ಬೇಕಾದ ಶಕ್ತಿ ಸಂಚಯನಕ್ಕೆ ಅಗತ್ಯವಾದ ಗ್ಲುಕೋಸ್ ಅಂಶ ಸತತವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿರುತ್ತದೆ. ಇಂಥ ಅತ್ಯದ್ಭುತ ಕಾರ್ಯಪಟುತ್ವವಿರುವ ಸಾಮಗ್ರಿಯನ್ನು ಕೃತಕವಾಗಿ ತಯಾರಿಸುವಂತಿದ್ದರೆ ಎಷ್ಟೆಲ್ಲಾ ಅನುಕೂಲಗಳಿರುತ್ತಿದ್ದವು. ಹೃದಯಾಘಾತವಾದಾಗ ಆ ಭಾಗದಲ್ಲಿ ನಿಶ್ಚೇತನಗೊಂಡ ಸ್ನಾಯುಗಳಿಗೆ ಬದಲಿಯಾಗಿ ಇಂಥ ಕೃತಕ ಸ್ನಾಯುಗಳನ್ನು ಜೋಡಿಸಬಹುದಿತ್ತು. ತೊಂದರೆಗೀಡಾದ ಸ್ನಾಯುಗಳನ್ನು ಕತ್ತರಿಸಿ ಆ ಭಾಗದಲ್ಲಿ ಕೃತಕ ಸ್ನಾಯುಗಳನ್ನು ಅಳವಡಿಸಬಹುದಿತ್ತು. ಥೇಟ್ ನಮ್ಮ ಮನೆಯ ವಿವಿಧ ಭಾಗಗಳಿಗೆ ವಿದ್ಯುತ್ ಸಂಪರ್ಕ ನೀಡುವ ವೈರುಗಳಂತೆ, ಹಳತಾದ, ಹರಿದು ಹೋದ ತಂತಿಗಳನ್ನು ಬದಲಿಸುವಂತೆ ಅಥವಾ ಹೊಸ ಸಂಪರ್ಕ ಬೇಕೆಂದೆಡೆ ತಂತುಗಳನ್ನು ಸೇರ್ಪಡೆ ಮಾಡುವಂತೆ, ನಮ್ಮ ಹೃದಯದ ಸ್ನಾಯು ಮಂಡಲದಲ್ಲಿ ಮಾರ್ಪಾಡುಗಳನ್ನು ಮಾಡಬಹುದಿತ್ತು.
ನಮ್ಮ ದೇಹದಲ್ಲಿ ಸೃಷ್ಟಿಯಾಗಿರುವ ಪರಿಪಕ್ವ ಎಂಜಿನೀರಿಂಗ್ ವ್ಯವಸ್ಥೆಯನ್ನು ಕೃತಕವಾಗಿ ಮರುಸೃಷ್ಟಿಸುವುದು ಅಷ್ಟು ಸುಲಭವಲ್ಲ. ಸ್ವಲ್ಪ ಮಟ್ಟಿಗೆ ಅಂಥದೇ ಸಾಮಗ್ರಿಗಳನ್ನು ರೂಪಿಸಲು ಸಾಧ್ಯವಾದರೂ ಅದು ಕೈಗೆಟುಕದಷ್ಟು ದುಬಾರಿಯಾಗಿರುತ್ತದೆ. ಜತೆಗೆ ಬೇಕೆಂದೆಡೆ ಕೂಡಿಸಲು ಸಾಧ್ಯವಾಗದಷ್ಟು ದೊಡ್ಡದಾಗಿರುತ್ತದೆ. ಬೇಕಾದಂತೆ ಬಾಗಿಸಲು, ಜೋಡಿಸಲು, ಹೆಣೆಯಲು ಸಾಧ್ಯವಾಗದಂತೆ ರೂಪುಗೊಂಡಿರುತ್ತದೆ. ನಮ್ಮದೇ ದೇಹದಿಂದ ಹೊರತೆಗೆದ ‘ಆಕರ ಕೋಶ’ ಅಥವಾ ‘ಸ್ಟೆಮ್ ಸ್ಟೆಲ್ಸ್’ಗಳಿಂದ ಸ್ನಾಯುಗಳನ್ನು ಮರು ರೂಪಿಸುವ ಸಾಧ್ಯತೆಯೇನೋ ಇದೆ. ಅದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಎಲ್ಲ ಜನರ ‘ಆಕರ ಕೋಶಗಳನ್ನು’ ಬ್ಯಾಂಕುಗಳಲ್ಲಿ ಶೇಖರಣೆ ಇನ್ನೂ ಮಾಡಿಲ್ಲ ಹಾಗೂ ಈ ಬಗ್ಗೆ ನೀತಿ ಸಂಹಿತೆಗಳು ಇನ್ನೂ ರೂಪುಗೊಂಡಿಲ್ಲ. ಹಾಗೆಂದ ಮಾತ್ರಕ್ಕೆ ಜೀವ ವಿಜ್ಞಾನಿಗಳು ಕೈಕಟ್ಟಿ ಕೂತಿಲ್ಲ, ನಮಗೆ ಹತ್ತಿರದ ಸಂಬಂಧಿಗಳಾದ, ಸುಲಭವಾಗಿ ಸಿಗಬಲ್ಲ ಇಲಿಗಳ ಮೇಲೆ ತಮ್ಮ ಪ್ರಯೋಗಗಳನ್ನು ಮುಂದುವರಿಸಿದ್ದಾರೆ. ಅವುಗಳ ನಾಶದ ಬಗ್ಗೆ ಯಾರೂ ಹೆಚ್ಚಾಗಿ ಗುಲ್ಲೆಬ್ಬಿಸದ ಕಾರಣ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ಈ ಬಗೆಯ ಪ್ರಯೋಗಗಳಿಂದ ಎರಡು ಬಗೆಯ ಅನುಕೂಲಗಳಿವೆ. ಮೊದಲನೆಯದು ಇಂಥ ಸ್ನಾಯುಗಳನ್ನು ಸೃಷ್ಟಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದು, ಎರಡನೆಯದು ಇತರೆ ಕೃತಕ ವಸ್ತುಗಳೊಂದಿಗೆ ಈ ಬಗೆಯ ಸ್ನಾಯುಗಳನ್ನು ಮಿಳಿತಗೊಳಿಸಿ ಅವುಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡುವುದು. ಮೊದಲನೆಯ ಸೃಷ್ಟಿಕ್ರಿಯೆಯ ಅನುಕೂಲಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಎರಡನೆಯ ಸೃಷ್ಟಿಕ್ರಿಯೆಯಲ್ಲಿ ಯಶಸ್ವಿಯಾದರೆ ಭವಿಷ್ಯದಲ್ಲಿ ವಿನ್ಯಾಸಗೊಳಿಸಬಹುದಾದ ಸಣ್ಣ ಸಣ್ಣ ‘ರೋಬಾಟ್ - ಯಂತ್ರಮಾನವ’ಗಳಿಗೆ ಉತ್ತಮ ಕಾರ್ಯಕ್ಷಮತೆಯ ಚಲನೆಗಳನ್ನು ನೀಡಬಹುದು.
ಅಮೆರಿಕದ ಜಗನ್ಮಾನ್ಯ ಹಾರ್ವರ್ಡ್ ವಿಶ್ವವಿದ್ಯಾಲಯ ನಿಮಗೆ ಗೊತ್ತು. ಇಲ್ಲಿನ ಯಂತ್ರ ವಿಜ್ಞಾನ ವಿಭಾಗದ ತಜ್ಞರು ಜೀವ ವಿಜ್ಞಾನಿಗಳು ಹಾಗೂ ವೈದ್ಯರೊಡಗೂಡಿ ಮಹತ್ತರ ಪ್ರಯೋಗವೊಂದನ್ನು ಹಮ್ಮಿಕೊಂಡಿದ್ದಾರೆ. ಇಲಿಗಳ ಆಕರ ಕೋಶಗಳಿಂದ ರೂಪಿಸಿದ ಹೃದಯ ಸ್ನಾಯುಗಳನ್ನು ಪ್ಲಾಸ್ಟಿಕ್ ಎಳೆಗಳೊಂದಿಗೆ ಮಿಳಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಇಂಥ ಸಾಮಗ್ರಿಯನ್ನು ಬಳಸಿಕೊಂಡು ಪುಟ್ಟ ‘ರೊಬಾಟ್’ಗಳನ್ನು ರೂಪಿಸಿದ್ದಾರೆ. ಇರುವೆಗಳಂತೆ ಚಲಿಸುವ, ಪುಟಾಣಿ ಮೀನಿನ ಮರಿಯಂತೆ ಈಜುವ, ಮಿಡತೆಗಳಂತೆ ನೆಗೆಯುವ ಯಂತ್ರಗಳನ್ನವರು ವಿನ್ಯಾಸಗೊಳಿಸಿದ್ದಾರೆ. ಪ್ಲಾಸ್ಟಿಕ್ ಹಾಳೆಗಳ ಆಯಕಟ್ಟಿನ ಜಾಗಗಳಲ್ಲಿ ಕೂರಿಸಿದ ಇಲಿಗಳ ಹೃದಯ ಸ್ನಾಯುಗಳು ಬೇಕೆಂದೆಡೆ ಬಾಗಿ, ಬಳಕಿ, ತಿರುಗಿ, ಸಂಕುಚಿತಗೊಂಡು, ವಿಕಸನಗೊಳ್ಳುವ ಕಾರ್ಯಗಳನ್ನು ಪ್ಲಾಸ್ಟಿಕ್‍ನಿಂದ ಮಾಡಿಸಿವೆ. ಈ ಸ್ನಾಯುಗಳು ಪದೇ ಪದೇ ಸಂಕುಚನ/ವಿಕಸನಗೊಳ್ಳುವ ಮೂಲಕ ಪ್ಲಾಸ್ಟಿಕ್ ಹಾಳೆ ಆಲಿಕೆಯಾಕಾರದಲ್ಲಿ ಸುತ್ತಿಕೊಳ್ಳುವ, ಬಿಚ್ಚಿಕೊಳ್ಳುವ ಕೆಲಸಗಳನ್ನು ಅತ್ಯಂತ ಕ್ಷಿಪ್ರವಾಗಿ ಮಾಡಿವೆ. ಆಯತಾಕಾರ, ತ್ರಿಕೋನಾಕೃತಿ, ವೃತ್ತಾಕಾರದ ಪ್ಲಾಸ್ಟಿಕ್ ಹಾಳೆಗಳ ನಿರ್ದಿಷ್ಟ ಭಾಗಗಳಲ್ಲಿ ಅಳವಡಿಸಿದ ಸ್ನಾಯುಗಳಿಗೆ ಆಣತಿಗಳನ್ನು ನೀಡುವುದು ಹೇಗೆ? ಎಂಬುದು ಪ್ರಶ್ನೆ. ದೇಹವೊಂದರಲ್ಲಿ ಅಡಗಿರುವ ಸ್ನಾಯುಗಳಿಗೆ ಆಣತಿಗಳನ್ನು ನರತಂತುಗಳು ನೀಡುತ್ತವೆ. ಸಂಪರ್ಕ ಮಾಹಿತಿಯನ್ನು ಜೀವಕೋಶಗಳ ನಡುವಣ ಪ್ರೋಟೀನ್ ರವಾನಿಸುತ್ತವೆ. ಶಕ್ತಿ ಸಂಚಯನವನ್ನು ಗ್ಲುಕೋಸ್ ಮಾಡುತ್ತದೆ.
ಇವೆಲ್ಲ ಕಾರ್ಯಗಳನ್ನು ಕೃತಕವಾಗಿ ನಡೆಸುವುದು ಹೇಗೆ? ಮೊದಲಿಗೆ ಸ್ನಾಯುವೊಂದರ ಜೀವಕೋಶಗಳು ನಿರ್ದಿಷ್ಟ ರೀತಿಯಲ್ಲಿ ಜೋಡಣೆಯಾಗಬೇಕು. ಇದಕ್ಕಾಗಿ ವಿಜ್ಞಾನಿಗಳು ಸೂಕ್ಷ್ಮ ಅಳತೆಯಲ್ಲಿ ಪ್ರೋಟೀನ್ ಕಣಗಳನ್ನು ಸಂಸ್ಕರಿಸಿಕೊಂಡರು. ಸ್ನಾಯು ಕೋಶಗಳ ಜತೆಗೆ ಈ ಪ್ರೋಟೀನ್ ಕಣಗಳನ್ನು ಬೆರೆಸಿ ಪ್ಲಾಸ್ಟಿಕ್ ಹಾಳೆಯ ಮೇಲೆ ಮಿಶ್ರಣ ಮಾಡಿದೊಡನೆ ತನ್ನಷ್ಟಕ್ಕೆ ತಾನೇ ಜೋಡಣೆಗೊಂಡವು. ಕಾರ್ಯನಿರ್ವಹಿಸಬಲ್ಲ ಅಂಗಾಂಶ (ಟಿಶ್ಯೂ) ರೂಪುಗೊಳ್ಳಲಾರಂಭಿಸಿದವು. ಮುಂದಿನದು ಜೀವಕೋಶಗಳಿಗೆ ಚೈತನ್ಯ ತುಂಬುವ ಕಾರ್ಯ. ಇದನ್ನು ಗ್ಲುಕೋಸ್ ತುಂಬುವ ಮೂಲಕ ಸಾಧಿಸಲಾಯಿತು. ಪೌಷ್ಟಿಕಾಂಶಗಳನ್ನು ಸತತವಾಗಿ ಪೂರೈಸುವ ಮೂಲಕ ಈ ಬಗೆಯ ಸಮ್ಮಿಶ್ರ ವಸ್ತುಗಳನ್ನು ಕೆಲ ವಾರಗಳ ಕಾರ್ಯ ನಿರ್ವಹಿಸುವಂತೆ ಮಾಡಲು ಸಾಧ್ಯವಾಗಿದೆ. ವಿನ್ಯಾಸವನ್ನು ಮತ್ತಷ್ಟು ಉತ್ತಮಗೊಳಿಸುವುದರ ಮೂಲಕ ಜೀವಿತಾವಧಿಯನ್ನು ಹೆಚ್ಚಿಸಬಹುದೆಂಬ ನಿರೀಕ್ಷೆ ವಿಜ್ಞಾನಿಗಳದು. ವಿಜ್ಞಾನಿಗಳ ಕಲ್ಪನೆಯಲ್ಲಿ ಎಂಥ ಸೃಷ್ಟಿಗಳಿವೆ? ನೀರಿನಲ್ಲಿ ಜೀವಿಸುವ ಎಂಟೆಂಟು ಕೈಗಳಿರುವ, ಆ ಇಡೀ ಕೈಗಳಲ್ಲಿ ರಕ್ತ ಹೀರುವ ಗ್ರಂಥಿಗಳಿರುವ, ಎಲ್ಲೆಂದರಲ್ಲಿ ನುಸುಳಿ ಹೋಗಿ ತನ್ನ ಕಬಂಧ ಬಾಹುಗಳ ಮೂಲಕ ತನ್ನ ಆಹಾರವಾಗಬಲ್ಲ ಜೀವಿಗಳನ್ನು ಸೆರೆಹಿಡಿಯಬಲ್ಲ ಅಷ್ಟಪದಿ ಅಥವಾ ‘ಆಕ್ಟೋಪಸ್’ ನಿಮಗೆ ಗೊತ್ತಲ್ಲವೆ? ಇಂಥ ಅಷ್ಟಪದಿಗಳ ಮಾದರಿಯಲ್ಲಿ ಪುಟಾಣಿ ರೊಬಾಟ್‍ಗಳನ್ನು ನಿರ್ಮಿಸುವ ಹಂಬಲ ಹಾರ್ವರ್ಡ್ ತಂತ್ರಜ್ಞರದು. ಈಗಾಗಲೇ ದಕ್ಷಿಣ ಕೊರಿಯಾದಲ್ಲಿ ‘ಏಡಿ’ಯಾಕಾರದ ಪುಟಾಣಿ ಸಾಧನವೊಂದು ಹತ್ತು ದಿನಗಳ ಕಾಲ ಪ್ರಯೋಗಶಾಲೆಯಲ್ಲಿ ಸಂಚಾರ ನಡೆಸಿ ದಣಿವಾರಿಸಿಕೊಳ್ಳುತ್ತಿದೆ. ತನ್ನ ಆಕಾರವನ್ನು ಬೇಕೆಂದಂತೆ ಬದಲಿಸಿಕೊಳ್ಳಬಲ್ಲ ರೊಬಾಟ್‍ಗಳನ್ನು ಸೃಷ್ಟಿಸುವ ತಂತ್ರಜ್ಞರ ಕನಸಿಗೆ ಈ ಯಶಸ್ಸು ಇಂಬುಕೊಡುತ್ತಿದೆ. ಅನಪೇಕ್ಷಣೀಯ ವಾತಾವರಣದಲ್ಲಿ ಕಾರ್ಯನಿರ್ವಹಿಸಬಲ್ಲ, ಅತ್ಯಂತ ಕಡಿಮೆ ಜಾಗ ಇರುವ ಸ್ಥಳಗಳಲ್ಲಿ ನುಸುಳಿಹೋಗಬಲ್ಲ ರೊಬಾಟ್‍ಗಳು ವಿಜ್ಞಾನಿಗಳ ಕನಸಿನ ಯೋಜನೆಗಳಲ್ಲಿವೆ. ಅನೇಕ ಮಾದರಿಗಳ ವಿನ್ಯಾಸದ ಪರಿಪೂರ್ಣತೆಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಹೃದಯ ಸ್ನಾಯುಗಳ ಬಗ್ಗೆ ವಿಸ್ತೃತ ಅಧ್ಯಯನಕ್ಕೆ ಬೇಕಾಗುವ ಮಾದರಿಗಳನ್ನೂ ಇಲ್ಲಿ ಸೃಷ್ಟಿಸಬಹುದು. ಆರೋಗ್ಯವಂತ ಹಾಗೂ ದೋಷಯುಕ್ತ ಸ್ನಾಯುಗಳ ಕಾರ್ಯಾಚರಣೆಯಲ್ಲಿ ಯಾವ ಬಗೆಯ ವ್ಯತ್ಯಾಸಗಳಿರುತ್ತವೆ? ಜೀವಕೋಶಗಳ ಜೋಡಣೆಯಲ್ಲಿ ವ್ಯತ್ಯಯಗಳಿವೆಯೆ? ವ್ಯವಸ್ಥೆಯಲ್ಲಿನ ಯಾವ ದೋಷದಿಂದ ಸ್ನಾಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ? ಎಂಥ ರಿಪೇರಿಗಳನ್ನು ನಡೆಸಿದರೆ ಸ್ನಾಯುಗಳನ್ನು ಮೊದಲಿನಂತೆ ಕಾರ್ಯನಿರ್ವಹಿಸಬಲ್ಲದು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು. ಇವೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಘನ ಉದ್ದೇಶವೊಂದಿದೆ. ಅದು ಔಷಧವೊಂದರ ಪರಿಣಾಮವನ್ನು ಅಳೆಯುವುದು. ಹೃದ್ರೋಗ ಚಿಕಿತ್ಸೆಗೆಂದು ನೂರಾರು ಬಗೆಯ ಔಷಧಗಳನ್ನು ಸಂಸ್ಕರಿಸುತ್ತಿರುವುದು ನಿಮಗೆ ಗೊತ್ತು. ಇವೆಲ್ಲದರ ಕಾರ್ಯಕ್ಷಮತೆ, ಜೀವಕೋಶಗಳ ಮೇಲಿನ ಪರಿಣಾಮ, ಚಿಕಿತ್ಸೆಯ ಸಫಲತೆ ಮತ್ತಿತರ ಅಂಶಗಳನ್ನು ಅಳೆಯಲು ಸಹಸ್ರಾರು ಮಾದರಿಗಳ ಮೇಲೆ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅಷ್ಟೊಂದು ಸಂಖ್ಯೆಯ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ. ಈ ಕೊರತೆಯನ್ನು ಸದ್ಯದ ಪ್ರಕ್ರಿಯೆಯು ನೀಗಿಸಬಹುದು. ಬೇಕೆಂದಷ್ಟು ಮಾದರಿಗಳನ್ನು ಪ್ರಯೋಗಶಾಲೆಗಳಲ್ಲಿಯೇ ಸೃಷ್ಟಿಸಿಕೊಳ್ಳಬಹುದು. ಜತೆಗೆ ಅಧ್ಯಯನದ ಫಲಿತಾಂಶಗಳ ನಿಖರತೆಯನ್ನು ಪರಿಶೀಲಿಸಬಹುದು.
ಇನ್ನೂ ಚಿಕ್ಕದು, ಮತ್ತಷ್ಟು ಚಿಕ್ಕದು .. ಇದು ಸದ್ಯದ ಮಂತ್ರ. ಯಾವುದೇ ಯಂತ್ರ ಅಥವಾ ಸಾಧನವನ್ನು ಮತ್ತಷ್ಟು ಚಿಕ್ಕದಾಗಿಸುವುದರಿಂದ ಸಾಕಷ್ಟು ಅನುಕೂಲಗಳಿವೆ. ನಮ್ಮ ದೇಹವೂ ಸೇರಿದಂತೆ ಅನೇಕಾನೇಕ ಸಣ್ಣ ಪುಟ್ಟ ಸ್ಥಳಗಳಲ್ಲಿ ತಪಾಸಣಾ ಯಂತ್ರಗಳನ್ನು ಕಳುಹಿಸಬಹುದು. ದೇಹದ ಅನೇಕ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬಹುದು. ಔಷಧಗಳನ್ನು ತಲುಪಿಸಬಹುದು. ಈ ನಿಟ್ಟಿನಲ್ಲಿ ರೊಬಾಟ್ ವಿಜ್ಞಾನ ಸಾಕಷ್ಟು ಪ್ರಗತಿ ಸಾಧಿಸಿದೆ. ಕೃತಕವಾಗಿ ರೂಪಿಸುವ ಎಷ್ಟೋ ಯಂತ್ರ ಮಾದರಿಗಳಿಗೆ ನಮ್ಮ ದೇಹದ ಅಂಗಾಂಗಳೇ ಸ್ಫೂರ್ತಿ. ಅವುಗಳ ಮಾದರಿಯಲ್ಲಿ, ಅವು ನಿರ್ವಹಿಸುವ ಕಾರ್ಯವೈಖರಿಯನ್ನು ಅನುಕರಿಸಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾದರೆ ಸದ್ಯದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಜನ್ಮದತ್ತವಾಗಿಯೇ ಹೃದಯದ ಸ್ನಾಯುಗಳಲ್ಲಿ ನ್ಯೂನತೆಗಳಿದ್ದರೆ ಅದನ್ನಿಂದು ಸರಿಪಡಿಸಬಹುದು. ಈ ರಿಪೇರಿ ಕಾರ್ಯ ಸಾಧ್ಯವಾದಷ್ಟು ಮಟ್ಟಿಗೆ ಸ್ವಾಭಾವಿಕವಾಗಿರುವಂತೆ ಮಾಡಲು ಸ್ನಾಯುಗಳು ಅತ್ಯವಶ್ಯ.
ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಹೃದಯದ ಕಾರ್ಯವೈಖರಿಯನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳಲು ಈ ಬಗೆಯ ಅಧ್ಯಯನಗಳು ನೆರವಾಗುತ್ತವೆ. ಸ್ನಾಯುವೊಂದು ಬಲಹೀನವಾಗಲು ಕಾರಣಗಳೇನು? ಅವುಗಳನ್ನು ಸ್ವಾಭಾವಿಕವಾಗಿಯೇ ಸದೃಢಗೊಳಿಸಲು ಏನೆಲ್ಲಾ ಮಾಡಬೇಕು? ಅದಕ್ಕೆಂದು ಪೂರೈಸುವ ರಾಸಾಯನಿಕಗಳು ಅಥವಾ ಔಷಧಗಳು ದುಷ್ಪರಿಣಾಮಗಳನ್ನು ಬೀರುತ್ತವೆಯೆ? ಅಂಥ ದುಷ್ಪರಿಣಾಮಗಳನ್ನು ತಡೆಗಟ್ಟಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು? ಹೀಗೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಈ ಬಗೆಯ ಅಧ್ಯಯನದಲ್ಲಿ ಉತ್ತರಗಳನ್ನು ಕಂಡುಕೊಳ್ಳಬಹುದು. ಹೃದಯದ ಸ್ನಾಯುಗಳೂ ಸೇರಿದಂತೆ ದೇಹದ ಅನೇಕ ಭಾಗಗಳನ್ನು ಕೃತಕವಾಗಿ ರೂಪಿಸಲು ನ್ಯಾನೊ ತಂತ್ರಜ್ಞಾನದಂಥ ಮುಂಚೂಣಿ ವಿಜ್ಞಾನ ಶಾಖೆ ನೆರವಾಗಬಲ್ಲದು. ಅಂಥ ಮಾದರಿಗಳನ್ನು ರೂಪಿಸುವಾಗ ಮೂಲ ವಿನ್ಯಾಸವನ್ನು ಅಭ್ಯಸಿಸಲು ಸದ್ಯದ ಹಾರ್ವರ್ಡ್ ನಿರ್ಮಿತ ಸ್ನಾಯುಗಳು ನೆರವಾಗುತ್ತವೆ. ಹೃದಯ ಹಾಗೂ ಮಿದುಳಿನ ಕಾರ್ಯಗಳನ್ನು ನೇರ್ಪಡಿಸುವ ಯಾವುದೇ ವಿಜ್ಞಾನ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ಅಂತೆಯೇ ಹಾರ್ವರ್ಡ್ ವಿವಿಯ ಸಂಶೋಧಕರುಗಳಿಗೆ ಭಾರಿ ಮೊತ್ತದ ಧನ ಸಹಾಯ ದೊರೆತಿದೆ. ಎಲ್ಲವೂ ವಿಜ್ಞಾನಿಗಳ ಎಣಿಕೆಯಂತೆ ನಡೆದರೆ, ಹೃದಯವನ್ನು ಮತ್ತಷ್ಟು ಸದೃಢಗೊಳಿಸಬಹುದು. ಅಂತ ಹೃದಯಗಳು ಮಿದುಳನ್ನು ಮತ್ತಷ್ಟು ಚುರುಕಾಗಿ ಹೆಚ್ಚು ಕಾಲ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಸದ್ಯಕ್ಕೆ ಈ ಬಗೆಯ ಸಂಶೋಧನೆಗಳನ್ನು ಕೈಗೊಳ್ಳುತ್ತಿರುವ ವೈದ್ಯರು, ವಿಜ್ಞಾನಿಗಳು ಹಾಗೂ ತಂತ್ರಜ್ಞರ ಹೃದಯ ಮತ್ತು ಮಿದುಳುಗಳು ಹೆಚ್ಚು ಕಾಲ ಕಾರ್ಯ ನಿರ್ವಹಿಸಲಿ ಎಂದು ಹಾರೈಸೋಣ. ಅಂಥ ಹಾರೈಕೆಗಳಿಂದ ನಮ್ಮ ಹೃದಯ ಮತ್ತಷ್ಟು ಸುರಕ್ಷವಾದೀತು.

(ಕೃಪೆ: ವಿಜಯ ಕರ್ನಾಟಕ, 10-09-2007)

2 comments:

Hari Prasad said...

Really your articles are of the high quality and it really helped the karnataka people to feel that science is not a property of english language.
Please visit and give your valuable suggestions to http://khagola.blogspot.com

CSMysore said...

It was a real good effort. ಯಾಕೆ ೨೦೦೭ ನಿಂದ ಅಪ್ ಡೇಟ್ ಮಾಡಿಲ್ಲ?